Blog number 1013. ತೀರ್ಥಹಳ್ಳಿಯ ಪ್ರಖ್ಯಾತ ವಾರಪತ್ರಿಕೆ ಹೆಸರು ಲಕ್ಷ್ಮೀಶ್ ವಾರಪತ್ರಿಕೆ ಇದರ ಸಂಪಾದಕರು ಲಕ್ಷ್ಮೀಶ್ ರು ಇವರು ನನ್ನ ಕಾದಂಬರಿ ಓದಿ ವಿಮರ್ಶೆ ಮಾಡಿದ್ದಾರೆ.
ತಮ್ಮದೇ ಹೆಸರಿನಲ್ಲಿ ತೀಥ೯ಹಳ್ಳಿಯಿಂದ ವಾರ ಪತ್ರಿಕೆ ಮೂಲಕ ಪ್ರಖ್ಯಾತಿ ಪಡೆದಿರುವ, ತಮ್ಮದೇ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಅಪಾರ ಅಭಿಮಾನಿಗಳನ್ನ ಹೊಂದಿರುವ ಲಕ್ಷ್ಮೀಶ್ ರು ನನ್ನ ಕಾದ೦ಬರಿಯನ್ನು ಸಂಪೂಣ೯ವಾಗಿ ಓದಿ ವಸ್ತು ನಿಷ್ಟವಾಗಿ ಬರೆದ ವಿಮಷೆ೯ಗಾಗಿ ಅವರನ್ನು ಅಭಿನಂದಿಸುತ್ತೇನೆ.
ಚಂಪಕಾಳ ಬಗ್ಗೆ ಇನ್ನೂ ಹೆಚ್ಚು ಒತ್ತು ಕೊಡಬೇಕಿತ್ತೆಂಬ ಅವರ ಅಭಿಪ್ರಾಯ ಸರಿ ಇದೆ, ಇಲ್ಲಿ ನಾನು ಎಡವಿರುವುದು ಒಪ್ಪಿದ್ದೇನೆ ಬಹುಶಃ ಇದು ನನ್ನ ಮಿತಿ ಅಥವ ಮೊದಲ ಕಾದಂಬರಿಯ ಕಾರಣವಿರಬಹುದು.
ಲಕ್ಷ್ಮೀಶರ ಬರವಣಿಗೆಯ ಶೈಲಿಗೆ ಮನಸೋತು ಅವರ ಅಭಿಮಾನಿ ಆಗಿರುವ ನನಗೆ, ಅವರ ಈ ವಿಮಶೆ೯ಯ ಜೊತೆಗೆ ಮುಂದಿನ ದಿನದಲ್ಲಿ ನನ್ನಿಂದ ಹೆಚ್ಚಿನ ಬರವಣಿಗೆ ಬರಲಿ ಎಂಬ ಹಾರೈಕೆಯ ಪ್ರೋತ್ಸಾಹ ನನಗೆ ನೀಡಿದ್ದು ಖುಷಿ ತಂದಿದೆ.
#ಚರಿತ್ರೆಯ_ವ್ಯಾಖ್ಯಾನದ_ಮಧ್ಯೆ_ಸೊರಗಿದ_ಚಂಪಕಾ
ಕೃತಿ ವಿಮರ್ಶೆ; ಲಕ್ಷ್ಮೀಶ ಕಾ.ಸು., ಸಂಪಾದಕ, ಲಕ್ಷ್ಮೀಶಪತ್ರಿಕೆ, ತೀರ್ಥಹಳ್ಳಿ.9448218666.
ಪಕ್ಕದ ಸಾಗರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ *ಆನಂದಪುರ* ಒಂದೊಮ್ಮೆ ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಕೆಳದಿ ಹೊರತು ಪಡಿಸಿದ ಪ್ರಮುಖ ನೆಲೆಯಾಗಿತ್ತು. ಅದೇ ಆನಂದಪುರದಲ್ಲಿ ಈಗಲೂ *ಚಂಪಕ ಸರಸ್ಸು* ಅರ್ಥಾತ್ ಚಂಪಕ ಕೊಳ ಎಂಬ ಮನಮೋಹಕ ಪ್ರವಾಸೀ ತಾಣವಿದೆ. ಆ ಸರಸ್ಸನ್ನು ಕ್ರಿಸ್ತಶಕ 1586 - 1629 ರವರೆಗೆ ಸುದೀರ್ಘ ಕಾಲ ಆಳಿದ, ವಿಜಯನಗರ ಸಾಮ್ರಾಜ್ಯದ ಸಾಮಂತನೂ ಆದ ಕೆಳದಿ ಸಂಸ್ಥಾನದ ಬಲಾಢ್ಯ ದೊರೆ *ರಾಜಾ ವೆಂಕಟಪ್ಪ ನಾಯಕ* ಎಂಬಾತ ನಿರ್ಮಿಸಿದ. ಅದನ್ನವನು ತನ್ನ *ದೊರೆಸಾನಿ ಅಂದರೆ ರಾಜಸೂಳೆ* ಚಂದ್ರಿಕಾ ಅನ್ನುವ ಬೆಸ್ತರ ಯುವತಿಯ ಮೇಲಿದ್ದ ತನ್ನ ಉತ್ಕಟ ಪ್ರೇಮದ ಸ್ಮರಣಾರ್ಥ ಕಟ್ಟಿಸಿದ ಎಂಬಿತ್ಯಾದಿ ದಂತಕತೆಗಳು ಇಂದಿನ ತಲೆಮಾರಿನವರೆಗೂ ಮುಂದುವರೆದು, ಕೆಲವು ಹೆಸರಾಂತ ಪತ್ರಿಕೆಗಳಲ್ಲೂ ಪ್ರಕಟವಾದಾಗ ನಮ್ಮ ಯಾವತ್ತೂ ಆತ್ಮೀಯ ಗೆಳೆಯರೂ,ತಾನದೇ ಐತಿಹಾಸಿಕ ಪ್ರಸಿದ್ಧಿ ಪಡೆದ ಆನಂದಪುರದ ವಾಸಿಯೆಂದು ಇಂದಿಗೂ ಬೀಗುವ ಯಾವುದೇ ಸಂದರ್ಭವನ್ನೂ ಎಂದಿಗೂ ಕಳೆದುಕೊಳ್ಳಲಿಚ್ಚಿಸದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಪ್ರಸ್ತುತ ಆನಂದಪುರದ ಪ್ರಮುಖ ಉದ್ಯಮಿಯೂ ಆಗಿರುವ ಅರುಣ್ ಪ್ರಸಾದ್ ಅವರಿಗೆ ಸಹಿಸಲಾಗದ ಕಿರಿಕಿರಿಯಾಗಿದೆ.
ಸ್ಥಳ ಚರಿತ್ರೆ ಕುರಿತಂತೆ ಊಹಾಪೋಹಗಳ ಆಧಾರದಲ್ಲೇ *ಚಂಪಕ ಸರಸ್ಸು* ಎಂಬ ಸುಂದರ ಕೊಳ ವೆಂಕಟಪ್ಪ ನಾಯಕನ ವೇಶ್ಯೆ ಚಂಪಕಾ ಎಂಬುವಳಿಗಾಗಿ ನಿರ್ಮಿಸಲಾಗಿತ್ತೆಂದು, ತಾವು ವರದಿ ಮಾಡುವ ಪತ್ರಿಕೆಗಳಲ್ಲವಲ್ಲೂ ಸಾಕಷ್ಟು ಸುದ್ದಿಗಾರರು ಬರೆದಾಗಲಂತೂ, ಅರುಣ್ ಪ್ರಸಾದ್ ಪಿತ್ತ ನೆತ್ತಿಗೇರಿದೆ.ಹೆಣ್ಣನ್ನು ವೇಶ್ಯೆ - ಸೂಳೆ ಇತ್ಯಾದಿ ಹೆಸರಲ್ಲಿ ಕೀಳಾಗಿ ಹೀಗಳೆವ ಯಾವತ್ತೂ ಸಾಮಾಜಿಕ ವಿಕೃತಿಯನ್ನು ಮೊದಲಿಂದಲೂ ಸಹಿಸದ ಅರುಣ್ ತಕ್ಷಣವೇ, ಈ ಸರಸ್ಸಿನ ಬಗ್ಗೆ ದೇಶೀಯ ಮತ್ತು ಜಾಗತಿಕ ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಉಲ್ಲೇಖವಿದೆ, ಯಾವ್ಯಾವ ಪ್ರಸ್ತಾವನೆಗಳನ್ನು ಎಲ್ಲೆಲ್ಲಿ ಯಾರು ಯಾರು ಯಾವ ಕಾಲಘಟ್ಟದಲ್ಲಿ ಮಾಡಿದ್ದಾರೆಂಬ ಸಂಗತಿಗಳ ಬೆನ್ನು ಬೀಳ್ತಾರೆ. ಕೆಳದಿ ಅರಸರ ಮನೆತನದ ಬಗ್ಗೆ ರಾಜಾ ವೆಂಕಟಪ್ಪ ನಾಯಕರ ಕಾಲಾವಧಿಯಲ್ಲೇ ಪೂರ್ವದ ಭೇಟಿನೀಡಿದ್ದ ಫ್ರೆಂಚ್ ಇತಿಹಾಸಕಾರ *ಪಿಯೋತ್ರಾ ದಲಾವ್ಲಿ* ಸೇರಿದಂತೆ ಹತ್ತು ಹಲವರ ಐತಿಹಾಸಿಕ ದಾಖಲೆಗಳನ್ನು ಜಾಲಾಡುತ್ತಾರೆ.
ಕೊನೆಗೂ ಅರುಣ್ ಪ್ರಸಾದ್, ವಿವಿಧ ಇತಿಹಾಸಕಾರರ ಹಾಗೂ ಐತಿಹಾಸಿಕ ಗ್ರಂಥಗಳ ಸತತ ಅಧ್ಯಯನದ ಮೂಲಕ ಕಂಡುಕೊಳ್ಳುವ ಐತಿಹಾಸಿಕ ಸತ್ಯವೇನೆಂದರೆ *ರಾಜಾ ವೆಂಕಟಪ್ಪ ನಾಯಕನಿಗೆ ಮೊದಲೇ ಇಬ್ಬರು ಹೆಂಡಿರಿದ್ದರು. ಮೊದಲ ಪತ್ನಿ ಅಕಾಲಿಕ ಅನಾರೋಗ್ಯದಿಂದ ಮರಣಿಸಿದ ನಂತರ ರಾಜನ ಬದುಕಲ್ಲಿ ಪ್ರವೇಶಿಸಿದ ದ್ವಿತೀಯ ಪತ್ನಿ ರಾಣಿ ಭದ್ರಮ್ಮಾಜಿ ಜೊತೆಗೆ ಒಂದಷ್ಟು ಅವಧಿಗೆ ತೃಪ್ತ ದಾಂಪತ್ಯ ಬದುಕು ನಡೆಸುತ್ತಾರೆ.ಯಾವತ್ತು ತನ್ನ ಮಗ ಶತ್ರುಗಳ ವಿರುದ್ಧದ ಯುದ್ಧವೊಂದರಲ್ಲಿ ಮಡಿದನೋ ಆ ದುರ್ಘಟನೆಯ ನಂತರ ಪಟ್ಟದರಾಣಿ ಭದ್ರಮಾಜಿ ಮನೋವ್ಯಾದಿಗೆ ಬಲಿಯಾದಳು. ಬಹುವರ್ಷಗಳವರೆಗೆ ಅದೇ ಹೆಳೆಯಲ್ಲಿ ಕೊರಗಿ ನರಳಿದಳು. ಅದರಿಂದಾಗೇ ಭೌತಿಕ ಮತ್ತು ಐಹಿಕ ಸುಖ ಸಂತಸಗಳೆಡೆಗೆ ಆಕೆಯ ಆಸಕ್ತಿ ಮತ್ತು ಉತ್ಸಾಹ ಕ್ರಮೇಣ ಕಮ್ಮಿಯಾಗ್ತಾ ಬಂತು. ಅಂತಹಾ ದುಃಖದ ಸನ್ನಿವೇಶದಲ್ಲೂ ನಿತ್ಯವೂ ಸೂರ್ಯನುದಯಿಸುವ ಮೊದಲೇ ಹಾಸಿಗೆ ಬಿಟ್ಟೆದ್ದು, ಪ್ರಾಥಃ ವಿಧಿಗಳನ್ನೆಲ್ಲಾ ತ್ವರಿತವಾಗಿ ಮುಗಿಸಿ ಸಂಪೂರ್ಣ ಶುಚಿಃರ್ಭೂತರಾಗಿ ತಮ್ಮ ಇಷ್ಟ ದೈವ ತಾಯಿ ಗುತ್ಯಮ್ಮ ದೇವತೆಯ ದೇಗುಲಕ್ಕೆ ಭೇಟಿ ನೀಡುವ ಪರಿಪಾಠ ಬಿಡದ ರಾಜಾ ವೆಂಕಟಪ್ಪ ನಾಯಕನಿಗೆ, ದೇಗುಲದ ಎದುರಿಗಿದ್ದ ಮನೆಯ ಮಸ್ಯಾ ಬೋವಿ ಎಂಬ ಬೆಸ್ತನ ಮಗಳಾದ ಚಂದ್ರಿಕಾ ಎಂಬ ಸುರಸುಂದರಿ ತನ್ನನ್ನು ಆಕರ್ಷಿಸಲಿಕ್ಕಾಗೇ ದಿನವೂ ತನ್ನ ಮನೆಯಂಗಳದಲ್ಲಿ ತಾನಲ್ಲಿಗೇ ಅಗಮಿಸುವ ಮೊದಲೇ ರಚಿಸುತ್ತಿದ್ದ ವರ್ಣಮಯ ರಂಗೋಲಿಯಿಂದ ಸೆಳೆಯಲ್ಪಡುತ್ತಾರೆ. ನಂತರದ ದಿನಗಳಲ್ಲಿ ಅವಳ ಶಾರೀರಿಕ ಸೆಳೆತಕ್ಕೂ ಒಳಗಾಗುತ್ತಾರೆ. ಮತ್ತೆ ಕೇಳಬೇಕಾ, ಪಟ್ಟದರಸಿಯಾದರೂ ಸುಧೀರ್ಘ ಅನಾರೋಗ್ಯದಿಂದ ಬಳಲಿದ್ದ ಭದ್ರಮ್ಮಾಜಿಯ ಅಸಮಾಧಾನ ಹಾಗೂ ಮೌನ ವಿರೋಧಗಳ ನಡುವೆಯೂ ಚಂದ್ರಿಕಾಳನ್ನು ಶಾಸ್ತ್ರೋಕ್ತವಾಗಿ ತನ್ನವಳಾಗಿಸಿ ಕೊಳ್ಳುವಲ್ಲಿ ಸಫಲರಾಗ್ತಾರೆ. ಪತ್ನಿ ಭದ್ರಮ್ಮಾಜಿಯಿಂದ ಆ ಮೊದಲು ಪಡೆದಿದ್ದ ಕುಲಪುತ್ರ ಯುದ್ದವೊಂದರಲ್ಲಿ ಹುತಾತ್ಮನಾಗಿ ದೈವಪಾದ ಸೇರಿದ ನಂತರ, ತನ್ನ ಉತ್ತರಾಧಿಕಾರಿ ಬೇರಿಲ್ಲವೆಂಬ ಕೊರಗಿನಲ್ಲೂ ನೊಂದಿದ್ದ ರಾಜಾ ವೆಂಕಟಪ್ಪ ನಾಯಕನ ಮನದರಸಿಯಾಗಿ, ಪಟ್ಟಕೊಬ್ಬ ಸಮರ್ಥ ಸಂತಾನ ಹಡೆದು ಕೊಡುವ ಜವಾಬ್ದಾರಿ ಬೆಸ್ತರ ಚಂಪಕಾಳದ್ದಾಗುತ್ತದೆ. ದೀವರ ಸಮುದಾಯದವನೇ ಆಗಿದ್ದರೂ, ತನ್ನರಸರಾದ ವಿಜಯನಗರ ದೊರೆಗಳನ್ನು ಅನುಸರಿಸಿ ವೀರಶೈವ ಧರ್ಮವನ್ನು ಸ್ವೀಕರಿಸಿದ್ದ ರಾಜಾ ವೆಂಕಟಪ್ಪ ನಾಯಕ, ಬೆಸ್ತರ ಕನ್ನಿಕೆಯನ್ನು ದ್ವಿತೀಯ ಪತ್ನಿಯಾಗಿ ಸ್ವೀಕರಿಸುವ ಮೂಲಕ ಮೂಲಧರ್ಮಕ್ಕೆ ಘೋರ ಅಪಚಾರ ಎಸಗಿದ ಎಂಬ ದೂಷಣೆ ಪಟ್ಟದರಸಿಯ ಅಂತಃಪುರದಿಂದಲೇ ಹೊರ ಬಿದ್ದಾಗ, ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಪ್ರಿಯ ಪತ್ನಿ ಮಹಾ ಪತೀವೃತೆ ಸೀತೆಯ ಬಗ್ಗೆಯೇ ಕುಹಕವಾಡಿದ್ದ ಕಿರಾತಕರ ಸಂತತಿ ಆಗಲೂ ಇದ್ದು, ಅವರಿಂದ ರಾಜಾ ವೆಂಕಟಪ್ಪ ನಾಯಕರೆಡೆಗೆ ದಶ ದಿಕ್ಕುಗಳಿಂದಲೂ ಅಪಪ್ರಚಾರ ಶುರುವಿಟ್ಟಿತು. ತನ್ನಿಂದಲೇ ಅರಂಭವಾದ ವದಂತಿಗಳು ಮತ್ತೆ ತನ್ನ ಕಿವಿಯನ್ನೇ ಬೃಹದಾಕಾರವಾಗಿ ಮರಳಿ ತಲುಪಿದಾಗ, ಭದ್ರಮ್ಮಾಜಿ ಅನ್ನಾಹಾರ ತ್ಯಜಿಸಿ 25.10.1624 ರಂದು ದೈವಾಧಿನಳಾದಳು. ಅವಳ ಅಕಾಲಿಕ ಸಾವಿಗೆ ತಾನೇ ಪ್ರಧಾನ ಕಾರಣಳಾದೆನೆಂದು ಮಮ್ಮಲ ಮರುಗಿದ ಚಂಪಕಾ ರಾಣಿಯೂ,ಭದ್ರಮ್ಮಾಜಿ ಅಸ್ತಂಗತಳಾದ ಕೇವಲ ಎರಡು ತಿಂಗಳ ಅಂತರದಲ್ಲಿ ವಜ್ರದ ಪುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಸವಿಸ್ಮರಣೆಯಲ್ಲೇ ಒಂದು ವರ್ಷ ಕೊರಗಿದ ರಾಜಾ ವೆಂಕಟಪ್ಪ ನಾಯಕ ನಂತರದ ದಿನಗಳಲ್ಲಿ ಆನಂದಪುರದಲ್ಲಿ , ಸದೃಡ ಜಂಬಿಟ್ಟಿಗೆ ಕಲ್ಲುಗಳನ್ನು ಅಳವಡಿಸಿದ್ದ ಸುಂದರ "ಚಂಪಕ ಸರಸ್ಸು" ನಿರ್ಮಿಸಿದ* ಎನ್ನುವ ಯಾರೂ ನಿರಾಕರಿಸಲಾಗದ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಈಗೊಂದು ದಶಕದ ಹಿಂದೆಯೇ, *ಬೆಸ್ತರ ಯುವತಿ ಚಂಪಕ ರಾಣಿ ರಾಜಾ ವೆಂಕಟಪ್ಪ ನಾಯಕರ ಸೂಳೆಯಾಗಿರಲಿಲ್ಲ. ಬದಲಿಗೆ ಪ್ರೇಮಿಸಿ ವಿವಾಹವಾದ ತೃತೀಯ ಪತ್ನಿ ಎನ್ನುವ ಸಂಗತ ಘಟನೆಗಳ ವಿವರಣೆಯೊಂದಿಗೆ *ಕೆಳದಿ ಸಾಮಾಜ್ಯದ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ* ಎನ್ನುವ ಧೀರ್ಘ ಶೀರ್ಷಿಕೆಯಲ್ಲಿ ಸುಂದರ ಕಾದಂಬರಿ ಕೂಡ ಬರೀತಾರೆ. ಆದರದನ್ನು *ಕನ್ನಡ ಸಾಹಿತ್ಯಾಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ, ಒಂದೊಮ್ಮೆ ಬೆಸ್ತರ ಕನ್ಯೆ ಚಂಪಕ ಕೆಳದಿ ಅರಸ ರಾಜಾ ವೆಂಕಟಪ್ಪ ನಾಯಕ ತನ್ನ ದೈಹಿಕ ತೀಟೆ ತೀರಿಸಿಕೊಳ್ಳಲಿಕ್ಕಾಗಿ ಇಟ್ಟುಕೊಂಡಿದ್ದ ಯಕಶ್ಚಿತ್ ದೊರೆಸಾನಿಯಲ್ಲ. ವಿದ್ಯುಕ್ತವಾಗಿ ಹಾಗೂ ಶಾಸ್ತ್ರೋಕ್ತವಾಗಿ ವಿವಾಹವಾದ ಅಧಿಕೃತ ಪತ್ನಿ ಎನ್ನುವ ನಿಖರ ಮಾಹಿತಿಗಳನ್ನು ವಿವಿಧ ಮೂಲಗಳಿಂದಲೇ ಕಲೆ ಹಾಕಿ ಬರೆದ ತನ್ನ ಬರಹವು ಸಲ್ಲದ ವಿವಾದಕ್ಕೆ ಆಸ್ಪದ ನೀಡಿದರೇನು ಗತಿ* ಎಂಬ ಅನಗತ್ಯ ಆತಂಕದಲ್ಲೇ ಈಗ್ಗೆ ಮೂರು ತಿಂಗಳ ಹಿಂದಿನ ವರೆಗೂ ತಡೆದವರು, ದಿಟ್ಟ ಮತ್ತು ನಿರ್ಭೀತ ವರದಿಗಾರಿಕೆಗೆ ರಾಜ್ಯದಲ್ಲೇ ಹೆಸರಾದ,ದಿಟ್ಟ ಸುದ್ದಿಗೆ ಒಂದು ಕಾಲಾವಧಿಯಲ್ಲಿ ಜನಪ್ರಿಯ ವಾಗಿದ್ದ, ಕನ್ನಡ ಪತ್ರಿಕೋದ್ಯಮದ ದೃವತಾರೆ ರವಿ ಬೆಳಗೆರೆ ಸಂಪಾದಕತ್ವದ *ಹಾಯ್ ಬೆಂಗಳೂರು* ಪತ್ರಿಕೆಯ ಜಿಲ್ಲಾ ವರದಿಗಾರರೂ ಜನಹೋರಾಟ ದೈನಿಕದ ಸಂಪಾದಕರೂ ಆದ ಶೃಂಗೇಶ್ ಮಾಲೀಕತ್ವದ *ಜನಹೋರಾಟ ಪ್ರಿಂಟರ್ಸ್* ವತಿಯಿಂದ ಕೊನೆಗೂ ಬಿಡುಗಡೆ ಮಾಡುವ ಎದೆಗಾರಿಕೆ ಪ್ರದರ್ಶಿಸಿದ್ದಾರೆ.
ಆದರೆ ಚಂಪಕ ವೇಶ್ಯೆಯಲ್ಲ, *ರಾಜಾ ಬಹುವಲ್ಲಭ* ಎಂಬಂತೆ ಕೆಳದಿಯ ಧೀಮಂತ ಅರಸ ರಾಜಾ ವೆಂಕಟಪ್ಪ ನಾಯಕನ ಅಧಿಕೃತ ಪತ್ನಿ ಎಂಬ ಐತಿಹಾಸಿಕವಾಗಿ ನಿರೂಪಣೆಗೊಂಡ ನಿಖರ ಸತ್ಯವನ್ನು ಬಯಲಿಗಿಡಲು ವಿಪರೀತ ಹೆಣಗಿದ್ದಾರೆ. ಹೌದು, ಅರುಣ್ ಪ್ರಸಾದ್ ವಿರಚಿತ *ಬೆಸ್ತರ ರಾಣಿ ಚಂಪಕ* ಕೃತಿ ಅಕೆಯ ಚಾರಿತ್ರ್ಯದ ನಿಟ್ಟಿನಲ್ಲಿ ಕೇಳಿ ಬರುತ್ತಿದ್ದ ಅಪಪ್ರಚಾರವನ್ನು ಇಲ್ಲವಾಗಿಸಿ ಅವಳ ಪಾತ್ರದ ಬಗ್ಗೆ ಅಗತ್ಯವಿದ್ದ ನ್ಯಾಯವನ್ನು ದಟ್ಟವಾಗಿ ದಿಟ್ಟವಾಗಿ ಕಟ್ಟಿ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆನ್ನಬೇಕು.
ಇತಿಹಾಸದ ಪುಟಗಳಲ್ಲಿ ದಾಖಲಾದ *ಒಬ್ಬ ಆಳರಸ ಮತ್ತು ಸಾಮಾನ್ಯ ಕುಟುಂಬದ ಬೆಸ್ತರ ಕನ್ಯೆಯೊಬ್ಬಳ ನಡುವಿನ ಪ್ರಣಯ ಸನ್ನಿವೇಶಗಳನ್ನು, ರೋಚಕ ಮತ್ತು ರಂಜನೀಯವಾಗಿ ಹಾಗೂ ನಡೆದಿರುವ ಸರಸ ಪ್ರಸಂಗಗಳನ್ನು ವರ್ಣರಂಜಿತವಾಗಿ ವಿವರಿಸುವಲ್ಲಿ* ಅರುಣ್ ಪ್ರಸಾದ್ ಗೊಂದಲಕ್ಕೆ ಬಿದ್ದವರಂತೆ ಚಡಪಡಿಸಿದ್ದಾರೆ. ಇದವರ ಕಾದಂಬರಿ ಉದ್ದಕ್ಕೂ ನಿಚ್ಚಳವಾಗಿ ಗೋಚರಿಸುತ್ತದೆ. ಅಷ್ಟೇ ಅಲ್ಲ..
ರಾಜಾ ವೆಂಕಟಪ್ಪ ನಾಯಕನ ಆಳ್ವಿಕೆಗೆ ಒಳಪಟ್ಟ ಭೌಗೋಳಿಕ ವಿಸ್ತಾರದ ಬಗ್ಗೆ, ಆತ ಕಟ್ಸಿದ ವಿವಿಧ ಕೋಟೆಗಳೆಡೆಗೆ, ಪೋರ್ಚುಗೀಸರ ದಾಳಿಯನ್ನು ಸಮರ್ಥವಾಗಿ ಆತ ಎದುರಿಸಿದ ನಿಟ್ಟಿನಲ್ಲಿ,ತನ್ನ ಆಡಳಿತಾವಧಿ ಉದ್ದಕ್ಕೂ ಕಿಂಚಿತ್ತೂ ರಾಜಿಯಾಗದೇ ಅಳವಡಿಸಿ ಕೊಂಡಿದ್ದ ನಿಷ್ಪಕ್ಷಪಾತ, ಜಾತ್ಯತೀತ ಹಾಗೂ ದಕ್ಷತಾ ಪೂರ್ಣ ಅಧಿಕಾರ ನಿರ್ವಹಣೆಯ ಬಗ್ಗೆ ಸಂದರ್ಭ- ಸಮಯ- ಘಟನೆಗಳನ್ನು ಸ್ಪಷ್ಟ ಅಂಕಿಅಂಶಗಳ ವಿವರಣೆ ನೀಡುವ ಅರುಣ್ *ರಾಜಾ ವೆಂಕಟಪ್ಪ ನಾಯಕ ಮತ್ತು ಚಂದ್ರಿಕಾಳ ನಡುವಿನ ಸ್ನೇಹ ಸಂಬಂಧಗಳ ಬಗ್ಗೆ* ರಂಜನೀಯವಾಗಿ ಅಷ್ಟೇ ನಿಖರವಾಗಿ ಬರೆಯಬೇಕಾದ್ದು, ತನ್ನ ಕಾದಂಬರಿಗೆ *ಬೆಸ್ತರರಾಣಿ ಚಂಪಕ* ಎಂಬ ಶೀರ್ಷಿಕೆಗೆ ಪೂರಕ ಎಂಬ ಮಹತ್ವಪೂರ್ಣ ಅಂಶವನ್ನೇ ಮರೆತುಬಿಡ್ತಾರೆ.
ಬೋವಿ, ಬೆಸ್ತರು ಅರ್ಥಾತ್ ಗಂಗಾ ಮತಸ್ಥರು ಮಹಾಭಾರತ ರಚಿಸಿದ ವೇದವ್ಯಾಸರ ತಾಯಿ ಸತ್ಯವತಿಯ ಸಂತತಿಯವರು. ವೇದ ಪುರಾಣಗಳ ಬಹುತೇಕ ಮಹಾಪುರುಷರ ತಾಯಂದಿರು ಬೆಸ್ತರೇ. ಅಂತಹ ಬಹುಮನ್ನಣೆಯ ಸಮುದಾಯದ ಯುವತಿಯೊಂದಿಗೆ ಮೂಲತಃ ದೀವರವನಾಗಿದ್ದರೂ, ವೀರಶೈವ ಪದ್ಧತಿ ಪಾಲಿಸಿದ ರಾಜಾ ವೆಂಕಟಪ್ಪ ನಾಯಕ ಮದುವೆಯಾದದ್ದು ಯಾವ ನಿಟ್ಟಿನಲ್ಲೂ ತಪ್ಪಲ್ಲವೆಂದು ಓದುಗರಿಗೆ ಮನವರಿಕೆ ಮಾಡುವಲ್ಲಿಯೂ ಸಲ್ಲದ ಹಿಂಜರಿಕೆ ಪ್ರದರ್ಶಿಸುತ್ತಾರೆ. ಕೆಳದಿ ಅರಸರ ವಂಶಾವಳಿ, ರಾಜಾ ವೆಂಕಟಪ್ಪ ನಾಯಕನ ಆಳ್ವಿಕೆಯ ಅವಧಿಯಲ್ಲಿ ಘಟಿಸಿದೆ ಎನ್ನಲಾದ ಪ್ರತಿಯೊಂದು ಘಟನೆ ವಿದ್ಯಮಾನಗಳ ಬಗ್ಗೆ ಅಪಾರ ಐತಿಹಾಸಿಕ ಮಾಹಿತಿಗಳ ಸಂಗ್ರಹವೇ ತನ್ನಲ್ಲಿದೆ ಎಂಬುದನ್ನು ನಿಖರ ಅಂಕಿಅಂಶಗಳೊಂದಿಗೆ ತಮ್ಮ ಕಾದಂಬರಿಯಲ್ಲಿ ಖಚಿತ ಧ್ವನಿಯಲ್ಲಿ ದಾಖಲಿಸಿರುವ ಅರುಣ್, ಅದೇ ನ್ಯಾಯವನ್ನು ಚಂಪಕಾ ಪಾತ್ರ ನಿರೂಪಣೆಗೆ ನೀಡುವಲ್ಲಿ ಸೋಲುತ್ತಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಐತಿಹಾಸಿಕವಾಗಿ ಪ್ರಮುಖವಾದ ಅತ್ಯುತ್ತಮ ಪ್ರಣಯಗಾಥೆಯನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುವಲ್ಲಿ ಅಗತ್ಯವಿದ್ದ ಎಲ್ಲಾ ಸಾಮರ್ಥ್ಯ ತನ್ನಲ್ಲಿದ್ದಾಗಲೂ ಅದನ್ನು ಸಶಕ್ತವಾಗಿ ಸಾದರ ಪಡಿಸುವಲ್ಲಿ ಉದ್ಧಿಶ್ಯಪೂರ್ವಕವಾಗೇ ಅಳುಕಿದ ಲೇಖಕರ ಹಿಂಜರಿಕೆ ಏನಿದೆ ಅವುಗಳ ನಿದರ್ಶನಗಳು ಕಾದಂಬರಿಯುದ್ದಕ್ಕೂ ಕಾಣ ಸಿಗ್ತವೆ. ಇತಿಹಾಸದ ನಿರೂಪಣೆಗಷ್ಟೇ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುವ ಧಾವಂತ ಪ್ರದರ್ಶಿಸಿರುವ ಅರುಣ್ , ತಮ್ಮದೇ ಕಾಲ್ಪನಿಕ ಕಥಾನಾಯಕಿ ಚಂಪಕಳ ಪಾತ್ರವನ್ನು ಅತ್ಯಂತ ನೀರಸವಾಗಿ ಹೆಣೆಯುವ ಮೂಲಕ, ಆಕೆಯನ್ನು ಸೊರಗುವಂತೆ ಮಾಡಿದ್ದಾರೆ. ಅವಳ ಬಾಲ್ಯ,ಯವ್ವನ, ರಾಜರ ಮಡದಿಯಾಗುವ ಅಚ್ಚರಿಯ ಸಂದರ್ಭದಲ್ಲಿ ಅವಳ ಮನದಲ್ಲಿ ನಡೆದಿರಬಹುದಾದ ತಲ್ಲಣ -ತವಕ, ಆತಂಕ ಸಂಭ್ರಮ -ಸಡಗರಗಳನ್ನು ಶಂಗಾರಭರಿತವಾಗಿ ದಾಖಲಿಸಲೇ ಬೇಕಿದ್ದಾಗ ತಾನು ಯಾವುದೋ ಬಾಹ್ಯ ಒತ್ತಡದಲ್ಲಿದ್ದೆ ಎಂಬುದನ್ನೂ ಸಾಬೀತು ಪಡಿಸಿದ್ದಾರೆ.
ಇಷ್ಟೆಲ್ಲಾ ಐಬುಗಳ ನಡುವೆಯೂ ಅವರ ಕಾದಂಬರಿಗೆ, ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವಿದ್ದರೆ ಅದಕ್ಕೆ ಮುಖ್ಯ ಕಾರಣ ಐತಿಹಾಸಿಕ ಪ್ರಸಂಗಗಳು, ಘಟನೆ- ಐತಿಹ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅರುಣ್ ಅವರ ಬರಹ ಸಾಮರ್ಥ್ಯ. ಧನ್ಯವಾದ ಅರುಣ್, ನನ್ನ ವಿಮರ್ಶೆ ನಿರೀಕ್ಷಿಸಿಯೇ ಉಚಿತವಾಗಿ ತಮ್ಮ ಕಾದಂಬರಿಯನ್ನು ನನಗೆ ಕಳುಹಿಸಿ ಕೊಟ್ಟಿದ್ದಕ್ಕಾಗಿ. ಕ್ಷಮೆ ಕೋರುವೆ, ತುಂಬಾ ವಿಳಂಬವಾಗಿ ಕಾದಂಬರಿ ಕುರಿತ ನನ್ನ ಅನಿಸಿಕೆಯನ್ನು ದಾಖಲಿಸಿದಕ್ಕಾಗಿ. ನಿಮ್ಮಲ್ಲಿ ಇನ್ನೂ ಅಪಾರವಾದ ಲೇಖನ ಶಕ್ತಿ ಉಳಿದಿದೆ ಎಂಬುದನ್ನು *ಬೆಸ್ತರ ರಾಣಿ ಚಂಪಕಾ* ಜಗತ್ತಿಗೇ ತೋರಿಸಿಕೊಟ್ಟಿದ್ದಾಳೆ. ಮತ್ತೆ ಹಿಂಜರಿಯುವುದೇಕೆ, ಇನ್ನಷ್ಟು ಸುಂದರ ಕತೆ- ಕಾದಂಬರಿಗಳ ರಚನೆ ಮುಂದುವರೆಸಿ. ನಿಮಗೆ ಶುಭವಾಗಲಿ.. ಸದಾ ನಿಮ್ಮವ ಲಕ್ಷ್ಮೀಶ ಕಾ.ಸು.,ತೀರ್ಥಹಳ್ಳಿ
Comments
Post a Comment