Blog number 1028.ಕರಾವಳಿಯ ದೈವಾರಾದನೆಯ೦ತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬ, ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ
#ನೋನಿಗೆ_ಜಾತಿ_ಬೇದ_ಇಲ್ಲ_ಆದರೆ_ಹುಟ್ಟು_ಸಾವು_ಮುಟ್ಟಿನ_ಸೂತಕ_ಇದೆ.
#ಸೂತಕ_ಆದರೆ_ನೋನಿ_ಆಚರಿಸುವಂತಿಲ್ಲ
#ನೋನಿ_ಸಂಭ್ರಮಕ್ಕೆ_ಸೂತಕವನ್ನೆ_ನಿವಾರಿಸುವ_ಉಪಾಯ
#ಮುಟ್ಟಿನ_ಸಾಧ್ಯತೆಯ_ಹೆಣ್ಣು_ಮಕ್ಕಳು_ತಾತ್ಕಾಲಿಕವಾಗಿ_ಊರು_ಬಿಡುವುದು
ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ ನಮಗೆ ಪೂಜಾರ್ಹವೇ ಆಗಿದೆ.
ರಾಮಕ್ಷತ್ರಿಯ ಸಮಾಜದ ಬಗ್ಗೆ ಒಂದು ಪುಸ್ತಕ ಬರೆಯುವ ಉಮೇದಿನಲ್ಲಿ (ಪ್ರಕಟ ಆಗಿಲ್ಲ) ಮಹಾರಾಷ್ಟ್ರದ ವಿಜಯ ದುರ್ಗದಿಂದ ಕಾಸರಗೋಡಿನವರೆಗೆ ಓಡಾಡಿದಾಗ ಕು೦ಬಳೆಯ ಕೋಟೆ ಆ೦ಜನೇಯ ದೇವಾಲಯದ ವಾರ್ಷಿಕೊತ್ಸವದಲ್ಲಿ ಬೂತಾರಾಧನೆ - ಕೆಂಡ ಹಾಯುವುದು - ಕೋಲಾ ನೋಡಿದ್ದೆ ಈ ಬಗ್ಗೆ ತಿಳಿದದ್ದು ಇದು ರಾಮಕ್ಷತ್ರಿಯರ ಆಚರಣೆ ಅಲ್ಲ ಆದರೆ ಅದನ್ನು ಕೆಳದಿ ಅರಸರ ಕೋಟೆ ನಿರ್ವಹಣೆ ಮಾಡುವ ಈ ಸಮಾಜದವರು ಸ್ಥಳಿಯರ ನಂಬಿಕೆಗೆ ಗೌರವ ಕೊಡಲು ಅದಕ್ಕೆ ತಕ್ಕ ಹಾಗೆ ವರ್ತಿಸಿ ಅವರ ಜೊತೆ ಜೀರೋ ಟಾಲರೆನ್ಸ್ ಕಾಪಾಡಿಕೊಂಡಿದ್ದರೆಂದು ತಿಳಿದು ಬರುತ್ತದೆ.
ಕಾಂತಾರ ಸಿನಿಮಾದಿಂದ ಮತ್ತು ಕೊರಗಜ್ಜರ ಕಾರಣಿಕಗಳಿಂದ ದೈವಗಳ ಬೂತಾರಾಧನೆ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಆಸಕ್ತಿ ಹರಿದಾಡುತ್ತಿದೆ, ಮಲೆನಾಡಿನಲ್ಲಿ ಗ್ರಾಮ ರಕ್ಷಣೆಯ ದೈವಗಳನ್ನು ಗಾಮದ ದೇವರು, ಬೂತ ಅಂತನೇ ಕರೆಯುತ್ತಾರೆ ಮತ್ತು ವರ್ಷಕೊಮ್ಮೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ - ಬಲಿಯ ನೋನಿ ಎಂಬ ಗ್ರಾಮದ ಹಬ್ಬವೂ ನಡೆಯುತ್ತದೆ.
ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ, ಊರ ಕಾಯುವ ಬೂತಗಳಿಗೆ ಸಾಮೂಹಿಕವಾಗಿ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ.
ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ.
ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ.
ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು - ಸಾವು - ಮುಟ್ಟುವಿನ ಸೂತಕ ಇದೆ. ಸದರಿ ನೋನಿ ದಿನ ಊರಲ್ಲಿ ಯಾರಾದರೂ ಮುಟ್ಟಾದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ.
ಇಲ್ಲಿ ಬಾಡೂಟದ ಗಮ್ಮತ್ತು ಇರುವುದರಿಂದ ಈ ಕಾಯ೯ಕ್ರಮ ಮುಂದೂಡಲು ಹೆಚ್ಚಿನವರಿಗೆ ಇಷ್ಟ ಇರುವುದಿಲ್ಲ ಅದಕ್ಕಾಗಿ ಸೂತಕಗಳನ್ನೇ ನಿವಾರಿಸಿಕೊಳ್ಳುವ ಹೊಸ ಯೋಜನೆ ಆಚರಣೆಯಲ್ಲಿದೆ.
ಅದೇನೆ೦ದರೆ ಮುಟ್ಟಾಗುವ ಮುನ್ನವೆ ಹೆಣ್ಣು ಮಕ್ಕಳು ಹಳ್ಳಿ ತೊರೆದು ನೋನಿ ಇಲ್ಲದ ಹಳ್ಳಿಯ ನೆಂಟರ ಮನೆಗೆ ಹೋಗಬೇಕು.
ಮುಟ್ಟು ಮೌಡ್ಯವಲ್ಲ ಸಹಜ ಕ್ರಿಯೆ, ಮುಟ್ಟು ಸೂತಕ ಎಂಬುದು ಮೂಡನಂಬಿಕೆ,ಮೊದಲೆಲ್ಲ ಮುಟ್ಟಾದರೆ ಮೂರು ದಿನ ಮನೆಯಲ್ಲೇ ಪ್ರತ್ಯೇಕವಾಗಿ ಅಸ್ಪೃಶ್ಯರಾಗಿರಬೇಕಾದ ಆಚರಣೆ ಈಗಿಲ್ಲ ಆದರೂ ಇದು ವ್ಯೆಜ್ಞಾನಿಕ ಯುಗದಲ್ಲಿ ಸಂಪೂರ್ಣವಾಗಿ ನಿಂತಿಲ್ಲ.
Comments
Post a Comment