ಈಗೆಲ್ಲ ಹಳ್ಳಿಯ ಪ್ರತಿ ಮನೆಯಲ್ಲೂ ಎರೆಡೆರೆಡು ಬೈಕ್, ಕಾರ್, ಟ್ರಾಕ್ಟರ್ ಇತ್ಯಾದಿ ಇದ್ದೇ ಇದೆ ಅದರದ್ದೇ ಆಯುದ ಪೂಜೆಯ ಸಡಗರ ಆದರೆ ಭಾಗವಹಿಸುವ ಸಾವ೯ಜನಿಕರು ತುಂಬಾ ಕಡಿಮೆ.
ಸುಮಾರು 50 ವರ್ಷದ ಹಿಂದೆ ದಸರಾ ಆಯುದ ಪೂಜೆ ಬೇರೆ ರೀತಿ ಇತ್ತು.
ರೈಲುಗಳು ನಮ್ಮ ಊರಿನಲ್ಲಿ ಇದ್ದಿದ್ದರಿ೦ದ ರೈಲ್ವೆ ಗೇಟ್ ಮನ್ ಗಳು ಗೇಟ್ ಗೆ ಹೂವು ಮಾವಿನ ತಳಿರು ತೋರಣದಿಂದ ಸಿಂಗರಿಸಿ ಕುರಿ ತಂದು ಇರಿಸಿ ಪ್ರತಿ ದಿನಕ್ಕಿಂತ ತಡವಾಗಿ ಬರುವ ರೈಲಿಗೆ ಕಾಯುತ್ತಿದ್ದರು ಉಗಿ ಬಂಡಿ ಗೇಟ್ ಸ್ಥಳಕ್ಕೆ ಬಂದು ನಿಂತಾಗ ರೈಲಿಗೆ ಪೂಜೆ ಮಾಡಿ ಕುರಿ ಬಲಿ ನೀಡುತ್ತಿದ್ದರು ರೈಲ್ವೆ ಸಿಬ್ಬಂದಿಗೆ ಅವತ್ತು ಬೋನಸ್ ಬೇರೆ ಸಿಗುತ್ತದೆ ಅಂತ ಸುದ್ದಿ ಇತ್ತು.
ನಮ್ಮ ಊರು ಆನಂದಪುರಂ ಹೋಬಳಿ ಕೇಂದ್ರವಾದ್ದರಿಂದ ವಿದ್ಯುತ್ ಇಲಾಖೆಯಲ್ಲಿ ಮತ್ತು ಪೋಲಿಸ್ ಹೊರ ಠಾಣೆಯಲ್ಲೂ ಸಡಗರ ಇರುತ್ತಿತ್ತು.
ಇದನ್ನು ಬಿಟ್ಟರೆ ನಮಗೆಲ್ಲ ಹೆಚ್ಚು ನಂಟಿದ್ದ ನಮ್ಮ ಊರ ಅಕ್ಕಿ ಗಿರಣಿ ಆಯುದ ಪೂಜೆನೆ ವಿಶೇಷ, ಯಾಕೆಂದರೆ ಆಗೆಲ್ಲ ಭತ್ತದ ಹೊಟ್ಟಿಗೆ ಬೆಲೆ ಇರಲಿಲ್ಲ ಅಕ್ಕಿ ಗಿರಣಿ ಹಿಂದೆ ಅಕ್ಕಿ ಗಿರಣಿ ಕಟ್ಟಡಕ್ಕಿಂತ ದೊಡ್ಡದಾದ ಹೊಟ್ಟಿನ (ಉಮ್ಮಿ) ರಾಶಿ ಬಿದ್ದಿರುತ್ತಿತ್ತು ಅದು ಊರಿನ ಆ ಕಾಲದ ಎಳೆಯರಿಗೆ ದೊಡ್ಡ ಆಕಷ೯ಣೀಯ ಕೇಂದ್ರ, ಹೇಗೆ ಬಿದ್ದರೂ ಉರುಳಿದರೂ ದೊಡ್ಡ ಸ್ಪಾ೦ಜ್ ಬೆಡ್ ಅದಾಗಿರುತ್ತಿತ್ತು ಹಾಗಾಗಿ ಆ ಅಕ್ಕಿ ಗಿರಣಿ ನಮ್ಮದೆ ಎನ್ನುವಂತ ಸಲಿಗೆ, ಆಯುದ ಪೂಜೆ ಹಿಂದಿನ ದಿನ ಸ೦ಜೆ 4 ರ ಸಮಯ ಸಾಗರದಿಂದ ಬರುವ ಬಿ.ಆರ್.ಕೆ. ಬಸ್ಸಿನಲ್ಲಿ ಒಂದು ಚೀಲ ಮಂಡಕ್ಕಿ ಬರುತ್ತಿತ್ತು ಮರುದಿನ ಬೆಳಿಗ್ಗೆ ಆಯುದ ಪೂಜೆ ನಂತರ ನೆರೆಯುತ್ತಿದ್ದ ನೂರಾರು ಜನರಿಗೆ ಮಂಡಕ್ಕಿ ಅವರು ಹಿಡಿಯುತ್ತಿದ್ದ ಅಂಗಿ ಪಂಚೆಗಳಿಗೆ ಹಾಕುತ್ತಿದ್ದರು ಅದು ಆ ಕಾಲದಲ್ಲಿ ನಮಗೆಲ್ಲ ಪಂಚಾಮೃತ.
ಊರಲ್ಲಿ ಸೈಕಲ್ ಇದ್ದವ ಶ್ರೀಮಂತ ಅನ್ನೋ ಕಾಲ ಇಡೀ ಹೋಬಳಿಯಲ್ಲಿ ಒಂದೆರೆಡು ರಾಜದೂತ್ ಬೈಕ್, ಒ0ದೆರೆಡು ವೆಸ್ಪಾ ಸ್ಕೂಟರ್, ಸುವೇಗ, ವಿದ್ಯಾ ಮಂತ್ರಿಗಳಾಗಿದ್ದ ಬದರಿನಾರಾಯಣ್ ಅಯ್ಯಂಗಾರರ ಅಣ್ಣ ವೆಂಕಟಾಚಲ ಅಯ್ಯ೦ಗಾರರ ಒಂದೇ ಒಂದು ಅಂಬಾಸಡರ್ ಕಾರು, ಕಂಟ್ರಾಕ್ಟರ್ ತಿರುಮಲಾಚಾರರ ಲಾರಿ, ಲಾರಿ ಶೇಖರಣ್ಣ ರ ಲಾರಿ, ಅಚ್ಯುತಾಚಾರರ ಲಾರಿ, ಕೊಲ್ಲಾ ಬೋವಿ ಅವರ ಲಾರಿ ಮಾತ್ರ ನಮ್ಮ ಊರಿನ ಆಸ್ತಿ ಅನ್ನುವಂತೆ 4 ಲಾರಿ ಇತ್ತು.
ಆಯುದ ಪೂಜೆ ಬೆಳಿಗ್ಗೆಯೇ ಲಾರಿ ಇರುವವರ ಮನೆಗೆ ಹೋಗಿ ಅದರಲ್ಲಿ ಊರೆಲ್ಲ ಕೂಗುತ್ತಾ ಹೋಗುತ್ತಿದ್ದ ನಮಗಿಂತ ದೊಡ್ಡ ಹುಡುಗರ ಬಾಗ್ಯ ನೋಡಿ ನಮಗೆಲ್ಲ ಅಳು ಒತ್ತರಿಸಿ ಬರುತ್ತಿತ್ತು, ನನ್ನಣ್ಣ ಈ ರೀತಿ ಲಾರಿಯಲ್ಲಿ ಹೋಗಿ ಬರುತ್ತಿದ್ದ.
ಆಗೆಲ್ಲ ನನ್ನ ಮನಸ್ಸಲ್ಲಿ ದೊಡ್ಡವನಾದ ಮೇಲೆ ಅಕ್ಕಿ ಮಿಲ್ ಮಾಡಬೇಕು, ಸಿನಿಮಾ ಟಾಕೀಸ್ ಮಾಡಬೇಕು, ಲಾರಿ ಬಸ್ಸು ಕಾರು ಬೈಕ್ ಖರೀದಿಸಲೇ ಬೇಕು ಅನ್ನಿಸುತ್ತಿತ್ತು, ಕಳೆದ 50 ವರ್ಷದಲ್ಲಿ ಅದನ್ನೆಲ್ಲ ಮಾಡಿ ಬಿಟ್ಟು ಈಗ ಬೇರೆ ದಿಕ್ಕಿನಲ್ಲಿದೆ ಜೀವನ.
ಆದರೆ ಈಗಿನ ಮಕ್ಕಳಲ್ಲಿ ನಮ್ಮ ಬಾಲ್ಯದ ಸಂಭ್ರಮ ಇಲ್ಲ ಅನ್ನಿಸುತ್ತೆ ಕಾರಣ ಅಸಂಖ್ಯಾ ಕಾರು ಲಾರಿಗಳು, ಅಂಗಯಿಯಲ್ಲಿ ವಿಶ್ವ ದಶ೯ನ ಮಾಡುವ ಸೆಲ್ ಫೋನ್ ಗಳು ಅವರದ್ದೇ ಬೇರೆ ಪ್ರಪ೦ಚ ಆಗಿರಬೇಕು ಹಾಗಾಗಿ ಆಯುದ ಪೂಜೆಗೆ ಸಾವ೯ಜನಿಕರು ಬರುವುದೇ ಇಲ್ಲ.
Comments
Post a Comment