#ರಾಡೋ_ಡಯಾಸ್ಪರ್_ಗೋಲ್ಡ್_ಕಲರ್_ವಾಚ್
#ಸ್ವಿಜರಲ್ಯಾಂಡ್_ರಾಡೋ_ವಾಚ್_ಕಂಪನಿಯ_ಮೋಡಿ
#ವಿಶ್ವದ_ಮೊದಲ_ಸ್ಕ್ರಾಚ್_ಪ್ರೂಪ್_ವಾಚ್
#ರಾಡೋ_ಕಂಪನಿ_60ನೇ_ವಾರ್ಷಿಕೋತ್ಸವದ_ಆನಿವಸರ್ಸರಿ_ಎಡಿಷನ್_ಬಿಡುಗಡೆ_ಮಾಡಿದೆ
#ತೂಕದ_ಸುಣ್ಣದ_ಡಬ್ಬಿ_ಅಂತ_ಇದನ್ನು_ಟ್ರೋಲ್_ಮಾಡುತ್ತಾರೆ.
#ಬಹುಬೇಡಿಕೆಯ_ಶ್ರೀಮಂತಿಕೆಯ_ಪ್ರತೀಕವಾದ_ರಾಡೋ_ವಾಚ್.
ನಾನು ವಾಚ್ ಕಟ್ಟಲೇ ಇಲ್ಲ, ಆದರೆ ವಾಚಿನ ಪಂಚಾಯಿತಿ ಮಾತ್ರ ನೂರಾರು ಮಾಡಿದ್ದೆ ಯಾಕೆಂದರೆ ನಾನು ಆ ಕಾಲದಲ್ಲಿ ರೈಸ್ ಮಿಲ್ ಮಾಲಿಕನಾಗಿದ್ದೆ, ಆಗ ವರದಕ್ಷಿಣೆ ಪಟ್ಟಿಯಲ್ಲಿ ವರನ ಗೆಳೆಯರು HMT ಯ ಇಂತದ್ದೇ ವಾಚ್ ವದುವಿನ ಮನೆಯಿಂದ ಪಡೆಯಲೇ ಬೇಕೆಂದು ವರನಿಗೆ ಸೂಚಿಸುತ್ತಿದ್ದರು, ವರನೂ ಇದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ, ಇದರಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವರ ಮದುವೆ ಮುರಿಯುವ ಮಾತಾಡುತ್ತಿದ್ದ ಅಂತಹ ಸಮಯದಲ್ಲಿ ಪಂಚಾಯಿತಿ ನಡೆದು ಮದುವೆ ಸುಖಾಂತ್ಯ ಮಾಡುವ ಜವಾಬ್ದಾರಿ ರೈಸ್ ಮಿಲ್ ಮಾಲೀಕನಾದ ನನ್ನದಾಗಿರುತ್ತಿತ್ತು ಕಾರಣ ಆ ರೈತರ ಕುಟುಂಬದ ಬತ್ತ ನನ್ನ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿಕೊಂಡು ಹೋಗುವವರಾದ್ದರಿಂದ ಅವರೊಡನೆ ನನಗಿದ್ದ ಅವಿನಾಭಾವ ಸಂಬಂದ.
ಇಲ್ಲಿ ತುಂಬಾ ಸ್ವಾರಸ್ಯ ಮತ್ತು ತಮಾಷೆಯ ರಾಡೋ ವಾಚಿನ ಪ್ರಸಂಗ ಕೇಳಿ... ನನ್ನ ಮುಸ್ಲಿಂ ಗೆಳೆಯರ ತಮ್ಮನ ಮದುವೆ ಮಾತುಕಥೆಗೆ ನಾನು ಮುಖ್ಯ ಅತಿಥಿ ಆಗಿದ್ದೆ, ಅದೇ ರೀತಿ ಕೆಲ ದಿನದ ನಂತರ ನಡೆದ ನಿಶ್ಚಿತಾರ್ಥದ ದಿನ ಎಲ್ಲರೂ ಹೋಗಿದ್ದೆವು... ಇದ್ದಕ್ಕಿದ್ದಂತೆ ವರನ ಕಡೆಯವರೆಲ್ಲ ಎದ್ದು ಹೊರಟು ನಿಂತರು! ನಂತರ ಕಾರಣ ಕೇಳಿದರೆ Rado ವಾಚ್ ಕೊಡುತ್ತೇನೆಂದವರು ಯಾವುದೋ ಡಬ್ಬ ವಾಚ್ ತಂದಿದ್ದಾರೆ ಅಂತ ಮದುಮಗನ ಅಣ್ಣ ಕೋಪದಿಂದ ಕೂಗುತ್ತಿದ್ದರು.., ವದುವಿನ ತಂದೆ ವಿದೇಶದಲ್ಲಿ ಕೆಲಸದಲ್ಲಿದ್ದವರು, ಅವರು ನನ್ನ ಹತ್ತಿರ ಬಂದು " ಸಾರ್ ಇದು ನೋಡಿ Rado ವಾಚ್, ಇದು ಈಗಿನ ಡಿಸೈನ್ದು ಇದರ ಬಿಲ್ ನೋಡಿ, ಆದರೆ ನಮ್ಮ ಬೀಗರು ಹಳೇ ಕಾಲದ ಡಬ್ಬದಂತ ಗೋಲ್ಡ್ ಕಲರ್ Rado Diaster ವಾಚ್ ಮಾತ್ರ ಬೇಕಂತ ಹೇಳಿದ್ದರೆ ಅದನ್ನೆ ತರುತ್ತಿದ್ದೆ, ಅದಕ್ಕಿ೦ತ ಹೆಚ್ಚಿನ ಬೆಲೆ ವಾಚ್ ಇದು" ಅಂತೆಲ್ಲ ವಿವರಿಸಿದರೂ, ನಮ್ಮ ಗೆಳೆಯರ ಕಡೆಯವರು "ನಾವೇನು ಬಕರಾ ಅಂತ ಮಾಡಿದೀರಾ" ಅಂತ ಜಗಳ ಕಾದರು ... ನಂತರ ನನ್ನ ಜಡ್ಜ್ಮೆಂಟ್, ಈ ದುಬಾರಿ ವಾಚ್ ಮಾರಾಟ ಮಾಡಿ ಗೋಲ್ಡ್ ಕೇಸ್ ನ ರಾಡೋ ಡಬ್ಬಿ ವಾಚೇ ಮದುವೆ ದಿನ ಕೊಡುವುದು, ಅದಕ್ಕೆ ನಾನೇ ಜವಾಬ್ದಾರಿ ಅಂತನೂ ಆಗಿ ನಿಶ್ಚಿತಾರ್ಥ ಸುಖಾಂತ್ಯವಾಗಿ ಮುಗಿಸಿದೆವು.
ನಂತರ ಒಂದು ತಿಂಗಳಲ್ಲಿ ಹೊಸಾ ರಾಡೋ ಡಯಾಸ್ಟರ್ ಗೋಲ್ಡ್ ಕೇಸ್ ವಾಚು ದರಿಸಿ ಮದುಮಗನ ನಿಖಾವು ಆಯಿತು ನಾವೆಲ್ಲ ಸಾಕ್ಷಿ ಆದೆವು.
ಇದು ತಮಾಷೆ ಅನ್ನಿಸಿದರೂ ವಿಶ್ವದಾದ್ಯಂತ ರಾಡೋ ವಾಚಿನ ಕಮಾಲ್ ಇದು, ರಾಡೊ ವಾಚ್ ಕಂಪನಿ ಈ ವರ್ಷ (2020) ತನ್ನ 60ನೇ ವಾರ್ಷಿಕೋತ್ಸವ ಆಚರಿಸುತ್ತದೆ ಅದಕ್ಕಾಗಿ ಆ್ಯನಿವರ್ಸರಿ ಎಡಿಷನ್ ವಾಚ್ ಕೂಡ ಬಿಡುಗಡೆ ಮಾಡಿದೆ.
1917 ರಲ್ಲಿ ಸ್ವಿಜರ್ ಲ್ಯಾಂಡ್ ನ ಪ್ರಿಟ್ಜ್, ಏರ್ನಸ್ಟ್ ಮತ್ತು ವಾರ್ನರ್ ಎಂಬ ಮೂವರು ಸಹೋದರರು Schlup & co ಎಂಬ ವಾಚ್ ತಯಾರಿಸುವ ಸಂಸ್ಥೆ ಪ್ರಾರಂಬಿಸುತ್ತಾರೆ, 40 ವರ್ಷದ ನಂತರ ತಮ್ಮ ಕಂಪನಿ ಹೆಸರು ಬದಲಿಸಿ ರಾಡೋ ಅಂತ ನಾಮಕರಣ ಮಾಡುತ್ತಾರೆ.
1962 ರಲ್ಲಿ ಇವರು ತಯಾರಿಸಿ ಮಾರಾಟಕ್ಕೆ ಬಿಟ್ಟ ರಾಡೋ ಒರಿಜನಲ್ ಬ್ರಾಂಡ್ ವಾಚೇ ರಾಡೋ ಡಯಸ್ಟರ್ (Rado Diastar) ಇದು ವಿಶ್ವದ ಮೊದಲ ಸ್ಕ್ರಾಚ್ ಪ್ರೂಪ್ ಮತ್ತು ಗೋಲ್ಡ್ ಕಲರ್ ವಾಚ್, ಈ ವಾಚಿನಲ್ಲಿ ಶೇ.90% ಟಂಗ್ ಸ್ಟನ್ ಕಾರ್ಬೆಡ್ ಎಂಬ ದುಬಾರಿ ಲೋಹ ಬಳಿಸಿದ್ದರಿಂದ ಇದು ಸ್ಕ್ರಾಚ್ ಪ್ರೂಪ್ ಆಗಿದೆ.
ವಾಚಿನ ಡಯಲ್ ಸುರಕ್ಷತೆಗೆ ಸಪೈರ್ ಗ್ಲಾಸ್ ಬಳಸಿದ್ದಾರೆ ಇದರಿಂದ ನೂರು ಮೀಟರ್ ಆಳದಲ್ಲೂ ಈ ವಾಚಿನ ಒಳಗೆ ನೀರು ಹೋಗುವುದಿಲ್ಲ!.
ಒವಲ್ ಶೇಪಿನ ಬಂಗಾರದ ಬಣ್ಣದ ರಾಡೋ ಡಯಾಸ್ಟರ್ ವಾಚಿನ ಅಗಲ 38 ಮಿಮಿ X ಉದ್ದ 45 ಮಿಮಿ ಮತ್ತು ದಪ್ಪ 12.1 ಮಿಮಿ ಹಾಗೂ ಇದರ ಬ್ಯಾಂಡ್ ಅಗಲ 18 ಮಿಮಿ ಇದೆ.
ಇದರ ತೂಕ 92 ಗ್ರಾಂ ಇದೆ,ಈಗಲೂ ಈ ಗೋಲ್ಡ್ ಕಲರ್ ರಾಡೋ ಡಯಾಸ್ಟರ್ ವಾಚಿನ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ ಇವತ್ತಿನ ಇದರ ಬೆಲೆ ಒಂದು ಲಕ್ಷಕ್ಕೂ ಹೆಚ್ಚಿದೆ.
ರಾಡೋ ಕಂಪನಿ ಎಷ್ಟೇ ಬೇಡಿಕೆ ಇದ್ದರೂ ಇದು ವಾರ್ಷಿಕ 5 ಲಕ್ಷ ವಾಚ್ ಗಳನ್ನು ಮಾತ್ರ ತಯಾರಿಸುವ ಮಿತಿ ಹಾಕಿಕೊಂಡಿದೆ ಆದ್ದರಿಂದ ರಾಡೋ ವಾಚ್ ಬೇಡಿಕೆ ವಿಶ್ವದಾದ್ಯಂತ ಒಂದೇ ರೀತಿ ಇದೆ.
ಭಾರತದಲ್ಲಿ ಗೋಲ್ಡ್ ಕಲರ್ ನ ರಾಡೋ ಡಯಾಸ್ಟರ್ ವಾಚ್ ದರಿಸುವುದು ಒಂದು ರೀತಿ ಶ್ರೀಮಂತಿಕೆ ತೋರಿಸುವ ಲಗ್ಜುರಿ ಆಭರಣದಂತೆ ಹಾಗಾಗಿ ಇದು ಭಾರತದಲ್ಲಿ ಬಾರೀ ಬೇಡಿಕೆಯ ವಾಚ್ ಆಗಿದೆ.
ನನ್ನ ಗೆಳೆಯರು ಅವರ ತಮ್ಮನ ಮದುವೆ ನಿಶ್ಚಿತಾರ್ಥದಲ್ಲಿ ಸಿಟ್ಟಾಗಿ ಎಲ್ಲರನ್ನೂ ಎಬ್ಬಿಸಿ ಕೊಂಡು ಮದುವೆ ಮುರಿದುಕೊಂಡು ಹೊರಟಿದ್ದು ಈ ಗೋಲ್ಡ್ ಕಲರ್ ರಾಡೋ ಡಯಾಸ್ಟಾರ್ ವಾಚ್ ಮಾಡೆಲ್ ಮಾಡಿದ ಮೋಡಿ .
Comments
Post a Comment