Blog number 1735. ಕೊಲ್ಹಾರದಲ್ಲಿ ಮಾರಾಟ ಅಗುವ ಗಟ್ಟಿ ಕೆನೆ ಮೊಸರ ಮಣ್ಣಿನ ಕುಡಿಕೆಗಳಿಗೆ ಬಹು ಬೇಡಿಕೆ ಇದರ ರುಚಿ ಮತ್ತು ಘಮ ವಿಶಿಷ್ಟ.
#ಕೊರ್ತಿ_ಕೊಲ್ಹಾರ_ಮೊಸರು
#ಕೆನೆಮೊಸರು_ಮಣ್ಣಿನ_ಕುಡಿಕೆಗಳಲ್ಲಿ
#ವಿಜಯಪುರ_ಜಿಲ್ಲೆ_ಬಸವನಬಾಗೇವಾಡಿ_ವಿಧಾನಸಭಾ_ಕ್ಷೇತ್ರದ_ಕೊಲ್ಹಾರ
#ಈ_ಮೊಸರು_ಜಗತ್ಪ್ರಸಿದ್ದ_ದೇಶ_ವಿದೇಶಗಳ_ಗಣ್ಯರು_ಇದನ್ನು_ಸವಿದಿದ್ದಾರೆ.
#ನಂದಿನಿ_ಡೈರಿ_ಇದನ್ನು_ಮಾರುಕಟ್ಟಿಗೆ_ಬಿಟ್ಟಿದೆ.
https://youtu.be/mBfGIesUXOM?feature=shared
ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಮೊದಲು ಹುಮನಾಬಾದ್ ಹುಬ್ಬಳ್ಳಿ ರಸ್ತೆ ಪಕ್ಕದ ಕೊಲ್ಹಾರ ಊರು ಮುಳುಗಡೆಯಿಂದ ಸ್ಥಳಾಂತರವಾಗಿದೆ ಈಗ ತಾಲ್ಲೂಕು ಕೇಂದ್ರವಾಗಿರುವ ಕೊಲ್ಹಾರದಲ್ಲಿನ ಕೃಷ್ಣ ಮೇಲ್ದಂಡೆ ವೃತ್ತದಲ್ಲಿ ಇಲ್ಲಿನ ಸಿಗ್ನೇಚರ್ ಬ್ರಾಂಡ್ ಕೆನೆ ಮೊಸರು ಮಣ್ಣಿನ ಕುಡಿಕೆಗಳಲ್ಲಿ ಭರಪೂರ ವ್ಯಾಪಾರ ವಹಿವಾಟು ನಡೆಸುತ್ತಿದೆ.
ಮುಳುಗಡೆ ಆದ ಮೂಲ ಕೊಲ್ಹಾರದಲ್ಲಿ ಅನೇಕ ದಶಕಗಳಿಂದ ಈ ಭಾಗದ ರೈತ ಮಹಿಳೆಯರು ಬುಟ್ಟಿಗಳಲ್ಲಿ ಮೊಸರಿನ ಕುಡಿಕೆಗಳನ್ನು ಜೊಡಿಸಿ ಕೊಂಡು ತಲೆ ಮೇಲೆ ಹೊತ್ತು ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಾಗಾಣಿಕೆ ಲಾರಿಗಳ ಡ್ರೈವರ್ ಗಳಿಗೆ ಮಾರಾಟ ಮಾಡಿ ದಿನದ ಸಂಪಾದನೆ ಮಾಡುತ್ತಿದ್ದರು.
ವಿಜಯನಗರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲ್ಲೂಕು ಕೇಂದ್ರ ಇಲ್ಲಿನ ಸುಮಾರು 3500 ಎಮ್ಮೆಗಳಿಂದ ಅಂದಾಜು 500 ಕುಟುಂಬಗಳು ಈ ಮೊಸರು ಉತ್ಪಾದನೆಯಲ್ಲಿ ತೊಡಗಿದೆ ಇವರಿಗಾಗಿಯೇ ಮಣ್ಣಿನ ಕುಡಿಕೆ ತಯಾರಿಸಿ ಕೊಡುವ ನೂರಾರು ಕುಂಬಾರ ಕುಟುಂಬಗಳು ಇದೆ.
ಕೃಷ್ಣಾ ನದಿ ತಟದ ಮೇವು ತಿನ್ನುವ ಎಮ್ಮೆಗಳು ನೀಡುವ ಹೆಚ್ಚು ಕೊಬ್ಬಿನ ಅಂಶದ ಹಾಲಿಗೆ ನೀರು ಸೇರಿಸದೆ ಗಟ್ಟಿ ಹಾಲು ಕಟ್ಟಿಗೆ ಒಲೆಯಲ್ಲಿ ಕುದಿಸಿ ಅದನ್ನು ಕೊಂಚ ಬೆಚ್ಚಗೆ ಇರುವಾಗಲೇ ಮೊಸರಿನ ಹೆಪ್ಪಿನ ಹನಿ ಸೇರಿಸಿ ಮಣ್ಣಿನ ಕುಡಿಕೆಗಳಲ್ಲಿ ಹಾಕಿಟ್ಟರೆ ಎರೆಡು ಗಂಟೆಗಳಲ್ಲಿ ಅದು ಗಟ್ಟಿ ಮೊಸರಾಗುತ್ತದೆ.
ಕೆಲವರು ಈ ಮಣ್ಣಿನ ಕುಡಿಕೆಯಲ್ಲಿ ಹೆಪ್ಪು ಹಾಕಿದ ನಂತರ ಪ್ರತಿ ಮಡಿಕೆಯನ್ನು ಕಟ್ಟಿಗೆ ಒಲೆಯಲ್ಲಿ ಸಣ್ಣ ಬೆಂಕಿಯಲ್ಲಿ ಕೆನೆ ಆಗುವ ತನಕ ಇಟ್ಟು ತೆಗೆಯುತ್ತಾರೆ ಇದರಿಂದ ಗಟ್ಟಿ ಕೆನೆ ಮೊಸರು ಆಗುತ್ತದೆ.
ಕೊಲ್ಹಾರದ ಗಟ್ಟಿ ಕೆನೆ ಮೊಸರಿನ ರುಚಿ ಮತ್ತು ಘಮ ವಿಶಿಷ್ಟವಾಗಿರಲು ಕಾರಣ ಇಲ್ಲಿನ ಹವಾಮಾನ, ಕೃಷ್ಣಾ ನದಿ ತೀರದ ಮೇವು, ಮೊಸರಿನ ನೀರಿನಂಶ ಹೀರಿ ಗಟ್ಟಿ ಮೊಸರು ಮಾಡುವ ಮಣ್ಣಿನ ಮಡಿಕೆಗಳು ಕಾರಣವಾಗಿದೆ.
ಈಗ ಪ್ರದೇಶದಲ್ಲಿ ಜಾನುವಾರ ಮೇವುಗಳ ಕೊರತೆ ಹೆಚ್ಚಾಗಿದೆ ಈ ಕಾರಣದಿಂದ ಕ್ರಮೇಣ ಈ ಪ್ರಸಿದ್ಧ ಕೊಲ್ಹಾರದ ಮೊಸರ ಉತ್ಪಾದನೆ ಕಡಿಮೆ ಆಗುತ್ತಿದೆಯಂತೆ.
ಕೆ.ಎಂ.ಎಫ್ ಕೊಲ್ಹಾರ ಮೊಸರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದೆ ಆದರೂ ಈ ಊರಿಗೆ ಬಂದು ಮಣ್ಣಿನ ಮಡಿಕೆಯಲ್ಲಿ ಮಾರಾಟ ಆಗುವ ಗಟ್ಟಿ ಕೆನೆ ಮೊಸರು ಸವಿಯುವ ಮೋಜೇ ಬೇರೆ.
ಯಾವಾಗಾದರೂ ಈ ಮಾರ್ಗದಲ್ಲಿ ಹುಮನಾಬಾದ್- ಹುಬ್ಬಳ್ಳಿ ರಾ.ಹೆ. 218ರಲ್ಲಿ ಪ್ರಯಾಣಿಸಿದಾಗ ವಿಜಯಪುರ ಜಿಲ್ಲಾ ಕೇಂದ್ರದಿಂದ 40 ಕಿ.ಮಿ.ದೂರದಲ್ಲಿರುವ ಕೊಲ್ಹಾರದಲ್ಲಿನ UKP ವೃತ್ತದಲ್ಲಿ ರೈತರು ಮಾರಾಟ ಮಾಡುವ ಗಟ್ಟಿ ಕೆನೆ ಮೊಸರ ಮಣ್ಣಿನ ಕುಡಿಕೆ ಖರೀದಿಸಿ ರುಚಿ ನೋಡದೆ ಇರಬೇಡಿ.
ಕಳೆದ ಮಂಗಳವಾರ ವಿಜಯಪುರ ಜಿಲ್ಲೆ ಅಪ್ಜಲ್ಪುರಕ್ಕೆ ಹೋಗಿ ಬರುವಾಗ ಎರೆಡು ಕೊಲ್ಹಾರ ಗಟ್ಟಿ ಕೆನೆ ಮೊಸರು ಸವಿಯುವ ಭಾಗ್ಯ ನನ್ನದಾಗಿತ್ತು.
Comments
Post a Comment