#ಕುದುರೆ_ಸಾಕುವವರಿಲ್ಲ
#ಜಟಕಾಗಾಡಿ_ಟಾಂಗಾ_ಸಾರೋಟು_ಕಾಲ_ಮುಗಿಯಿತು.
#ಅಶ್ವದಳ_ಈಗ_ಪ್ರದರ್ಶನಕ್ಕೆ_ಮಾತ್ರ
#ಕುದುರೆ_ಹೊಟ್ಟೆಗೆ_ಹಾಕಲಾಗದವರು_ಹಳ್ಳಿಗಳಿಗೆ_ಕುದುರೆ_ತಂದು_ಬಿಡುತ್ತಿದ್ದಾರೆ
#ಬಿಡಾಡಿ_ಕುದುರೆ_ಸಾಕುವವರೂ_ಹಳ್ಳಿಗಳಲ್ಲಿ_ಇದ್ದಾರೆ.
#ಕುದುರೆಗಳು_ಆ_ಕಾಲದಲ್ಲಿ_ಬೆಂಜ್_ಕಾರಿದ್ದಂತೆ.
#ಕ್ರಿಸ್ತಪೂರ್ವ_ನಾಲ್ಕು_ಸಾವಿರ_ವಷ೯ದಿಂದ_ಕುದುರೆ_ಬಳಕೆಯಲ್ಲಿತ್ತು.
ಆನಂದಪುರಂ ಇತಿಹಾಸದಲ್ಲಿ ಬರುವ ಆನಂದಪುರಂನ ಸುಂಕದ ಮನೆತನದ ಚಿರುಡ ಶೆಟ್ಟರು 1916 ರಿಂದ 1932ರವರೆಗೆ ವಕೀಲರಾಗಿದ್ದರು ಅವರೇ ನಮ್ಮ ಊರಿನ ಪ್ರಥಮ ವಕೀಲರು, ಆಗ ಆನಂದಪುರಂನ ಬ್ರಿಟೀಶ್ ಬಂಗ್ಲೆ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿತ್ತು ಆಗ ಚಿರುಡ ಶೆಟ್ಟರು ಬಳಸುತ್ತಿದ್ದ ಕುದುರೆ ಉತ್ಕೃಷ್ಟ ತಳಿಯದಂತೆ.
ಆ ಕಾಲದಲ್ಲಿ ಸಂಚಾರಕ್ಕೆ ಕುದುರೆ ಬಳಕೆಯಲ್ಲಿದ್ದ ಕಾಲ ಬಹುಶಃ ಈಗಿನ ಇಷಾರಾಮಿ ಕಾರಿನಂತೆ ಶ್ರೀಮಂತರು ಮತ್ತು ದೊಡ್ಡ ಅಧಿಕಾರಿಗಳಿಗೆ ಮಾತ್ರ ಕುದುರೆ ಖರೀದಿಸುವ ಶಕ್ತಿ ಇದ್ದ ಕಾಲ.
1950ರ ತನಕ ಕುದುರೆ ಸವಾರಿಗೆ ಬಳಸುತ್ತಿದ್ದರಂತೆ ನಂತರ ಸೈಕಲ್ -ಬೈಕ್ -ಕಾರು - ರಿಕ್ಷಾಗಳಿಂದ ಕುದುರೆ ಬಳಕೆ ನಿ೦ತು ಹೋಯಿತು.
ರಾಜರ ಕಾಲದಲ್ಲಿ ಸೈನ್ಯದಲ್ಲಿ ಅಶ್ವದಳ ಒಂದು ಪ್ರಮುಖ ಸೇನಾ ಶಕ್ತಿಯ ಪಡೆಯಾಗಿತ್ತು ಆದರೆ ಈಗಿನ ರಕ್ಷಣಾ ವ್ಯವಸ್ಥೆಯಲ್ಲಿ ಬದಲಾದ ಯುದ್ಧದ ಮಾದರಿಯಲ್ಲಿ ಅಶ್ವಪಡೆ ಸಾಂಕೇತಿಕ ಪ್ರದರ್ಶನಕ್ಕೆ ಸೀಮಿತವಾಗಿದೆ.
ಅಲೆಮಾರಿ ಬುಡಕಟ್ಟು ಜನಾಂಗದವರು ಮುಂಗಾರು ಪ್ರಾರಂಭವಾದಾಗ ನಮ್ಮ ಆನಂದಪುರ೦ಗೆ ಬಂದು ಸೇರುತ್ತಿದ್ದರು ಇದು ಕೆಳದಿ ರಾಜರ ಕಾಲದಿಂದ ನಡೆದು ಬಂದ ಪದ್ದತಿ, ಒಂದು ವರ್ಷ ಕಾಲ ವಿವಿಧ ರಾಜ್ಯಗಳಲ್ಲಿ ಸಂಚರಿಸುವ ಈ ಅಲೆಮಾರಿಗಳಾದ ಜೋತಿಷ ಹೇಳುವ ಸುಡುಗಾಡು ಸಿದ್ದರು (ಕುರುಕುರು ಮಾಮಾ) ಹಾವಾಡಿಗರು, ದೊಂಬರಾಟದವರು, ಬುಟ್ಟಿ ಹೆಣೆಯುವವರು, ಯಕ್ಷಿಣಿ ವಿದ್ಯೆಯರು ಮುಂತಾದವರು ಇಲ್ಲಿ ವರ್ಷಕ್ಕೊಮ್ಮೆ ಸೇರಿ ಮಳೆಗಾಲ ಕಳೆಯುವ ತನಕ ರಾಜರಿಂದ ಸಹಾಯ ಸವಲತ್ತು ಪಡೆದು ಪಕ್ಕದ ರಾಜ್ಯಗಳ ಮಾಹಿತಿ ನೀಡುತ್ತಿದ್ದರು.
ಈ ಪದ್ದತಿ ಇತ್ತೀಚಿಗೆ 2000 ಇಸವಿ ತನಕ ಹಂತ ಹಂತವಾಗಿ ನಶಿಸುತ್ತಾ ಬಂದು ಈಗ ಸಂಪೂರ್ಣ ನಿಂತಿದೆ, ಅವರೆಲ್ಲ ಅಲೆಮಾರಿ ಜೀವನ ತೊರೆದು ಅಲ್ಲಲ್ಲಿ ನೆಲೆ ನಿಂತಿದ್ದಾರೆ.
1970 ರ ದಶಕದಲ್ಲಿ ನಾವೆಲ್ಲ ಬಾಲ್ಯದಲ್ಲಿ ಇಂತಹ ಸಂದರ್ಭಕ್ಕೆ ಕಾಯುತ್ತಿದ್ದೆವು, ವರ್ಷಕೊಮ್ಮೆ ಬರುವ ಈ ಕುಟುಂಬದ ಕುದುರೆಗಳಿಗೆ ಬಿಳಿಯ ಸರ್ವಿಸ್ ಮೈನ್ ತಂತಿಯ (ವೈರ್ ) ಸುತ್ತ ಹುಲ್ಲು ಸೇರಿಸಿ ಕುದುರೆ ಬಾಯಿಗೆ ಹಿಡಿಯುತ್ತಿದ್ದೆವು ಆಗ ಕುದುರೆ ಹುಲ್ಲನ್ನು ತನ್ನ ಬಾಯಿಯಲ್ಲಿ ಕಚ್ಚಿ ತಿನ್ನಲು ಪ್ರಯತ್ನಿಸಿದಾಗ ವೈರ್ ನ್ನು ಕುದುರೆಯ ಬಾಯಿ ಮೂಲಕ ಎರೆಡೂ ಕಿವಿ ಬಳಸಿ ಕುತ್ತಿಗೆ ಹಿಂಬಾಗದಲ್ಲಿ ಸೇರಿಸಿ ಹಿಡಿದರೆ ಅದು ಕುದುರೆ ಲಗಾಮಾಗಿ ನಾವು ಹೇಳಿದಂತೆ ಕೇಳುತ್ತದೆ.
ನಂತರ ದಿನಾ ಪೂರ್ತಿ ನಮ್ಮದು ಕುದುರೆ ಸವಾರಿ...
ಕುದುರೆ ಹುಡುಕಿಕೊಂಡು ಅದರ ಮಾಲಿಕ ಬಂದರೆ ನಾವು ಲಗಾಮು ಸಮೇತ ಪರಾರಿ...
ಈ ರೀತಿ ಕುದುರೆ ಪಳಗಿಸಿ ಸವಾರಿ ಮಾಡುವ ಚಾಕಚಕ್ಯತೆ ನನಗೆ ಬಾಲ್ಯದಲ್ಲಿ ಉಳಿದವರಿಗಿಂತ ಜಾಸ್ತಿ ಇತ್ತು.
ಆಗೆಲ್ಲ ನನಗೆ ದೊಡ್ಡವನಾದ ಮೇಲೆ ಕುದುರೆ ಸಾಕುವ ಕನಸಿತ್ತು ಆದರೆ ಈಗ ಅದರಲ್ಲಿ ಆಸಕ್ತಿ ಇಲ್ಲ.
ಇತ್ತೀಚೆಗೆ ಪೇಟೆ ಪ್ರದೇಶದಲ್ಲಿ ಟಾಂಗಾವಾಲಗಳಾಗಿದ್ದ ಕುಟುಂಬಗಳು ಈ ಉದ್ಯೋಗ ಮುಂದುವರಿಸಲಾಗದಿದ್ದರಿಂದ ನೂರಾರು ವರ್ಷದ ಅವರ ತಲೆಮಾರಿನ ಟಾಂಗ ವೃತ್ತಿ ಅನಿವಾರ್ಯವಾಗಿ ಮುಂದುವರಿಸಲಾಗದೆ ಕುದುರೆ ಹೊಟ್ಟೆ ಹೊರೆಯಲು ಸಾಧ್ಯವಾಗದೆ ಅವರ ಕುದುರೆಗಳನ್ನು ಹಳ್ಳಿಗಳಿಗೆ ತಂದು ಬಿಡುತ್ತಿದ್ದಾರೆ, ಕುದುರೆ ಸಾಕುವ ಆಸಕ್ತಿ ಇದ್ದವರು ಕುದುರೆ ಸಾಕುತ್ತಿದ್ದಾರೆ ಹೇಗೋ ಕುದುರೆಗಳು ಹೊಟ್ಟೆ ತುಂಬಿಸಿ ಕೊಳ್ಳುತ್ತಿರುವುದು ಸಮಾದಾನದ ವಿಷಯವಾಗಿದೆ.
Comments
Post a Comment