#ಆನಂದಪುರಂ_ಇತಿಹಾಸ_ಭಾಗ_1.
#ಕನ್ನಡ_ರಾಜ್ಯೋತ್ಸವದಂದು_ಬಿಡುಗಡೆ_ಆಗಲಿದೆ.
#ಅವತ್ತು_ಕರ್ನಾಟಕ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ.
#ಕರ್ನಾಟಕ_ನಾಮಕರಣ_ಮಾಡಲು_ಮುಖ್ಯಮಂತ್ರಿ_ದೇವರಾಜ_ಅರಸರ_ಜೊತೆ
#ವಿದ್ಯಾಮಂತ್ರಿ_ಬದರಿನಾರಾಯಣ_ಆಯ್ಯಂಗಾರ್_ಮುಖ್ಯ_ಕಾರಣ.
#ಆನಂದಪುರಂ_ಇತಿಹಾಸ_ಭಾಗ_ಒಂದು_ಬದರಿನಾರಾಯಣ_ಅಯ್ಯಂಗಾರರಿಗೆ_ಅರ್ಪಿಸಲಾಗಿದೆ.
#ಈ_ಪುಸ್ತಕ_ಪ್ರಕಟಿಸಲು_ಇಬ್ಬರು_ಮುಖ್ಯಕಾರಣ
#ಚಲನ_ಚಿತ್ರ_ನಟ_ದೊಡ್ಡಣ್ಣ_ಮತ್ತು_News18_ದಕ್ಷಿಣ_ಭಾರತದ_ಮುಖ್ಯಸ್ಥ_ಡಿ_ಪಿ_ಸತೀಶ್
#ಇವರಿಬ್ಬರ_ಮುನ್ನುಡಿ_ಆನಂದಪುರ೦_ಇತಿಹಾಸ_ಪುಸ್ತಕದ_ಭಾಗ_1_ರಲ್ಲಿ_ಇರಲಿದೆ.
ನಾನು ಈ ಪುಸ್ತಕ ಪ್ರಕಟಿಸುವ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ನನ್ನ ನಿತ್ಯ ಸಾಮಾಜಿಕ ಜಾಲ ತಾಣದ ಬರಹ ಓದುವ ಡಿ.ಪಿ. ಸತೀಶ್ Network 18/News 18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರು ಅವರು ಎರೆಡು ವರ್ಷದ ಹಿಂದೆ ನನಗೆ ಆನಂದಪುರಂ ಇತಿಹಾಸದ ಪುಸ್ತಕ ಮುದ್ರಿಸಿ ಎಂದು ಪ್ರೋತ್ಸಾಹಿಸಿದವರು ಆಗ ಅವರಿಗೆ ಹೇಳಿದ್ದೆ ಪುಸ್ತಕ ಮುದ್ರಣ ಅಗುವ ಸಮಯ ಬಂದರೆ ನೀವು ಮುನ್ನುಡಿ ಬರೆಯಬೇಕು ಎಂದಿದ್ದೆ ಆ ಸಮಯ ಬಂತು ಮಾತಿಗೆ ತಪ್ಪದೆ ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ.
ಇದೇ ರೀತಿ ನನ್ನ ಎಲ್ಲಾ ಲೇಖನ ಓದಿ ಪ್ರೋತ್ಸಾಹಿಸುತ್ತಾ ನನ್ನ ಲೇಖನಗಳನ್ನು ಅವರ ಗೆಳೆಯರ ಗ್ರೂಪಿಗೆ ಶೇರ್ ಮಾಡುವವರು ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ ಅವರಿಗೆ ಓದುವ ಬರೆಯುವ ಹವ್ಯಾಸ ಜಾಸ್ತಿ ಆಗಾಗ್ಗೆ ಕರೆ ಮಾಡಿ ಸಲಹೆ ಕೂಡ ನೀಡುತ್ತಾರೆ ಅವರೂ ಈ ಪುಸ್ತಕಕ್ಕೆ ಹಾರೈಕೆಯ ನುಡಿ ದಾಖಲಿಸಲಿದ್ದಾರೆ.
ಆನಂದಪುರ೦ ಇತಿಹಾಸ ನಾನು ದಾಖಲಿಸಿರುವುದು ಸಾವಿರ ಪುಟ ದಾಟಿದೆ, 300 ಪುಟದ ಮೂರು ಪುಸ್ತಕಗಳಾಗಲಿದೆ (ಮೂರು ಭಾಗಗಳಲ್ಲಿ).
ಪ್ರತಿ ಊರಿಗೂ ಅದರದ್ದೇ ಆದ ಇತಿಹಾಸ ಇದೆ ಆಯಾ ಊರಿನವರು ಅವರ ಊರಿನ ಇತಿಹಾಸ ಬರೆದು ಪ್ರಕಟಿಸಲಿ ಇದರಿಂದ ಆ ಊರಿನ ಇತಿಹಾಸ ಮುಂದಿನ ತಲಾತಲಾಂತರಕ್ಕೆ ಉಳಿಯಲಿ ಎನ್ನುವುದು ನನ್ನ ಆಸೆ.
ಆನಂದಪುರಂ ಶ್ರೇಯೋಭಿವೃದ್ಧಿಗೆ ಅಭಿವೃದ್ಧಿಗೆ ಕಾರಣರಾದ ಆನಂದಪುರಂನ ಕೊಡುಗೈ ದಾನಿಗಳಾದ ಶ್ರೀ ಎ. ರಾಮಕೃಷ್ಣ ಅಯ್ಯಂಗಾರ್ ಮತ್ತು ಅವರ ಪುತ್ರರಾದ ವೆಂಕಟಾಚಲಯ್ಯಂಗಾರ್, ಜಗನ್ನಾಥ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರ್ ಅವರಿಗೆ ಈ ಪುಸ್ತಕ ಅರ್ಪಿಸಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನ ಆನಂದಪುರಂ ಇತಿಹಾಸ ( ಭಾಗ - 1) ಬಿಡುಗಡೆ ಆಗಲಿದೆ.
ಅಮೇಜಾನ್, ಪ್ಲಿಪ್ ಕಾರ್ಟ್ ನಲ್ಲಿ ಪುಸ್ತಕ ಆಸಕ್ತರು ಖರೀದಿಸಬಹುದು ಅಥವ ಕಿಂಡಲ್ ಮೂಲಕ ಓದಬಹುದು.
#ಡಿ_ಪಿ_ಸತೀಶರು ಪ್ರೀತಿಯಿಂದ ಬರೆದ ಮುನ್ನುಡಿ ಇಲ್ಲಿದೆ ನೋಡಿ...
In a city, you never get a complete story. People come and go.
:-Girish Karnad
ಆದರೆ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ಹಾಗಲ್ಲ. ಅಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತು, ಎಲ್ಲರ ಮನೆ ಸುದ್ದಿಯೂ ಎಲ್ಲರಿಗೂ ಗೊತ್ತು. ಅವು ಪಾರದರ್ಶಕ. ತೆರೆ ಹಿಂದೊಂದು, ಮುಂದೊಂದು ನಡೆಯುವುದು ನಗರಗಳಲ್ಲಿ ಮಾತ್ರ. ಇಲ್ಲಿ ಎರಡೂ ಒಂದೇ. ಇಲ್ಲಿ ಸುಳ್ಳು ಕಡಿಮೆ, ಸತ್ಯ ಹೆಚ್ಚು.
ಆದರೆ ಮಹಾನಗರಗಳ ಬಗ್ಗೆ ಪುಸ್ತಕ ಬರೆದಂತೆ ನಮ್ಮ ಹಳ್ಳಿಗಳ ಮತ್ತು ಸಣ್ಣ ಪಟ್ಟಣಗಳ ಬಗ್ಗೆ ಯಾರು ಪುಸ್ತಕ ಬರೆಯುತ್ತಾರೆ? ನಮ್ಮಲ್ಲಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅವುಗಳ ಬಗ್ಗೆ ಬರೆಯಲು ಏನಿದೆ? ಪ್ರಕಾಶನ ಮಾಡುವವರು ಯಾರು? ಹೀಗೆ ಒಂದರಹಿಂದೆ ಒಂದು ಪ್ರಶ್ನೆಗಳ ಸಾಲು.
ನೂರಾರು, ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ಈ ಭೂಮಿ ಮೇಲಿರುವ ಇಂತಹ ಸಾವಿರಾರು ಊರುಗಳ ಇತಿಹಾಸ ಎಲ್ಲೂ ದಾಖಲಾಗಿಲ್ಲ. ಅದನ್ನು ಮಾಡಲೂ ಯಾರೂ ಹುಮ್ಮಸ್ಸು ತೋರಿಸಿಲ್ಲ. ಇವುಗಳ ಬಗ್ಗೆ ಬರೆದರೆ ಯಾರು ಓದುತ್ತಾರೆ, ಇತಿಹಾಸ ದಾಖಲಿಸಲು ಇವೇನು ಮಹಾನಗರಗಳೇ ಎನ್ನುವ ಭಾವನೆ ಕೂಡ ಇದಕ್ಕೆ ಕಾರಣ.
ನಮ್ಮಲ್ಲಿ ಇತಿಹಾಸ ಪ್ರಜ್ಞೆ ಇಲ್ಲ ಎನ್ನುವುದು ಒಂದು ವಾದ. ನಮ್ಮ ಇತಿಹಾಸವನ್ನು ಪುಸ್ತಕಗಳ, ವಸ್ತು ಸಂಗ್ರಹಾಲಯಗಳ ಮೂಲಕ ದಾಖಲಿಸಲು ಆರಂಭವಾಗಿದ್ದೇ ಪಾಶ್ಚ್ಯಾತ್ಯರು ನಮ್ಮನ್ನು ವಸಾಹತು ಮಾಡಿಕೊಂಡ ನಂತರ. ನಮ್ಮ ಆಧುನಿಕ ಇತಿಹಾಸ ಬ್ರಿಟೀಷರ ಬಳುವಳಿ. ಆದರೆ ನಮ್ಮಲ್ಲಿ ನಮ್ಮ ಇತಿಹಾಸ, ಸ್ಮ್ರಿತಿ ಅಂದರೆ ನೆನಪಿನ ಮೂಲಕ ನೂರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಹರಿದು, ಉಳಿದುಕೊಂಡು ಬಂದಿದೆ.
ನಮ್ಮಲ್ಲಿ ಇವತ್ತಿಗೂ ಶೇಕಡಾ 90% ರಷ್ಟು ಜನರಿಗೆ ಅವರ ಅಜ್ಜ, ಅಜ್ಜಿ ನಂತರ ಅವರ ಹಿಂದಿನವರ ಹೆಸರು ಗೊತ್ತಿಲ್ಲ. ಅವರೇನು ಮಾಡುತ್ತಿದ್ದರು ಎನ್ನುವುದು ಇನ್ನು ಹೇಗೆ ಗೊತ್ತಿರಲು ಸಾಧ್ಯ? ಇದು ನಮ್ಮ ಕುಟುಂಬದ ಇತಿಹಾಸದ ಬಗ್ಗೆಯೇ ಇರುವ ನಮ್ಮ ಅಸಹಾಯಕತೆ.
ನಮ್ಮ ಕೆ ವಿ ಸುಬ್ಬಣ್ಣನವರು ಇದರ ಬಗ್ಗೆ ಮಾತನಾಡುತ್ತ ಮೋಹನ್ ದಾಸ್ ಗಾಂಧಿ ಅವರನ್ನು ಉಲ್ಲೇಖಿಸಿ "ಇತಿಹಾಸವೇ ಇಲ್ಲದ ದೇಶ, ತುಂಬಾ ಸುಂದರ ಆಗಿರುತ್ತೆ" ಎನ್ನುತ್ತಿದ್ದರು. ಅಂದರೆ ಇತಿಹಾಸವೇ ದೊಡ್ಡ ಭಾರ. ಅದಿಲ್ಲದಿದ್ದರೆ ಹಿಂದಾಗಿದ್ದರ ಬಗ್ಗೆ ಈಗ ವ್ಯರ್ಥವಾಗಿ ಹೊಡೆದಾಡುವ ಅಗತ್ಯ ಇಲ್ಲ ಎನ್ನುವುದು ಅವರ ಅನಿಸಿಕೆ. ಇತಿಹಾಸವನ್ನು ದಾಖಲಿಸಲು, ದಾಖಲಿಸುವ ಬಗ್ಗೆ ಎಷ್ಟೆಲ್ಲಾ ಚರ್ಚೆ ನಡೆದಿದೆ ನೋಡಿ.
ಇಂತಹ ಹಿನ್ನೆಲೆಯಲ್ಲಿ ತಮ್ಮೂರಿನ ಇತ್ತೀಚಿನ ಇತಿಹಾಸವನ್ನು ವರ್ಷಾನುಗಟ್ಟಲೇ ಸತತವಾಗಿ ಬರೆದು, ಅವುಗಳನ್ನು ಪುಸ್ತಕ ರೂಪದಲ್ಲಿ ತರುತ್ತಿರುವವರು ಅರುಣ್ ಪ್ರಸಾದ್.
ಆನಂದಪುರಂ ನಲ್ಲಿ ಕುಳಿತು ಇಡೀ ಪ್ರಪಂಚವನ್ನು, ಮುಖ್ಯವಾಗಿ ತಮ್ಮ ಸುತ್ತಲಿನ ಪರಿಸರವನ್ನು ಕುತೂಹಲ, ಬೆರಗು ಮತ್ತು ಚಿಕಿತ್ಸಕ ದೃಷ್ಟಿಯಿಂದ ನೋಡಿ ಅವುಗಳ ಬಗ್ಗೆ ದಿನಾಲೂ ಬರೆಯುವುದು ಸುಲಭವಲ್ಲ. ಆ ಕೆಲಸವನ್ನು ಅರುಣ್ ಪ್ರಸಾದ್ ಮಾಡುತ್ತಾ ಬಂದಿದ್ದಾರೆ.
ಅವರಿಗೆ ಯಾರೂ ಗಣ್ಯರಲ್ಲ, ಯಾರೂ ನಗಣ್ಯರಲ್ಲ. ಎಲ್ಲರೂ ಒಂದೇ. ಅವರೆಲ್ಲ ನಿಜ ಜೀವನದ ಪಾತ್ರಗಳು. ತಾವು ನೋಡಿದ, ಅನುಭವಿಸಿದ, ತಮ್ಮ ಬದುಕನ್ನು ತಟ್ಟಿದ ಪಾತ್ರಗಳು.
ಇವುಗಳಿಗೆ ಮತ್ತೆ ಜೀವ ಕೊಟ್ಟು, ಅಕ್ಷರ ರೂಪದಲ್ಲಿ ಹಿಡಿದಿಡುವುದು ಅಸಾಧಾರಣ ಕೆಲಸ.
ರೈಸ್ ಮಿಲ್ ಸುಬ್ಬಣ್ಣ ನಾಯಕರು, ಸಿನಿಮಾ ಟಾಕೀಸ್ ಗೇಟ್ ಕೀಪರ್, ನ್ಯೂಸ್ಪಪೆರ್ ಹಂಚುವವ, ಸೈಕಲ್ ರಿಪೇರಿ ಮಾಡುವವ, ಕಾಮತ್ ಹೋಟೆಲ್ ಕುಟುಂಬದಿಂದ ಹಿಡಿದು ಬದರೀನಾರಾಯಣ ಅಯ್ಯಂಗಾರ್ ತನಕ ಎಲ್ಲರ ಬಗ್ಗೆಯೂ ಅದೇ ಆಪ್ತತೆಯಿಂದ ಅವರು ಬರೆಯುತ್ತಾರೆ. ಆನಂದಪುರದಲ್ಲಿ ಹುಟ್ಟಿದ ಅಲ್ಲಿನ ಪಟ್ಟಣದ ದೇವರ ಹೆಸರನ್ನೇ ಹೊತ್ತಿರುವ ಪ್ರಪಂಚದ ಶ್ರೇಷ್ಠ ಪುರಾತತ್ವ ಶಾಸ್ತ್ರಜ್ಞರಾಗಿದ್ದ ದಿವಂಗತ ಶಿಕಾರಿಪುರ ರಂಗನಾಥ ರಾವ್ ಅವರ ಬಗ್ಗೆಯೂ ಅರುಣ್ ಪ್ರಸಾದ್ ಹೆಮ್ಮೆಯಿಂದ ಬರೆಯುತ್ತಾರೆ.
ಯಾರೂ ಗಮನಿಸದ, ಯಾರಿಗೂ ಮುಖ್ಯ ಎಂದು ಅನಿಸದ ನೂರಾರು ವ್ಯಕ್ತಿಗಳು, ಘಟನೆಗಳು ಇಲ್ಲಿ ಎದ್ದು ಬರುತ್ತವೆ. ಓದುಗರು ಸೋಜಿಗ ಆಗುವಂತೆ ಮಾಡುತ್ತವೆ.
ಅರುಣ್ ಪ್ರಸಾದ್ ಯಾರ ಬಗ್ಗೆಯೂ ತಮ್ಮ ತೀರ್ಪು ಹೇಳಲ್ಲ. ಅವರ ವ್ಯಕ್ತಿತ್ವ ಬಣ್ಣಿಸುವುದಷ್ಟೇ ಅವರ ಕೆಲಸ. ಇದೊಂತರ ಅರುಣ್ ಪ್ರಸಾದ್ ಅವರ ಅರೆ ಬರೆ ಆತ್ಮಕತೆಯೂ ಹೌದು!
ಆನಂದಪುರದ ಬಗ್ಗೆ ಬರೆದ ಈ ಪುಸ್ತಕ ಅಪರೂಪದ್ದು. ಈ ರೀತಿ ಸಣ್ಣ ಪಟ್ಟಣಗಳ ಬಗ್ಗೆ ಬರೆದ ಕೆಲವು ಆಪ್ತ ಅನುಭವ ನೀಡುವ ಪುಸ್ತಕಗಳನ್ನು ನಾನು ಶ್ರೀಲಂಕಾದಲ್ಲಿ ಓದಿದ್ದೇನೆ. ಹಾಪುತಳೆ, ಕಲುತಾರಾ, ನುಗೆಗೋಡ ಮುಂತಾದವುಗಳ ಬಗ್ಗೆ ಅಲ್ಲಿನವರು ಬರೆದ ಪುಸ್ತಕಗಳು ಚೆನ್ನಾಗಿವೆ.
ಅರುಣ್ ಪ್ರಸಾದ್ ಮಾಡದ ಉದ್ಯೋಗ ಇಲ್ಲ. ಅವರು ಇಲ್ಲೀತನಕ ಸುಮಾರು 40 ಕ್ಕೂ ಹೆಚ್ಚು ಉದ್ಯೋಗ, ಉದ್ದಿಮೆ ಮಾಡಿದ್ದಾರೆ. ಇನ್ನೂ ಇಪ್ಪತ್ತು ಮಾಡುವ ವಯಸ್ಸು ಮತ್ತು ಹುಮ್ಮಸ್ಸು ಅವರಿಗಿದೆ. ಕಿರಿಯ ವಯಸ್ಸಿನಲ್ಲೇ ರಾಜಕಾರಣಿಯಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ನಮ್ಮ ಶಿವಮೊಗ್ಗ ಜಿಲ್ಲಾ ಪರಿಷತ್ ಅಧ್ಯಕ್ಷರಾಗುವ ಅವಕಾಶವನ್ನು ಕೆಲವರ ದ್ರೋಹದಿಂದ ಕಳೆದುಕೊಂಡವರು. ಕಾಗೋಡು ತಿಮ್ಮಪ್ಪ ಅವರನ್ನು ಎದುರುಹಾಕಿಕೊಂಡು ತುಂಬಾ ತೊಂದರೆ ಅನುಭವಿಸಿದವರು. ಈಗ ರಾಜಕೀಯದಿಂದ ತುಂಬಾ ದೂರ.
ಬೇರೆಯವರ ಉತ್ತಮ ಕೆಲಸ, ಸಾಧನೆ ನೋಡಿ ಸಂಭ್ರಮಿಸುವ, ಅದನ್ನು ಬೇರೆಯವರಿಗೆ ಹೇಳಿ ಬೆನ್ನು ತಟ್ಟುವ ದೊಡ್ಡ ಗುಣ ಅವರದ್ದು.
ಮೈಸೂರು - ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ನಾನು ಕುವೆಂಪು ಹೆಸರಿಡಿಸಿದಾಗ ನನ್ನನ್ನು ನನ್ನ ಸಂಕೋಚದ ನಡುವೆಯೂ ಒತ್ತಾಯದಿಂದ ಸನ್ಮಾನಿಸಿದವರು.
ಅರುಣ್ ಪ್ರಸಾದ್ ಅವರ ಕಚೇರಿಗೂ ಮತ್ತು ಅವರ ಪ್ರಸಿದ್ಧ ಮಲ್ಲಿಕಾ ವೆಜ್ ಹೋಟೆಲ್ ಗೂ ಇರುವ ಅಂತರ ಕೆಲವು ಅಡಿಗಳು ಮಾತ್ರ. ಆದರೆ ಅವರು ಹೋಟೆಲ್ ಒಳಹೊಕ್ಕು ವರ್ಷಗಳೇ ಆಗಿವೆ. ಕುಳಿತಲ್ಲೇ ಇದ್ದು ತಮ್ಮ ಸುತ್ತಲಿನ ಪ್ರಪಂಚವನ್ನು ಗ್ರಹಿಸುವ, ಅದನ್ನು ವರ್ಣಿಸುವ ಸಾಮರ್ಥ್ಯ ಅವರಿಗೆ ಸಿದ್ದಿಸಿದೆ. ಅವರನ್ನು ಹುಡುಕಿಕೊಂಡು ದಿನಾಲು ಹತ್ತಾರು ಜನ ಬರುತ್ತಾರೆ. ಅದು ಅವರು ಪಡೆದಿದ್ದು.
ಆನಂದಪುರಂ ಇತಿಹಾಸ.
ಇದು ಸಾಮಾನ್ಯರ ಅಸಾಮಾನ್ಯ ಕತೆ.
#ಡಿ_ಪಿ_ಸತೀಶ್
ಚೌತಿ ಹಬ್ಬದ ದಿನ
ಬೆಂಗಳೂರು
(ಲೇಖಕರು ಹಿರಿಯ ಪತ್ರಕರ್ತರು. #Network18/NEWS18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತ ಮುಖ್ಯಸ್ಥರು)
Comments
Post a Comment