Blog number 1686. ದಂಡಿಗೆಸರದ ನಂದ್ಯಣ್ಣ ನಮ್ಮ ಕುಟುಂಬದ ಆಪ್ತರು ಅವರು ನಮ್ಮ ತಂದೆಯ ಅತ್ಯಾಪ್ತರು ಇನ್ನು ಅವರು ನೆನಪು ಮಾತ್ರ.
#ಹುಟ್ಟು_ಅನಿಶ್ಚಿತ_ಸಾವು_ನಿಶ್ಚಿತ
#ನಮ್ಮ_ಕುಟುಂಬದ_ಆಪ್ತರಾದ_ದಂಡಿಗೆಸರದ_ನಂದ್ಯಣ್ಣ_ಇನ್ನಿಲ್ಲ
#ಶ್ರಮಜೀವಿ_ಅಸಾಧ್ಯ_ಕೋಪ_ಆದರೆ_ಹೃದಯವಂತರು.
#ನಮ್ಮ_ತಂದೆಗೆ_ಅತ್ಯಾಪ್ತರು_ನಮ್ಮ_ಮನೆಯ_ಎಲ್ಲಾ_ಕಷ್ಟ_ಸುಖದಲ್ಲಿ_ಭಾಗಿಯಾದವರು.
ಮೊನ್ನೆ ಬುಧವಾರ ನಂದ್ಯಣ್ಣರನ್ನು ನೋಡಲು ಅವರ ಊರಾದ ಸೊರಗುಂದದ ದಂಡಿಗೆಸರಕ್ಕೆ ಹೋಗಿದ್ದೆ ಅವರಿಗೆ ಪ್ರಜ್ಞೆ ಇರಲಿಲ್ಲ ಅದರ ಹಿಂದಿನ ರಾತ್ರಿ ದೀರ್ಘ ರಾತ್ರಿವರೆಗೆ ಅವರೆಲ್ಲ ಇಲ್ಲಿಗೆ ( ಘಟ್ಟಕ್ಕೆ ) ತಂದೆ ಕಾಲದಲ್ಲಿ ಬಂದದ್ದು, ಹರತಾಳಿನಲ್ಲಿ ಮೊದಲು ನೆಲೆಸಿದ್ದು ಇತ್ಯಾದಿ ಎಲ್ಲಾ ನೆನಪು ಮಾಡಿದರಂತೆ ಜೊತೆಗೆ ನಮ್ಮ ಮನೆ ವಿಚಾರ ಕೂಡ ಪ್ರಸ್ತಾಪಿಸಿದರೆಂದು ಅವರ ಪತ್ನಿ ಗಿರಿಜಕ್ಕ ಹೇಳುವಾಗ ನನಗೆ ಹಿಂದಿನ ನೆನಪುಗಳ ಚಕ್ರ ತಿರುಗಲು ಪ್ರಾರಂಭ ಆಯಿತು.
1970 ರಲ್ಲಿ ನನಗೆ 5 ವರ್ಷ ನಮ್ಮ ತಂದೆಗೆ 34 ವರ್ಷ ನಂದ್ಯಣ್ಣರಿಗೆ 24 ವರ್ಷ ಇರಬೇಕು ಅವರು ನಮ್ಮ ತಂದೆಗೆ ಅತ್ಯಾಪ್ತ ಗೆಳೆಯರು ಆಗಲೇ ನಂದ್ಯಣ್ಣ ಯಾರಿಗೂ ಹೇಳದೆ ಒಬ್ಬರೇ ಮನೆ ಬಿಟ್ಟು ಬೊಂಬಾಯಿಗೆ ಹೋದರೆಂಬ ಸುದ್ದಿ ನಮಗೆಲ್ಲ ಕಣ್ಣೀರು ತರಿಸಿತ್ತು.
ನಂದ್ಯಣ್ಣರ ತಂದೆ ಪುಟ್ಟ ಶೇರೆಗಾರರು ಮತ್ತು ಹಾದಿಬೀಸಿನ ಮೊಯಿದೀನ್ ಸಾಹೇಬರು ನಮ್ಮ ಆನಂದಪುರಂಗೆ ಯಕ್ಷಗಾನ ಬಂದಾಗ ಖಾಯಂ ಪ್ರೇಕ್ಷಕರು, ಯಕ್ಷಗಾನ ನೋಡಿ ಬೆಳಿಗ್ಗೆ ಯಡೇಹಳ್ಳಿ ವೃತ್ತದ ನಮ್ಮ ಹುಲ್ಲಿನ ಮನೆಯ ಕಟ್ಟೆ ಮೇಲೆ ಕುಳಿತು ನಮ್ಮ ತಾಯಿ ನಮ್ಮ ಅಜ್ಜಿಯ ಆದೇಶದ ಮೇಲೆ ಮಾಡಿಕೊಡುತ್ತಿದ್ದ ಚಹಾ ಕುಡಿಯುತ್ತಾ "ಮಧ್ಯ ರಾತ್ರಿ ತನಕ ಆಟದ ಪ್ರಸಂಗ ಸರಿ ಇತ್ತು ನಂತರ ಅಜ್ಜಿ ಕಥೆ ಮಾಡಿದರು" ಅಂತೆಲ್ಲ ನಮಗೆ ಆಗ ಅರ್ಥವಾಗದ ಸಂಭಾಷಣೆ ಕೇಳುತ್ತಿದ್ದೆವು.
ಹರತಾಳು ಭಾಗದ ದೊಡ್ಡ ದೊಡ್ಡ ಜಮೀನ್ದಾರರ ಅಡಿಕೆ ತೋಟ ಹಾಕಲು ಪುಟ್ಟ ಶೇರೆಗಾರರೇ ಬೇಕಾದ ಕಾಲವಾಗಿತ್ತು ಈ ಉದ್ಯೋಗ ಪುಟ್ಟ ಶೇರೆಗಾರರಿಗೆ ಗೌರವ ಹಣ ಗಳಿಸಿ ಕೊಟ್ಟಿತು ಪುಟ್ಟ ಶೇರೆಗಾರರು ದೊಡ್ಡ ಜಮೀನು ಆಸ್ತಿವಂತರಾಗಲು ಕಾರಣವಾಯಿತು.
ಪುಟ್ಟ ಶೇರೆಗಾರರಿಗೂ ಮೂತ್ರ ಕೋಶದ ಕಾಯಿಲೆ ಆಗಿ ಬದುಕುವುದಿಲ್ಲ ಎಂದಾಗ ನಮ್ಮ ತಂದೆ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಅವರ ಜೊತೆ ಇದ್ದು ಗುಣ ಮಾಡಿಸಿ ಕರೆತಂದಿದ್ದರು.
ನಮ್ಮ ತಂದೆ ಮೂಲ ಹುಲ್ಲಿನ ಮನೆ ತೆಗೆದು ಹೆಂಚಿನ ಮಹಡಿ ಮನೆ ಕಟ್ಟುವಾಗ ನಂದ್ಯಣ್ಣರ ಸಹಾಯ ದೊಡ್ಡದು ಆಗ ಶರಾವತಿ ನದಿ ಮುಳುಗಡೆ ಆಗಿ ಸೊರಗುಂದಕ್ಕೆ ಬಂದು ನೆಲೆಸಿದ ಮುತ್ತಲಕೊಪ್ಪದ ಬಸಪ್ಪ ಗೌಡರು (ಈಗ ಅವರ ಮಗ ದೇವರಾಜ್ ಗೌಡರು ಇದ್ದಾರೆ) ದೊಡ್ಡ ಮನೆ ಕಟ್ಟಲು ನಾಟ ಕೊಯ್ಯಿಸಿದಾಗ ನಾಟದ ನಾಲ್ಕು ಹೊರ ಮೈ (ಅದನ್ನು ಪರಾಟ ಅಂತಾರೆ) ನಾಟವೇ ನಮ್ಮ ಮನೆಗೆ ಸಾಕಾಗಿತ್ತು ಅದನ್ನು ಸಾಗಿಸಿ ಕೊಟ್ಟವರು ನಂದ್ಯಣ್ಣ.
ಎಷ್ಟೋ ದಿನಗಳ ನಂತರ ಕೆಂಪು ಉಲ್ಲನ್ ಕೋಟು ಧರಿಸಿದ ನಂದ್ಯಣ್ಣ ವಾಪಾಸ್ ಮನೆಗೆ ಬಂದವರು ನಮ್ಮ ಮನೆಗೆ ಬಂದಾಗ ನಮಗೆಲ್ಲ ಎಂತಾ ಖುಷಿ ಅಂದರೆ ಹೇಳುವಂತಿಲ್ಲ ಅವರು ತಮ್ಮ ತಂದೆ ಪುಟ್ಟ ಶೇರೆಗಾರರ ವಿಪರೀತ ಶಿಸ್ತಿನಿಂದ ಜಗಳ ಮಾಡಿಕೊಂಡು ಮನೆ ಬಿಟ್ಟು ಗೋವಾಕ್ಕೆ ಹೋಗಿದ್ದರೆಂದು ನನ್ನ ತಾಯಿ ಮತ್ತು ಅವರ ಬಾಯಮ್ಮ - ಬೂಬಮ್ಮ ಗೆಳತಿಯರು ಚಿನ್ನೆ ಮಣೆ ಆಡುತ್ತಾ ಮಾತಾಡುವುದು ಕೇಳಿದ್ದೆ.
ನಮ್ಮ ಎಲ್ಲಾ ಮದುವೆಗಳಲ್ಲಿ ನಂದ್ಯಣ್ಣರೇ ಮುಂದು ಇದ್ದರು ಅಷ್ಟು ಜವಾಬ್ದಾರಿ ನಂದ್ಯಣ್ಣರದ್ದು, ನಮ್ಮ ಮನೆಯಲ್ಲಿ ಅಜ್ಜಿ, ನಮ್ಮ ತಾಯಿ ಮತ್ತು ನಮ್ಮ ತಂದೆಯವರ ಅಂತ್ಯ ಸಂಸ್ಕಾರಗಳಲ್ಲೂ ನಂದ್ಯಣ್ಣರ ಸಹಾಯ ನಾವ್ಯಾರು ಮರೆಯುವಂತಿಲ್ಲ.
ನಂದ್ಯಣ್ಣ ಕೆಲಸ ಅಂದರೆ ಎರೆಡು ಆಳು ಕೆಲಸ ಅಷ್ಟು ಬಲಶಾಲಿ ಅಷ್ಟೇ ಮೂಗಿನ ಮೇಲಿನ ಕೋಪ ಅವರಿಗೆ, ಅಡೂರಿನ ಯೋಗಣ್ಣ ಮತ್ತು ಬೂರಣ್ಣ ನಂದ್ಯಣ್ಣನ ಹೊಗಳುತ್ತಿದ್ದರು ಅವರ ಮಾತಿನಲ್ಲಿ " ನಂದ್ಯಣ್ಣ ಎಷ್ಟೇ ಸಿಟ್ಟು ಮಾಡಲಿ ಅವರಿಗೆ ಸರಿ ಆಗಿ ಕೆಲಸ ಮಾಡಿದರೆ ಏನು ತಿನ್ನುತ್ತಿಯಾ? ಏನು ಕುಡಿತೀಯಾ? ಅನ್ನುವಷ್ಟು ದಾರಾಳಿ" ಅಂತಿದ್ದರು.
ಅವರಿಗೆ ದೊಡ್ಡ ದೊಡ್ಡ ಜನರ ಗೆಳೆತನ,ಅದರಲ್ಲೂ ಮೇಲು ಜಾತಿಯವರು ನಂದ್ಯಣ್ಣರ ನಾಟಿ ಕೋಳಿ ಖಾದ್ಯ ಅದರ ಜೊತೆ ಅವರಿಷ್ಟದ ಮಧ್ಯದ ಸಮಾರಾಧನೆಗೆ ನಂದ್ಯಣ್ಣ ಎಷ್ಟಾದರೂ ಖರ್ಚು ಮಾಡುವುದರಿಂದ ನಂದ್ಯಣ್ಣ ಅವರಿಗೆಲ್ಲ ಅಚ್ಚುಮೆಚ್ಚು.
ಇಷ್ಟೆಲ್ಲ ಆದರೂ ನಂದ್ಯಣ್ಣ ಕುಟುಂಬದ ಜೊತೆ ಸಂಬಂದ ಆಗಿರಲಿಲ್ಲ ಕೆಲ ವರ್ಷದ ಹಿಂದೆ ನನ್ನ ಅಕ್ಕನ ಮಗಳಿಗೆ ಇವರ ಮಗನ ಜೊತೆ ವಿವಾಹ ಸಂಬಂದವಾಗಿ ನಂದ್ಯಣ್ಣ ನೆಂಟರೂ ಆದರು.
ಅವರಿಗೆ ಈಗ ಬೀಗರಾದ ನನ್ನ ಅಕ್ಕನ ಗಂಡ ಕಿಟ್ಟುಗೆ ನಮ್ಮ ತಂಬಾಕು ಕೃಷಿ ಕಾಲದಲ್ಲಿ (1976) ತಂಬಾಕು ಹದ ಮಾಡುವ ಬ್ಯಾರನ್ ಗೆ ಕಟ್ಟಿಗೆ ತರುವಾಗ ಹಾವು ಕಚ್ಟಿದ ಗಂಡಾಂತರ ಸಮಯದಲ್ಲಿ ನಂದ್ಯಣ್ಣ ಜೊತೆಗೆ ಇದ್ದರು.
2019 ರಲ್ಲಿ ನನ್ನ ಮಗಳ ವಿವಾಹ ವಿಚಾರದಲ್ಲಿ ನನ್ನ ಬೀಗರ ಮನೆ ಹುಬ್ಬಳ್ಳಿಗೆ ನಮ್ಮ ಜೊತೆ ಬಂದಿದ್ದರು ಅವತ್ತು ವಾಪಾಸಾಗುವಾಗ ಶಿಶುನಾಳ ಶರೀಫರ ಗದ್ದುಗೆಗೆ ಹೋಗಿ ನಮಸ್ಕರಿಸಿ ಬಂದಿದ್ದೆವು.
ನಿನ್ನೆ ರಾತ್ರಿ ನಂದ್ಯಣ್ಣ ಇಹ ಲೋಕ ತ್ಯಜಿಸಿದ ಸುದ್ದಿ ಆ ಕ್ಷಣ ಅವರ ಮನೆಯಲ್ಲಿದ್ದ ಪತ್ರಕರ್ತ ಬಿ.ಡಿ. ರವಿ ತಿಳಿಸಿದರು.
Comments
Post a Comment