#ಮೂರು_ವರ್ಷದ_ಹಿಂದಿನ_ನೆನಪು
#ಕೊರಾನಾ_ಮುಂಜಾಗೃತೆ_ವಹಿಸದೆ_ಕೊರಾನಕ್ಕೆ_ಶೆಡ್ಡು_ಹೊಡೆಯುತ್ತಿದ್ದ_ನಮ್ಮ_ಊರ_ಜನರು
#ಕೊರಾನಾ_ಕಾರಣದಿಂದ_ಮೊದಲ_ಬಾರಿಗೆ_ಬಸವನ_ಬೀದಿ_ಸೀಲ್_ಡೌನ್
#ಲಾಕ್_ಡೌನ್_ಸೀಲ್_ಡೌನ್_ಕೊರಂಟೈನ್_ಜೊತೆ_ಕೊರಾನ_ಕೂಡ_ಮರೆತುಹೋಗಿದೆ.
2020 ರ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕೊರಾನಾ ಮಾಡಿದ ಜೀವ ನಷ್ಟ ಆರ್ಥಿಕ ನಷ್ಟಗಳು ಯಾವ ಕಾರಣಕ್ಕೂ ಮರೆಯಲಾರದ ಇತಿಹಾಸದ ಕಪ್ಪು ಚುಕ್ಕೆ ಆದರೆ ಆಧುನಿಕ ಜಗತ್ತಿನ ವೇಗದಲ್ಲಿ ಕೇವಲ ಮೂರು ವರ್ಷದ ಹಿಂದಿನ ಈ ಕೊರಾನಾ ಅದಕ್ಕೆ ಸಂಬಂದ ಪಟ್ಟ ಲಾಕ್ ಡೌನ್, ಸೀಲ್ ಡೌನ್, ಕೊರಂಟೈನ್ ಎಲ್ಲಾ ಮರೆತೇ ಹೋಗಿದೆ.
ಆಗಲೂ ಕೊರಾನಾ ಸುಳ್ಳು ಅಂತ, ಮಾಸ್ಕ್ ಹಾಕದೆ ಕೇಸ್ ಹಾಕಿದರೂ ಕೇರೇ ಎನ್ನದೆ ಸ್ಥಳಿಯ ಆಡಳಿತ ಬಂದಿಸಿ ಜೈಲಿಗೆ ಕಳಿಸಿದ ರಿಪ್ಪನ್ ಪೇಟೆಯ ಹೋರಟಗಾರ ಟಿ.ಆರ್.ಕೃಷ್ಣಪ್ಪ ಈಗಲೂ ಆ ಕೇಸಿನ ವಿಚಾರಣೆಗೆ ರಿಪ್ಪನ್ ಪೇಟೆಯಿಂದ ಹೊಸನಗರ ನ್ಯಾಯಾಲಯಕ್ಕೆ 25 ಕಿ.ಮಿ ಸೈಕಲ್ ಸವಾರಿ ಮಾಡುತ್ತಾರೆ.
ನಮ್ಮ ಊರಿನ ಕೇರಳದ ಬೇಬಿ ಕೂಡ ಕೊರಾನಾಗೆ ಸವಾಲು ಹಾಕಿ ಆರಾಮಾಗಿ ಇದ್ದಾರೆ ಇದರ ನಡುವೆ ಅನೇಕರು ಕೊರಾನದಿಂದ ನಮ್ಮ ಊರಲ್ಲಿ ಜೀವ ಕಳೆದುಕೊಂಡವರಿದ್ದಾರೆ.
ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹೊರಗಿನವರಾರು ಊರ ಒಳಗೆ ಬರದಂತೆ ಪ್ರಾರಂಭದಲ್ಲಿ ಊರ ಪ್ರವೇಶದ ರಸ್ತೆಗೆ ಬೇಲಿ ಹಾಕಿದರು, ಮರ ಕಡಿದು ರಸ್ತೆ ಬಂದ್ ಮಾಡಿದರು ನಂತರ ಸರ್ಕಾರವೇ ಲಾಕ್ ಡೌನ್ ಘೋಷಿಸಿದಾಗ ಎಲ್ಲ ಚಟುವಟಿಕೆ ಸ್ಥಬ್ದವಾಗಿತ್ತು.
ಮೂರು ವರ್ಷದ ಹಿಂದೆ ಇದೇ ದಿನ ನಮ್ಮ ಆನಂದಪುರಂನಲ್ಲಿ ಬಸವನ ಬೀದಿ ಎಂಬಲ್ಲಿ ಒಂದೇ ಮನೆಯಲ್ಲಿನ ನಾಲ್ಕು ಜನರಿಗೆ ಕೊರಾನಾ ಪಾಸಿಟಿವ್ ಆಗಿ ಇಡೀ ಬೀದಿ ಸೀಲ್ ಡೌನ್ ಮಾಡಿದ್ದರು ಅವತ್ತಿನ ಘಟನೆ ಇಡೀ ಊರನ್ನು ಭಯಬೀತಗೊಳಿಸಿತ್ತು ಕೊರಾನಾ ಮಹಾ ಮಾರಿಗೆ ನಿರ್ಲಕ್ಷ್ಯ ಮಾಡಿದವರು ತಕ್ಷಣ ಬದಲಾದರು, ಮಕ್ಕಳುಗಳನ್ನು ಹುಡುಕಿ ಹಿಡಿದು ಮನೆ ಒಳಗೆ ಭದ್ರ ಮಾಡಿದರು, ಪರಸ್ಪರ ಗಂಡ ಹೆಂಡತಿ ಬುದ್ದಿ ಹೇಳಿಕೊಂಡರು.
ನಮ್ಮ ಕೆಲಸದಾಕೆ ಈ ಬೀದಿಯವಳು ಅವಳಿಗೆ ಅವರ ಮಕ್ಕಳೆಲ್ಲ ಇಡೀ ಬೀದಿ ಸೀಲ್ ಡೌನ್ ಮಾಡಿದ ಬಗ್ಗೆ ತಿಳಿಸಿ ಬೇಗ ಬಂದು ಮನೆ ಸೇರಲು ಪೋನ್ ಮಾಡಿದಾಗ ಆಕೆಯ ರೋದನೆ ಅಳು ನಮ್ಮ ಕಣ್ಣಲ್ಲೂ ನೀರು ತರಿಸಿತ್ತು.
ಎರೆಡು ಸಾವಿರ ಹಣ ನೀಡಿ ಅವಳ ಕುಟುಂಬಕ್ಕೆ ಬೇಕಾದ ಆಹಾರ ಸಾಮಗ್ರಿ ಜೊತೆ ವಿಷಾದದಿಂದ ಅವಳಿಗೆ ಕಳಿಸಿದೆವು, ಅವಳು ಹೋಗುವಾಗ ಈ ಕಾಯಿಲೆ ಅವರ ಬೀದಿಗೆ ತಂದವರ ಮೇಲೆ ಶಾಪ ಹಾಕುತ್ತಾ ಹೋದಳು.
ಮರುದಿನ ಪೋನ್ ಮಾಡಿದಾಗ ಇಡೀ ಬೀದಿ ಪ್ರವೇಶ ದ್ವಾರ ಪೋಲಿಸರು, ಕಂದಾಯ ಇಲಾಖೆಯವರು, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಬಂದ್ ಮಾಡಿ ಯಾರೂ ಈ ಬೀದಿ ಒಳಗೆ ಹೋಗದಂತೆ ಮತ್ತು ಅವರ ಬೀದಿಯವರು ಹೊರ ಬಾರದಂತೆ ಮಾಡಿದ್ದಾಗಿ ಕೆಲವು ದಾನಿಗಳು ಹಾಲು ಇತ್ಯಾದಿ ದಿನಸಿ ಕಿಟ್ ನೀಡಿರುವುದಾಗಿ ತಿಳಿಸಿದಳು ನಾವೆಲ್ಲ ಹೆಚ್ಚು ಜಾಗೃತೆ ವಹಿಸಬೇಕು ಅಂದೆವು.
ಅದರ ಮರುದಿನ ಕೆಲ ದೂರುಗಳು ಅಂದರೆ ಹಾಲು ,ಕಿಟ್ ಇತ್ಯಾದಿ ತಾರತಮ್ಯಗಳ ಬಗ್ಗೆ ತಿಳಿಸಿದಳು ಈ ಮಧ್ಯೆ ಪತ್ರಿಕೆ ಟೀವಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಊರ ಸೀಲ್ ಡೌನ್ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯಿತು.
ಅವತ್ತಿನ ನನ್ನ ಬ್ಲಾಗ್ ದಾಖಲೆ ಇಲ್ಲಿ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/07/blog-number-1653-2020-52-13-2020.html
ಮೂರನೆ ದಿನ ಫೋನ್ ರಿಂಗಾದರೂ ಯಾರೂ ರಿಸೀವ್ ಮಾಡಲಿಲ್ಲ ಬಹುಶಃ ಇವಳಿಗೂ ಕೊರಾನಾ ಪಾಸಿಟೀವ್ ಬಂದು ಶಿವಮೊಗ್ಗಕ್ಕೆ ಕೊರೆಂಟೈನ್ ಗೆ ಒಯ್ದರಾ? ಎಂದು ಅನುಮಾನ ಉಂಟಾಗಿತ್ತು.
ಸಂಜೆ ಕತ್ತಲಾದ ಮೇಲೆ ಅವಳೇ ಪೋನ್ ಮಾಡಿದಳು ... ಯಾಕಮ್ಮಾ ಫೋನ್ ತೆಗೆಯಲಿಲ್ಲ ಅಂದದ್ದಕ್ಕೆ ಅವಳ ಉತ್ತರ ... ಅಣ್ಣಾ ಫೋನ್ ಮನೇಲೆ ಇಟ್ಟು ಗದ್ದೆ ಕಳೆ ಕೆಲಸಕ್ಕೆ ನಮ್ಮ ಕೇರಿಯ ಹೆಂಗಸರ ಜೊತೆ ಗುಂಡಿಬೈಲಿಗೆ ಹೋಗಿದ್ದೆ!! ಅಂದಾಗ ನನಗೆ ಆಶ್ಚರ್ಯವಾಯಿತು, ಅಲ್ಲಮ್ಮ ಇಡೀ ಬೀದಿ ಸೀಲ್ ಡೌನ್ ಮಾಡಿದಾರೆ ನೀವು ಹೆಂಗೆ ಹೊರ ಹೋಗಿದ್ದು ಅಂದದ್ದಕ್ಕೆ ಅವಳ ಉತ್ತರ ... ಬಿಡಣ್ಣ ಇವರೆಲ್ಲ ಬೀದಿ ಪ್ರಾರಂಭದ ರಸ್ತೆಯಲ್ಲಿ ಗೇಟ್ ಮಾಡಿಕೊಂಡು ಪೋಟೋ ಹೊಡಕೊಂಡು ಮೊಬೈಲ್ ನಲ್ಲಿ ಪೋಸು ಕೊಡುತ್ತಾರೆ ಅಷ್ಟೆ... ನಮ್ಮ ಹೊಟ್ಟಿ ಪಾಡು ನೋಡೋರು ಯಾರು? ಅದಕ್ಕೆ ನಮ್ಮ ಮನೆ ಹಿಂದಿನ ಬೇಲಿ ದಾಟಿ ಮಸೀದಿ ಪಕ್ಕದಲ್ಲಿದ್ದ ರಸ್ತೆ ಮೂಲಕ ಜಮೀನಿಗೆ ಹೋಗ್ತಿದೀವಿ... ಕತ್ತಲಾದ ಮೇಲೆ ಮನೆಗೆ ವಾಪಾಸು ಬರ್ತೀವಿ... ಅದಕ್ಕೆ ಮನೇಲೆ ಫೋನ್ ಇಟ್ಟು ಹೋಗ್ತೀವಿ (ಬಹುಶಃ ಸರಕಾರದವರಿಗೆ ದಾಖಲೆಗಿರಬಹುದು) ಅಂತ ಹೇಳುವುದು ಕೇಳಿದಾಗ ಮೂರು ದಿನದ ಹಿಂದೆ ಸೀಲ್ ಡೌನ್ ಸುದ್ದಿ ಕೇಳಿ ಅತ್ತೂ ಕರೆದು ಹೋದ ಮಂಜುಳಮ್ಮ ಇವಳೇನಾ ಅನ್ನಿಸಿತ್ತು.
ಇವತ್ತು ಮೂರನೇ ವರ್ಷ ಹಾಗಂತ ಯಾರಿಗೂ ಅದು ನೆನಪಿಲ್ಲ Mass memories always less ಎಂಬ ಗಾದೆ ಸುಳ್ಳಲ್ಲ.
Comments
Post a Comment