Blog number 1654.. ಅವಸಾನದ ಅಂಚಿನ ಭಾರತೀಯ ರಣಹದ್ದುಗಳು ಇದಕ್ಕೆ ಕಾರಣವಾದ ಪಶು ಔಷದಿಯಲ್ಲಿ ಬಳಕೆಯ ನೋವು ನಿವಾರಕ ಡಿಕ್ಲೋಪೆನಾಕ್,
#ರಣ_ಹದ್ದುಗಳು_ಎಲ್ಲಿ_ಹೋದವು
#ಬೃಹತ್_ಗಾತ್ರದ_ಬೋಳು_ಕುತ್ತಿಗೆಯ_ರಣಹದ್ದುಗಳು
#ಹಳ್ಳಿಯಲ್ಲಿ_ಸತ್ತ_ಪ್ರಾಣಿಗಳ_ಊರ_ಹೊರಗೆ_ಎಸೆಯುತ್ತಿದ್ದರು.
#ಒಂದೆರೆಡು_ದಿನದಲ್ಲಿ_ಅವಶೇಷಗಳೂ_ಕಣ್ಮರೆ_ಮಾಡುತ್ತಿದ್ದ_ರಣಹದ್ದು
#ರಣಹದ್ದು_ಶಿಕಾರಿಮಾಡುತ್ತಿದ್ದ_ಮೂಕ
#ಸತ್ತ_ದನದ_ಪಿತ್ತಕೋಶದಲ್ಲಿ_ಸಿಗುತ್ತಿದ್ದ_ಗೋರೋಚನಕ್ಕೆ_ಬಾರಿ_ಬೆಲೆ_ಇತ್ತು_ಆಗ.
1960 - 70 ರ ದಶಕದಲ್ಲಿ ನಮ್ಮ ಹಳ್ಳಿಯ ಜನ ಸಂಖ್ಯೆ ಹೆಚ್ಚೆಂದರೆ ನೂರಿನ್ನೂರು ಮತ್ತು ಮನೆ ಸಂಖ್ಯೆ 20 ಇತ್ತು ನಮ್ಮ ಊರು ಶಿವಮೊಗ್ಗ ಮತ್ತು ಸಾಗರ ಮಾರ್ಗದ ಬಿ ಹೆಚ್ (ಬೆಂಗಳೂರು ಹೊನ್ನಾವರ) ರಸ್ತೆಯಲ್ಲಿದೆ.
ಪ್ರತಿ ವರ್ಷ ಹಕ್ಕಿ ಪಿಕ್ಕಿ ಜನರು ಆಗ ಅವರನ್ನು ಮೇಲು ಶಿಕಾರಿಯವರು ಅಂತ ಕರೆಯುತ್ತಿದ್ದರು ಅವರು ವರ್ಷದಲ್ಲಿ ಬೇರೆ ಬೇರೆ ಗುಂಪಿನಲ್ಲಿ ಕೆಲವು ತಿಂಗಳು ಈಗಿನ ಮಸೀದಿ ಇರುವ ಜಾಗದಲ್ಲಿ ದೊಡ್ಡ ಬಸರಿ ಮರದ ಕೆಳಗೆ ಕ್ಯಾಂಪ್ ಹಾಕುತ್ತಿದ್ದರು.
ಪ್ರತಿ ಕ್ಯಾಂಪ್ ಬಂದಾಗಲೂ ಅವರನ್ನ ನೋಡಲು ನಾವೆಲ್ಲ ಹೋಗುತ್ತಿದ್ದೆವು ಅಲ್ಲಿ ಅವರ ಹರಕಲು ಬಟ್ಟೆಯ ಟೆಂಟ್, ಚಾಟರ್ ಬಿಲ್ಲು, ಹಕ್ಕಿ -ಕಾಡು ಕೋಳಿ ಹಿಡಿಯುವ ಬಲೆ, ಶಿಕಾರಿಗೆ ಮತ್ತು ಊರಿಂದ ಊರಿಗೆ ಅವರ ಸಾಗಾಣಿಕೆ ಮಾಡಲು ಎತ್ತು ಇತ್ಯಾದಿ ಇರುತ್ತಿತ್ತು.
ಇವರೆಲ್ಲ ಸುಯೋ೯ದಯಕ್ಕೆ ಮೊದಲೇ ಕಾಡಿಗೆ ಶಿಕಾರಿಗೆ ಹೋಗಿ ಬಿಡುತ್ತಿದ್ದರು ಕ್ಯಾಂಪಿನಲ್ಲಿ ಮಕ್ಕಳು ಮತ್ತು ವಯಸ್ಸಾದವರು ಮಾತ್ರ ಇರುತ್ತಿದ್ದರು ಅವರಲ್ಲಿ ಮಾತು ಬಾರದ ಮೂಕ ಮಾತ್ರ ಮಾಡುತ್ತಿದ್ದ ರಣಹದ್ದು ಶಿಕಾರಿ ಮರೆಯಲು ಸಾಧ್ಯವಿಲ್ಲ.
ಒಂದು ದಿನ ಬಿರುಬಿಸಲಿನಲ್ಲಿ ನೂರಾರು ರಣ ಹದ್ದುಗಳು ಚಕ್ರಾಕಾರವಾಗಿ ಆಕಾಶದಲ್ಲಿ ತಿರುಗುತ್ತಾ ತಿರುಗುತ್ತಾ ನಮ್ಮ ಹಳ್ಳಿಗೆ ಸಮೀಪಿಸುತ್ತಿದ್ದಾಗ ನಮಗೆಲ್ಲ ಕುತೂಹಲ ಏಕೆಂದರೆ ಆಗೆಲ್ಲ ಊರವರು ಸಾಕಿದ ದನಗಳು ಸತ್ತಾಗ ಅದನ್ನು ಒಯ್ಯಲು ನರಸಣ್ಣನಿಗೆ ಕರೆ ನೀಡುತ್ತಿದ್ದರು, ನರಸಣ್ಣ ಮತ್ತು ಅವರ ಮಕ್ಕಳಾದ ರಾಮಣ್ಣ - ಸಣ್ಣ - ಮಂಜ ಎಲ್ಲಾ ಒಂದಾಗಿ ಬಂದು ಸತ್ತ ದನದ ಜೋಡಿ ಕಾಲುಗಳನ್ನು ಕಟ್ಟಿ ಅದರ ಮಧ್ಯ ಮರದ ಗಟ್ಟಿ ಗೂಟ ಹಾಕಿ ಅದಕ್ಕೆ ಹೆಗಲು ಕೊಟ್ಟು ಊರ ಹೊರಗೆ ಒಯ್ದು ಅಲ್ಲಿ ಅವರ ಹಾತ್ಯಾರಗಳಿಂದ ಚರ್ಮ ಸುಲಿದು ಅದನ್ನು ಚರ್ಮ ಖರೀದಿಸುವ ಮದ್ರಾಸಿನಿಂದ ಬಂದು ಆನಂದಪುರ೦ನಲ್ಲಿ ನೆಲೆಸಿರುವ ಲಬ್ಬೆ ಮುಸ್ಲಿಂರಾದ ಸುತ್ತಾರ್ ಸಾಹೇಬರಿಗೆ ಮಾರುತ್ತಿದ್ದರು.
ಕೆಲ ಸತ್ತ ದನದಲ್ಲಿ ಗೊರೋಚನ ಎಂಬ ಅಡಿಕೆ ಗಾತ್ರದ ಗಂಟು ದನದ ಪಿತ್ತಕೋಶದಲ್ಲಿ ಸಿಕ್ಕಿದರೆ ಅವರಿಗೆ ಹಬ್ಬ ಅದನ್ನು ಸತ್ತಾರ್ ಸಾಹೇಬರು ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದರು ಅದು ಸುವಾಸನೆ ತಯಾರಿಗೆ ಔಷದಿಗೆ ಹೋಗುತ್ತೆ ಅನ್ನುತ್ತಿದ್ದರು ಈಗ ಅದರ ಮಾರುಕಟ್ಟೆ ಬೆಲೆ ಗ್ರಾಮಿಗೆ ಎರೆಡು ಸಾವಿರ ಇದೆ.
ಚರ್ಮ ಸುಲಿದ ದನಗಳ ಅವಶೇಷ ಒಂದೆರೆಡು ದಿನದಲ್ಲಿ ರಣ ಹದ್ದುಗಳಿಗೆ ತಿಳಿದು ಅವುಗಳು ನೂರಾರು ಸಂಖ್ಯೆಯಲ್ಲಿ ಬಂದಿಳಿದು ಕ್ಷಣಮಾತ್ರದಲ್ಲಿ ಖಾಲಿ ಮಾಡಿ ಹಳ್ಳಿ ಸ್ಟಚ್ಚ ಮಾಡುತ್ತಿದ್ದವು ಆದರೆ ಅವತ್ತು ಊರಲ್ಲಿ ಯಾವುದೇ ದನ ಸತ್ತಿರಲಿಲ್ಲ ಆದ್ದರಿಂದ ನಮಗೆಲ್ಲ ಅಚ್ಚರಿ ಹಾಗಂತ ನಮ್ಮ ಈ ಸಾಹಸದ ಅನ್ವೇಷಣೆ ದೊಡ್ಡವರಿಗೆ ಹೇಳುವಂತಿಲ್ಲ ಹೇಳಿದರೆ ಪೆಟ್ಟುಗಳ ಬಹುಮಾನ ಗ್ಯಾರಂಟಿ ಈ ಪ್ರದೇಶಗಳಿಗೆ ಮಕ್ಕಳು ಹೋಗ ಕೊಡಬಾರದು ಅಲ್ಲೆಲ್ಲ ರಣಗಳು ಓಡಾಡುತ್ತಿರುತ್ತವೆ ಎಂಬ ನಂಬಿಕೆ ನಮ್ಮ ತಾಯಿ ಅಜ್ಜಿಯಂದಿರದ್ದು.
ನಾವು ಸಮಾನ ಮನಸ್ಕ ಬಾಲ್ಯದ ಗೆಳೆಯರು ರಣ ಹದ್ದುಗಳ ಗಮ್ಯಸ್ಥಾನ ತಲುಪಿದಾಗ ಅಲ್ಲಿ ನಮ್ಮ ಊರಿನ ಮೇರಿ ಬಾಯಮ್ಮನ ಬಿಡಾಡಿ ನಾಯಿ ಟೋನಿ ಮಟ್ಟಿಯ ಮಧ್ಯ ಸತ್ತು ಬಿದ್ದಿತ್ತು ಅದನ್ನು ತಿನ್ನಲು ಈ ರಣ ಹದ್ದುಗಳು ಬಂದಿತ್ತು.
ಆಗ ನಮಗೆಲ್ಲ ಅಚರಿ ಈ ರಣ ಹದ್ದುಗೆ ಇದು ಗೊತ್ತಾಗುವುದು ಹೇಗೆ? ಅಂತ.
ಅಷ್ಟರಲ್ಲಿ ಈ ರಣ ಹದ್ದುಗಳನ್ನ ಹೊಂಚು ಹಾಕಿದ್ದೇ ತಾನು ಎಂಬಂತೆ ಮೇಲು ಶಿಕಾರಿ ಮೂಕ ಸಣ್ಣ ದೊಣ್ಣೆಯೊಂದಿಗೆ ಬಂದವನೇ ಒಂದೊಂದೆ ರಣ ಹದ್ದುಗಳ ತಲೆಗೆ ಬಡೆದು ಸಾಯಿಸಲು ಪ್ರಾರಂಬಿಸಿದ್ಧ .. ಕೆಲ ಕ್ಷಣದಲ್ಲೇ ರಣ ಹದ್ದುಗಳು ಮೂಕನ ಮೇಲೆ ಮುರಿ ಬಿದ್ದು ಮೂಕನನ್ನು ಮೇರಿ ಬಾಯಮ್ಮನ ಟೋನಿ ನಾಯಿಯ ಜೊತೆ ತಿನ್ನುತ್ತದೆ ಎಂಬ ಭಯ ಇದನ್ನೆಲ್ಲ ಮಟ್ಟಿಯ ಇನ್ನೊಂದು ಭಾಗದಲ್ಲಿ ಅಡಗಿ ಕುಳಿತು ನೋಡುತ್ತಿದ್ದ ನಮಗಾಯಿತು ಆದರೆ ರಣಹದ್ದುಗಳು ಸತ್ತು ಬೀಳುವ ತಮ್ಮ ಸಂಗಾತಿ ಬಗ್ಗೆಯಾಗಲಿ ಅಥವ ತಮ್ಮ ಜನಾಂಗದ ಕೊಲೆಗಾರ ಮೂಕನ ಬಗ್ಗೆಯಾಗಲಿ ತಲೆ ಕೆಡಿಸಿಕೊಳ್ಳದೆ ಮೇರಿ ಬಾಯಮ್ಮನ ಮನೆಯ ಟೋನಿಯನ್ನು ತಿನ್ನುವ ಸ್ಪರ್ಧೆಯಲ್ಲಿ ತನ್ಮಯವಾಗಿದ್ದವು.
ಏಳೆಂಟು ರಣ ಹದ್ದು ಶಿಕಾರಿ ಮಾಡಿದ ಮೂಕ ಅದನ್ನೆಲ್ಲ ತನ್ನ ಕ್ಯಾಂಪಿಗೆ ಸಾಗಿಸಿದ ಒಂದೆರೆಡು ದಿನ ಅವರಿಗೆಲ್ಲ ದೊಡ್ಡ ಹಬ್ಬವಾಯಿತು ಅವರ ಕ್ಯಾಂಪಿನ ನಮ್ಮ ವಯಸ್ಸಿನ ಗೆಳೆಯರು ಹೇಳಿದ್ದು ರಣ ಹದ್ದು ಮಾಂಸ ತುಂಬಾ ರುಚಿಕರ.
ಮೇರಿ ಬಾಯಮ್ಮನ ನಾಯಿ ಟೋನಿ ಸತ್ತು ಬಿದ್ದ ಸುದ್ದಿ ನಮ್ಮ ಮಾತಿನಿಂದ ಹಳ್ಳಿಗೆಲ್ಲ ಗೊತ್ತಾಯಿತು ಎಲ್ಲರೂ ಆರೋಗ್ಯವಾಗಿದ್ದ ಟೋನಿ ಹೇಗೆ ಸತ್ತಿತು ಅನ್ನುವುದು ಗೊತ್ತಾಗಿದ್ದು ಕೆಲ ವರ್ಷದ ನಂತರ.
ಮೇಲು ಶಿಕಾರಿಯವರ ಕ್ಯಾಂಪು ಬಂದಾಗ ಊರಿನ ಕೆಲ ನಾಯಿಗಳು ಅವರ ಕ್ಯಾಂಪಿನ ಹತ್ತಿರ ಹೋಗುವಂತೆ ಮೂಕ ಅವುಗಳಿಗೆ ಏನೋ ತಿನ್ನಲು ರುಚಿ ತೋರಿಸಿ ನಂತರ ಅದರಲ್ಲಿ ಸುಲಭವಾಗಿ ಸಿಗುವ ನಾಯಿ ತಲೆ ಸೀಳಿ ಮಟ್ಟಿಯಲ್ಲಿ ಎಸೆದು ಬಿಡುತ್ತಿದ್ದ ಅದನ್ನು ಹುಡುಕಿ ಬರುವ ರಣ ಹದ್ದುಗಳನ್ನು ಮೂಕ ಸುಲಭವಾಗಿ ಬೇಟೆ ಮಾಡುತ್ತಿದ್ದ ಇದು ಹಳ್ಳಿಗರಲ್ಲಿ ಸಿಟ್ಟಿಗೆ ಕಾರಣವಾಗಿ ಮೇಲು ಶಿಕಾರಿಯವರ ಮೇಲೆ ಜಗಳಕ್ಕೂ ಕಾರಣವಾಯಿತು, ತಾವು ಕೇಳಿದ ಬೆಲೆಗೆ ಕಾಡು ಕೋಳಿ ಮಾರಾಟ ಮಾಡದೆ ಆನಂದಪುರಂನ ಅನುಕೂಲಸ್ಥರಿಗೆ ಮಾರಾಟ ಮಾಡುವ ಮೇಲು ಶಿಕಾರಿಗರ ಮೇಲಿನ ಕೋಪವೂ ಸೇರಿತ್ತು ನಂತರ ರಣ ಹದ್ದು ಶಿಕಾರಿ ನಮ್ಮ ಊರಲ್ಲಿ ನಿಷೇದವೇ ಆಯಿತು.
ನಂತರ ಕ್ರಮೇಣ ಕಡಿಮೆ ಆಗುತ್ತಾ ಬಂದ ರಣಹದ್ದುಗಳು ಈಗ ಇಲ್ಲವೇ ಇಲ್ಲ ಹಾಗಾದರೆ ರಣ ಹದ್ದು ಹೋದದ್ದಾದರೂ ಎಲ್ಲಿಗೆ?... 10 ರಿಂದ 30 ವರ್ಷ ಬದುಕುವ, ಸತ್ತ ಪ್ರಾಣಿ ತಿನ್ನುವ ಸುಮಾರು ಒಂದೂವರೆ ಕಿಲೋ ದಿಂದ ಎರೆಡು ಕಿಲೋ ಬಾರವಿರುವ ಬೋಳು ಕೊರಳಿನ ರಣಹದ್ದುಗಳು 1990 ರಿಂದ ಅವುಗಳ ಸಂತಾನ ಸಂಪೂರ್ಣ ನಿರ್ನಾಮ ಹಂತಕ್ಕೆ ತಲುಪಿದೆ.
ಇದಕ್ಕೆ ಕಾರಣ ಪಶು ವೈದ್ಯಕೀಯ ಔಷದಿಯಲ್ಲಿ ಬಳಸುತ್ತಿದ್ದ #ಡಿಕ್ಲೋಪೆನಾಕ್ ಎಂಬ ಸ್ನಾಯುಗಳ ನೋವು ನಿವಾರಕ ನಾನ್ ಸ್ಟೆರಾಯಿಡ್ ಔಷದಿಯ ಅಂಶಗಳು (ರೆಸ್ಯೂಡಿಸ್) ಸತ್ತ ಪಶುವಿನಲ್ಲಿ ಉಳಿಯುತ್ತಿದ್ದು ಅದನ್ನು ತಿನ್ನುವ ರಣಹದ್ದುಗಳ ವಂಶ ನಿರ್ನಾಮಕ್ಕೆ ಕಾರಣ ಎಂಬ ವಿದೇಶಿ ವಿಜ್ಞಾನಿಗಳ ಸಂಶೋದನೆಗೆ ಭಾರತದ ಸರ್ಕಾರ ನಿರ್ಲಕ್ಷಿಸಿತ್ತು ಈಗ ಅದನ್ನು ಭಾರತದ ಪಶು ವೈದ್ಯಕೀಯ ಔಷದಿಯನ್ನು ನಿಷೇದಿಸಿದೆ ಆದರೆ ಈಗಾಗಲೇ ಭಾರತದ ಈ ರಣ ಹದ್ದು ಹೆಚ್ಚು ಕಡಿಮೆ ಸಂಪೂರ್ಣ ನಿರ್ನಾಮವಾಗಿದೆ.
Comments
Post a Comment