Blog number 1119. ಭಾಗ - 5. ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ಖ್ಯಾತ ಲೇಖಕ, ವಿಮರ್ಶಕ, ಅಂಕಣಕಾರ ಅರವಿಂದ ಚೊಕ್ಕಾಡಿ ಅವರು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ಅವಲೋಕನದ ಮುಂದುವರಿದ ಭಾಗ.
#ಆನಂದಪುರ೦_ಸಾಹಿತ್ಯ_ಹಬ್ಬ
#ಅರವಿಂದ_ಚೊಕ್ಕಾಡಿಯವರ_ಪುಸ್ತಕ_ಅವಲೋಕನ
#ಮುಂದುವರಿದ_ಭಾಗ
#ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ_ಬೆಸ್ತರ_ರಾಣಿ_ಚಂಪಕಾ.
ನಾನು ಬರೆದ ಕಾದಂಬರಿ ಬೆಸ್ತರ ರಾಣಿ ಚಂಪಕಾದ ಅವಲೋಕನದ ಪೂರ್ಣ ಪಾಠ ಪ್ರಕಟಿಸಬೇಕು ನಾವೆಲ್ಲ ಕಾತುರದಿಂದ ಅರವಿಂದ ಚೊಕ್ಕಾಡಿಯವರ ಮಾತು ಕೇಳಲು ಕಾಯುತ್ತಿದ್ದೇವೆ ಅಂತ ಅನೇಕ ಗೆಳೆಯರು ವಿನಂತಿಯಂತೆ ಬೆಸ್ತರ ರಾಣಿ ಚಂಪಕಾ ಮುಂದುವರಿದ ಭಾಗವಿದು.
ಇತಿಹಾಸ - ಚರಿತ್ರೆ ಹೇಗೆ ಬೇರೆ ಬೇರೆ.... ಕೃತಿಯ ದೃಶ್ಯೀಕರಣದ ಬಗ್ಗೆ.... ಪಟ್ಟದ ರಾಣಿ ಭದ್ರಮ್ಮಾಜಿ ಪತಿ ರಾಜ ವೆಂಕಟಪ್ಪ ನಾಯಕರಿಗೆ ನಾನು ಇಂದಿನಿಂದ ನಿಮ್ಮ ಪತ್ನಿ ಅಲ್ಲ ಮಗಳಾಗಿರುತ್ತೇನೆ .....ಅನ್ನಲು ಅವಳ ನೋವು.... ಈ ವಿಡಿಯೋ ನೋಡಿ.
ಈ ಕಾದಂಬರಿ ಪ್ರಕಟವಾಗುವ ಮೊದಲೇ ಅರವಿಂದ ಚೊಕ್ಕಾಡಿಯವರು ಅನೇಕ ಬಾರಿ ಯಾವಾಗ ಪುಸ್ತಕ ಪ್ರಕಟ ? ಅಂತ ವಿಚಾರಿಸುತ್ತಿದ್ದರು.
ಪುಸ್ತಕ ಪ್ರಕಟವಾದ ತಕ್ಷಣ ಮೊದಲ ಪ್ರತಿ ಅವರಿಗೆ ಕಳಿಸಿದ್ದೆ ಅದನ್ನು ಓದಿ ಅವರು ಮಾಡಿದ ವಿಮರ್ಷೆ ಮೊದಲನೆಯದ್ದು ನಂತರ ನೂರಕ್ಕೂ ಹೆಚ್ಚಿನ ವಿಮರ್ಷೆಗಳು ಅನೇಕರು ಬರೆದಿದ್ದಾರೆ.
ಇನ್ನೊಮ್ಮೆ ಓದುಗರಿಗಾಗಿ...
ತಾಯಿಯನ್ನು ಕಳೆದುಕೊಂಡ ಬೆಸ್ತರ ಹುಡುಗಿ ಚಂಪಕಾಳನ್ನು ವೆಂಕಟಪ್ಪ ನಾಯಕ ಪ್ರೀತಿಸುವುದು, ಆತನ ಪಟ್ಟದ ರಾಣಿ ಭದ್ರಮ್ಮಾಜಿಗೆ ಈ ಸಂಬಂಧ ಇಷ್ಟವಾಗದೆ ಕಿರುಕುಳಗಳು ಸೃಷ್ಟಿಯಾಗುವುದು, ಈ ಸನ್ನಿವೇಶವನ್ನು ಸಾಮ್ರಾಜ್ಯವನ್ನು ದುರ್ಬಲಗೊಳಿಸುವುದಕ್ಕಾಗಿ ಬಳಸುವವರು ರೂಪಿಸುವ ಕಾರ್ಯತಂತ್ರಗಳು, ನೊಂದ ಚಂಪಕಾ ವಜ್ರದ ಹುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು, ವೆಂಕಟಪ್ಪ ನಾಯಕ ಆಕೆಗಾಗಿ ಸ್ಮಾರಕವನ್ನು ನಿರ್ಮಿಸುವುದು ಕಥೆ.
ಆದರೆ ಇಲ್ಲಿನ ಸಂಬಂಧಗಳು ತುಂಬ ಸಂವೇದನಾಶೀಲವಾದವುಗಳು. ಲಿಂಗಾಯಿತ ರಾಜ. ವೀರಶೈವ ರಾಣಿ ಭದ್ರಮ್ಮಾಜಿ. ಸಸ್ಯಾಹಾರಿಗಳು. ಭದ್ರಮ್ಮಾಜಿಗೆ ಸವತಿ ಮಾತ್ಸರ್ಯವಿಲ್ಲ. ಆಕೆಯೂ ಗಂಡನ ಶ್ರೇಯಸ್ಸನ್ನೆ ಬಯಸುವವಳು. ಇನ್ನೊಬ್ಬ ರಾಣಿಯ ಬಗ್ಗೆಯೂ ಆಕೆಯ ತಕರಾರುಗಳಿಲ್ಲ. 'ಜಾತಿ' ಆಕೆಯ ತಕರಾರಿನ ಕಾರಣ ಎಂಬಂತೆ ಕಂಡರೂ ಕತೆಯ ಒಡಲಿನಲ್ಲಿ ಮೂಡಿ ಬರುವ ಅನುಭವ ಶಿಲ್ಪವು ಜಾತಿಯೂ ತಕರಾರಿನ ಕಾರಣ ಅಲ್ಲ ಎಂಬುದನ್ನೆ ಹೇಳುತ್ತದೆ. ತಕರಾರಿನ ಮುಖ್ಯ ಕಾರಣ ಆಹಾರ ಪದ್ಧತಿಯೇ. ಆ ನಂಬಿಕೆಯು ಸರಿಯೋ ತಪ್ಪೋ ಎನ್ನುವುದಕ್ಕಿಂತ ಅದು ಭದ್ರಮ್ಮಾಜಿಯ ನಂಬಿಕೆ. ಆ ನಂಬಿಕೆಗೆ ಆಕೆ ನಿಷ್ಠಳು. ಅದಕ್ಕಾಗಿ ಆಕೆಯನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲು ಬರುವುದಿಲ್ಲ. ಪಟ್ಟದ ರಾಣಿ ರಾಜನಿಗೆ,"ಇನ್ನು ಮುಂದೆಯೂ ನಿಮ್ಮೆಲ್ಲ ಕಾರ್ಯಗಳಲ್ಲಿ ಜೊತೆಯಾಗಿರುತ್ತೇನೆ. ಆದರೆ ವೈಯಕ್ತಿಕ ಸಂಬಂಧದಲ್ಲಿ ಮಾತ್ರ ನಿಮಗೆ ಮಗಳಾಗಿ ಇರುತ್ತೇನೆ" ಎನ್ನಬೇಕಾದರೆ ಆಕೆಗೆ ಆಗಿರಬಹುದಾದ ಆಘಾತ ಮತ್ತು ವೇದನೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಭದ್ರಮ್ಮಾಜಿಯನ್ನು ಸುಲಭವಾಗಿ ವಿಲನೆಸ್ ಮಾಡಬಹುದಾಗಿದ್ದ ಸನ್ನಿವೇಶವನ್ನು ಭದ್ರಮ್ಮಾಜಿಯನ್ನು ಅರಿತುಕೊಳ್ಳುವ ಪ್ರಕ್ರಿಯೆಯಾಗಿ ರೂಪಿಸಿರುವಲ್ಲಿಯೇ ಅರುಣ್ ಪ್ರಸಾದ್ ಒಬ್ಬ ನಿಜವಾದ ಅರ್ಥದಲ್ಲಿ ಲೇಖಕ ಎನ್ನುವುದಕ್ಕೆ ಸಾಕ್ಷಿಯೂ ದೊರೆಯುತ್ತದೆ.
ಹಾಗಾದರೆ ರಾಜನದು ತಪ್ಪಾ? ಅಲ್ಲ. ಸಹಜ ಅದು. ಚಂಪಕಾಳದ್ದು ತಪ್ಪಾ?ಆಕೆ ಅತ್ಯಂತ ಪ್ರಾಮಾಣಿಕಳು. ಭದ್ರಮ್ಮಾಜಿಗಾಗಿ ನೊಂದುಕೊಳ್ಳುವ ಮನಸಿರುವ ಹೆಣ್ಣು. ಹಾಗಾದರೆ ತಪ್ಪು ಯಾರದು? ಯಾರದೂ ಅಲ್ಲ. ಆದರೂ ದುರಂತವೊಂದು ಘಟಿಸುತ್ತದೆ ಎನ್ನುವಲ್ಲಿ ಅರುಣ್ ಪ್ರಸಾದ್ ಅವರು ಗ್ರಹಿಸಿಕೊಂಡಿರುವ ಭವ್ಯ ಜೀವನದೃಷ್ಟಿಯ ಅನಾವರಣವು ನಡೆಯುತ್ತದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿಯೆ ಭವ್ಯ ಜೀವನದೃಷ್ಟಿ ಎಂಬ ಪದವನ್ನು ಬಳಸಿದ್ದೇನೆ. ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವವನು ನ್ಯಾಯಾಧೀಶನಾಗಿರುತ್ತಾನೆ. ಲೇಖಕನಿಗೆ ಅವರವರ ನೆಲೆಯಲ್ಲಿ ಪ್ರತಿಯೊಬ್ಬರೂ ಸರಿಯೇ ಎಂದು ಗೊತ್ತಿರುತ್ತದೆ. ಅವನ ಕಾಳಜಿ ಮತ್ತು ಚಡಪಡಿಕೆಗಳು ದುರಂತದ ಬಗ್ಗೆ ಇರುತ್ತದೆಯೆ ಹೊರತು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ಕೊಡಿಸುವುದರಲ್ಲಿ ಇರುವುದಿಲ್ಲ. ಇದು ಭವ್ಯ ಜೀವನ ದೃಷ್ಟಿ.
ಅಧಿಕಾರದ ಸಂವೇದನಾರಾಹಿತ್ಯವನ್ನು ಚಂಪಕಾಳ ಒಂದು ಮಾತಿನಲ್ಲಿ ಅರುಣ್ ಪ್ರಸಾದ ಎಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆಂದರೆ ಅದು ಸಾರ್ವಕಾಲಿಕ ಸತ್ಯ. "ಸುಖ-ದುಃಖ ಎರಡೂ ಅರಮನೆಯ ಅಂತಃಪುರದಲ್ಲಿ ಇಲ್ಲವೇ ಇಲ್ಲ" ಎಂಬ ಒಂದೇ ಮಾತು ಎಲ್ಲವನ್ನೂ ಹೇಳಿಬಿಡುತ್ತದೆ. ಈ ಮಾತನ್ನು ಹೇಳುವುದು ಭದ್ರಮ್ಮಾಜಿಯಲ್ಲ; ಚಂಪಕಾ. ಏಕೆಂದರೆ ಸ್ವತಂತ್ರ ಬದುಕಿನ ಅನುಭವವಿರುವ ಆಕೆ ಮಾತ್ರವೇ ಇದನ್ನು ಗುರುತಿಸಲು ಸಾಧ್ಯ. ಆದರೆ ಆಕೆಗೆ ಅನುಭವವೇದ್ಯವಾಗುವುದನ್ನು ಆಕೆಯ ತಂದೆ ಮಸ್ಯಾಬೋವಿ ಮೊದಲೇ ಗ್ರಹಿಸಿದ್ದಾನೆ. ಮಸ್ಯಾಬೋವಿಯೂ ಮದುವೆಗೆ ವಿರೋಧಿಯೇ. ರಾಜನ ಬಗ್ಗೆ ವಿರೋಧ ಅಲ್ಲ. ತನ್ನ ಮಗಳು ರಾಣಿಯಾಗಬಾರದೆಂದೂ ಅಲ್ಲ. ಆದರೆ ಮಗಳಿಗೆ ಮುಂದೆ ಆಗಲಿರುವ ಅನುಭವದ ಅರಿವು ಆತನಿಗಿದೆ. ಈ ಮುಖಾಂತರ ಅರುಣ್ ಪ್ರಸಾದ್ ತಮ್ಮ ಪಾತ್ರಗಳ ಸೈಕಾಲಜಿಯನ್ನು ಎಷ್ಟು ಚೆನ್ನಾಗಿ ಓದಿಕೊಂಡಿದ್ದಾರೆಂದರೆ ಅರುಣ್ ಪ್ರಸಾದ್ ಸುಮ್ಮನೇ ಇದ್ದರೂ ಪಾತ್ರಗಳೇ ಕತೆಯನ್ನು ನಿರೂಪಿಸಬಲ್ಲವು ಎನ್ನುವ ಹಾಗೆ.
ಇತಿಹಾಸವೆಂದರೆ ಘಟನಾವಳಿಗಳ ಸರಮಾಲೆ. ಯಾಂತ್ರಿಕ ನಿರೂಪಣೆ. ಒಳ್ಳೆಯವರು ಕೆಟ್ಟವರು ಎಂಬ ಕಪ್ಪು ಬಿಳುಪಿನ ಚಿತ್ರಣ ಎಂದುಕೊಂಡಿರುವ ಹೊತ್ತಿನಲ್ಲಿ ಇತಿಹಾಸದ ಮಾನವೀಕರಣವನ್ನು ಸಾಧಿಸಲು ತೊಡಗುವ ಅರುಣ್ ಪ್ರಸಾದ್ ಅವರಂತಹ ಲೇಖಕರು ಮುಖ್ಯರಾಗುತ್ತಾರೆ. ಇತಿಹಾಸದ ಅರಿವಿನೊಂದಿಗೆಯೇ ಮನುಷ್ಯನನ್ನು ಜೀವನ್ಮುಖಿಯಾಗಿ ಇಡಲು ತೊಡಗುವ ಈ ರಚನೆಗಾಗಿ ಅರುಣ್ ಪ್ರಸಾದ್ ಅವರನ್ನು ನಾನು ಅಭಿನಂದಿಸುತ್ತೇನೆ.
Comments
Post a Comment