Blog number 1926. ಆಹಾರ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಆಹಾರ ಕಲಬೆರಕೆಯ ಶಿವಮೊಗ್ಗ ಜಿಲ್ಲೆಯ ಹೈ ಪ್ರೊಪೈಲ್ ಕೇಸ್ ಹಳ್ಳ ಹಿಡಿದ ಘಟನೆ
#ಆಹಾರ_ಕಲಬೆರಕೆಯ_ಹೈಪ್ರೊಪೈಲ್_ಕೇಸ್
#ಸ್ವತಃ_ಆಹಾರಮಂತ್ರಿ_ಭಾಗವಹಿಸಿದ್ದ_ಜಿಲ್ಲಾ_ಪಂಚಾಯತ್_ಸಭೆಯಲ್ಲಿ_ಪ್ರಸ್ತಾವನೆ.
#ಕೇಸ್_ದಾಖಲಿಸಲು_ಸೂಚಿಸಿದ_ಆಹಾರ_ಮಂತ್ರಿಗಳು
#ರಾಜ್ಯದ_ಅನೇಕ_ಜಿಲ್ಲೆಯ_ಅಂಗನವಾಡಿಗೆ_ಕಲಬೆರಕೆ_ಎಣ್ಣೆ_ಸರಬರಾಜು
#ಪ್ರಯೋಗಾಲಯದ_ಪರೀಕ್ಷೆಯಲ್ಲಿ_ಸಾಬೀತು.
#ರಾಜಿ_ಪಂಚಾಯಿತಿಗೆ_ಬಂದವರಿಗೆ_ನನ್ನ_ಪ್ರಶ್ನೆ
#ನಿಮ್ಮ_ಮಕ್ಕಳ_ಸರ್ಕಾರದ_ಅಂಗನವಾಡಿಗೆ_ಕಳಿಸುತ್ತೀರಾ
#ನನ್ನ_ಮಕ್ಕಳನ್ನು_ಸರಕಾರಿ_ಅಂಗನವಾಡಿಯಲ್ಲೇ_ಓದಿಸಿದ್ದೆ
#ದಾಖಲಾದ_ಕೇಸ್_ಏನಾಯಿತು?
ನಮ್ಮ ಜಿಲ್ಲೆಯವರೇ ಆದ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳು ಆಗ ಜಿ.ಬಸವಣ್ಯಪ್ಪನವರು ಅವರ ಸಂಪುಟದಲ್ಲಿ ಆಹಾರ ಸಚಿವರು ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವರು ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.
ಆಗೆಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದರು ಅಂತಹ ಒಂದು ಜಿಲ್ಲಾ ಪಂಚಾಯತ್ ಸಭೆ ಅಧ್ಯಕ್ಷರಾಗಿದ್ದ ಶ್ರೀಮತಿ ಬಲ್ಕೀಷ್ ಬಾನು ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು.
ಜೆ. ಹೆಚ್.ಪಟೇಲರ ಸಂಪುಟ ಸಭೆಯಲ್ಲಿ ಆಹಾರ ಕಲಬೆರಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಯ್ದೆಯಲ್ಲಿ ಕೆಲ ಬದಲಾವಣೆಗೆ ಆಹಾರ ಸಚಿವರು ಸಂಪುಟದ ಅನುಮೋದನೆ ಪಡೆದು ಕೆಲ ದಿನಗಳಾಗಿತ್ತು.
ನಾನು ಅವತ್ತಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಹಾರ ಕಲಬೆರಕೆ ನಿಯಂತ್ರಣಕ್ಕೆ ಕಲಬೆರಕೆ ಮಾಡುವವರಿಗೆ ಏನು ಕ್ರಮ ಕೈಗೊಳ್ಳುವ ಕಾನೂನು ಜಾರಿಯಲ್ಲಿದೆ ಎಂದುಆಹಾರ ಸಚಿವರಿಗೆ ಪ್ರಶ್ನಿಸಿದೆ ಆಗ ಅವರು ಅಂತಹ ಪ್ರಕರಣಗಳಿದ್ದಲ್ಲಿ ಕರಬರಿಕೆ ಮಾಡುವವರನ್ನು ಜಾಮೀನು ರಹಿತ ಬಂದನಕ್ಕೆ ಒಳ ಪಡಿಸುತ್ತೇವೆ ಎಂಬ ಉತ್ತರ ನೀಡಿದರು.
ಆಗ ನಾನು ಶಿವಮೊಗ್ಗ ಜಿಲ್ಲೆಯ ಒಂದು ಮಹಿಳಾ ಸಹಕಾರಿ ಸಂಘ ರಾಜ್ಯದ ಕೆಲ ಜಿಲ್ಲೆಗಳಲ್ಲಿನ ಸರ್ಕಾರಿ ಅಂಗನವಾಡಿಗಳಿಗೆ ಖಾದ್ಯ ತೈಲ ಸರಬರಾಜು ಮಾಡುವ ಗುತ್ತಿಗೆ ಹಿಡಿದಿದ್ದು ಸದರಿ ಸಹಕಾರಿ ಸಂಘ ಕಲಬೆರಕೆ ಖಾದ್ಯ ತೈಲವನ್ನು ಸರಕಾರಿ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿದ್ದು ಈ ಬಗ್ಗೆ ಪ್ರಯೋಗಾಲಯದ ವರದಿ ಕೂಡ ಬಂದಿದ್ದು ಸದರಿ ಸಹಕಾರಿ ಸಂಘದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದರಿ ಮಹಿಳಾ ಸಹಕಾರಿ ಸಂಘ ಸರಬರಾಜು ಮಾಡಿದ ಖಾದ್ಯ ತೈಲದ ಪ್ರಯೋಗಾಲಯದ ವರದಿ ಸಭೆಯಲ್ಲಿ ಮಂಡಿಸಿದೆ.
ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಆಹಾರ ಮಂತ್ರಿಗಳು ಆದ ಸನ್ಮಾನ್ಯ ಬಸವಣ್ಣಪ್ಪನವರು ತಕ್ಷಣ ಸಭೆಯಲ್ಲಿ ಉಪಸ್ಥಿತರಾಗಿದ್ದ ಜಿಲ್ಲಾ ರಕ್ಷಣಾಧಿಕಾರಿಗಳು ಸದರಿ ಸಹಕಾರಿ ಸಂಘದ ಮೇಲೆ ಕ್ರಮ ಕೈಗೊಳ್ಳಬೇಕು ಕೇಸ್ ದಾಖಲಿಸಬೇಕೆಂದು ಆದೇಶಿಸಿದರು ಈ ವಿಷಯ ಜಿಲ್ಲಾ ಪಂಚಾಯತ್ ಸಭೆಯ ಸಭಾ ನಡವಳಿಕೆಯಲ್ಲಿ ದಾಖಲಾಯಿತು.
ಮರುದಿನ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಆಯಿತು,ಸದರಿ ಮಹಿಳಾ ಸಹಕಾರಿ ಸಂಘದ ಮೇಲೆ ಕೇಸ್ ದಾಖಲಾಗಿ ಎಫ್ಐಆರ್ ಆಯ್ತು.
ಎಪ್.ಐ.ಆರ್ ಆದ ಮೇಲೆಯೇ ನಾನು ಪತ್ರಿಕೆಗಳಿಗೆ ಮಾಹಿತಿ ನೀಡಿ ಸದರಿ ಸಹಕಾರಿ ಸಂಘದ ಅಧ್ಯಕ್ಷೆ ಮುಖ್ಯಮಂತ್ರಿಗಳಾದ ಜೆ.ಹೆಚ್.ಪಟೇಲರ ಸಹೋದರಿ ಶ್ರೀಮತಿ ಅನುಸೂಯಮ್ಮ ಎಂದು ತಿಳಿಸಿದೆ ಇದು ಜಿಲ್ಲೆ ಮತ್ತು ರಾಜ್ಯದಲ್ಲಿ ದೊಡ್ಡ ಸುದ್ದಿಯಾಯಿತು.
ನಂತರ ನಡೆದ ನಡಾವಳಿಗಳು ವಿಶೇಷವಾಗಿ ಬದಲಾಯಿತು,ಸ್ವತಹ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ ನನ್ನನ್ನು ಕರೆದು ವಿನಂತಿಸಲು ಪ್ರಾರಂಭಿಸಲು ಪ್ರಾರಂಭಿಸಿದರು ನಾನು ಅವರ ವಿನಂತಿಗೆ ಒಪ್ಪಲಿಲ್ಲ.
ಒಂದು ದಿನ ಸದರಿ ಸಹಕಾರಿ ಸಂಘದ ಮಹಿಳಾ ಪದಾಧಿಕಾರಿಗಳನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ರಾಜಿ ಸಂಧಾನದ ಸಭೆಗಾಗಿ ಕರೆಯಲಾಯಿತು ಅಲ್ಲಿ ಅವರೆಲ್ಲರೂ ನನಗೆ ಇದು ತಾವು ಆಗಲಿ ತಮ್ಮ ಸಂಘದ ಅಧ್ಯಕ್ಷರಾಗಲಿ ಮಾಡಿದ ತಪ್ಪು ಆಗಿರುವುದಿಲ್ಲ, ನಾವು ನಮ್ಮ ಸಹಕಾರಿ ಸಂಘಕ್ಕೆ ಸಿಕ್ಕಿದ ಈ ಅಂಗನವಾಡಿ ಖಾದ್ಯ ತೈಲ ಸರಬರಾಜು ಗುತ್ತಿಗೆಯನ್ನು ಮೂರನೇ ವ್ಯಕ್ತಿಗೆ ವಹಿಸಿದ್ದೆವು... ಆತನು ಈ ಎಲ್ಲಾ ವ್ಯವಾರಗಳನ್ನು ನಡೆಸಿಕೊಂಡು ನಮ್ಮ ಸಂಘಕ್ಕೆ ಸ್ವಲ್ಪ ಲಾಭಾಂಶ ನೀಡುವ ಕರಾರಿನ ಮೇಲೆ ಗುತ್ತಿಗೆ ... ಆತ ದುರಾಸೆಯಿಂದ ಅತಿ ಆಸೆಯಿಂದ ಈ ಅಕ್ರಮ ಮಾಡಿರುತ್ತಾನೆ ದಯಮಾಡಿ ತಾವು ಈ ಬಗ್ಗೆ ಮುಂದುವರಿಯಬಾರದಾಗಿ ವಿನಂತಿಸಿದರು.
ಆಗ ನಾನು ಅವರಿಗೆ ಒಂದು ಪ್ರಶ್ನೆ ಕೇಳಿದೆ... ಇಲ್ಲಿ ನೆರೆದಿರುವ ಸದರಿ ಸಹಕಾರಿ ಸಂಘದ ಪದಾಧಿಕಾರಿಗಳಾದ ತಮ್ಮಲ್ಲಿಎಷ್ಟು ಜನರ ಮಕ್ಕಳು ಸರಕಾರಿ ಅಂಗನವಾಡಿಗೆ ಕಳಿಸುತ್ತಿದ್ದೀರಿ?....ಅವರಾರು ಅವರ ಕುಟುಂಬದವರಾರು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವವರಾಗಿರಲಿಲ್ಲ, ಅವರೆಲ್ಲ ಪ್ರತಿಷ್ಠಿತ ಶ್ರೀಮಂತರ ಪತ್ನಿಯರು... ಆಗ ನಾನು ಹೇಳಿದೆ ನನ್ನ ಸ್ವಂತ ಮಕ್ಕಳು ಸರ್ಕಾರಿ ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ ಆದ್ದರಿಂದ ಆ ಮಕ್ಕಳಿಗೆ ಕಲಬೆರಕೆ ಎಣ್ಣೆ ಸರಬರಾಜು ಮಾಡುವವರನ್ನು ನಾನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದೆ.
ಈ ಕಲಬೆರಕೆ ಪ್ರಕರಣ ಹೈ ಪ್ರೊಫೈಲ್ ಕೇಸ್ ಆಯ್ತು ಕಾರಣ ಈ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದವರು ಶ್ರೀಮತಿ ಅನುಸೂಯಮ್ಮ ಇವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜೆ ಹೆಚ್ ಪಟೇಲರ ಖಾಸ ಸಹೋದರಿ.
ನಂತರ ನಡೆದ ಕಥೆಯೇ ಬೇರೆ...ಸದರಿ ಸಂಘದಿಂದ ಪುನಃ ಖಾದ್ಯ ತೈಲದ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿ ಅದು ಪರಿಶುದ್ಧ ಖಾದ್ಯ ತೈಲ,ಎಂಬ ವರದಿ ತರಿಸಿ ದಾಖಲಾಗಿದ್ದ ಎಫ್ಐಆರ್ ಗೆ ಬಿ ರಿಪೋರ್ಟ್ ಸಲ್ಲಿಸಲಾಯಿತು ಅಲ್ಲಿಗೆ ಕಲಬೆರಕೆ ಪ್ರಕರಣ ಮುಕ್ತಾಯಗೊಳಿಸಲಾಯಿತು.
ನನ್ನ ಅಧಿಕಾರವದಿ ಮುಗಿದ ನಂತರ ಒಮ್ಮೆ ಶಿವಮೊಗ್ಗದ ಬಸವಣ್ಣಪ್ಪನವರ ಮನೆಗೆ ನಾನು ಹಾಗೂ ಸಾಹಿತಿ ಕೋಣಂದೂರು ವೆಂಕಪ್ಪಗೌಡರು, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರ ಜೊತೆಗೆ ಹೋದಾಗ ಅವತ್ತು ಬಸವಣ್ಣಪ್ಪನವರು ನನ್ನ ಬಗ್ಗೆ ಈ ಘಟನೆ ಉಲ್ಲೇಖಿಸಿ "ಆಗೆಲ್ಲ ನನಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭೆಗೆ ಹೋಗಲು ಹೆದರಿಕೆ ಆಗುತಿತ್ತು ಅರುಣ್ ಪ್ರಸಾದ್ ನಮಗೆ ಇಂತಹ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು" ಎಂದು ನಗಾಡಿದರು.
ಎಲ್ಲಾ ಕಾನೂನು ಶಿಕ್ಷೆಗಳು ಬಡವರಿಗೆ ಮಾತ್ರ ಅದು ಶ್ರೀಮಂತರ ಮತ್ತು ಪ್ರಭಾವಿಗಳಿಗೆ ಅನ್ವಯಿಸುವುದಿಲ್ಲ ಎಂಬುದಕ್ಕೆ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರ ಸಹೋದರಿ ಮೇಲಿನ ಕರಗಿ ಹೋದ ಕಲಬೆರಕೆ ಕೇಸ್ ಒಂದು ಉದಾಹರಣೆ ಅಷ್ಟೆ.
ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ನನ್ನ ಮೇಲೆ ಸೇಡು ತೀರಿಸಿಕೊಳ್ಳಬಹುದಾಗಿದ್ದರು ಬೇರೆ ಜನಪರ ಹೋರಾಟದಲ್ಲಿ ನನ್ನ ಜೈಲಿಗೆ ಕಳಿಸಿದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಕರೆಸಿಕೊಂಡು ಅವರಿಗೆ ಎಚ್ಚರಿಕೆ ನೀಡಿ ಜಿಲ್ಲೆಯಿಂದ ವರ್ಗಾಯಿಸಿದ ಸಜ್ಜನ ಸಮಾಜವಾದಿ ಅವರು.
ಅಧಿಕಾರದಲ್ಲಿ ಇರುವವರ ಕುಟುಂಬದವರು ಸ್ವಲ್ಪ ಮೈ ಮರೆತರೂ ದೊಡ್ಡ ಕಂಟಕಕ್ಕೆ ಈಡಾಗ ಬಹುದಾದ ಘಟನೆಗೆ ಈ ಪ್ರಕರಣ ಒಂದು ಸಾಕ್ಷಿ ಆಗಿದೆ.
Comments
Post a Comment