Blog number 1917. ಬಿದ್ದು ಮಣ್ಣು ಸೇರಿರುವ ಶಿಲಾ ಶಾಸನ ಎತ್ತಿಡುವ ಕೆಲಸಕ್ಕೆ ಸ್ಥಳಿಯರು ಮುಂದಾಗಬೇಕು, ಪ್ರತಿ ಊರಿಗೂ ಇತಿಹಾಸ ಇದೆ ಆಯಾ ಊರಿನವರು ಅದನ್ನು ಸಂಗ್ರಹಿಸಿ ಪುಸ್ತಕ ಮಾಡುವ ಮೂಲಕ ಅವರವರ ಊರಿನ ಇತಿಹಾಸ ಚರಿತ್ರೆಯಲ್ಲಿ ಸೇರಿಸಲಿ.
#ಸಾಗರದ_ಪ್ರತಿಷ್ಟಿತ_ಇಂದಿರಾಗಾಂಧಿ_ಪದವಿ_ಕಾಲೇಜಿನ
#ಇತಿಹಾಸ_ಉಪನ್ಯಾಸಕರಾದ_ನೇಂದ್ರಪ್ಪ_ನನ್ನ_ಅತಿಥಿಗಳು
#ನಿಮ್ಮ_ಊರಿನ_ಇತಿಹಾಸ_ನೀವು_ಸಂಗ್ರಹಿಸಿ_ನೀವೊಂದು_ಪುಸ್ತಕ_ಮಾಡಿ.
#ಅದು_ನಿಮ್ಮ_ಊರಿನ_ದಾಖಲೆಯಾಗಿ_ಮುಂದಿನ_ಸಾವಿರಾರು_ವರ್ಷಕ್ಕೂ_ಉಳಿದೀತು
#ಇಲ್ಲದಿದ್ದರೆ_ನಿಮ್ಮ_ಊರಿನ_ಅಪೂರ್ವ_ಇತಿಹಾಸ_ಚರಿತ್ರೆಯಲ್ಲಿ_ಕಳೆದು_ಹೋಗಲಿದೆ
#ಚರಂಡಿಯ_ಕಲ್ಲಾಗಿರುವ_ಶಾಸನಗಳು.
#ಮಣ್ಣಲ್ಲಿ_ಬಿದ್ದಿರುವ_ಶಿಲಾಶಾಸನ_ಎತ್ತಿ_ನಿಲ್ಲಿಸುವ_ಅಭಿಯಾನ_ಸ್ಥಳಿಯರಿಂದ_ಎಲ್ಲೆಡೆ_ಪ್ರಾರಂಭವಾಗಲಿ
#ನಮ್ಮ_ಆನಂದಪುರಂ_ಇತಿಹಾಸ_ಪುಸ್ತಕ_ಆಗುತ್ತಿದೆ
#ಇಂತಹ_ಅಮೂಲ್ಯ_ಕೆಲಸಕ್ಕೆ_ಮುಂದಾಗುವವರಿಗೆ_ನನ್ನ_ಮಾರ್ಗದರ್ಶನ_ಸಲಹೆ_ಇದೆ.
#ಶಿಲಾಶಾಸನಗಳ_ಪಿತಾಮಹರೆಂದೇ_ಖ್ಯಾತರಾದ_ಬೆಂಜಮನ್_ಲೂಯಿಸ್_ರೈಸ್_ಆನಂದಪುರಂಗೆ_ಬಂದು_ತಂಗಿದ್ದರು.
ಇತ್ತೀಚೆಗೆ ನಮ್ಮ ಆನಂದಪುರಂ ಸಮೀಪದ ಗೌತಮಪುರದ ನೇಂದ್ರಪ್ಪನವರು ಬಂದಿದ್ದರು ಅವರು ಸಾಗರದ ಪ್ರತಿಷ್ಠಿತ ಇಂದಿರಾ ಗಾಂಧಿ ಪದವಿ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದಾರೆ.
ಅವರು ತಮ್ಮ ಪ್ರೌಢ ಶಿಕ್ಷಣ ಆನಂದಪುರಂನಲ್ಲಿ ಮಾಡಿದ್ದಾರೆ ಆಗ ನಾನು ಜಿಲ್ಲಾ ಪಂಚಾಯಿತಿಯ ಸದಸ್ಯನಾಗಿದ್ದೆ, ಇವರ ಜೊತೆಗಾರ ಈಗ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ವೃತ್ತಿ ಮಾಡುತ್ತಿರುವ ನನ್ನ ಶಿಷ್ಯ ಪರಮೇಶರವರ ಗೆಳೆಯರು ಮತ್ತು ಅವರ ಮನೆಯ ಪಕ್ಕದವರು.
ಇತಿಹಾಸದ ಉಪನ್ಯಾಸಕರಾದ ನೇಂದ್ರಪ್ಪನವರಿಗೆ ಆನಂದಪುರ ಹೋಬಳಿಯ ಎಪಿಗ್ರಾಫಿಯ ಕರ್ನಾಟಕದಲ್ಲಿ ದಾಖಲಾಗಿರುವ ಸುಮಾರು 36 ಶಿಲಾಶಾಸನಗಳು ಹಾಗೂ ತಾಮ್ರ ಪತ್ರಗಳನ್ನು ಮತ್ತೊಮ್ಮೆ ತಮ್ಮ ಆಸಕ್ತ ವಿದ್ಯಾರ್ಥಿಗಳ ಜೊತೆಗೆ ಪರಿಶೀಲಿಸುವ ಅಭಿಯಾನ ಮಾಡಲು ಕೋರಿದ್ದೇನೆ.
ಇವರಿಗೆ ಸ್ಥಳೀಯ ಗ್ರಾಮ ಪಂಚಾಯತಿಗಳು, ಸ್ಥಳಿಯ ಯುವಕ ಯುವತಿಯರ ಸಂಘಟನೆ ಮತ್ತು ಇತಿಹಾಸದಲ್ಲಿ ಆಸಕ್ತಿ ಇರುವ ಸಾರ್ವಜನಿಕರು ಕೈಜೋಡಿಸ ಬಹುದಾಗಿದೆ.
ನನ್ನ ಆನಂದಪುರ ಇತಿಹಾಸ ಪುಸ್ತಕ ಬಿಡುಗಡೆ ಮಾಡುವಾಗ ಆನಂದಪುರಂನ ಒಂದೆರಡು ಶಿಲಾಶಾಸನಗಳ ಸ್ಥಳದಲ್ಲಿ ಕನ್ನಡದ ಅನುವಾದದ ಫಲಕ ಅಳವಡಿಸುವ ಮೂಲಕ ಈ ರೀತಿಯ ಅಭಿಯಾನ ನಡೆಸಲು ಸ್ಥಳೀಯರಿಗೆ ಪ್ರೇರೇಪಿಸುವ ಉದ್ದೇಶವಿದೆ.
ನಿಮ್ಮ ನಿಮ್ಮ ಊರಿನ ಇತಿಹಾಸ ದಾಖಲಿಸುವ ಅದನ್ನು ಪುಸ್ತಕವಾಗಿ ಪ್ರಕಟಿಸುವವರಿಗೆ ನಾನು ಅವರಿಗೆ ಬೇಕಾದ ಹೆಚ್ಚಿನ ಮಾಹಿತಿಕೊಡಲು ಸಿದ್ದನಿದ್ದೇನೆ.
ಪ್ರತಿ ಊರಿಗೂ ಇತಿಹಾಸವಿದೆ ಅದನ್ನು ದಾಖಲಿಸುವ ಕೆಲಸಗಳಾಗಬೇಕು ಅದನ್ನು ಯಾರು ಮಾಡಬೇಕು?.... ಸ್ಥಳೀಯರು ಹಾಗೂ ಆ ಊರಿನ ಸಂಘ ಸಂಸ್ಥೆಗಳು ಶಿಕ್ಷಕರು, ವಿದ್ಯಾರ್ಥಿಗಳು ಈ ಕೆಲಸವನ್ನು ಮಾಡಬಹುದು.
ಪ್ರತಿ ಊರಿಗೂ ಒಂದು ಹೆಸರಿದೆ, ಅಲ್ಲಿ ಬಾಳಿ ಬದುಕಿದವರ ನೂರಾರು ಕುಟುಂಬಗಳಿರುತ್ತದೆ,ಅಲ್ಲಿ ಓದಿ ಉನ್ನತ ಸ್ಥಾನಗಳಿಗೆ ಹೋದವರಿದ್ದಾರೆ, ಊರಲ್ಲೇ ತಮ್ಮ ಜೀವನ ಕಳೆದವರು ಇರುತ್ತಾರೆ,ಇಂತಹ ಊರಿನಲ್ಲಿ ನೂರಾರು ವರ್ಷಗಳ ಹಿಂದಿನ ಶಿಲಾ ಶಾಸನಗಳೂ ಇರಬಹುದು, ಅವುಗಳು ಸ್ಥಳಿಯರಿಗೆ ಅರಿವು ಇಲ್ಲದೆ ನಿಮ್ಮ ಊರಿನ ಬಾವಿಕಟ್ಟೆಯ ಕಲ್ಲು ಆಗಿರಬಹುದು ಅಥವಾ ಚರಂಡಿಯ ಕಲ್ಲಾಗಿ ಬಳಸಿರಬಹುದು,ಅನೇಕ ಕಡೆ ಬಟ್ಟೆ ಒಗೆಯುವ ಕಲ್ಲುಗಳು ಶಿಲಾಶಾಸನಗಳು ಆಗಿದ್ದನ್ನು ನೋಡುತ್ತೇವೆ.
ಬ್ರಿಟಿಷ್ ಸರ್ಕಾರದಲ್ಲಿ ಕಂದಾಯ ಗ್ರಾಮಗಳಾಗಿದ್ದ ಊರುಗಳ ಸರ್ವೆ ಮಾಹಿತಿ ಗೆಜೆಟಿಯರ್ ನಲ್ಲಿ ದಾಖಲಾಗಿದೆ, ಆ ಕಾಲದ ಜನ ಸಂಖ್ಯೆ, ಕೃಷಿ ವಿವರ ಇತ್ಯಾದಿ ಲಭ್ಯವಿದೆ.
1894 ರಿಂದ 1905 ರವರೆಗೆ ಮೈಸೂರಿನ ಆರ್ಕೊಲಾಜಿಕಲ್ ಡಿಪಾರ್ಟ್ಮೆಂಟ್ ನಿರ್ದೇಶಕರಾಗಿದ್ದ ಬೆಂಜಮೀನ್ ಲೂಯಿಸ್ ರೈಸ್ ರವರ ಪರಿಶ್ರಮದಿಂದ ನಮ್ಮ ರಾಜ್ಯದ ಸುಮಾರು 8869 ಶಾಸನಗಳು, ತಾಮ್ರ ಪುತ್ರಗಳು ದಾಖಲಾಗಿ ಎಪಿಗ್ರಾಪಿಯ ಕನಾ೯ಟಕ ಎಂಬ 12 ಸಂಪುಟಗಳಲ್ಲಿ ಪ್ರಕಟವಾಗಿದೆ.
20 ಡಿಸೆಂಬರ್ 1868 ರಲ್ಲಿ ಇವರು ಆನಂದಪುರಂ ಭೇಟಿ ಮಾಡಿದ್ದು ದಾಖಲಾಗಿದೆ, ನಮ್ಮ ಊರಾದ ಯಡೇಹಳ್ಳಿಯ ಬ್ರಿಟಿಷ್ ಬಂಗಲೆಯಲ್ಲಿ ತಂಗಿದ್ದು, ಅವತ್ತಿನ ಶಿವಮೊಗ್ಗದಿಂದ ಆನಂದಪುರಂಗೆ ಬರುವ ರಸ್ತೆಯ ಇಕ್ಕೆಲದಲ್ಲಿ ದೂಪದ ಮರಗಳಿದ್ದವೆಂದು ದಾಖಲಿಸಿದ್ದಾರೆ, ಅವುಗಳು ಒಂದಕ್ಕೊಂದು ಸೇರಿ ಇಡೀ ರಸ್ತೆ ನೆರಳಿನಲ್ಲಿ ಸಾಗಿತ್ತೆಂದು ಬರೆದಿದ್ದಾರೆ.
ಅವರು ಆ ದಿನ ಸಂಜೆ ಆನಂದಪುರಂನ ಕೋಟೆ ವೀಕ್ಷಣೆಗಾಗಿ ತೆರಳುತ್ತಾರೆ, ಅವರ ಉದ್ದೇಶ ಅಲ್ಲಿದ್ದ ಪಿರಂಗಿಯನ್ನು ನೋಡುವುದು. ಸಂಜೆಯಾದ ಸಮಯದಲ್ಲಿ ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ, ಪೂರ್ವದಲ್ಲಿ ಮೂಡುತ್ತಿದ್ದ ಚಂದಿರನ ಪ್ರತಿಬಿಂಬ ಆನಂದಪುರಂನ ಕೆರೆಯಲ್ಲಿ ಪ್ರತಿಫಲಿಸುತ್ತೆಂದು ಆನಂದಪುರಂ ಕೋಟೆ ಮೇಲಿನ ಈ ಅನುಭೂತಿ ದರ್ಶನ ಅವರ ಡೈರಿಯಲ್ಲಿ ದಾಖಲಿಸಿದ್ದಾರೆ.
ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಇದ್ದ ಪಟೇಲರು ಶಾನುಭೋಗರುಗಳ ಸಹಕಾರದಿಂದ, ಸ್ಥಳೀಯರಿಂದ ಆ ಊರುಗಳಲ್ಲಿ ಇರುತ್ತಿದ್ದ ಶಿಲಾ ಶಾಸನಗಳನ್ನು ಗುರುತಿಸಿ ಆ ಕಾಲದಲ್ಲಿ ದಾಖಲಿಸಿದ್ದಾರೆ.
ಈಗ ಆ ಶಿಲಾ ಶಾಸನಗಳು ಹೇಗಿದೆ?... ಕೆಲವು ಶಿಲಾಶಾಸನಗಳನ್ನು ಜನರು ಗುಡಿಯಲ್ಲಿಟ್ಟು ಪೂಜಿಸುತ್ತಿದ್ದಾರೆ, ಕೆಲ ಹಳ್ಳಿಗಳಲ್ಲಿ ದೀಪಾವಳಿ ಯುಗಾದಿಗಳಿಗೆ ತಮ್ಮ ಜಾನುವಾರುಗಳನ್ನು ಕರೆ ತಂದು ಪೂಜಿಸುವ ಸ್ಥಳಗಳಾಗಿದೆ ಅಥವಾ ಗ್ರಾಮ ದೇವತೆಯೆಂದು ಭಾವಿಸಿ ಹಬ್ಬ ಮಾಡುವ ಸ್ಥಳಗಳಾಗಿದೆ ಈ ರೀತಿ ಪೂಜಾಹ೯ವಾಗಿ ಬದಲಾದ ಶಿಲಾ ಶಾಸನಗಳು ಜನರಿಂದ ತಲೆಮಾರಿಂದ ತಲೆಮಾರಿಗೆ ಜನರ ರಕ್ಷಣೆಯಲ್ಲಿ ಸಂರಕ್ಷಣೆ ಆಗಿದೆ ಆದರೆ ಎಲ್ಲಾ ಶಿಲಾಶಾಸನಗಳಿಗೆ ಈ ಸಂರಕ್ಷಣೆ ಇಲ್ಲ ಅವುಗಳು ಅನಾಥವಾಗಿ ಎಲ್ಲೆಲ್ಲೋ ಬಿದ್ದಿದೆ.
ಈ ಶಿಲಾ ಫಲಕಗಳಲ್ಲಿ ಬರೆದಿರುವುದು ಹಳೆಗನ್ನಡದಲ್ಲಿ ಅದನ್ನು ನವ ಕನ್ನಡಿಗರು ಯಾರು ಓದಲು ಸಾಧ್ಯವಿಲ್ಲ, ಕೆಲವೇ ಕೆಲವರು ಆ ಪರಿಣಿತಿ ಪಡೆದಿದ್ದಾರೆ ಆದರೆ ಬೆಂಜಮೀನ್ ಲೂಯಿಸ್ ರೈಸ್ ಕಾಲದಲ್ಲಿ ಈ ಶಿಲಾಪಲಕಗಳ ಹಳೆಗನ್ನಡವನ್ನು ಇಂಗ್ಲಿಷ್ ಭಾಷೆಗೆ ತರ್ಜಿಮೆ ಮಾಡಿ ಕ್ರಮ ಸಂಖ್ಯೆ ನೀಡಿ ಇಂಗ್ಲಿಷ್ ಬಾಷೆಯಲ್ಲಿ 12 ಸಂಪುಟಗಳಲ್ಲಿ ಎಪಿಗ್ರಾಪಿಯ ಕನಾ೯ಟಕ ಎಂಬ ಹೆಸರಿನಲ್ಲಿ ಪ್ರಕಟ ಮಾಡಿದ್ದಾರೆ.
ಈಗಿನ ತಲೆಮಾರಿನ ನಾವುಗಳು ನಮ್ಮ ಊರ ಅಕ್ಕಪಕ್ಕದಲ್ಲಿ ಈಗಾಗಲೇ ಎಪಿಗ್ರಾಫಿಯ ಕರ್ನಾಟಕದಲ್ಲಿ ದಾಖಲಾಗಿರುವ ಶಿಲಾಶಾಸನಗಳನ್ನು ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಅವುಗಳ ಇವತ್ತಿನ ಸ್ಥಿತಿಗತಿಗಳನ್ನು ನೋಡಿ ಅವುಗಳ ಸಂರಕ್ಷಣೆಯ ಜೊತೆಗೆ ಆ ಸ್ಥಳದಲ್ಲಿ ಆ ಶಿಲಾಪಲಕದಲ್ಲಿ ಬರೆದಿರುವ ದಾಖಲೆಯನ್ನು ಹೊಸ ಕನ್ನಡದಲ್ಲಿ ಅನುವಾದಿಸಿ ಬೋರ್ಡ್ ಗಳನ್ನು ಹಾಕುವುದರಿಂದ ಶಿಲಾ ಶಾಸನಗಳ ಮಾಹಿತಿ ಈ ತಲೆಮಾರಿಗೆ ತಿಳಿಸುವ ಮೂಲಕ ಮುಂದಿನ ತಲೆಮಾರಿನವರಿಗೆ ಶಿಲಾ ಶಾಸನದ ಪ್ರಾಮುಖ್ಯತೆ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಒಂದು ಸಂದೇಶ ನೀಡುವ ಅಭಿಯಾನ ಎಲ್ಲಾ ಊರುಗಳಲ್ಲೂ ಪ್ರಾರಂಭವಾಗಬೇಕು.
ಎಪಿಗ್ರಾಫಿಯ ಕರ್ನಾಟಕದಲ್ಲಿ ದಾಖಲಾಗದ ಶಿಲಾಶಾಸನಗಳನ್ನು ಗುರುತಿಸಿ ಪುರಾತತ್ವ ಇಲಾಖೆಗೆ ಮಾಹಿತಿ ನೀಡುವ ಕೆಲಸಗಳೂ ಮಾಡಬಹುದು.
ಬಿದ್ದು ಮಣ್ಣಲ್ಲಿರುವ ಶಿಲಾ ಶಾಸನಗಳನ್ನು ಎತ್ತಿ ನಿಲ್ಲಿಸುವ ಕೆಲಸಗಳು ಪ್ರಾರಂಭವಾಗಬೇಕು ಮತ್ತು ಸಾವಿರಾರು ವರ್ಷದಿಂದ ಮಳೆ ಗಾಳಿ ಬಿಸಿಲಿಗೆ ಈ ಶಿಲಾಶಾಸನಗಳ ಸವಕಳಿ ಆಗುತ್ತಿದೆ ಇದರಿಂದ ಈ ಶಿಲಾಶಾಸನದ ಅಕ್ಷರಗಳು ಸವೆದು ಹೋಗಿ ಓದಲು ಸಾಧ್ಯವಾಗುವುದಿಲ್ಲ ಆದ್ದರಿಂದ ಬಯಲಲ್ಲಿ ಅನಾಥ ಆಗಿರುವ ಶಿಲಾಶಾಸನಗಳಿಗೆ ಸಣ್ಣ ರಕ್ಷಣೆಯ ಮೇಲ್ಚಾವಣಿಗಳನ್ನು ಸ್ಥಳೀಯ ದಾನಿಗಳಿಂದ ನಿರ್ಮಿಸಬಹುದು.
ಸ್ಥಳೀಯ ಶಾಲಾ ಶಿಕ್ಷಕರು ಈ ಕೆಲಸದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬಹುದು ಅವರು ತಮ್ಮ ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಯುವ ಆಸಕ್ತಿ ಮೂಡಿಸಬಹುದು ಇದಕ್ಕಾಗಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಮತ್ತು ಸ್ಥಳಿಯ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಈ ಕೆಲಸವನ್ನು ಮಾಡಿ, ಪ್ರತಿ ವರ್ಷ ಆ ಸ್ಥಳದಲ್ಲಿ ನಮ್ಮ ಊರ ಇತಿಹಾಸ ಉಳಿಸಿ ಎಂಬ ಅಭಿಯಾನ ನಿರಂತರ ನಡೆಸಬಹುದು.
ನಾನೀಗಾಗಲೇ ನಮ್ಮ ಆನಂದಪುರಂನ ಇತಿಹಾಸವನ್ನು ನನಗೆ ತಿಳಿದ ಮಟ್ಟಿಗೆ ಸಂಗ್ರಹಿಸಿ ಪುಸ್ತಕವನ್ನಾಗಿಸುವ ಕೆಲಸ ಮಾಡುತ್ತಿದ್ದೇನೆ, ಸದ್ಯದಲ್ಲೇ ಆನಂದಪುರಂ ಇತಿಹಾಸ ಪುಸ್ತಕ ಎರೆಡು ಭಾಗಗಳಾಗಿ ಆಸಕ್ತರಿಗೆ ಸಿಗಲಿದೆ.
ಇದೇ ರೀತಿ ನೀವುಗಳು ನಿಮ್ಮ ಊರಿನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಅದನ್ನು ಚಿತ್ರ ಸಹಿತ ಪುಸ್ತಕ ಮಾಡಬಹುದಾಗಿದೆ ಅದು ನಿಮ್ಮ ಊರಿನ ಇತಿಹಾಸವಾಗಲಿದೆ,ಅದು ಮುಂದಿನ ಸಾವಿರಾರು ವರ್ಷ ಒಂದು ದಾಖಲೆಯಾಗಿ ಉಳಿಯಲಿದೆ ಈ ಕೆಲಸ ಈಗ ಮಾಡದಿದ್ದರೆ ನಿಮ್ಮ ಊರಿನ ಅಪೂರ್ವ ಇತಿಹಾಸ ಹಾಗೆ ಕಳೆದು ಹೋಗುವ ಸಾಧ್ಯತೆ ಇದೆ.
Comments
Post a Comment