Blog number 1921. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ನಮ್ಮ ಸಾಗರ ತಾಲೂಕಿನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗೋಪಾಲ ನಾಗರಕಟ್ಟೆ,
#ನಾಡಿದ್ದು_ಸೋಮವಾರ_22_ಜನವರಿ_2024ರಂದು
#ಅಯೋಧ್ಯಯಲ್ಲಿ_ಬಾಲರಾಮನ_ಪ್ರತಿಷ್ಟಾಪನೆ.
#ಶಿಲ್ಪಿ_ಮೈಸೂರಿನ_ಅರುಣ್_ಯೋಗಿರಾಜ್
#ಶಿಲ್ಪ_ನಿರ್ಮಾಣದ_ಕೃಷ್ಣ_ಶಿಲೆ_ಮೈಸೂರಿನದ್ದು
#ರಾಮಮಂದಿರ_ನಿರ್ಮಾಣದ_ಉಸ್ತುವಾರಿ_ಗೋಪಾಲ_ನಾಗರಕಟ್ಟೆ_ಸಾಗರದ_ಪಕ್ಕದ_ಸಿದ್ದಾಪುರದವರು.
ಸೋಮವಾರ 22 ಜನವರಿ 2024 ರಂದು ಆಯೋಧ್ಯಯಲ್ಲಿ ರಾಮ ಮಂದಿರದ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಬಾಲ ರಾಮನ ಪ್ರತಿಷ್ಟಾಪನೆ ನೆರವೇರಲಿದೆ.
ಕಳೆದ ವರ್ಷ 9 ಫೆಬ್ರುವರಿ 2023 ರಲ್ಲಿ ಆಯೋಧ್ಯ ರಾಮ ಮಂದಿರ ನಿರ್ಮಾಣದ ದೇಣಿಗೆ ಒಂದು ಸಾವಿರ ಕೋಟಿ ದಾಟಿತ್ತು ನಂತರ 3200 ಕೋಟಿ ದೇಣಿಗೆ ಸಂಗ್ರಹವಾದ ನಂತರ ನಿರ್ಮಾಣದ ಕಾಮಗಾರಿ ಭರದಿಂದ ನಡೆದಿದೆ.
ಅಯೋಧ್ಯಯ ರಾಮ ಮಂದಿರ ನಿರ್ಮಾಣಕ್ಕೂ ನಮ್ಮ ರಾಜ್ಯಕ್ಕೂ ಅನೇಕ ರೀತಿಯ ಸಂಬಂದವಿದೆ.
ಅಯೋಧ್ಯ ರಾಮ ಮಂದಿರದ ಹಾಲಿ ಉಸ್ತುವಾರಿ ಆಗಿರುವ ಗೋಪಾಲ ನಾಗರ ಕಟ್ಟೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು ಅವರು ವಿಶ್ವ ಹಿಂದು ಪರಿಷತ್ ನ ರಾಷ್ಟ್ರೀಯ ಕೇಂದ್ರಿಯ ಕಾರ್ಯದರ್ಶಿ ಆಗಿದ್ದಾರೆ.
ಪ್ರತಿಷ್ಟಾಪನೆ ಆಗಲಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಮೈಸೂರಿನಿಂದ ಆಯ್ಕೆ ಮಾಡಿರುವುದು ಮತ್ತು ಶಿಲ್ಪಿ ಕೂಡ ಮೈಸೂರಿನ ಅರುಣ್ ಯೋಗಿರಾಜ್.
ಕಳೆದ ವರ್ಷ ರಾಮ ಮಂದಿರದ ನಿರ್ಮಾಣದ ದೇಣಿಗೆ ಆಗಿ ನಮ್ಮ ಕುಟುಂಬದಿಂದ 1000, 100 ಮತ್ತು 10 ರೂಪಾಯಿಯ ಕೂಪನ್ ಗಳನ್ನು ಖರೀದಿಸಿದ್ದೆವು.
90 ರ ದಶಕದಲ್ಲಿ ಅಯೋದ್ಯೆಗೆ ಸಾಗರ ತಾಲೂಕಿನಿಂದ ಸಾಗಾಣಿಕೆ ಮಾಡಲಾದ ಇಟ್ಟಿಗೆ ಟ್ರಕ್ ಗೆ ಪೂಜೆ ನೆರವೇರಿಸಿದವರು ಸಾಗರದ ಸಜ್ಜನ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ.
ಖ್ಯಾತ ಪತ್ರಕರ್ತರಾದ ಲಂಕೇಶರು ಸ್ವತಃ ಈ ವಿವಾದಿತ ಮಂದಿರ ಮಸೀದಿ ಸ್ಥಳ ಸಂದರ್ಶಿಸಿ ಅವರ ಲಂಕೇಶ್ ವಾರಪತ್ರಿಕೆಯಲ್ಲಿ ಮುಖಪುಟದ ಸುದ್ದಿ ಮಾಡಿದ್ದರು.
1992 ರ ಡಿಸೆಂಬರ್ 6ರಂದು ಸಾಗರದಿಂದ ಕರಸೇವಕರಾಗಿ ಹೋಗಿದ್ದವರಲ್ಲಿ ನನಗೆ ಪರಿಚಯ ಇರುವವರು ಸಾಗರದ ಬಸ್ ಏಜೆಂಟರಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಪ್ರಾಣೇಶ್ ಒಬ್ಬರೆ.
2019 ರ ನವೆಂಬರ್ 9 ರಂದು ನನ್ನ ಮಗಳ ವಿವಾಹದ ನಾಂದಿ ಪೂಜೆಯ ಸಮಯದಲ್ಲೇ ಅಯೋದ್ಯೆಯ ತೀರ್ಪು ಪ್ರಕಟ ಆಗಿತ್ತು ಮರುದಿನವೇ ಮಗಳ ವಿವಾಹ ಈ ಸಮಯದಲ್ಲೇ ಹುಬ್ಬಳ್ಳಿಯಿಂದ ಬೀಗರ ಮನೆಯ ದಿಬ್ಬಣದ ಬಸ್ಸು ನಮ್ಮ ಊರಿನ ಮಾರ್ಗದಲ್ಲಿತ್ತು.
ಪುಣ್ಯಕ್ಕೆ ದೇಶದಾದ್ಯಂತ ಯಾವುದೇ ಗಲಭೆ- ರಸ್ತೆ ಬಂದ್-ಇತ್ಯಾದಿ ನಡೆಯಲಿಲ್ಲ ತೀರ್ಪು ಶಾಂತಿಯಿಂದ ಸ್ವೀಕರಿಸಿದ್ದರಿಂದ ಶ್ರೀರಾಮನ ಕೃಪೆಯಿಂದ ನನ್ನ ಮಗಳ ವಿವಾಹ ಸಾಂಗವಾಗಿ ನೆರವೇರಿತು.
ರಾಮಾಯಣದ ದಾರಾವಾಹಿ ದೂರದರ್ಶನದಲ್ಲಿ ಬರುವಾಗ ನಮ್ಮ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟೀವಿ ಇತ್ತು, ನಡು ಮನೆಯ ಸಣ್ಣ ಹಾಲ್ ನಲ್ಲಿ ಇಡೀ ಊರವರು ಒಬ್ಬರಿಗೊಬ್ಬರು ಒತ್ತಿಕೊಂಡು ಕುಳಿತು ಪ್ರತಿ ಭಾನುವಾರ ಟೀವಿ ನೋಡುವುದು ಮಾಮೂಲಾಗಿತ್ತು.
ಗಾಂಧೀಜಿ ಅವರ ರಾಮ ಭಜನೆ, ಕುವೆಂಪು ಅವರ ರಾಮಾಯಣ ದರ್ಶನಂ, ನಾಟಕ, ಸಿನಿಮಾ, ಯಕ್ಷಗಾನಗಳಲ್ಲಿ ಹಾಸುಹೊಕ್ಕಾಗಿರುವ ರಾಮಾಯಣ ಗೊತ್ತಿಲ್ಲದವರು ಯಾರೂ ಇಲ್ಲ.
ಶ್ರೀರಾಮಚಂದ್ರನ ಆಡಳಿತದಲ್ಲಿ ಲಂಚ -ಭ್ರಷ್ಟಾಚಾರ - ಅತ್ಯಾಚಾರ ಇರಲೇ ಇಲ್ಲ, ಪ್ರಜೆಗಳನ್ನು ಪೀಡಿಸುವ ಸುಂಕ - ಕಂದಾಯ ಇರಲಿಲ್ಲ.
ಹಿಂದೂ ಪುರಾಣದಲ್ಲಿ ಆದರ್ಶ ಮಹಿಳೆಯರು ಅನೇಕರಿದ್ದಾರೆ ಆದರೆ ಆದರ್ಶ ಪುರುಷ ಶ್ರೀರಾಮಚಂದ್ರರೊಬ್ಬರೆ.
Comments
Post a Comment