#ಸಜ್ಜನ_ಮಾಜಿಶಾಸಕರಾದ_ಪಟಮಕ್ಕಿರತ್ನಾಕರ್_ನಮ್ಮನ್ನು_ಆಗಲಿ_ಏಳು_ವರ್ಷ_ಆಗುತ್ತಾ_ಬಂತು.
#ಆದರೆ_ಅವರ_ನೆನಪು_ಮರೆಯಲಾಗುತ್ತಿಲ್ಲ.
#ಅವರು_ಹೇಳಿದ_ಅವರ_ಬಿ_ಪಾರಂ_ಬದಲಾದ_ಕಥೆ
#ಚುನಾವಣಾ_ಟಿಕೇಟು_ಅದರದ್ದೇ_ದೊಡ್ಡ_ಕತೆ
#ಬೈಂದೂರು_ವಿದಾನ_ಸಭಾ_ಕ್ಷೇತ್ರದ_ಬಿಜೆಪಿ_ಟಿಕೇಟಿನ_ಕೊಟ್ಯಾಂತರ_ಹಣ_ಮೋಸದಿಂದ_ಜೈಲು_ಪಾಲದ_ಕಥೆ
#ಆದ್ದರಿಂದಲೇ_ಪಾರ್ಲಿಮೆಂಟಿನಿಂದ_ತಾಲ್ಲೂಕು_ಪಂಚಾಯಿತಿ_ತನಕ_ದೇವೇಗೌಡರೇ_ಸಹಿ_ಹಾಕಿ_ಬಿ_ಪಾರಂ_ನೀಡುವುದು.
#ಶಿವಮೊಗ್ಗ_ಜಿಲ್ಲೆಯ_ಸುಸಂಸ್ಕೃತ_ತಾಲ್ಲೂಕು_ತೀರ್ಥಹಳ್ಳಿ
#ಪಕ್ಕದ_ಚಿಕ್ಕಮಗಳೂರು_ಜಿಲ್ಲೆಯ_ಕೊಪ್ಪ,
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಮತ್ತು ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದೇ ರೀತಿ ಇರುವ ಅಕ್ಕ ಪಕ್ಕದ ತಾಲ್ಲೂಕುಗಳು.
ಇಲ್ಲಿನ ಜನರ ಮಾತು ಆಹಾರದ ಕ್ರಮ ಹಾಸ್ಯ ಪ್ರಜ್ಞೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಮುಂದೆ ಯಾವಾಗಲಾದರು ಜಿಲ್ಲೆಗಳ ಮರು ಮಾರ್ಪಾಡು ಆಗುವುದಾರೆ ತೀರ್ಥಹಳ್ಳಿ ಮತ್ತು ಕೊಪ್ಪ ಶಿವಮೊಗ್ಗ ಜಿಲ್ಲೆಗೆ ಸೇರಿಸಬೇಕು ಎನ್ನುವುದು ನನ್ನ ಅಭಿಪ್ರಾಯ.
ಇಂತಹ ಸುಸಂಸ್ಕೃತಿಕ ಕುವೆಂಪು ನಾಡದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಯಾರೂ ನಿರೀಕ್ಷಿಸದ ಪಟಮಕ್ಕಿ ರತ್ನಾಕರ್ ಗೆ 1985 ರಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟು ಸಿಗುತ್ತದೆ.
ಸಾಮಾನ್ಯವಾಗಿ ಚುನಾವಣೆಯಲ್ಲಿ ಲಡಾಯಿ ಮಾಡುವ ಪರ್ಸನಾಲಿಟಿ ಕನಿಷ್ಟ ಅರ್ಹತೆ ಅಂದರೆ ಹಣ, ಗಟ್ಟಿ ಧ್ವನಿ, ಹೊಡಿ ಬಡಿ ಎಂಬ ಪಟಾಲಂ ಇತ್ಯಾದಿಗಳು ಇಲ್ಲದ ಮೆದು ಮಾತಿನ ಅತ್ಯಂತ ಬಡತನದ ಆ ಸಮಯದಲ್ಲಿ ಮದುವೆ ಕೂಡ ಆಗಿರದ ಪಟಮಕ್ಕಿ ರತ್ನಾಕರ್ ಆ ಕಾಲದ ರಾಜಕಾರಣದಲ್ಲಿ ದಿಗ್ಗಜರಾಗಿದ್ದ ಡಿ.ಬಿ.ಚಂದ್ರೇಗೌಡರನ್ನೇ ಸೋಲಿಸಿ ವಿದಾನ ಸಭೆಗೆ ಆಯ್ಕೆ ಆಗಿದ್ದು ದೊಡ್ಡ ದಾಖಲೆ ಆಗಿದೆ.
ಸಜ್ಜನ ವ್ಯಕ್ತಿತ್ವದ ಬರಹ ಓದುಗಳಲ್ಲಿ ತೊಡಗಿದ್ದ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ತೀರ್ಥಹಳ್ಳಿಯ ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್ ನಮ್ಮನ್ನು ಅಗಲಿ ಏಳು ವರ್ಷಗಳಾಗುತ್ತಿದೆ.
ನಾನು, ರಿಪ್ಪನಪೇಟೆಯ ತ.ಮ.ನರಸಿಂಹ ಮತ್ತು ಪಟಮಕ್ಕಿ ರತ್ನಾಕರ್ ಮೈಸೂರು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ಸಂಸ್ಥೆಯಲ್ಲಿ ಎಂ.ಎ. ಪದವಿಗೆ ಸೇರಿದ್ದೆವು ಆದರೆ ನಮ್ಮ ಅವತ್ತಿನ ಜೀವನದ ಜಂಜಾಟದಿಂದ ಮೂವರೂ ಅದನ್ನು ಮುಗಿಸಲಿಲ್ಲ.
ತಮ್ಮ ಮಾತು ನಡೆತೆಗಳಿಂದ ಪಟಮಕ್ಕಿ ರತ್ನಾಕರ್ ಬೇರಾವ ರಾಜಕಾರಣಿಗಳಿಗಿಂತ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಇವರು ಶುದ್ಧ ಸಸ್ಯಹಾರಿಗಳಾದ ಸಾತ್ವಿಕರು.
ರೈಲು, ಬಸ್ಸು, ಸಿನಿಮಾ, ಸರ್ಕಸ್ಸು ಇತ್ಯಾದಿಗಳಿಗೆ ಹೋಗಲು ಟಿಕೇಟು ಬೇಕು ಅದೇ ರೀತಿ 5 ವರ್ಷಕ್ಕೊಮ್ಮೆ ಬರುವ ಚುನಾವಣೆಗೆ ಸ್ಪರ್ಧಿಸಲು ಆಯಾ ರಾಜಕೀಯ ಪಕ್ಷದ ಟಿಕೇಟು ಪಡೆಯ ಬೇಕು ಇದನ್ನು ಬಿ ಪಾರಂ ಎನ್ನುತ್ತಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಟಿಕೇಟು ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಕೆಲವು ಕೋಟಿ ಕಳೆದು ಕೊಂಡಿದ್ದು ಮತ್ತು ಅವರಿಗೆ ಮೋಸ ಮಾಡಿದ ಬಿಜೆಪಿಯು ಪ್ರಖರ ಭಾಷಣಗಾರ್ತಿ ಜೈಲಿಗೆ ಸೇರಿದ್ದು ದೊಡ್ಡ ಸುದ್ದಿ ಆಗಿತ್ತು.
ಆದರೆ ರಾಜಕಾರಣದಲ್ಲಿ ಅಂತಹ ನೂರಾರು ಪ್ರಕರಣ ಇದ್ದರೂ ಹೊರ ಬರುವುದಿಲ್ಲ, ದೊಡ್ಡ ರಾಜಕೀಯ ಪಕ್ಷಗಳು ಹಣ, ಜಾತಿ ಅಥವ ಬೇರೆ ಪಕ್ಷದ ಅಭ್ಯರ್ಥಿಯ ಒಳ ಒಪ್ಪಂದಗಳಿಂದ, ಪ್ರಭಾವಿ ಸ್ತ್ರೀಯರ ಶಿಪಾರಸ್ಸುಗಳಿಂದ ಕೊನೆಯ ಕ್ಷಣದಲ್ಲಿ ಬಿ ಪಾರಂ ನೀಡುವ ಬದಲಿಸುವ ಕೆಲಸ ಮಾಡುತ್ತಾರೆ.
ಈ ಎಲ್ಲಾ ಕಾರಣದಿಂದ ಜೆ.ಡಿ.ಎಸ್.ನ ಸುಪ್ರಿಮೋ ದೇವೇಗೌಡರು ಇವತ್ತಿನವರೆಗೂ ಅವರ ಪಕ್ಷದ ಲೋಕಸಭಾ ಅಭ್ಯರ್ಥಿಯಿಂದ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿವರೆಗೆ ಬಿ ಪಾರಂ ಸಹಿ ಹಾಕಿ ನೀಡುವ ಅಧಿಕಾರ ಅವರೇ ಇಟ್ಟುಕೊಂಡಿದ್ದಾರೆ ಸ್ವತಃ ಇವರ ಮಗ ಮುಖ್ಯಮಂತ್ರಿ ಆಗಿದ್ದ ಕುಮಾರ ಸ್ವಾಮಿ ಅವರಿಗೂ ಈ ಅಧಿಕಾರ ನೀಡಿಲ್ಲ ಬಹುಶಃ ದೇವೇಗೌಡರಂತ ಕುಶಾಗ್ರಮತಿ ರಾಜಕಾರಣಿ ನಮ್ಮ ದೇಶದಲ್ಲಿ ಬೇರೆ ಯಾರೂ ಇಲ್ಲ.
ಪಟಮಕ್ಕಿ ರತ್ನಾಕರ್ ಸಣ್ಣ ವಯಸ್ಸಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆದು ತೀಥ೯ಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಅವರೊಂದಿಗೆ ನನ್ನ ಒಡನಾಟ ಇರಲಿಲ್ಲ.
ಶಿವಮೊಗ್ಗ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದಾಗ ಒಮ್ಮೆ ಅಧ್ಯಕ್ಷನಾಗುವಂತ ಅವಕಾಶ ಉಂಟಾಗಿತ್ತು ಆಗ ಸಂಸದರಾದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ನನಗೆ ಈ ಬಗ್ಗೆ ಮು೦ದುವರಿಯಲು ಹೇಳಿದ್ದರು.
ಆಗ ಮಾಜಿ ಶಾಸಕರಾಗಿದ್ದ ಸ್ವಾಮಿ ರಾವ್, ಕರಿಯಣ್ಣ ಮತ್ತು ಪಟ ಮಕ್ಕಿಯವರನ್ನು ಸೇರಿಸಿ ಒಂದು ಸಮಿತಿ ಮಾಡಿ ಬೇರೆ ಪಕ್ಷ ಮತ್ತು ನಾಯಕರ ಜೊತೆ ಮಾತುಕತೆ ಮಾಡಲು ಜವಾಬ್ದಾರಿ ನೀಡಿದ್ದರು ಜೊತೆಗೆ ರಿಪ್ಪನ್ ಪೇಟೆ ಅಮೀರ್ ಹಂಜಾ ಮತ್ತು ಬಿ.ಪಿ.ರಾಮಚಂದ್ರ ನಮ್ಮ ಜೊತೆ ಇದ್ದರು.
ಹಾಗಾಗಿ ನನಗೆ ಈ ಮೂವರು ಮಾಜಿ ಶಾಸಕರ ಒಡನಾಟ ಹೆಚ್ಚಾಗಿ ಆಯಿತು, ಸುಮಾರು ಒಂದು ತಿಂಗಳು ತಿರುಗಾಟದಲ್ಲಿ ಅವರ ಅನುಭವಗಳು ನನಗೆ ತಿಳಿಯಲು ಸಾಧ್ಯವಾಯಿತು.ಮೂವರೂ ಸಜ್ಜನರು, ಮಧ್ಯಪಾನ ಮಾಡುವವರಲ್ಲ ಅದರಲ್ಲಿ ಕರಿಯಣ್ಣ ಮತ್ತು ಸ್ವಾಮಿ ರಾಯರು ಮಾಂಸಹಾರ ಪ್ರಿಯರು ಆದರೆ ಪಟಮಕ್ಕಿ ಮಾತ್ರ ಶುದ್ದ ಸಸ್ಯಹಾರಿ ಮತ್ತು ದೇವರು, ಧ್ಯಾನ ಮತ್ತು ನಿರ೦ತರ ಓದು ಅವರ ಹವ್ಯಾಸವಾಗಿತ್ತು.
ಕೆಲವು ಹಿತ ಶತೃಗಳು, ಪಟ್ಟ ಬದ್ರ ಹಿತಾಸಕ್ತಿಗಳು ಕೊನೆಯ ದಿನದಲ್ಲಿ ನನಗೆ ಅಧ್ಯಕ್ಷನಾಗಿ ಮಾಡಿದರೆ ತಮ್ಮ ಘನತೆಗೆ ದಕ್ಕೆ ಎಂದು, ಯಾವ ಕಾರಣಕ್ಕೂ ಅಧ್ಯಕ್ಷ ಸ್ಥಾನ ನನಗೆ ಸಿಗಬಾರದೆಂದು ಸಂಸದ ಬಂಗಾರಪ್ಪರನ್ನೇ ದಾರಿ ತಪ್ಪಿಸಿದರು.
ಅವರೆಲ್ಲ ಬಂಗಾರಪ್ಪರ ವಿರುದ್ಧವಾಗಿದ್ದಾಗ ನಾನು ಬಂಗಾರಪ್ಪರ ಪರವಿದ್ದುದು ಇವರಿಗೆಲ್ಲ ಸಿಟ್ಟು ಬಂದಿತ್ತು. ಆ ಸಿಟ್ಟು ಬಂಗಾರಪ್ಪರಿಂದನೆ ನನ್ನ ಮೇಲೆ ತಿರುಗಿಸಿ ತೀರಿಸಿಕೊಂಡು ತೃಪ್ತರಾಗಿದ್ದು ಪ್ರಸಕ್ತ ರಾಜಕಾರಣದ ಒಳಗುಟ್ಟು.
ಅವತ್ತು ರಾತ್ರಿ ಎಸ್.ಟಿ.ಡಿ. ಬೂತ್ ಒಂದರಿಂದ ಮಾಜಿ ಶಾಸಕರಾದ ಸ್ವಾಮಿ ರಾವ್ ದೆಹಲಿಯಲ್ಲಿದ್ದ ಸಂಸದ ಬಂಗಾರಪ್ಪರಿಗೆ ಫೋನ್ ಮಾಡಿದಾಗ ನಾನು ಇನ್ನೊಂದು ಪೋನಿನಲ್ಲಿ ಅವರ ಸಂಬಾಷಣೆ ಕೇಳಿಸಿ ಕೊಳ್ಳುತ್ತಿದ್ದೆ ...ಆಗ ಬಂಗಾರಪ್ಪನವರು ಅವರ ವಿರೋದಿಗಳಿಗೆ ಮಣೆ ಹಾಕಿದ್ದು ಗೊತ್ತಾಯಿತು ಮತ್ತು ನಾನು ಶಸ್ತ್ರ ತ್ಯಾಗ ಮಾಡಿದೆ.
ಅಲ್ಲಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರ ಮನೆಗೆ ಸ್ವಾಮಿ ರಾವ್ ಜೊತೆ ಹೋಗಿದ್ದೆ, ಆ ತಡ ರಾತ್ರಿಯಲ್ಲಿ ನಮಗೆ ಟೀ ಕೊಟ್ಟು ಉಪಚರಿಸಿದ ಅಯನೂರು ಮಂಜುನಾಥರು ಆ ವಿದಾನ ಸಭಾ ಚುನಾವಣೆಯಲ್ಲಿ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ಸ್ವಾಮಿ ರಾವರನ್ನ ಸೋಲಿಸಿ ಶಾಸಕರಾಗಿದ್ದರು, ಅವತ್ತಿನವರೆಗೆ ಅವರಿಬ್ಬರು ಪರಸ್ಪರ ಎದುರಾಗಿರರಿಲ್ಲ, ಅವತ್ತು ನನಗೊಸ್ಕರ ಅವರಿಬ್ಬರ ಮಧ್ಯರಾತ್ರಿ ಬೇಟಿ ಆಗಿತ್ತು.
ಅಲ್ಲಿಂದ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾದ ಅರುಣ್ ಮನೆಗೆ ಹೋದೆವು, ಅದು ಬೆಳದಿಂಗಳ ಮದ್ಯರಾತ್ರಿಯ ಸಮಯ, ಅವರು ನಾನು ಅಧ್ಯಕ್ಷ ನಾಗಬೇಕೆಂದು ಬಯಸಿ ತೆರೆಮರೆಯಲ್ಲಿ ಬೆಂಬಲಿಸಿದ್ದವರು,ಅವರಿಗೆ ವೈಯಕ್ತಿಕ ದನ್ಯವಾದ ಹೇಳಿ ನಮ್ಮ ಅದಿಕಾರ ಪಡೆಯುವ ಹೋರಾಟದಲ್ಲಿನ ವಿಫಲತೆ ಬಗ್ಗೆ ತಿಳಿಸಿದಾಗ ಜೊತೆಯಲ್ಲಿದ್ದ ಪಟಮಕ್ಕಿಯವರು ತಮ್ಮ ಸ್ವಂತ ಅನುಭವ ಒಂದನ್ನ ಇಂಡಿಯನ್ ಎಕ್ಸ್ ಪ್ರೆಸ್ ಅರುಣ್ ರ ಮನೆ ಎದುರಿನ ಮರದ ಕೆಳಗೆ ಚಂದ್ರನ ಬೆಳಕಿನ ನೆರಳಲ್ಲಿ, ನೀರವ ಮದ್ಯರಾತ್ರಿಯಲ್ಲಿ ಹೇಳಿದ್ದು ಕೇಳಿ ನಾವೆಲ್ಲ ಕೈಗೆ ಸಿಕ್ಕಲಿದ್ದ ಅಧಿಕಾರ ಕಳೆದು ಕೊಂಡ ಬೇಸರದಲ್ಲಿದ್ದವರು ಅದೆಲ್ಲ ಮರೆತು ನಗುತ್ತಾ ಉಳಿದ ರಾತ್ರಿ ಕಳೆಯಲು ಲಾಡ್ಜ್ ಗೆ ಹಿಂದುರುಗಿದೆವು.
ಅವರು ಹೇಳಿದ್ದು ಏನೆಂದರೆ ಒಂದು ಅವದಿ ಶಾಸಕರಾಗಿದ್ದ ಅವರಿಗೆ ವಿದಾನಸಭಾ ಚುನಾವಣೆಯ ಎರಡನೆ ಅವಧಿಗೂ ಬಿ ಪಾರಂ ಸಿಕ್ಕಿತ್ತು, ಈ ಸುದ್ದಿ ಸಂಜೆ ಪತ್ರಿಕೆಯಲ್ಲಿ ಓದಿದ ಅವರ ಮೈಸೂರಿನ ಮಿತ್ರ ಬೆಳಿಗ್ಗೆ ಮೈಸೂರಿಗೆ ಬಂದು ಅವರು ಆಗಷ್ಟೆ ಖರೀದಿ ಮಾಡಿದ್ದ ಹೊಸ ಕಾರು ತೀರ್ಥಹಳ್ಳಿಗೆ ಚುನಾವಣ ಪ್ರಚಾರಕ್ಕೆ ತೆಗೆದು ಕೊಂಡು ಹೋಗುವಂತೆ ಪೋನ್ ನಲ್ಲಿ ತಿಳಿಸಿದಾಗ ಇವರು ತಕ್ಷಣ ಒಪ್ಪಿದರಂತೆ, ಯಾಕೆಂದರೆ ಆಗೆಲ್ಲ ಒಂದು ಕಾರು ಪ್ರಚಾರಕ್ಕೆ ಸಿಗುತ್ತೆ೦ದರೆ ದೊಡ್ಡ ಉಪಕಾರ.
ಬೆಳಿಗ್ಗೆ ಮೈಸೂರಿಗೆ ಹೋಗುವ ಮೊದಲು ಕೆ.ಪಿ.ಸಿ.ಸಿ ಕಚೇರಿಗೆ ಹೋಗಿ ಬಿ.ಪಾರಂ ನಲ್ಲಿ ಇವರ ಇನಿಷಿಯಲ್ ಬಿಟ್ಟು ಹೋಗಿದ್ದು ಸೇರಿಸಿ ಸರಿ ಮಾಡಿಸಿಕೊಂಡು ಹೋಗಲು ಹೋದಾಗ ಬೆಳ್ಳಂಬೆಳಗೆ ಸಿಬ್ಬ೦ದಿಗಳು ಕಾಂಗ್ರೇಸ್ ಕಛೇರಿಗೆ ಇನ್ನೂ ಬಂದಿರಲಿಲ್ಲವಾದ್ದರಿಂದ ಅಲ್ಲಿ ಇದ್ದ ಜವಾಬ್ದಾರಿ ವ್ಯಕ್ತಿ ಕೈಯಲ್ಲಿ ಬಿ.ಪಾರಂ ಕೊಟ್ಟು, ಮೈಸೂರಿಗೆ ಹೋಗಿ ಸ೦ಜೆ ಬಂದು ತೆಗೆದು ಕೊಂಡು ಹೋಗುವುದಾಗಿ ತಿಳಿಸಿ ಮೈಸೂರಿಗೆ ಹೋದರಂತೆ.
ಗೆಳೆಯರ ಮನೆಯಲ್ಲಿ ಮದ್ಯಾನ್ನ ಊಟ ಮಾಡಿ ಅವರ ಹೊಸ ಕಾರಿನೊಂದಿಗೆ ಬೆಂಗಳೂರಿನ ಕಾಂಗ್ರೇಸ್ ಕಚೇರಿಗೆ ಬಂದು ನೋಡುತ್ತಾರೆ ಅಲ್ಲಿ ಇವರು ಬೆಳಿಗ್ಗೆ ಇನಿಷಯಲ್ ಬದಲಿಸಲು ಕೊಟ್ಟ ಬಿ.ಪಾರಂ ಇವರ ಹೆಸರೇ ಬದಲಾಗಿ ಕಡಿದಾಳು ದಿವಾಕರಗೆ ನೀಡಲಾಗಿತ್ತ೦ತೆ.!! ....ಅವಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು ಅಂತ ಅರುಣ್ ಕೇಳಿದರು ನಾವೆಲ್ಲ ನಮ್ಮ ಅವತ್ತಿನ ರಾಜಕೀಯ ಅಧಿಕಾರ ಪಡೆಯುವ ಸಂದಭ೯ದಲ್ಲಿ ರಾಜಕೀಯ ಚದುರಂಗದಾಟಕ್ಕೆ ಬಲಿಯಾದ ನೋವು, ಹತಾಷೆ ಮತ್ತು ಸಿಟ್ಟು ಮರೆತು ಪಟಮಕ್ಕಿಯವರ ಬಿ.ಪಾರಂ ಕ್ಲೈಮಾಕ್ಸ್ ಬಗ್ಗೆ ತಿಳಿದುಕೊಳ್ಳಲು ಕಾತುರವಾಗಿದೆವು.
ಅವಾಗ ಪಟಮಕ್ಕಿಯವರು ಇನ್ನೇನು ಮಾಡಲಿ ಎದುರಿಗೆ ಬಂದ ಕಡಿದಾಳು ದಿವಾಕರಗೆ ಬೆಸ್ಟ್ ಆಫ್ ಲಕ್ ಅಂದೆ ಅಂದಾಗ ಸಂಜೆಯಿ೦ದ ಮದ್ಯರಾತ್ರಿ ತನಕ ಮಡು ಕಟ್ಟಿದ ಹತಾಶೆ ಕ್ಷಣಮಾತ್ರದಲ್ಲಿ ಕಣ್ಮಮರೆ ಆಗಿ ಅಲ್ಲಿ ತೆಳುವಾದ ನಗೆ ಹರಡಿತ್ತು.
ಆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆಗಿದ್ದ ಕಡಿದಾಳು ದಿವಾಕರ್ ಸೋತು ಜನತಾ ಪಕ್ಷದ ಡಿ.ಬಿ.ಚಂದ್ರೇಗೌಡರು ಗೆದ್ದರು.
ಇವತ್ತು ಪಟಮಕ್ಕಿ ರತ್ನಕರ್ ನಮ್ಮೊಡನೆ ಇಲ್ಲ ಆದರೆ ಅವರ ಒಡನಾಟದ ನೆನಪು ಸದಾ ಇದೆ.
Comments
Post a Comment