Skip to main content

Blog number 1582. ಡಾಕ್ಟರ್ ಪ್ರಸನ್ನ ಸಂತೆ ಕಡೂರು ಅವರ ಲೇಖನದಲ್ಲಿ ನನ್ನ ಕಾದಂಬರಿ ಉಲ್ಲೇಖ.

#ಡಾಕ್ಟರ್_ಪ್ರಸನ್ನ_ಸಂತೆಕಡೂರು_ಶಿವಮೊಗ್ಗ_ಜಿಲ್ಲೆಯವರೆಂಬುದೇ_ನನಗೆ_ಹೆಮ್ಮೆ


    ಬಾಲ್ಯದಲ್ಲೇ ಇವರ ಪ್ರತಿಭೆ ಗುರುತಿಸಿದವರು ಡಾ.ಶಿವರಾಂ ಕಾರಂತರು,ಇವರ ಶಾಲೆಗೆ ಸಮಾರಂಭ ಒಂದರಲ್ಲಿ ಭಾಗವಹಿಸಲು ಬಂದಾಗ ಚಿಕ್ಕ ಹುಡುಗ ಬಿಗ್ ಬ್ಯಾಂಗ್ ಬಗ್ಗೆ ಕೇಳಿದ್ದು ಅವರಿಗೆ ಕಾರಂತರಿಗೆ ಇಷ್ಟ ಆಗಿತ್ತು ಆದರೆ ಇವರಿಗೆ ಕಾರಂತರ ಬೇಟಿಗೆ ಅವಕಾಶ ಸಿಗುವುದಿಲ್ಲ ಇದು ಬಾಲಕನಿಗೆ ನಿರಾಶೆ ತರುತ್ತದೆ.
      ಶಾಲಾ ಕಾರ್ಯಕ್ರಮದ ನಂತರ ಶಿವರಾಂ ಕಾರಂತರೇ ಮಹತ್ವದ ಪ್ರಶ್ನೆ ಕೇಳಿದ ಭಾಲಕ ಎಲ್ಲಿ ಕರೆಯಿರಿ ಅನ್ನುತ್ತಾರೆ ಆದರೆ ಇವರು ತಮ್ಮ ಹಳ್ಳಿಗೆ ಬಸ್ ತಪ್ಪಿ ನಡೆದು ಹೋಗಿರುತ್ತಾರೆ, ಕೆಲ ದಿನದ ನಂತರ ಕಾರಂತರು ಪುಸ್ತಕದ ಸಣ್ಣ ಕಂತೆಯನ್ನು ಇವರ ಶಾಲಾ ಮುಖ್ಯಸ್ಥರಿಗೆ ಕಳಿಸಿ ಇವರಿಗೆ ತಲುಪಿಸಲು ಹೇಳುತ್ತಾರೆ ಇದು ಇವರ ಜೀವನದಲ್ಲಿ ಒಂದು ಅಪೂರ್ವ ಘಟನೆ ಎಂದು ಡಾಕ್ಟರ್ ಪ್ರಸನ್ನ ಬರೆದು ಕೊಂಡಿದ್ದಾರೆ.
   ಬಡತನದಿಂದಲೇ ಓದಿ ವೈದ್ಯಲೋಕದ ಸಂಶೋದಕರಾಗಿ ಈಗ ಮೈಸೂರಿನ ಜೆ.ಎಸ್.ಎಸ್.ವೈದ್ಯ ಕಾಲೇಜಿನಲ್ಲಿದ್ದಾರೆ.
 ಕನ್ನಡದಲ್ಲಿ ಅನೇಕ ಪುಸ್ತಕ ಬರೆದದ್ದು ಪ್ರಕಟ ಆಗಿದೆ, ಕನ್ನಡ ಪುಸ್ತಕಗಳನ್ನು ಓದಿ ಅಭಿಪ್ರಾಯಿಸಿ ಪ್ರೋತ್ಸಾಹಿಸುವ ಇವರು ನಮ್ಮ ತಾಲ್ಲೂಕಿನ ಪ್ರಸಿದ್ಧ ಬರಹಗಾರರಾದ ಗಜಾನನ ಶರ್ಮರ #ಚೆನ್ನಾಭೈರಾದೇವಿ ಕಾದಂಬರಿ ಬಗ್ಗೆ ವಿಮರ್ಶೆ ಬರೆದಿದ್ದಾರೆ.
  ಈ ವಿಮಷೆ೯ಯಲ್ಲಿ ನಾನು ಬರೆದ #ಬೆಸ್ತರ_ರಾಣಿ_ಚಂಪಕಾ ಬಗ್ಗೆ ಕೂಡ #ಪ್ರಸನ್_ಸಂತೆಕಡೂರ್ ಉಲ್ಲೇಖಿಸಿದ್ದಾರೆ.
__ _***************************-__


ಡಾ. ಗಜಾನನ ಶರ್ಮರ "ಚೆನ್ನಭೈರಾದೇವಿ" ಕಾದಂಬರಿ ಓದಿ ಮುಗಿಸಿದ್ದೇನೆ. ನನ್ನ ಎರಡು ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 

ಸಾಮಾನ್ಯ ಓದುಗರಿಗೆ ಇದೊಂದು ಅದ್ಭುತ ರೋಚಕ ಕಾದಂಬರಿ. ರಾಣಿಯ ಚೆನ್ನಭೈರಾದೇವಿಯ ಬಗ್ಗೆ ಅಧ್ಯಯನ ಮಾಡಿ ಕನ್ನಡಿಗರಿಗೆ ತಿಳಿಯದೇ ಇದ್ದ ಎಷ್ಟೋ ವಿಷಯಗಳನ್ನು ಡಾ. ಗಜಾನನ ಶರ್ಮರು ಈ ಕಾದಂಬರಿಯ ಮೂಲಕ ಚೆನ್ನಾಗಿ ಚಿತ್ರಿಸಿದ್ದಾರೆ. ಕಾದಂಬರಿ ತೀವ್ರ ಕುತೂಹಲಕಾರಿಯಾಗಿ ಕೊನೆಯ ಪುಟದವರೆಗೂ ಓದಿಸಿಕೊಂಡು ಹೋಗುತ್ತದೆ. ಈ ಎಲ್ಲಾ ಕಾರಣದಿಂದ ನಾವು ಲೇಖಕರನ್ನ ಅಭಿನಂದಿಸಲೇ ಬೇಕು. ಇಂತಹ ಒಂದು ಕಾದಂಬರಿ ಕನ್ನಡ ಸಾಹಿತ್ಯಕ್ಕೂ ಮತ್ತು ಕನ್ನಡಿಗರ ಇತಿಹಾಸಕ್ಕೂ ಬೇಕಿತ್ತು. ಲೇಖಕರು ಆ ಭಾಗದವರೇ ಆಗಿರುವುದರಿಂದ ಅವರಿಗೆ ಅಲ್ಲಿ ಬರುವ ಊರುಗಳ ಹೆಸರು, ಕಾಡು, ನದಿಗಳ ಬಗ್ಗೆ ಅಪಾರವಾದ ಜ್ಞಾನವಿದೆ. ಈ ಕಾದಂಬರಿ ಮಹತ್ತರವಾದ ಕಾದಂಬರಿಯಾಗುವುದರಲ್ಲಿ ಸ್ವಲ್ಪ ಸೋತಿದೆ. ಹಾಗಾದರೆ, ಈ ಕಾದಂಬರಿ ಇನ್ನು ಮಹತ್ತರವಾಗುವಾಗ ಎಡವಿದ್ದೆಲ್ಲಿ? ಸೋಲಲು ಬಹುಮುಖ್ಯ  ಕಾರಣಗಳೇನು? 

ಕುವೆಂಪು ಅವರ "ರಕ್ತಾಕ್ಷಿ" ನಾಟಕ ಅಷ್ಟೊಂದು ಜನಪ್ರಿಯವಾದಾಗ ಮತ್ತು ಆ ನಂತರ ಮಾಸ್ತಿಯವರು "ಚೆನ್ನಬಸವ ನಾಯಕ" ಕಾದಂಬರಿ ಬರೆದಾಗ ಆ ಕಾದಂಬರಿ ಕೂಡ ಅಷ್ಟೇ ಜನಪ್ರಿಯತೆಯನ್ನು ಪಡೆಯಿತು. ಕಾರಣ ಅದು ಸುಮಾರು ಇನ್ನೂರು ಐವತ್ತು ವರ್ಷಗಳ ಕಾಲ ಕನ್ನಡನಾಡಿನ ಒಂದು ಭಾಗವನ್ನ ವೈಭವಯುತವಾಗಿ ಆಳುತ್ತಿದ್ದ ಸಂಸ್ಥಾನವೊಂದರ ಅವನತಿಯ ಕುರಿತ್ತಾದ್ದ ವಿಷಯಗಳನ್ನು ಒಳಗೊಂಡಿದ್ದು ಎಂದು ಹೇಳಬಹುದು. ಆ ಸಂಸ್ಥಾನದ ಕೊನೆಯ ರಾಣಿ ವೀರಮ್ಮಾಜಿಗೆ  ಅದೇ ಸಂಸ್ಥಾನದ ಚೆನ್ನಮ್ಮನಷ್ಟೇ ಸ್ಥಿರ ಸಂಕಲ್ಪ,ದೂರದೃಷ್ಟಿ ಹಾಗೂ ಕಲಿತನಗಳಿದ್ದರೂ ಸ್ತ್ರೀ ಸಹಜ ಮನುಷ್ಯ ಸಹಜ ಗುಣದಿಂದ ಮತ್ತು ಕೆಲವೊಂದು ತಪ್ಪು ನಿರ್ಧಾರಗಳಿಂದ ಹೈದರಾಲಿ ಜೊತೆಯ ನಿರ್ಣಾಯಕ ಯುದ್ಧದಲ್ಲಿ ಸೋಲಬೇಕಾಗುತ್ತದೆ. ಈ ಸೋಲು ಹೈದರಾಲಿ ಸುಲಭವಾಗಿ ಗೆದ್ದದ್ದಲ್ಲ. ಹೈದರಾಲಿ ಜಯಕ್ಕೆ ಸುಮಾರು ಆರು ತಿಂಗಳುಗಳ ಕಾಲ ಯುದ್ಧ ಮಾಡಬೇಕಾಗುತ್ತದೆ. ಜೊತೆಗೆ ರಾಣಿಯ ವೈಯುಕ್ತಿಕ ಬದುಕಿನ ಬಗ್ಗೆ ಅಪಪ್ರಚಾರ ಮಾಡಬೇಕಾಗುತ್ತದೆ. ಇಲ್ಲಿ ರಾಣಿಯ ಬದುಕು ಏನೇ ಇದ್ದರೂ ಯುದ್ಧದಲ್ಲಿ ಸೋಲಬೇಕಾಗಿ ಬಂದಾಗ ರಾಣಿ ಬಿದನೂರಿನಿಂದ ರಹಸ್ಯ ಮಾರ್ಗದ ಮೂಲಕ ಇಂದಿನ ಮೂಡಿಗೆರೆಯ ಸಮೀಪವಿರುವ ಚಾರ್ಮಾಡಿ ಘಾಟಿಯ ಮೇಲಿರುವ ಗಿರಿಕೋಟೆ ಬಲ್ಲಾಳರಾಯ ದುರ್ಗವನ್ನು ಸೇರುತ್ತಾಳೆ. ಮತ್ತೇ ಹಿತಶತ್ರುಗಳ ದ್ರೋಹದಿಂದ ಹೈದರಾಲಿಯ ಸೈನ್ಯಕ್ಕೆ ರಾಣಿ ಅಲ್ಲಿ ಸೆರೆ ಸಿಗಬೇಕಾಗುತ್ತದೆ. ಸೆರೆ ಸಿಕ್ಕಾಗ ರಾಣಿಯನ್ನು ಅವಳ ಸಾಕುಮಗನನ್ನು ಹೈದರಾಲಿ ಮಧುಗಿರಿಯ ಕೋಟೆಯಲ್ಲಿ ಬಂಧಿಸುತ್ತಾನೆ. ವೀರಮ್ಮಾಜಿ ಅಲ್ಲಿಯೂ ಸುಮ್ಮನೇ ಕೂರುವುದಿಲ್ಲ. ಅಲ್ಲಿಂದ ಮರಾಠರಿಗೆ ಪತ್ರ ಬರೆದು ಅವರ ಸಹಾಯದಿಂದ ಮಧುಗಿರಿಯ ಕೋಟೆಯಿಂದ ತಪ್ಪಿಸಿಕೊಂಡು ಮರಾಠರಿಗೆ ಹೈದರಾಲಿಯ ಮೇಲೆ ಯುದ್ಧ ಸಾರಲು ಹೇಳುತ್ತಾಳೆ. ರಟ್ಟೆಹಳ್ಳಿಯಲ್ಲಿ ನಡೆದ ಮರಾಠರ ಜೊತೆಯ ಯುದ್ಧದಲ್ಲಿ ಹೈದರಾಲಿ ಸೋಲುತ್ತಾನೆ. ರಾಣಿ ನರಗುಂದಕ್ಕೆ ಹೋಗುವ ಮಾರ್ಗದಲ್ಲಿ ಉಜ್ಜನಿಯಲ್ಲಿ ಅಸುನೀಗಬೇಕಾಗುತ್ತದೆ. ಅದು ಕೂಡ 
ಸೆರಮನೆಯಲ್ಲಿ ತೀವ್ರ ದಣಿದಿದ್ದರಿಂದ ಎಂದು ಹೇಳಬಹುದು. ಆದರೆ ತನ್ನ ಸಾಕುಮಗನನ್ನ ನರಗುಂದದ ದೇಸಾಯಿಯವರ ಕೈಗೆ ಸೇರುವಂತೆ ಮಾಡುತ್ತಾಳೆ. ರಾಣಿ ವೀರಮ್ಮಾಜಿ ತನ್ನ ಬದುಕಿನ ಕೊನೆಯವರೆಗೂ ವೀರೋಚಿತವಾಗಿ ಹೋರಾಡುತ್ತಾಳೆ. 

ಮಾಸ್ತಿಯವರು ತಮ್ಮ ಕಾದಂಬರಿಯಲ್ಲಿ ವೀರಮ್ಮಾಜಿಯ ಸೆರೆಸಿಗುವಲ್ಲಿಗೆ ಕಾದಂಬರಿಯನ್ನು ನಿಲ್ಲಿಸುತ್ತಾರೆ. ರಾಣಿಯ ವೈಯುಕ್ತಿಕ ಬದುಕನ್ನು ಆ ಕಾಲದ ನಂಬಿಕೆಗಳಿಗೆ ತಕ್ಕ ಹಾಗೆ ಮಾಸ್ತಿಯವರು ಚಿತ್ರಿಸಿದ್ದಾರೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಾಗ ತೀವ್ರ ವಿರೋಧವಾದದ್ದೂ ಕೂಡ ಮಾಸ್ತಿಯವರು ರಾಣಿಯ ಬದುಕನ್ನು ಅವಳ ದೌರ್ಬಲ್ಯಗಳನ್ನು ಚಿತ್ರಿಸಿದ ಕಾರಣಕ್ಕೆ ಎಂದು ಹೇಳಬಹುದು. ಮಾಸ್ತಿಯವರು ಆ ರೀತಿ ಚಿತ್ರಿಸಲು ಇತಿಹಾಸದ ದಾಖಲೆಗಳ ಮೊರೆ ಹೋಗಿದ್ದರು. ಮಾಸ್ತಿಯವರ ಬೆಂಬಲಕ್ಕೆ ನಿಂತ ಜಿ. ಪಿ. ರಾಜರತ್ನಂ ಅವರು ಬಿದನೂರಿನ ರಾಣಿ ವೀರಮ್ಮಾಜಿ ಎಂಬ ಪುಸ್ತಕ ಬರೆದರು. ಜೊತೆಗೆ ಕೆಳದಿ ಅರಸರ ಸಾಹಸ ಮತ್ತು ಅವರ ಆಡಳಿತದ ಬಗ್ಗೆ ತುಂಬಾ ಶ್ಲಾಘಿಸಿದ್ದಾರೆ. ಬಿದನೂರಿನ ರಾಣಿ ವೀರಮ್ಮಾಜಿಗೆ ಎಲ್ಲಾ ಅದ್ಭುತ ಗುಣಗಳಿದ್ದರೂ ತನ್ನ ಒಂದೇ ಒಂದು ಅವಿವೇಕದಿಂದ ಕೆಳದಿ ಸಂಸ್ಥಾನಕ್ಕೆ ಸೋಲಾಯಿತು ಎಂದು ಹೇಳುತ್ತಾರೆ. 

ರಾಣಿ ವೀರಮ್ಮಾಜಿಯ ಸ್ವಲ್ಪ ಬದುಕು ರಾಣಿ ಚೆನ್ನಭೈರಾದೇವಿಯ ಬದುಕಿನಂತೆಯೇ ಕಾಣುತ್ತದೆ. ಚೆನ್ನಭೈರಾದೇವಿ ಕಾದಂಬರಿ ಓದುವುದಕ್ಕಿಂತ ಮುಂಚೆ ನಮಗೆ ಈ ವಿಷಯಗಳು ತಿಳಿದಿರಬೇಕು. ಕೆಳದಿಯ ಅರಸರು ಶೃಂಗೇರಿ ಶಾರದಪೀಠವನ್ನು ಅಲ್ಲಿಯ ಮಠವನ್ನು ಜೀರ್ಣೋದ್ದಾರ ಮಾಡಿದವರು, ತಮ್ಮ ಸಂಸ್ಥಾನದ ಕೊನೆಯವರೆಗೂ ಅದನ್ನು ರಕ್ಷಿಸಿದವರು. ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ಕಟ್ಟಿಸಿದವರು. ಹುಂಚದಲ್ಲಿ ಮತ್ತು ನಗರದಲ್ಲಿ ಇಂದಿಗೂ ಜೈನ ಮಠಗಳು ಉಳಿದದ್ದು ಅವರ ಔದಾರ್ಯದಿಂದ ಮತ್ತು ಧರ್ಮ ಸಹಿಷ್ಣತೆಯಿಂದ ಎಂದು ಹೇಳಬಹುದು. ಸದಾಶಿವ ಸಾಗರ(ಸಾಗರ), ಬಿದನೂರು ನಗರ, ಚೆನ್ನಗಿರಿ, ಶಿವಮೊಗ್ಗ, ಕೆಳದಿ, ಇಕ್ಕೇರಿ, ಬಿದನೂರು, ಕವಲೇದುರ್ಗಗಳು, ನೂರಾರು ಅಗ್ರಹಾರಗಳು ಇಂದಿಗೂ ಇವೆ. ಅವರು ಕಟ್ಟಿಸಿದ ಹಲವಾರು ಕೆರೆಗಳಿವೆ, ಜನಪದರ ಪ್ರಸಿದ್ಧ ಮದಗದ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಾವಿರಾರು ಪುಷ್ಕರಣಿಗಳಿವೆ. ನದಿಗಳಿಗೆ ಅಲ್ಲಲ್ಲಿ ಅಣೆಗಳನ್ನು ಕಟ್ಟಿಸಿದ್ದಾರೆ. ಕಾಸರಗೋಡಿನಿಂದಿಡಿದು ಕಾರವಾರದವರೆಗೂ ಹಲವಾರು ಕೋಟೆಗಳನ್ನು ಕಟ್ಟಿಸಿದ್ದಾರೆ. ಗೆದ್ದ ಕೋಟೆಗೆಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಬಸರೂರು, ಬಾರಕೂರು, ಮಂಗಳೂರು, ಭಟ್ಕಳ, ಹೊನ್ನಾವರದ ಮೂಲಕ ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿಯೇ ವ್ಯಾಪಾರಗಳು ನಡೆಯುತ್ತಿದ್ದವು. ಅವು ಕೆಳದಿ ಅರಸರ ಕಾಲಕ್ಕೂ ಮುಂದುವರೆಯಿತು. ಕೆಳದಿ ಅರಸರು ಮುಸ್ಲಿಮರಿಗೂ ತಮ್ಮ ಸಂಸ್ಥಾನದಲ್ಲಿ ಸ್ಥಾನ ಕೊಟ್ಟಿದ್ದರು, ಸವಣೂರು ನವಾಬರ ಜೊತೆ ಕೆಳದಿ ಸಂಸ್ಥಾನದ ಸಂಬಂಧ ಉತ್ತಮವಾಗಿಯೇ ಇತ್ತು. ಅಷ್ಟು ಏಕೆ ವಿಜಯನಗರ ಸಾಮ್ರಾಜ್ಯ ಪತನದ ನಂತರ ಆ ವಂಶದ ಶ್ರೀರಂಗರಾಜನು ದೇಶಭ್ರಷ್ಟನಾಗಿ ದಿಕ್ಕಿಲ್ಲದೆ ಅಲೆಯುತ್ತಿದ್ದಾಗ ಕೆಳದಿಯ ಶಿವಪ್ಪನಾಯಕನು ಅವನಿಗೆ ಸಕ್ಕರೆ ಪಟ್ಟಣದಲ್ಲಿ ಪಟ್ಟಾಭಿಷೇಕ ಮಾಡಿರುವ ದಾಖಲೆಗಳಿವೆ. ಕೆಳದಿ ಹಿರಿಯ ವೆಂಕಟಪ್ಪ ನಾಯಕ ತನ್ನ ಮಗ ವೀರಭದ್ರ ನಾಯಕನಿಗೆ ವಿಜಯನಗರದ ಸಂಬಂಧಿ ಬೇಲೂರಿನ ವೆಂಕಟಾದ್ರಿ ನಾಯಕನ (ವೈಷ್ಣವರ) ಮಗಳು ಬಂಗಾರಮ್ಮನನ್ನು ತಂದುಕೊಳ್ಳುತ್ತಾನೆ. ಅವಳನ್ನು ಜಾಗರ ಸೀಮೆಯ (ಬಾಬಾಬುಡ್ಡನ್ ಗಿರಿ, ಮುಳ್ಳಯ್ಯನ ಗಿರಿ, ಬಲ್ಲಾಳ ರಾಯನ ದುರ್ಗಕ್ಕೆ) ರಾಣಿಯನ್ನಾಗಿ ಮಾಡಿದ ಉದಾಹರಣೆಗಳಿವೆ. ಅಷ್ಟೇ ಏಕೆ ಛತ್ರಪತಿ ಶಿವಾಜಿಯ ತಂದೆ ಶಹಾಜಿ ಭೋಂಸ್ಲೆ ಆಗಾಗ ಕೆಳದಿಯ ಮೇಲೆ ಬಿಜಾಪುರದ ಆದಿಲ್ ಶಾಹಿಗಳ ಪರವಾಗಿ ಯುದ್ಧ ಮಾಡುತ್ತ ಬಂದಿದ್ದರೂ ಶಿವಾಜಿಯ ಮಗ ರಾಜಾರಾಮ ರಕ್ಷಣೆ ಕೇಳಿ ಕೊಂಡು ಬಂದಾಗ ಕೆಳದಿ ಚೆನ್ನಮ್ಮ ರಕ್ಷಣೆ ಕೊಟ್ಟು ಮೊಘಲ್ ಸಾಮ್ರಾಟ ಔರಂಗಜೇಬನ ವಿರುದ್ಧವೇ ಹೋರಾಡಿದ ಘಟನೆಗಳಿಗೆ ಸಾಕ್ಷಿಗಳಿವೆ.  

ಇನ್ನು ರಾಣಿ ಚೆನ್ನಭೈರಾದೇವಿಯ ಹಾಡುವಳ್ಳಿ ಮತ್ತು ನಗಿರೆ ಸಂಸ್ಥಾನಗಳು ಕೆಳದಿಯ ಸಂಸ್ಥಾನದ ಪಕ್ಕದಲ್ಲಿಯೇ ಇದ್ದರೂ ಕೆಳದಿಯವರು ಅವಳ ಮೇಲೆ ಯುದ್ಧಕ್ಕೆ ಹೋಗದಿರಲೂ ಕಾರಣ ಅವಳು ವಿಜಯನಗರದ ಮಹಾಸಾಮ್ರಾಜ್ಯದಲ್ಲಿ ತಮ್ಮ ಹಾಗೆಯೇ ಸಾಮಂತ ರಾಣಿಯಾಗಿದ್ದಳು ಎಂಬ ಕಾರಣಕ್ಕೆ. ಇನ್ನೊಂದು ವಿಷಯ ತಿಳಿದಿರಲಿ ಘಟ್ಟದ ಮೇಲಿನಿಂದ ಘಟ್ಟದ ಕೆಳಗಿರುವವರ ಮೇಲೆ ಯುದ್ಧ ಮಾಡಲು ಜಯಗಳಿಸಲು ಸುಲಭಸಾಧ್ಯವಾಗುತ್ತದೆ. ಉಳ್ಳಾಲದ ರಾಣಿ ಅಬ್ಬಕ್ಕಳ ಬೆಂಬಲಕ್ಕೆ ಕೆಳದಿ ಅರಸರು ಸದಾ ಇದ್ದರು ಎಂದು ಇತಿಹಾಸ ಹೇಳುತ್ತದೆ.    ಇಷ್ಟೆಲ್ಲಾ ಕಾರಣಗಳಿದ್ದರೂ ಕೆಳದಿ ಸಂಸ್ಥಾನದವರು ರಾಣಿ ಚೆನ್ನಭೈರಾದೇವಿ ಮೇಲೆ ಯುದ್ಧಕ್ಕೆ ಹೋಗುವುದಿಲ್ಲ. ಅವರು ಯುದ್ಧಕ್ಕೆ ಹೋಗಬೇಕಾದ ಪರಿಸ್ಥಿತಿ ಬರುವುದು ರಾಣಿ ಚೆನ್ನಭೈರಾದೇವಿಯ ನಗಿರೆ ಸಂಸ್ಥಾನ ಬಿಜಾಪುರದ ಆದಿಲ್ ಶಾಹಿಗಳ ಅಥವಾ ಪೋರ್ಚುಗೀಸರ ವಶವಾದರೆ ಕೆಳದಿ ಸಂಸ್ಥಾನಕ್ಕೆ ಅಪಾಯ ಬರಬಹುದು ಎಂಬ ದೂರದೃಷ್ಟಿಯಿಂದ ಎಂದು ಹೇಳಬಹುದು. ಅದು ವಯ್ಯಸ್ಸಾದ ರಾಣಿ ತನ್ನ ಸಂಸ್ಥಾನಕ್ಕೆ ಮುಂದಿನ ವಾರಸುದಾರನನ್ನ ಹುಡುಕಬೇಕಾದ ಸಮಯದಲ್ಲಿ. ರಾಣಿ ಚೆನ್ನಭೈರಾದೇವಿಯನ್ನು ಗೆದ್ದ ಮೇಲೂ ಕೂಡ ಅವಳನ್ನು ಬಂಧಿಸಿದ ಮೇಲೂ ಹಾಡುವಳ್ಳಿ ಮತ್ತು ನಗಿರೆ ಸಂಸ್ಥಾನ, ಭಟ್ಕಳ, ಹೊನ್ನಾವರ, ಕುಮಟೆ, ಮಿರ್ಜಾನ್, ಕಾಗಲ್, ಮೇದಿನಿ, ಕಾನೂರು ಎಲ್ಲವೂ ತಮ್ಮ ವಶವಾದ ನಂತರವೂ ವೆಂಕಟಪ್ಪ ನಾಯಕ ರಾಣಿ ಚೆನ್ನಭೈರಾದೇವಿಯನ್ನು ತುಂಬಾ ಗೌರವಯುತವಾಗಿ ನಡೆಸಿಕೊಂಡು ಅವಳನ್ನು ಇಕ್ಕೇರಿಯಲ್ಲಿ ಅರಮನೆಯಂತಹ ಮನೆಯಲ್ಲಿಯೇ ಇಟ್ಟು ಅವಳಿಗೆ ಜಪ, ತಪ ಮಾಡಲು ಅನುವು ಮಾಡಿಕೊಡುತ್ತಾನೆ. ಅದಕ್ಕಾಗಿ ಒಬ್ಬ ಜೈನ ಗುರುಗಳನ್ನು ನೇಮಿಸುತ್ತಾನೆ. ಅವನ ರಾಣಿಯರಾರದ ವೀರಮ್ಮಾಜಿ ಮತ್ತು ಭದ್ರಮ್ಮಾಜಿಯರು ಆಗಾಗ ಬಂದು ಚೆನ್ನಭೈರಾದೇವಿಯ  ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಾರೆ. ಜೊತೆಗೆ ಚೆನ್ನಭೈರಾದೇವಿ ಸಲ್ಲೇಖನ ಕೈಗೊಂಡು ದೇಹ ತ್ಯಾಗ ಮಾಡಿದ ಮೇಲೂ ಇಕ್ಕೇರಿ ಸಮೀಪದ ಹಿಂದೆ ಅದೇ ಚೆನ್ನಭೈರಾದೇವಿಗೆ ಸೇರಿದ ಆವಿನಹಳ್ಳಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿಸಿ ಆ ಸಮಾಧಿಯ ಮೇಲೆ ನಿಶಿಧಿ ಮಂಟಪವನ್ನು ಸ್ಥಾಪಿಸುತ್ತಾನೆ. ಇದು ಹಿರಿಯ ವೆಂಕಟಪ್ಪನಾಯಕನ ದೊಡ್ಡ ಗುಣ. ಚೆನ್ನಭೈರಾದೇವಿಯ ಮೇಲೆ ದ್ವೇಷವಿದ್ದರೆ ವೆಂಕಟಪ್ಪ ನಾಯಕ ರಾಣಿಗೆ ಇಷ್ಟೆಲ್ಲಾ ಗೌರವ ಏಕೆ ಕೊಡುತ್ತಿದ್ದ.  

ಜೊತೆಗೆ ವೆಂಕಟಪ್ಪನಿಗಿಂತ ಮೊದಲಿದ್ದ ಕೆಳದಿ ರಾಮರಾಜ ನಾಯಕ(1580-1586) ಗೆರಸೊಪ್ಪೆಯಲ್ಲಿ ಐಕ್ಯವಾದಲ್ಲಿ ಆ ಸ್ಥಳದಲ್ಲಿಯೇ ಸಮಾಧಿಯಾಯಿತು ಎಂದು ಕೆಳದಿ ನೃಪವಿಜಯ ಹೇಳುತ್ತದೆ. ಇದು ಚೆನ್ನಭೈರಾದೇವಿಯ ಆಡಳಿತ ಸಮಯದಲ್ಲಿ ಎಂದು ಇತಿಹಾಸದಿಂದ ಗೊತ್ತಾಗುತ್ತದೆ. ರಾಮರಾಜ ನಾಯಕ ಗೇರುಸೊಪ್ಪೆಗೆ ಏಕೆ ಹೋಗಿದ್ದ? ಯುದ್ಧದಲ್ಲಿ ಸತ್ತನೇ ಅಥವಾ ಬೇರೆ ಏನೋ ಕೆಲಸಕ್ಕೋದಾಗ ಅಸುನೀಗಿದನೋ ತಿಳಿಯುವುದಿಲ್ಲ. ಅಥವಾ ಅವನಿಗೂ ಅವನ ಪಕ್ಕದ ರಾಜ್ಯ ನಗಿರೆ ಸಂಸ್ಥಾನಕ್ಕೂ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳಿದ್ದವೇ ಗೊತ್ತಿಲ್ಲ.  ಇದು ಗಜಾನನ ಶರ್ಮರ "ಚೆನ್ನಭೈರಾದೇವಿ" ಕಾದಂಬರಿಯಲ್ಲಿಯೂ ತಿಳಿಯುವುದಿಲ್ಲ.  ಇಷ್ಟೆಲ್ಲಾ ತನ್ನದೇ ಆದ  ಅದ್ಭುತ ಇತಿಹಾಸ ಇರುವ ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ಕೆಳದಿ ಅರಸರ ಬಗ್ಗೆ ಕೊನೆಯ ಪುಟಗಳಲ್ಲಿ ಬಿಟ್ಟರೆ ಬೇರೆಲ್ಲಾ ಕಡೆ ಕಳ ನಾಯಕರ ಹಾಗೆ ಗಜಾನನ ಶರ್ಮರು ಚಿತ್ರಿಸಿದ್ದಾರೆ. ಇಲ್ಲಿ ರಾಣಿಯನ್ನು ದೈವತ್ವಕ್ಕೆ ಏರಿಸಲು ಹೋಗಿದ್ದಾರೆ. ಕೆಳದಿಯವರು ಎಂದಿಗೂ ಚೆನ್ನಭೈರಾದೇವಿಯ ಮೇಲೆ ಕಾಲು ಕೆರೆದು ಯುದ್ಧಕ್ಕೆ ಹೋಗಿರುವ ದಾಖಲೆಗಳೂ ಇತಿಹಾಸದಲ್ಲಿ ಸಿಕ್ಕಿಲ್ಲ.  

ಇನ್ನೊಂದು ಮುಖ್ಯ ವಿಷಯವೆಂದರೆ ಯವ್ವನದ ಉತ್ತುಗಂದಲ್ಲಿರುವ ಚೆನ್ನಭೈರಾದೇವಿ ಮತ್ತು ಜೀನದತ್ತ ಕೆಲವೊಮ್ಮೆ ಒಂದೇ ಕುದುರೆಯಲ್ಲಿಯೇ ತಬ್ಬಿಕೊಂಡು ಕಾಡುಮೇಡು ಅಲೆಯುತ್ತಿರುತ್ತಾರೆ. ಸದಾ ಕಾಲ ಜೊತೆಯಲ್ಲಿರುತ್ತಾರೆ. ಕಾಡಿನಲ್ಲಿರುವ ಹಳ್ಳ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಬಹಳ ಸಮಯ ಗುರುಕುಲದಲ್ಲಿಯೂ ಜೊತೆಗಿರುತ್ತಾರೆ. ಆದರೂ ಅವರಿಬ್ಬರಿಗೆ ಮಧ್ಯ ದೈಹಿಕ ಸಂಬಂಧವಿರದಂತೆ ಅಥವಾ ಲೌಕಿಕ ವಯೋ ಸಹಜ ಗುಣಗಳನ್ನು ತಡೆದು ಅವರನ್ನು ಸಾತ್ವಿಕ ವ್ಯಕ್ತಿಗಳಾಗಿ ಚಿತ್ರಿಸಲು ಹೋಗಿ ಕಾದಂಬರಿ ಕೃತಕವಾಗುವಂತೆ ಮಾಡಿದ್ದಾರೆ. 

ಇನ್ನು ಶಾಸನಗಳಲ್ಲಿ ಚೆನ್ನಭೈರಾದೇವಿಗೂ ಕೃಷ್ಣರಸನಿಗೂ ಮದುವೆಯಾಗಿರುವುದನ್ನು ಇತಿಹಾಸ ಸಾರುತ್ತದೆ. ಇಲ್ಲಿ ಲೇಖಕರು ಅವರಿಬ್ಬರಿಗೂ ಮದುವೆಯಾಗಿಲ್ಲ ಎಂದು ಚಿತ್ರಿಸಿದ್ದಾರೆ. ಇಲ್ಲಿ ಚೆನ್ನಭೈರಾದೇವಿ ಹುಟ್ಟುತ್ತಲೇ ಸನ್ಯಾಸದ ಬಗ್ಗೆ ಆಸಕ್ತಿ ಹೊಂದಿದ್ದಳು ಎಂಬ ಭಾವ ಬಂದು ಕಾದಂಬರಿಯಲ್ಲಿ ಕೃತಕತೆ ಕಾಣುತ್ತದೆ.       
 
ಪಾತ್ರ ಪೋಷಣೆಯಲ್ಲಿಯೂ ಕೂಡ ಕೆಲವು ಕಡೆ ಸೋತಿದ್ದಾರೆ. ಚೆನ್ನಗೊಂಡನ ಪಾತ್ರವನ್ನು ಇತಿಹಾಸದ ಆಧಾರದ ಮೇಲೆ ಸೃಷಿಸಿದ್ದರೂ ಅವನಿಗೂ ರಾಣಿಗೂ ಹೆಚ್ಚು ಮಾತನಾಡುವ ಪ್ರಸಂಗವೇ ಕಾದಂಬರಿಯಲ್ಲಿ ಬರುವುದಿಲ್ಲ. ರಾಣಿಗೂ ಅವನಿಗೂ ವ್ಯಭಿಚಾರದ ಆರೋಪ ತರುವುದಕ್ಕಾದರೂ ಅವರಿಬ್ಬರನ್ನೂ ಯಾವುದೋ ಕ್ಷಣದಲ್ಲಿಯೂ ಹತ್ತಿರ ತರುವುದಿಲ್ಲ. ಬರಿ ಅಂಗರಕ್ಷಕನಾಗಿದ್ದ ಎಂದು ಹೇಳುತ್ತಾರೆ. ಆದರೆ ಅವನಿಂದಲೇ ಸಂಸ್ಥಾನ ಕೆಳದಿ ಪಾಲಾಗಲು ಕಾರಣ ಎನ್ನುತ್ತಾರೆ. ಚೆನ್ನಗೊಂಡ ಕೆಳದಿ ಅರಸ ಜೊತೆಯೂ ವ್ಯವಹರಿಸುವುದನ್ನೂ ಕೂಡ ಇಲ್ಲಿ  ಚಿತ್ರಿಸಿಲ್ಲ. 

ಹೊನ್ನಾವರದ ಸಮೀಪವಿರುವ ಬಸವರಾಜ ದುರ್ಗ ದ್ವೀಪಕ್ಕೆ ಅಥವಾ ಬಸವರಾಜಪುರಕ್ಕೆ ಆ ಹೆಸರು ಬರುವುದು  ಚೆನ್ನಭೈರಾದೇವಿ ಸತ್ತ ನಂತರ ಕೆಳದಿ ಅರಸರಿಗೆ ಸೇರಿದ ಎಷ್ಟೋ ವರ್ಷಗಳ ನಂತರ ಆದರೆ ಚೆನ್ನಭೈರಾದೇವಿಯ ಸಮಯಕ್ಕೆ ಆ ದ್ವೀಪಕ್ಕೆ ಬೇರೆ ಹೆಸರು ಇರಬಹುದು. ಲೇಖಕರು ಕಾದಂಬರಿಯಲ್ಲಿ ಬಸವರಾಜಪುರ ಎಂದು ಹೇಳುವುದು ಅಭಾಸವಾಗುತ್ತದೆ. ಇದು ಹೇಗೆ ಅಂದ್ರೆ ಬಸರೂರಿನ ಬದಲು ಕುಂದಾಪುರ ಎಂದು ಕರೆದಾಗಾಗುತ್ತದೆ. 

ಇನ್ನು ಅಂತರ್ಜಾಲ ಬಂದ ಮೇಲೆ ಗೂಗಲ್ ನಲ್ಲಿ ಹುಡುಕುವುದಕ್ಕೆ googled ಎಂಬ ಪದವಿದೆ. ಟೈಪು ಮಾಡುವುದಕ್ಕೆ ಇತ್ತೀಚಿಗೆ ಕೆಲವರು ಟೈಪಿಸು ಎಂಬ ಪದವನ್ನು ಉಪಯೋಗಿಸುತ್ತಿದ್ದಾರೆ. ಪತ್ರ ವ್ಯವಹಾರಕ್ಕೆ ಹದಿನಾರನೇ ಶತಮಾನದಲ್ಲಿ ಪತ್ರಿಸು ಎಂದು ಇತಿಹಾಸದಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಇದನ್ನು ಕಾದಂಬರಿಯಲ್ಲಿ ಲೇಖಕರು ಕೆಲವು ಕಡೆ ಉಪಯೋಗಿಸಿದ್ದಾರೆ. ಸಮಕಾಲೀನ ಕಾದಂಬರಿಯಾಗಿದ್ದರೇ  ಆ ಪದ ಅರ್ಥ ಕೊಡುತಿತ್ತು. ಐತಿಹಾಸಿಕ ಪಾತ್ರಗಳ ಮೂಲಕ ಈ ಪದ ಬಂದಾಗ ಅಭಾಸವಾಗುತ್ತದೆ. ಇದು ಹೇಗೆ ಎಂದರೆ ಮಹಾಭಾರತ ಅಥವಾ ರಾಮಾಯಣದ ಧಾರವಾಹಿ ಚಿತ್ರಿಸುವಾಗ ವಿದ್ಯುತ್ ಕಂಬಗಳು ಅಥವಾ ತಂತಿಗಳನ್ನು ಚಿತ್ರಿಸಿದ ಹಾಗೆ.    

ಲೇಖಕರ ಮಾತುಗಳನ್ನೂ ಓದಿದಾಗ ಅದರಲ್ಲೂ ಪಿಯೆಟ್ರೊ ಡೆಲ್ಲಾ ವಲ್ಲೇ ಬಗ್ಗೆ ಲೇಖಕರ ಆರೋಪವನ್ನು ನೋಡಿದಾಗ ಖಂಡಿತ ಅಚ್ಚರಿಯಾಯಿತು. ಪಿಯೆಟ್ರೊ ಡೆಲ್ಲಾ ವಲ್ಲೇ ಕೆಳದಿಗೆ ಬರದಿದ್ದರೆ ನಮ್ಮ ಇತಿಹಾಸಕ್ಕೆ ಬೆಳಕು ಚೆಲ್ಲಲ್ಲು ತುಂಬಾ ಕಷ್ಟವಾಗುತಿತ್ತು. ಚೆನ್ನಭೈರಾದೇವಿಯ ಇತಿಹಾಸವನ್ನು ಡೆಲ್ಲಾ ವಲ್ಲೇಗೆ ತಿಳಿಸುವುದೇ ಅವನ ಜೊತೆ ಗೋವಾದಿಂದ ಹೊನ್ನಾವರಕ್ಕೆ ಮತ್ತು ಅಲ್ಲಿಂದ ಗೇರುಸೊಪ್ಪೆಗೆ ಬರುವ ಕೆಳದಿಯ ನಿಯೋಗಿ ವಿಠಲ್ ಶೆಣೈ. ಗಜಾನನ ಶರ್ಮರ ಕೋಪವೇನಿದ್ದರೂ ವಿಠಲ್ ಶೆಣೈ ಮೇಲಿರಬೇಕಿತ್ತು. ಆದರೆ ಅವರು        ಡೆಲ್ಲಾ ವಲ್ಲೇಯನ್ನು ಆರೋಪಿಸುತ್ತಾರೆ. ಡೆಲ್ಲಾ ವಲ್ಲೇ ಗೇರುಸೊಪ್ಪೆಗೆ ಬರುವ ವೇಳೆಗಾಗಲೇ ಅದು ನಾಶವಾಗಿ ಹತ್ತು ಹದಿನೈದು ವರ್ಷಗಳಾಗಿರುತ್ತದೆ. ಅಲ್ಲೆಲ್ಲಾ ಮರಗಿಡಗಳು ಬೆಳೆದಿರುತ್ತವೆ. ಆ ಹಾಳುಬಿದ್ದ ಊರನ್ನೇ ಡೆಲ್ಲಾ ವಲ್ಲೇ ತಿರುಗಾಡಿಕೊಂಡು ಬಂದು ಅದನ್ನು ದಾಖಲಿಸುತ್ತಾನೆ. ಅಷ್ಟೇ ಅಲ್ಲದೇ ಆ ವೇಳೆಗೆ ಹಿರಿಯ ವೆಂಕಟಪ್ಪ ನಾಯಕನ ಪತ್ನಿ ಭದ್ರಮ್ಮಾಜಿ ಸಾಯುವ ವಿಷಯವನ್ನು ಅದಕ್ಕೆ ಕಾರಣವಾದ ಮುಸ್ಲಿಮ್ ಅಥವಾ ಸಿದ್ದಿ ಹುಡುಗಿಯ ಕತೆಯನ್ನು ಡೆಲ್ಲಾ ವಲ್ಲೇ ಹೇಳುತ್ತಾನೆ (ಈ ವಿಷಯದ ಆಧಾರದ ಮೇಲೆ ಆನಂದಪುರದ ಕೆ. ಅರುಣ್ ಪ್ರಸಾದ್ ಅವರು ಬರೆದಿರುವ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಕಾದಂಬರಿ ಓದಬಹುದು). 
  ಅದು ಕೂಡ ಅವನಿಗೆ ತಿಳಿಯುವುದು  ವಿಠಲ್ ಶೆಣೈ ಮೂಲಕವೇ ಆಗಿರುತ್ತದೆ. ಕನ್ನಡ ಭಾಷೆ ಬರದ ಡೆಲ್ಲಾ ವಲ್ಲೇ ಪೋರ್ಚುಗೀಸ್, ಕೊಂಕಣಿ, ಕನ್ನಡ ಎಲ್ಲಾ ಗೊತ್ತಿದ್ದ ವಿಠಲ್ ಶೆಣೈ ಹೇಳುವುದನ್ನು ದಾಖಲಿಸುತ್ತಾನೆ. ಅದೇ ಡೆಲ್ಲಾ ವಲ್ಲೇ ಚೆನ್ನಭೈರಾದೇವಿಯನ್ನು ವೆಂಕಟಪ್ಪ ನಾಯಕ ತುಂಬಾ ಗೌರವಯುತವಾಗಿ ನೋಡಿಕೊಂಡ ಎಂದು ಹೇಳುವುದನ್ನು ಮರೆಯುವುದಿಲ್ಲ. ಇಷ್ಟೆಲ್ಲಾ ಇರುವ ಕೆಳದಿ ಅರಸರನ್ನು ಖಳನಾಯಕರ ಹಾಗೆ ಚಿತ್ರಿಸಬಾರದಿತ್ತು. 

ಇದೆ ಡೆಲ್ಲಾ ವಲ್ಲೇಯ ಪತ್ರಗಳ ಆಧಾರದಿಂದಲೇ ಡಾ. ಶಿವರಾಮ ಕಾರಂತರು ತಮ್ಮ "ಮೈ ಮನಗಳ ಸುಳಿಯಲ್ಲಿ" ಕಾದಂಬರಿಯ ಮೊದಲಿಗೆ ಬಸರೂರಿನ ಬಗ್ಗೆ ಅದರ ಇತಿಹಾಸದ ಬಗ್ಗೆ ಕೆಳದಿ ಅರಸರ ವ್ಯಾಪಾರದ ಬಗ್ಗೆ ಸುಧೀರ್ಘವಾದ ಪ್ರಸ್ತಾವನೆ ಬರೆಯಲು ಸಾಧ್ಯವಾಗಿದ್ದು ಎಂದು ಹೇಳಬಹುದು. 

ಇನ್ನು ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಶಂಕರಾಚಾರ್ಯರ ಕಾಲದಿಂದಲ್ಲೂ ಇದ್ದರೂ ಹಾಡುವಳ್ಳಿಗೆ ತುಂಬಾ ಸಮೀಪವಿದ್ದರೂ ಅದರ ಪ್ರಸ್ತಾಪವೇ ಕಾದಂಬರಿಯಲ್ಲಿ ಎಲ್ಲಿಯೂ ಬರದ್ದೂ ಇತಿಹಾಸ ತಿಳಿದವರಿಗೆ ಲೇಖಕರೂ ಉದ್ದೇಶಪೂರ್ವಕವಾಗಿಯೇ ಅದನ್ನು ಬಿಟ್ಟರೆ ಎಂದು ಅನಿಸುತ್ತದೆ. 

ಇನ್ನು ರಾಣಿಯೂ ತನ್ನ ಸಂಸ್ಥಾನದ ಸಂಪತ್ತನ್ನೆಲ್ಲಾ ನೆಲದಲ್ಲಿ ನಿಧಿಯ ರೂಪದಲ್ಲಿ ಇಡುವಾಗ ಬಿದರೂರಿನಲ್ಲಿಯೂ ((ಬಿದನೂರಿನಲ್ಲಿಯೂ) ಇದು ಬೇರೊಂದು ಸಂಸ್ಥಾನಕ್ಕೆ ಸೇರಿದ ಊರು) ಇಡುವುದು ಆಶ್ಚರ್ಯ ತರಿಸುತ್ತದೆ. 

ಇನ್ನು ಪೋರ್ಚುಗೀಸರನ್ನು ಚಿತ್ರಿಸುವಾಗ ಅವರ ಕ್ರೌರ್ಯಗಳೇ ಹೆಚ್ಚಾಗಿ ತೋರಿಸಿ ಅವರು ಮನುಷ್ಯರೇ ಅಲ್ಲಾ ಎಂಬ ಭಾವ ಬರುತ್ತದೆ. ಅವರಲ್ಲೂ ಕೆಲವರು ಒಳ್ಳೆಯವರು ಇದ್ದರು ಅವರಿಗೂ ಮನುಷ್ಯ ಸಹಜ ಪ್ರೀತಿ, ಕಾಮ, ಪ್ರೇಮ ಎಲ್ಲಾ ಇದ್ದವು ಎಂದು ತೋರಿಸಬಹುದಿತ್ತು( ಈ ಭಾಗದಲ್ಲಿ ಗೋಪಾಲಕೃಷ್ಣ ಪೈ ಅವರ "ಸ್ವಪ್ನ ಸಾರಸ್ವತ" ಮತ್ತು ಕಳೆದವರ್ಷ ಬಿಡುಗಡೆಯಾದ ವಸುಧೇಂದ್ರರ "ತೇಜೋ ತುಂಗಭದ್ರ"ದ ಪ್ರಭಾವ ಸ್ವಲ್ಪ ಕಾಣುತ್ತದೆ). ಇದು ಹಿಂದಿನ ಕ್ರೈಸ್ತರೆಂದರೇ ಧರ್ಮಪ್ರಚಾರ ಮಾಡುವವರು ಎಂಬ ಭಾವ ಮೂಡಿಸುತ್ತದೆ. ಅವರಿಂದ ತೆರೆದ ಶಾಲೆಗಳು, ಕಾನ್ವೆಂಟ್ಗಳು ಅಲ್ಲಿ ಸಿಕ್ಕ ವಿದ್ಯಾಭ್ಯಾಸ ಎಲ್ಲಾ ನಗಣ್ಯವಾಗುತ್ತದೆ. 

ಐವತ್ತು ವರ್ಷಗಳ ಕಾಲ ವೀರೋಚಿತ್ತವಾಗಿ ಆಡಳಿತ  ಮಾಡಿದ್ದ ರಾಣಿ ಚೆನ್ನಭೈರಾದೇವಿ ತನ್ನ ಸಂಸ್ಥಾನಕ್ಕೆ ವಾರಸುದಾರನನ್ನ ಆಯ್ಕೆ ಮಾಡದೇ ಸೆರೆ ಸಿಕ್ಕುವಾಗಲೂ ಕೂಡ ಯಾವುದೇ ರೀತಿ ಹೋರಾಡದೆ ಸುಲಭವಾಗಿ ಸೆರೆಸಿಕ್ಕುವುದು ಕೂಡ ಕೃತಕವೆನಿಸುತ್ತದೆ. 

ರಾಣಿಯ ಕಾಲವು ಸಾಗುವಾಗ ಕೂಡ ಇದ್ದಕ್ಕಿದಂತೆ ವೃದ್ದೆಯಾದಂತೆ ಕಂಡುಬರುತ್ತದೆ. ಇಲ್ಲಿ ಲೇಖಕರು ಕಾದಂಬರಿಯನ್ನು ನಿಧಾನವಾಗಿ ಚಿತ್ರಿಸಲು ಸೋಲುತ್ತಾರೆ. 

ಜೀನದತ್ತ ಏನಾದ? ಸಲ್ಲೇಖನ ತೆಗೆದುಕೊಂಡನೇ ಅಥವಾ ಬದುಕಿ ಉಳಿದನೇ? ತಿಳಿಯುವುದಿಲ್ಲ. 

ಈ ಕಾದಂಬರಿಯ ಉತ್ತಮ ಕೊಡುಗೆಗಳು ಏನು? 

ಈ ರಾಣಿ ಬಗ್ಗೆ ಅವಳ ಜೀವನದ ಬಗ್ಗೆ ಕನ್ನಡಿಗರಿಗೆ ತಿಳಿದದ್ದು ತೀರಾ ಕಡಿಮೆಯೇ. ಈ ಕಾದಂಬರಿಯ ಮೂಲಕ  ರಾಣಿ ಚೆನ್ನಭೈರಾದೇವಿಯ ಹುಟ್ಟು, ಹೋರಾಟ, ಸಲ್ಲೇಖನ ಎಲ್ಲದರ ಬಗ್ಗೆಯೂ ತಿಳಿಯುತ್ತದೆ. 

ಕನ್ನಡಿಗರ ರಾಣಿಯೊಬ್ಬಳು ಮಧ್ಯಕಾಲೀನ ಜಗತ್ತಿನ ವ್ಯಾಪಾರದಲ್ಲಿ ಹೇಗೆ ತನ್ನದೇ ಆದ ಪ್ರಭಾವ ಬೀರಿದ್ದಳು ಎಂದು ತಿಳಿದುಬರುತ್ತದೆ. 

ಗೇರುಸೊಪ್ಪೆ, ಹಾಡುವಳ್ಳಿ, ಕಾನೂರು ಎಂಬ ಇಂದಿನ ನಿರ್ಜನ ಹಳ್ಳಿಗಳು ಹಿಂದೆ ವೈಭವಯುತವಾಗಿ ಮೆರೆದಿದ್ದವು ಎಂದು ತಿಳಿದುಬರುತ್ತದೆ. 

ಜಗತ್ತಿನ ಇತಿಹಾಸದಲ್ಲಿ ಮಹಿಳೆಯೊಬ್ಬಳು ಹೇಗೆಲ್ಲಾ ಹೋರಾಡಿ ಐವತ್ತುವರ್ಷಗಳ ಕಾಲ ಆಡಳಿತ ನಡೆಸಿದ್ದಳು ಎಂದು ತಿಳಿದುಬರುತ್ತದೆ. ರಾಣಿ ಚೆನ್ನಭೈರಾದೇವಿಯ ಹೋರಾಟ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಅಬ್ಬಕ್ಕರಷ್ಟೇ ಅವರಿಗಿಂತ ಹೆಚ್ಚಾಗಿಯೇ ಹೋರಾಡಿದ್ದಳು ಎಂದು ತಿಳಿದುಬರುತ್ತದೆ. 

ಇದು ನಮ್ಮ ಇತಿಹಾಸದ ಬಗ್ಗೆ ಬೆಳಕನ್ನು ಕೂಡ ಚೆಲ್ಲುತ್ತದೆ.  

ಇತಿಹಾಸ ತಿಳಿಯಲು ಆಸಕ್ತಿ ಇರುವವರು, ಮನರಂಜನೆಗೆ ಓದುವವರು, ಜ್ಞಾನ ಬೆಳೆಸಿಕೊಳ್ಳಲು ಓದುವವರು, ಸಾಹಿತ್ಯಾಸಕ್ತರು ಎಲ್ಲರೂ ಈ ಕಾದಂಬರಿಯನ್ನು ಓದಬಹುದು. 

ಪ್ರಸನ್ನ ಸಂತೇಕಡೂರು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ