Blog number 1594. ಮುನಿಸು ತರವೇ ಮುಗುದೇ... ಪ್ರಖ್ಯಾತ ಗೀತೆ ಬರೆದ ಸುಬ್ರಾಯ ಚೊಕ್ಕಾಡಿ ಅವರ ಆಸಕ್ತಿಯ ಆನಂದಪುರಂ ಬಗ್ಗೆ ಮಾಹಿತಿ ಕೇಳಿದ್ದರಿಂದ ಆನಂದಪುರಂ ಇತಿಹಾಸ ಪುಸ್ತಕದ ಈ ಒಂದು ಭಾಗ.
ನಿನ್ನೆ "ಮುನಿಸು ತರವೇ ಮುಗುದೇ" ಎಂಬ ಪ್ರಖ್ಯಾತ ಹಾಡು ಕೇಳದವರಿಲ್ಲ ಅದನ್ನು ಬರೆದ ಕವಿ ಸುಬ್ರಾಯ ಚೊಕ್ಕಾಡಿ ಆನಂದಪುರಂ ಎಲ್ಲಿದೆ ಅಂತ ಕೇಳಿದರು ಅವರು ಇದು ಕಾಲ್ಪನಿಕ ಊರಾಗಿರ ಬಹುದೇ ಅಂತ ಯೋಚಿಸಿದ್ದರಂತೆ ಕಾರಣ ಈ ಹೆಸರು ಪೌರಾಣಿಕ ಕಥೆಗಳಲ್ಲಿ ಬರುವ ಊರಿನ ಹೆಸರಂತೆ ಇದೆ ಅಂದರು.
ಈ ಕೆಳಗಿನ ಬ್ರಿಟಿಷರ ರಕ್ತ ಸಿಕ್ತ ಘಟನೆ ಆನಂದಪುರಂ ಇತಿಹಾಸ ಪುಸ್ತಕದಲ್ಲಿದೆ ಅದನ್ನು ಸುವರ್ಣ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಹಿಂದ್ ಪೌಜ್ ಸುಭಾಷ್ ಚಂದ್ರ ಬೋಸ್ ಅವರ ಜೊತೆಗಾರ ಐಎನ್ಎ ರಾಮರಾವ್ ಆನಂದಪುರಂಗೆ ಸುವರ್ಣ ಸ್ವಾತಂತ್ರ್ಯೋತ್ಸವದ ಜ್ಯೋತಿ ತಂದಾಗ ನಾನು ಪಠಣ ಮಾಡಿದ ಮ್ಯೆಸೂರು ಗೆಜೆಟಿಯರ್ ಸೆಕ್ಷನ್ V ಮತ್ತೊಮ್ಮೆ ನನ್ನ ನೆಚ್ಚಿನ ಕವಿಗಳಾದ ಸುಬ್ರಾಯ ಚೊಕ್ಕಾಡಿ ಅವರಿಗಾಗಿ ಪ್ರಕಟಿಸಿದ್ದೇನೆ.
#ಆನಂದಪುರಂ_ಇತಿಹಾಸ.
#ಭಾಗ_36.
#ಆನಂದಪುರಂ_ಬ್ರಿಟೀಷರು_ಕಂಡಂತೆ.
#ಸುಬಾಷ್_ಚಂದ್ರ_ಬೋಸ್_ಸೈನ್ಯದ_ಪ್ರಮುಖ_ಐಎನ್‌ಎ_ರಾಮರಾವ್_ಆನಂದಪುರಂಗೆ_ಬಂದಾಗ
#ಈ_ಐತಿಹಾಸಿಕ_ಕಾಯ೯ಕ್ರಮದಲ್ಲಿ_ವಾಚನೆ_ಮಾಡಿದ_ಸೆಕ್ಷನ್_V_ಮೈಸೂರು_ಗೆಜೆಟೆಯರ್.
#ಆನಂದಪುರಂನಲ್ಲಿ_ನಡೆದ_ಘೋರ_ಹತ್ಯಾಕಾಂಡಕ್ಕೆ_ಬ್ರಿಟೀಷ್_ಸ್ಯೆನ್ಯಾದಿಕಾರಿ_ಜನರಲ್_ಮ್ಯಾಥ್ಯೂ_ಕಾರಣ.
#ಇವರನ್ನು_ಸದೆಬಡಿದು_ಶ್ರೀರಂಗಪಟ್ಟಣದಲ್ಲಿ_ಕಾಲಪಾನಿ_ಶಿಕ್ಷೆ_ನೀಡಿದ್ದು_ಟಿಪ್ಪೂಸುಲ್ತಾನ್
#ನಾನೂರಕ್ಕೂ_ಹೆಚ್ಚು_ಸ್ತ್ರಿಯರು_ಬ್ರಿಟೀಷ್_ಸೈನಿಕರ_ಬಂದೂಕಿನಿಂದ_ತಿವಿಯಲ್ಪಟ್ಟು_ಜೀವತ್ಯಾಗ.
#ಟಿಪ್ಪೂ_ಸುಲ್ತಾನರ_ಅನೇಕ_ಸೈನಿಕರು_ಜೀವತ್ಯಾಗವಾಗುತ್ತದೆ_ಅವರೆಲ್ಲರ_ಸಮಾದಿ_ಯಡೇಹಳ್ಳಿ_ಖಬರಸ್ಥಾನದಲ್ಲಿದೆ.
ಸುವರ್ಣ ಸ್ವಾತಂತ್ರ್ಯೋತ್ಸವದ ಅಂಗವಾಗಿ 1997 ರಲ್ಲಿ ರಾಜ್ಯದಾದ್ಯಂತ ಸುವರ್ಣ ಸ್ವಾತಂತ್ರ್ಯ ಜ್ಯೋತಿ ಸುಭಾಷ್ ಚಂದ್ರ ಬೋಸ್ ರ ಕ್ರಾಂತಿಕಾರಿ ಸೈನ್ಯ ಇಂಡಿಯನ್ ನ್ಯಾಶನಲ್ ಆರ್ಮಿಯ (INA) ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಸಹಯೋಗಿ ಐಎನ್ಎ ರಾಮ್ ರಾವ್ ನೇತೃತ್ವದಲ್ಲಿ ಆನಂದಪುರಂಗೆ ಆಗಮಿಸಿ ತಂಗಿತ್ತು, ಆ ದಿನ ಆನಂದಪುರಂ ಬಸ್ ನಿಲ್ದಾಣದಲ್ಲಿ ಸ್ಥಳಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಮ್ ರಾವ್ (ಟೈಲರ್ ರಾಮಣ್ಣ ) ನೇತೃತ್ವದಲ್ಲಿ ಐಎನ್ಎ ರಾಮ ರಾವ್ ಗೆ ಸ್ಟಾಗತ ಮತ್ತು ಸನ್ಮಾನ ನೀಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸೆಕ್ಷನ್ V ಮೈಸೂರು ಗೆಜೆಟಿಯರ್ "ಆನ೦ದಪುರಂ ಬ್ರಿಟೀಷರು ಕಂಡಂತೆ" ನಾನು ಈ ಸಭೆಯಲ್ಲಿ ಸ್ಥಳಿಯ ಆಗಿನ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಓದಿದ್ದು ನನ್ನ ಸೌಭಾಗ್ಯ.
ಅವತ್ತು ರಾತ್ರಿ ಆನಂದಪುರಂನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಐಎನ್ಎ ರಾಮ್ ರಾವ್ ಈ ಕಾರಣದಿಂದ ನನ್ನನ್ನು ಪ್ರಶಂಸಿದ್ದು ನನ್ನ ಜೀವಮಾನದ ದೊಡ್ಡ ಬಹುಮಾನ.
ಅಜಾದ್ ಹಿಂದ್ ಪೌಜ್ ಎ೦ಬ ಹೆಸರಲ್ಲಿ ಪ್ರಖ್ಯಾತಿಗಳಿಸಿದ್ದ ಸುಭಾಷ್ ಚಂದ್ರ ಬೋಸ್ ರ ಐಎನ್ಎ ಸೈನ್ಯ ಇಂಪಿರಿಯಲ್ ಜಪಾನ್ ಆರ್ಮಿಯೊಂದಿಗೆ ಎರಡನೆ ಮಹಾಯುದ್ಧದಲ್ಲಿ ಮಿತ್ರ ಸೈನ್ಯದ ಮೇಲೆ ಹೋರಾಡಿದ ಭಾರತೀಯ ಸ೦ಸ್ಥೆ, ಇದರಲ್ಲಿ ಒಂದು ವಿಭಾಗ ಕ್ಯಾಪ್ಟನ್ ಶಹಾನವಾಜ್ ಇನ್ನೊಂದು ವಿಭಾಗ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ನೇತೃತ್ವವಹಿಸಿರುತ್ತಾರೆ. INA ರಾಮರಾವ್ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ರೊಡನೆ ಅವರು ಬ್ರಿಟೀಷರು ಜೊತೆ ನಡೆಸಿದ ಹೋರಾಟಗಳನ್ನು ಅವತ್ತು ತಡರಾತ್ರಿಯವರೆಗೆ ಹೇಳಿದ್ದು ನಮಗೆಲ್ಲ ರೊಮಾಂಚನವಾಗಿತ್ತು.
#ಆನಂದಪುರಂ_ಬ್ರಿಟೀಷರು_ಕಂಡಂತೆ
(ಕೃಪೆ : ಸೆಕ್ಷನ್ V ಮೈಸೂರು ಗೆಜೆಟಿಯರ್ ನಲ್ಲಿ ಅಚ್ಚಾಗಿರುವ ಯಥಾ ನಕಲು )
ಆನಂದಪುರಂ ಸಾಗರ ತಾಲ್ಲೂಕಿನ ಒಂದು ಗ್ರಾಮ, ಶಿವಮೊಗ್ಗದಿಂದ ಗೇರುಸೊಪ್ಪ ಮಾರ್ಗದಲ್ಲಿ ಸಾಗರದಿಂದ 15 ಮೈಲುಗಳ ದೂರದಲ್ಲಿದೆ. ಇದು 1838ನೇ ಇಸವಿಯಲ್ಲಿ ನಗರ ತಾಲ್ಲೂಕಿಗೆ ಸೇರಲ್ಪಟ್ಟಿತ್ತು ಆದರೆ ನಂತರ 1875ರ ವರೆಗೆ ಪುನಃ ಆನಂದಪುರಂ ಎಂಬ ಹೆಸರಿನಲ್ಲಿ ತಾಲ್ಲೂಕ್ ಕೇಂದ್ರ ಸ್ಥಾನವಾಗಿದೆ ಈಗ ಇಲ್ಲಿನ ಜನಸಂಖ್ಯೆ 333 ಆಗಿತ್ತು.
ಈ ಸ್ಥಳಕ್ಕೆ ಆನಂದಪುರಂ ಎಂದು ಹೆಸರು ಬರಲು ಹಲವು ಹಿನ್ನೆಲೆ ಇದೆ ಅವುಗಳಲ್ಲಿ ಒಂದೆಂದರೆ ಕೆಳದಿ ವಂಶದ ರಾಜ ವೆಂಕಟಪ್ಪ ನಾಯಕ ತನ್ನ ಪ್ರೇಯಸಿ ಚಂಪಕಳಿಂದ ಪಡೆದ ಆನಂದದ ಸ್ಮರಣೆಗಾಗಿ ಈ ಸ್ಥಳವನ್ನು ಆನಂದಪುರಂ ಎಂದು ಕರೆದನೆಂದು ಪ್ರತೀತಿ ಇದೆ.
ಇಲ್ಲಿ ದೊರೆತಿರುವ ಹಲವಾರು ದಾಖಲೆಗಳನ್ನು ಪರಿಶೀಲಿಸಿದಾಗ ದೂರಕಿರುವ ವಿವರಗಳಂತೆ 10 ನೇ ಶತಮಾನದಲ್ಲಿ ಚಾಲುಕ್ಯರಿಂದ ದಾಖಲಿಸಲ್ಪಟ್ಟಂತೆ ಆನಂದಪುರಂ ಕೆಳದಿ ವಂಶದವರಿಗಿಂತ ಮೊದಲೇ ಪ್ರಾಮುಖ್ಯತೆ ಪಡೆದಿತ್ತು.
ದಾಖಲೆಯೊಂದು ತಿಳಿಸುವಂತೆ 8ನೇ ಶತಮಾನದಲ್ಲಿ ಅಂದಾಸುರನೆಂಬುವವನು ಹುಮಚ (ಹೊಂಬುಜ) ಎನ್ನುವ ಪ್ರದೇಶದ ವಿಚಾರದಲ್ಲಿ ಜಿನದತ್ತನನ್ನು ವಿರೋದಿಸಿ ಆ ಪ್ರಯತ್ನದಲ್ಲಿ ಸೋಲನ್ನು ಅನುಭವಿಸಿದನು, ಈ ಸ್ಥಳವು (ಆನಂದಪುರಂ) ಮುಂದೆಯೂ ಸಹ ಹಲವಾರು ಬಾರಿ ನವಾಬ್ ಹೈದರಾಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನರ ಆಡಳಿತ ಕಾಲದಲ್ಲಿ ದಾಳಿಗೆ ಒಳಗಾದ ಪ್ರದೇಶವಾಗಿತ್ತು (1830 ರವರೆಗೆ) .
ಈ ಗ್ರಾಮವು ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಹೆದ್ದಾರಿಯ ಎರೆಡೂ ಬದಿಯಲ್ಲಿ ವಿಸ್ತರಿಸಿದ್ದು, ಉತ್ತರಕ್ಕೆ ಶಿಕಾರಿಪುರಕ್ಕೆ ಹೋಗುವ ಮುಖ್ಯ ರಸ್ತೆ, ದಕ್ಷಿಣಕ್ಕೆ ತೀರ್ಥಹಳ್ಳಿ ಮತ್ತು ಕಲ್ಲೂರ ಶೆಟ್ಟಿಗೆ (ಹೊಸನಗರಕ್ಕೆ ಆಗಿನ ಹೆಸರು) ಹೋಗುವ ಪ್ರಮುಖ ರಸ್ತೆ ಮಾರ್ಗವನ್ನು ಹೊಂದಿರುತ್ತದೆ.
ಈ ಪ್ರದೇಶದ 18ನೇ ಶತಮಾನದ ಯುದ್ಧಗಳಲ್ಲೂ ಒಳಪಟ್ಟಿದ್ದು ಪ್ರಮುಖವಾಗಿ ಕಂಡುಬರುತ್ತದೆ.
ಎರಡನೇ ಮೈಸೂರು ಯುದ್ಧದ ಅಂತ್ಯಕ್ಕೆ ಸ್ವಲ್ಪ ಮೊದಲೇ ಈ ಗ್ರಾಮವು ಬಿದನೂರು ಪ್ರಾಂತ್ಯದ ರಾಜ್ಯಪಾಲನಾಗಿದ್ದ ಅಯಾಜ್ ಸಾಹೇಬ್ (ಹಯಾತ್ ಸಾಹೇಬ್) ಎಂಬುವ ಟಿಪ್ಪು ಸುಲ್ತಾನರ ಅದೀನದಿಂದ ಬ್ರಿಟೀಷರಿಗೆ ಹಸ್ತಾಂತರಿಸಲ್ಪಟ್ಟಿತ್ತು.
ಆಗ ಈ ಪ್ರದೇಶವನ್ನು ಅಕ್ರಮಿಸುವ ಸಲುವಾಗಿ ಬ್ರಿಟೀಷ್ ಸೈನ್ಯದ ಭಾಗವೊಂದು ಆನಂದಪುರಂ ಕಡೆಗೆ ದಾವಿಸಿತ್ತು, ಈ ವಿಷಯ ತಿಳಿದ ಟಿಪ್ಪು ಸುಲ್ತಾನರು ತಕ್ಷಣವೇ ಲತೀಪ್ ಆಲೀ ಬೇಗ್ ಎಂಬ ಸೈನ್ಯಾಧಿಕಾರಿಯನ್ನು 300 ಜನ ಬಲಶಾಲಿ ಯೋದರೊಂದಿಗೆ ಈ ಸ್ಥಳ ಅಕ್ರಮಿಸಿಕೊಳ್ಳಲು ಕಳುಸಿ ಕೊಡುತ್ತಾರೆ.
ಈ ನಡುವೆ ಬ್ರಿಟೀಷ್ ಸೈನ್ಯವೂ ಈ ಸ್ಥಳಕ್ಕೆ ದಾವಿಸುತ್ತಿರುವ ವಿಷಯ ತಿಳಿದ ಅಯಾಜ್ ಖಾನ್ ರಕ್ಷಣಾ ಪಡೆ ಮತ್ತು ಅಲ್ಲಿನ ನಿವಾಸಿಗಳು ಬ್ರಿಟೀಷರಿಗೆ ಆನಂದಪುರಂ ಪ್ರದೇಶ ಒಪ್ಪಿಸಿ ಕೊಡಲು ಸಿದ್ದವಾಗಿರುತ್ತಾರೆ.
ಆದರೆ ಬ್ರಿಟೀಷ್ ಪಡೆ ಈ ಪ್ರದೇಶಕ್ಕೆ ಬಂದ ಕೂಡಲೇ ಹಿಂದೆಗೆಯುವಂತೆ ಕೋಟೆಯಲ್ಲಿನ ಟಿಪ್ಪು ಸೈನಿಕರು ಪದೇ ಪದೇ ಎಚ್ಚರಿಸಿದರು ಬ್ರಿಟೀಷ್ ಪಡೆ ಈ ಪ್ರದೇಶದ ಮೇಲೆ ಹತೋಟಿ ಸಾದಿಸಲು ಹಟ ತೊಟ್ಟು ನಿಂತಾಗ, ಟಿಪ್ಪು ಸೈನಿಕರು ಟಿಪ್ಪು ರಾಜ್ಯದ ಬಾವುಟವನ್ನು ಅಲ್ಲಿ ನೆಡುತ್ತಾರಾದರೂ ಬ್ರಿಟೀಷರು ಅದನ್ನು ಲೆಕ್ಕಿಸದೆ ದಾಳಿ ಮಾಡಿ ಆನಂದಪುರಂ ವಶ ಮಾಡಿಕೊಳ್ಳುತ್ತಾರೆಂದು ಬ್ರಿಟೀಷರೇ ಸಿದ್ಧಪಡಿಸಿದ ವಾರ್ಷಿಕ ವರದಿಯಲ್ಲಿ ಕಾಣಬಹುದಾಗಿದೆ (ಆನ್ಯೂಯಲ್ ರಿಜಿಸ್ಟರ್ ಎಂಬ ದಾಖಲೆಯಲ್ಲಿ).
ಈ ಅಕ್ರಮಣ ಕಾಲದಲ್ಲಿ ಸುಮಾರು 400 ಸ್ತ್ರಿಯರ ಮೇಲೆ ಬ್ರಿಟೀಷ್ ಸೈನಿಕರು ಎಸಗಿದ ದೌರ್ಜನ್ಯವನ್ನು ಮನಕರುಗುವಂತೆ ವಿಲ್ಕ್ ಎಂಬ ಇತಿಹಾಸಗಾರ ತನ್ನ ಹಿಸ್ಟಾರಿಕಲ್ ಸ್ಕೆಚಸ್ ಎನ್ನುವ ಗ್ರಂಥದಲ್ಲಿ ಹೀಗೆ ಬರೆಯುತ್ತಾನೆ "ಆನಂದಪುರಂ ಪ್ರದೇಶದ ಅಕ್ರಮಣ ಕಾಲದಲ್ಲಿ ಬ್ರಿಟೀಷರ ಮೇಲೆ ಇತಿಹಾಸಕಾರರು ಅತ್ಯಾಚಾರ ಮತ್ತು ದೌರ್ಜನ್ಯದ ಗಂಭೀರ ಆಪಾದನೆಯನ್ನು ಮಾಡಿದ್ದು ಅದರ ವಿವರ ಹೀಗಿದೆ, ಸುಮಾರು 400 ಜನ ಸುಂದರ ಸ್ತ್ರಿಯರು ಬ್ರಿಟೀಷರ ಬಂದೂಕಿನ ಬಯೋನೆಟ್ ನಿಂದ ತಿವಿಯಲ್ಪಟ್ಟು ಸಾಯುವ ಸ್ಥಿತಿಯಲ್ಲಿ ಅಥವ ಒಬ್ಬರಿಗೊಬ್ಬರು ಅಪ್ಪಿಕೊಂಡು ನರಳುತ್ತಾ ಚೀರುತ್ತಾ ವಿಲ ವಿಲನೆ ಒದ್ದಾಡುತ್ತಾ ಪ್ರಾಣ ಬಿಡುವ ಸಂಕಟದಲ್ಲಿ ಒದ್ದಾಡುತ್ತಿದ್ದರು, ಮೇಲಾಗಿ ಬ್ರಿಟೀಷ್ ಸೈನಿಕರು ಚಾಟಿಗಳಿಂದ ಬಹಳ ಕ್ರೂರವಾಗಿ ಜನರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು."
ಸ್ತ್ರಿಯರ ಮೈಮೇಲಿದ್ದ ಒಡವೆಗಳನ್ನು ಕಿತ್ತುಕೊಳ್ಳುತ್ತಿದ್ದರು ಅಲ್ಲದೆ ಕೈಗೆ ಸಿಕ್ಕವರನ್ನ ಬಡಿಯುತ್ತಾ, ಚುಚ್ಚುತ್ತಾ ಕೆರೆ ಕಂದಕಕ್ಕೆ ಬೀಸಿ ಒಗೆಯುತ್ತಿದ್ದ ದೃಶ್ಯವಂತೂ ಕರಳು ಹಿಂಡುತ್ತಿತ್ತು, ಕೆಲವೊಂದು ಸ್ತ್ರಿಯರನ್ನು ಮಕ್ಕಳನ್ನು ಅವರ ಸಂಬಂದಿಕರಿಂದ ಬಲವಂತವಾಗಿ ಕಿತ್ತುಕೊಂಡು ಹೊಡೆದು ಕೊಲ್ಲುತ್ತಿದ್ದ ದೃಶ್ಯವಂತೂ ಮಾನವೀಯತೆಯನ್ನೂ ಮರೆಸಿ ರಾಕ್ಷಸಿ ಕೃತ್ಯವನ್ನು ಮೆರೆಸಿದಂತಿತ್ತು.
ಎಷ್ಟೋ ಜನ ಮುಗ್ದರು ಸೈನಿಕರ ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ತಾವೇ ಓಡಿ ಹೋಗಿ ಬಾವಿ, ಕೆರೆಗಳಿಗೆ ಹಾರಿ ಮುಳುಗಿ ಸತ್ತರು, ಇದನ್ನು ತಿಳಿದ ಟಿಪ್ಪು ಸುಲ್ತಾನರು ಈ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಮ್ಯಾಥ್ಯೂ ಎಂಬ ಸೈನ್ಯಾಧಿಕಾರಿಯನ್ನು ಅವನ ಸೈನ್ಯದ ಸಮೇತ ಸೆರೆ ಹಿಡಿದು ಅವರು ಆನಂದಪುರಂ ಜನರ ಮೇಲೆ ಮಾಡಿದ ಅನ್ಯಾಯ ಅತ್ಯಾಚಾರಕ್ಕೆ ಪ್ರತಿಯಾಗಿ ಅವರನ್ನು ಕ್ರೂರವಾಗಿ ದಂಡಿಸಿದನೆಂದು ಎಂ.ಮಿಚೌಡ್ ಎನ್ನುವವರು ಹಿಸ್ಟರಿ ಆಫ್ ಹೈದರಾಲಿ ಅಂಡ್ ಟಿಪ್ಪು ಸಾಹೇಬ್ (1899) ಎನ್ನುವ ಗ್ರಂಥದಲ್ಲಿ ತಿಳಿಸಿದ್ದಾರೆ.
ಈಗ ಆನಂದಪುರಂ ಕೋಟೆ ಹಾಳು ಬಿದ್ದಿದೆ ಅದರ ಸುತ್ತ ಮುತ್ತ ಕಾಡು ಬೆಳೆದಿದ್ದು ಅಪ್ಪಟ ಮಲೆನಾಡು ಎಂದೇ ಕರೆಸಿಕೊಳ್ಳುತ್ತಿದೆ ಎನ್ನುವ ಲೇಖಕ ಲೆವಿನ್ ಬೆಂತೆಂ ಬೌರಿಂಗ್ ತನ್ನ ಪತ್ರ ಆನಂದಪುರಂ 20 ಡಿಸೆಂಬರ್ 1868 ಎಂಬುದರಲ್ಲಿ ಹೀಗೆ ಹೇಳುತ್ತಾರೆ " ಆನಂದಪುರಂಗೆ ಬರುವ ರಸ್ತೆ ತುಂಬಾ ಸುಂದರವಾಗಿದೆ, ರಸ್ತೆಯ ಇಕ್ಕೆಲದಲ್ಲಿ ಹಸಿರು ತುಂಬಿದ ಕಾಡು, ಎತ್ತರೆತ್ತರಕ್ಕೆ ಬೆಳೆದು ನಿಂತಿರುವ ಬಾರೀ ಮರಗಳು, ಬೃಹದಾಕಾರದ ಬಿದಿರಿನ ಪೊದೆಗಳು ರಸ್ತೆಗೆ ಕಮಾನು ಕಟ್ಟಿದಂತೆ ಬಾಗಿಕೊಂಡು ತುಂಬಾ ಚೆಂದದ ನೋಟ ಕೊಡುತ್ತಿದೆ, ನಂತರ ಮುಂದಿನ ದಾರಿಯಲ್ಲಿ ದೂಪದ ಸಾಲು ಮರಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುವಂತೆ ಕನಿಷ್ಟ ಮೂರು ಮೈಲುವರೆಗೆ ಬಾರೀ ಗಾತ್ರದಲ್ಲಿ ಬೆಳೆದು ನಿಂತು ತನ್ನ ಹಸಿರಾದ ದೊಡ್ಡದಾದ ಎಲೆಗಳಿಂದ ಕಂಗೊಳಿಸುತ್ತಿದೆ, ಇವುಗಳ ಸಾಲು ಹಳೇ ಬಂಗಲೆವರೆಗೆ (ಪ್ರವಾಸಿ ಮಂದಿರ) ಹಬ್ಬಿದೆ, ಇಂತಹ ಸುಂದರ ಪ್ರದೇಶದಲ್ಲಿ ಕುಳಿತು ಈ ಪತ್ರ ಬರೆದಿರುತ್ತೇನೆ" ಎಂದಿದ್ದಾರೆ.
ಮುಂದುವರಿದು ಬೌರಿಂಗ್ "ನಾನು ಆನಂದಪುರಂ ಕೋಟೆಯನ್ನು ನೋಡಲು ಸ್ನೇಹಿತರೊಬ್ಬರ ಜೊತೆ ಹೊರಟೆ, ನನ್ನ ಉದ್ದೇಶ ಅಲ್ಲಿರುವ ದೊಡ್ಡ ಫಿರಂಗಿಯನ್ನು ನೋಡುವುದೇ ಆಗಿತ್ತು. ಕೋಟೆಯನ್ನು ಸುತ್ತಾಡಿ ನೋಡಿದಾಗ ಆ ಭಾರಿ ಫಿರಂಗಿ ಹಾಳಾದ ಸ್ಥಿತಿಯಲ್ಲಿಯೇ ಕಂಡು ಬಂದಿತ್ತು, ಕೋಟೆಯೂ ಕೂಡ ಸಾಕಷ್ಟು ಶಿಥಿಲವಾಗಿತ್ತು ಆಗ ಸಮಯ ಸಂಜೆಯಾಗಿತ್ತು, ಸೂರ್ಯ ನಿಧಾನವಾಗಿ ಅಸ್ತಮಿಸ ತೊಡಗಿದ್ದ ಆ ಕಿರಣಗಳು ಕೋಟೆಯ ಗೋಡೆಯ ಮೇಲೆ ಸಮೃದ್ಧವಾಗಿ ಬೆಳೆದಿದ್ದ ಹುಲ್ಲಿನ ಮೇಲೆ ಬಿದ್ದು ಪ್ರತಿಫಲಿಸಿ ಕೋಟೆಯ ವಾತಾವರಣಕ್ಕೆ ಬಂಗಾರದ ಬಣ್ಣವನ್ನೇ ನೀಡಿದ್ದವು, ನಾನು ಇದನ್ನೆಲ್ಲ ಆಶ್ಚರ್ಯ ತುಂಬಿದ ನನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವಾಗುವಾಗಲೇ ಕತ್ತಲು ಆವರಿಸುವ ಸಮಯದಲ್ಲಿ ಹುಣ್ಣಿಮೆಯ ಚಂದ್ರನು ಶುಭ್ರವಾದ ನೀಲಿ ತುಂಬಿದ ಆಕಾಶದಲ್ಲಿ ಬೆಳ್ಳಿಯಂತೆ ಹೊಳೆಯುತ್ತಾ ನಿಧಾನಕ್ಕೆ ಮೇಲೆರ ತೊಡಗಿದ್ದ ಇದೆಲ್ಲ ಶುಭ್ರವಾದ ತಿಳಿ ನೀರಿನ ಕೆರೆಯಲ್ಲಿ ಪ್ರತಿಪಲಿಸುತ್ತಿರುವುದನ್ನು ನೋಡಿ ನಾನು ಭಾವ ಪರವಶಳನಾಗಿ ಮೈ ಮರೆತು ಮನದಣಿಯುವಷ್ಟು ಸವಿದೆ, ನನ್ನ ಜೀವಮಾನದಲ್ಲಿ ನಾಕಂಡ ಅತ್ಯಂತ ಉಲ್ಲಾಸದ ಕ್ಷಣಗಳಾಗಿತ್ತು" ಎಂದು ಲೇಖಕರಾದ ಲೆವಿನ್ ಬೆ೦ತಿ೦ ಬೌರಿಂಗ್ ಅವರು ತಮ್ಮ ಈಸ್ಟನ್೯ ಎಕ್ಸಿಪಿರಿಯನ್ಸಸ್ ಎಂಬ ಗ್ರಂಥದಲ್ಲಿ ನಮ್ಮ ಆನಂದಪುರಂ ಪ್ರದೇಶವನ್ನು ಮನಸಾರೆ ಹೊಗಳಿ ತಮ್ಮ ಮೆಚ್ಚುಗೆಯನ್ನು ಸುಂದರವಾಗಿ ನಮೂದಿಸಿದ್ದಾರೆ.
ನಂತರ ಆನಂದಪುರಂ ಕೋಟೆಯ ಫಿರಂಗಿ ಮತ್ತಿತರ ಸ್ಮಾರಕ ವಸ್ತುಗಳನ್ನು ಪ್ರವಾಸಿ ಮಂದಿರದ ಎದರು ಉದ್ಯಾನವನ ನಿಮಿ೯ಸಿ ಅಲ್ಲಿ ವೀಕ್ಷಣೆಗೆ ಜೋಡಿಸಿದ್ದರು, ಸಾಂಗ್ಲಿಯಾನ ಅವರು ಜಿಲ್ಲಾ ರಕ್ಷಣಾಧಿಕಾರಿಗಳಾಗಿದ್ದಾಗ ಇದನ್ನೆಲ್ಲ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಅವರಣದಲ್ಲಿ ಇರಿಸಿದ್ದಾರೆ.
ಇದು ಬ್ರಿಟೀಷರೇ ಬರೆದ ಬ್ರಿಟೀಷರ ಹತ್ಯಾಕಾಂಡ ಆದರೆ ಕೆಲವರು ಇದನ್ನು ದುರುದ್ದೇಶದಿಂದ ಟಿಪ್ಪೂ ಸುಲ್ತಾನರು ಈ ಹತ್ಯಾಕಾಂಡ ಮಾಡಿದ್ದಾರೆಂದು ಆನಂದಪುರಂ ಇತಿಹಾಸ ತಿರುಚಿ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸುತ್ತಿದ್ದಾರೆ ಅಂತಹ ವಿಕೃತ ಲೇಖನಕ್ಕೆ ಈ ಗೆಜೆಟಿಯರ್ ಸಮರ್ಪಕ ಉತ್ತರವಾಗಲಿ ಎಂದು ನಿರೀಕ್ಷಿಸುತ್ತೇನೆ.
ಯಡೇಹಳ್ಳಿಯ ಖಬರ್ ಸ್ಥಾನದಲ್ಲಿ ಈ ಯುದ್ಧದಲ್ಲಿ ಹತರಾದ ಟಿಪ್ಪು ಸೈನ್ಯದ ಪ್ರಮುಖರ ವಿಶಿಷ್ಟ ರಚನೆಯ ಸಮಾದಿಗಳೂ ಈಗಲೂ ನೋಡಬಹುದು.
#ಆನಂದಪುರಂ_ಗತಕಾಲದ_ಇತಿಹಾಸ_ನಿಜಕ್ಕೂ_ಸಿಂಹಾಸನದ_ಮಾಲೆಯಲ್ಲಿದೆ.
(ನಾಳೆಮುಂದಿನ ಬಾಗ - 37.)
ಅಪರೂಪದ ಚಿತ್ರಗಳೊಂದಿಗೆ ಲೇಖನ ಬ್ಲಾಗ್ ನಲ್ಲಿ ನೋಡಬಹುದು.
Comments
Post a Comment