https://youtu.be/d5juNKmL-RI
#ನಮ್ಮ_ಊರ_ಸಮೀಪದ_ಆಚಾಪುರ.
#ಅವತ್ತು_ಇಡೀ_ಊರಿಗೆ_ಬಡತನ
#ಇವತ್ತು_ಕೋಟ್ಯಾದೀಶರ_ಊರು
#ಈ_ಊರಿನ_ಮೂಲ_ಹೆಸರು_ಮಾಚರಾಜಪುರ
#ಈ_ಪ್ರದೇಶದಲ್ಲಿ_ಮುಸ್ಲಿಂ_ಮತ್ತು_ಪರಿಶಿಷ್ಟ_ಜಾತಿ_ಚೆಲುವಾದಿ_ಜನಾಂಗದವರು_ಬಹುಸಂಖ್ಯಾತರು.
#ಬುಕೇಟ್_ವ್ಯಾಪಾರಿಗಳು_ಇದ್ದರು.
#ಬುಕೇಟ್_ಎಂಬ_ಹೆಸರು_ಯಾಕೆ_ಬಂತು_ಗೊತ್ತಿಲ್ಲ.
#ಜಿಲ್ಲಾ_ಪಂಚಾಯತ_ಸದಸ್ಯನಾಗಿ_ನಾನು_
ಆಚಾಪುರದ_ರಸ್ತೆ_ಮೊದಲ_ಬಾರಿ_1995ರಲ್ಲಿ_ಡಾ೦ಬರೀಕರಣ_ಮಾಡಿಸಿದ್ದೆ
ಈ ಊರಿನ ತೀರ್ಥದ ದೇವಸ್ಥಾನದಲ್ಲಿ 25- ಡಿಸೆಂಬರ್ -1079ರಲ್ಲಿ ಮಾಚರಾಜನು ಪ್ರತಿಷ್ಟಾಪಿಸಿದ ಭೂದಾನದ ಶಿಲಾಶಾಸನವಿದೆ ಆಗ ಈ ಊರಿನ ಹೆಸರು ಮಾಚರಾಜಪುರ ಈಗ ಆಚಾಪುರ ಆಗಿದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಚಾಪುರ ಶಾಸನದ ಹೆಚ್ಚಿನ ಮಾಹಿತಿ ಓದಬಹುದು
https://arunprasadhombuja.blogspot.com/2022/01/71-25-1079.html
ಈಗ ಆಚಾಪುರ ಮತ್ತು ಅದರ ಸುತ್ತಲಿನ ಇಸ್ಲಾಂಪುರ - ಹೊಳ್ಳೂರು - ಮುರುಘಾಮಠ - ಕೋಡಿಮಠ ಎಂಬ ಊರಲ್ಲಿ ಅಡಿಕೆ ಬೆಳೆಗಾರರು, ರಬ್ಬರ್ ಬೆಳೆಗಾರರು, ಶುಂಠಿ ಬೆಳೆಗಾರರು, ಜಂಬಿಟ್ಟಿಗೆ ಕಲ್ಲು ಕೋರೆ ಮಾಲಿಕರು, ಲಾರಿ ಮಾಲಿಕರು ಮತ್ತು ಶುಂಠಿ ವ್ಯಾಪಾರಸ್ಥರು ಹೆಚ್ಚು ಇದ್ದಾರೆ, ಶುಂಠಿ ಒಣಗಿಸಿ ಮಾರಾಟ ಮಾಡುವ ಒಣ ಶುಂಠಿ ವ್ಯಾಪಾರಸ್ಥರುಗಳಿಂದ ಪ್ರತಿ ಮನೆಯಲ್ಲಿ ಕಾರು ಬೈಕ್ ಗಳಿದೆ, ಎಲ್ಲಾ ಮನೆಗಳು ಮೌಲ್ಡಿಂಗ್ ಆಗಿದೆ, ಪ್ರತಿಯೊಬ್ಬರ ಮನೆಯಲ್ಲಿ ಎಲ್ಲರೂ ವಿದ್ಯಾವಂತರು ಆಗಿದ್ದಾರೆ.
25 ವರ್ಷದ ಹಿಂದೆ ಆಚಾಪುರ ಹೇಗಿತ್ತೆಂದರೆ... ಅವತ್ತು ಇಡೀ ಊರು ಬೀಮನಕೋಣೆ ಪಿ.ಎಲ್.ಡಿ. ಬ್ಯಾಂಕ್ ನಲ್ಲಿ ಬ್ಲಾಕ್ ಲಿಸ್ಟ್ ನಲ್ಲಿತ್ತು, 1974 ರಲ್ಲಿ ಭೂಸುದಾರಣೆ ಕಾನೂನು ಬಂದಾಗ ಈ ಊರುಗಳ ಗೇಣಿ ರೈತರಿಗೆಲ್ಲ ಭೂಮಿ ಹಕ್ಕು ಸಿಕ್ಕಿತು, ಆಗ ಭೂಮಿ ಕಳೆದು ಕೊಂಡ ಭೂಮಾಲಿಕರುಗಳಿಗೆ ಎಕರೆವಾರು ಪರಿಹಾರ ನೀಡಲು ಸರ್ಕಾರ ಭೂಮಿ ಹಕ್ಕು ಪಡೆದ ಗೇಣಿದಾರ ರೈತರ ಜಮೀನು ಪಹಣಿ ಅಡಮಾನ ಮಾಡಿ ಎಕರೆಗೆ 750 ರೂಪಾಯಿ ಸಾಲ ಪ್ರಾಥಮಿಕ ಭೂ ಅಭಿವೃದ್ದಿ ಬ್ಯಾಂಕಿನಿಂದ ಮಂಜೂರು ಮಾಡಿಸಿತ್ತು ಆದರೆ ಈ ಸಾಲ ತೀರಿಸಲಾಗದ ಆಚಾಪುರ ಮತ್ತು ಸುತ್ತಲಿನ ಈ ಹಳ್ಳಿಗಳಲ್ಲಿ ಎಲ್ಲರೂ ಅವತ್ತು ಸುಸ್ತಿದಾರರಾಗಿದ್ದರಿಂದ ಇವರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಿತ್ತು ಇಡೀ ಊರಲ್ಲಿ ಎಲ್ಲರೂ ಸುಸ್ತಿದಾರರಾದ್ದರಿಂದ ಇಡೀ ಊರನ್ನೆ ಬ್ಲಾಕ್ ಲೀಸ್ಟ್ ಗೆ ಸೇರಿಸಿ ಯಾರಿಗೂ ಸಾಲ ನೀಡುತ್ತಿರಲಿಲ್ಲ
ಅವತ್ತಿನ ಬಡತನದಲ್ಲಿ ಇಡೀ ಊರಿನಲ್ಲಿ ವಿದ್ಯೆಗೆ ಒತ್ತು ಕೊಡುವ ಕುಟುಂಬ ಇರಲೇ ಇಲ್ಲ, ಸ್ಥಳಿಯ ಆಚಾಪುರದ ಉದು೯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ಇತ್ತು.
ಆಗ ಎಸ್.ಎಸ್.ಎಲ್.ಸಿ. ಪಾಸು ಆದವರು ಒಬ್ಬರೋ ಇಬ್ಬರು ಮಾತ್ರ, ಈ ಭಾಗದಲ್ಲಿ ಬುಕೇಟ್ ವ್ಯಾಪಾರಿ ಕುಟುಂಬಗಳು ಇತ್ತು, ಬುಕೇಟ್ ವ್ಯಾಪಾರ ಅಂದರೆ ಪೂಜಾ ಸಾಮಗ್ರಿಗಳಾದ ಉದಬತ್ತಿ, ಕುಂಕುಮ, ಅರಿಶಿಣ, ಕಣ್ಣಿಗೆ ಕಪ್ಪು ಕಾಡಿಗೆ, ಗಿಡಮೂಲಿಕೆ, ಎತ್ತಿನ ಕೋಡಿನ ಬಣ್ಣ ಇತ್ಯಾದಿ ವ್ಯಾಪಾರ ಇದಕ್ಕೆ ಬುಕೆಟ್ ವ್ಯಾಪಾರ ಎನ್ನುವ ಹೆಸರು ಯಾಕೆ ಬಂತು ಅಂತ ಯಾರಿಗೂ ತಿಳಿದಿಲ್ಲ.
ನಂತರ ಈ ಭಾಗದಲ್ಲಿ ಸುಗ್ಗಿ ನಂತರ ಒಣ ಹುಲ್ಲು ಸಂಗ್ರಹಿಸಿ ಸಾಗರ - ಹೆಗ್ಗೋಡು ಭಾಗದಲ್ಲಿ ಭಟ್ಟರುಗಳಿಗೆ ಒಣ ಹುಲ್ಲು ಮಾರಾಟ ಮಾಡುವವರು ಇದ್ದರು.
ಅತ್ಯಂತ ಬಡತನದಿಂದ ಈ ಭಾಗದ ಕುಟುಂಬಗಳು ಹೊತ್ತು ಹೊತ್ತಿನ ಊಟಕ್ಕೂ ಪರದಾಡುವ ಕಾಲ ಇತ್ತು ಆದರೆ ಕಾಲ ಬದಲಾಯಿತು, ಶುಂಠಿ ರಬ್ಬರ್ ಅಡಿಕೆಯಂತ ವಾಣಿಜ್ಯ ಬೆಳೆ ಮತ್ತು ಅದರ ವ್ಯಾಪಾರದ ಜೊತೆಗೆ ಒಣ ಶುಂಠಿ ವ್ಯಾಪಾರ ಈಗಿನ ತಲೆಮಾರಿನ ಯುವಕರಿಗೆ ಕೈ ಹಿಡಿದಿದೆ ಇದರಿಂದ ಒಂದು ಕಾಲದಲ್ಲಿ ಬೀಮನಕೋಣೆಯ ಪಿಎಲ್ ಡಿ ಬ್ಯಾಂಕಿನ ಬ್ಲಾಕ್ ಲಿಸ್ಟ್ ಪಟ್ಟಿಯ ಊರು ಇದಾ ಅಂತ ಯೋಚಿಸಲೂ ಸಾಧ್ಯವಿಲ್ಲದಂತೆ ಈ ಊರುಗಳು ಬದಲಾಗಿದೆ ಸ್ವಂತ ಶ್ರಮದಿಂದ ಈ ಊರಿನಲ್ಲಿ ಅತಿ ಹೆಚ್ಚು ಕೋಟ್ಯಾದೀಶರು ಆಗಿದ್ದಾರೆ ಇದು ಪರಿವರ್ತನೆ ಜಗದ ನಿಯಮ ಎಂಬಂತೆ ಸ೦ತೋಷದ ವಿಷಯ ಕೂಡ.
ನಿನ್ನೆ ನನ್ನ ಆಫೀಸಿಗೆ ಬಂದ ತನ್ವೀರ್ ಸಾಹೇಬರು ಇದೇ ಆಚಾಪುರದವರು ಇವರು ಕೃಷಿ ಜೊತೆಗೆ ಬೆಳ್ಳುಳ್ಳಿ ವ್ಯಾಪಾರಿ ಕೂಡ, ಆ ಕಾಲದಲ್ಲಿ SSLC ಪಾಸು ಮಾಡಿ PUC ಓದಿದ ಅಪರೂಪದ ವಿದ್ಯಾರ್ಥಿ ಆಗಿದ್ದವರು ಅವರ ಜೊತೆ ಆ ಕಾಲದ ಬಡತನ ಹಾಸಿ ಹೊದ್ದಿದ್ದ ಆಚಾಪುರ ಈ ಕಾಲದಲ್ಲಿ ಬದಲಾದ ಆಚಾಪುರದವರೆಗಿನ ಸುಮಾರು ವಿಚಾರ ಮಾತಾಡಿದೆವು.
ಒಂದು ಸಾವಿರ ವರ್ಷದ ಇತಿಹಾಸ ಇರುವ ಅಪರೂಪದ ಊರು ಆಚಾಪುರ.
Comments
Post a Comment