Blog number 1061. ಹೊನ್ನಾವರದ ಗಜಾನನ ಮಹಾಲೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವವರು ನನ್ನ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯ೦ಜನ ಓದಿ ತಮ್ಮ ಅಭಿಪ್ರಾಯ ಪೇಸ್ ಬುಕ್ ಲ್ಲಿ ಬರೆದಿದ್ದಾರೆ.
ಹಿರಿಯ ಸ್ನೇಹಿತ ಕೆ. ಅರುಣ್ ಪ್ರಸಾದ್ ತಮ್ಮ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ" ಎಂಬ ಪುಸ್ತಕವನ್ನು ಕಳಿಸಿದ್ದು ದೀಪಾವಳಿಗೆ ನಾಲ್ಕು ದಿನಗಳಿರುವಾಗ. ದೀಪಾವಳಿಯ ಸಡಗರ ಮುಗಿದ ಮೇಲೆ ಬಿಡುವು ಮಾಡಿಕೊಂಡು ಓದೋಣ ಎಂದು ಕಾದು, ಈಗಷ್ಟೇ ಓದಿ ಮುಗಿಸಿದೆ. ಎಷ್ಟು ಖುಷಿಯಾಗಿ ಓದಿಸಿಕೊಳ್ಳುವ ತಾಕತ್ತಿನ ಕಥೆಗಳೆಂದರೆ, ಅರೆ... ಓದಿ ಮುಗಿದೇ ಹೋಯ್ತಾ... ಮತ್ತಷ್ಟು ಕಥೆಗಳು ಇರ್ಬೇಕಿತ್ತು ಅನ್ನಿಸಿತು...
ಶಿವಮೊಗ್ಗ ಜಿಲ್ಲೆಯ, ಬೇರೆ ಬೇರೆ ಗ್ರಾಮೀಣ ಪ್ರದೇಶಗಳಲ್ಲೇ ನಡೆದ, ತಮ್ಮ ಜೀವನದ ಭಾಗವಾಗಿಯೇ ಇದ್ದ, ತಾವು ಸಹ ಭಾಗಿಯಾಗಿದ್ದ ಹಲವು ಘಟನೆಗಳನ್ನು ಸಹ ಕಥೆಯಾಗಿಸಿದ್ದಾರೆ ಅರುಣ್. ಇಲ್ಲಿಯ ಕಥೆಗಳನ್ನು ಓದುತ್ತಾ ಹೋದಂತೆ ಹಳ್ಳಿಯ ಬದುಕು, ಸಂಸ್ಕೃತಿ, ನಂಬಿಕೆ, ಪರಂಪರೆ, ಎಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ. ಗ್ರಾಮೀಣ ಭಾರತದ ಪರಿಚಯ ಆಗುವುದರ ಜೊತೆಗೆ ನಾವೂ ಸಹ ಇಂತಹ ಕಥೆಗಳಲ್ಲಿ ಬರುವ ಒಂದು ಪಾತ್ರವಾಗಿ ಬಿಡುತ್ತೇವೆ...
"ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ", "ಮಂಜ ಬ್ರಹ್ಮ ರಾಕ್ಷಸನಾಗಿ ಕಾಡಿದರೆ...!?", "ವಿಲ್ಲಿ ಭೂತವಾಗಿ", "ಇನಾಮುದಾರರ ಮಂಚ", "ಹೋರಿ ಮಂಜ ಮತ್ತು ಗಾಡಿ ಎತ್ತಿನ ಬ್ರಾಂಡಿ" ಸೇರಿದಂತೆ ಒಟ್ಟಿಗೆ 29 ಕಥೆಗಳು ಇರುವ ಈ ಪುಸ್ತದಲ್ಲಿ ಕೆ. ಅರುಣ್ ಪ್ರಸಾದ್ ತಾವು ಒಬ್ಬ ಒಳ್ಳೆಯ ಬರಹಗಾರ ಎಂಬ ಭಾವನೆ ಓದುಗರಲ್ಲಿ ಮೂಡುವಂತೆ ಸೊಗಸಾಗಿ ಕಥೆಗಳಿಗೆ ಜೀವತುಂಬಿದ್ದಾರೆ...
ಹೆಚ್ಚಿನ ಕಥೆಗಳು ನಮ್ಮ ಸುತ್ತ-ಮುತ್ತಲಿನ ಗ್ರಾಮೀಣ ಭಾಗದಲ್ಲಿ ನಡೆದ, ನಡೆಯುವ ಸಂಗತಿಗಳೇ ಅನ್ನಿಸಿ ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ. ಹಾವು ಗೊಲ್ಲ ವೆಂಕಟೇಶ್ ಹಿಂದೊಮ್ಮೆ ನಮ್ಮೂರಿಗೆ ಬಂದವನೇ ಇರಬೇಕು,ಡಿಸೋಜ ಡಾಕ್ಟರ್ ನಮ್ಮೂರಿನ ಪಶುವೈದ್ಯ ಇದ್ದವರೇ ಇರಬೇಕು,ಅಮೀರ್ ಸಾಬ್, ಮಂಜ, ಪೆಂಟರ್ ಮುನ್ನ ಇವರೆಲ್ಲ ನಾವೂ ನೋಡಿರುವವರೇ ಎಂಬ ಭಾವನೆ ಬರುವಷ್ಟು ಸಲೀಸಾಗಿ ಕಥೆಗಳ ಪಾತ್ರವಾಗಿರುವುದರಿಂದ ಇಲ್ಲಿಯ ಕಥೆಗಳು ನೈಜ ಘಟನೆಗಳೇ ಇರಬಹುದು ಅನ್ನಿಸಿ ಬಿಡುವಂತೆ ಕಥೆಗಳು ನಮ್ಮನ್ನು ಆವರಿಸಿಕೊಳ್ಳುವಲ್ಲಿ ಸಫಲವಾಗಿವೆ...
ಈ ಪುಸ್ತಕದಲ್ಲಿರುವ ಕಥೆಗಳು ಗ್ರಾಮೀಣ ಲೋಕದ ಗಟ್ಟಿ ಕಥೆಗಳು.ನಾನು ಕಥೆಗಳನ್ನು ಓದಿ ಖುಷಿಯಾಗಿ ಬರೆದ ಪುಸ್ತಕ ಪರಿಚಯ ಇದು. ವಿಮರ್ಶೆ ಅಲ್ಲ. ಒಳ್ಳೆಯ ಕಥೆಗಳನ್ನು ಓದಿ ಖುಷಿ ಪಡಲು ಕಾರಣರಾದ, ಪ್ರೀತಿಯಿಂದ ಪುಸ್ತಕ ಕಳಿಸಿದ, ನಾಲ್ಕು ಸಾಲು ಬರೆಯಲು ಪ್ರೇರಣೆ ಆಗುವಂತೆ ಉತ್ತಮ ಕಥಾಸಂಕಲನವನ್ನು ಕನ್ನಡ ಕಥಾಪ್ರಪಂಚಕ್ಕೆ ನೀಡಿದ ಕೆ. ಅರುಣ್ ಪ್ರಸಾದ್ ರವರಿಗೆ ಅಭಿನಂದನೆಗಳು. ಧನ್ಯವಾದಗಳು...
ಇನ್ನೂ ಹಲವು ಪುಸ್ತಕಗಳು ತಮ್ಮಿಂದ ಮುಂದೆಯೂ ಬರಲಿ ಎಂಬ ಶುಭ ಹಾರೈಕೆಗಳು....
#ಪುಸ್ತಕ_ಪರಿಚಯ
✍️ಗಜಾನನ ಮಹಾಲೆ.
Comments
Post a Comment