Blog number 1073. ನಿಜ ಭಾರತ ದರ್ಶನ ಭಾರತೀಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ, ನಾನು ಮತ್ತು ನನ್ನ ಗೆಳೆಯರು ಬೆಂಗಳೂರಿಂದ ದೆಹಲಿಗೆ ಇಂತಹ ಪ್ರಯಾಣ ಮಾಡಿದ ಅನುಭವ.
#ನಿಜ_ಭಾರತ_ದೇಶದ_ದರ್ಶನ
#ಕಾಶ್ಮೀರದಿಂದ_ಕನ್ಯಾಕುಮಾರಿ_3573_ಕಿಮಿ_585_ರೂಪಾಯಿ.
#ಗಾಂಧೀಜಿ_ಭಾರತ_ದರ್ಶನ_ಮೂರನೆ_ದರ್ಜೆ_ರೈಲು_ಪ್ರಯಾಣದಲ್ಲಿ.
#ನನ್ನ_ಎರೆಡು_ಬಾರಿಯ_ದೆಹಲಿ_ಪ್ರಯಾಣ_ಎರಡನೆ_ದರ್ಜೆ_ರೈಲು_ಬೋಗಿಯ_ಪ್ರಯಾಣ.
ಒಮ್ಮೆ ದೆಹಲಿಗೆ ಹೋಗಿ ಬರುವ ಕಾಯ೯ಕ್ರಮ ಇತ್ತು, ಕೆಲವರು ಪ್ರಥಮ ದರ್ಜೆ, ಸ್ಲೀಪಿಂಗ್ ಕೋಚ್ ಇತ್ಯಾದಿ ಮುಂಗಡ ಕಾಯ್ದಿರಿಸಿದ್ದರು ನಾನು ಮತ್ತು ಅನೇಕ ಗೆಳೆಯರು ಸೆಕೆಂಡ್ ಕ್ಲಾಸ್ ನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ತೀರ್ಮಾನ ಮಾಡಿದೆವು.
ಇದಕ್ಕೆ ಕಾರಣ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೇಸ್ ಅಧ್ಯಕ್ಷರಾಗಬೇಕೆಂಬ ತೀರ್ಮಾನದ ನಂತರದಲ್ಲಿ ಭಾರತ ದರ್ಶನ ಮಾಡಬೇಕೆಂಬುದಾಗಿತ್ತು.
ಆಗ ಬ್ರಿಟೀಶ್ ಆಡಳಿತದಲ್ಲಿ ಥರ್ಡ್ ಕ್ಲಾಸ್ ಎಂಬ ದರ್ಜೆ ಬೋಗಿಗಳಿತ್ತು ಅದರಲ್ಲಿಯೇ ಅವರು ಪ್ರಯಾಣಿಸುತ್ತಾರೆ ನಿಜವಾದ ಭಾರತ ದರ್ಶನ ಗೊತ್ತಾಗಬೇಕಾದರೆ ಈ ಮೂರನೆ ದರ್ಜೆಯಲ್ಲಿ ಪ್ರಯಾಣಿಸಬೇಕು ಎಂದು ಬರೆದಿದ್ದಾರೆ.
ನಾವು ಎರಡನೆ ದರ್ಜೆ ಸಾಮಾನ್ಯ ಬೋಗಿಯಲ್ಲಿ (ಸ್ವಾತಂತ್ರ ನಂತರ ಮೂರನೆ ದರ್ಜೆ ಎಂಬ ಹೆಸರು ರದ್ದಾಗಿದೆ) ಪ್ರಯಾಣಿಸುವುದು ಕೇಳಿ ಅನುಭವಿ ಹಿರಿಯರು ಬುದ್ದಿ ಹೇಳಿದರು ಸುಮಾರು 40 ಗಂಟೆಯ ಎರಡು ರಾತ್ರಿಯ ದೆಹಲಿ ಪ್ರಯಾಣ ಈ ಬೋಗಿಯಲ್ಲಿ ಕಷ್ಟದಾಯಕ ಅಂದರೂ ನನ್ನ ತೀರ್ಮಾನ ಅಚಲವಾಗಿತ್ತು.
ಮಹಾರಾಷ್ಟ್ರ ದಾಟಿದ ನಂತರ ಅದರ ಅನುಭವ ಆಗಲು ಪ್ರಾರಂಭ ಆಯಿತು, ಇಡೀ ಬೋಗಿಯಲ್ಲಿ ಕಾಲಿಡಲು ಜಾಗವಿಲ್ಲ, ಸೀಟಿನ ಕೆಳಗೂ ನಿದ್ದೆ ಮಾಡುವ ಜನ, ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತದಂತೆ ಒಳಗೆ ಇರುವ ಇವರ ಜಗಳ, ಪ್ರಯಾಣ ಮಾಡಲೇ ಬೇಕಾದ ನಿಲ್ದಾಣದಲ್ಲಿ ಕಾಯುವ ಆ ಜನರೂ ಮಾಡುವ ಗಲಾಟೆ ನಂತರ ಸುಖಾಂತ್ಯ.
ಆದರೆ ಮತ್ತೆ ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತಬಾರದೆಂದು ಜಗಳ ಮಾಡುವವರು ಹಿಂದಿನ ನಿಲ್ದಾಣದಲ್ಲಿ ಜಗಳ ಮಾಡಿ ಹತ್ತಿದವರೇ!!.
ಶ್ರಮ ಜೀವಿಗಳ ಬೆವರಿನ -ಬೀಡಿ ತಂಬಾಕಿನ - ತಲೆಗೆ ಹಾಕುವ ಸಾಸಿವೆ ಎಣ್ಣೆ ವಾಸನೆಗಳಿಂದ, ಜನದಟ್ಟಣೆಯ ಬಿಸಿಯಿಂದ, ಅವರವರ ಬಾಷೆಯ ಮಾತು ಕಥೆ, ಜಗಳಗಳಿಂದ ಇಡೀ ಬೋಗಿಯೇ ಒಂದು ಮಿನಿ ಭಾರತವಾಗಿರುತ್ತಿತ್ತು.
ಇದರ ಮಧ್ಯ ಪ್ರಯಾಣಿಕರ ಮನರಂಜಿಸಲು ಬರುವ ಹಾಡುಗಾರರು, ತೃತಿಯ ಲಿಂಗಿಗಳು, ಭಜನಾ ಕಾರರಿಗೆ ಟಿಕೇಟ್ ಇಲ್ಲದೆ ಪ್ರಯಾಣಿಸುವ ಈ ಬಡ ಕೂಲಿ ಕಾರ್ಮಿಕರು ಕೈಯಲಾದ ಕಾಸು ಭಕ್ಷೀಸು ನೀಡುವುದು ವಿಶೇಷವೇ.
ಪ್ರಯಾಣದ ಪ್ರಾರಂಭದಲ್ಲಿ ನಮ್ಮ ವೇಷ ಭೂಷಣ, ಪತ್ರಿಕೆ ಪುಸ್ತಕ ಓದುವುದು ನೋಡಿ ಅಂತರ ಕಾಪಾಡಿಕೊಂಡ ಅವರೆಲ್ಲ ನಂತರ ನಾವೆಲ್ಲ ಅವರಿಗೆ ಅವರ ಮಕ್ಕಳಿಗೆ ತಿಂಡಿ ತೀರ್ಥ ಕೊಡಿಸಿದಾಗ ಅವರನ್ನೂ ನಮ್ಮವರಂತೆ ಕಂಡಾಗ ಅವರೆಲ್ಲ ನಮಗೆ ಸಹಕರಿಸುತ್ತಿದ್ದರು.
ಅವರ ಪ್ರಯಾಣದ ಉದ್ದೇಶ ಒಂದೇ ಕೂಲಿಗಾಗಿ ಊರಿಂದ ಇನ್ನೊಂದು ಪಟ್ಟಣಕ್ಕೆ ಅಥವ ವರ್ಷ ಪೂರ್ತಿ ದುಡಿದು ಗಳಿಸಿ ಊರಿಗೆ ಮರು ಪ್ರಯಾಣ ಅವರದ್ದು.
ಅವರ ಬಾಯಲ್ಲಿ ಈ ರೀತಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಕ್ಕೆ ಅವರು ಕರೆಯುವುದು ಚಾಲೂ ಬೋಗಿ ಅಂತ ಹೆಚ್ಚಿನವರು ಟಿಕೇಟ್ ಖರೀದಿಸುವುದಿಲ್ಲ ಇವರನ್ನೆಲ್ಲ ಟೀಟಿ ತಪಾಸಣಿ ಮಾಡುವುದೂ ತ್ರಾಸದಾಯಕವೇ.
ತಂಬಾಕುವಿನ ವಿವಿದ ಪ್ರಕಾರಗಳು ಇವರ ಚಟವಾಗಿದೆ ಹೆಚ್ಚಿನವರು ಪ್ರಯಾಣದಲ್ಲಿ ಉಪವಾಸವೇ ಅಭ್ಯಾಸ.
ಇದೇ ರೀತಿ ಇನ್ನೊಮ್ಮೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟಕ್ಕೆ ದೆಹಲಿಗೆ ಸುಮಾರು 35 ಜನ ಎರಡನೆ ದಜೆ೯ಯಲ್ಲೇ ಪ್ರಯಾಣ ಮಾಡಿದ್ದೆವು, ಬೋಗಿಗೆ ನಮ್ಮ ಬ್ಯಾನರ್ (ನಾವು ಹೆಚ್ಚು ಜನ ಇದ್ದಿದ್ದರಿಂದ 😀) ನೋಡಿ ಭಾರತದ ಜನ ಸಾಮಾನ್ಯ ರೈಲು ಪ್ರಯಾಣಿಕರು ಗೌರವದಿಂದ ಸಹಕಾರವೂ ನೀಡಿದರು.
ಆಗಿನ 20 ವರ್ಷದ ಹಿಂದಿನ ರೈಲ್ವೆ ವ್ಯವಸ್ಥೆ ತುಂಬಾ ಬದಲಾಗಿದೆ ಇನ್ನೂ ಹೆಚ್ಚಿನ ಸುಧಾರಣೆಯೂ ಆಗಬೇಕು.
Comments
Post a Comment