Blog number 1066. ಕಲಾವಿದ ಕಲೆಯನ್ನೆ ಅವಲಂಬಿಸದೆ ಸ್ವಯಂ ಉದ್ಯೋಗದ ಜೊತೆ ಕಲಾ ಸೇವೆ ಮಾಡುವ ಹಾಸ್ಯ ಕಲಾವಿದ ಎಸ್.ಸಿ. ಸೈದೂರು ಕಲಾವಿದರಿಗೆ ರೋಲ್ ಮಾಡೆಲ್ ಆಗಿದ್ದಾರೆ, ಕೊರಾನಾ ಕಾಲದಲ್ಲಿ ಅವರು ಕಂಡುಕೊಂಡ ದಾರಿ.
#ಎಸ್_ಸಿ_ಸೈದೂರ್_ಎಂದೇ_ಪ್ರಖಾತರಾದ_ಶಿವಕುಮಾರ್_ಸೈದೂರು
#ಹಾಡು_ಹಾಸ್ಯ_ನೃತ್ಯ_ಮಿಮಿಕ್ರಿ_ರಸಮಂಜರಿಗಳ_ಕಲಾವೈವಿಧ್ಯ_ಸಾಂಸ್ಕೃತಿಕ_ಸಂಸ್ಥೆ
#ಜೀವನೋಪಾಯಕ್ಕಾಗಿ_ಸಂಜೆ_ಸಾಗರದ_ಜೋಗ್_ರಸ್ತೆಯಲ್ಲಿ_ಇವರ_ಒಮಿನಿ_ಚಾಟ್ಸ್_ಕೌಂಟರ್_ಆಗಿ_ಬದಲಾಗುತ್ತದೆ.
#ಕೊರಾನಾ_ಕಾಲದಲ್ಲಿ_ಕಂಡುಕೊಂಡ_ಹೊಸಮಾರ್ಗ.
ಸಾಗರ ತಾಲ್ಲೂಕಿನ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿ ಪ್ರದೇಶ ಸೈದೂರು ಸಾಗರ ತಾಲ್ಲೂಕಿಗೆ ಸೇರಿದೆ ವಿಧಾನ ಸಭಾ ವ್ಯಾಪ್ತಿ ಸೊರಬಕ್ಕೆ ಸೇರಿದೆ, ಇಲ್ಲಿನ ಕೃಷಿ ಕುಟುಂಬದ 12 ಜನ ಮಕ್ಕಳಲ್ಲಿ ಶಿವಕುಮಾರ್ ಸಣ್ಣವರು.
ತಂದೆಯ ಸುಮಾರು 60 ಎಕರೆ ಕೃಷಿ ಭೂಮಿಯಲ್ಲಿ ಇವರಿಗೆ 2 ಎಕರೆ ಕೃಷಿ ಭೂಮಿ ಪಾಲು ಇವರಿಗೆ ಬಂದಿದೆ.
ಪದವಿ ವಿದ್ಯಾಭ್ಯಾಸ ಸಾಗರದಲ್ಲಿ ಲಾಲ್ ಬಹದ್ದೂರು ಕಾಲೇಜಿನಲ್ಲಿ ಮಾಡುತ್ತಲೇ ಪಾರ್ಟ್ ಟೈಂ ಆಗಿ ಸಾಗರದ ಪ್ರಸಿದ್ಧ ಔಷದಿ ಮಾರಾಟ ಸಂಸ್ಥೆ ಮಹಾಲಕ್ಷ್ಮೀ ಮೆಡಿಕಲ್ಸ್ ನಲ್ಲಿ ಕೆಲಸ ಮಾಡುತ್ತಾ ವಿದ್ಯಾಬ್ಯಾಸ ಪೂಣ೯ ಮಾಡಿ ನಂತರ ಸಾಗರ ಪಟ್ಟಣದಲ್ಲಿ ಕಲಾವಿದರಾಗಿ ತಮ್ಮ ಜೀವನ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು.
ಸಾಮಾನ್ಯವಾಗಿ ಕಲಾವಿದರು ಅವಕಾಶ ಸಿಕ್ಕಾಗ ಮೃಷ್ಟಾನ ಬೋಜನ ಇಲ್ಲದಿದ್ದಾಗ ಉಪವಾಸ ಮಾಡುತ್ತಾ ಅವಕಾಶ ಹುಡುಕಿ ಹುಡುಕಿ ಮುಪ್ಪಾಗಿ ಬಿಡುತ್ತಾರೆ ಆದರೆ ಶಿವಕುಮಾರ್ ಮಾತ್ರ ಬಿನ್ನವಾಗಿದ್ದರು.
ಉಪ್ಪಿನಕಾಯಿ ಹಪ್ಪಳದ ಉದ್ಯಮ ಮಾಡಿಕೊಂಡು ಅದನ್ನು ತಮ್ಮ M-80 ಬೈಕ್ ನಲ್ಲಿ ಸಾಗರದ ಪಟ್ಟಣದ ಮೂಲೆ ಮೂಲೆಯಲ್ಲಿ ಅದನ್ನು ಮಾರಿ ಜೀವನ ಮಾಡುತ್ತಾ ನಂತರ ಮಾರುತಿ ವ್ಯಾನಿನಲ್ಲಿ ಸುಮಾರು 80 ಗೃಹ ಬಳಕೆಯ ಸಾಂಬಾರು ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾ ಗ್ರಾಹಕರ ತೃಪ್ತಿಗಳಿಸಿದ್ದರು.
ಜೊತೆ ಜೊತೆಗೆ ಇವರ ಹಾಡು - ಹಾಸ್ಯ, ಕಲಾ ವೈವಿಧ್ಯ ಸಂಸ್ಥೆಗಳ ಮೂಲಕ ಎಸ್.ಸಿ.. ಸೈದೂರ್ ಎಂದೇ ಹೆಸರು ಮಾಡಿದ್ದರು, ಇವರು ಇವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಜೊತೆ ಯಾವುದೇ ಸಮಾರಂಭ ಜಾತ್ರೆಗಳಲ್ಲಿ ಕಾರ್ಯಕ್ರಮದ ಆಯೋಜಕರ ಬಡ್ಜೆಟ್ ಗೆ ಅನುಗುಣವಾಗಿ ಸಭಿಕರಿಗೆ ಮನ ತೃಪ್ತಿ ಮಾಡುವ ವಿಶೇಷ ಕಲಾವಿದರು ಇವರು.
ನಾನು ನಮ್ಮ ಊರಿನ ವರಸಿದ್ದಿ ವಿನಾಯಕ ದೇವರ ಜಾತ್ರೆಯಲ್ಲಿ ಇವರ ಮತ್ತು ಇವರ ಮಗಳು ಕು.ಶ್ರೀಗೌರಿ ಸೈದೂರು ಸೇರಿ ನಡೆಸಿ ಕೊಟ್ಟ ಅದ್ಬುತ ಕಾರ್ಯಕ್ರಮ ಸ್ವತಃ ನೋಡಿದ್ದೇನೆ.
ಈಗ ಮಗಳು ಆಳ್ವಾಸ್ ಕಾಲೇಜಿನಲ್ಲಿ ಮೆರಿಟ್ ನಲ್ಲಿ ಪದವಿ ವ್ಯಾಸಂಗದ ಜೊತೆ ಅಲ್ಲಿ ಕಲಾವಿದೆ ಆಗಿಯೂ ಹೆಸರು ಗಳಿಸಿದ್ದಾಳೆ.
ಕೊರಾನಾದ ಎರೆಡು ವರ್ಷ ಈ ಕುಟುಂಬ ಸಾಂಸ್ಕೃತಿಕ ಕಾರ್ಯಕ್ರಮವೂ ಇಲ್ಲದೆ ಮತ್ತು ತಮ್ಮ ಗೃಹ ಕೈಗಾರಿಕೆಯಾದ ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ತಯಾರಿಕೆ ಮತ್ತು ಮಾರಾಟವಿಲ್ಲದೆ ತತ್ತರಿಸಿತ್ತು.
ಮೊನ್ನೆ ನಮ್ಮಲ್ಲಿಗೆ ಬಂದಾಗ ನಾನು ಇದನ್ನೆ ಕೇಳಿದ್ದು ಕೊರಾನ ಹೇಗೆ ಎದುರಿಸಿದಿರಿ? ಅಂತ.
ಪಿತ್ರಾಜಿ೯ತವಾಗಿ ಬಂದ ಜಮೀನಲ್ಲಿ ಅಡಿಕೆ ತೋಟ ಮಾಡಿದರಂತೆ ನಂತರ ಲಾಕ್ ಡೌನ್ ಮುಗಿದಾಗ ತಮ್ಮದೇ ಮಾರುತಿ ವ್ಯಾನ್ ಗೆ ಸ್ವಲ್ಪ ಆಲ್ಟರೇಷನ್ ಮಾಡಿ ಸಾಗರದ ಜೋಗ್ ರಸ್ತೆಯ ಪ್ರಗತಿ ಶಾಲೆ ಹತ್ತಿರ ದಿನಾ ಸಂಜೆ ವೈವಿಧ್ಯಮಯವಾದ ವಿಭಿನ್ನವಾದ ಮಸಾಲೆ ಮಂಡಕ್ಕಿ, ಚಾಟ್ಸ್ ಗಳು, ಲಿಂಬೂ ಸೋಡ ಮಾರಾಟ ಪ್ರಾರಂಬಿಸಿ ಈಗ ಇವರ ಎಸ್.ಸಿ. ಸೈದೂರ್ ಮಸಾಲಾ ಮಂಡಕ್ಕಿ ಪ್ರಸಿದ್ಧಿ ಆಗಿದೆ.
ಕಲಾವಿದರಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡಿ ರಸದೌತಣ ಬಡಿಸುವುದರ ಜೊತೆ ಇವರ ಈ ಚಾಟ್ಸ್ ಮೊಬೈಲ್ ಅಂಗಡಿ ಮೂಲಕವೂ ಆಹಾರ ಪ್ರಿಯರಿಗೆ ತೃಪ್ತಿ ನೀಡುತ್ತಿದ್ದಾರೆ.
ಈ ಮೂಲಕ ಇವರು ಕಲಾವಿದರಿಗೆ ಪ್ರೇರಕರಾಗಿದ್ದಾರೆ, ರೋಲ್ ಮಾಡಲ್ ಆಗಿದ್ದಾರೆ ಕೇವಲ ಕಲೆಯನ್ನೆ ನಂಬಿ ತಮ್ಮ ನಂಬಿದ ಕುಟುಂಬವನ್ನು ಉಪವಾಸಕ್ಕೆ ಕೆಡುವಬೇಡಿ, ಕಲಾ ಸೇವೆಯ ಜೊತೆ ಕುಟುಂಬ ಸೇವೆಗಾಗಿ ಏನಾದರೂ ಉದ್ಯೋಗ ಮಾಡಿ ಆ ಮೂಲಕ ಅನ್ನಕ್ಕೆ ದಾರಿ ಕಂಡು ಹಿಡಿದುಕೊಳ್ಳಿ ಎಂಬ ಸಂದೇಶ್ S.C. ಸೈದೂರರ ಜೀವನಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.
ಅವರ ಕಾರ್ಯಕ್ರಮ ಇರುವ ಊರಲ್ಲಿ ಈ ಮಸಾಲೆ ವೈವಿಧ್ಯ ಮಂಡಕ್ಕಿ ಮತ್ತು ಸೋಡಾ ಅಂಗಡಿಯೂ ಆ ದಿನ ಅಲ್ಲಿ ಸೇರಿದ ಸಭಿಕರ ರುಚಿಗೆ ಲಭ್ಯ ಮತ್ತೊಂದು ವಿಶೇಷ ಅಂದರೆ ಇವರು ವಿದ್ಯಾರ್ಥಿಗಳಿಗೆ ಇವರು ಮಾರಾಟ ಮಾಡುವ ಆಹಾರ ತಿನಿಸು ಮಾತ್ರ ಅರ್ದ ಬೆಲೆಗೆ.
ಕೆಲವು ವರ್ಷದಲ್ಲಿ ಉತ್ತಮ ಅಡಿಕೆ ಫಸಲು ಗಳಿಸುತ್ತೀರಾ ಮತ್ತು ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಅತ್ಯುತ್ತಮ ವಿಧ್ಯೆ ಗಳಿಸಿ ಒಳ್ಳೆಯ ಅಳಿಯ೦ದಿರೂ ದೊರೆಯಲಿ ಅಲ್ಲಿವರೆಗೆ ನಿಮ್ಮ ಕಲೆ ಮತ್ತು ಕಾಯಕ ಮುಂದುವರಿಯಲಿ ಎಂದು ಹಾರೈಸಿದೆ.
ನೀವು ಸಾಗರದಿಂದ ಜೋಗ ಮಾರ್ಗದಲ್ಲಿ ಪ್ರಗತಿ ಶಾಲೆ ಪಕ್ಕದಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ಇವರು ತಯಾರಿಸುವ ವೈವಿದ್ಯಮಯ ಮಸಾಲೆ ಮಂಡಕ್ಕಿ ರುಚಿ ನೋಡಬಹುದು.
Comments
Post a Comment