Blog number 1091. ಶರಾವತಿ ನದಿ ಮುಳುಗಡೆ ಸಂತ್ರಸ್ಥರ ನಿಯೋಗ ಪ್ರದಾನಿ ಜವಾಹರಲಾಲ್ ನೆಹರೂರವರನ್ನು ಬೇಟಿ ಮಾಡಿತ್ತು, ಸಂತ್ರಸ್ಥರಿಗಾಗಿ ನಿರ್ಮಿಸಿದ ಸಾಗರದ ನಿವೇಶನಗಳು,ಭದ್ರಾವತಿ ತರಿಕೆರೆಯ ಕೃಷಿ ಭೂಮಿಗಳು ಯಾರದ್ದೋ ಪಾಲಾಗಿದೆ, ರಾತ್ರೋ ರಾತ್ರಿ ಸಂತ್ರಸ್ಥರನ್ನು ತಂದು ಅರಣ್ಯದಲ್ಲಿ ಒಗೆದು ಹೋದ ಸರ್ಕಾರ ಅವರಿಗೆ ಈವರೆಗೆ ಭೂಮಿ ಹಕ್ಕು ನೀಡಿಲ್ಲ
#ಅವೈಜ್ಞಾನಿಕ_ಪರಿಹಾರ_ಪುನರ್_ವಸತಿ_ಯೋಜನೆ
#ಆರ್ಥಿಕ_ಸಾಮಾಜಿಕವಾಗಿ_ಮೂರು_ತಲೆಮಾರು_ಕಷ್ಟದಲ್ಲಿ_ಕಳೆದಿದೆ.
#ಮುಳುಗಡೆ_ರೈತರ_ಕುಟುಂಬಕ್ಕೆ_ಒಂದು_ಉದ್ಯೋಗದ_ಭರವಸೆ_ಈಡೇರಲಿಲ್ಲ.
#ಸಾಗರದ_ಸಂಜಯ್_ಪಾಲಿಟೆಕ್ನಿಕ್_ಪಕ್ಕದ_ಶರಾವತಿ_ಸಂತ್ರಸ್ಥರ_ನೂರಾರು_ನಿವೇಶನ_ಯಾರ_ಪಾಲಾಯಿತು?
1939 ರಲ್ಲಿ ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ತಾಲ್ಲೂಕಿನ ಕರೂರು - ಬಾರಂಗಿ ಹೋಬಳಿಯ ಮಡೆನೂರು ಹಿರೇಬಾಸ್ಕರ ಡ್ಯಾಂ ನಂತರ ಇಲ್ಲಿ೦ದ 20 ಕಿ ಮಿ ಜೋಗ್ ಸಮೀಪದ ಲಿಂಗನಮಕ್ಕಿಯಲ್ಲಿ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಯಲ್ಲಿ ಮುಳುಗಡೆ ಆದ ಜನವಸತಿ ಕೇಂದ್ರಗಳು ಮತ್ತು ಪಲವತ್ತಾದ ಜಮೀನು ಅಡಿಕೆ ತೋಟಗಳು ಅಪಾರ.
ಮೊದಲ ಮುಳುಗಡೆ ಮಡೆನೂರು ತನಕ ಹೊಸನಗರ ತಾಲ್ಲೂಕ್ ಭೂ ಪ್ರದೇಶವೂ ಸೇರಿ ಆದಾಗಲೇ ಅಲ್ಲಿನ ಸಂತ್ರಸ್ಥರ ಪುನರ್ ವಸತಿ ವ್ಯವಸ್ಥಿತವಾಗಿ ಆಗಿರಲೇ ಇಲ್ಲ ಆಗ ಬ್ರಿಟೀಶ್ ನಿಯಂತ್ರಣದ ಮೈಸೂರು ಆಡಳಿತವಾಗಿತ್ತು ಬ್ರಿಟೀಶರಿಗೆ ಭಾರತೀಯ ಸಂತ್ರಸ್ಥರ ಪುನರ್ವಸತಿಗೆ ಅಂತಹ ಕಾಳಜಿ ಇರಲಿಲ್ಲ ಎಂಬುದು ವಾಸ್ತವ ಸತ್ಯ.
ಆದರೆ 1964ರಲ್ಲಿ ಹಿರೇಬಾಸ್ಕರ ಡ್ಯಾಂ ನ್ನೆ ಮುಳುಗಿಸಿ ಮಡೆನೂರುನಿಂದ 20 ಕಿ.ಮಿ.ದೂರದ ಲಿಂಗನಮಕ್ಕಿ ಡ್ಯಾಂ ನಿಮಿ೯ಸಿದಾಗ ಎರಡನೆ ಸಾರಿ ಮುಳುಗಡೆ ಆದವರ ಸಂಖ್ಯೆ ಅಸಂಖ್ಯ ಹಾಗಂತ 1964 ರಲ್ಲಿ ಸ್ವಾತಂತ್ರ್ಯ ಭಾರತದ ಆಡಳಿತವಿತ್ತು 3ನೇ ಚುನಾವಣೆಯೂ ಆಗಿತ್ತು ಆದರೆ ಸಂತ್ರಸ್ಥರ ಪುನರ್ವಸತಿ ಮಾತ್ರ ಬ್ರಿಟೀಷ್ ಆಡಳಿತಕ್ಕೆ ಬಿನ್ನವಾಗದಿದ್ದದ್ದು ಮಾತ್ರ ಬೇಸರದ ಸಂಗತಿ.
ಆಗ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸದರಾಗಿ ಪುನರಾಯ್ಕೆ ಆಗಿದ್ದ ಪ್ರದಾನಿ ನೆಹರೂರವರೊಂದಿಗೆ ನಿಕಟ ಸಂಬಂದ ಹೊಂದಿದ್ದ ಸಾಗರ ತಾಲ್ಲೂಕಿನ ಕಾಗೋಡಿನ ಕೆ.ಜೆ. ಒಡೆಯರ್ ನೇತೃತ್ವದಲ್ಲಿ ಶರಾವತಿ ಮುಳುಗಡೆ ಪ್ರದೇಶದ ರೈತರ ನಿಯೋಗ ಒಂದು ದೆಹಲಿಯ ಪ್ರದಾನಿಯವರನ್ನು ಅವರ ಬೆಳಗಿನ ಸಮಯದಲ್ಲಿ ಬೇಟಿ ಮಾಡಿ ಮನವಿ ನೀಡಿತ್ತು.
ಈ ಸಂದರ್ಭದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಅಹವಾಲು ಸಂಸದ ಕೆ.ಜಿ. ಒಡೆಯರ್ ರಿಂದ ತಿಳಿದ ಪ್ರದಾನಿ ನೆಹರೂ ತಾವು ಓದುತ್ತಿದ್ದ ವೃತ್ತ ಪತ್ರಿಕೆಯ ತುದಿ ಹರಿದು ತಾವು ಕುಡಿಯುತ್ತಿದ್ದ ಕಾಫಿ ಕಪ್ಪಿಗೆ ಅದ್ದಿದ್ದರಂತೆ ಅಂದರೆ ದೇಶ ವಿಶಾಲವಿದೆ ಶರಾವತಿ ನದಿಯಿಂದ ಮುಳುಗಡೆ ಆದರೇನು ನಷ್ಟವಿಲ್ಲ ಎಂಬುದು ನೆಹರೂರವರ ಈ ವರ್ತನೆ ಎಂದು ಅರ್ಥೈಸಿದರೂ ದೇಶದ ಪ್ರಧಾನಿ ಈ ಮುಳುಗಡೆಯಿಂದ ತನ್ನ ಪ್ರಜೆಗಳ ಜೀವನದ ತ್ಯಾಗದ ಬಗ್ಗೆ ಅನುಕಂಪವಿರಲಿ ಅವರಿಗೆ ಪುನರ್ವಸತಿಯ ಭರವಸೆಯೂ ನೀಡಲಿಲ್ಲ ಎಂಬ ವಿಷಾದ ಭಾವನೆ ನಿಯೋಗ ವ್ಯಕ್ತ ಪಡಿಸಿತ್ತಂತೆ.
ಮುಳುಗಡೆ ಆದ ರೈತರ ಜಮೀನು ಮನೆ ಇದ್ದವರಿಗೆ ಮಾತ್ರ ಪರಿಹಾರ ನೀಡಲಾಯಿತು ಅವರಿಗೆಲ್ಲ ಭದ್ರಾವತಿ, ತರಿಕೆರೆ,ಗಾಜನೂರು ಭಾಗದಲ್ಲಿ ಜಮೀನು ಕೂಡ ಮ೦ಜೂರು ಮಾಡಿದರು ಆದರೆ ಬಹುತೇಕ ಮುಳುಗಡೆ ಕುಟುಂಬ ಪರಿಹಾರದ ಹಣ ಮತ್ತು ತಮ್ಮ ದುಡಿಮೆಯ ಹಣದಲ್ಲಿ ಜಮೀನು ಖರೀದಿಸಿ ಅಲ್ಲಿ ನೆಲೆನಿಂತು ನಂತರ ತಮಗೆ ಪರಿಹಾರವಾಗಿ ನೀಡಿದ ಜಮೀನುಗಳಿಗೆ ಹೋದರೆ ಆ ಭೂಮಿಗಳು ಯಾರದೋ ಪಾಲಾಗಿತ್ತು, ತೋಳು ಬಲ ಮತ್ತು ಪ್ರಭಾವ ಇದ್ದವರಿಗೆ ಮಾತ್ರ ಆ ಜಮೀನು ದೊರೆಯಿತು.
ಈ ಮಧ್ಯೆ ಸರಕಾರ ಮುಳುಗಡೆ ಸಂತ್ರಸ್ಥರ ಕುಟುಂಬದಲ್ಲಿ ಒಬ್ಬರಿಗೆ ಜೋಗದ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಅಥವ ಕರ್ನಾಟಕ ವಿದ್ಯುತ್ ಬೋರ್ಡ್ ನಲ್ಲಿ ಉದ್ಯೋಗ ನೀಡುವ ಭರವಸೆಯೂ ಹುಸಿಯಾಯಿತು.
ಇದು ಭೂ ದಾಖಲೆ ಇದ್ದ ರೈತರ ಕುಟುಂಬದ್ದಾದರೆ ಈ ರೈತ ಪರಿವಾರದ ಕೃಷಿಗೆ ಪೂರಕವಾಗಿದ್ದ ಕೃಷಿ ಕಾರ್ಮಿಕರು, ಕೃಷಿ ಉಪಕರಣ ತಯಾರಿಸುವ ಕುಶಲ ಕರ್ಮಿಗಳು ಯಾವುದೇ ದಾಖಲೆ ಹೊಂದಿರದ ಮನೆ- ಜಮೀನು -ಜಾನುವಾರುಗಳನ್ನು ಹೊಂದಿದ್ದರಿಂದ ಅವರು ಮುಳುಗಡೆ ಸಂತ್ರಸ್ಥರೆಂದು ಸರ್ಕಾರ ಪರಿಗಣಿಸಲೇ ಇಲ್ಲ.
ಇವರ ಸಂಖ್ಯೆ ಭೂಮಾಲಿಕರಿಗಿಂತ ಕೆಲವು ಪಟ್ಟು ಜಾಸ್ತಿ ಇತ್ತು ಈ ಬಡವರ್ಗ ಬದುಕಿಗಾಗಿ ಎಲ್ಲೆಲ್ಲೋ ವಲಸೆ ಹೋಯಿತು.
ಈ ಪ್ರದೇಶದಲ್ಲಿದ್ದ ಹೆಚ್ಚಿನ ಸಂಖ್ಯೆಯ ದೀವರು ಮನೆ- ಜಮೀನು ಮುಳುಗಿದರೂ ಪರಿಹಾರ ಇಲ್ಲದೆ ಪುನರ್ವಸತಿ ಇಲ್ಲದೆ ಅತಂತ್ರರಾದರು ಇವರು 10 ನೇ ಶತಮಾನದಲ್ಲಿ ಈ ಪ್ರದೇಶ ಆಳಿದ ಅನೇಕ ಪಾಳೆಗಾರರ, ತುಂಡು ರಾಜರ ವಂಶಸ್ಥರಾಗಿದ್ದವರು ಮತ್ತು ಅವರ ಸೈನಿಕರಾಗಿದ್ದವರು.
ಮುಳುಗಡೆಯ ನೀರು ಏರಲು ಪ್ರಾರಂಭವಾದಾಗ ಸರ್ಕಾರ ಲಾರಿಗಳಲ್ಲಿ ಶಿವಮೊಗ್ಗ ತಾಲ್ಲೂಕಿನ ಚೋರಡಿ ಸಮೀಪದ ಚೋಡನಹಳ್ಳ, ಬ್ಯಾಡನಹಳ್ಳ,ಪುರದಾಳು, ತಮಡಿಹಳ್ಳಿ ಮು೦ತಾದ ಕಡೆ ರಾತ್ರೋ ರಾತ್ರಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಆದರೆ ಭೂದಾಖಲೆ ಇಲ್ಲದ ಬಡ ಕುಟುಂಬಗಳನ್ನು ಬಲತ್ಕಾರವಾಗಿ ತಂದು ದಟ್ಟ ಅರಣ್ಯದಲ್ಲಿ ಬಿಟ್ಟು ಹೋದರು ಮತ್ತು ಕೆಲವರು ತಮ್ಮ ಸಾಕುಪ್ರಾಣಿ ಜಾನುವಾರು ತಂದರು ಕೆಲವರು ತರಲಿಲ್ಲ, ಕೆಲ ಕಡೆ ಸರ್ಕಾರ ಬುಲ್ಡೋಜರ್ ನಿಂದ ಸ್ವಲ್ಪ ಜಾಗ ಸಮತಟ್ಟು ಮಾಡಿತು.
ಈ ರೀತಿ ಸಾಗರ - ಹೊಸನಗರದ ಕೆಲ ಪ್ರದೇಶಗಳಲ್ಲಿ ನೆಲೆನಿಂತ ಶರಾವತಿ ಸಂತ್ರಸ್ಥರಿಗೆ ಅವರು ನೆಲೆಸಿದ ಜಮೀನು ಅರಣ್ಯ ಪ್ರದೇಶದ ಹೊರಗಿನ ಭೂಮಿ ಆದ್ದರಿಂದ 1993 ರಲ್ಲಿ ಬಗರ್ ಹುಕುಂ ಹಕ್ಕು ಪತ್ರ ದೊರೆತು ಭೂಮಿ ಹಕ್ಕು ದೊರೆತಿದೆ.
1939 ರ ಹಿರೇ ಭಾಸ್ಕರ ಡ್ಯಾಂ ಮುಳುಗಡೆ ಮತ್ತು 1964ರ ಲಿಂಗನಮಕ್ಕಿ ಮುಳುಗಡೆಯ ಅನೇಕ ಸಂತ್ರಸ್ಥರು ಈಗಾಗಲೇ ಮೂರು ತಲೆಮಾರು ಈ ಪ್ರದೇಶಗಳಲ್ಲಿ ಕಳೆದಿದ್ದಾರೆ ಇತ್ತೀಚೆಗೆ ಇವರಿಗೆ ರಸ್ತೆ - ಶಾಲೆ - ವಿದ್ಯುತ್ -ಬಾವಿ ದೊರೆತಿದೆ ಆದರೆ ಇವರಿಗೆ ಭೂಮಿ ಹಕ್ಕು ಸಿಕ್ಕಿಲ್ಲ ಇದರ ಮಧ್ಯ ವನ್ಯಜೀವಿ ಅಭಯಾರಣ್ಯದ ಪ್ರದೇಶಕ್ಕೆ ಇವರ ಜಮೀನು ಮನೆಗಳು ಸೇರಿದ್ದರಿಂದ ಸರಕಾರ ಇವರನ್ನು ಸ್ಥಳಾಂತರಿಸುವ ಪ್ಯಾಕೇಜ್ ಘೋಷಿಸಿದೆ.
ಭೂಮಿ ಹಕ್ಕು ಇಲ್ಲವಾದ್ದರಿಂದ ಇವರಿಗಿ ಬ್ಯಾಂಕ್ ಸಾಲ ಸೌಲಭ್ಯವೂ ಇಲ್ಲವಾಗಿದೆ.
ರಿಪ್ಪನ್ ಪೇಟೆ ಸಮೀಪದ ಅರಸಾಳು ಅರಣ್ಯದ ಪ್ರದೇಶದಲ್ಲಿ 70 ರ ದಶಕದಲ್ಲಿ ಹೊಸನಗರದ ಸ್ವಾಮಿ ರಾವ್ ನೇತೃತ್ವದಲ್ಲಿ ಮುಳುಗಡೆ ರೈತರು ಗಂದದ ಮರ ಕಿತ್ತು ಭೂಮಿಗಾಗಿ ಪ್ರತಿಭಟಿಸಿ ಜೈಲು ಸೇರಿದ್ದರು ಈ ಹೋರಾಟ ಗಂದದ ಕಾನಿನ ಹೋರಾಟ ಅಂತ ಅನೇಕ ವರ್ಷ ಜನರ ನೆನಪಲ್ಲಿತ್ತು.
ಕೆ .ಜಿ. ಒಡೆಯರ್ ನಂತರ ಅನೇಕರು ಶಿವಮೊಗ್ಗ ಜಿಲ್ಲೆಯ ಸಂಸದರಾದರು ಜೆ.ಹೆಚ್.ಪಟೇಲರು, ಎಸ್.ಟಿ.ಖಾದ್ರಿ, ಕೆ.ಜಿ. ಶಿವಪ್ಪ, ಡಿ.ಬಿ.ಚಂದ್ರೇಗೌಡರು, ಅಯನೂರು ಮಂಜುನಾಥ್, ಬಂಗಾರಪ್ಪ, ಯಡೂರಪ್ಪ, ರಾಘವೇಂದ್ರ ಸಂಸದರಾದರು.
ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಜೆ.ಹೆಚ್.ಪಟೇಲರು, ಬಂಗಾರಪ್ಪ, ಯಡೂರಪ್ಪ ಮುಖ್ಯಮಂತ್ರಿಗಳಾಗಿದ್ದರು.
ಬಹುಸಂಖ್ಯಾತ ಮುಳುಗಡೆ ಸಂತ್ರಸ್ಥರಾದ ದೀವರ ಜನಾಂಗದ ಮೂಕಪ್ಪ , ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಸ್ವಾಮಿ ರಾವ್, ಜೆ.ಡಿ.ನಾರಾಯಣಪ್ಪ, ಬಿ. ದರ್ಮಪ್ಪ, ಗೋಪಾಲಕೃಷ್ಣ ಬೇಳೂರು, ಮದು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಕೂಡ ವಿದಾನ ಸಭಾ ಸದಸ್ಯರು ಮ೦ತ್ರಿಗಳೂ ಆಗಿದ್ದರು.
ಮುಳುಗಡೆಯ ಸಂಕಷ್ಟದ ಕಾದಂಬರಿಗಳು, ಸಿನಿಮಾ ಕೂಡ ಬಂದಿದೆ.
ಆದರೂ ಈ ಸಮಸ್ಯೆ ಪರಿಹಾರ ಏಕೆ ಆಗಲಿಲ್ಲ? ಎ೦ಬ ಪ್ರಶ್ನೆ ನಿನ್ನೆ (27- ನವೆಂಬರ್ -2022) ತೀರ್ಥಹಳ್ಳಿಗೆ ಬೇಟಿ ನೀಡಿ ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್ ನೇತೃತ್ವದ ಮುಳುಗಡೆ ಸಂತ್ರಸ್ಥರಿಂದ ಅರ್ಜಿ ಸ್ವೀಕರಿಸಿದಾಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಪ್ರಶ್ನಿಸಿದ್ದಾರೆ ಇದು ಸತ್ಯ ಕೂಡ.
ಹಾಗೆಯೇ ಅವರಾರು ಮಾಡಲಿಲ್ಲ ಈಗ ಆಯ್ಕೆ ಆದ ನಿಮ್ಮ ಸಕಾ೯ರ ಕೂಡಲೇ ಬಗೆಹರಿಸಿ ಎಂದು ಕಾಂಗ್ರೇಸ್ ಪಕ್ಷ ಜನಾಕ್ರೋಶ ಎಂಬ ಪಾದಯಾತ್ರೆ ಅಯನೂರಿನಿಂದ ಶಿವಮೊಗ್ಗಕ್ಕೆ ಪ್ರಾರಂಭವಾಗಿದೆ ಅಲ್ಲಿ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾತಾಡಲಿದ್ದಾರೆ.
ಮುಳುಗಡೆ ರೈತರ ಸಮಸ್ಯೆ ಬಹುತೇಕ ಈಗಿನ ರಾಜಕಾರಣಿಗಳಿಗೆ ಸರಿಯಾಗಿ ಗೊತ್ತೇ ಇಲ್ಲ, ಚುನಾವಣಾ ಸಂದಭ೯ದಲ್ಲಿ ಮುನ್ನಲೆಗೆ ಬರುವ ಈ ವಿಷಯ ನಂತರ ಪುನಃ ಸುದ್ದಿ ಆಗುವುದು ಮುಂದಿನ ಚುನಾವಣೆಯಲ್ಲೇ.
ಈ ಹೋರಾಟದ ಸರಿಯಾದ ಮಾಹಿತಿ ಹೊಂದಿರುವವರು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನ ಮಾಜಿ ಅಧ್ಯಕ್ಷ ತೀನಾ ಶ್ರೀನಿವಾಸ್ ಮತ್ತು ಶಿವಮೊಗ್ಗದ ಮಾಜಿ ನಗರಸಭಾ ಸದಸ್ಯ ರಮೇಶ್ ಹೆಗ್ಗಡೆಗೆ ಮಾತ್ರ ಮತ್ತು ನಿರ೦ತರವಾಗಿ ಈ ಬಗ್ಗೆ ಸರ್ಕಾರದ ಜೊತೆ ಹೋರಾಟ ಮಾಡುತ್ತಾ ಬಂದಿದ್ದಾರೆ.
ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಈ ಮುಳುಗಡೆ ಸಂತ್ರಸ್ಥ ದೀವರ ಮತಗಳಿಸಲು ಯಶಸ್ವಿ ಆದ ಬಿಜೆಪಿ ಈವರೆಗೆ ಸ್ವಾಮಿ ರಾಯರಿಗೇ ಸರಿಯಾದ ಸ್ಥಾನಮಾನ ನೀಡಲಿಲ್ಲ ಈಗ ನಮ್ಮ ಸಮಸ್ಯೆ ಬಗೆಹರಿಸುತ್ತಾ? ಎಂದು ಯುವಕರು ಪ್ರಶ್ನಿಸುತ್ತಾರೆ. ಹಾಲಿ ಬಿಜೆಪಿಯಲ್ಲಿ ಈ ಮುಳುಗಡೆ ಸಂತ್ರಸ್ಥರ ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ ಸ್ವಾಮಿ ರಾವ್ ರಿಗೆ ಮಾತ್ರ ಹೆಚ್ಚಿನ ಮಾಹಿತಿ ಗೊತ್ತಿದೆ.
ಗೃಹ ಮಂತ್ರಿ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪನವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಜಿಲ್ಲೆಗೆ ಕರೆಸಿ ಈ ಬಗ್ಗೆ ಪರಿಹಾರಕ್ಕೆ ಪ್ರಯತ್ನಿಸಿರುವುದು ಆಶಾದಾಯಕ ಆದರೆ ಈ ಸರ್ಕಾರಕ್ಕೆ ಈ ಸಮಸ್ಯೆ ಬಗೆಹರಿಸಲು ಇರುವ ಕಾಲಾವಕಾಶ ಮಾತ್ರ ಕೆಲವೇ ತಿಂಗಳು.
ಸಾಗರದ ಇಕ್ಕೇರಿ ರಸ್ತೆಯ ಕಾಗೋಡು ತಿಮ್ಮಪ್ಪನವರ ಸಂಜಯ್ ಪಾಲಿಟೆಕ್ನಿಕ್ ಪಕ್ಕದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಸಕಾ೯ರ 1970 ರಲ್ಲಿ ನೂರಾರು ನಿವೇಶನಗಳ ದೊಡ್ಡ ಲೇಔಟ್ ನಿರ್ಮಿಸಿ ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿಟ್ಟ ನಿವೇಶನಗಳು ಎಂಬ ಬೋರ್ಡ್ ಹಾಕಿತ್ತು 1985ರ ತನಕ ಈ ಬೋರ್ಡ್ ಇತ್ತು ಆದರೆ ಇತ್ತೀಚೆಗೆ ಇಡೀ ಲೇಔಟ್ ಬೇರಾರೋ ಪ್ರಭಾವಿಗಳಿಗೆ ಪರಭಾರೆ ಆಗಿದೆ, ಇದೇ ರೀತಿ ಶರಾವತಿ ಸಂತ್ರಸ್ಥರಿಗೆ ಮಂಜುರಾದ ಸಾವಿರಾರು ಎಕರೆ ಕೃಷಿ ಜಮೀನು ಭದ್ರಾವತಿ - ತರಿಕೆರೆ ಭಾಗದಲ್ಲಿ ಕೂಡ ಯಾರದ್ದೊ ಪಾಲಾಗಿದೆ.
ಸದ್ಯದಲ್ಲಿ ಸರ್ಕಾರ ಮಾಡಬೇಕಾದದ್ದು ಶರಾವತಿ ಮುಳುಗಡೆ ಸಂತ್ರಸ್ಥರ ಮನೆ-ಭೂಮಿ ಹಕ್ಕು ಪತ್ರ ತಕ್ಷಣ ಆಯಾ ಕುಟುಂಬದ ಕೈಗೆ ನೀಡುವ ಕೆಲಸ, ಸದ್ಯದ ಚುನಾವಣಾ ಸಂದರ್ಭದಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳು ಇದನ್ನು ದಾಳವಾಗಿ ಬಳಸದೆ ಪ್ರಾಮಾಣಿಕ ಪರಿಹಾರ ಮಾಡಬೇಕಾಗಿದೆ.
Comments
Post a Comment