#ಶ್ರೀ_ಮದು_ಗೋಪಾಲಸ್ವಾಮಿ
#ಶಿವಮೊಗ್ಗದ_ಪ್ರಖ್ಯಾತ_ವಕೀಲರು.
ಮೊನ್ನೆ ಸೋಮವಾರ(31-10-2022) ಬೆಳಿಗ್ಗೆ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಮದು ಲಾಯರ್ ನನಗೆ ಶಿವಮೊಗ್ಗದ ಸೆಷನ್ ಕೋರ್ಟ್ ನಲ್ಲಿ ನನ್ನ ಸಂಕಷ್ಟದ ದಿನಗಳಲ್ಲಿ ಒಂದೇ ಒಂದು ರೂಪಾಯಿ ಹಣ ಪಡೆಯದೆ ಕೇಸ್ ನಡೆಸಿ ಖುಲಾಸೆ ಮಾಡಿಸಿದ್ದು ನೆನಪಾಗಿ ಒಂದು ಲೇಖನ ಬರೆದಿದ್ದೆ.
ಈಗ ಬೆಳಿಗ್ಗೆ ಬೆಳಿಗ್ಗೆ ವಕೀಲರು ಸೊರಬ ಮೂಲದ ಪ್ರತಿಷ್ಟಿತ ಚಿಮಣೂರು ಕುಟುಂಬದ ಲಕ್ಷ್ಮೀಕಾಂತ್ ಚಿಮಣೂರರು ಮತ್ತು ಬೆಂಗಳೂರಿನ ಪ್ರಸಿದ್ದ ವಕೀಲರು, AAP ಪಕ್ಷದ ಮುಖಂಡರಾದ ದಿವಾಕರ ವಕೀಲರು ಕಳಿಸಿದ ಸಂದೇಶ ಮದು ಲಾಯರ್ ಇನ್ನಿಲ್ಲ ಎಂದು ನೋಡಿ ಬೇಸರ ಅನ್ನಿಸಿತು.
ಸಾಯುವ ವಯಸ್ಸಲ್ಲ ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಬದುಕಲು ಬಿಡಲಿಲ್ಲ.
ಕೆಲವು ದಶಕ ಶಿವಮೊಗ್ಗ ಜಿಲ್ಲೆಯಲ್ಲಿ ಸಾರ್ವಜನಿಕರು ಪೋಲಿಸರು ಯಾರೇ ಆದರೂ ನಿಮ್ಮ ಲಾಯರ್ ಯಾರು ಅಂತ ಕೇಳಿದರೆ #ಮದು_ಲಾಯರ್ ಅಂದರೆ ಹಾಗಾದರೆ ನಿಮ್ಮ ಕೇಸ್ ಗ್ಯಾರಂಟಿ ಗೆಲ್ಲುತ್ತೀರಿ ಅನ್ನುತ್ತಿದ್ದ ಪರಿ ಮದು ಲಾಯರ್ ಅವರ ವೃತ್ತಿ ಜೀವನದ ಯಶಸ್ಸಿನ ಉತ್ತುಂಗವೇ ಆಗಿತ್ತು.
ಯಶಸ್ಸಿನ ಹಿಂದೆ ಇವರ ಪರಿಶ್ರಮ, ಅಧ್ಯಯನ ಮತ್ತು ಇವರ ಜೊತೆ ಸೇರಿ ಕೆಲಸ ಮಾಡುವ ಬುದ್ದಿವಂತ ವಕೀಲರ ಪಡೆ ಕೂಡ ಕಾರಣ.
ಯಶಸ್ಸಿನ ಹಿಂದೆಯೇ ಖ್ಯಾತಿ - ಪ್ರಖ್ಯಾತಿ - ಹಣ - ಅಂತಸ್ತುಗಳು ಹರಿದು ಬರುವುದು ಸಹಜ ಆದರೆ ಮದು ಲಾಯರ್ ನನ್ನ ಸ್ವಂತ ಅನುಭವದಲ್ಲಿ ಭೂಮಿ ತೂಕದ ಮನಸ್ಥಿತಿಯಲ್ಲಿ ಅಹಂಕಾರದಿಂದ ದೂರವೇ ಉಳಿದವರು.
ಜನಪರ ಹೋರಾಟಗಳಿಗೆ ಬೆಂಬಲಿಸಿದವರು, ಸುಳ್ಳು ದೂರಿನಿಂದ ನ್ಯಾಯ೦ಗದ ಬಲೆಯಲ್ಲಿ ಸಿಕ್ಕಿಕೊಂಡ ಅನೇಕ ಬಡ ಕುಟುಂಬಗಳಿಗೆ ಪಾರು ಮಾಡಿದವರು ಸಾಗರ ತಾಲ್ಲೂಕಿನ ತ್ಯಾಗರ್ಥಿ ಗ್ರಾಮ ಪಂಚಾಯತ್ ನ ಕುಂದೂರಿನ ಒಂದು ಬಡ ದೀವರ ಕುಟುಂಬ ಜೈಲಿನಲ್ಲಿ ಕೊಳೆಯುತ್ತಿತ್ತು ಮದು ಲಾಯರ್ ಗೆ ವಿಚಾರ ತಿಳಿಸಿ ಅವರ ಹತ್ತಿರ ಹಣ ಇಲ್ಲ ಅಂದಿದ್ದೆ ಮಿತ ಬಾಷಿ ಮದು ಲಾಯರ್ ನಗುತ್ತಾ ಕೇಸ್ ಪಡೆದು ಒಂದೇ ವಾರದಲ್ಲಿ ಜೈಲಿನಿಂದ ಬಿಡಿಸಿದ್ದರು.
ಶಿವಮೊಗ್ಗ ಸೆಷನ್ ಕೋರ್ಟ್ ನಲ್ಲಿ ನನ್ನ ಕೇಸ್ ಗಳನ್ನು ಉಚಿತವಾಗಿ ನಡೆಸಿದ್ದಲ್ಲದೆ ಪಕ್ಕದ ಡಿಸಿಸಿ ಬ್ಯಾಂಕಿನ ಆಗಿನ ಕಾಲದ ಕ್ಯಾಂಟಿನ್ ಗೆ ಕರೆದೊಯ್ದು ಕಾಪಿ ಕುಡಿಸಿ ತಮ್ಮ ಕಪ್ಪು ಕೋಟಿನ ಜೇಬಿನಿಂದ ಹಣ ತೆಗೆದು ನೀಡುತ್ತಿದ್ದ ನೆನಪು ಈಗಲೂ ಮರೆಯಲಾರೆ.
ಹಣ - ಖ್ಯಾತಿ ಪಡೆದಾಕ್ಷಣ ಮನುಷ್ಯತ್ವ - ಗೆಳೆತನದ ನೆನಪೇ ಮರೆತು ಹೋಗುವ ಕಾಲದಲ್ಲಿ ಮದು ಲಾಯರ್ ಬಿನ್ನವಾಗಿ ಕಾಣುತ್ತಾರೆ.
Comments
Post a Comment