Skip to main content

Blog number 1060. ಟಿಪ್ಪು ಸುಲ್ತಾನರ ಜಯಂತಿ 11- ನವೆಂಬರ್ -2022. ಟಿಪ್ಪು ಸುಲ್ತಾನರ ಖಡ್ಗ ನನ್ನ ಕೈಯಿಗೆ ನೀಡಿದ್ದ ವಿಜಯ ಮಲ್ಯರು ಆ ದಿನ ಸಾಗರದಲ್ಲಿ ನಡೆದ ಮೆರವಣಿಗೆ ಸಭೆ, ಇತಿಹಾಸ ಪುಟದಲ್ಲಿ ಟಿಪ್ಪು ಸುಲ್ತಾನರ ಆನಂದಪುರಂ ಕೋಟೆ - ಮಸೀದಿ - ರಂಗನಾಥ ಸ್ವಾಮಿ ದೇವಾಲಯ ಬೇಟಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಚಿಂತಕರಾದ ಅರವಿಂದ ಚೊಕ್ಕಾಡಿ ಅವರ ಟಿಪ್ಪು ಸುಲ್ತಾನರ ಬಗ್ಗೆಯ ಉಪನ್ಯಾಸ ಸವ೯ಕಾಲಿಕ.

#ಟಿಪ್ಪು_ಸುಲ್ತಾನರ_ಜಯಂತಿ

#ಐದು_ವರ್ಷದ_ಹಿಂದೆ_ಖ್ಯಾತ_ಅಂಕಣಗಾರ_ಶಿಕ್ಷಣ_ತಜ್ಞ_ಅರವಿಂದ_ಚೊಕ್ಕಾಡಿ_ಅವರ_ಉಪನ್ಯಾಸ

#ಟಿಪ್ಪು_ಸುಲ್ತಾನರ_ಖಡ್ಗ_ಸಾಗರಕ್ಕೆ_ತಂದ_ನೆನಪುಗಳು

#ಟಿಪ್ಪು_ಸುಲ್ತಾನರು_ಆನಂದಪುರಂ_ಕೋಟೆ_ಮಸೀದಿ_ರಂಗನಾಥ_ದೇವಸ್ಥಾನ_ಬೇಟಿ_ಇತಿಹಾಸ_ಪುಟದಲ್ಲಿ_ದಾಖಲಾಗಿದೆ.

     ವಿಜಯ ಮಲ್ಯರವರು ಲಂಡನ್ ನಲ್ಲಿ ಹರಾಜಿನಲ್ಲಿ ಹಿಡಿದ ಟಿಪ್ಪು ಸುಲ್ತಾನರ ಖಡ್ಗ ಸಾಗರದ ಇಂದಿರಾ ಗಾಂಧಿ ಮಹಿಳಾ ಕಾಲೇಜು ಅಂಗಳದಲ್ಲಿ ಹೆಲಿಕಾಪ್ಟರ್ ನಲ್ಲಿ ತಂದಾಗ ಅಲ್ಲಿಂದ ಶಿವಪ್ಪ ನಾಯಕ ವೃತ್ತದಿಂದ ಗಣಪತಿ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಿ ನಂತರ ಜಾಮಿಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯಲ್ಲಿ ಮಾರಿಗುಡಿ ದೇವಾಲಯದ ಎದುರಿನಿಂದ  ಗಾಂಧಿ ಮೈದಾನದವರೆಗೆ ತಂದು ಅಲ್ಲಿ ಬಹಿರಂಗ ಸಭೆಯಲ್ಲಿ ಟಿಪ್ಪು ಸುಲ್ತಾನರ ಖಡ್ಗ ಸಾರ್ವಜನಿಕರಿಗೆ ಪ್ರದರ್ಶಿಸಿ ನಂತರ ಜನತಾ ಪಕ್ಷದ ವಿದಾನ ಸಭಾ ಅಭ್ಯರ್ಥಿ ಆಗಿದ್ದ ನನ್ನ ಪರ ವಿಜಯ ಮಲ್ಯರವರು ಪ್ರಚಾರ ಭಾಷಣ ಮಾಡಿದ್ದರು ಆ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಐತಿಹಾಸಿಕ ಖಡ್ಗ ನನ್ನ ಕೈಯಲ್ಲಿಟ್ಟಿದ್ದರು ಆಗ ಅದರ ಬೆಲೆ 2 ಕೋಟಿ.
   ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಆನಂದಪುರಂ ಕೋಟೆ ವಶಪಡಿಸಿಕೊಂಡು ನೂರಾರು ಜನರ ಹತ್ಯೆ ಮಾಡಿದ ಬ್ರಿಟೀಷರನ್ನು ಹೆಡೆಮುರಿ ಕಟ್ಟಿ ಪುನಃ ಆನಂದಪುರಂ ಕೋಟೆ ವಶಪಡಿಸಿಕೊಂಡ ನಂತರ ಮೈಸೂರಿನಿಂದ ಬಿದನೂರು ನಗರ ಮಾರ್ಗದಲ್ಲಿ  ಆನಂದಪುರಂ ಕೋಟೆಗೆ ಬೇಟಿ ನೀಡುವ ಸಂದರ್ಭದಲ್ಲಿ ಇಲ್ಲಿನ ಮಸೀದಿಗೆ ಬೇಟಿ, ಕೋದಂಡರಾಮ ದೇವಾಲಯಕ್ಕೆ ರಾತ್ರೋ ರಾತ್ರಿ ರಂಗನಾಥ ಸ್ವಾಮಿ ಎಂದು ನಾಮಕರಣ ಮಾಡಿ ಟಿಪ್ಪು ದೇವಾಲಯಕ್ಕೆ ಬರುವಂತೆ ಮಾಡಿದ ಆನಂದಪುರಂ ಪುರ ಪ್ರಮುಖರ ಕಾಯ೯ ಇತಿಹಾಸದಲ್ಲಿ ದಾಖಲಾಗಿದೆ.
  ಈ ಲಿಂಕ್ ಕ್ಲಿಕ್ ಮಾಡಿದರೆ ವಿವರಗಳಿದೆ ನೋಡಿ https://arunprasadhombuja.blogspot.com/2018/11/blog-post_7.html
   ಈ ಎಲ್ಲಾ ನೆನಪುಗಳ ಜೊತೆಯಲ್ಲಿ ಇವತ್ತು ಟಿಪ್ಪು ಸುಲ್ತಾನರ ಜಯಂತಿಯ ಸಂದರ್ಭದಲ್ಲಿ ತಜ್ಞರ ಉಪನ್ಯಾಸ ಸಾರ್ವಕಾಲಿಕವಾಗಿ ಇರುವುದು ಇಲ್ಲಿದೆ.
      #ಅರವಿಂದ್_ಚಕ್ಕೊಡಿಯವರು ಅತ್ಯುತ್ತಮ ಬರಹಗಾರರು, ಚಿಂತಕರು ಅವರು ದ.ಕ. ಜಿಲ್ಲೆಯ ಸಕಾ೯ರದ ಟಿಪ್ಪು ಸುಲ್ತಾನರ ಜಯಂತಿ ಕಾಯ೯ಕ್ರಮದಲ್ಲಿ ದಿನಾಂಕ 11 ನವೆಂಬರ್ 2017ರಲ್ಲಿ ನೀಡಿದ ಉಪನ್ಯಾಸ ಸಂದೇಶ ಅದ್ಬುತ ಮತ್ತು ಸಕಾಲಿಕವಾಗಿದೆ
  ಟೀಕೆ ಟಿಪ್ಪಣೆ ಮಾಡುವವರು ಇದನ್ನ ಓದಿಕೊಳ್ಳಬಹುದು.

ದಿನಾಂಕ 11 ನವ೦ಬರ್ 2017ರಂದು ನಮ್ಮ ಇಲಾಖೆಯ  ಸೂಚನೆಯಂತೆ,ದ.ಕ.ಜಿಲ್ಲಾಡಳಿತವು ನಡೆಸಿದ ಟಿಪ್ಪೂ ಸುಲ್ತಾನ್ ಜಯಂತಿಯಲ್ಲಿ ಮಾಡಿದ ಉಪನ್ಯಾಸ

ಸ್ವಂತಿಕೆಯ ಪ್ರೇರಣೆಯಾಗಲಿ
------------------------
        *ಅರವಿಂದ ಚೊಕ್ಕಾಡಿ

ಈ ಸಭೆಯ ಅಧ್ಯಕ್ಷರೆ,ಉದ್ಘಾಟಕರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಬೆಳ್ಳಿಪ್ಪಾಡಿಗುತ್ತು ರಮಾನಾಥ ರೈ ಅವರೆ,ಸಮಯ ಉಳಿಸುವುದಕ್ಕಾಗಿ ಎಲ್ಲರ ಹೆಸರನ್ನೂ ಹೇಳುತ್ತಿಲ್ಲ;ಕ್ಷಮಿಸಿ,ಇಲ್ಲಿ ಸೇರಿರುವ ಎಲ್ಲ ಮಹನೀಯರೆ,ಮಹಿಳೆಯರೆ,

ನಾನು ಉಪನ್ಯಾಸವೆಂದುಕೊಂಡಿದ್ದೆ.ಆದರೆ ಆಮಂತ್ರಣ ಪತ್ರಿಕೆಯಲ್ಲಿ ಸಂದೇಶ ಎಂದು ಮುದ್ರಿಸಿದ್ದಾರೆ,ಆದ್ದರಿಂದ ನಾನು ಸಂದೇಶವನ್ನೆ ಹೇಳುತ್ತೇನೆ:

ಟಿಪ್ಪು ಸುಲ್ತಾನ್ ಎಂದಲ್ಲ;ಯಾವನೆ ಐತಿಹಾಸಿಕ ವ್ಯಕ್ತಿಯ ಮಹತ್ವ ಎರಡು ರೀತಿಯಲ್ಲಿ ಇರುತ್ತದೆ . ಒಂದು,ಐತಿಹಾಸಿಕ ಘಟನಾವಳಿಗಳಾಗಿ.ಎರಡು,ಘಟನಾವಳಿಗಳ ಮೂಲಕ ರೂಪಿಸಿದ ತಾತ್ವಿಕತೆಯಾಗಿ .ಇವುಗಳಲ್ಲಿ ಮೊದಲನೆಯದು ಈಗ ಅಪ್ರಸ್ತುತ.ಏಕೆಂದರೆ ರಾಜಪ್ರಭುತ್ವ ಹೊರಟು ಹೋಗಿ ಈಗ ಪ್ರಜಾಪ್ರಭುತ್ವ ಬಂದಾಗಿದೆ.ಇಲ್ಲೀಗ ಘಟನಾವಳಿಗಳ ನಿರ್ಮಾಪಕನಾಗಿ ಟಿಪ್ಪು ಸುಲ್ತಾನ್ ಗೆ ಪ್ರಸ್ತುತತೆ ಇಲ್ಲ .ಆತನ ಆಳ್ವಿಕೆಯ 1784-1791ರ ಅವಧಿಯಲ್ಲಿ ವಿಮರ್ಶೆಗೊಳಗಾಗುವ ಘಟನೆಗಳು ಅಧಿಕ.1792-1799ರ ಅವಧಿಯಲ್ಲಿ ತಾತ್ವಿಕತೆಯಾಗುವ ಸಂಗತಿಗಳಿವೆ .ಆದ್ದರಿಂದ ಈ ಭಾಗವನ್ನು ಕೇಂದ್ರೀಕರಿಸಿ ನಾನು ಮಾತನಾಡುತ್ತೇನೆ .

ಟಿಪ್ಪು ಸುಲ್ತಾನ್ ಎತ್ತಿ ಹಿಡಿದ ತಾತ್ವಿಕತೆ ಹುಟ್ಟಿದ್ದ ನಮ್ಮ ತುಳುನಾಡಿನಲ್ಲಿ,ಯು.ಟಿ.ಖಾದರ್ ಅವರು ಪ್ರತಿನಿಧಿಸುತ್ತಿರುವ ಉಳ್ಳಾಲದಲ್ಲಿ .1525-1570ರ ಸುಮಾರಿನ ಅಬ್ಬಕ್ಕ ರಾಣಿ ಪರಕೀಯ ದಾಸ್ಯಕ್ಕೆ ತಾನು ಬಗ್ಗುವುದಿಲ್ಲ ಎಂಬ ತಾತ್ವಿಕತೆಯನ್ನು ಹುಟ್ಟುಹಾಕಿದಳು.ಆ ತಾತ್ವಿಕತೆಯನ್ನೆ ಟಿಪ್ಪು ಸುಲ್ತಾನ್,"ಮಕ್ಕಳನ್ನು ಬೇಕಾದರೂ ಒತ್ತೆ ಇಡುತ್ತೇನೆ.ಆದರೆ ದಾಸ್ಯಕ್ಕೆ ಬಗ್ಗುವುದಿಲ್ಲ"ಎಂಬ ತತ್ವವಾಗಿ ಎತ್ತಿಹಿಡಿದ.ದಾಸ್ಯಕ್ಕೆ ಬಗ್ಗುವುದಿಲ್ಲ ಎಂಬ ಆತನ ಚಿಂತನೆ ಆತನಿಗೆ ಒಂದು ಗುಂಗಿನಂತೆಯೇ ಆಗಿಬಿಟ್ಟಿತ್ತು.ಬ್ರಿಟಿಷರ ಅಧೀನದಲ್ಲೆ ಇದ್ದ ಮೊಘಲ್ ಬಾದಶಹನಿಗೆ ಬ್ರಿಟಿಷರನ್ನು ಓಡಿಸಲು ನನಗೆ ನೆರವಾಗಿ ಎಂದು ಪತ್ರ ಬರೆದಿರುವುದರಲ್ಲಿ,ತಾನು,ನಿಜಾಮರು,ಮರಾಠರು ಒಗ್ಗಟ್ಟಾಗಿ ಬ್ರಿಟಿಷರನ್ನು ಓಡಿಸಿದಂತೆ ತನಗೆ ಕನಸು ಬಿದ್ದುದನ್ನು ಮಂತ್ರಿಮಂಡಲ ದ ಸಭೆಯಲ್ಲಿ ಹೇಳುತ್ತಿದ್ದುದರಲ್ಲಿ ಆತನ ಗುಂಗನ್ನು ಅರ್ಥ ಮಾಡಿಕೊಳ್ಳಬಹುದು.ಆತ ಎತ್ತಿ ಹಿಡಿದ ತತ್ವ ನಂತರ ಅಮರಸುಳ್ಯದ ಕ್ರಾಂತಿಯಾಗಿ,ಕಿತ್ತೂರು ಚೆನ್ನಮ್ಮನಾಗಿ ವಿಸ್ತರಿಸಿ 1857ರಲ್ಲಿ ಸೈನಿಕ ಕ್ರಾಂತಿಯಾಗಿ ರೂಪುತಳೆಯಿತು.ನಾನಾ ಸಾಹೇಬ,ನವಾಬ್ ವಜೀದ್ ಆಲಿ ಷಾ,ಬೇಗಂ ಹಜ್ರತ್ ಮಹಲ್,ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಒಂದೇ ತತ್ವದ ನಾನಾ ಕೊಂಡಿಗಳು .ಆದರೂ ರಾಜರುಗಳು ವಿಫಲರಾದರು .ಏಕೆಂದರೆ ದಾಸ್ಯಕ್ಕೆ ಬಗ್ಗುವುದಿಲ್ಲ ಎಂಬ ಅವರ ತತ್ವವನ್ನು ಅವರು ಜನತೆಯ ಪ್ರಜ್ಞೆಯಾಗಿ ರೂಪಿಸಿರಲಿಲ್ಲ .ಆ ಕೆಲಸ ನಡೆದದ್ದು 1885ರ ನಂತರ .ಬಾಲಗಂಗಾಧರ ತಿಲಕರು ಅದನ್ನು ಜನತೆಯ ಪ್ರಜ್ಞೆಯಾಗಿ ರೂಪಿಸಿದರು.ನಂತರ ಅದನ್ನು ಮಹಾನ್ ಜನತಾ ಬಂಡಾಯವಾಗಿ ಮಾಡಿದವರು ಮಹಾತ್ಮಾ ಗಾಂಧಿ.ಆದರೆ ಆ ಕಾಲಕ್ಕೆ ತತ್ವವನ್ನು ಸಾಧಿಸುವ ವಿಧಾನಗಳು ಬದಲಾಗಿದ್ದವು.ಟಿಪ್ಪು ಸುಲ್ತಾನ್ ಕಾಲದಲ್ಲಿ ಹೋರಾಟವೆಂದರೆ ಯುದ್ಧವೇ.ಬೇರೆ ರೀತಿಯ ಹೋರಾಟಗಳಿರಲಿಲ್ಲ.ಮಹಾತ್ಮಾ ಗಾಂಧಿ ನಮಗೆ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕಲಿಸಿದರು.ಆದರೆ ತತ್ವ ಬದಲಾಗಲಿಲ್ಲ.ಯಾವ ಸಹಾಯಕ ಸೈನ್ಯ ಪದ್ಧತಿಗೆ ತಾನು ಸಹಿ ಹಾಕುವುದಿಲ್ಲವೆಂದು ಟಿಪ್ಪು ಸುಲ್ತಾನ್ ಅಂದಿದ್ದನೋ,ಆ ತತ್ವವನ್ನಿಟ್ಟುಕೊಂಡೇ ಗಾಂಧೀಜಿ,"ಒಬ್ಬ ಸತ್ಯಾಗ್ರಹಿ ಯಾವ ಕಾರಣಕ್ಕೂ ಹಿಂಸೆಯನ್ನು ಮಾಡುವುದಿಲ್ಲ.ಆದರೆ ಯಾವ ಕಾರಣಕ್ಕೂ ದಾಸ್ಯಕ್ಕೆ ಬಗ್ಗುವುದಿಲ್ಲ ಎನ್ನುವುದು ನೆನಪಿರಲಿ"ಎಂದು ಹೇಳಿದ್ದು.ನಂತರ ಗೋವಾ ವಿಮೋಚನಾ ಚಳವಳಿಯ ನಾಯಕ ತ್ರಿಸ್ಟಾವೋ ಬ್ರಗಾನ್ಝ ಕುನ್ಹ ಅವರ ಮೂಲಕ ಅಬ್ಬಕ್ಕ ರಾಣಿ ಹುಟ್ಟಿಸಿದ ತತ್ವ ತನ್ನ ಒಂದು ಸರ್ಕಲ್ ಅನ್ನು ಪೂರ್ಣಗೊಳಿಸಿತು.

ಇನ್ನೀಗ ಅದೇ ತತ್ವ ತನ್ನ ಎರಡನೆಯ ಸರ್ಕಲ್ ಅನ್ನು ಪ್ರಾರಂಭಿಸಬೇಕಾಗಿದೆ.ಟಿಪ್ಪು ಹಿಂಸಾತ್ಮಕ ಹೋರಾಟ ನಡೆಸಿದ.ಆದರೆ ಗಾಂಧಿ ಮತ್ತು ಅಂಬೇಡ್ಕರ್ ಎಂಬ ಎರಡು ಮಹಾನ್ ಚೇತನಗಳು,ಖಾನ್ ಅಬ್ದುಲ್ ಗಫಾರ್ಖಾನ್ ಅವರು;ಕರ್ನಾಟಕದ ಮಟ್ಟಿಗೆ ಎಸ್.ಕೆ.ಖರೀಮ್ ಖಾನ್,ಗಂಗಾಧರ ರಾವ್ ದೇಶಪಾಂಡೆಯಂಥವರು ಬಂದು ಹೋದ ಮೇಲೆ ಹಿಂಸಾತ್ಮಕ ಹೋರಾಟಕ್ಕೆ ಯಾವ ಮಹತ್ವವೂ ಇಲ್ಲ;ಇರಕೂಡದು.ಆದರೆ ತತ್ವಕ್ಕೆ ಮಹತ್ವವಿದೆ.ಇವತ್ತು ತುಳುನಾಡಿನ ಮೇಲೆ ಎಷ್ಟೊಂದು ದಾಸ್ಯಗಳು!ನಾನು ಹಾಗೆ ಮಾಡಬೇಕೊ,ಹೀಗೆ ಮಾಡಬೇಕೊ,ಇದನ್ನು ಮಾತಾಡಬಹುದೊ,ಮಾತಾಡಬಾರದೊ,ಕುಡಿಯಲು ನೀರು ಸಿಕ್ಕೀತೋ ಇಲ್ವೊ ಎಂದೆಲ್ಲ ಕಾಡುವ ಗೊಂದಲಗಳಿವೆ,ಹತಾಶೆಗಳಿವೆ;ಅದಕ್ಕಾಗಿ ದಾಸ್ಯಕ್ಕೆ ಬಗ್ಗುವುದಿಲ್ಲ ಎಂಬುದನ್ನು ಸಂದೇಶವಾಗಿ ಇನ್ನಾದರೂ ತೆಗೆದುಕೊಳ್ಳಬೇಕಿದೆ.ಉಪಯೋಗವಾಗುತ್ತದಾ?1799 ರಲ್ಲಿ ಟಿಪ್ಪು ಸುಲ್ತಾನ್ ಆಶಯ ಈಡೇರಲಿಲ್ಲ.ಆದರೆ 1947ಆತನ ಆಶಯವನ್ನು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ.ಹಾಗೆಯೇ ಇದೂ ಕೂಡ.

ಟಿಪ್ಪು ಬಗ್ಗೆ ಇರುವ ಇನ್ನೊಂದು ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಿಲ್ಲ.ಅವನು ಅಮೆರಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಣ ಕೊಟ್ಟಿದ್ದ.ಅದು ಬ್ರಿಟಿಷರ ವಿರುದ್ಧ ಇದ್ದುದರಿಂದ ಸಹಜ ನಡೆವಳಿಕೆ ಎಂದು ಭಾವಿಸಬಹುದು.ಆದರೆ ಅವನು ಅಮೆರಿಕ ಸ್ವಾತಂತ್ರ್ಯ ಘೋಷಣೆಯ ಪ್ರತಿಯನ್ನು ಇಷ್ಟಪಟ್ಟು ತರಿಸಿ ತನ್ನ ಲೈಬ್ರರಿಗೆ ಹಾಕಿಸಿಕೊಳ್ಳುತ್ತಾನೆ.ಭಾರತದ ಮುಖ್ಯನ್ಯಾಯಾಧೀಶರೂ,ಹಂಗಾಮಿ ರಾಷ್ಟ್ರಪತಿಗಳೂ ಆಗಿದ್ದ ಜಸ್ಟೀಸ್ ಮಹಮ್ಮದ್ ಹಿದಾಯತ್ ಉಲ್ಲಾ ಅವರು ಸಂವಿಧಾನವನ್ನು ವಿಮರ್ಶಿಸುತ್ತಾ,"ಸಂವಿಧಾನದ ಪ್ರಸ್ತಾವನಾ ಬರೆಹವು ಅಮೆರಿಕ ಸ್ವಾತಂತ್ರ್ಯ ಘೋಷಣೆಯಂತಿದೆ"ಎನ್ನುತ್ತಾರೆ..right,liberty,equality;assuring the dignity of the individual......ಎಂದೆಲ್ಲ ಅದು ವಿಸ್ತರಿಸುತ್ತದೆ.ಟಿಪ್ಪು ಒಬ್ಬ ರಾಜ;ಪ್ರಜಾಪ್ರಭುತ್ವವಾದಿಯಲ್ಲ ಮತ್ತು ಕಾಲವೂ ಅದಕ್ಕೆ ಪಕ್ವಗೊಂಡಿರಲಿಲ್ಲ.ಆದರೆ ಅಮೆರಿಕ ಸ್ವಾತಂತ್ರ್ಯ ಘೋಷಣೆಯ  ಪ್ರತಿಯನ್ನು  ತರಿಸಿಟ್ಟುಕೊಂಡಿರಬೇಕಾದರೆ ಪ್ರಜಾಪ್ರಭುತ್ವ ತತ್ವದ ಬಗ್ಗೆ ಸಣ್ಣ ಕಾಳಜಿಯಂತೂ ಇದ್ದಿರಲೇ ಬೇಕು.ಇವತ್ತು ಏನನ್ನು ಬೇಕಾದರೂ ಮಾಡಬಲ್ಲ ಮಂತ್ರಿಗಳು,ಶಾಸಕರು,ಜಿಲ್ಲಾಧಿಕಾರಿಗಳು ಇಲ್ಲಿದ್ದೀರಿ.ಜಿಲ್ಲಾ ಪಂಚಾಯತ್ ಸಿ.ಇ.ಒ.ಅವರ ಪಕ್ಕದಲ್ಲೆ ನಾನು ಕುಳಿತಿದ್ದೇನೆ.ನೀವೆಲ್ಲ ಸೇರಿಕೊಂಡು ಹಳ್ಳಿ ಶಾಲೆಯ ಮೇಷ್ಟ್ರಾಗಿರುವ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂದಾದರೆ ಅದು ಕೇವಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾತ್ರವೇ ಇರತಕ್ಕ ಅಗಾಧವಾದ ಶಕ್ತಿಯಾಗಿದೆ.ಆದ್ದರಿಂದಲೇ ಪೆರಿಕ್ಲಸ್ ಎಂಬ ಗ್ರೀಕ್ ಚಿಂತಕ ಪ್ರಜಾಪ್ರಭುತ್ವವೆಂದರೆ ಎಲ್ಲಿರುವವನನ್ನು ಎಲ್ಲಿಗೆ ಬೇಕಾದರೂ ಎತ್ತಬಲ್ಲ ವ್ಯವಸ್ಥೆ ಎಂದಿರುವುದು.ತೀರಾ ಸಣ್ಣದೇ ಆದರೂ ಇದರ ಬಗ್ಗೆ ಟಿಪ್ಪುಗೆ ಒಂದು ಕಾಳಜಿ ಇತ್ತು ಎನ್ನುವುದು ಒಂದು ಸಂದೇಶವೇ.

ಧಾರ್ಮಿಕ ಪರಂಪರೆಯಲ್ಲಿ ಜ್ಞಾನ,ಭಕ್ತಿ,ಕರ್ಮ ಎಂಬ ಮಾರ್ಗಗಳಿವೆ.ಭಕ್ತಿ ಮಾರ್ಗ ಭಾವನಾತ್ಮಕವಾಗಿರುವಂತಾದ್ದು.ಜ್ಞಾನ ಮಾರ್ಗ ವೈಚಾರಿಕವಾಗಿರುವಂತಾದ್ದು.ಆದಿಶಂಕರಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಅದ್ವೈತ ಸಿದ್ಧಾಂತ ಜ್ಞಾನಮಾರ್ಗಕ್ಕೆ ಒತ್ತು ಕೊಡುತ್ತದೆ.ಶೃಂಗೇರಿಯ ಶಾರದಾ ಪೀಠ ಅದ್ವೈತ ಶಾಖೆಯದು.ಶಾರದಾ ಪೀಠಕ್ಕೆ ಟಿಪ್ಪು ನಿಷ್ಠನಾಗಿದ್ದ ಎನ್ನುವುದಕ್ಕೆ ಅಂದಿನ ಶಂಕರಾಚಾರ್ಯರಾಗಿದ್ದ ಮೂರನೆಯ ಸಚ್ಚಿದಾನಂದ ಭಾರತಿಯವರು ಟಿಪ್ಪು ಬರೆದ ಪತ್ರದ ಬಗ್ಗೆ ಉಲ್ಲೇಖಿಸುತ್ತಾ,"ನಾನು ದೇವರನ್ನು,ಜಗದ್ಗುರುಗಳಾದ ನಿಮ್ಮ ಆಶೀರ್ವಾದವನ್ನು,ನನ್ನ ಸೈನಿಕ ಶಕ್ತಿಯನ್ನು ಅವಲಂಬಿಸಿದ್ದೇನೆ"ಎಂದಿದ್ದ ಎಂದು ಹೇಳಿದ್ದಾರೆ.ಜ್ಞನ ಪರಂಪರೆಯ ಬಗ್ಗೆ ಟಿಪ್ಪು ಗೆ ಆಸಕ್ತಿ ಇದ್ದ ಬಗ್ಗೆ ಇನ್ನೊಂದು ಉಲ್ಲೇಖವಿದೆ.ಬಹುಕಾಲ ಮಕ್ಕಳಿಲ್ಲದೆ ಆರ್ಕಾಟ್ ನ ಟೀಪು ಮಸ್ತಾನ್ ಔಲಿಯ ದರ್ಗಾ ಕ್ಕೆ ಹರಕೆ ಹೊತ್ತು ಹುಟ್ಟಿದ ಟಿಪ್ಪು ಬಗ್ಗೆ ಹೈದರಾಲಿಗೆ ಅಪಾರ ಪ್ರೀತಿ ಇತ್ತು.ಟಿಪ್ಪು ಹುಟ್ಟು ಹಬ್ಬಕ್ಕೆ ಏನು ಬೇಕು ಎಂದು ಹೈದರಾಲಿ ಕೇಳಿದಾಗ ಟಿಪ್ಪು,"ನನಗೆ ನೀನು ಎಲ್ಲವನ್ನೂ ಕೊಟ್ಟಿದ್ದಿ.ಕೊಡುವುದಾದರೆ ಒಂದು ಗ್ರಂಥಾಲಯವನ್ನು ಕೊಡಿಸು"ಎಂದು ಕೇಳುತ್ತಾನೆ.ನಮ್ಮಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆಯಬೇಕು,ವೈಚಾರಿಕ ಸಂವಾದ ಮತ್ತು ಜಿಜ್ಞಾಸೆಗಳು ನಡೆಯುವ ಜ್ಞಾನಪರಂಪರೆಯ ವಿಕಾಸವಾಗಬೇಕು ಎನ್ನುವುದೇ ಇಲ್ಲಿನ ಸಂದೇಶ.

ಟಿಪ್ಪು ಕ್ಷಿಪಣಿ ತಂತ್ರಜ್ಞಾನವನ್ನು ಅಳವಡಿಸಿದ ಬಗ್ಗೆ ಹಲವರಲ್ಲಿ ಗೊಂದಲಗಳಿವೆ.ಅದನ್ನು ಸ್ಪಷ್ಟಪಡಿಸುತ್ತೇನೆ.ಕ್ಷಿಪಣಿ ಎಂದ ತಕ್ಷಣ ನಾವು 'ಬ್ರಹ್ಮೋಸ್'ಎಂದು ತೆಗೆದುಕೊಳ್ಳಬಾರದು.1792ಎಂದರೆ2017ಅಲ್ಲ.ಲಿಫೋಲೆ ಎಂಬ ಫ್ರೆಂಚ್ ಇಂಜಿನಿಯರ್ ಸಹಾಯದಿಂದ ಟಿಪ್ಪು ತಯಾರಿಕೆ ಮಾಡಿಸಿದ ಕ್ಷಿಪಣಿ ಬಹುದೂರಕ್ಕೆ ಚಿಮ್ಮುವ ಬೆಂಕಿಯುಗುಳುವ ಬಾಣಗಳು.ಅವು ಜಲಶಕ್ತಿಯಿಂದ ಚಲಿಸುತ್ತಿದ್ದವು.ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಅವುಗಳ ಬಳಕೆಯೂ ಆಗಿದೆ.ಸೈನ್ಯಕ್ಕೆ ಆಧುನಿಕ ಆವಿಷ್ಕಾರಗಳ ಅಗತ್ಯಗಳನ್ನು ಮೊದಲು ಅಳವಡಿಸಿದವನು ಟಿಪ್ಪು.ಇವತ್ತು ಭಾರತ ಸರಕಾರದ ಬಳಿ ಸೈನಿಕ ಆವಿಷ್ಕಾರದ ಒಂದು ವಿಭಾಗವೇ ಇದೆ.

ಟಿಪ್ಪು ದಲಿತರಿಗೆ ಭೂಮಿ ಹಂಚಿದ್ದ ಎಂದು ಇದೆ ನೋಡಿ.ಅರ್ಧ ವಾಕ್ಯಗಳನ್ನು ಹೇಳಿದಾಗ ಉಂಟಾಗುವ ಸಮಸ್ಯೆ ಇಲ್ಲಿಯೂ ಇದೆ.ದಲಿತರಿಗೆ ಮಾತ್ರ ಅಲ್ಲ ಟಿಪ್ಪು ಎಲ್ಲರಿಗೂ ಭೂಮಿ ಹಂಚಿದ್ದ.ಆದರೆ ದಲಿತರು ಭೂಮಿಯನ್ನು ಉಳುಮೆ ಮಾಡುವ ಹಾಗಿಲ್ಲ ಎಂಬ ಧೋರಣೆಯನ್ನು ತಿರಸ್ಕರಿಸಿ ದಲಿತರಿಗೂ ಭೂಮಿಯನ್ನು ಹಂಚಿದ್ದ.ಅವನಿಗೆ ಚರಿತ್ರೆಯ ತಿಳಿವಳಿಕೆಯೂ ಇತ್ತು.ಇದೇ ಕೆಲಸವನ್ನು ಹೊಯ್ಸಳರೂ ಮಾಡಿದ್ದರು.ಜೈನಪರಂಪರೆಯ ಅರಸರಾದ ಹೊಯ್ಸಳರು ಮಾಡಿದ ಒಳ್ಳೆಯ ಕೆಲಸವನ್ನು ಒಳ್ಳೆಯದೆಂದು ಪರಿಗಣಿಸಿ ಟಿಪ್ಪು ಕೂಡ ಅಳವಡಿಸಿಕೊಂಡಿದ್ದ.ದಲಿತರ ಕುರಿತ ಈ ಕಾಳಜಿಯನ್ನು ನಮ್ಮ ಸಾಂವಿಧಾನಿಕ ಆಡಳಿತವೂ ಅಳವಡಿಸಿಕೊಂಡಿದೆ.

ಆಡಳಿತಾತ್ಮಕವಾಗಿ ಟಿಪ್ಪು ತುಂಬ ಕೆಲಸಗಳನ್ನು ಮಾಡಿದ್ದ.ನಲವತ್ತೊಂಬತ್ತು ವರ್ಷಗಳ ಕಾಲ ಬದುಕಿದ್ದು ಅಲ್ಲಿ ನೆಪೋಲಿಯನ್ ಜೊತೆ ವ್ಯವಹಾರ,ನಿರಂತರ ಓಡಾಟಗಳೆಲ್ಲದರ ನಡುವೆ ಆಡಳಿತಕ್ಕೆ ಗಮನ ಕೊಟ್ಟದ್ದರಲ್ಲಿ ಆತನ ಮಂತ್ರಿಗಳ ದಕ್ಷತೆಯೂ ಕೆಲಸ ಮಾಡಿದೆ.ಏಳು ಇಲಾಖೆಗಳಿದ್ದವು.ರೈತರಿಗೆ ತಕ್ಕಾವಿ ಸಾಲವನ್ನು ಬಡ್ಡಿ ರಹಿತವಾಗಿ ಕೊಟ್ಟಿದ್ದು ಬಲವಂತದಿಂದ ಅದನ್ನು ಅಧಿಕಾರಿಗಳು ವಸೂಲಿ ಮಾಡಿದರೆ ಅವರ ಮೇಲೆ ದಂಡ ಹಾಕುತ್ತಿದ್ದ.ಕೆಲಸ ಮಾಡಿಸಿಕೊಂಡು ಕೂಲಿ ಕೊಡದಿರುವವರ ಜಮೀನನ್ನು ಮುಟ್ಟುಗೋಲು ಹಾಕಿದ್ದ.ಇದೆಲ್ಲವೂ ಆಡಳಿತವು ಯಾರ ಪರವಾಗಿರಬೇಕೆಂಬ ಸಂದೇಶವನ್ನು ನೀಡುತ್ತವೆ.

ತುಳು ನಾಡಿಗೆ ಸಂಬಂಧಿಸಿದಂತೆ ನಾಲ್ಕು ಉಲ್ಲೇಖಗಳಿವೆ.ಹೈದರಾಲಿ ತುಳುನಾಡಿನಲ್ಲಿ ಕೆಲವು ತೆರಿಗೆ ಸುಧಾರಣೆಗಳನ್ನು ಮಾಡಿದ್ದ.ಟಿಪ್ಪುಗೆ ಇದು ಯುದ್ಧ ಭೂಮಿಯಾಗಿತ್ತು.ಆ ಕಾಲದ ರಾಜರುಗಳು ತಮ್ಮ ನೇರ ಆಡಳಿತದ ಪ್ರದೇಶಗಳ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದರು ಎಂದು ಗಮನಿಸಬೇಕು.ನದಿಯಲ್ಲಿ ಬರುವ ಶತ್ರುಗಳನ್ನು ಬಡಿಯಲು ಸುಲ್ತಾನ್ ಬತೇರಿಯನ್ನು ಕಟ್ಟಿಸಿದ್ದ.ಲೈಟ್ ಹೌಸ್ ಬಳಿ ಒಂದು ಮಸೀದಿಯನ್ನು ಕಟ್ಟಿಸಿದ್ದ.ಬಂಟ್ವಾಳದ ಬಳಿ ಬ್ರಿಟಿಷರೊಂದಿಗೆ ಸಣ್ಣ ಯುದ್ಧ ಮಾಡಿದ್ದ.ಬೆಳ್ತಂಗಡಿಯಲ್ಲಿರುವ ಜಮಾಲಾಬಾದ್ ಕೋಟೆಯ ಬಗ್ಗೆ ಎರಡು ಉಲ್ಲೇಖಗಳಿವೆ.ಅಲ್ಲಿ ಕೋಟೆಯನ್ನು ಕಟ್ಟಿದ್ದೇ ಟಿಪ್ಪು ಎಂದು ಒಂದು ಉಲ್ಲೇಖವಿದೆ.ಅಲ್ಲಿ‌ ಮೊದಲೇ ಒಂದು ಕೋಟೆ ಇದ್ದು ಹಾಳಾಗಿತ್ತು;ಟಿಪ್ಪು ಅದನ್ನು ದುರಸ್ಥಿ ಮಾಡಿದ ಎಂಬ ಇನ್ನೊಂದು ಉಲ್ಲೇಖವಿದೆ.ಒಟ್ಟಾರೆ ಅದು ಟಿಪ್ಪುಗೆ ಸಂಬಂಧಿಸಿದ ಕೋಟೆಯಾಗಿತ್ತು.ಇನ್ನೊಂದು ಮಹತ್ವದ ಅಂಶವೆಂದರೆ  ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ ಮುಕ್ತಾಯವಾಯಿತು.ಆ ಯುದ್ಧದಲ್ಲಿ ನಿಜವಾಗಿ ಬ್ರಿಟಿಷರು ಸೋತಿದ್ದರು.ಹೇಳಿದ್ದು ಮಾತ್ರ ಡ್ರಾ ದಲ್ಲಿ ಮುಕ್ತಾಯವಾಯಿತೆಂದು.ಏಕೆಂದರೆ ಹೈದರಾಲಿ ಮೃತನಾಗಿದ್ದ.ಟಿಪ್ಪು ಶ್ರೀರಂಗಪಟ್ಟಣ ತಲುಪುವ ಮೊದಲೆ ಹೈದರಾಲಿ ಮರಣವಾರ್ತೆ ಗೊತ್ತಾದರೆ ಸಮಸ್ಯೆಯಾದೀತೆಂದು ಹೈದರಾಲಿ ಮೃತನಾದ ವಿಷಯವನ್ನು ಬಹಿರಂಗಪಡಿಸುವುದಿಲ್ಲ.ಆದ್ದರಿಂದ ಟಿಪ್ಪುಗೆ ಅವಸರವಸರವಾಗಿ ಶ್ರೀರಂಗಪಟ್ಟಣಕ್ಕೆ ಹಿಂದಿರುಗಬೇಕಿತ್ತು.ಹಾಗೆ ಡ್ರಾ ದಲ್ಲಿ ಯುದ್ಧ ಮಗಿಯಿತೆಂದು ಮಂಗಳೂರು ಒಪ್ಪಂದದೊಂದಿಗೆ ಯುದ್ಧ ಮುಗಿಯುತ್ತದೆ.

ಕಡೆಗೂ ನಮಗೆ ಮುಖ್ಯವಾಗಬೇಕಾದ್ದು ದಾಸ್ಯಕ್ಕೆ ನಾನು ಬಗ್ಗುವುದಿಲ್ಲ ಎಂಬ ಸಂದೇಶವೇ.ಇದನ್ನು ಸ್ವೀಕರಿಸಲು ತುಳುನಾಡು ಸಿದ್ಧವಾಗಿದೆಯೆ?ಕರ್ನಾಟಕ ಸಿದ್ಧವಾಗಿದೆಯೆ?ಭಾರತ ಸಿದ್ಧವಾಗಿದೆಯೇ?ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು ನನ್ನ ಮಾತುಗಳನ್ನು ಮುಗಿಸುತ್ತೇನೆ.ನಮಸ್ಕಾರ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...