Blog number 1830. ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ಅವರಿಗೆ ಕಲ್ಲು ಹೊಡೆದು ಹಲ್ಲೆ ಮಾಡಿದ ಘಟನೆ ನಡೆದು 46 ವರ್ಷವಾಯಿತು ಇವತ್ತು ಶ್ರೀಮತಿ ಇಂದಿರಾ ಗಾಂಧಿ ಅವರ 106 ನೇ ಹುಟ್ಟು ಹಬ್ಬ.
#ಶಿವಮೊಗ್ಗದಲ್ಲಿ_ಇಂದಿರಾಗಾಂಧಿ_ಅವರಿಗೆ_ಕಲ್ಲೆಸೆದವರು_ಯಾರು ?
#ಈಗಿನ_ರಾಜಕಾರಣದಲ್ಲಿರುವವರಿಗೆ_ಗೊತ್ತೇ_ಇರಲಿಕ್ಕಿಲ್ಲ.
#ಇವತ್ತು_ಇಂದಿರಾ_106ನೇ_ಹುಟ್ಟುಹಬ್ಬ
#ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ.
#ಅಮೇರಿಕಾದ_ನ್ಯೂಯಾರ್ಕ್_ಟೈಮ್ಸ್_ಈ_ಸುದ್ದಿ_ಮೊದಲು_ಪ್ರಕಟಿಸಿದ_ಪತ್ರಿಕೆ.
#ಇಡೀ_ದೇಶದಲ್ಲೇ_ಈ_ಸುದ್ದಿ_ಸಂಚಲನ_ಉಂಟು_ಮಾಡಿತ್ತು.
ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ 106ನೇ ಹುಟ್ಟುಹಬ್ಬ.
ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು.
ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು.
ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ಒಂದು ಗುಂಪು ಗುಪ್ತವಾಗಿ ತಯಾರಿ ನಡೆಸಿತ್ತು.
ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ (ಈಗಿನ ಬೈಪಾಸ್ ಸಮೀಪ) ಯುವಕರ ಗುಂಪೊಂದು ಇಂದಿರಾ ವಿರೋದಿ ಘೋಷಣೆಯೊಂದಿಗೆ ಇಂದಿರಾ ಕಾರು ಅಡ್ಡಗಟ್ಟಿ ಕಲ್ಲಿನ ಸುರಿಮಳೆ ನಡೆಸಿತು, ಇಂದಿರಾ ಗಾಂದಿ ಪ್ರಯಾಣಿಸುತ್ತಿದ್ದ ಅಂಬಾಸಿಡರ್ ಕಾರಿನ ಡ್ರೈವರ್ ಚಾಕಚಕ್ಯತೆಯಿಂದ ಆಗಬಹುದಾಗಿದ್ದ ದೊಡ್ಡ ದುರಂತ ತಪ್ಪಿಸಿ ತೀರ್ಥಹಳ್ಳಿ ಕಡೆಗೆ ಕಾರನ್ನು ವೇಗವಾಗಿ ಓಡಿಸುತ್ತಾನೆ.
ಆದರೂ ಆಗಬಾರದ ದುರಂತ ನಡೆದೇ ಹೋಯಿತು, ನೆರೆದ ಗುಂಪು ಬೀಸಿದ ಕಲ್ಲೊಂದು ಕಾರಿನ ಗಾಜು ಪುಡಿ ಮಾಡಿ ಇಂದಿರಾರ ನೀಳಕಾಯದ ಮೂಗು ಗಾಯ ಮಾಡುತ್ತದೆ, ಮೂಗಿನ ಮೇಲೆ ಅಪ್ಪಳಿಸಿದ ಕಲ್ಲಿನೇಟಿನಿಂದ ಸುರಿದ ರಕ್ತ 60 ವರ್ಷದ ಇಂದಿರಾಗೆ ಆ ಕ್ಷಣದಲ್ಲಿ ಏನು ಭಾವನೆ ತಾಳುವಂತೆ ಮಾಡಿತೋ ಗೊತ್ತಿಲ್ಲ.
ಮಾರ್ಗ ಮಧ್ಯೆ ಮೂಗಿಗೆ ಬ್ಯಾಂಡೇಜು ಮಾಡಿಸಿ ಅದು ಕಾಣಿಸದಂತೆ ಸೆರಗಿನಿಂದ ಮುಖ ಮುಚ್ಚಿ ಪ್ರಯಾಣಿಸಿದರೂ ಈ ಘಟನೆ ದೇಶ ವಿದೇಶದ ಪತ್ರಿಕೆ ಮತ್ತು ರೇಡಿಯೋದಲ್ಲಿ ದೊಡ್ಡ ಸುದ್ದಿ ಆಯಿತು.
ಅಮೇರಿಕಾದ ಪ್ರಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ (30 ಅಕ್ಟೋಬರ್ 1977) ಈ ಸುದ್ದಿ ಪ್ರಕಟಿಸಿದ ಮೊದಲ ಪತ್ರಿಕೆ ಆಗಿತ್ತು.
ಇಂದಿರಾ ಅಭಿಮಾನಿಗಳು ಈ ಘಟನೆಯಿಂದ ದುಃಖಪಟ್ಟರೆ ವಿರೋದಿಗಳು ಸಂಭ್ರಮಿಸುತ್ತಾರೆ.
ಅವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖ ಕಾಂಗ್ರೇಸ್ ವಿರೋದಿ ಪಕ್ಷ ಜನತಾ ಪಕ್ಷವಾಗಿತ್ತು, ಜೆ.ಹೆಚ್.ಪಟೇಲರು ಮತ್ತು ಕಾಗೋಡು ತಿಮ್ಮಪ್ಪನವರು ಆಗಿನ ಜನತಾ ಪಕ್ಷದ ಮುಖಂಡರಾಗಿದ್ದರು.
ಮುಂದೆ ಪಟೇಲರು ಜನತಾ ಪರಿವಾರದಿಂದಲೇ ಮುಖ್ಯಮಂತ್ರಿ ಆಗುತ್ತಾರೆ, ಕಾಗೋಡು ಜನತಾ ಪಕ್ಷ ತೊರೆದು ಕಾಂಗ್ರೇಸ್ ಸೇರಿ ಮಂತ್ರಿ ಆಗುತ್ತಾರೆ.
ಇವತ್ತಿಗೂ ಅಂದರೆ #46_ವರ್ಷದ_ಹಿಂದೆ_ಇಂದಿರಾ_ಗಾಂಧಿಗೆ_ಕಲ್ಲು_ಹೊಡೆದವರು_ಯಾರು? ಈ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿದ ಮುಖಂಡರು ಯಾರು? ಎನ್ನುವುದು ಬಹಿರಂಗ ಆಗಲೇ ಇಲ್ಲ. ಇದೊಂದು ಕರಾಳ ಘಟನೆ ಕಾಂಗ್ರೇಸ್ ಪಕ್ಷದ ಇತಿಹಾಸದ ಪುಟದಿಂದ ಉದ್ದೇಶಪೂರ್ವಕವಾಗಿ ಅಳಿಸಲಾಯಿತಾ? ಗೊತ್ತಿಲ್ಲ.
Comments
Post a Comment