Blog number 1826. ನಾನು ನಾಲ್ಕನೇ ನಂಬರ್ ಕಳ್ಳ ಎಂದು ತನ್ನ ಒಂಟಿ ಹ್ಯಾಂಡಲ್ ಲಟಾರಿ ಸೈಕಲ್ ನಲ್ಲಿ ಸ್ಲೇಟಿನಲ್ಲಿ ಬರೆದು ತಗಲಿಸಿಕೊಂಡು ತಮ್ಮ ಜೀವಿತಾವದಿ ಪ್ರತಿಭಟನೆ ದಾಖಲಿಸಿದ ಪುರಪ್ಪೆ ಮನೆ ನಾಯಕರು 70 ರ ದಶಕದಲ್ಲಿ ಮಲೆನಾಡು ಪ್ರಾಂತ್ಯದಲ್ಲಿ ರೋಚಕ ಕಥೆಗಳ ನಿಗೂಡ ವ್ಯಕ್ತಿ ಆಗಿದ್ದರು.
#ಅರವತ್ತು_ಎಪ್ಪತ್ತು_ದಶಕದಲ್ಲಿ_ಮಲೆನಾಡು_ಪ್ರಾಂತ್ಯದಲ್ಲಿ_ನಾಲ್ಕನೇ_ನಂಬರ್_ಕಳ್ಳ.
#ಇವರ_ಬಗ್ಗೆ_ಅನೇಕ_ರೋಚಕ_ಕಥೆಗಳು_ಹರಿದಾಡುತ್ತಿತ್ತು
#ತಾಯಂದಿರುಗಳು_ಮಕ್ಕಳಿಗೆ_ಊಟ_ನಿದ್ದೆ_ಮಾಡಿಸಲು_ಗುಮ್ಮನ_ಕಥೆ_ಜೊತೆ_ಇವರನ್ನು_ಸೇರಿಸುತ್ತಿದ್ದರು.
#ಇವರು_ಹೋದಲ್ಲೆಲ್ಲ_ಜನ_ಮುತ್ತಿಕೊಳ್ಳುತ್ತಿದರು.
#ಕಿನ್ನರ_ಜೋಗಿಯಂತೆ_ಮಕ್ಕಳು_ಹಿಂಬಾಲಿಸುತ್ತಿದ್ದರು.
#ಬಡವ_ಶ್ರೀಮಂತರ_ವರ್ಗ_ಸಂಘರ್ಷದಲ್ಲಿ_ಜೈಲು_ಸೇರಿದ್ದಕ್ಕೆ_ಪ್ರತಿಭಟನೆ_ಇದಾಗಿತ್ತು.
#ಕುಟುಂಬದವರಿಗೆ_ಅವಮಾನ_ನೋಡುವವರಿಗೆ_ಗೇಲಿಗೆ_ಕಾರಣವಾಗಿದ್ದರು.
#ಆದರೆ_ಇವರು_ಶೋಷಣೆಯನ್ನು_ಇವರದೇ_ರೀತಿಯಲ್ಲಿ_ವಿರೋದಿಸಿದವರು.
ಇವತ್ತು ಮಧ್ಯಾಹ್ನ ಬೆಂಗಳೂರಿಂದ ಚಲನ ಚಿತ್ರ ನಿಧೇ೯ಶಕರಾದ ಬಾಳೆಗುಂಡಿ ಈಶ್ವರ್ ತಮ್ಮ ಬಾಲ್ಯದಲ್ಲಿ ನೋಡಿದ್ದ 4 ನೇ ನಂಬರ್ ಕಳ್ಳ ಎಂದು ಸೈಕಲ್ ನಲ್ಲಿ ಸಂಚರಿಸುತ್ತಿದ್ದವರ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದಿಯಾ ಅಂತ ಕೇಳಿದ್ದರು.
ಈಶ್ವರ್ ಬಾಳೆಗುಂಡಿ ಪ್ರೀತಿ ನೀನಿಲ್ಲದೆ ನಾ ಹೇಗಿರಲಿ ಎಂಬ ಯಶಸ್ವಿ ಚಿತ್ರದ ನಿರ್ದೇಶಕರು, ಇವರು ನಿರ್ದೇಶಿಸಿದ ಉಮೆನ್ಸ್ ಡೇ - ಮಹಾನಗರ - ಸಲ್ಯೂಟ್ - ಗ್ರೀನ್ ಸಿಗ್ನಲ್ ಚಿತ್ರಗಳು ಬಿಡುಗಡೆ ಆಗಿದೆ, ಶಿವಮೊಗ್ಗ ಜಿಲ್ಲಾ ಮಂತ್ರಿ ಮದುಬಂಗಾರಪ್ಪರ ದೇವಿ ಸಿನಿಮಾ ಇವರೇ ನಿರ್ಧೇಶಿಸಿದ್ದು ಆದರೆ ಅದಿನ್ನೂ ಬಿಡುಗಡೆ ಆಗಿಲ್ಲ.
1972 ರಲ್ಲಿ ನಾನು ಅವರನ್ನು ಕೊನೆಯ ಬಾರಿ ನಮ್ಮ ಊರಾದ ಯಡೇಹಳ್ಳಿ ಸರ್ಕಲ್ ನಲ್ಲಿ ನೋಡಿದ್ದೆ ಆಗ ನನ್ನ ವಯಸ್ಸು 8 ರಿಂದ 9.
ಅವರು ಪುರಪ್ಪೆ ಮನೆಯವರು, ಇವರ ಪುತ್ರ ನಾಯಕರು ಆನಂದಪುರಂನಲ್ಲಿ SRS ಮಿಲ್ಲಿನಲ್ಲಿ ಬತ್ತದ ವ್ಯಾಪಾರ ವಹಿವಾಟು ನಡೆಸುತ್ತಿದ್ದರು, ಅವರು ಈಗ ಪುರಪ್ಪೆಮನೆಯಲ್ಲಿ ಅಂಗಡಿ ಮತ್ತು ವ್ಯಾನ್ ಇಟ್ಟುಕೊಂಡಿದ್ದಾರೆ.
ಇವರು ಗೌಡ ಸಾರಸ್ವತ ಬ್ರಾಹ್ಮಣರು (GSB), ಇವರ ಸೈಕಲ್ ಗೆ ಅರ್ಧ ಹ್ಯಾಂಡಲ್ ಇರಲಿಲ್ಲ, ಆಗಿನ ಕಾಲದಲ್ಲಿ ಕಷ್ಟ ಇತ್ತು, ಹಸಿವಿನಿಂದ ತತ್ತರಿಸಿದ ಅವರು ಊರಲ್ಲಿನ ಶ್ರೀಮಂತ ಜಮೀನುದಾರಲ್ಲಿ ತಮ್ಮ ಕಷ್ಟ ಮತ್ತು ಹಸಿವಿನ ಬಗ್ಗೆ ವಿನಂತಿಸಿ ಕಾಳು ಕಡಿ ಸಹಾಯ ಕೇಳುತ್ತಾರೆ ಜಿಪುಣ ಶ್ರೀಮಂತರು ಕೈಯಾಡಿಸಿ ಹಿಯಾಳಿಸುತ್ತಾರೆ, ಇದರಿಂದ ಹಸಿವಿನಿಂದ ನೊಂದ ಅವರು ಸಮಾಜದ ಅಸಮತೋಲನ ವ್ಯವಸ್ಥೆ ಬಗ್ಗೆ ಆಕ್ರೋಶಗೊಂಡು ಆ ಶ್ರೀಮಂತನ ಮನೆಯಲ್ಲಿ ಕಳ್ಳತನ ಮಾಡಿ ತಾನೇ ಕದ್ದಿದ್ದು ತನಗೆ ಅವರ ಮನೆಯಲ್ಲಿ ಬಿದ್ದಿರುವ ಶ್ರೀಮಂತಿಕೆಗೆಯಲ್ಲಿ ಒಂದು ಮುಷ್ಟಿ ಅನ್ನ ನೀಡುವ ಮನಸ್ಸು ಬರಲಿಲ್ಲ ಎನ್ನುತ್ತಾರೆ,ಇದರಿಂದ ಆ ಶ್ರೀಮಂತರು ಈ ನೇರ ನುಡಿಯ ನಾಯಕರಿಂದ ಅವಮಾನಿತರಾಗಿ ಪೋಲಿಸರಿಗೆ ದೂರು ನೀಡಿ ಬಂದನಕ್ಕೆ ಒಳ ಪಡಿಸುತ್ತಾರೆ.
ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಈ ನಾಯಕರು ತಾವು ಕಳ್ಳತನ ಮಾಡಿದ್ದು ಒಪ್ಪಿ ಕೊಳ್ಳುತ್ತಾರೆ ಮತ್ತು ಇದಕ್ಕೆ ಕಾರಣ ತನ್ನ ಹಸಿವು, ಈ ಹಸಿವಿನ ನೋವು ಶ್ರೀಮಂತ ಜಮೀನ್ದಾರ ಅರ್ಥ ಮಾಡಿ ಕೊಳ್ಳದಿದ್ದರಿಂದ ಈ ಕಳ್ಳತನದ ಮೂಲಕ ಅವರಿಗೆ ಎಚ್ಚರಿಕೆ ಮಾಡಿದ್ದೇನೆ ಎನ್ನುತ್ತಾರೆ.
ನ್ಯಾಯಾದೀಶರು ಕಳ್ಳ ಕಳ್ಳತನ ಒಪ್ಪಿಕೊಂಡಿದ್ದರಿಂದ ಅನಿವಾರ್ಯವಾಗಿ ಒಂದೆರೆಡು ವರ್ಷ ಜೈಲು ಶಿಕ್ಷೆಗೆ ಒಳಪಡಿಸುತ್ತಾರೆ.
ಸಂತೋಷದಿಂದ ಜೈಲು ಅನುಭವಿಸಿ ಹೊರ ಬರುವಾಗ ನಾಯಕರು ಬದಲಾಗುತ್ತಾರೆ, ಸಮಾಜದ ಅಸಮಾನತೆ ಬಗ್ಗೆ ಅಸಹ್ಯ ಪಡುತ್ತಾರೆ, ಕಾನೂನು ಕಾಯ್ದೆ ಬಗ್ಗೆ ಭ್ರಮನಿರಸನ ಆಗುತ್ತದೆ ಅವರಿಗೆ.
ಸತ್ಯ ಹೇಳಿದರೆ ಜೈಲು, ಸುಳ್ಳು ಹೇಳಿದರೆ ಬದುಕುವ ಈ ಪ್ರಪಂಚದ ಬಗ್ಗೆ ನಿರಾಸೆ ಉಂಟಾಗುತ್ತದೆ.
ಆಗ ಸೈಕಲ್ ಮೇಲೆ ಲೋಕ ಸಂಚಾರ ಪ್ರಾರಂಭ ಮಾಡುತ್ತಾರೆ, ಸ್ಲೇಟಿನಲ್ಲಿ ನಾನು 4 ನೇ ನಂಬರ್ ಕಳ್ಳ ಎಂದು ಬರೆದುಕೊಂಡು ಸೈಕಲ್ಲಿಗೆ ತೂಗು ಹಾಕುತ್ತಾರೆ.
ಇದು ಸಾಗರ ಜೈಲಿನಲ್ಲಿ ಇವರ ಖೈದಿ ಸಂಖ್ಯೆ ಆಗಿರಬೇಕು, ಇದೆಲ್ಲ ತನಗೆ ಜೈಲಿಗೆ ಕಳಿಸಿದ ಶ್ರೀಮಂತರ ಮೇಲಿನ ಸಾಂಕೇತಿಕ ಪ್ರತಿಭಟನೆ ಅವರದ್ದಾಗಿರುತ್ತದೆ.
ಆದರೆ ಇವರ ಪ್ರತಿಭಟನೆಯ ವರ್ತನೆಯಿಂದ ಅವಮಾನದಿಂದ ತಲೆ ತಗ್ಗಿಸುವಂತಾದ ಅವರ ಊರಿನ ಶ್ರೀಮಂತ ಮತ್ತು ಅವರ ವರ್ಗದವರು ಇವರಿಗೆ ಹುಚ್ಚು ಹಿಡಿದಿದೆ ಎಂದು ಪ್ರಚಾರ ಮಾಡುತ್ತಾರೆ, ಸಮಾಜದಲ್ಲಿ ಈ ವ್ಯಕ್ತಿ ಗೇಲಿಗೆ ಒಳಗಾಗುವುದರಿಂದ ಇವರ ಕುಟುಂಬದವರು ಇವರಿಂದ ಅವಮಾನ ಎಂದು ಕೋಪಗೊಳ್ಳುತ್ತಾರೆ.
ಇವರ ಬಗ್ಗೆ ರೋಚಕ ಕಥೆಗಳು ಹರಡಿಕೊಳ್ಳುತ್ತದೆ, ಇವರು ಕೇಳಿದ್ದು ಕೊಡದಿದ್ದರೆ ಅವರ ಮನೆಯನ್ನು ಇವರು ಕಳ್ಳತನ ಮಾಡದೇ ಬಿಡುವುದಿಲ್ಲ ಎಂಬ ಸುದ್ದಿ ಹರಡುತ್ತದೆ, ಇದರಿಂದ ಇವರಿಗೆ ಅನುಕೂಲವೇ ಆಗುತ್ತದೆ, ಇವರು ಕೇಳಿದಾಗಲೆಲ್ಲ ಇವರಿಗೆ ಹೋದಲ್ಲೆಲ್ಲ ಊಟ ಉಪಹಾರ ನೀಡುತ್ತಾರೆ.
ಸಣ್ಣ ಮಕ್ಕಳಿಗೆ ಅವರ ತಾಯಂದಿರು #ನಾಲ್ಕನೇ_ನಂಬರ್_ಕಳ್ಳ_ಬರುತ್ತಾನೆ ಎಂಬ ಹೆದರಿಕೆ ಕಥೆ ಹೇಳಿ ಊಟ , ಮಲಗಿಸುವ ಕೆಲಸ ಮಾಡುತ್ತಿದ್ದರು.
ಹೀಗೆ ಸಮಾಜದಿಂದ, ಕುಟುಂಬದಿಂದ ದೂರವಾದ ನಾಯಕರು ತಮ್ಮ ಜೀವಿತಾವದಿಯನ್ನ ತಮಗೆ ಊಟ ಕೊಡದ, ಜೈಲು ಶಿಕ್ಷೆ ಕೊಡಿಸಿದ ಅವರ ಊರ ಶ್ರೀಮಂತನ ವಿರುದ್ದದ ಪ್ರತಿಭಟನೆಯಾಗಿ ಒಂಟಿ ಹ್ಯಾಂಡಲ್ (ಅದ೯ ಹ್ಯಾಂಡಲ್ ಮುರಿದ ಸೈಕಲ್ ) ಸೈಕಲ್ ನಲ್ಲಿ ತಮ್ಮ ಉದ್ದವಾದ ನೀಳ ಗಡ್ಡ -ಜಡೆಯಲ್ಲಿ, ಸಣ್ಣ ಕಚ್ಚೆ ಪಂಚೆ, ಶರ್ಟ ಧರಿಸದ ಬರೀ ಮೈಯಲ್ಲಿ ತಿರುಗುತ್ತಾ ಹೋದ ಹೋದ ಊರಲ್ಲಿ ಗುಂಪುಗೂಡುತ್ತಿದ್ದ ಜನರ ಮಧ್ಯ ಸೈಕಲ್ ನಿಲ್ಲಿಸಿ ವಿಶ್ರಾಂತಿ ಪಡೆದು ಆ ಊರಿನಲ್ಲಿ ಚಹಾನೊ ಊಟಾನೋ ಕೇಳಿ ಪಡೆದು ಮುಂದಿನ ಊರಿಗೆ ಹೋಗುತ್ತಿದ್ದರು.
ಇವರು ಆಚಾರ್ಯ ವಿನೋಭಾ ಭಾವೆಯವರಂತೆ ಕಾಣುತ್ತಿದ್ದರು ಇವರ ಸರಳ ಉಡುಪು, ಬರೀ ಮೈ, ನೀಳವಾದ ಕೇಶ ಮತ್ತು ಗಡ್ಡ ವಿನೋಬಾ ಭಾವೆ ಅವರ ತದ್ರೂಪ ಅನ್ನಿಸುತ್ತಿತ್ತು.
ಮುಂದಿನ ಊರಲ್ಲಿ ಇದು ಪುನರಾವರ್ತನೆ ಆಗುತ್ತಿತ್ತು ಮತ್ತು ಹಿಂದಿನ ಊರಲ್ಲಿ ಎಷ್ಟೋ ದಿನಗಳ ಕಾಲ 4 ನೇ ನಂಬರ್ ಕಳ್ಳರ ಬಗ್ಗೆ ಹೊಸ ಹೊಸ ಕಥೆ ಕೇಳಿ ಬರುತ್ತಿತ್ತು ಆಗೆಲ್ಲ ಈಗಿನಂತೆ ಟೀವಿ ಮೊಬೈಲ್ ಮನರಂಜನೆ ಇಲ್ಲದ ಕಾಲ.
ಇವರು ನನ್ನ,ತಂದೆಗೆ ಪರಿಚಿತರಾಗಿದ್ದರು, ಇವರ ಮಗ ನಾಯಕರು ನನ್ನ ತಂದೆಗೆ ಅತ್ಯಾಪ್ತ ಗೆಳೆಯರಾಗಿದ್ದರು. ಆಗ ಇಡೀ ಆನಂದಪುರಂನಲ್ಲಿ ನೂರು ರೂಪಾಯಿ ನೋಟಿಗೆ ಚಿಲ್ಲರೆ ಬೇಕಾದರೆ SRS ಮಿಲ್ಲಿನ ಅಕ್ಕಿ ಬತ್ತದ ವ್ಯಾಪಾರಿ ಆಗಿದ್ದ ಇವರ ಮಗನ ಹತ್ತಿರ ಹೋಗಬೇಕಾಗಿತ್ತು.
ಶಿವಮೊಗ್ಗ ಜಿಲ್ಲೆಯ ಅನೇಕ ಹಿರಿಯರು ಇವರನ್ನು ನೋಡಿದ್ದಾರೆ ನೆನಪು ಮಾಡಿಕೊಂಡರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸ ಬಹುದು.
Comments
Post a Comment