#ರಾಜದೂತ್_ಬೈಕ್_ಪುರಾಣ
ಒ0ದು ಹಳೆಯ ರಾಜದೂತ್ ಬೈಕ್ ಖರೀದಿಸಿದ್ದೆ ನಂತರ ಅದನ್ನ ನಿಭಾಯಿಸಲಾಗದೆ ನಮ್ಮ ಹಳೆಯ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದೆ.
ಒ0ದು ದಿನ ಬೆಳ್ಳಂಬೆಳಿಗ್ಗೆ ಹೆಬ್ಬೋಡಿ ಗಣಪತಿ ಮತ್ತು ಅವನ ಮಗ ಬಂದರು ಆಗ ನನ್ನ ತಲೆ ಸೆಲೂನ್ ಕೃಷ್ಣನ ಕೈಯಲ್ಲಿತ್ತು, "ಏನ್ ಗಣಪತಿ ಬೆಳಗೇನೆ ಅಪ್ಪ ಮಗ ಎಲ್ಲಿಗೋ ಹೊರಟಿದೀರಿ" ಅಂದೆ ಎಲ್ಲೂ ಇಲ್ಲ ನಿಮ್ಮಲ್ಲಿಗೆ ಬಂದೆವು ಅಂದ, ಏನು ವಿಚಾರ ? ಅಂದದ್ದಕ್ಕೆ ನಿಮ್ಮ ಹತ್ತಿರ ಇರೋ ಹಳೇ ರಾಜದೂತ್ ಬೈಕ್ ಕೊಡುತೀರಾ? ಅಂದ, ನನಗೆ ಒಂದು ತರ ಖುಷಿ ಆಯಿತು ಹೆಂಗಿದ್ದರೂ ನನಗೆ ಬೇಡ ಆಗಿತ್ತು ಅದಕ್ಕೆ ಗಿರಾಕಿ ಬಂತಲ್ಲ ಅಂತ.
ಬೆಲೆ ಎಷ್ಟು ಅಂದಾಗ ನಾನು ಖರೀದಿಸಿದ್ದು 7 ಸಾವಿರಕ್ಕೆ ನೀನು 2 ಸಾವಿರ ಕಡಿಮೆ ಕೊಡು ಅಂದೆ ತಕ್ಷಣ ಮಗನಿಗೆ ಅಂಗಡಿಗೆ ಹೋಗು ಎಲೆ ಅಡಿಕೆ ತಾ, ಮುಂಗಡ ಕೊಡದೆ ಯಾವುದೇ ವಸ್ತು ಖರೀದಿಸ ಬಾರದು ಅಂತ ಮಗನಿಗೆ ಹೇಳುವಾಗಲೇ ಗೊತ್ತಾಯಿತು ಇವತ್ತು ಪೂಣ೯ ಹಣ ಕೊಡೊಲ್ಲ ಅಂತ.
ಏನಾದರಾಗಲಿ ಬೈಕ್ ಮಾರಾಟ ಆಯಿತಲ್ಲ ಹೆಂಗಿದ್ದರೂ ಒಂದೆರೆಡು ಸಾವಿರ ಮುಂಗಡ ಬರುತ್ತದಲ್ಲ ಅಂತ ಸುಮ್ಮನಾದೆ ಗಣಪತಿ ಎಲೆ ಅಡಿಕೆ ಮೇಲೆ 5 ರೂಪಾಯಿ ಮತ್ತು 25 ಪೈಸೆ ನಾಣ್ಯ ಇಟ್ಟು ಕೊಟ್ಟಾಗ ಕೋಪ ಬಂತು ಆದರೆ ಗಣಪತಿ ಮುಂದಿನ ವಾರದಲ್ಲಿ ತಪ್ಪದೇ ಪಾವತಿ ಮಾಡುವುದಾಗಿ ಭರವಸೆ ನೀಡಿ ರಾಜದೂತ್ ಬೈಕ್ ಚಾಲು ಮಾಡಿದ ಮಗನ ಹಿಂದೆ ಕುಳಿತು ಹೋದವನು ಎಷ್ಟು ದಿನವಾದರೂ ಬರಲಿಲ್ಲ.
ಒಮ್ಮೆ ಅವರ ಮನೆ ಹತ್ತಿರದ ಸ್ವಾಮಿ ಗೌಡರು ಸಿಕ್ಕಾಗ "ಗಣಪತಿ ಇದಾನ ಗೌಡರೆ?" ಅಂದಾಗ ಇಲ್ಲದೇ ಏನ್ ರಿ ಈಗ ಅವನ ಮಗನ ಜೊತೆ ಸೇರಿ ಮಾಡ ಬಾರದ್ದು ಮಾಡ್ತಾ ಇದಾನೆ ಅಂದರು, "ಅಂತಾದ್ದು ಏನು ಗೌಡರೇ" ಅಂದೇ ಅದಕ್ಕೆ ವ್ಯವಹಾರದ ಲಪಡಾದ ಕಥೆ ಕೊನೆಗೆ ಹೇಳಿದ್ದು ನನ್ನ ಕಿವಿ ನೆಟ್ಟಗಾಗಿಸಿತ್ತು ಅದೇನೆಂದರೆ ಯಾರದೊ ಬೈಕ್ ಕದ್ದು ಕೊಂಡು ಬಂದು ಎಲ್ಲಾ ಬಿಚ್ಚಿ ಗುಜರಿಗೆ ಮಾರಿದರು ಅಂದಾಗ.
ಅಂತೂ ಆದರ ನಂತರ ಗಣಪತಿ ನನ್ನ ಬೇಟಿ ಆಗಲೂ ಇಲ್ಲ ಬೈಕ್ ದುಡ್ಡು ಬರಲಿಲ್ಲ, ಈ ರೀತಿ ನನ್ನ ರಾಜದೂತ್ ಬೈಕ್ ಗುಜರಿಗೆ ಹಾಕಿದರು.
ಇದೆಲ್ಲ ನೆನಪಾಗಿದ್ದು ಇವತ್ತು ಪೇಸ್ ಬುಕ್ ಲ್ಲಿ ರಾಜದೂತ್ ಬೈಕ್ ಪೋಟೋ ನೋಡಿ 1960ರ ದಶಕದಲ್ಲಿ ನಮ್ಮ ತಂದೆ ಗೆಳೆಯರಾದ ಯೋಮಕೇಶಪ್ಪ ಗೌಡರ ಏಕೈಕ ರಾಜದೂತ್ ಇಡೀ ನಮ್ಮ ಹೋಬಳಿಯಲ್ಲಿ ಒಂದೇ ಆಗಿತ್ತು ನಂತರ ಇಂಜಿನಿಯರ್ ತಿರುಮಲಾಚಾರ್ ತಂದಿದ್ದು ಎರಡನೆಯದ್ದು.
ಗೌಡರು ಶಿವಮೊಗ್ಗ ಸಾಗರ ಹೋಗುವಾಗ ನಮ್ಮ ಮನೆ ಅಂಗಳದಲ್ಲಿ ಇಟ್ಟು ಹೋದ ತಕ್ಷಣ ನಮ್ಮ ಅಣ್ಣ ದಬ್ಬಣ ಹಾಕಿ ಸ್ಟಾಟ್೯ ಮಾಡಿ ಓಡಿಸುತ್ತಿದ್ದ ನಂತರ ನಾನು ಅದೇ ಮಾಡಿ ನಮ್ಮಣ್ಣ ಮತ್ತು ಗೌಡರಿಗೆ ತಿಳಿಯದಂತೆ ರಾಜದೂತ್ ಕಲಿತದ್ದು.
Comments
Post a Comment