Blog number 929. ಆನಂದಪುರಂ ಇತಿಹಾಸ ಭಾಗ 79.ಬಿದನೂರು ನಗರ ಸಂಸ್ಥಾನದ ರಾಜನೆಂದು ಘೋಷಿಸಿಕೊಂಡ, ಮೈಸೂರು ಮಹಾರಾಜರ ಭೂಕಂದಾಯ ಮತ್ತು ಸುಂಕದ ಸುಲಿಗೆ ವಿರುದ್ದ ಬಿದನೂರು ನಗರ ಪ್ರಾಂತ್ಯದ ರೈತರ ಚಳವಳಿ ನೇತೃತ್ವ ವಹಿಸಿದ್ದ ಮತ್ತು ಮೊದಲ ರೈತ ಸಮಾವೇಶ ಆನಂದಪುರಂ ಹೋಬಳಿಯ ಹೊಸಂತೆಯಲ್ಲಿ ನಡೆಸಿದ ಬೂದಿ ಬಸಪ್ಪ ನಾಯಕರು
#ಆನ೦ದಪುರಂ_ಇತಿಹಾಸ_ಭಾಗ_79.
#ಬೂದಿಬಸಪ್ಪ_ನಾಯಕರು_ಆನಂದಪುರಂನ_ಬೆಳಂದೂರು_ಗೌಡರ_ಹೊಸಮನೆಗೆ_ಬೇಟಿ_ನೀಡುತ್ತಾರೆ
#ಮೈಸೂರು_ಅರಸರ_ಜನವಿರೋದಿ_ಭೂಕಂದಾಯ_ಸುಂಕದ_ವಿರುದ್ದ_ಆನಂದಪುರಂ_ಹೋಬಳಿಯ_ಬ್ಬಹತ್_ರೈತ_ಸಮಾವೇಶ.
#ಹೊಸಂತೆ_ರೈತಸಮಾವೇಷಕ್ಕೆ_ಸಹಕರಿಸಿದ್ದ_ಬೆಳಂದೂರು_ಗೌಡರ_ಮನೆತನ
#ಏಪ್ರಿಲ್_1830ರಲ್ಲಿ_ಕೆಳದಿ_ಬಿದನೂರು_ಸಂಸ್ಥಾನದ_ರಾಜನೆಂದು_ಘೋಷಣೆ.
#ಆನಂದಪುರಂ_ಕೋಟೆ_ಮುತ್ತಿಗೆ_ವಿಪಲ.
#ಇತಿಹಾಸದಲ್ಲಿ_ಬೂದಿಬಸಪ್ಪನಾಯಕ_ದರೋಡೆಕೋರ_ಎಂದು_ಬರೆದು_ಇತಿಹಾಸಕ್ಕೆ_ಅಪಚಾರ_ಮಾಡಿದ್ದಾರೆ.
ಬೂದಿ ಬಸಪ್ಪ ನಾಯಕ ಯಾರು ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು ತಾನು ಕೆಳದಿ ವಂಶಸ್ಥರವನು ಅಂತೆಲ್ಲ ಬರೆದಿದ್ದಾರೆ.
ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟವನ್ನು ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯ ಮುನಿರಾಬಾದ್ ತನಕ ವ್ಯಾಪಿಸುತ್ತದೆ.
ಇವರ ಜೊತೆ ಬಿದನೂರುನಗರ ಪ್ರಾಂತ್ಯದ ರಂಗಪ್ಪ ನಾಯಕರು ಕೈಜೋಡಿಸುತ್ತಾರೆ, ಆಗ ಇವರು ನಡೆಸುತ್ತಿದ್ದ ಸಾವಿರಾರು ರೈತರು ಸೇರುತ್ತಿದ್ದ ರೈತ ಸಮಾವೇಷಕ್ಕೆ ಕುಟ್ಟ೦ ಎಂದು ಕರೆಯುತ್ತಿದ್ದರು.
ಈ ಭಾಗದ ರೈತರು ಸಂಪೂರ್ಣ ಕರನಿರಾಕರಣೆಗೆ ಕಾರಣವೇನೆಂದರೆ ಕೆಳದಿ ಅರಸರ ಕಾಲದಲ್ಲಿ ಭೂಕಂದಾಯ ರಾಜ ಶಿವಪ್ಪನಾಯಕರು ಭೂಮಿಯ ಪಲವತ್ತತೆಯ ವಿಂಗಡನೆಯ ಶಿಸ್ತು ಆದಾರದಲ್ಲಿದ್ದರಿಂದ ಪ್ರಜೆಗಳಿಗೆ ಹೊರೆ ಆಗಿರಲಿಲ್ಲ.
1763 ರಲ್ಲಿ ಹೈದರಾಲಿ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡು ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ ನಂತರ 9 ಅಕ್ಟೋಬರ್ 1831 ರವರೆಗೆ ಸುಮಾರು 68 ವರ್ಷ ಮೈಸೂರು ಅರಸರ ಆಡಳಿತದಲ್ಲಿರುತ್ತದೆ.
1820 ರಲ್ಲಿ ಮುಮ್ಮುಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮಿತಿ ಮೀರಿದ ರಾಜವಂಶಸ್ಥರ ವೆಚ್ಚ, ಆಡಳಿತದಲ್ಲಿ ಬ್ರಷ್ಟಾಚಾರದ ನಿಯಂತ್ರಣ ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಅದರಿಂದ ಹೊರಬರಲು ಮೈಸೂರು ಅರಸರು ಶುರ್ಟಿ ಮತ್ತು ಸಾಯರ್ ಎಂಬ ಹೊಸ ತೆರಿಗೆ ಜಾರಿ ಮಾಡುತ್ತಾರೆ.
ಶುರ್ಟಿ ಎಂಬ ಭೂಕಂದಾಯ ವಸೂಲಿಯಲ್ಲಿ, ಭೂಕಂದಾಯ ನೀಡುವ ರೈತರು ಮತ್ತು ಅದನ್ನು ಬೊಕ್ಕಸಕ್ಕೆ ಪಡೆಯುವ ರಾಜನ ಮದ್ಯೆ ಮಧ್ಯವತಿ೯ಗಳು ಹರಾಜು ಮೂಲಕ ನೇಮಕ ಆಗುತ್ತಾರೆ ಅವರು ರಾಜರು ನಿರ್ದರಿಸಿದ ಕಡಿಮೆ ಕಂದಾಯ ರಾಜರಿಗೆ ನೀಡಿ ರೈತರಿಂದ ಅನದಿಕೃತವಾಗಿ ವಿಪರೀತ ಕಂದಾಯ ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ.
ಸಾಗುವಳಿ ಮಾಡದ, ಪಲ ಭರಿತ ಅಲ್ಲದ ಜಮೀನಿಗೂ ರೈತರು ತೆರಿಗೆ ವಿದಿಸುತ್ತಾರೆ ಆದರೆ ಅದು ರೈತರಿಗೆ ಭರಿಸಲಾಗುವುದಿಲ್ಲ.
ಇದರ ಮೇಲೆ ರೈತರು ತಮ್ಮ ಫಸಲು ಸಾಗಾಣಿಕೆಗೆ ವಿಪರೀತ ಸುಂಕ ವಿದಿಸುವ ಸಾಯರ್ ಪದ್ಧತಿಯಿಂದ ಕೆಳದಿ ಸಂಸ್ಥಾನದ ರಾಜರ ಆಡಳಿತದಲ್ಲಿ ನೆಮ್ಮದಿಯಲ್ಲಿದ್ದ ರೈತರು ಮೈಸೂರು ಅರಸರ ಕಾಲದಲ್ಲಿ ಸಂಕಷ್ಟಕ್ಕೆ ಈಡಾಗುತ್ತಾರೆ ಆಗ ಬಿದನೂರು ನಗರ ಪ್ರಾಂತ್ಯದಲ್ಲಿ ಪ್ರಸಿದ್ದ ಜನಪರ ಹೋರಾಟಗಾರ ರಂಗಪ್ಪ ನಾಯಕರ ನೇತೃತ್ವದಲ್ಲಿ ರೈತರು ಪ್ರತಿಭಟನೆಗೆ ತಯಾರಾಗುತ್ತಾರೆ ಆಗ ಬೂದಿಬಸಪ್ಪ ನಾಯಕರು ಈ ಹೋರಾಟಕ್ಕೆ ಹೊಸ ರೂಪ ನೀಡುತ್ತಾರೆ ಮತ್ತೊಮ್ಮೆ ಕೆಳದಿ ಸಂಸ್ಥಾನ ಆಡಳಿತ ಪಡೆಯುವ ಆಶಾಭಾವನೆಯಿಂದ ಜನಗಳೂ ಈ ಹೋರಾಟಕ್ಕೆ ದುಮುಕುತ್ತಾರೆ, ಆಗ ಇಲ್ಲಿನ ಬಹುಸಂಖ್ಯಾತ ಲಿಂಗಾಯಿತರು ಮತ್ತು ದೇಶಸ್ಥ ಬ್ರಾಹ್ಮಣರು,ಸ್ಥಳಿಯ ಸರ್ಕಾರಿ ಅಧಿಕಾರಿಗಳಾಗಿದ್ದ ಶಾನುಬೋಗರು, ಪಟೇಲರುಗಳು ರೈತರ ಹೋರಾಟಕ್ಕೆ ಬೆಂಬಲಿಸುತ್ತಾರೆ.
ಮೈಸೂರು ಅರಸರು ತಮ್ಮ ಸೈನಿಕರಿಗೆ ಸುಮಾರು 18 ತಿಂಗಳು ಕಾಲ ಸಂಬಳವೇ ನೀಡಲಾಗದ ಆರ್ಥಿಕ ಸಂಕಷ್ಟದಿಂದ ಕೋಪಗೊಂಡ ಸುಮಾರು 15 ಸಾವಿರ ಸೈನಿಕರು ಈ ಹೋರಾಟಕ್ಕೆ ಬೆಂಬಲಿಸುತ್ತಾರೆ ಇದೇ ಸಂದರ್ಭದಲ್ಲಿ ವಿವಾಹ ಆಗುವ ಬೂದಿ ಬಸಪ್ಪ ನಾಯಕರು ಏಪ್ರಿಲ್ 1830 ರಲ್ಲಿ ತಾವು ಬಿದನೂರು ನಗರದ ರಾಜ ಎಂದು ಘೋಷಿಸಿಕೊಳ್ಳುತ್ತಾರೆ.
ಬೂದಿ ಬಸಪ್ಪ ನಾಯಕ ಬಿದನೂರು ನಗರ ರಾಜರೆಂದು ಘೋಷಿಸಲು ಕಾರಣ ಬೂದಿ ಬಸಪ್ಪ ನಾಯಕ ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿಯ ಕೊನೆಯ ಅರಸರ ಚೆನ್ನಬಸವ ನಾಯಕರ ಪ್ರೇಮ ವಿವಾಹದಿಂದ ಜನಿಸಿದ ರಾಜವಂಶಸ್ಥ ಆದರೆ ಬ್ರಿಟಿಷರ ವಿರುದ್ಧ ಮೈಸೂರು ಮಹಾರಾಜರ ವಿರುದ್ಧ ರೈತರನ್ನು ಹೋರಾಟಕ್ಕೆ ತಯಾರು ಮಾಡಿದ್ದ ಬೂದಿ ಬಸಪ್ಪರನ್ನು ದರೋಡೆಕೋರನೆಂದೆ ದಾಖಲಿಸುತ್ತಾರೆ.
ಇಲ್ಲಿ ಜನಪದದ ಸಾಕ್ಷಿಯೊಂದಿದೆ ಕೆಳದಿ ಅರಸರು ಶಿಕಾರಿಗಾಗಿ ಹೊನ್ನಾಳಿ ಸಮೀಪದ ಬಿದಿರಳ್ಳಿ ಕಣಿವೆಗೆ ಹೋಗುವಾಗ ಕುಂಸಿಯಲ್ಲಿ ತಂಗುತ್ತಿರುತ್ತಾರೆ ನಂತರ ಬಿದಿರಳ್ಳಿ ಕಣಿವೆಗೆ ಸಮೀಪದ ಚಿನ್ನಿಕಟ್ಟೆಯಲ್ಲಿ ವಾಡೆ ನಿರ್ಮಿಸಿ ತಂಗುತ್ತಾರೆ ಆಗ ಅಲ್ಲಿನ ಸುಂದರ ಜಂಗಮ ಕನ್ಯೆಯಲ್ಲಿ ಪ್ರೇಮ ಉಂಟಾಗಿ ಚೆನ್ನಬಸವ ನಾಯಕರು ವಿವಾಹ ಆಗುತ್ತಾರೆ ಆಗ ಚೆನ್ನಬಸವ ನಾಯಕರು ಜಂಗಮ ಕನ್ಯೆಗೆ ನೀಡಿದ ರಾಜ ಮುದ್ರೆ ಉಂಗುರವೇ ಅವರ ಪುತ್ರ ಬೂದಿಬಸಪ್ಪ ನಾಯಕರಿಗೆ ತಾಯಿಯಿಂದ ಬಂದಿರುತ್ತದೆ.
23- ಆಗಸ್ಟ್ - 1830 ರಲ್ಲಿ ಅಂದರೆ 192 ವಷ೯ದ ಹಿಂದೆ ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶ ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರು ನೂರಾರು ಎತ್ತಿನಗಾಡಿಗಳು ಭಾಗವಹಿಸುತ್ತಾರೆ, ದೂರ ದೂರದ ಊರಿನ ಪ್ರತಿನಿಧಿಗಳೂ ಸೇರುತ್ತಾರೆ.
#ಹೊಸಂತೆಯ ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831) ಮುಂದಿನ 50 ವರ್ಷ ಮೈಸೂರು ಆಡಳಿತ ಬ್ರಿಟೀಶರಾಗುತ್ತದೆ.
ಹೊಸಂತೆ ರೈತ ಸಮಾವೇಶದ ನಂತರ ಬಿದನೂರು ನಗರ ಪ್ರಾಂತ್ಯದ ರೈತರು ಎಲ್ಲಾ ಕಡೆಗೂ ಈ ಕರನಿರಾಕರಣೆಗಾಗಿ ಬೇವಿನ ಎಲೆಗಳನ್ನೇ ಆಹ್ವಾನ ಪತ್ರಿಕೆಯಂತೆ ಬಳಸುತ್ತಾ ಜನರನ್ನು ಕರನಿರಾಕರಣೆ ಆಹ್ವಾನಿಸುತ್ತಾರೆ ಇದರಿಂದ ಮೈಸೂರು ಅರಸರು ಆಡಳಿತದಲ್ಲಿ ವಿಫಲರಾಗುತ್ತಾರೆ ಈಸ್ಟ್ ಇಂಡಿಯಾ ಕಂಪನಿ ರಾಜರಿಗೆ ಈ ಸ್ಥಳಗಳಿಗೆ ಸ್ವತಃ ಹೋಗಿ ಬಗೆಹರಿಸಲು ಸೂಚಿಸುತ್ತಾರೆ ಇದನ್ನೆಲ್ಲ ಮದ್ರಾಸ್ ಪ್ರಾವಿನ್ಸಿಗೆ ವರದಿ ಮಾಡುತ್ತಾ ತಟಸ್ಥರಾಗಿರುತ್ತಾರೆ.
ಮೈಸೂರು ಒಡೆಯರ್ ಈ ಭಾಗದಲ್ಲಿ ಸಾಗುವಾಗ 7 ಡಿಸೆಂಬರ್ 1830 ರಲ್ಲಿ ಹೊನ್ನಾಳಿಯಲ್ಲಿ ಬೂದಿ ಬಸಪ್ಪ ನಾಯಕರ ಪ್ರಚೋದಿತ ರೈತ ಸಮಾವೇಶ ಕುಟ್ಟಂನಲ್ಲಿ 20 ಸಾವಿರಕ್ಕೂ ಮಿಕ್ಕಿದ ರೈತರು ಸೇರಿರುತ್ತಾರೆ ಇದನ್ನು ಸಹಿಸದ ಮೈಸೂರು ಮಹಾರಾಜರು ಬಿದನೂರು ನಗರದ ಅವರ ಆಡಳಿತಾಧಿಕಾರಿ ಕಿಶನ್ ರಾವ್ ನೇತೃತ್ವದಲ್ಲಿ ರೈತ ಸಮಾವೇಶದ ಮೇಲೆ ದೊಡ್ಡ ನರಮೇದಕ್ಕೆ ಅವಕಾಶ ನೀಡಿದ್ದು ಇತಿಹಾಸದಲ್ಲಿ ಘನ ಘೋರ ಕಪ್ಪು ಚುಕ್ಕೆ ಆದರೆ ಈ ಘಟನೆ ನಂತರ 50 ವರ್ಷದ ನಂತರ ಪುನಃ ಮೈಸೂರು ಮಹಾರಾಜರೇ ಆಡಳಿತಕ್ಕೆ ಬಂದಿದ್ದರಿಂದ ಈ ಘಟನೆಗಳು ಇತಿಹಾಸದ ಪುಟದಲ್ಲಿ ಕತ್ತಲಲ್ಲಿ ಇಡಲಾಗಿದೆ.
ಈ ಚಳವಳಿ ನಿರತ ರೈತರ ಮೇಲೆ ನಿರಂತರ ಬಂದೂಕಿನ ಗೋಲಿ ಹಾರಿಸಿ ಚಳವಳಿಗಾರರನ್ನು ಕೊಂದ ನಂತರವೂ ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಾಲಯದಲ್ಲಿ ಅಡುಗಿದ್ದ ನೂರಾರು ರೈತ ಹೋರಾಟಗಾರನ್ನು ಹೊನ್ನಾಳಿ ಶಿಕಾರಿಪುರ ಮಾರ್ಗದ ಬೇವಿನ ಮರಕ್ಕೆ ನೇಣಿಗೆ ಹಾಕುತ್ತಾರೆ, ಹೋರಾಟಕ್ಕೆ ರೈತರನ್ನು ಸೇರಿಸಲು ಬೇವಿನ ಎಲೆಯನ್ನೆ ಸಂಕೇತಿಕ ಆಹ್ವಾನ ಪತ್ರಿಕೆ ಮಾಡಿದ್ದಕ್ಕೆ ಪ್ರತಿಯಾಗಿ ಬೇವಿನ ಮರಕ್ಕೆ ರೈತ ಹೋರಾಟಗಾರರನ್ನ ಬೇವಿನ ಮರಕ್ಕೆ ನೇಣು ಹಾಕುತ್ತಾರೆ.
12 ಮಾರ್ಚ್ 1831 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ಹೊನ್ನಾಳಿ ವಶಪಡಿಸುಕೊಳ್ಳುತ್ತದೆ.
12 ಜೂನ್ 1831 ರಂದು ರೈತ ಹೋರಾಟಗಾರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ, ಬೂದಿ ಬಸಪ್ಪ ನಾಯಕರು ಹೈದ್ರಾಬಾದ್ ಸಂಸ್ಥಾನದ ಕಡೆ ಪರಾರಿ ಆದರು ಎಂದು ಮತ್ತು ರಂಗಪ್ಪ ನಾಯಕರು ಮರಣ ಹೊಂದಿದರೆಂಬ ಸುದ್ದಿ ಹರಡುತ್ತದೆ ಈ ರೀತಿ ಕೆಳದಿ ರಾಜ್ಯ ಪುನಃ ವಶಪಡಿಸಿಕೊಳ್ಳುವ ಬೂದಿ ಬಸಪ್ಪ ನಾಯಕರ ಪ್ರಯತ್ನ ವಿಫಲವಾಗುತ್ತದೆ ಒಂದು ಅಂದಾಜಿನಂತೆ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದಲ್ಲಿ ಜೀವಕಳೆದುಕೊಂಡವರ ಸಂಖ್ಯೆ ಕೆಲವು ಸಾವಿರವಾದರೂ ದಾಖಲೆಗಳಲ್ಲಿ ಇದು 700 ಅಂತ ದಾಖಲಾಗಿದೆ.
ಖ್ಯಾತ ಬರಹಗಾರ ಪುರಶೋತ್ತಮ ಬಿಳಿಮಲೆ ಅವರ #ಅಮರ_ಸುಳ್ಯದ_ರೈತ_ಹೊರಾಟ ಪುಸ್ತಕದಲ್ಲಿ ಬರುವ ಹೋರಾಟಗಾರ ಸ್ಟಾಮಿ ಅಪರಂಪರ/ ಕಲ್ಯಾಣಸ್ವಾಮಿ ವಿಫಲ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದ ನಾಯಕ ಹಾಗೂ 1830ರ ಏಪ್ರಿಲ್ ನಲ್ಲಿ ರಾಜನೆಂದು ಘೋಷಿಸಿಕೊಂಡ ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿ ಕೊನೆಯ ರಾಜ ಚೆನ್ನಬಸವ ನಾಯಕರ ಪುತ್ರ ಬೂದಿ ಬಸಪ್ಪ ನಾಯಕರೇ ಆಗಿರಬೇಕೆಂಬ ವಾದವೂ ಇದೆ ಇದು ಸಂಶೋದನೆಯಾಗಬೇಕು.
ಆಗ ಆನಂದಪುರಂನ ಲಿಂಗಾಯಿತ ದೊಡ್ಡ ರೈತರೂ ಮತ್ತು ರೈತ ಮುಖಂಡರಾಗಿದ್ದ ಬೆಳಂದೂರು ಗೌಡರು (ಅವರ ಹೆಸರು ಸಿಕ್ಕಿಲ್ಲ) ಇವರು ಬೂದಿ ಬಸಪ್ಪ ನಾಯಕರ ಐತಿಹಾಸಿಕ ಹೊಸಂತೆಯಲ್ಲಿ ನಡೆದ ರೈತ ಹೋರಾಟದ ಯಶಸ್ಸಿಗೆ ಸಹಕರಿಸಿ ಭಾಗವಹಿಸುತ್ತಾರೆ, ಆ ಸಮಯದಲ್ಲಿಯೇ ಹೊಸ ಮನೆ ನಿರ್ಮಿಸಿರುತ್ತಾರೆ ಈ ಮನೆಗೆ ಬೂದಿ ಬಸಪ್ಪ ನಾಯಕರು ಬಂದು ಹೋಗಿದ ನೆನಪುಗಳು ಈ ಮನೆತನದಲ್ಲಿದೆ.
ಈ ಮನೆತನದ ಬೆಳಂದೂರು ಹೊಳೆಯಪ್ಪ ಗೌಡರು, ಬೆಳಂದೂರು ಮರಿಯಪ್ಪ ಗೌಡರು ಮತ್ತು ಬೆಳಂದೂರು ಪುಟ್ಟಪ್ಪ ಗೌಡರ ನಂತರದ ತಲೆಮಾರಿನ ಮಾಹಿತಿ ಮಾತ್ರ ಲಭ್ಯ ಇದೆ.
ತಮ್ಮಣಪ್ಪ ಗೌಡರಿಗೆ ಇಬ್ಬರು ಪತ್ನಿಯರು ಮೊದಲ ಪತ್ನಿಯಿಂದ ಶಿವಪ್ಪ ಗೌಡ, ಚೆನ್ನಬಸಪ್ಪ ಗೌಡ, ಷಣ್ಮುಖಪ್ಪ ಗೌಡ ಮತ್ತು ಶಾರದಾ ಎಂಬ ಹೆಣ್ಣು ಮಗಳು.
ಎರಡನೆ ಪತ್ನಿ ಗಂಗಮ್ಮರಿಂದ ಜ್ಞಾನೇಂದ್ರ, ಈಶ್ವರ, ನಾಗರಾಜ, ಶಂಕರಮ್ಮ ಮತ್ತು ಮೋಹಿನಿ ಎಂಬ ಹೆಣ್ಣು ಮಕ್ಕಳು ಇದ್ದಾರೆ.
ತಮ್ಮಣಪ್ಪ ಗೌಡರು ಆನಂದಪುರಂ ವಿಲೇಜ್ ಪಂಚಾಯತ್ ಸದಸ್ಯರಾಗಿದ್ದರು ಇವರ ಪುತ್ರ ಷಣ್ಮುಖ ಆನಂದಪುರಂ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು, ಇನ್ನೊಬ್ಬ ಪುತ್ರ ಜ್ಞಾನೇಂದ್ರ ಯಡೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು.
ಬಿ. ಗುರು ಬಸಪ್ಪ ಗೌಡರು ಸಾಗರದ ಉಪ ವಿಭಾಗಾಧಿಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು ಇವರ ಪತ್ನಿ ಚಂದ್ರಮ್ಮ ಈ ದಂಪತಿಗಳಿಗೆ
ಶಶಿದರ್ ಮತ್ತು ಶೈಲಜ ಎಂಬ ಹೆಣ್ಣು ಮಗಳು.
ಬೆಳಂದೂರು ಹೊಳೆಯಪ್ಪ ಗೌಡರ ಸಹೋದರ ಮರಿಯಪ್ಪ ಗೌಡರಿಗೆ ಮುರುಗೇಂದ್ರ ಮತ್ತು ಶಂಕರ ಎಂಬ ಪುತ್ರರಿದ್ದಾರೆ.
ಬೂದಿ ಬಸಪ್ಪ ನಾಯಕರಿಗೂ ಆನಂದಪುರಂಗೂ ಇರುವ ಈ ಸಂಬಂದ ಮತ್ತು ಐತಿಹಾಸಿಕ ಬೃಹತ್ ಸಮಾವೇಶ ನಡೆದ ಹೊಸಂತೆ ರೈತ ಸಮಾವೇಶ ಇನ್ನೊಮ್ಮೆ ನೆನಪು ಮಾಡಿಕೊಳ್ಳುತ್ತಾ ಮರೆತು ಹೋಗಿದ್ದ ಬೂದಿ ಬಸಪ್ಪ ನಾಯಕರ ಬಗ್ಗೆ ಮುಂದಿನ ದಿನದಲ್ಲಿ ಹೆಚ್ಚಿನ ಸಂಶೋದನೆಗಳಾಗಲಿ ಎಂದು ಹಾರೈಸುತ್ತೇನೆ.
Comments
Post a Comment