#ಆನಂದಪುರಂ_ಇತಿಹಾಸ_ಭಾಗಸಂಖ್ಯೆ_125.
#ನಮ್ಮ_ಪ್ರೀತಿಯ_ಹಮೀದಣ್ಣ
#ನನ್ನ_ತಂದೆಯ_ಆಪ್ತ_ಗೆಳೆಯರು
#ಸುಬ್ಬಣ್ಣನಾಯಕರ_ರೈತಬಂದು_ಅಕ್ಕಿಗಿರಣಿಯಲ್ಲಿ_ಮುಖ್ಯ_ಮೆಕ್ಯಾನಿಕ್_ಆಗಿದ್ದರು.
#ನೈಲಾನ್_ಅವಲಕ್ಕಿ_ಯ೦ತ್ರ_ಅವಿಷ್ಕಾರ_ಮಾಡಿದವರು.
#ಆ_ಕಾಲದಲ್ಲಿ_ಆನಂದಪುರಂನಲ್ಲಿ_ರೇಡಿಯೋ_ವಾಚ್_ಗಡಿಯಾರ_ಅಲಾರಾಂ_ಟಾರ್ಚ್_ದುರಸ್ತಿ_ಹಮೀದಣ್ಣರದ್ದೆ .
#ಪ್ಯಾರಾಲಿಸಿಸ್_ಕಾಯಿಲೆಗೆ_ಹಮೀದಣ್ಣ_ನೀಡುತ್ತಿದ್ದ_ಜಾಷದಿ_ರಾಮಭಾಣ.
ಹಮೀದಣ್ಣ ಆ ಕಾಲದಲ್ಲಿ ಇಡೀ ಆನಂದಪುರಂನಲ್ಲಿ ಒಂದು ರೀತಿಯ ಅರ್ಕಿಮಿಡೀಸ್ ಇದ್ದಂತೆ ಅವರ ಹತ್ತಿರ ದುರಸ್ತಿ ಆಗದ ವಸ್ತುವೇ ಇಲ್ಲ ಎಂಬ ಪ್ರತೀತಿ ಆ ಕಾಲದಲ್ಲಿ ಜನರ ಬಾಯಲ್ಲಿತ್ತು.
ಯಾವುದೇ ಆ ಕಾಲದ ರೇಡಿಯೋ, ಗೋಡೆ ಗಡಿಯಾರ, ಅಲಾರಾಂ, ವಾಚುಗಳು, ಟಾರ್ಚ್ ಇತ್ಯಾದಿ ಹಮೀದಣ್ಣರ ಕೈಯಲ್ಲಿ ಜೀವ ಬರುತ್ತಿತ್ತು.
ಆ ಕಾಲದಲ್ಲಿ ಪಾರ್ಶ್ವವಾಯು ಕಾಯಿಲೆ ಆದವರಿಗೆ ಹಮೀದಣ್ಣ ನೀಡುತ್ತಿದ್ದ ಆಯುರ್ವೇದ ಔಷದಿ ರಾಮಬಾಣವಾಗಿತ್ತು, ಪಾರ್ಶ್ವವಾಯು ಆದವರಿಗೆ ಮೂಗಿನಲ್ಲಿ ಬಿಡುವ ಔಷದ, ದೇಹಕ್ಕೆ ಮಾಲೀಷ್ ಮಾಡುವ ಎಣ್ಣೆ ನೀಡಿ ಊಟಕ್ಕೆ ಹುರುಳಿ ಕಟ್ಟಿನ ಸಾರು ಹೆಚ್ಚು ನೀಡಲು ಹೇಳುತ್ತಿದ್ದರು ಇದರಿಂದ ಹಾಸಿಗೆ ಹಿಡಿದ ರೋಗಿ ಹದಿನೈದು ದಿನದಲ್ಲಿ ರಿಕವರಿ ಆಗುತ್ತಿದ್ದರು.
ನಮ್ಮ ತಂದೆಗೆ ಹಮೀದಣ್ಣ ಅತ್ಯಾಪ್ತರು ವಾರಕ್ಕೆರಡು ದಿನವಾದರೂ ನಮ್ಮ ಮನೆಗೆ ಸೈಕಲ್ ಹತ್ತಿ ಬರುತ್ತಿದ್ದರು ಅವರಿಂದಾಗಿಯೇ ನಮ್ಮ ಕುಟುಂಬ ರೈಸ್ ಮಿಲ್ ಉದ್ಯಮ ಪ್ರಾರಂಬಿಸಲು ಕಾರಣ.
ಹಮೀದಣ್ಣರನ್ನು ಸರಿಯಾಗಿ ಬಳಸಿಕೊಂಡವರು ರೈತ ಬಂಧು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರು ಮಾತ್ರ, ಆ ಕಾಲದಲ್ಲಿ ತಯಾರಾಗುತ್ತಿದ್ದ ಅವಲಕ್ಕಿ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ಅಂದರೆ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ತಯಾರಿ ಆಗಿತ್ತು.
ಅವಲಕ್ಕಿ ಅಂದರೆ ಆ ಕಾಲದಲ್ಲಿ ದಪ್ಪ ಕುಟ್ಟವಲಕ್ಕಿ ಕಾಲ ನಂತರ ಯಂತ್ರಗಳು ತಯಾರಿಸುವ ದಪ್ಪ ಅವಲಕ್ಕಿ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಆಗಿತ್ತು.
ಆ ಕಾಲದಲ್ಲಿ ಅವಲಕ್ಕಿ ಉದ್ಯಮದಲ್ಲಿ ಹೊಸ ಅವಿಷ್ಕಾರ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ಇದು ಭಾರತೀಯ ಆಹಾರೋದ್ಯಮದಲ್ಲಿ ಬಿರುಗಾಳಿ ಉಂಟು ಮಾಡಿತು ಆಗ ಆನಂದಪುರಂನಲ್ಲಿ ರೈತ ಬಂಧು ಗ್ರಾಮೋದ್ಯೋಗದಲ್ಲಿ ಸುಬ್ಬಣ್ಣ ನಾಯಕರು ನೈಲಾನ್ ಅವಲಕ್ಕಿ ತಯಾರಿಸಿ ಕರಾವಳಿ ಮತ್ತು ಕೇರಳಕ್ಕೆ ದೊಡ್ಡ ಪ್ರಮಾಣದಲ್ಲಿ ನೈಲಾನ್ ಅವಲಕ್ಕಿ ಮಾರಾಟ ಮಾಡಿ ಪ್ರಖ್ಯಾತಿ ಪಡೆದರು ಅವರ ಬ್ರಾಂಡ್ ತುಂಬಾ ಪ್ರಸಿದ್ದಿ ಆಯಿತು.
ಆಗ ನೈಲಾನ್ ಅವಲಕ್ಕಿ ತಯಾರಿಸುವ 50 ಕ್ಕೂ ಹೆಚು ಅವಲಕ್ಕಿ ಮೆಷಿನ್ ತಯಾರಿಸಿದ್ದು ಹಮೀದ್ ಸಾಹೇಬರು ಈ ಯಂತ್ರದ ಪೇಟೆಂಟ್ ಪಡೆದಿದ್ದರೆ ಮುಂದೆ ದೊಡ್ಡ ಲಾಭ ಪಡೆಯುವ ಸಾಧ್ಯತೆ ಇತ್ತು ಆದರೆ ಆ ಕಾಲದಲ್ಲಿ ಅದನ್ನು ಪ್ರಯತ್ನಿಸಲಿಲ್ಲ.
ಸುಬ್ಬಣ್ಣ ನಾಯಕರು ಹಮೀದಣ್ಣ ಇಂತಹ ಅನೇಕ ಹೊಸ ಪ್ರಯೋಗಗಳಿಗೆ ರಾಜ್ಯ ಪರರಾಜ್ಯಗಳ ಅನೇಕ ಪ್ರವಾಸ ಮಾಡಿದ್ದರು, ಆ ಕಾಲದಲ್ಲಿ ಹಮೀದ್ ಸಾಹೇಬರಿಗೆ ಸುಬ್ಬಣ್ಣ ನಾಯಕರು ನೀಡುತ್ತಿದ್ದ ಸಂಬಳ ದೊಡ್ಡ ಮೊತ್ತದ್ದೆಂದು ಜನ ಮಾತಾಡುತ್ತಿದ್ದರು, ಸುಬ್ಬಣ್ಣನಾಯಕರು ಹಮೀದಣರಿಗೆ ಹೊಸ ಮನೆಯೂ ಕಟ್ಟಿಸಿಕೊಟ್ಟರು ಕೊನೆಯ ದಿನಗಳಲ್ಲಿ ಇವರಿಬ್ಬರ ಸಂಬಂದ ಯಾಕೋ ಸರಿ ಬರದೆ ದೂರವಾದರು.
ನಮ್ಮ ತಂದೆಗೆ ಮೂರು ಸಾರಿ ಪಾರ್ಶ್ವವಾಯು ಪೀಡಿತರಾಗಿದ್ದವರು ಗುಣವಾಗಿದ್ದು ಹಮೀದಣ್ಣನವರ ಔಷದಿಯಿಂದಲೇ.
ಹಮೀದಣ್ಣರಿಗೆ ನಾಲ್ಕು ಗಂಡು ಮತ್ತು ಆರು ಹೆಣ್ಣು ಮಕ್ಕಳು, ಹಿರಿಯ ಮಗ ಅಬ್ದುಲ್ ಖಾದರ್, ಎರಡನೆ ಮಗ ಹಾಶಂ, ಮೂರನೆ ಅಮ್ಜಾದ್ ಮತ್ತು ನಾಲ್ಕನೆ ಮಗ ಜಾಹೀರ್ ಅಬ್ಬಾಸ್ ಇವರೆಲ್ಲ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
Comments
Post a Comment