Blog number 1977. ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದಿಂದ ಬಿಡುಗಡೆಗೆ ನಾಳೆ ಐದು ವರ್ಷ ಆದರೆ ಸಾರ್ವಜನಿಕರ ನೆನಪು ಕ್ಷಣಿಕ
#ಭಾರತೀಯ_ರಾಜಕಾರಣದಲ್ಲಿ_ಆಸಕ್ತಿ_ಇರುವರು_ತಪ್ಪದೆ_ಓದಿ.
#ಕೇವಲ_90_ಸೆಕೆಂಡ್_ಕಾಲದ_ರೋಚಕ_ವಾಯುದಾಳಿ
#ಸಾವ೯ಜನಿಕರ_ನೆನಪು_ಕ್ಷಣಿಕ
#ಭಾರತದ_ಹೀರೋ_ಅಭಿನಂದನ್_ವರ್ತಮಾನ್
#ಪಾಕಿಸ್ತಾನದಿಂದ_ಬಿಡುಗಡೆ_ಆಗಿ_ಬಂದು_ನಾಳೆಗೆ_ಐದು_ವಷ೯
#ಶಾಲಿನಿ_ಹೂಲಿ_ಅವರ_ಆಕೃತಿ_ಕನ್ನಡದಲ್ಲಿ
#ವಿಂಗ್_ಕಮ್ಯಾಂಡರ್_ಸುದರ್ಶನ್_ಬರೆದ_ಲೇಖನ_ಇಲ್ಲಿ_ಇನ್ನೊಮ್ಮೆ.
ಐದು ವಷ೯ದ ಹಿಂದೆ 28- ಪೆಬ್ರವರಿ -2019 ಇದೇ ದಿನ ರಾತ್ರಿ ಇಡೀ ಬಾರತ ದೇಶವಾಸಿಗಳದ್ದು ಒಂದೇ ಪ್ರಾಥ೯ನೆ ನಮ್ಮ ಹೆಮ್ಮೆಯ ದೇಶ ರಕ್ಷಕ ಅಭಿನಂದನ್ ಯಾವುದೇ ತೊಂದರೆ ಆಗದೇ ಪಾಕಿಸ್ತಾನದಿಂದ ಬಿಡುಗಡೆ ಆಗಿ ಬರಲಿ ಎಂಬುದು ಆಗಿತ್ತು.
ಮಾಚ೯ 1 ರ ಸಂಜೆವರೆಗೆ ಪಂಜಾಬ್ ನ ವಾಘಾ ಬಾಡ೯ರ್ ನಲ್ಲಿ ಅಭಿನಂದನ್ ಬಿಡುಗಡೆ ಕ್ಲೈಮಾಕ್ಸ್ ಇಡೀ ದೇಶವನ್ನ ಕೊನೆ ಬಾಲ್ 4ರನ್ ಗೆ ದೇಹ ಮನಸ್ಸು ಕೈಯಲ್ಲಿ ಹಿಡಿದು ಕುಳಿತಂತೆ ಕಾದಿತ್ತು.
ಅಂತೂ ತಡವಾಗಿ ಆಗಿಯೂ ಬಿಡುಗಡೆ ಆಗಿದ್ದು ಇಡೀ ದೇಶ ನಿಟ್ಟುಸಿರು ಬಿಟ್ಟ0ತೆ ಆಯಿತು.
ನಂತರದ್ದು ಇತಿಹಾಸ... ದೇಶದ ಸಾವ೯ತ್ರಿಕ ಚುನಾವಣೆಯಲ್ಲಿ ಜನಸಾಮಾನ್ಯರು ಅಭಿನಂದನ್ ಬಿಡುಗಡೆಗಾಗಿ ಬಿಜೆಪಿಗೆ ಬೆಂಬಲಿಸುವುದಾಗಿ ಚುನಾವಣಾ ಪೂವ೯ ಸಮೀಕ್ಷೆಗಳಲ್ಲಿ ನೇರವಾಗಿ ಹೇಳಿದರು.
ನಾಳೆಗೆ ಅಭಿನಂದನ್ ಬಿಡುಗಡೆ ಆಗಿ ಬಂದು ಐದನೇ ವಾಷಿ೯ಕೋತ್ಸವ ಆದರೆ ಆ ಸಂಭ್ರಮ ಈಗ ಕಂಡು ಬರುತ್ತಿಲ್ಲ ಬಹುಷಃ ಸಾವ೯ಜನಿಕರ ನೆನಪು ಕ್ಷಣಿಕ ಎಂಬುದು ಸತ್ಯ
.
#ವಿಂಗ್_ಕಮ್ಯಾಂಡರ್_ಸುದರ್ಶನರ_ಲೇಖನ_ಓದಿ.
ಅಭಿನಂದರ ಆಗಮನ – ವಿಂಗ್ ಕಮಾಂಡರ್ ಸುದರ್ಶನ
February 28, 2024 aakrutikannada
https://www.facebook.com/share/p/nzWkSfxkemMbaA9L/?mibextid=oFDknk
ಅಭಿನಂದನರು ಪ್ಯಾರಾಚೂಟಿನಿಂದ ಕೆಳಗೆ ಇಳಿಯುತ್ತಿದ್ದನ್ನು ನೋಡಿ, ಅವರನ್ನು ಸುತ್ತುವರೆದ ಸ್ಥಳೀಯರು, ಅವರು ಭಾರತೀಯ ಪೈಲಟ್ ಎಂದು ಗೊತ್ತಾದ ಕೂಡಲೇ ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು.ತಮ್ಮಲ್ಲಿದ್ದ ಪಿಸ್ತೋಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಲೇ ತಮ್ಮಲ್ಲಿದ್ದ ಕೆಲವು ರಹಸ್ಯ ದಾಖಲೆಗಳಿದ್ದ ಕಾಗದವನ್ನು ಪರಪರನೆ ಹರಿದು, ಉಂಡೆಮಾಡಿ ನುಂಗಿಬಿಟ್ಟರು ಅಭಿನಂದನ್.ತಪ್ಪದೆ ಮುಂದೆ ಓದಿ ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನಿಯಲ್ಲಿ ಅಭಿನಂದನರ ಸಾಹಸಗಾಥೆ…
ದಡಬಡಿಸಿಕೊಂಡು ಎದ್ದಿತು ಪಾಕಿಸ್ತಾನ. 1971 ರ ಭಾರತದೊಂದಿಗಿನ ಯುದ್ಧದ ನಂತರ ಮೊಟ್ಟಮೊದಲ ಸಲ ಭಾರತದ ವಾಯುಪಡೆಯ ವಿಮಾನಗಳು.. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹದಿನಾರು ವಿಮಾನಗಳು ಪಾಕಿಸ್ತಾನದ ವಾಯುಮಂಡಲವನ್ನು ಪ್ರವೇಶಿಸಿ ಬಾಲಾಕೋಟಿನ ಭಯೋತ್ಪಾದಕರ ತರಬೇತಿ ಕೇಂದ್ರದ ಮೇಲೆ ಮಿಂಚಿನ ವೇಗದ ದಾಳಿ ನಡೆಸಿ, ಅಲ್ಲಿದ್ದ ನೂರಾರು ಭಯೋತ್ಪಾದಕರನ್ನು, ಅಲ್ಲಿನ ಸೌಕರ್ಯಗಳನ್ನು ಸರ್ವನಾಶ ಮಾಡಿ ಹೋಗಿದ್ದವು. ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಜೈಷ್ ಆತ್ಮಾಹುತಿ ದಾಳಿ ನಡೆಸಿದ ನಂತರ ಭಾರತ ಇಂತಹದ್ದೊಂದು ದಾಳಿ ನಡೆಸಬಹುದು ಎನ್ನುವ ಬಲವಾದ ಅನುಮಾನವಿತ್ತು. ಈ ದಾಳಿ ಭೂಮಿ, ಜಲ, ಆಕಾಶ ಯಾವ ಮಾರ್ಗದ ಮುಖಾಂತರವೂ ಆಗಬಹುದು ಎಂದು ಕಟ್ಟೆಚ್ಚರವಹಿಸಿತ್ತು. ವಿಪರ್ಯಾಸವೆಂದರೆ ಮಧ್ಯರಾತ್ರಿ 12:06 ಕ್ಕೆ ಪಾಕಿಸ್ತಾನದ ರಕ್ಷಣಾ ಇಲಾಖೆ ‘ ಪಾಕಿಸ್ತಾನ ನಿಶ್ಚಿಂತೆಯಿಂದ ನಿದ್ದೆ ಮಾಡು, ಪಾಕಿಸ್ತಾನದ ವಾಯುಸೇನೆ ಎಚ್ಚೆತ್ತಿದೆ’ ಎನ್ನುವ ಟ್ವೀಟ್ ಬೇರೆ ಮಾಡಿದ್ದರು, ಅದಾದ ಮೂರುವರೆ ಗಂಟೆಗಳಲ್ಲೇ ಭಾರತೀಯ ವಾಯುಸೇನೆ ಬಾಲಾಕೋಟಿನ ಮೇಲೆ ಬಾಂಬ್ ದಾಳಿ ನಡೆಸಿಬಿಟ್ಟಿತ್ತು. ಪಾಕಿಸ್ತಾನ ಸೇನೆಗೆ ಸ್ವಾಭಿಮಾನಕ್ಕೆ ಇನ್ನಿಲ್ಲದಂತೆ ಅವಮಾನವಾಗಿ ಹೋಗಿಬಿಟ್ಟಿತ್ತು. ಬಾಲಾಕೋಟನ್ನು ಎಲ್ಲ ಕಡೆಯಿಂದಲೂ ಸೀಲ್ ಮಾಡುವುದು ಪಾಕಿಸ್ತಾನದ ಮೊದಲ ಕ್ರಮ, ಯಾರೂ ತಮಗಾದ ಅವಮಾನವನ್ನು ನೋಡಬಾರದು ಎಂದು.
ಮಧ್ಯಾಹ್ನದ ವೇಳೆಗೆ ಆಘಾತದಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡ ಪಾಕಿಸ್ತಾನದ ನಾಯಕತ್ವ, ಸಂಪುಟ ಸಭೆ ಕರೆದಿತ್ತು. ಪ್ರಧಾನಿ ಇಮ್ರಾನ್ ಖಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ಮೇಲೆ ಪ್ರತಿದಾಳಿ ನಡಸಲೇ ಬೇಕು ಎನ್ನುವ ಒಮ್ಮತ ನಿರ್ಧಾರವೇನೋ ಇತ್ತು ಆದರೆ ನಿಖರವಾದ ರಣತಂತ್ರವೇನು ಎಂಬುದು ಏರ್ ಚೀಫ್ ಮಾರ್ಷಲ್ ಮುಜಾಹಿದ್ ಅಜರ್ ಖಾನ್ ಅವರು ಇನ್ನು ಯಾವುದೇ ಯೋಜನೆ ರೂಪಿಸಿರಲಿಲ್ಲ. ಒಟ್ಟಾರೆ ತಮ್ಮ ಬಲ ಪ್ರದರ್ಶನ ಮಾಡಬೇಕು ಅಷ್ಟೇ.
27 ಫೆಬ್ರವರಿ...ಸಾಮಾನ್ಯವಾಗಿ, ಒಂದು ಯೋಜಿತ ವಾಯುದಾಳಿ ಸೂರ್ಯೋದಯದ ಮೊದಲ ಬೆಳಕಿನ ಸುತ್ತಮುತ್ತ ಸಂಭವಿಸುತ್ತದೆ ಅಥವಾ ಶತ್ರುವಿನ ರಣತಂತ್ರಕ್ಕೆ ಅನುಗುಣವಾಗಿ ಅವಕಾಶವನ್ನು ಬಳಸಿಕೊಳ್ಳಲಾಗುತ್ತದೆ. ಬೆಳಗಾದರೂ ಪಾಕಿಸ್ತಾನದ ಕಡೆಯಿಂದ ಯಾವ ಚಟುವಟಿಕೆಗಳು ಕಾಣಲಿಲ್ಲ. ಭಾರತದ ಕಣ್ಗಾವಲಿನ ವಿಮಾನ ‘ನೇತ್ರಾ’ ಬೆಳಗ್ಗೆ 9.42ಕ್ಕೆ ಪಾಕಿಸ್ತಾನದ ವಾಯುಮಂಡಲದಲ್ಲಿ ಕೆಲವು ವಿಮಾನಗಳ ಹಾರಾಟದ ಬಗ್ಗೆ ಮಾಹಿತಿ ನೀಡಿತು. ಇದನ್ನು ನಿರೀಕ್ಷಿಸಿದ್ದ ಭಾರತ, ಕಾಶ್ಮೀರ, ರಾಜಸ್ತಾನ ಮತ್ತು ಗುಜರಾತಿನ ಗಡಿ ಭಾಗಗಳಲ್ಲಿ ವಿಮಾನಗಳ ವಾಯುಗಸ್ತು ಪ್ರಾರಂಭಿಸಿತು. ಗಡಿಯುದ್ಧಕ್ಕೂ ನಿಂತಿದ್ದ ನೆಲ ಕ್ಷಿಪಣಿಗಳು ಎದ್ದು ನಿಂತವು. ಕ್ರಮೇಣ ಪಾಕಿಸ್ತಾನದ ಯುದ್ಧ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಎಫ್ -16, ಮಿರಾಜ್ ಮತ್ತು ಜೆಎಫ್ -17 ವಿಮಾನಗಳು ಪಾಕಿಸ್ತಾನದ ವಿವಿಧ ವಾಯುನೆಲೆಗಳಿಂದ ಟೇಕ್ ಆಫ್ ಆಗತೊಡಗಿದವು. ಒಟ್ಟಾರೆ 24 ವಿಮಾನಗಳಲ್ಲಿ 10 ಎಫ್ -16 ಗಳು ಸೇರಿದಂತೆ ಪಾಕಿಸ್ತಾನದ ವಾಯುತಂಡ ಪೂರ್ವಾಭಿಮುಖವಾಗಿ ಭಾರತದ ಕಡೆ ಬರಲಾರಂಭಿಸಿದವು.
ಪಾಕಿಸ್ತಾನದ ವಿಮಾನಗಳ ಚಲನವಲನವನ್ನು ಗಮನಿಸಿದ ಭಾರತೀಯ ವಾಯುಸೇನೆಯ ಯುದ್ಧ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ ವಾಲ್ ಎನ್ನುವ ಮಹಿಳಾ ಅಧಿಕಾರಿ ಸ್ಕ್ರಾಂಬಲ್…ಸ್ಕ್ರಾಂಬಲ್ ಎಂದು ಆದೇಶ ಕೊಡುತ್ತಲೇ ಶ್ರೀನಗರದ ವಾಯುನೆಲೆಯಲ್ಲಿ ಇಂಥಹದೊಂದು ಆದೇಶಕ್ಕೆ ತಮ್ಮ ಮಿಗ್ -21 ಬೈಸನ್ ವಿಮಾನದಲ್ಲೇ ಕಾದು ಕುಳಿತಿದ್ದ ವಿಂಗ್ ಕಮಾಂಡರ್ ಅಭಿನಂದನರು ಕ್ಷಣಾರ್ಧದಲ್ಲಿ ಆಕಾಶಕ್ಕೆ ಹಾರಿಬಿಟ್ಟರು. ಹೀಗೇ ಅವಂತಿಪುರ, ಉಧಾಮ್ ಪುರದಿಂದಲೂ ಯುದ್ಧವಿಮಾನಗಳನ್ನು ಸ್ಕ್ರಾಂಬಲ್ ಮಾಡಲಾಯಿತು. ಅಷ್ಟರಲ್ಲೇ ಪಾಕಿಸ್ತಾನದ ವಿಮಾನಗಳು ಭಾರತೀಯ ವಾಯು ಮಂಡಲಕ್ಕೆ ಹತ್ತಿರವಾಗುತ್ತಿದ್ದಂತೆ ಭಾರತದ ಗಡಿಯನ್ನು ಪ್ರವೇಶಿಸಬೇಡಿ ಎಂದು ಎಚ್ಚರಿಕೆ ಕೊಡಲಾಯಿತು. ಪಾಕಿಸ್ತಾನಿ ವಿಮಾನಗಳು ಬಾಂಬುಗಳನ್ನೇನೋ ಹೇರಿಕೊಂಡು ಬಂದಿದ್ದರು ಆದರೆ ಎಲ್ಲಿ ಪ್ರಯೋಗಿಸಬೇಕೆಂಬ ಸ್ಪಷ್ಟತೆ ಇರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗುವ ಮುನ್ನ ಬಾಂಬುಗಳನ್ನು ನಿಷ್ಪ್ರಯೋಜಕವಾಗಿ ಉದರಿಸಿ ಹಿಂತಿರುಗಿ ಬಿಟ್ಟರು. ಅದರಲ್ಲಿ ಎರಡು F-16 ವಿಮಾನಗಳು ಮಾತ್ರ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿ ಬಿಟ್ಟವು. ಆಗ ಮಿಂಟಿ ಅಗರವಾಲರು ಹದಿನೈದು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಅಭಿನಂದರನ್ನು ಈ ಪಾಕಿಸ್ತಾನಿ ವಿಮಾನಗಳ ಹತ್ತಿರ ಬರುವಂತೆ ಮಾರ್ಗದರ್ಶನ ನೀಡಿದರು. ತಮಗಿಂತ ಕೆಳಗಿದ್ದ ಈ ವಿಮಾನಗಳನ್ನು ಹತ್ತಿರದಿಂದ ಹೊಡೆಯಲು ಅಭಿನಂದನರು ತಮ್ಮ ವಿಮಾನವನ್ನು ಕೆಳಗೆ ಅತಿವೇಗದಿಂದ ಥಟ್ಟನೇ ಕೆಳಗಿಳಿಸಿ ತಮ್ಮ ವಿಮಾನದ ರಡಾರಿನಲ್ಲಿ ಲಾಕ್ ಮಾಡಿಕೊಂಡರು. ಇದರ ಅಪಾಯದ ಸಂಕೇತ ಸಿಕ್ಕಿದ ಪಾಕಿಸ್ತಾನದ ಪೈಲಟ್ ಕೂಡಲೇ ಮೇಲೆ ಏರತೊಡಗಿ ಸುಮಾರು ಇಪ್ಪತ್ತು ಸಾವಿರ ಅಡಿ ಎತ್ತರ ತಲುಪಿದ. ಆ ಪಾಕಿಸ್ತಾನಿ ವಿಮಾನಕ್ಕೆ ಅಂಟಿಕೊಂಡಂತೆ ವಿಂಗ್ ಕಮಾಂಡರ್ ಅಭಿನಂದನ್ ಮತ್ತೊಮ್ಮೆ ಆ ವಿಮಾನವನ್ನು ರಡಾರಿನಲ್ಲಿ ಲಾಕ್ ಮಾಡಿ ತಮ್ಮ ವಿಮಾನದ R-73 ಕ್ಷಿಪಣಿಯನ್ನು ಹಾರಿಸಿಯೇ ಬಿಟ್ಟರು.
ಪ್ರಪಂಚದಲ್ಲಿ ಮೊದಲ ಸಲ ಸುಮಾರು ನಲವತ್ತು ವರ್ಷಗಳಷ್ಟು ಹಳೆಯ ಮಿಗ್ -21 ವಿಮಾನ ಒಂದು ಆಧುನಿಕ, ಅಮೆರಿಕ ನಿರ್ಮಿತ F-16 ವಿಮಾನವನ್ನು ಹೊಡೆದುರುಳಿಸಿದ ವಿಶ್ವ ದಾಖಲೆ ಸೃಷ್ಟಿಯಾಯಿತು.
ಈ ವಾಯು ಕಾಳಗ ನಡೆಯುತ್ತಿದ್ದಾಗ ಹಿಂದಿನಿಂದ ಸ್ಕಾಡ್ರನ್ ಲೀಡರ್ ಮಿಂಟಿ ಅಗರ್ವಾಲರ…
Turn cold….turn cold…
ಅಂದರೆ ನೀವು ಗಡಿ ದಾಟಿ ಹೋಗಿದ್ದೀರಿ…ಹಿಂತಿರುಗಿ ಬನ್ನಿ ಎನ್ನುವ ಎಚ್ಚರಿಕೆ ಅಭಿನಂದನರಿಗೆ ಕೇಳಿಸಲೇ ಇಲ್ಲ. ಅದೇ ಸಮಯಕ್ಕೆ ಅಭಿನಂದನ್ ಅವರ ಬೈಸನ್ ವಿಮಾನವೂ ಹಿಂದಿನಿಂದ ಬಂದ F-16 ವಿಮಾನದ ರಡಾರಿನಲ್ಲಿ ಲಾಕ್ ಆಗಿಹೋಯಿತು. ಅವರ ವಿಮಾನದ ಮೇಲೂ ಕ್ಷಿಪಣಿ ದಾಳಿ ನಡೆದು ಹೋಯಿತು. ಹಾನಿಗೊಂಡ ವಿಮಾನದಿಂದ ಅಭಿನಂದನ್ ಹೊರಬರಬೇಕಾಯಿತು. ಗಡಿಯಿಂದ ಪಿಒಕೆಯ ಒಳಗೆ ಏಳು ಕಿಲೋಮೀಟರ್ ದೂರದಲ್ಲಿರುವ ಹೋರನ್ ಕೋಟ್ಲಾ ಎಂಬ ಹಳ್ಳಿಯ ಬಳಿ ಪ್ಯಾರಾಚೂಟಿನ ಮುಖಾಂತರ ಇಳಿದರು. ಇಷ್ಟೆಲ್ಲಾ ನಡೆದದ್ದು ನೀವು ಈ ಭಾಗವನ್ನು ನೀವು ಓದಿದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ, ಇಡೀ ಹೋರಾಟ 90 ಸೆಕೆಂಡುಗಳಲ್ಲಿ ಮುಗಿಯಿತು.
ಅಭಿನಂದನರು ಪ್ಯಾರಾಚೂಟಿನಿಂದ ಕೆಳಗೆ ಇಳಿಯುತ್ತಿದ್ದನ್ನು ನೋಡಿ, ಅವರನ್ನು ಸುತ್ತುವರೆದ ಸ್ಥಳೀಯರು, ಅವರು ಭಾರತೀಯ ಪೈಲಟ್ ಎಂದು ಗೊತ್ತಾದ ಕೂಡಲೇ ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ತಮ್ಮಲ್ಲಿದ್ದ ಪಿಸ್ತೋಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಲೇ ತಮ್ಮಲ್ಲಿದ್ದ ಕೆಲವು ರಹಸ್ಯ ದಾಖಲೆಗಳಿದ್ದ ಕಾಗದವನ್ನು ಪರಪರನೆ ಹರಿದು, ಉಂಡೆಮಾಡಿ ನುಂಗಿಬಿಟ್ಟರು ಅಭಿನಂದನ್. ಅಷ್ಟರಲ್ಲೇ ಅಲ್ಲಿಗೆ ಬಂದ ಪಾಕಿಸ್ತಾನಿ ಸೈನ್ಯದ ಸಿಬ್ಬಂದಿ ಅವರನ್ನು ಸಮೀಪದ ಸೈನ್ಯದ ಘಟಕಕ್ಕೆ ಕರೆದುಕೊಂಡು ಹೋದರು. ಯುದ್ಧಕೈದಿಗಳನ್ನು ಹೇಗೆ ನಡೆಸಿಕೊಳ್ಳ ಬೇಕು ಅವರನ್ನು ಏನೇನೆಲ್ಲಾ ಪ್ರಶ್ನೆ ಕೇಳಬಹುದು ಎಂಬುದನ್ನು ಜಿನೇವಾದ ಒಡಂಬಡಿಕೆಯಲ್ಲಿ ಸ್ಪಷ್ಟ ಪಡಿಸಲಾಗಿದೆ, ಆದರೆ ಪಾಕಿಸ್ತಾನದಂತ ಪುಂಡ, ಅಶಿಸ್ತಿನ ದೇಶ ಅವನ್ನೆಲ್ಲಾ ಪಾಲಿಸುತ್ತದೆಯೇ? ಅವರಿಗೆ ಚಹಾ ಕೊಟ್ಟು ಅತಿಥಿ ಸತ್ಕಾರ ಮಾಡಿದ್ದನ್ನು ದೊಡ್ಡದಾಗಿ ಮಾಧ್ಯಮಗಳಲ್ಲಿ ಬಿಂಬಿಸಿದರು ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರಿಗೆ ಕೊಟ್ಟ ಹಿಂಸೆ ಅಭಿನಂದನರಿಗೇ ಗೊತ್ತು. ಇಡೀ ದೇಶಕ್ಕೆ ದೇಶವೇ ಹೆಮ್ಮೆಯಿಂದ ಭಾವುಕವಾಗಿದ್ದು ಪಾಕಿಸ್ತಾನದ ಸೈನ್ಯಾಧಿಕಾರಿಗಳೊಂದಿಗೆ ವಿಂಗ್ ಕಮಾಂಡರ್ ಅಭಿನಂದನರ ನೇರ, ದಿಟ್ಟ ನಡುವಳಿಕೆ. ಅವರು ಎಷ್ಟೇ ಪೀಡಿಸಿದರೂ ತಮ್ಮ ಹೆಸರು ಮತ್ತು ಸೇವಾಕ್ರಮಾಂಕ ಇಷ್ಟನ್ನು ಬಿಟ್ಟು ಮತ್ಯಾವ ವಿಷಯವನ್ನೂ ಬಾಯಿಬಿಡಲಿಲ್ಲ. ಅವರು ಏನು ಪ್ರಶ್ನೆ ಕೇಳಿದರೂ..
‘ಕ್ಷಮಿಸಿ.. ನಾನು ಇದನ್ನು ಹೇಳುವ ಹಾಗಿಲ್ಲ’
ಎಂದು ಬಿಡುತ್ತಿದ್ದರು...ಅವರ ಈ ವರ್ತನೆಗೆ ಇಡೀ ದೇಶಕ್ಕೆ ದೇಶವೇ ಅಭಿಮಾನದಿಂದ ಎದೆಯುಬ್ಬಿಸಿದರೆ, ಪಾಕಿಸ್ತಾನದಲ್ಲೂ ಕೆಲವು ಅಭಿನಂದನರ ಅಭಿಮಾನಿಗಳು..
‘ವಾಹ್..ಕ್ಯಾ ಬಂದಾ ಹೈ’ ಎಂದು ಬಿಟ್ಟರು.
ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಮಾತ್ರ ಕಂಪನ ಉಂಟಾಗಿತ್ತು. ವಿಂಗ್ ಕಮಾಂಡರ್ ಅಭಿನಂದನರ ಬಿಡುಗಡೆ ಕೂಡಲೇ ನಡೆಯದಿದ್ದರೆ ಅದೇ ರಾತ್ರಿ ಒಂಬತ್ತು ಗಂಟೆಗೆ
ಭಾರತ ಪಾಕಿಸ್ತಾನದ ಮೇಲೆ ಘನಘೋರ ಆಕ್ರಮಣ ನಡೆಸಲಿದೆ ಎನ್ನುವ ಗುಲ್ಲು ಪಾಕಿಸ್ತಾನದೆಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿಬಿಟ್ಟಿತ್ತು. ಪುನಃ ತುರ್ತು ಮಂತ್ರಿಮಂಡಲದ ಅಧಿವೇಶನವನ್ನು ಕರೆಯಲಾಯಿತು. ಬೆವರಿಳಿಸುತ್ತಲೇ ಅಧಿವೇಶನಕ್ಕೆ ಹಾಜಿರಾದ ಮಂತ್ರಿಗಳು, ಸಂಸದರು ಮತ್ತು ಜನರಲ್ಲುಗಳು ಅಭಿನಂದನರವರ ಬಿಡುಗಡೆಗೆ ಬೇರೆ ದಾರಿ ಇಲ್ಲದೆ ಒಮ್ಮತ ಸೂಚಿಸಿದರು.
ಅಭಿನಂದನ್ ಬಿಡುಗಡೆಯಾಗುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಲೇ ಇಡೀ ದೇಶಕ್ಕೆ ದೇಶವೇ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಮಾರ್ಚ್ 1, 2019 ರಂದು ಅಭಿನಂದನ್ ಅವರನ್ನು ಅಮೃತಸರ ಸಮೀಪದ ಅಠಾರಿ ಎಂಬಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.
ಅಂತೂ ಪುಲ್ವಾಮ ದಾಳಿಗೆ ಬಲವಾದ ಪ್ರತ್ಯುತ್ತರವಾಗಿ ಬಾಲಾಕೋಟಿನ ಬಾಂಬ್ ನಡೆಸಿ, ನೂರಾರು ಭಯೋತ್ಪಾದಕರನ್ನು ಹತಗೊಳಿಸಿ, ಮರುದಿನ ನಡೆದ ಪಾಕಿಸ್ತಾನದ ಬಲಪ್ರದರ್ಶನಕ್ಕೂ ತಕ್ಕ ಶಾಸ್ತಿ ಮಾಡಿ ಭಾರತದ ನಿಲುವನ್ನು ಪಾಕಿಸ್ತಾನಕ್ಕೆ ಅರಿವು ಮಾಡಿ ಕೊಟ್ಟಿತು. ಅಭಿನಂದನ್ ಅವರ ಸಾಹಸಕ್ಕೆ ಅವರನ್ನು ವೀರ ಚಕ್ರ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಸ್ಕಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೆ ‘ಯುದ್ಧ ಸೇವಾ ಪದಕ’ ನೀಡಿ ಗೌರವಿಸಲಾಯಿತು.
ವಾಯುಸೇನೆಯ ಧ್ಯೇಯ “ನಭಃ ಸ್ಪೃಶಂ ದೀಪ್ತಂ”. ಇದನ್ನು ಭಗವದ್ಗೀತೆಯ ಹನ್ನೊಂದನೇ ಅಧ್ಯಾಯ ಇಪ್ಪತ್ನಾಲ್ಕನೆಯ ಶ್ಲೋಕದಿಂದ ತೆಗೆದುಕೊಳ್ಳಲಾಗಿದೆ. ಭಗವಾನ್ ಶ್ರೀ ಕೃಷ್ಣನ ಬ್ರಹ್ಮಾಂಡರೂಪವನ್ನು ಕಂಡು ಅರ್ಜುನ ಆಶ್ಚರ್ಯದಿಂದ, ಆಕಾಶವನ್ನು ವೈಭವದಿಂದ ಸ್ಪರ್ಶಿಸುತ್ತಿರುವ ವಿಶ್ವರೂಪವನ್ನು ನೋಡುತ್ತಾ ಹೀಗೆ ಹೇಳುತ್ತಾನೆ….
#ನಭಃ_ಸ್ಪೃಶಂ_ದೀಪ್ತಂ_ಅನೇಕ_ವರ್ಣಂ
#ವ್ಯತ್ತಾನನಂ_ದೀಪ್ತಾ_ವಿಶಾಲ_ನೇತ್ರಂ
ವಾಯು ಶಕ್ತಿಯೂ ಹಾಗೇ..ಕಾಣಿಸಿಕೊಳ್ಳುವುದು ಕೇವಲ ಕೆಲವು ಕ್ಷಣಗಳು ಮಾತ್ರ ಆದರೆ ಭಗವಂತನ ವಿಶ್ವರೂಪ ಅರ್ಜುನನಂತಹ ಪರಾಕ್ರಮಿಯನ್ನೇ ಅಧೀರನಾಗಿಸುವ ಶಕ್ತಿಯಂತೆ, ಇಡೀ ಆಕಾಶವನ್ನೇ ಆವರಿಸಿ ಆಘಾತಗೊಳಿಸುವ ಶಕ್ತಿ ಇದೆ.
ಲೇ:ವಿಂಗ್ ಕಮಾಂಡರ್ ಸುದರ್ಶನ
Comments
Post a Comment