https://youtu.be/lvIMIR2TiiI?feature=shared
#ಮಡಿವಾಳನಕಟ್ಟೆ_ಕೆಂಪಣ್ಣನ_ಕೆರೆ
#ಸಾಗರ_ತಾಲೂಕಿನ_ಬರೂರು_ಗ್ರಾಮಪಂಚಾಯತಿಯ_ಕುಂದೂರು_ಸಮೀಪ
#ಕೆಂಪಣ್ಣನ_ಜೀವಮಾನದ_ಬೇಡಿಕೆ_ಈ_ಕೆರೆ_ನಿರ್ಮಾಣ
#ನಾನು_ಆನಂದಪುರಂ_ಜಿಲ್ಲಾ_ಪಂಚಾಯಿತಿ_ಸದಸ್ಯನಾಗಿ_ಈಡೇರಿಸಿದ_ಸ0ತೃಪ್ತಿ
#ಕೆಂಪಣ್ಣ_ಈ_ಕೆರೆಗೆ_ಅರುಣಪ್ಪನ_ಕೆರೆ_ಅಂತ_ಕರೆದರೆ
#ನಾನು_ಮಾತ್ರ_ಕೆಂಪಣ್ಣನ_ಕೆರೆ_ಅಂತನೆ_ಕರೆದೆ_ಅದೇ_ಶಾಶ್ವತವಾಗಿದೆ
#ಶಾಲಾ_ಸಹಪಾಟಿ_ಹೊಸಕೊಪ್ಪದ_ನಾಗಪ್ಪ_ಮಾಸ್ಟರ್_ಅಪರೂಪದ_ಪೋಟೋ_ಕಳಿಸಿದ್ದಾರೆ.
ನನ್ನ ಮಾಧ್ಯಮಿಕ ಶಾಲಾ ಸಹಪಾಟಿ ಹೊಸಕೊಪ್ಪದ ನಾಗಪ್ಪ ಮಾಸ್ಟರ್ ಇವತ್ತು ಕಳಿಸಿದ ಪೋಟೋಗಳು 29 ವರ್ಷದ ಹಿಂದಿನ ಕಥೆ ನೆನಪಿಸಿತು.
1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಗಿದ್ದೆ ಆಗ ಆನಂದಪುರಂ,ಯಡೇಹಳ್ಳಿ, ಆಚಾಪುರ, ಹೊಸೂರು, ಗೌತಮಪುರ, ಹಿರೇಬಿಲಗುಂಜಿ, ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿಗಳು ಸೇರಿತ್ತು.
ತ್ಯಾಗರ್ತಿ ಭಾಗದ ಚುನಾವಣಾ ಪ್ರಚಾರ ಸ್ಥಳೀಯರಾದ ಕೃಷ್ಣಪ್ಪ, ಗಣಪತಿ, ದಾವೀದ್, ಮೈಲಾರಿಕೊಪ್ಪದ ಹೊಳೆಯಪ್ಪ,ನೀಚಡಿ ವೆಂಕಟೇಶ್ ಹೆಗಡೆ, ಹೊಸಂತೆ ಮಂಜುನಾಥ್, ಕುಮಾರ್ ಗೌಡರು, ಬೆಳಂದೂರು ಲಿಂಗಪ್ಪ, ಬರೂರು ಸದಾಶಿವಪ್ಪ ಗೌಡರು ಮತ್ತು ಅನೇಕರು ಜವಾಬ್ದಾರಿಯಿಂದ ನಡೆಸಿದ್ದರು.
ಅಂತಹ ಪ್ರಚಾರದ ದಿನ ತ್ಯಾಗರ್ತಿ ಸಂತೆಯಂದು ತ್ಯಾಗರ್ತಿ ಕೃಷ್ಣಪ್ಪ " ಅಲ್ಲಿ ನೋಡಿ ಕೆಂಪು ಶಾಲು ಹಾಕೊಂಡು ಬರತಾ ಇದಾರಲ್ಲ ಅವರು ಮಡಿವಾಳನ ಕಟ್ಟೆಯ ಕೆಂಪಣ್ಣ, ಅವರ ಮನೆಯಲ್ಲಿ 50- 60 ಓಟು ಇದೆ ಆದರೆ ಆ ಮೂಲೆಗೆ ರಸ್ತೆ ಗಿಸ್ತೆ ಇಲ್ಲ ಚುನಾವಣೆ ಮುಗಿದ ಮೇಲೆ ಹೋದರಾಯಿತು, ಇವರದ್ದೊಂದು ಅನೇಕ ವರ್ಷದ ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆ ಇದೆ ಅದೇನೆಂದರೆ ಹೊಸ ಕೆರೆ ಮಾಡಿಕೊಡಬೇಕು ಅನ್ನೋದು... ನೀವು ಮಾಡಿ ಕೊಡ್ತೀನಿ ಅಂದು ಬಿಡಿ ಅಷ್ಟೆ... ಆದರೆ ಅದೆಲ್ಲ 30-40 ವರ್ಷದಿಂದ ಯಾರಿಂದಲೂ ಸಾಧ್ಯವಾಗಿಲ್ಲ ಅನ್ನುವಾಗಲೇ ಕೆಂಪಣ್ಣ ನಮ್ಮ ಸಮೀಪ ಬಂದಿದ್ದರು.
ಪರಸ್ಪರ ಪರಿಚಯ ಕೃಷ್ಣಪ್ಪ ಮಾಡಿಸಿದರು ಆಗ ಕೆಂಪಣ್ಣ ಇಟ್ಟ ಬೇಡಿಕೆ "ಏನಾದರೂ ಮಾಡಿ ನಮಗೊಂದು ಕೆರೆ ಮಾಡಿ ಕೊಡಿ ಒಳ್ಳೇ ಜಲದ ಕೋವು ಇದೆ ವರ್ಷ ಪೂರ್ತಿ ನೀರು ಇರುತ್ತೆ... ಅಲ್ಲಿ ಕೆರೆ ಆದರೆ ಕೆಳಗೆ ನೂರಾರು ಎಕರೆ ಅಡಿಕೆ ತೋಟ ಮಾಡಬಹುದು" ಅಂತ ಆಸೆ ಕಣ್ಣಿಂದ ಆ ವಯೋ ವೃದ್ಧರು ಹೇಳುವಾಗ ನನಗೆ ಅವರಿಗೆ ಸುಳ್ಳು ಭರವಸೆ ನೀಡಿ ಅವರ ಕುಟುಂಬದ ಮತ ಪಡೆಯುವ ಬಗ್ಗೆ ಇಷ್ಟ ಅನ್ನಿಸಲಿಲ್ಲ ಆದರೂ ಚುನಾವಣೆ ಸ್ಟರ್ದೆಯಲ್ಲವೇ ಆದ್ದರಿಂದ ಅವರಿಗೆ ಒಂದು ಅಶ್ವಾಸನೆ ನೀಡಿದೆ " ಕೆಂಪಣ್ಣ ನೀವೆಲ್ಲ ಮತ ನೀಡಿ ಗೆಲ್ಲಿಸಿದರೆ ನಾನು ನಿಮ್ಮ ಊರಿಗೇ ಬಂದು ಸ್ಥಳ ನೋಡಿ ನಿಮ್ಮ ಬಹುವರ್ಷದ ಬಯಕೆ ಆಗಿರುವ ಕೆರೆ ಮಾಡಿಸಿ ಕೊಡುತ್ತೇನೆ" ಅಂದೆ.
ನನ್ನ ಕೈ ಹಿಡಿದು ನನ್ನ ಕಣ್ಣನ್ನೇ ದಿಟ್ಟಿಸಿದ ಮಡಿವಾಳನ ಕಟ್ಟೆ ಕೆಂಪಣ್ಣ ನಾನು ಮಾತು ತಪ್ಪುವುದಿಲ್ಲ ಆದರೆ ಗೆದ್ದ ಮೇಲೆ ನೀವು ಮಾತ್ರ ಮಾತು ತಪ್ಪಬೇಡಿ ಇಲ್ಲಿ ತನಕ ಎಲ್ಲಾ ಚುನಾವಣೆಲಿ ಗೆದ್ದೋರು ನಮ್ಮ ಊರಿಗೆ ಬರಲಿಲ್ಲ ಅಂದರು ಅವರ ಕಣ್ಣ ನೋಟದಲ್ಲಿ ಅರ್ದ ನಂಬಿಕೆ ಮಾತ್ರ ಇತ್ತು.
ಚುನಾವಣೆಯಲ್ಲಿ ಗೆದ್ದ ನಂತರ ಮೊದಲಿಗೆ ಕುಂದೂರಿಗೆ ಹೋಗಿ ಅಲ್ಲಿಂದ ನಡೆದುಕೊಂಡು ಕಲ್ವಡ್ಡು ಹಳ್ಳದಾಟಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಸೀಮೆಎಣ್ಣೆ ಬಸವರಾಜಪ್ಪನ ಮನೆ ಮುಖಾಂತರ ಮಡಿವಾಳನ ಕಟ್ಟೆ ಕೆಂಪಣ್ಣನ ಮನೆ ತಲುಪಿದ್ದೆ.
ಶಿಕಾರಿಪುರ ಸಾಗರ ತಾಲೂಕಿನ ಅಂಚಿನ ಅರಣ್ಯ ಭೂಮಿಯ ಕಪ್ಪು ಎರೆ ಮಣ್ಣಿನ ಭೂಮಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಈ ಭಾಗದ ಬಹುತೇಕರು ಬಡವರು ಅವರಿಗೆ ಭೂಮಿ ಹಕ್ಕು ಪತ್ರ ಸಿಕ್ಕರಲಿಲ್ಲ, ರಸ್ತೆ ಸಂಪರ್ಕ ಇಲ್ಲ, ಶಾಲೆ ಇಲ್ಲ, ವಿದ್ಯುತ್ ಸಂಪರ್ಕ ಇರಲಿಲ್ಲ.
ಕೆಂಪಣ್ಣ ಅವರ ಜೋಳದ ಬೆಳೆ ಬೆಳೆಯುವ ಜಮೀನಿನ ಮೇಲಿನ ಎರಡು ಗುಡ್ಡದ ನಡುವಿನ ಕೋವು ತೋರಿಸಿದರು ಅದು ಸಮೃದ್ದ ಜಲ ಮೂಲದ ವರ್ಷ ಪೂರ್ತಿ ನೀರು ಹರಿಯುವ ಜಾಗ ಆಗಿತ್ತು.
ಅಲ್ಲಿ ಒಂದು ದಂಡೆ ನಿರ್ಮಿಸಿ ಅದಕ್ಕೆ ತೂಬು ಹಾಕಿದರೆ ಅದರ ಕೆಳಗಿನ ಎಲ್ಲಾ ಭೂಮಿ ಅಡಿಕೆ ತೋಟವೇ ಮಾಡುವಂತಿದ್ದ ಪ್ರದೇಶ ಎಂಬುದು ಅರಿತೇ ಕೆಂಪಣ್ಣ ಅಲ್ಲಿ ನೆಲೆನಿಂತರು ಆದರೆ ಕೆರೆ ಆಗದಿದ್ದರಿಂದ ಜೋಳದ ಬೆಳೆಗೆ ಮಾತ್ರ ತೃಪ್ತಿ ಪಡೆಯುತ್ತಾರೆ, ಸುಮಾರು 50-60 ವರ್ಷದ ಕಾಲಮಾನದಲ್ಲಿ ಕೆಂಪಣ್ಣರಿಗೆ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳಾಗಿ ನೂರಾರು ಜನರ ಕುಟುಂಬ ಆದರೂ ಅವರ ಆಸೆಯ ಕೆರೆ ಆಗಲೇ ಇಲ್ಲ ಎಂಬ ನಿರಾಸೆ ಇತ್ತು.
1995- 2000 ಅವದಿಯ ಜಿಲ್ಲಾ ಪಂಚಾಯತ್ ನಲ್ಲಿ ಅಂತಹ ಹೊಸ ಕೆರೆ ನಿರ್ಮಿಸುವ ಯಾವುದೇ ಯೋಜನೆ ಸಾಧ್ಯವಿರಲಿಲ್ಲ ಆದರೆ ನಾನು ಛಲ ಬಿಡದ ವಿಕ್ರಮನಂತೆ ಅಂತೂ ಇಂತು ನನ್ನದೇ ಆದ ತಂತ್ರ ಬಳಸಿ ಕೆಂಪಣ್ಣನ ಹಲವು ವರ್ಷಗಳ ನಿರೀಕ್ಷೆಯ ಕೆರೆ ನಿಮಿ೯ಸಿಯೇ ಬಿಟ್ಟೆ.
ವೃದ್ಧಾಪ್ಯದಲ್ಲಿಯೂ ಕೆಂಪಣ್ಣ ಹೆಸರಿಗೆ ತಕ್ಕ ಕೆಂಪು ಮುಖದಲ್ಲಿ ಮೂಡಿದ ಸಂತೃಪ್ತಿ ನೋಡಿ ನನಗೂ ಅಷ್ಟೇ ಖುಷಿ ನೆಮ್ಮದಿ ಉಂಟಾಗಿತ್ತು, ಅವರ ವೃದ್ಯಾಪ್ಯದಲ್ಲೂ ಸುಂದರಾಂಗರೆ ಆಗಿದ್ದ ಕೆಂಪಣ್ಣ ಬಹುಶಃ ಪ್ರಾಯದ ಕಾಲದಲ್ಲಿ ಇನ್ನೂ ಎಷ್ಟೋ ಸುಂದರರಾಗಿರ ಬೇಕು.
ಕೆಂಪಣ್ಣ ನನಗೆ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು #ಅರುಣಪ್ಪ ಆದ್ದರಿಂದ ಈ ಕೆರೆಗೆ ಅರುಣಪ್ಪನ ಕೆರೆ ಅಂತ ಅವರು ಕರೆದರು ಆದರೆ ನಾನು ಒಪ್ಪಲಿಲ್ಲ...ಕೆರೆಗೆ ಜಲಮೂಲ ಕಂಡು ಹಿಡಿದು ಕೆರೆಯ ಬೇಡಿಕೆ ಇಟ್ಟುಕೊಂಡು ಇಷ್ಟು ವರ್ಷ ಕಾಯುತ್ತಿದ್ದ ಕೆಂಪಣ್ಣರಿಂದ ಈ ಕೆರೆಗೆ #ಕೆಂಪಣ್ಣನ_ಕೆರೆ ಎಂದೇ ಊರವರು ಕರೆಯ ಬೇಕೆಂದು ವಿನಂತಿಸಿದ್ದರಿಂದ ಇದು ಕೆಂಪಣ್ಣನ ಕೆರೆ ಅಂತಲೇ ಆಯಿತು.
ಸದಾ ಕೆಂಪಣ್ಣರ ಜೊತೆ ನಮ್ಮ ಊರಿಗೆ ನನ್ನ ಹುಡುಕಿಕೊಂಡು ಬರುತ್ತಿದ್ದ ಅವರ ಪುತ್ರ ಮಂಜಪ್ಪ (ಒಂದು ಕಾಲು ವಿಕಲತೆಯಿಂದ ಸ್ವಲ್ಪ ಕುಂಟುತ್ತಿದ್ದರು) ಇಬ್ಬರೂ ಈಗಿಲ್ಲ ಇವರ ಶ್ರಮದಿಂದ ಈ ಕೆರೆ ನೀರಿನಿಂದ ಅಡಿಕೆಯ ಸಮೃದ್ದ ಪಸಲು ಬರುವ ತೋಟ ಇವರ ವಂಶಸ್ಥರಿಗೆ ಬಂದಿದೆ.
ಈ ಹಳ್ಳಿಗೆ ಹೊಸ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ಪ್ರಾಥಮಿಕ ಶಾಲೆ ಮಾಡಿಸಿಕೊಟ್ಟಿದ್ದರಿಂದ ಈ ಭಾಗದ ಜನರು ನನಗೆ ಹೆಚ್ಚು ಆಪ್ತರಾದರು.
ಕೆಂಪಣ್ಣ ವಯೋ ಸಹಜವಾಗಿ ಕಾಯಿಲೆ ಬಿದ್ದಾಗ ಚಿಕಿತ್ಸೆ ಪಡೆಯಲು ಒಪ್ಪಲೇ ಇಲ್ಲ ಮತ್ತು ಅವರ ಜೀವಮಾನದಲ್ಲಿ ಒಮ್ಮೆ ಕೂಡ ಇಂಜೆಕ್ಷನ್ ತೆಗೆದು ಕೊಂಡಿರಲಿಲ್ಲ, ಆದರೆ ನನ್ನ ಮಾತಿಗೆ ಇಂಜೆಕ್ಷನ್ ತೆಗೆದು ಕೊಳ್ಳಲು ಒಪ್ಪಿದರು ಆದ್ದರಿಂದ ತ್ಯಾಗರ್ತಿ ಆಸ್ಟತ್ರೆಯ ಸಿಬ್ಬಂದಿ ಕಂಪೌಡರ್ ಲಿಂಗರಾಜರನ್ನು ಕಳಿಸಿದ್ದೆ ಅವರು ಇಂಜೆಕ್ಷನ್ ನೀಡಿದ್ದರು.
ಕೊನೆಯ ಕಾಲದಲ್ಲಿ ಉಸಿರೆಳೆಯುವಾಗಲೂ ಅರುಣಪ್ಪನ ನೋಡ ಬೇಕು ಕರೆಯಿರಿ ಅಂತಿದ್ದ ನನ್ನ ಅಪ್ಪ ಅಂತ ಅವರ ಮಗ ಮಂಜಪ್ಪ ಕಣ್ಣೀರಲ್ಲಿ ಹೇಳುವಾಗ ನಾನು ಕಣ್ಣೀರಾಗಿದ್ದೆ.
ಗೆಳೆಯ ನಾಗಪ್ಪ ಮಾಸ್ಟರ್ ಇವತ್ತು ಕಳಿಸಿದ ಪೋಟೋ ನೋಡಿ ಮತ್ತೆ ಕಣ್ಣೀರಾಗಿ ಈ ನೆನಪು ದಾಖಲಿಸಿದೆ.
ನಾಗಪ್ಪ ಮಾಸ್ಟರ್ ಗೆ ಕೃತಜ್ಞತೆಗಳು ಈ ಸಂದರ್ಭದಲ್ಲಿ ಸಲ್ಲಿಸಲೇ ಬೇಕು.
ಈ ಊರಿನವರು ಕರೆದುಕೊಂಡು ಬರಲು ಹೇಳುತ್ತಿದ್ದಾರೆ ಅಂತ ನಾಗಪ್ಪ ಪೋನಿನಲ್ಲಿ ತಿಳಿಸಿದರು, ಮಡಿವಾಳನ ಕಟ್ಟೆಯ ಕೆಂಪಣ್ಣನ ವಂಶಸ್ಥರ ಪ್ರೀತಿಗೆ ನಾನು ಅಭಾರಿ ಆಗಿದ್ದೇನೆ.
ಇಂತಹ ನಾಲ್ಕು ಕೆರೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಿರ್ಮಿಸಿದ್ದು ನೆನಪಾಯಿತು.
ಕೆಂಪಣ್ಣನ ಚಿತ್ರ ಮನಸ್ಸಿನಲ್ಲಿ ಹಸಿರಾಗೇ ಉಳಿದಿದೆ.
Comments
Post a Comment