#ನಮ್ಮ_ಊರಿನ_ಜಾತ್ರೆಯಲ್ಲಿ_ಹೋಳಿಗೆ_ತುಪ್ಪದ_ಅನ್ನಸಂತರ್ಪಣೆ
#ಭಕ್ತರಿಗೆ_ಮದುವೆ_ಮನೆ_ರೀತಿ_ಊಟೋಪಚಾರ
#ಬಫೆ_ಪದ್ದತಿ_ಇಲ್ಲ
#ಇದಕ್ಕೆ_ಕಾರಣ_ಇದೆ....
ನಮ್ಮೂರ ಜಾತ್ರೆಯ ಝುಲಕುಗಳು....
ನಮ್ಮ ಊರಾದ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಏಕೈಕ #ಶ್ರೀವರಸಿದ್ಧಿವಿನಾಯಕ_ಸ್ವಾಮಿ ದೇವಸ್ಥಾನ ಇರುವುದು ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿದೆ.
ಈ ವರ್ಷದ ಜಾತ್ರೆ ಮತ್ತು ರಥೋತ್ಸವ 18ನೆ ವರ್ಷದ್ದು (13- ಪೆಬ್ರುವರಿ- 2024 ಮಂಗಳವಾರ) ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಅನ್ನ ಸಂತರ್ಪಣೆ ದೇವಾಲಯದ ಆವರಣದಲ್ಲೇ ಕುಳ್ಳಿರಿಸಿ ಟೇಬಲ್ ಊಟ ನೀಡಲಾಗುತ್ತಿದೆ.
ಊಟದ ತಟ್ಟೆಯಲ್ಲಿ ಎಲ್ಲವನ್ನು ಬಡಿಸುತ್ತಿದ್ದರು ಇದೊಂದು ರೀತಿ ಅಯೋಮಯ ಅನ್ನ ಸಂತರ್ಪಣೆ ಆಗುತ್ತಿತ್ತು.
ಇದೆ ಪ್ರಕಾರವಾಗಿ ನಮ್ಮ ದೇವಾಲಯದಲ್ಲಿ ಅವರ ಕೋರಿಕೆಯಂತೆ ಎಲ್ಲಾ ಅನ್ನಸಂತರ್ಪಣೆಗೆ ಭಾಗವಹಿಸುವ ಭಕ್ತರಿಗೆ ಕುಳ್ಳಿರಿಸಿ ಟೇಬಲ್ ಊಟದ ವ್ಯವಸ್ಥೆ ಮಾಡಲಾಗುತ್ತದೆ,ಟೇಬಲ್ ಮೇಲೆ ಪೇಪರ್ ರೋಲ್ ಹಾಸಿ, ಬಾಳೆ ಎಲೆಯಲ್ಲಿ- ಉಪ್ಪು- ಉಪ್ಪಿನಕಾಯಿ- ಹಪ್ಪಳ -ಕೋಸಂಬರಿ- ಪಲ್ಯ -ಚಿತ್ರನ್ನ -ಹೋಳಿಗೆ- ತುಪ್ಪ -ಅನ್ನ- ಹುಳಿ -ತಿಳಿಸಾರು- ಪಾಯಸ -ಮಜ್ಜಿಗೆ ಬಡಿಸಲಾಗುತ್ತದೆ, ಕುಡಿಯಲು ಶುದ್ಧ ಕ್ಯಾನ್ ನೀರುಗಳನ್ನು ಬಳಸಲಾಗುತ್ತದೆ.ಇದೊಂದು ರೀತಿ ಮದುವೆ ಮನೆಯ ರೀತಿ ಊಟೋಪಚಾರ.
ರಥೋತ್ಸವದ ದಿನದ ಅನ್ನ ಸಂತರ್ಪಣೆಯಲ್ಲಿ ಹೋಳಿಗೆ ತುಪ್ಪ ತಪ್ಪಿಸಬಾರದೆಂಬ ನನ್ನ ಸಂಕಲ್ಪ ಇಲ್ಲಿ ತನಕ ದೇವರ ಕೃಪೆಯಿಂದ ನಿರಂತರವಾಗಿ ನಡೆದಿದೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಭಕ್ತರ ಸಂಖ್ಯೆಯಿಂದ ಕೆಲವು ವರ್ಷದ ಹಿಂದೆ ಕೊನೆಯ ಪಂಕ್ತಿಯ ಕೆಲವರಿಗೆ ಹೋಳಿಗೆ ತುಪ್ಪ ಸಿಗುತ್ತಿರಲಿಲ್ಲ.
ಆ ವರ್ಷ ಗೆಳೆಯ ಸ್ನೇಕ್ ಪ್ರಭಾಕರ್ ಗೆ ಹೋಳಿಗೆ ತುಪ್ಪ ಸಿಗಲಿಲ್ಲ ಮತ್ತು ಅವರ ಎದುರು ಸಾಲಿನಲ್ಲಿ ಊಟಕ್ಕೆ ಕುಳಿತಿದ್ದ ತುಂಬು ಬಸುರಿ ಹೆಣ್ಣು ಮಗಳಿಗೂ ಸಿಗಲಿಲ್ಲ ಅದರಿಂದ ನೊಂದ ಆ ಹೆಣ್ಣು ಮಗಳು, ಯಡೇಹಳ್ಳಿಯ ಗಣಪತಿ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಊಟ ಮಾಡುವ ಆಸೆಯಿಂದ ಬಂದಿದ್ದು ನಿರಾಸೆ ಆಯಿತು ಅಂದ ಮಾತು ನನ್ನ ಹೃದಯಕ್ಕೆ ತಟ್ಟಿತ್ತು... ಆ ಹೆಣ್ಣು ಮಗಳಿಗೆ ಮನೆಯಿಂದ ಹೋಳಿಗೆ ತರಿಸಿ ಕೊಡುವ ತೀರ್ಮಾನ ಮಾಡಿ ಅವರನ್ನ ಹುಡುಕಿದರೆ ಸಿಗಲಿಲ್ಲ.
ಆ ನಂತರದ ವರ್ಷಗಳಿಂದ ನಮ್ಮ ಅವಶ್ಯಕತೆಗಿಂತ ಹೆಚ್ಚು ಹೋಳಿಗೆ ನಮ್ಮ #ಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ನಲ್ಲಿ ತಯಾರಿಸುತ್ತೇವೆ ರಥೋತ್ಸವದ ದಿನದ ನಮ್ಮ ಮನೆಯ ಅನ್ನ ಸಂತರ್ಪಣೆಯಲ್ಲಿ ಯಾರಿಗೂ ಹೋಳಿಗೆ ತುಪ್ಪ ಸಿಗಲಿಲ್ಲ ಎನ್ನುವಂತಿಲ್ಲ ಮತ್ತು ಅವತ್ತು ಉಳಿಯುವ ಹೆಚ್ಚುವರಿ ಹೋಳಿಗೆ ಮರುದಿನದ ದೇವಾಲಯದ ವತಿಯ ಅನ್ನ ಸಂತರ್ಪಣೆ ಯಲ್ಲಿ ಬಡಿಸುತ್ತಾರೆ.
ಈ ವರ್ಷದ ರಥೋತ್ಸವದ ದಿನದ ಅನ್ನ ಸಂತರ್ಪಣೆಯಲ್ಲಿ ವಿಶೇಷ ಅತಿಥಿಗಳಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಸಿಂದನೂರಿನ ಹನುಮನಗೌಡ ಬೆಳಕುರ್ಕಿ ಜೊತೆ ಆಗಮಿಸಿದ್ದ ಸಾಗರದ ಪತ್ರಕರ್ತ U.P. ಜೋಸೆಫ್, ರೈತ ಮುಖಂಡರಾದ ಎನ್.ಡಿ.ವಸಂತ ಕುಮಾರ್ , ಗುಳ್ಳಳ್ಳಿ ಬಸವರಾಜ ಗೌಡರು, ಜೇಡಿಸರದ ರಾಜಶೇಖರ ಗೌಡರು ಮುಂತಾದವರು ನಮ್ಮ ದೇವಾಲಯದ ಜಾತ್ರಾ ರಥೋತ್ಸವದ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದು ನಮಗೆಲ್ಲ ಸಂತೋಷ ತರಿಸಿತ್ತು.
Comments
Post a Comment