https://www.facebook.com/share/p/1DJc75wPKw/
ಈ ಕಥೆ ಓದಿ ಅಭಿಪ್ರಾಯ ಬರೆಯಿರಿ
ವಕ್ಷ ಸ್ಥಲೆ ಇವರ ಹಿಂದಿನ ಕಥೆ ನಾನು ಪೋಸ್ಟ್ ಮಾಡಿದ್ದು ಅತಿ ಹೆಚ್ಚು ವೀಕ್ಷರಿಂದ ಪ್ರಶಂಸಿಲ್ಪಟ್ಟಿತ್ತು.
ಇದು ಎರಡನೆ ಕಥೆ ನಿಮಗಾಗಿ
ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ
#ಪ್ರಬಂದಅಂಬುತೀಥ೯
ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ.
ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.
ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.
ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ.
*#ಅನಾವರಣದಲ್ಲೋಂದು_ಅನಾವರಣ*
*ಕಥೆಗಾರನ ಅರಿಕೆ......*
ಕಣ್ಣಾರೆ ಕಂಡಿದ್ದೇ ಸತ್ಯವಾ...? ಪ್ರತಿ ಘಟನೆ ಗೂ ಒಂದು ಒಳ ಅರ್ಥ ಇರಬಹುದು .. ನಾವೇ ನಮಗೆ ಕಣ್ಣಿಗೆ ಕಂಡಿದ್ದೇ ಸತ್ಯ ಎಂದು ಸ್ವಕಪೋಲ ಕಲ್ಪಿತವಾಗಿ ಅಂದುಕೊಳ್ಳುವುದು ಬೇಡ ಎನಿಸುತ್ತದೆ.>>>
*ಈ ಕಥೆಯಲ್ಲಿ ಹೆಣ್ಣೊಬ್ಬಳ* *ಭಾವ್ಯಾಭ್ಯಕ್ತವಿದೆ...ನಿಸರ್ಗ ಸಹಜ ದೈಹಿಕ ಕ್ರಿಯೆಯಿದೆ*. *ದಯಮಾಡಿ ಓದುಗ ಮಹಾಶಯರು ಎಲ್ಲೂ ಮುಜುಗರ ಪಡೆದೆ ಓದಿ ಪ್ರೋತ್ಸಾಹಿಸ ಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.*
ನಮಸ್ಕಾರಗಳು
ಪ್ರಬಂಧ •}*
ಐದು ವರ್ಷಗಳ ಪುಟ್ಟ ಸಾಹಿತ್ಯ ಹೆಗ್ಡೆ ತನ್ನ ಅಬೋಧ ಕಣ್ಣುಗಳಿಂದ ಮುಗ್ದವಾಗಿ ಅಲ್ಲಿ ಎದುರು ನೆಡೆಯುತ್ತಿರುವ ವಿದ್ಯಮಾನವನ್ನು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲಾಗದೇ ನೋಡತೊಡಗಿದ.....?!!
ಅಜ್ಜ ,ದೊಡ್ಡಮ್ಮ (ಅಜ್ಜಿ) , ಅಮ್ಮ ... ಅಮ್ಮ ನ ಪಕ್ಕ ಯಾರೋ ಅಪರಿಚಿತ ಗಂಡಸು.. ಮಂತ್ರ ಹೇಳುವ ಪೂಜೆ ಭಟ್ಟರು... ಅಲ್ಲಿ ಅಮ್ಮ ಅಜ್ಜ ದೊಡ್ಡಮ್ಮ ಬಿಟ್ಟರೆ ಮತ್ತೆಲ್ರೂ ಅಪರಿಚಿತರೇ... !!
ಏನು ನೆಡಿತಿದೆ ಇಲ್ಲಿ....!?
ಇಲ್ಲ ನಾನು ಅಮ್ಮ ನ ಹತ್ತಿರ ಹೋಗ ಬೇಕು. ಅಲ್ಲಿಗೆ ಹೋಗಿ ಪಕ್ಕ ಕೂರುವ ಪ್ರಯತ್ನ ಮಾಡಿದಾಗಲೆಲ್ಲ ಯಾರೋ ಅಲ್ಲಿಂದ ಒರಟಾಗಿ ತನ್ನ ರೆಟ್ಟೆ ಹಿಡಿದೆ ಳೆದುಕೊಂಡು ಕೆಳಗೆ ತರ್ತಿದ್ದಾರೆ. ಏಕೆ ಹೀಗೆ ಮಾಡ್ತಿದ್ದಾರೆ...? ನನ್ನಮ್ಮನ ಜೊತೆಗೆ ನಾನೇಕೆ ಕೂರಬಾರದು...? ನಂಗೆ ಅಮ್ಮ ಬೇಕು.... ಈ ಅಜ್ಜ ನನ್ನ ಕೈ ಬಿಡ್ತಿಲ್ಲ ... ಗಟ್ಟಿಯಾಗಿ ಹಿಡಿದು ಕೂರಿಸಿದಾರೆ...
ಏಕೆ ಹೀಗೆ ನನ್ನ ಅಮ್ಮ ನಿಂದ ದೂರ ಮಾಡ್ತಿದ್ದಾರೆ....!? ಯಾರಿವರು..? ನಂಗೆ ಅಮ್ಮ ಬೇಕು... ಒತ್ತರಿಸಿ ಬಂದ ದುಃಖ ವನ್ನು ಹೊರಹಾಕಲಾರದೇ ತುಂಬಿದ ಕಂಗಳಿಂದ
ಸಾಹಿತ್ಯ ಹೆಗ್ಡೆ ಅಸಾಹಾಯಕವಾಗಿ ಅಮ್ಮ ನ ಕಡೆ ಒಮ್ಮೆ ನೋಡಿ ತನ್ನ ಬಲವಾಗಿ ಹಿಡಿದು ಕೊಂಡು ಕೂತ ಅಪರಿಚಿತ ಅಜ್ಜ ನ ಮುಖವನ್ನು ಹಿಂತಿರುಗಿ ಕತ್ತು ಎತ್ತರಿಸಿ
ನೋಡಿದ.... ಅವರು
ಕೊರನಕೋಟೆ ಕೃಷ್ಣಮೂರ್ತಿ ಜೋಯಿಸರು. ಅವರು ಮದುವೆ ಹುಡುಗನ ಸೋದರಮಾವ. ತಮ್ಮ ತೊಡೆಯ ಮೇಲೆ ಕೂತ ಮುಗ್ದ ಮುಖವನ್ನು ನೋಡಿ ಮೇಲೆ ನೆಡೆಯುತ್ತಲಿರುವ ಆಗರ್ಭ ಶ್ರೀಮಂತ ರ ಮನೆಯ ವೆರಿ ವೆರಿ ಸಿಂಪಲ್ ಮಾಂಗಲ್ಯ ಕಾರ್ಯಕ್ರಮ ವನ್ನು ಕಣ್ ತುಂಬಿಸಿಕೊಳ್ತಿದ್ದಾರೆ.
ಅದು ಬಿನ್ನ ವಿವಾಹ..
ಒಂದು ಕಾಲದಲ್ಲಿ ಈ ಸಮಾಜ ದಲ್ಲಿ ಪುರುಷರು ತಮ್ಮ ಪ್ರಾಭಲ್ಯ ಮೆರೆ ದಿದ್ದರು. ಅಂದಿನಕಾಲದಲ್ಲಿ ಮನೆ ತುಂಬಾ ಹೆಣ್ಣು ಮಕ್ಕಳು .
ಮನೆಯ ಯಜಮಾನ ರಿಗೆ ಹುಡುಗ ಎಂಬ "ಪುಲ್ಲಿಂಗ " ಆದರೆ ಸಾಕಿತ್ತು ... ದಾರೆಯೆರೆದುಕೊಟ್ಟು ಕೈ ತೊಳೆದು ಕೊಳ್ತಿದ್ದರು. ಆಗ ಹೆಣ್ಣಿಗೆ ಆಯ್ಕೆ ಇರಲಿಲ್ಲ..! ಅಪ್ಪಯ್ಯ ಮಂಡಿ ಗೆ ಅಡಿಕೆ ವ್ಯಾಪಾರ ಕ್ಕೆ ಹೋದಾಗ ಯಾರೋ ಪರಿಚಿತರ ಮೂಲಕ ಗಂಡಿನ ಸಂಭಂದ ಮಾತನಾಡಿ ಒಪ್ಪಿಕೊಂಡು ಬರ್ತಿದ್ದರು.
ಗೋತ್ರ ಜಾತಕದ ಗೃಹಕೂಟ ಹೊಂದಿಕೆಯಾದರೆ ಮುಗಿದು ಹೋಗ್ತಿತ್ತು... ವೇವೂ ಲೆಂಕ್ತೂ ಯಾವುದೂ ಮ್ಯಾಚ್ ಆಗಬೇಕೆಂದಿರಲಿಲ್ಲ..!! "ಅಂತರ ಪಟ" ದ ಪರದೆ ಸರಿದಮೇಲೇ ಹುಡುಗಿ ಹುಡುಗ ನ ಮುಖ ನೋಡಬೇಕಿತ್ತು.!
ಇಂದು ಆ ಕಾಲದ ಹಿರಿಯರು ಈ ಸ್ವಾತಂತ್ರ್ಯ ದ ಹೆಸರಿನ " ಸ್ವೇಚ್ಚೆ" ಯನ್ನು ನೋಡಿ ಸುಸ್ತಾಗಿಹೋಗಿದ್ದಾರೆ.
ಅಂದು ಕಣ್ಣೀರು ಹಾಕುತ್ತಿದ್ದ ಹೆಣ್ಣು ಮಕ್ಕಳ ಪೋಷಕ ರ ಜಾಗಕ್ಕೆ ಇಂದು ಗಂಡು ಹೆತ್ತವರು ಬಂದು ನಿಂತಿದ್ದಾರೆ.
ಈ ಪ್ರಕೃತಿ ಯಲ್ಲಿ ಒಂದು ಅಗೋಚರ ಶಕ್ತಿ ಯಿದೆ.ಶೋಷಣೆ ಯ ಚಕ್ರ ತಿರುವುಮುರಿವು ಆಗ್ತಲೇ ಇರುತ್ತದೆ.
ಇಂದು ಹೊಡೆದವ ನಾಳೆ ಮರಳಿ ಪೆಟ್ಟು ತಿಂದೇ ತಿಂತಾನೆ...!!!
ಕೆಲವೊಮ್ಮೆ ನಾವು ಅನುಭವಿಸುವ ಶಿಕ್ಷೆ ಜನ್ಮಾಂತರಕ್ಕೂ ವರ್ಗಾವಣೆ ಆಗ ಬಹುದು. ಹಾಗಾಗದಿರಬೇಕಾದರೆ ಮನುಷ್ಯ ಹಣ ಅಧಿಕಾರ ಯಶಸ್ಸು ಇದ್ದಾಗಲೂ "ನೆಣ" ವನ್ನು ತಲೆಗೇರಿಸಿಕೊಳ್ಳದೇ ಬಾಳಬೇಕು.
ಅಲ್ಲಿ ನೆಡೆಯುತ್ತಿರುವುದು ಕಲ್ಲುಗೊಟರು ಊರಿನ ರಂಗನಾಥ ಭಟ್ರ ಕೊನೆಯ ಏಕೈಕ ಪುತ್ರ ವಿನಾಯಕ ಭಟ್ರ ಮದುವೆ.
ರಂಗನಾಥ ಭಟ್ರು ಒಂದು ಜೀವಂತ ಅಡಕೆ ಕೃಷಿ ಸಂಶೋಧನಾ ಕೇಂದ್ರ.!
ಅದು ಹುಟ್ಟಿದ ಮನೆಯೋ ಸತ್ತ ಮನೆಯೋ ... ಅಡಕೆ ಕೃಷಿ ಕೃಷಿ ಕೃಷಿ ಮಾತ್ರ ಅವರ ಪರಿದಿ.. ಅವರ ಮಾತು ಕತೆ ಚೆರ್ಚೆ ಎಲ್ಲಾ ಅಡಿಕೆ ಕೃಷಿ ಮಾತ್ರವಾಗಿತ್ತು. ಅದರಾಚೆ ಅವರಿಗೆ ಯಾವ ಪ್ರಪಂಚ ವೂ ಇರಲಿಲ್ಲ..!!
ಒಂದು ಸಾರಿ ಸಂಕದಕೊಳ್ಳಿ ಸತೀಶ್ ಭಟ್ರ ಹೆಣ ಹೊತ್ತುಕೊಂಡು ದೂರದ ಕಟ್ಟಿನಮಡಿಕೆ ಸ್ಮಶಾನ ಕ್ಕೆ ಹೋಗುವಾಗ ಒಂದು ಬದಿ ಯಲ್ಲಿ ಹೆಣದ ಚಟ್ಟಕ್ಕೆ ಹೆಗಲು ಕೊಟ್ಟ ರಂಗನಾಥ ಭಟ್ರು ಪಕ್ಕದಲ್ಲಿ ಹೆಗಲು ಕೊಟ್ಟಿದ್ದ ಕಾರೆಮಕ್ಕಿ ಅನಂತ ಮೂರ್ತಿಗಳಿಗೆ ..."'ಅನಂತ ಒಂದು ಚೆನ್ನಾಗಿರೊ ಅಡಕೆ ಮರದಲ್ಲಿ ಎಷ್ಟು ಸೋಗೆ ಹೆಡಲು (ಸೋಗೆ - ಹೆರೆ- ಸೊಪ್ಪಿನ ಗುಂಪು) ಇರುತ್ತದೋ....,? " ಅಂತ ಕೇಳಿದ್ದರಂತೆ.ಹೆಣ ಹೊರುವಗಲೂ ಕೃಷಿಯದ್ದೆ ಚಿಂತೆ ಚೆರ್ಚೆ..!! ಅಷ್ಟು ಕೃಷಿಯಲ್ಲೇ ಒಳಗೊಂಡವರು ಕಲ್ಲುಗೊಟರು ರಂಗನಾಥ ಭಟ್ರು.
ನಾಲ್ಕು ಹೆಣ್ಣು ಒಂದು ಗಂಡಿನ ಪಾಂಡವರ ಕುಟುಂಬ ಭಟ್ರದ್ದು. ಹೆಣ್ಣು ಮಕ್ಕಳ ಮದುವೆ ಯಶಸ್ವಿಯಾಗಿ ಮಾಡಿ ಮುಗಿಸಿದ ಭಟ್ರಿಗೆ ಮಗ ವಿನಾಯಕ ನ ಮದುವೆ ಮಾಡುವಾಗ
ಆಕಸ್ಮಿಕವಾಗಿ ಎಡವಿಬಿಟ್ಟರು. ವಿನಾಯಕ ಕೊಂಚ ಪಾಪದವ. ಭಟ್ರ ಮಿಲಿಟರಿ ಸಿಸ್ಟಮ್ ನ ಕೃಷಿ ತರಬೇತಿ ಯಲ್ಲಿ ವಿನಾಯಕ ಮೊದಲೇ ಮೆತ್ತ ಗಿದ್ದವ ಪೂರಾ ಮೆತ್ತಗಾಗಿಹೋಗಿದ್ದ.
ಸಮಾಜ ದ ದೃಷ್ಟಿಯಿಂದ "ದಡ್ಡ" ಮಂಕು ಅಂತ ಅಪಖ್ಯಾತಿ ಗೊಳಗಾಗಿ ಎಲ್ಲೇ ಮದುವೆ ಸಂಭಂದ ಬಂದರೂ ಕೈ ತಪ್ಪಿ ಹೋಗುತ್ತಿತ್ತು.ಅಂತೂ ಇಂತೂ ಭಟ್ರು ಯಾರುಯಾರೋ ಬ್ರೋಕರ್ ಗಳ ಹಿಡಿದು ಸೌತ್ ಕೆನರಾದ ಜೀಯೋಡಿ ಯ ಒಂದು ಹುಡುಗಿ ಯನ್ನು ಗೊತ್ತು ಮಾಡಿದರು. ಹುಡುಗಿ ಗೆ ಒಬ್ಬ ಅಣ್ಣ ಮಾತ್ರ ಇದ್ದಿದ್ದು... ಮದುವೆ ಆದರೆ ಸಾಕಾಗಿದ್ದ ಭಟ್ರು ಹೆಚ್ಚೇನೂ ವಿಚಾರಿಸದೆ ಮದುವೆ ಮಾಡೇ ಬಿಟ್ಟರು.
ಹುಡುಗಿ ಮದುವೆ ಯ ನಂತರ ತನ್ನ ರಾಕ್ಷಸ ಕುರೂಪ ದರ್ಶನ ಮಾಡಿಸತೊಡಗಿದ ಳು. ಒಂದಿನನೂ ಅವಳು ಅಕ್ಕಿ ಸೇರು ಒದ್ದು ಒಳಗೆ ಬಂದಮೇಲೆ ಮನೆಯಲ್ಲಿ ನೆಮ್ಮದಿಯಿಲ್ಲದಂತೆ ನೆಡೆದುಕೊಂಡಳು.
ಒಂದಿನ ಹುಡುಗಿ ತೀರ್ಥಹಳ್ಳಿ ಯ ಪೋಲೀಸ್ ಸ್ಟೇಷನ್ ನಲ್ಲಿ ನಂಗೆ ಅತ್ತೆ ಮಾವ ಗಂಡ ಹೊಡೆದ್ರು.... ವರಧಕ್ಷಿಣೆ ಗೆ ಪೀಡಿಸಿದರು ಅಂತ ಕಂಪ್ಲೇಂಟ್ ಕೊಟ್ಟಳು. ಲಕ್ಷಾದೀಶ ಭಟ್ರು ಕಾಲಿ ಕೈ ಸೊಸೆಗೆ ವರಧಕ್ಷಿಣೆ ಹಣಕ್ಕೆ ಪೀಡಿಸು ತ್ತಾರೆಂದರೆ ಗೊತ್ತಿದ್ದವರು ಯಾರೂ ನಂಬೊಲ್ಲ...! ಆದರೆ ತೀರ್ಥಹಳ್ಳಿ ಪೋಲಿಸ್ ನವರಿಗೇನು ಗೊತ್ತು " ಕಲ್ಲಗೊಟರುಭಟ್ರು "
ಎಷ್ಟು ದೊಡ್ಡ ಸ್ಥಿತಿ ವಂತರೆಂದು...?!
ಪೋಲೀಸ್ ನವರು ಕಂಪ್ಲೇಂಟ್ ಕೊಟ್ಟ ತಕ್ಷಣ ತಡಮಾಡದೇ ರಾತ್ರೋರಾತ್ರಿ ವಿನಾಯಕ ಮತ್ತು ಭಟ್ರನ್ನ ಪೋಲಿಸ್ ಸ್ಟೇಷನ್ ಗೆ ಭಂದನ ಮಾಡಿ ಕರೆತಂದರು.
ಭಟ್ರಿಗಂತೂ ಪಂಚೆಯುಟ್ಟುಕೊಳ್ಳಲೂ ಬಿಡಲಿಲ್ಲ..!! ಡ್ರಾಯರ್ ನಲ್ಲೇ ಸ್ಟೇಷನ್ ಗೆ ಎತ್ತಾಕಿಕೊಂಡು ಬಂದಿದ್ದರು.
ಆ ದಿನ ರಾತ್ರಿ ಕಲ್ಲಗೊಟರು ಊರಿನ ಪರೋಪಕಾರಿ ಸುಬ್ಬಣ್ಣ ನಿಗೆ ಈ ವಿಷಯ ತಿಳಿದ ತಕ್ಷಣ ತನ್ನ "ಎಂ80" ಬೈಕ್ ಏರಿ "ತೆಮ್ಮೆ ಮನೆ , ಕೆದ್ಲುಗುಡ್ಡೆ, ಹೆಬ್ಬಾಗಿಲು, ಕೊಕ್ಕೋಡು, ಹುರಳಿ ಊರಿನ ಕಡೆಯ ಎಲ್ಲಾ ಪ್ರಮುಖರನ್ನೆಲ್ಲ ಬೇಟಿ ಮಾಡಿ ಬೆಳಿಗ್ಗೆ ಫಸ್ಟ್ ಬಸ್ ಪಾಪ್ಯುಲರ್ ಬಸ್ ಗೆ ಎಲ್ರನ್ನೂ ಹತ್ತಿಸಿ ಗುರಾಜ ಬಸ್ಸನ್ನೇ ಕಲ್ಯಾಣ ಮಂದಿರಕ್ಕೆ ದಿಬ್ಬಣ ತಗೊಂಡೋದ ಹಾಗೆ ಪೋಲಿಸ್ ಸ್ಟೇಷನ್ ಗೆ ಕೊಂಡೊಯ್ದು ಸರ್ಕಲ್ ಇನ್ಸ್ಪೆಕ್ಟರ್ ನ ಬೇಟಿ ಮಾಡಿಸಿದ...
ಕೊಕ್ಕೋಡು ತಮ್ಮಯ್ಯ , ಹೆಬ್ಬಾಗಿಲು ಅನಂತಣ್ಣನ ಲಾ ಪಾಯಿಂಟ್ ಗೆ ಸರ್ಕಲ್ಲೇ ಅಲ್ಲಾಡಿ ಹೋದರು. ಹುಡುಗಿ ಅಣ್ಣ ಅನ್ನೋನಿಗೆ ಊರ ಪ್ರಮುಖ ರ
ಎದುರೇ ಸರ್ಕಲ್ ಇನ್ಸೆಪೆಕ್ಟರ್ ಎರಡು ಬಿಟ್ಟಾಗ "ನಾನು ಹುಡುಗಿ ಅಣ್ಣ ಅಲ್ಲ... ಗಂಡ, ನಮಗೆ ಒಂದು ಮಗೂನೂ ಇದೆ. ದುಡ್ಡಿನಾಸೆಗೆ ಈ ಮದುವೆ ನಾಟಕ ಮಾಡಿದ್ವಿ ನಮ್ಮ ಬಿಟ್ಟುಬಿಡಿ ಅಂದ."
ಆದರೆ ಕಾನೂನು ಪ್ರಕಾರ ಡೈವರ್ಸ್ ಆಗಿ ಕೈಗೆ ಪೇಪರ್ ಸಿಗಲು ಬರ್ತಿ ಹತ್ತು ವರ್ಷ ಆಯಿತು.
ಈ ಘಟನೆ ಯ ನಂತರ ರಂಗನಾಥ ಭಟ್ರು ಪೂರ್ತಿ ಕುಗ್ಗಿಹೋದರು...
ಒಂದೇ ವರ್ಷ ಕ್ಕೆ ಹೃದಯಾಘಾತದಿಂದ ಭಟ್ರು ತೀರಿ ಕೊಂಡರು.
ಡೈವರ್ಸ್ ಪೇಪರ್ ಕೈಗೆ ಬಂದಮೇಲೆ ವಿನಾಯಕ ಭಟ್ರ ತಾಯಿ ಶಾರದಮ್ಮ ಮತ್ತೆ ಹುಡುಗಿ ಹುಡುಕಿ ಹುಡುಕಿ ಕೊನೆಗೆ ಈ ಶಿರಸಿ ಮೂಲದ ಎರಡು ಬಾರಿ ಮದುವೆ ಆಗಿ ಎರಡೂ ಬಾರಿ ಗಂಡಂದಿರ ಕಳೆದುಕೊಂಡ ದುರ್ದೈವಿ ವಿದವೆ ಹುಡುಗಿ ಸಿಕ್ಕಿದಳು. ಈಗ ಅದೇ ಹುಡುಗಿಯ ಜೊತೆಗೆ ಮೇಲುಸುಂಕ ಅಮ್ಮ ನವರ ದೇವಸ್ಥಾನದಲ್ಲಿ ವಿನಾಯಕ ನ ಜೊತೆಗೆ ಮದುವೆ ನೆಡಿತಿರೋದು.
ಸ್ವಲ್ಪ ಬಲದೇ ಕೈಯಿಂದ ಆ ಕೌಳಿಗೆ ಸೌಂಟಿನಿಂದ ಹುಡುಗನ ಕೈಗೆ ನೀರಾ ಕಮ್ಮ... ಎರಡು ಮದುವೆ ಆದ ಅನುಭವಿದೆ ನಿನಗೆ... ಬಲದೇ ಕೈಯಲ್ಲಿ ಸೌಂಟು ತಗೋ .... ಎಂದು ವ್ಯಂಗ್ಯ ಮಾಡಿ ಹೇಳಿದ್ರು ಮದುವೆ ಮಾಡಿಸೋ ಭಟ್ರು...
ಹುಡುಗಿ ಸೌಜನ್ಯ ಹೆಗ್ಡೆಗೆ ಮದುವೆ ಸಂಭ್ರಮ ಆಸಕ್ತಿ ಎಲ್ಲಿಂದ ಬರುತ್ತದೆ...? ಯಾಂತ್ರಿಕವಾಗಿ ಪುರೋಹಿತರು ಹೇಳಿದಂತೆ ಶಾಸ್ತ್ರ ಮಾಡ್ತಿದ್ದಳು. ತುಂಬಾ ಜನರಿಗೆ ಅದೃಷ್ಟ ವೋ ಯಥೋಚಿತ ಬುದ್ದಿವಂತಿಕೆಯೋ ಕಾಲ ಕಾಲಕ್ಕೆ ತಕ್ಕಂತೆ ಮದುವೆ ಮಕ್ಕಳು ಇತ್ಯಾದಿಗಳು ಸಲೀಸಾಗಿ ಆಗಿರುತ್ತವೆ. ಅಂತಹ ಕೆಲ ಜನರಿಗೆ ಹೀಗೆ ಮದುವೆ ಆಗದೆ ಉಳಿದ ಇತರರನ್ನು ಕಂಡರೆ ಒಂಥರ ತಾತ್ಸಾರ... !!!
"ಅಪಘಾತ" ಆಕಸ್ಮಿಕವಾಗಿಯೇ ಆಗಿರುತ್ತದೆ. ಅದಕ್ಕೆ ಯೋಗ ವಿಧಿ ಅಂತಾನು ಅಂದಕೋಬೌದು...
ಕಾಲ ಚಕ್ರ ತಿರುಗುತ್ತಾ ಇರುತ್ತದೆ...
ಇಂದು ಅವರು ನಾಳೆ ನಾವೋ ಅಥವಾ ನಮ್ಮ ಮಕ್ಕಳೋ ಮೊಮ್ಮಕ್ಕಳೋ ಆ ಚಕ್ರ ದ ತಳದಲ್ಲಿ ರುತ್ತೇವೆ.... ಯಾರೂ ಈ ಚಕ್ರ ತಿರುಗುವುದರಿಂದ ತಪ್ಪಿ ಸಿಕೊಂಡವರಿಲ್ಲ...!
ಅವಳು ಕೆಳಗೆ ಆ ಹಿರಿಯರ ತೆಕ್ಕೆಯಲ್ಲಿ ಕೂತು ದೈನ್ಯವಾಗಿ ತನ್ನನ್ನೇ ತದೇಕಚಿತ್ತವಾಗಿ ನೋಡುತ್ತಾ ಕೂತ ತನ್ನ ಮಗ ಸಾಹಿತ್ಯ ನ ಕಡೆಗೇ ನೋಡ್ತಿದ್ದಾಳೆ. ಆ ಮಗುವಿನ ಭವಿಷ್ಯ ಕ್ಕಾಗಿ ತಾನೀಗ ಈ ಮದುವೆ ಯ ತಾಳಿ ಸರದ ಗಂಟಿಗೆ ಕುತ್ತಿಗೆ ಯೊಡ್ಡಬೇಕಿದೆ ಅಂದುಕೊಂಡಳು. ಮುಂದೆ ಆ ಮನೆಯಲ್ಲಿ ತನಗೂ ತನ್ನ ಮಗನಿಗೂ ಹೇಗಿನ ಭವಿಷ್ಯ ಇದೆಯೋ ಎಂಬ ಆತಂಕ ಕಾಡತೊಡಗಿತ್ತು ಸೌಜನ್ಯ ಳಿಗೆ.
ಸೌಜನ್ಯ ಹೆಗ್ಡೆಗೆ ಕಾಲೇಜಿಗೆ ಹೋಗುವಾಗ ವಯೋ ಸಹಜವಾಗಿ ಹುಟ್ಟಿದ " ಪ್ರೀತಿ" ಒಡಲಲ್ಲಿ ಮೊಳಕೆಯೊಡೆದ ಪರಿಣಾಮವಾಗಿ ಮದುವೆ ಆಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿತ್ತು. .... ಆ ಹುಡುಗ ಹಳೆತೋಟ ಗಣಪತಿ ಹೆಗ್ಗಡೆ ಪುತ್ರ. ಸಾಕಷ್ಟು ಶ್ರೀಮಂತ ರು ಅವರು.ಹುಡುಗ ನೋಡಲು ಚಂದಾನೂ ಇದ್ದ . ಶಿರಸಿ ಯಲ್ಲಿ ಕಾಲೇಜು ಓದುವಾಗ ಲವ್ ಆತು.
ಸೌಜನ್ಯಳೂ ಚೆನ್ನಾಗಿದ್ದಳು. ಆದರೆ ಸೌಜನ್ಯ ಗೆ ಅಜ್ಜಿ ಬಿಟ್ಟರೆ ಬೇರಾರು ಇರಲಿಲ್ಲ. ಶಿರಸಿ ಪ್ಯಾಟೆಯಲ್ಲಿ ನಾಲ್ಕು ಜನ ರ ಮನೆಯಲ್ಲಿ ಅಡುಗೆ ಅದು ಇದೂ ಮಾಡಿಕೊಂಡು ಮೊಮ್ಮಗಳ ಸಾಕಿ ಕೊಂಡಿದ್ದಳು ಅಜ್ಜಿ.
ಹುಡುಗಿ ಸೌಜನ್ಯ ಹೆಗ್ಡೆ ಹುಟ್ಟುವಾಗ ಹೆರಿಗೆಯಲ್ಲಿ ದುರಂತ ಸಾವಾಗಿ ತಾಯಿ ಸತ್ತು ಅಜ್ಜಿ ಮಡಲಿಗೆ ಬಿದ್ದವಳು...
ದುರಂತ ಏನೆಂದರೆ ಈ ಸೌಜನ್ಯ ಹೆಗ್ಡೆ ಯ ಹುಟ್ಟೇ ಅಕ್ರಮ..!. ಆ ಅಕ್ರಮ ಸಂತಾನ ಸೌಜನ್ಯ ಳ ಹುಟ್ಟಿ ಗೆ ಕಾರಣ ಇದೇ ಹುಡುಗ ನ ತಂದೆ ಹಳೆತೋಟ ಗಣಪತಿ ಹೆಗ್ಡೆ....!!!
ಸಂಭಂದ ದ ಪ್ರಕಾರ ಸೌಜನ್ಯ ಮತ್ತು ಹೆಗ್ಡೆ ಮಗ ಅಣ್ಣ ತಂಗಿ ಯಾಗ್ತಾರೆ...!!
ಅಣ್ಣ ತಂಗಿ ಮದುವೆ ಎಲ್ಲಿಯಾದರೂ ನೆಡೆಯಲು ಸಾದ್ಯವ.?! ಇದ್ಯಾವುದೂ ಗೊತ್ತಿಲ್ಲದ ಎಳೆ ಹುಡುಗರು ಲವ್ ಮಾಡಿ ಆ ಲವ್ ಗೊಂದು "ಆಕಾರವನ್ನೂ" ಕೊಟ್ಟು ಆ ಪ್ರೇಮ ಸಂಬಂಧ ವನ್ನು "ಗಟ್ಟಿ" ಮಾಡಿಕೊಳ್ಳುವ ಪ್ರಯತ್ನ ದಲ್ಲಿ ದ್ದಾಗ ಈ ವಿಷಯ ಹಿರಿಯ ಹೆಗ್ಡೆಯರಿಗೆ ಗೊತ್ತಾಗುವ ಹೆಗ್ಡೆರು ಅಜ್ಜಿ ಮನೆಗೆ ಬಂದರು.
ಕೊನೆಗೆ ಹೆಗ್ಡೆ ಯರೂ ಅಜ್ಜಿ ಅನೇಕ ಸುತ್ತಿನ ಮಾತುಕತೆ ನೆಡೆಸಿ ಹುಡುಗ ಹುಡುಗಿ ನ ಸರಿ ಮಾಡಿ, ಆಣೆ ಭಾಷೆ ಹಾಕಿಸಿ ಒಪ್ಪಸಿ ಸಿದ್ದಾಪುರ ಸಮೀಪದ ಪಾರ್ಸಿಕಟ್ಟದ ಮತ್ತೊಬ್ಬ ಶ್ರೀಮಂತ ಹೆಗ್ಡೆ ಸುಪುತ್ರ ನಿಗೆ ದಾರೆ ಎರೆದು ದಾಟಿ ಸಿಬಿಟ್ಟರು . ಮದುವೆ ಹೊತ್ತಿಗೇ ಆ ಹುಡುಗ ಸಸೂತ್ರ ಆರೋಗ್ಯ ವಂತನಾಗಿರಲಿಲ್ಲ.
ಶ್ರೀ ಮಂತರ ಆಸೆ.... ತಾಯಿ ಮಗನಿಗೆ ಮದುವೆ ಮಾಡಲೇಬೇಕು ಎಂಬ ಹಠ ಕ್ಕೆ ಆದ ಮದುವೆ ಅದು.ಈ ಹುಡುಗಿ ಕಾಂಪ್ಲಿಕೇಟು ಹಾಗಾಗಿ ಸಲೀಸಾಗಿ ಮದುವೆ ನೂ ಆತು..ಕೆಲವೇ ತಿಂಗಳಲ್ಲಿ ಮಗ ಸಾಹಿತ್ಯ ಹೆಗ್ಡೆನೂ ಹುಟ್ಟಿದ. ಮತ್ತೆ ಕೆಲ ದಿನಗಳಲ್ಲಿ ಅಪ್ಪ ನನ್ನೂ ಕಳೆದುಕೊಂಡ. ಕೂಡಲೇ ಅಲರ್ಟ್ ಅದ ಪಾರ್ಸಿಕಟ್ಟಾ ಕುಟುಂಬದ ಹೈ ಕಮಾಂಡು ಸೌಜನ್ಯನನ್ನು ಮಗ ನ ಸಹಿತ ಮೂರು ಕಾಸೂ ಕೊಡದೇ ..
"ನೀ ಮದುವೆ ಗೆ ಮುಂಚೆನೇ ಬಸುರಾಗಿ ನಮ್ಮ ಕುಟುಂಬಕ್ಕೆ ಮೋಸ ಮಾಡಿ ದವಳು ಅಂತ ನಿನ್ನ ಮೇಲೇನೇ ಕೇಸ್
ಹಾಕ್ತೀವಿ "ಅಂತ ಹೇಳಿ ಹೆದರಸಿ ಅಜ್ಜಿ ಯ ಬಳಿಗೇ ಸೌಜನ್ಯ ಮತ್ತು ಮಗ ಸಾಹಿತ್ಯ ನನ್ನು ವಾಪಾಸು ಕಳಿಸಿದರು.
ಅದು ಮೊದಲ ವೈದವ್ಯ ಮತ್ತು ಎರಡನೇ ಸಂಭಂದ ದ ವೈಪಲ್ಯ...!!
ಪುಟ್ಟ ಮಗು ಮತ್ತು ಸೌಜನ್ಯ ಳ ಜೊತೆಗೆ ಅಜ್ಜಿ.. ಜೀವನ ನೆಡೆಸೋದು ಕಷ್ಟ ಆಯಿತು. ಎಲ್ಲದಕ್ಕೂ ಕಾನೂನು ಇದೆ... ಆದರೆ ಅದೇ ಕಾನೂನು ಬಡವರಿಗೆ ಶ್ರೀಮಂತ ರ ದೌರ್ಜನ್ಯ ದಿಂದ ನ್ಯಾಯ ಕೊಡಿಸುವಾಗ ಆ ಕಾನೂನು ಹಾವಿನಂತೆ ಬಳುಕಿ ಯಾವ ನ್ಯಾಯವೂ ಕೊಡದೇ ತಪ್ಪಿಸಿಕೊಂಡು ಬಿಡುತ್ತದೆ..!.
ಕಾನೂನು ನಮ್ಮ ದೇಶದಲ್ಲಿ ಬಡವರನ್ನು ರಕ್ಷಣೆ ಮಾಡೋಲ್ಲ....!!
ಏನೋ ನಮ್ಮ ಜನ ಸ್ವಲ್ಪ ದೈವ ದೇವರಿಗೆ ಹೆದರುತಾರೆ ಅದಕ್ಕಾಗಿ ಬಡವರು ಸ್ವಲ್ಪ ಬಚಾವು...
ಅದು ಹೇಗೋ ಯಾವು ಯಾವುದೋ ಮದುವೆ ದಲ್ಲಾಳಿಗಳ ಕೈಗೆ ನತದೃಷ್ಟ ಸೌಜನ್ಯ ಹೆಗ್ಡೆ ಪ್ರೊಫೈಲ್ ಸಿಕ್ಕಿ ಶಿರಸಿ ಯಿಂದ ಕೊಪ್ಪದ ಗಣೇಶ ಹೆಬ್ಬಾರ ಎಂಬ ಹುಡುಗನಿಗೆ ಮದುವೆ ಆಗುವಂತಾಯಿತು. ಹುಡುಗ ಕೊಪ್ಪ ದಲ್ಲಿ ಎಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ಅಂಗಡಿ ಇಟ್ಟುಕೊಂಡಿದ್ದ.ಅಪ್ಪ ಅಮ್ಮನಿಗೆ ಒಬ್ಬನೇ ಮಗ. ಹರಿಹರಪುರ ಸಮೀಪದ ಊರಿನ ಮೂಲದವರು.
ಅಲ್ಲಿ ಕಾರಣಾಂತರಗಳಿಂದ ಜಮೀನು ಮನೆ ಮಾರಿ ಪೇಟೆ ಸೇರಿ ಅಲ್ಲೇ ದೇವಸ್ಥಾನದ ಪೂಜೆ, ಪುನಸ್ಕಾರ ಮಾಡಿಕೊಂಡಿದ್ದರು. ಈಗ ಮಗನ ದುಡಿಮೆಯಲ್ಲಿ ಜೀವನ ಮಾಡ್ತಿದ್ದರು.
ಗಣೇಶ ಹೆಬ್ಬಾರನನ್ನು ಮದುವೆ ಆದ ಮೇಲೆ ಸೌಜನ್ಯ ಳ ಬದುಕು ಒಂದು ಸರಿಯಾದ ದಿಕ್ಕಿನಲ್ಲಿ ಸಾಗಲು ಶುರುವಾಯಿತೆನ್ನುವಾಗ ಒಂದಿನ ರಾತ್ರಿ ಗಣೇಶ ಕೊಗ್ರೆ ಊರಿನ ಬಳಿ ಯಾರೋ ಎಸ್ಟೇಟ್ ನವರ ಮೋಟರ್ ಪಂಪ್ ರಿಪೇರಿ ಮಾಡಿ ಬೈಕ್ ನಲ್ಲಿ ಕೊಗ್ರೆ ಯಿಂದ ಬರುವಾಗ ಎದುರು ಬಂದ ದೊಡ್ಡ ಲಾರಿ ಹೆಡ್ ಲೈಟ್ ಡಿಮ್ ಮಾಡದೇ ಮುಂದಿನ ದಾರಿ ಕಾಣದೇ ರಸ್ತೆ ಪಕ್ಕದ ದೊಡ್ಡ ಕಂದಕದಲ್ಲಿ ಬೈಕ್ ಸಹಿತ ಬಿದ್ದು ಗಣೇಶ ಹೆಬ್ಬಾರ ದುರ್ಮರಣಕ್ಕೀಡಾದ..!!!! ಸೌಜನ್ಯ ಳ ಬದುಕು ಮತ್ತೆ ನಕಾರಾತ್ಮಕತೆಯ ನರಕದ ಕಡೆಗೆ ಸಾಗಿತು...
ಊರಿನಲ್ಲಿದ್ದ ಅಜ್ಜಿ ವಯೋಸಹಜ ಕಾರಣದಿಂದ ತೀರಿಕೊಂಡಿದ್ದಳು..
ಅವಳಿಗೀಗ ಯಾವ ಹತ್ತಿರದ ಸಂಭಂದಿಕರೂ ಇರಲಿಲ್ಲ.!
ಅಪಘಾತ ಪರಿಹಾರ ಇನ್ಸೂರೆನ್ಸ್ ವಗೈರೆಯಿಂದ ಬಂದ ಹಣ ಗಣೇಶನ ಸಾಲಕ್ಕೇ ಸಮವಾಯಿತು...!
ಸೌಜನ್ಯ ಕೊಪ್ಪ ದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಮಗ ಮತ್ತು ವೃದ್ದ ಅತ್ತೆ ಮಾವ ರನ್ನು ಸಾಕುತ್ತಿದ್ದಳು.
ಎಷ್ಟು ದಿನ ಹೀಗೆ ನೆಡೆಯಲು ಸಾದ್ಯ?
ಅತ್ತೆ ಮಾವ ಸೊಸೆಗೆ ಮರು ಮದುವೆ ಮಾಡಲು ಹೊರಟರು.
ಸೊಸೆಗೆ ತನಗಾಗಿ ವೃದ್ಧ ಅತ್ತೆ ಮಾವ ರನ್ನು ಅಸಾಹಯಕವಾಗಿ ಬಿಟ್ಟು ಯಾರನ್ನೋ ಮದುವೆ ಮಾಡಿಕೊಂಡು ಹೋಗಲು ಇಷ್ಟಪಡಲಿಲ್ಲ. ಅವಳಿಗೆ ಆ ಮನೆಯ ಪರಿಸ್ಥಿತಿ ಗೊತ್ತಿತ್ತು. ಅವರೂ ತನ್ನಂತೇ ದಿಕ್ಕಿಲ್ಲದ ಅನಾಥ ರು ಅಂತ ಅರಿವಿತ್ತು. ಹಾಗಾಗಿ ಯಾರೇ ಮದುವೆ ಆಗ್ತಿಯಾ ಅಂದರೂ ಮನಸು ಮಾಡ್ತಿರಲಿಲ್ಲ. ಅಷ್ಟು ದೊಡ್ಡ ಗುಣದ ಹುಡುಗಿ ಸೌಜನ್ಯ.
ಒಂದಿನ ಮಾವ ನಾಗರಾಜ ಹೆಬ್ಬಾರ್ರು ಸೊಸೆ ಕೂರಿಸಿಕೊಂಡು "ನೋಡು ಸೌಜನ್ಯ ನೀನಿನ್ನೂ ಚಿಕ್ಕ ಹುಡುಗಿ..
ನೀನು ಈ ಚಿಕ್ಕ ವಯಸ್ಸಿನಲ್ಲೇ ವೈದವ್ಯ ಅನುಭವಿಸುತ್ತಾ ಕೂರೋದು ಬೇಡ.
ನಮಗಾಗಿ ನೀನು ನಿನ್ನ ಭವಿಷ್ಯ ಆ ಮಗುವಿನ ಭವಿಷ್ಯ ಹಾಳು ಮಾಡು ವುದು ಬೇಡ. ನಿನಗೆ ಸೂಕ್ತ ಹುಡುಗ ನನ್ನು ನಾನು ಹುಡುಕುತ್ತೇನೆ. ನೀನು ಮದುವೆ ಆಗಲೇಬೇಕು. ನಾವು
ಕುದುರೆಗುಂಡಿ ಊರಿನ ಸಮೀಪದಲ್ಲಿ ಇತ್ತೀಚೆಗೆ ಆರಂಭವಾಗಿರುವ "ನಮ್ಮನೆ" ಆಶ್ರಮಕ್ಕೆ ಹೋಗಿ ಸೇರ್ತಿವಿ. ಅಲ್ಲಿ ನಮ್ಮಂಥ ದಿಕ್ಕಿಲ್ಲದವರು ಅನಾಥ ವೃದ್ದರನ್ನು ನೋಡಿಕೊಳ್ಳುವ ವ್ಯವಸ್ಥೆ ಇದೆ. ನಾವು ಗಂಡ ಹೆಂಡತಿ ಅಲ್ಲಿಗೆ ಹೋಗಿ ಇರ್ತಿವಿ.ನಾವು ಬಡವರು ನಮಗೆ ನೋಡಿಕೊಳ್ಳುವ ರಿಲ್ಲ ಸಹಜ ಅಲ್ವಾ...!? ಆದರೆ ಅಲ್ಲಿಗೆ
ತುಂಬಾ ಅನುಕೂಲಸ್ತರ ಮಕ್ಕಳೇ ತಮ್ಮ ವೃದ್ದ ತಂದೆ ತಾಯಿ ಯರನ್ನು ಬೀದಿಗೆ ನಾಯಿ ಮರಿ ಬೆಕ್ಕಿನ ಮರಿ ತಂದು ಬಿಟ್ಟಂತೆ ಆಶ್ರಮಕ್ಕೆ ತಂದು ಬಿಟ್ಟೋಗ್ತಾರೆ....! ನಮ್ಮದೇನು ಮಹಾ?
ನಮ್ಮದು ಅನಿವಾರ್ಯ.. ನಮಗಾಗಿ ನೀನು ಜೀವನ ಹಾಳು ಮಾಡಿಕೊಳ್ಳೋ ದು ಬೇಡ...!!
ನಿನಗೆ ಒಂದು ಒಳ್ಳೆಯ ಮನೆಯ ಸಂಭಂದ ವನ್ನೇ ನಾನೇ ಗೊತ್ತು ಮಾಡ್ತೀನಿ ಅಂತ ಹೇಳಿ ಸೌಜನ್ಯ ಳ ಒಪ್ಪಿಸಿದರು.
ಶಿವಮೊಗ್ಗ ದ ಸುಮತಿ ಎಂಬುವವರ
"ಸುಮಧುರ ಸಂಗಮ" ಮದುವೆ ಬ್ಯೂರೋ ಮೂಲಕ ಈ ಕಲ್ಲುಗೊಟರು ವಿನಾಯಕ ನ ಸಂಭಂದವನ್ನು ಹೆಬ್ಬಾರ್ರು ಹುಡುಕಿ ತಂದು ಈ ಮದುವೆ ಆದದ್ದು.
ಕ್ಷಣ ಕ್ಷಣಕ್ಕೂ ಸೌಜನ್ಯ ಳಿಗೆ ತನ್ನ ಬಳಿ ಯೇ ಬರಬೇಕು ಜೊತೆಗೇ ಕೂರಬೇಕು ಎಂದು ರಚ್ಚೆ ಹಿಡಿಯುವ ಮಗ ಸಾಹಿತ್ಯ ನದ್ದೇ ಚಿಂತೆ ಕಾಡತೊಡಗಿತು.
ಅತ್ತೆ ಮಾವ ಮದುವೆ ನಂತರ ಕುದುರೆ ಗುಂಡಿಯ" ನಮ್ಮನೆ" ವೃದ್ದಾಶ್ರಮ ಕ್ಕೆ ತರೆಳುತ್ತಾರೆ. ಅವರನ್ನು ಬಿಟ್ಟರೆ ಇನ್ನು ಳಿದವರೆಲ್ಲರೂ ನನಗೆ ಅಪರಿಚಿತ ರೇ..
ಮಗು ಬೇರೆ ಚಿಕ್ಕದು. ಹೇಗೆ ಅಲ್ಲಿ ನಿಭಾಯಿಸೋದು ಎಂಬ ಆತಂಕ ಮತ್ತೆ ಮತ್ತೆ ಕಾಡಲು ಶುರುವಾಯಿತು.
ಇಲ್ಲಿನ ಯಾರ ಮುಖದಲ್ಲೂ ಮದುವೆಮನೆಯ ಖುಷಿ ಇಲ್ಲ... ಏನೋ ಬಿಗುಮಾನ ...
ಊಟ ದ ಸಮಯದಲ್ಲೂ ಮಗ ಸಾಹಿತ್ಯ ಜೊತೆಗೇ ಕೂತು ಊಟ ಮಾಡಬೇಕೆಂದ. ಗಂಡಿನ ಕಡೆಯವರಿಗೆ ಈ ಮಗುವಿನ ಹಠ ಒಂಥರ ಅನಿಸಿ ಅವರ ಮುಖದಲ್ಲಿ ಆ ಅಸಹನೆ ವ್ಯಕ್ತವಾಯಿತು. ಸೌಜನ್ಯ ಳಿಗೆ ಇದು ಅರಗಿಸಲಾಗದ ಅಸಾಹಯಕತೆ . ಮದುಮಕ್ಕಳ ಊಟ ಸಂಭ್ರಮ ಆಗಲೇ ಇಲ್ಲ..
ಮದುವೆ ದಿಬ್ಬಣದ ಕಾರು ಹೊರಟಿತು.
ಕಾರಿನ ಮುಂಬಾಗದಲ್ಲಿ ನೂತನ ವಧು ವರರು ಕೂರಬೇಕೆಂದಾಗ ಅಮ್ಮ ನ "ಬಾಲ" ಸಾಹಿತ್ಯ ಹೆಗ್ಡೆ ನಾನೂ ಮುಂದೆ ಅಮ್ಮ ನ ಜೊತೆಗೇ ಕೂರ್ತಿನಿ ಅಂತ ಹಠ ಹಿಡಿದ. ಕೊನೆಗೆ ವಿನಾಯಕ ನೇ ಮಗುನ ತೊಡೆ ಮೇಲೆ ಕೂರಿಸಿಕೊಂಡ.ಅದೊಂದು ಸೌಜನ್ಯ ಳ ಪಾಲಿಗೆ ಸಮಾಧಾನಕರ ನೆಡೆಯಾ ಯಿತು.
ತುಂಬಾ ಸರ್ತಿ ಈ ಸೆಕೆಂಡ್ ಮ್ಯಾರೇಜ್ ಗೆ ಕೆಲವರು ಪೂರ್ವ ಸಿದ್ದತೆ ಮಾಡಿಕೊಂಡಿರೋಲ್ಲ. ಹುಡುಗನೋ ಹುಡುಗಿಗೋ ಆ ಕ್ಷಣದಲ್ಲಿ ಮದುವೆ ಆಗಿ ಬಿಡಬೇಕೆಂಬ ಗುರಿಯೊಂದೇ ಇರುತ್ತದೆ.. ಹೀಗೆ
ಅನಿವಾರ್ಯ ಕ್ಕೆ ಮದುವೆ ಆಗುವರು ಇಂತಹ ಪರಿಸ್ಥಿತಿ ಯನ್ನು ಎದುರಿಸಲು ಸಿದ್ದವಾಗಿರದೇ ತಬ್ಬಿಬ್ಬಾಗಿ
ಪರಿತಪಿಸುತ್ತಾರೆ. ಹೇಗೋ ನಿಭಾಯಿಸಿಬಿಡಬಹುದೆಂಬ ಉಡಾಫೆ ಕೆಲವರಿಗೆ. ಇಂತಹ ಮದುವೆ ಗಳು ಪ್ರಯೋಗಿಕ ಜೀವನಕ್ಕೆ ಬಂದಾಗ ಅದರ ದುಷ್ಪರಿಣಾಮ ಗಳು ಮುಖ ಕ್ಕೆ ರಾಚುತ್ತವೆ... ಅದರಲ್ಲೂ ಮೊದಲ ಸಂಭಂದದ ಚಿಕ್ಕ ಪುಟ್ಟ ಮಕ್ಕಳು ಇದ್ದ ರಂತೂ ಮುಗೀತು....
ಮುಂದಿನ ದಿನಗಳಲ್ಲಿ ಈ ಚಿಕ್ಕ ಮಕ್ಕಳೂ ದೊಡ್ಡ "ಸವಾಲಾಗಿ ಬಿಡುತ್ತಾರೆ" . ಈ ಅರಿವು ತುಂಬಾ ಜನ ಈ ತರಹದ ಮದುವೆ ಆಗುವ ವಿವಾಹಾಪೇಕ್ಷಿತರಿಗಿರೋಲ್ಲ...
ಹೀಗೆ ಮದುವೆ ಆಗುವ ಗಂಡು ಮತ್ತು ಹೆಣ್ಣು ಎಷ್ಟು ಹೊಂದಾಣಿಕೆ ಸ್ವಭಾವ ದವರಾದರೂ ಅಷ್ಟು ಒಳಿತು...
ಈ ತರಹದ ಮದುವೆ ಸಂಪೂರ್ಣ ವಾಗಿ ಯಶಸ್ವಿಯಾಗುವುದು ಬಲು ಅಪರೂಪ.ಅದರಲ್ಲೂ ವಿಚ್ಚೇದಿತರು ಗಂಡೋ ಹೆಣ್ಣೋ ಯಾರೇ ಆಗಲಿ ಸಮಾಜದ ದೃಷ್ಟಿಯಿಂದ ಅರ್ಧ ತಪ್ಪಿತಸ್ಥರು. ಇಂತಹ ವಿಚ್ಚೇದಿತರನ್ನು ಮದುವೆಯಾಗುವ ಹುಡುಗ/ಹುಡುಗಿ ಬಹಳಷ್ಟು ಚಿಂತಿಸುತ್ತಾರೆ. ಯಾವುದೇ ಇಂತಹ "ಬಿನ್ನ ಮದುವೆ ಆಗಲು " ಹುಡುಗನೋ ಹುಡುಗಿ ಯೋ ಅಷ್ಟು ಪ್ರೌಢ ವಾಗಿರಬೇಕು... ಯಾರೇ ಮಕ್ಕಳೊಂದಿಗರನ್ನು ಮದುವೆ ಮಾಡಿ ಕೊಳ್ಳಲು ಇಚ್ಚಿಸಿದರೆ ಅಂತಹವರು ಮೊದಲು ಆ ಮೊದಲ ಸಂಬಂಧ ದ ಚಿಕ್ಕ ಮಕ್ಕಳ ಮನಗೆಲ್ಲುವ ಪ್ರಯತ್ನ ಮಾಡಬೇಕು...
ಇಂತಹ ಸಂಬಂಧದ ಮಕ್ಕಳಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಅವು ಮುಂದೆ ಸಮಾಜಕ್ಕೆ "ಕೆಟ್ಟ ಕೊಡುಗೆ" ಗಳಾಗಿ ನಿಸ್ಸಂಶಯವಾಗಿ ಪರಿಣಮಿಸುತ್ತವೆ.
ಇಂತಹ ಮಕ್ಕಳು ತನ್ನ "ಮಲ ತಂದೆ" ಯಿಂದ ಸೂರ್ಯ ಸ್ಪಷ್ಟವಾದ ಯಾವ ತಾರತಮ್ಯ ವೂ ಅಲ್ಲದ ಪ್ರೀತಿಯನ್ನು ಬಯಸುತ್ತವೆ. ಪದೇ ಪದೇ ತನ್ನ ಮಲ ತಂದೆ/ತಾಯಿಯ ಪ್ರೀತಿ ಯ ಸತ್ವತೆಯ ಪರೀಕ್ಷೆ ಮಾಡು ತ್ತವೆ... ಇಂತಹ ಮಕ್ಕಳ ತಂದೆ/ತಾಯಿಯಾಗು ವಂತಹವರು ಮೊದಲು ಈ ಅಗ್ನಿ ಪರೀಕ್ಷೆಯ ಗೆಲ್ಲಲು ಸಿದ್ದವಾಗಬೇಕು. ಮಗುವನ್ನು ನಿರ್ಲಕ್ಷ್ಯ ಮಾಡಿದರೆ ಖಂಡಿತವಾಗಿಯೂ ಆ ಸಂಸಾರ ಯಶಸ್ವಿಯಾಗೋದಿಲ್ಲ....!
ಈಗಿನ ಕಾಲದಲ್ಲಿ ಮೊದಲ ಮದುವೆ ಯೇ ಯಶಸ್ವಿಯಾಗಿ ಹುಡುಗ ಹುಡುಗಿ ಹೊಂದಿಕೊಂಡು ಬಾಳೋದು ಅಚ್ಚರಿ ಎನಿಸುತ್ತದೆ. ಅಂತಹದ್ದರಲ್ಲಿ ಇಂತಹ ಮಕ್ಕಳಿರುವ ತಾಯಿ ಹುಡುಗಿ ಯನ್ನೋ ಮಗ/ಮಗಳೋ ಜೊತೆಗಿರುವ ವಿಧುರ ವಿಚ್ಚೇದಿತನನ್ನೋ ಮದುವೆ ಆಗಿ ಯಶ ಕಾಣೋದು ತುಂಬಾ ಕಷ್ಟಸಾದ್ಯ.
ಇಂತಹ ಸಂದರ್ಭಗಳಲ್ಲಿ ಮಕ್ಕಳು ಇರೋ ಹುಡುಗಿ/ಹುಡುಗ ನ ಮದುವೆ ಆಗಲು ಹುಡುಗ/ಹುಡುಗಿ ಯ ಸಮಸ್ತ ಕುಟುಂಬ ದವರೂ ಸಿದ್ದರಾಗ ಬೇಕಾಗುತ್ತದೆ.
ಹುಡುಗಿ ಬೇಕು ಹುಡುಗಿ ಯ ಮೊದಲ ಸಂಬಂಧ ಮಕ್ಕಳು ಬೇಡ ಎಂದರೆ ಹೇಗೆ...?!!!
ಅಂತೂ ಕಾರು ಕಲ್ಲುಗೊಟರು ಊರಿನ ವರನ ಮನೆಗೆ ತಲುಪಿ ವಧು ಸೌಜನ್ಯ ಮಗ "ಸಾಹಿತ್ಯ "ನ ಜೊತೆಗೆ ಅಕ್ಕಿ ಸೇರು ಒದ್ದು ಹೊಸ್ತಿಲು ದಾಟಿ ಒಳಬಂದಳು.
ದೊಡ್ಡ ಮನೆಯದು....
ಆ ಶ್ರೀಮಂತಿಕೆ ನೋಡಿದವಳು ಒಮ್ಮೆ ಭಯಬೀತಳಾದಳು...
ಯಾರೂ ಹೆಚ್ಚು ಮಾತನಾಡ್ತಿಲ್ಲ..
ಗಂಡ ವಿನಾಯಕ ನಿಗೂ ಮಾತು ಕಡಿಮೆ. ಅತ್ತೆ ಅತ್ತಿಗೆಯರೂ ಮುಗುಮ್... ಎಲ್ರೂ ಅಪರಿಚಿತ ರೇ ಯಾರ ಮುಖದಲ್ಲೂ ನಗು ಇಲ್ಲ...
ಹೇಗಪ್ಪ ನಾ ಈ ಮನೇಲಿ ಮಗನ ಜೊತೆಗೆ ಕಾಲ ಕಳೆ ಯೋದು...?
ಚಿಂತೆ ಹೆಚ್ಚಾಗತೊಡಗಿತು...
ಯಾಕೋ ಕಿಬ್ಬೊಟ್ಟೆ ನೋವಾಗುತೊ ಡಗಿ ಅವಳ ಭಯ ಹೆಚ್ಚಾಗ ತೊಡಗಿತು.
ತನ್ನ ಎದೆಯನ್ನು ಯಾರೋ ರಕ್ಕಸ ಉಗುರಿನ ಕೈನಿಂದ ಬಲವಾಗಿ ಅಮು ಕಿದಂತಾಗ ತೊಡಗಿತು...
ಅಯ್ಯೋ ನಂಗೇನಾಗ್ತಿದೆ...?
ಮುಟ್ಟಿನ ದಿನವಲ್ಲ... ಮುಟ್ಟಿ ಗೆ ಇನ್ನೂ ಹದನೈದು ದಿನವಿದೆ.. ವಾಯ್ದೆಗಿಂತ ಬೇಗ ಯಾಕೆ ಮುಟ್ಟಾಗ್ತಿದೀನಿ...
ಓ ಒತ್ತಡಕ್ಕಾ...?
ಅಮ್ಮ ಮಾರಿಕಾಂಬೆ... ಯಾಕೀ ಅಗ್ನಿ ಪರೀಕ್ಷೆ...!? ನಾಳೆ ಮನೆಯಲ್ಲಿ ಬೀಗರೂಟ ... ನಾಳೆ ಸಂಜೆ ನಾನು ಹೊರಗಾಗಿದ್ದರೂ ಏನೂ ತೊಂದರೆ ಆಗ್ತಿರಲಿಲ್ಲ.... ಮನೆಯವರೆಲ್ಲಾ ನಾಳೆಯ ಕಾರ್ಯಕ್ರಮ ಕ್ಕೆ ಸಿದ್ದವಾಗ್ತಿರೋವಾಗ ಲೇ ನಾನು ಮುಟ್ಟಾದರೆ ನಾಳೆಯ ಕಾರ್ಯಕ್ರಮ ದ ಕಥೆ ಏನು...?
ಮೊದಲೇ ಮುಗುಮ್ಮಾಗಿರುವ ಮನೆ ಯ ಇತರೆ ಸದಸ್ಯರು ಇದಕ್ಕೆ ಹೇಗೆ ಪ್ರತಿ ಕ್ರಯಿಸುತ್ತಾರೆ...?
ಭಯ ಹೆಚ್ಚಾಗಿ ಮುಟ್ಟು ಕನ್ ಫರ್ಮ್ ಆಗತೊಡಗಿತು...
ಅತ್ತೆಯ ಬಳಿ ಹೇಳಿದಾಗ ಅವರು ನೂತನ ಸೊಸೆಯನ್ನು ನುಂಗಿಯೇ ಬಿಡುವಂತೆ ನೋಡಿ ಮತ್ತಷ್ಟು ಮುಖ ಕಣ್ಣು ಉರಿಸಿದರು...
ಎಷ್ಟು ವಿಚಿತ್ರ ವಿದ್ಯಮಾನ ಇದಲ್ವಾ..?
ಒಂದು ಹೆಣ್ಣು ತಾನೇ ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿನ ಪ್ರಕೃತಿ ಸಹಜವಾದ ಕ್ರಿಯೆ ಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳದೇ ನೀನೇಕೆ ಮುಟ್ಟಾದೆ...? ಇವತ್ತೇ ಏಕೆ ಹೊರಗೆ ಕೂತೆ...? ಅಂತ ತಕರಾರು ಮಾಡಿದರೆ ಹೇಗೆ...?! ಮುಟ್ಟನ್ನು ಯಾವತ್ತು ಬೇಕು ಅವತ್ತು ಇಚ್ಚೆಪಟ್ಟು ಮುಟ್ಟಾಗಲು ಸಾದ್ಯವ?!!!
ಈ ವಿಷಯಕ್ಕೆ ಅತ್ತೆ ಅತ್ತಿಗೆ ಯರು ತೀವ್ರ ಸಿಟ್ಟಾಗಿ ಹಾಕಿದ್ದ ಒಡವೆ ವಸ್ತ್ರ ಬಿಚ್ಚಿಸಿ ಆ ದೊಡ್ಡ ಮನೆಯ ಹಿತ್ತಲ ಕಡೆಯ "ಮುಟ್ಟಾದವರ" ಕೋಣೆಗೆ ಶಿಫ್ಟ್ ಮಾಡಿಸಿದರು.
ಅತ್ತೆ ಶಾರದಮ್ಮ ಬಾರಿ ಮಡಿ ಹೆಂಗಸು.
ತಾನೂ ಮತ್ತು ಮಕ್ಕಳನ್ನು ಇದೇ ಮಡಿಯಲ್ಲಿ ಬೆಳಸಿದ್ದರು.
ಅತ್ತೆ ಮನೆಯವರ ನೆಡವಳಿಕೆ ಅಪರಿಚಿತ ವಾತವರಣ, ತನ್ನವರು ಎಂಬುವವರಿಲ್ಲದ ಅಭದ್ರತೆ , ಮಗನ ಭವಿಷ್ಯದ ಚಿಂತೆ, ಗಂಡನ ಮೌನ , ಅತ್ತೆಯ ಸಿಡುಕುತನ ಎಲ್ಲ ಎಲ್ಲ ಒತ್ತಡ ದ ಪಾಲಾಗಿ ಕಿಬ್ಬೊಟ್ಟೆಯ ಕೆಳಗಿನಿಂದ ರಜಸ್ವಲೆಯಾಗಿ ಉಕ್ಕಿ ಬರ ತೊಡಗಿತು.
ಕ್ಷಣ ಕ್ಷಣವೂ ಈ ಸ್ರಾವ ಆಕೆಯ ಮನೋವೇದನೆ, ದೈಹಿಕ ನೋವು ಹೆಚ್ಚು ಮಾಡತೊಡಗಿತು.
ಆಗ ಸಂಜೆ ಏಳಾಗಿತ್ತು. ಆ ಕೋಣೆಯನ್ನು ಮುಟ್ಟಾದವರಿಗೇ ಸಿದ್ದ ಪಡಿಸಲಾಗಿತ್ತು. ಇತ್ತಿಚೆಗೆ ಯಾರೂ ಆ ಮನೆಯಲ್ಲಿ ಮುಟ್ಟಾಗುವವರಿಲ್ಲದೆ ಹಾಳಾದ ಟಿವಿ ಫ್ರಿಜ್ ವಾಷಿಂಗ್ ಮಿಷನ್ ಇತ್ಯಾದಿ ಗಳಿಡುವ ಗುಜರಿ ಕೋಣೆಯಾಗಿತ್ತು.
ಯಾರೋ ಹೆಂಗಸು ಬಂದು ಕಂಬಳಿ ಬೆಡ್ ಷೀಟ್, ನೀರು ಇತ್ಯಾದಿ ಕೊಟ್ಟು ಹೋದರು.
ಗಂಡ ವಿನಾಯಕ ಅಲ್ಲಿಗೆ ಬಂದು ವ್ಯವಸ್ಥೆ ಹೇಗೆದೆ ಎಂದು ವಿಚಾರಿಸಿ ಹೋಗ್ತಾನೆ ಅಂತ ಹೊಸ ಗಂಡನಿ ಗಾಗಿ ಶಬರಿ ತರ ಕಾಯತೊಡಗಿದಳು..
ಮನೆಯಿಂದ ತಂದದ್ದು ಎರೆಡೇ ಎರಡು ಸ್ಯಾನಿಟರಿ ಪ್ಯಾಡ್.. ಇಂದಿನ ಸ್ರಾವ ದ ಪರಿಸ್ಥಿತಿ ನೋಡಿದರೆ ಗಂಟೆಗೊಂದು ಪ್ಯಾಡ್ ಬೇಕೇ ಬೇಕು...
ಎರಡು ಪ್ಯಾಡ್ ಕಾಲಿಯಾದ ಮೇಲೆ ಏನು ಮಾಡಬೇಕು...?
ಕಲ್ಲುಗೊಟರಿನಲ್ಲಿ ಅಡಿಕೆ ತೋಟ ಬಿಟ್ಟರೆ ಯಾವ ಅಂಗಡಿ ಯೂ ಇಲ್ಲ.!
ಅಂಗಡಿ ಬೇಕಾದರೆ ಪಕ್ಕದ " ತೆಮ್ಮೆ ಮನೆ " ಊರಿಗೇ ಹೋಗಬೇಕು.
ಗಂಡ ವಿನಾಯಕ ನ ಹತ್ತಿರ ಪ್ಯಾಡ್ ತಂದು ಕೊಡಲು ಹೇಳಬೇಕು. ಅತ್ತೆ ಪ್ಯಾಡ್ ನ ಕಾಲದವರಲ್ಲ... ಅತ್ತಿಗೆ ಯರು ಮುಖ ಕೊಟ್ಟು ಮಾತನಡೋಲ್ಲ. !! ಏನ್ ಮಾಡಲಿ.?
ಪ್ರತಿ ಕ್ಷಣವೂ ಬಸ್ ನಿಲ್ದಾಣದಲ್ಲಿ ದೂರದಿಂದ ಬರ ಬಹುದಾದ ಬಸ್ ಗೆ ಕಾದಂತೆ ವಿನಾಯಕ ಆಗ ಬಂದಾನೋ ಈಗ ಬಂದಾನೋ ಅಂತ ಕಾಯ ತೊಡಗಿದಳು....
ಎಂಟೂವರೆ ಆಯತು...
ಯಾರೋ ಹೆಂಗಸು ಬಾಳೆಲೆ ತಂದು ತಾಯಿ ಮಗನಿಗೆ ಅನ್ನ ಸಾರು ಹಾಲು ಮಜ್ಜಿಗೆ ಬಡಸಿದರು.
ಊಟ ಆದ ಮೇಲೆ ಗೋ ಮಯ ಕೊಟ್ಟು ಬಾಳೆಲೆ ತೆಗೆಸಿ ಬಳಿಸಿದರು...
ವಿನಾಯಕ ಬರಲೇ ಇಲ್ಲ...
ಒಂದು ಕಡೆ ಆಣೆಕಟ್ಟು ಒಡೆದಂತೆ ಎಂದಿಲ್ಲದ ಸ್ರಾವ ಇನ್ನೊಂದು ಕಡೆ ಮಾಡಿಕೊಂಡು ಬಂದ ಗಂಡ ಒಂದು ಸಾರಿ ಕೂಡ ಮುಖ ತೋರಿಸಿ ಹೋಗಲಿಲ್ಲ ಎಂಬ ದುಃಖ... ಎರಡೂ ಒಟ್ಟೊಟ್ಟಿಗೆ ಒಂದೊಂದು ಕಡೆ ದುಮ್ಮಿಕ್ಕತೊಡಗಿತು....
ಆ ಕೋಣೆಗೆ ಒಂದು ಗೋಡೆ ಅಡ್ಡ ದಲ್ಲಿ ಹಿತ್ತಲಕಡೆ ಹಾಲ್ ಇದೆ....
ಅಲ್ಲಿ ಗೆ ಆಗ ಬಂದ ಇಬ್ಬರು ಗಂಡಸರು
ಪಕ್ಕದ ಕೋಣೆಯಲ್ಲಿ ಮದುಮಗಳು ಇದ್ದಾಳೆಂಬುದ ಅರಿವಿಲ್ಲದೆಯೇ ಈ ಮದುವೆ ಬಗ್ಗೆ ಮಾತನಾಡ ತೊಡಗಿದರು...
ಕೊಪ್ಪ ದ ನಾಗರಾಜ ಹೆಬ್ಬಾರ್ರು ಎಂಥ ಭಂಪರ್ ಲಾಟರಿ ಹೊಡೆದ್ರು ಮಾರಾಯ...
ಒಟ್ಟು ಆರು ಲಕ್ಷ ಕ್ಕೆ ಈ ಹುಡುಗಿ ನ ಇವರಿಗೆ ದಾಟಿಸಿದರಂತೆ. ಆ ಮುದುಕ ಬಾರಿ ಘಾಟಿ ಮಾರಾಯ...
ಅವರು "ನಮ್ಮ ನೆ " ವೃದ್ದಾಶ್ರಮ ಕ್ಕೆ ಸೇರಲು ಐದು ಲಕ್ಷ ಡಿಪಾಸಿಟ್ ಇಡ ಬೇಕಿತ್ತು. ಅವರಿಗೆ ಈ ಕಲ್ಲುಗೊಟರು ಸವಕಾರ್ರು ಮನೆಗೆ ಅರ್ಜೆಂಟ್ " ಸೊಸೆ" ಬೇಕಾದ ಅನಿವಾರ್ಯತೆ ಗೊತ್ತಾಗಿ ಆರು ಲಕ್ಷ ಕ್ಕೆ ಡಿಮ್ಯಾಂಡ್ ಮಾಡಿ ಈ ಮುದುಕಮ್ಮನ ಹತ್ತಿರ ಹಠ ಮಾಡಿ ತಗೊಂಡೇ ಬಿಟ್ಟರು...!!!
"ನಮ್ಮನೆ " ಆಶ್ರಮದಲ್ಲಿ ಹಣ ತೆಗೆದುಕೊಂಡರೂ ಒಳ್ಳೆ ಚೆನ್ನಾಗಿ ನೋಡಕೋತಾರೆ ಮಾರಾಯ.
ಈ ಸೊಸೆ ಒಂದಿನ ದಿಡೀರಾಗಿ ತಾನೇ ಯಾವುದೋ ಹುಡುಗನ್ನ ಹುಡುಕಿಕೊಂಡು ಮದುವೆ ಆಗಿಬಿಟ್ಟರೆ ನಾವು ಅಸಾಹಯಕ ವೃದ್ದರಾಗಿ ಬೀದಿ ಗೆ ಬಿದ್ದುಬಿಡ್ತೀವಿ ಅಂತ ಯೋಚನೆ ಮಾಡಿ ತಾವೇ ಮುಂದಾಗಿ ಸೊಸೆಗೆ ಮದುವೆ ಮಾಡಿ ಉದ್ದರಿಸ್ತೇವೆಂಬ ಪೋಜು ಕೊಟ್ಟು....
ಸೊಸೇನೇ ಭಂಡವಾಳ ಮಾಡಿಕೊಂಡು ಒಳ್ಳೆಯ ವೃದ್ದಾಶ್ರಮ ಸೇರಿ ಸೇಫಾದರಲ್ಲ ಮಾರಾಯ....!? ಹೆಬ್ಬಾರರು ಬಾಳ ಬುದ್ದಿವಂತರಾದರು ..
ಇವರಿಗೂ ಐದಾರು ಲಕ್ಷ ಯಾವ ಲೆಕ್ಕ ದ್ದೂ ಅಲ್ಲ ಬಿಡು.. ಈ ಮೊದ್ದ ದಡ್ಡ ಹುಡುಗ ನ್ನ ಮತ್ಯಾವ ಹುಡುಗಿ ಮದುವೆ ಆಗ್ತಿದ್ಲು...? ಐದು ಲಕ್ಷ ಕ್ಕೆ ಒಂದು ಹೆಣ್ಣು....ಬೆವರು ಹರಿಸುವ ಶ್ರಮವಿಲ್ಲದೇ ಒಂದು ಮಗು..
ಹ್ಹ ಹ್ಹ... ಹೆಚ್ಚೇನಿಲ್ಲ ಬಿಡು ಅಂತ ನಕ್ಕು ವ್ಯಂಗ್ಯವಾಡಿ ಮಾತನಾಡಿ ಹೋದಾಗ ...
ಕೋಣೆಯ ಈಚೆ ಕೇಳಿಸಿಕೊಂಡ ಸೌಜನ್ಯ ತನ್ನ ಮಾಜಿ ಅತ್ತೆ ಮಾವ ರ ದೂರ್ತ ತನಕ್ಕೆ ಮತ್ತಷ್ಟು ಕುಸಿದಳು...
ಅವರು ಅಚೆ ಕಡೆ ಹೋದ ಮೇಲೆ ಇನ್ನೆರಡು ಹಳೆ ಹೆಂಗಸರು ಅಲ್ಲಿ ಬಂದು ಮಾತನಾಡತೊಡಗಿದರು... ಅವರು ಅತ್ತೆ ಶಾರದಮ್ಮ ರ ಅತ್ತಿಗೆಯರು....
ಒಬ್ಬರು... "ಅಕ್ಕ ಅತ್ತಿಗೆಗೆ ನಮ್ಮ ನೆ ಪುಟ್ಟಿನ ಸೊಸೆ ಮಾಡಿಕೋಬೇಕು ಅಂತ ಬಾಳ ಆಸೆ ಇತ್ತು ಮರೇತಿ... ಅತ್ತಿಗೆ ಒಂದಿನ ನಮ್ಮನೆಗೆ ಬಂದು ಬಾಳ ಬಡಿವಾರ ಮಾಡಿ ನಮ್ಮ ತಮ್ಮ ಮಗ ವಿನಾಯಕನ ಮದುವೆ ಮಾಡಿಕೊಳ್ಳಲು ಪುಟ್ಟಿ ನ ಕೇಳಿದ್ರು..
ನಮ್ಮ ಪುಟ್ಟಿ ಈ ಮೊದ್ದುಮಣಿ ನ ಖಂಡಿತವಾಗಿಯೂ ಮದುವೆಯಾಗಲು ಒಪ್ತಿರಲಿಲ್ಲ ಬಿಡು..
ನಂಗೆ ತಂಬಾ ಇಷ್ಟ ಆಗಿದ್ದ , ನಂಗೆ ಬಂದಿದ್ದ ಮೇಲ್ಸಂಕ ಶಂಕರ ನ ಸಂಬಂಧ ವನ್ನು ತಪ್ಪಿಸಿ ತನ್ನ "ತಂಗಿಗೆ" ಮಾಡಿಸಿದ್ದೇ ಅತ್ತಿಗೆ... ನನ್ನ ಕಣ್ಣೀರಿನ ಶಾಪ ಇದು. ಈ ಮಂಕ ನಿಗೆ ಯಾವ ಹುಡುಗಿ ಒಪ್ತಿದ್ದಳು.!?
ಈ ಹುಡುಗಿ ನ ಖರೀದಿ ಮಾಡಿಕೊಂಡು ಬಂದಿಲ್ಲದಿದ್ದರೆ ಇವನಿ ಗೆ ಮದುವೆ ನೇ ಇಲ್ಲವಾಗ್ತಿತ್ತು...
ಇವರಿಗೆ ಎಷ್ಟೇ ಶ್ರೀಮಂತಿಗೆ ಇರಲಿ ಯಾವ ಹುಡುಗಿನಾದರೂ ಸ್ವಲ್ಪ ವೂ ಚುರುಕಿಲ್ಲದ ಹುಡುಗ ನ್ನ ಒಪ್ತಿರಲಿಲ್ಲ ಬಿಡು....
ಈ ಹುಡುಗಿ ದಿಕ್ಕಿಲ್ಲ ದವಳು ಒಪ್ಪಿದಳು. ಈ ಗಾಟಿ ಮುದುಕಿ, ದಡ್ಡ ಗಂಡನ ಕೈಲಿ ಈ ಹುಡುಗಿ ಮುಂದೆ ಏಗೋದು ತುಂಬಾ ಕಷ್ಟ ಇದೆ....
ನೋಡಕ್ಕ ಅದಕ್ಕೆ ಸರಿಯಾಗಿ ಹುಡುಗಿ ಇವತ್ತೇ ಮುಟ್ಟಾಗಿ ಕೂತಿದೆ...
ಹುಡುಗಿ ಎಲ್ಲಿದಾಳೆ ಅಕ್ಕ...!?
"ಎಲ್ಲೋ ಮುಂಚೆ ಕಡೆ ರೂಮಿನಲ್ಲಿ ಇರ ಬೇಕು..."ಅಂದಳು ಅಕ್ಕ.
ಅತ್ತಿಗೆ ತನ್ನ ಹೆಣ್ಣು ಮಕ್ಕಳ ಮನೆಗೆ ಹೋದರೆ ಮುಟ್ಟಾದ ಮಕ್ಕಳ ಕೈಲೇ ಮಾಡಿದ ಅಡುಗೆ ಉಂಡಕಂಡು ಬರ್ತಾಳೆ ಇಲ್ಲಿ ಸೊಸೆನ ಮೂಲೆಲಿ ಕೂರಿಸಿ ಹೆಂಗೆ ಶಿಕ್ಷೆ ಕೊಡ್ತಿದ್ದಾಳೆ ನೋಡು....
ಹೆಂಗೂ "ದುಡ್ಡು " ಕೊಟ್ಟು ತಂದ ಸೊಸೆ ಅಲ್ವಾ....!?"
ಹೀಗೆ ಅಕ್ಕ ತಂಗಿ ಯರು ಗೋಡೆಯಾಚೆ ಒಮ್ಮೆ ದೊಡ್ಡುಕೆ ಮತ್ತೊಮ್ಮೆ "ಕಿರುಧ್ವನಿ"ಯಲ್ಲಿ ಮಾತನಾಡಿದ್ದನ್ನ ಅನಾಯಾಸವಾಗಿ ಕೋಣೆಯಾಚೆ ಕೂತು ಕೇಳಿಸಿಕೊಂಡಳು ಸೌಜನ್ಯ
"ಸೀತಾಮಾತೆಯಂತೆ "ಭೂಮಿಗಿಳಿದು ಹೋದಳು....
ಪ್ಯಾಡ್ ಮುಗಿತು....
ಮುಂದೆ....!?
ಯಾರ ಹತ್ತಿರ ತನ್ನ ಗೋಳು ಹೇಳಿ ಕೊಳ್ಳಲಿ...?
ನಿಂತರೆ ನಿಲ್ಲಲಾಗೋಲ್ಲ ... ಅರೆ ಮುರುಟಿ ಒತ್ತಡ ದಿಂದ ಕೂತರೂ ತಡೆಯಲಾಗದ ಪ್ರಕೃತಿ ಸಹಜ ಕ್ರಿಯೆ...
ಬೆಡ್ ಷೀಟ್ ಚೂರು ಮಾಡಿದಳು...
ಅದೇ ಅವಳಿಗೆ ಉಳಿದ ದಾರಿ.
ರಾತ್ರಿ ಹತ್ತು ಗಂಟೆಯಾಯಿತು...
ಗಂಡ ವಿನಾಯಕ ಬರಲೇ ಇಲ್ಲ...
ಮಗು ಪಕ್ಕದಲ್ಲಿ ಮಲಗಿದೆ.
ಆ ರಾತ್ರಿ ಆಕೆಗೆ ಹೊಸ ಭವಿಷ್ಯ ಕೊಡು ವ ಮಧುರ ರಾತ್ರಿ ಯಾಗ ಬೇಕಿತ್ತು.... ಸೌಜನ್ಯ ಮಗನಿಗಾಗಿ ವಿನಾಯಕ ನಿಗೆ ಎಲ್ಲ ಪ್ರೀತಿ ಸಹಕಾರವನ್ನು ಮನಃಪೂರ್ವಕವಾಗಿ ಕೊಡಬೇಕೆಂದಿ ದ್ದಳು. ಆದರೆ ಈ ರಾತ್ರಿ ಅತ್ಯಂತ ಆಘಾತಕಾರಿ ಆತಂಕಕಾರಿ ರಾತ್ರಿ ಯಾಗಿ ಪರಿವರ್ತನೆಯಾಗಿತ್ತು ಸೌಜನ್ಯ ಳಿಗೆ.....
ಒಂದೇ ಒಂದು ಬಾರಿ ವಿನಾಯಕ ತನ್ನ ಮಾತನಾಡಿಸಿ ಹೋಗಬಹುದಿತ್ತು...
ಪಕ್ಕದ ಕೋಣೆಯಲ್ಲಿ ಯಾರೋ ತನ್ನ "ಗಂಡ ಅತ್ತೆ " ಯ ಗುಣಗಾನ ಮಾಡಿಹೋಗಿದ್ದು ಕಿವಿ ಯಲ್ಲಿ ಗುಂಯ್ ಅಂತಿತ್ತು... ಆದರೂ
ಸುಸ್ತಿಗೆ ನಿದ್ರೆ ಬಂತು...
ಅದು ಬೆಳಗಿನ ಜಾಮ ...
ಯಾಕೋ ತೀರಾ ಮೈ ಮುಜುಗರ ಆಗುವ ರೀತಿಯಲ್ಲಿ ಇಂದಿನ ದಿವಸ ಆಗಿದೆ. ಹೆಪ್ಪುಗಟ್ಟಿ ಅಂಟಿ ಕೂತ ಮಂಜುಗಡ್ಡೆ ಯ ಅನುಭವ ಆಗಿ ಎಚ್ಚರವಾಯಿತವಳಿಗೆ. ತಾನು ಯಾಕಾ ದರೂ ಹೆಣ್ಣಾಗಿ ಹುಟ್ಟಿದೆ ಎಂದೆನಿಸಿತು.ಈಗ ಸಮಯ ಎಷ್ಟಾಗಿರಬಹುದು ಎಂದೆಣಿಸ ತೊಡಗಿದಳು.......
ಸೌಜನ್ಯ ಳ ಕೈಲಿ ಸಮಯ ನೋಡಲೂ ಮೊಬೈಲ್ ಇಲ್ಲ...
ಮೊಬೈಲ್ ಇದ್ದರೂ ಯಾರಿಗೆ ಕರೆ ಮಾಡಬೇಕು ಅವಳು..?
ಈ ಕಾಲದಲ್ಲಿ ಮೊಬೈಲ್ ಇಲ್ಲದ ಏಕೈಕ ವ್ಯಕ್ತಿ ಸೌಜನ್ಯ....!!!
ಎದ್ದು ಹೊದಿಕೆ ಸರಿಸಿ ಲೈಟ್ ಹಾಕಿ ದಾಗ ಬಿಚ್ಚಿದ ಸೀರೆ ಪೆಟ್ಟಿಕೋಟ್ ನೋಡಿ ಆಕೆ ಆಘಾತಕ್ಕೊಳಗಾದಳು...
ಇದ್ಯಾವದೂ ಅವಳಿಗೆ ಹೊಸತಲ್ಲ...
ಆದರೆ ಈ ಪರಿ ಅದು ಅಕಾಲದಲ್ಲಿ ಹೊಸತು.ತಲೆಬಿಸಿಯಾತು ಆ ದೃಶ್ಯ ನೋಡಿ.... ಬ್ಯಾಗ್ ನಲ್ಲಿ ಒಂದು ನೈಟಿ ಇತ್ತು ಸದ್ಯ.
ಸೌಜನ್ಯ ಅಂದಿಗಿಂತ ಮುಂದಿನ ದಿನಗಳಲ್ಲಿ ಈ ಸಂವೇದನಾಶೀಲತೆ ಪ್ರೀತಿ ಯೇ ಇಲ್ಲ ದ ಗಂಡ, ಕೆಟ್ಟವರು ಎಂದು ಕುಖ್ಯಾತಿಯಾಗಿ ನಿನ್ನೆ ಕೇಳಿ ಸಿಕೊಂಡು ಪರಿಚೆಯವಾದ "ಅತ್ತೆ".. ಬೇರೆಯವರಿಂದ ನಿನ್ನೆ ಕೇಳಿಸಿಕೊಂಡಿ ದ್ದೂ ಅಲ್ಲದೇ "ಸ್ವಲ್ಪ ಸ್ವಾ ಅನುಭವಕ್ಕೂ ಬಂದ ವ್ಯಕ್ತಿ ಗಳ ಜೊತೆಗೆ ಜೀವನ ಪರ್ಯಂತ ಕಾಲ ಕಳೆಯಲು ಸಾದ್ಯವ....? ಅದೂ ಈ ಪುಟ್ಟ ಮಗುವಿನ ಜೊತೆಗೆ...?
ಯಾಕೋ ಸೌಜನ್ಯ ಳಿಗೆ ಆ ಸಂಧರ್ಭದಲ್ಲಿ "ಜೀವನ ಪ್ರೀತಿ "ಯೇ ಮುಗಿದು ಹೋಯಿತು.
ಚಾಪೆಯ ಒಂದು ಮೂಲೆಯಲ್ಲಿ ಮುರುಟಿ ಮಲಗಿದ ಮುಗ್ದ ಕಂದಮ್ಮ ಸಾಹಿತ್ಯ ನ ತಲೆ ಒಮ್ಮೆ ನೆವೆರಿಸಿ ಲೈಟ್ ಆರಿಸಿ ಹೊರಗೆ ಬಂದು ಮುಖ ತೊಳೆಯಲು ಬಚ್ಚಲಿಗೆ ಹೋದಳು...
ಬಚ್ಚಲಿನಿಂದ ಹೊರಬಂದಾಗ ನಿಧಾನವಾಗಿ ಬೆಳಕುಬಿಡುತ್ತಿತ್ತು...
ಹಿಂಬಾಗದಲ್ಲೇ ತೋಟ ...
ತೋಟಕ್ಕೆ ಹೋಗುವ ದಾರಿಯಲ್ಲಿ ಸೌಜನ್ಯ ದಿಕ್ಕು ದೆಸೆಯಿಲ್ಲದೇ ನೆಡೆಯತೊಡಗಿದಳು...
ದಾರಿಯ ಕೊನೆಯಲ್ಲಿ ದೊಡ್ಡ ಬಾವಿ ಇತ್ತು. ಬಾವಿ ಕಟ್ಟೆಯ ಮೇಲೆ ನಿಂತ ವಳಿಗೆ ಹಿಂದಿನಿಂದ ಸಾಹಿತ್ಯ "ಅಮ್ಮ" ಅಂತ ಕರೆದಹಾಗಾಯಿತು....
ಕಟ್ಟೆ ಇಳಿದು ಮತ್ತೆ ಮನೆ ಕಡೆ ಓಡಿ ಕೋಣೆ ತಲುಪಿ ಮಲಗಿರು ವ ಮಗನನ್ನು ನೋಡಿ ನಿಟ್ಟುಸಿರಾದಳು
ನಾನು ಸತ್ತು ಹೋದರೆ ಸಂಭಂಧವಿಲ್ಲದ ಇವರು ಯಾಕೆ ಇವನನ್ನು ಸಾಕಿ ಬೆಳೆಸುತ್ತಾರೆ....?
ಬೇಡ ಇವನು ಅನಾಥಾಶ್ರಮ ಸೇರು ವುದು....
"ಪುಟ್ಟ ಪುಟ್ಟ ಏಳು ಏಳು.".. ನೆದ್ದೆ ಗಣ್ಣಿನಲ್ಲೇ ಕಣ್ಣು ಬಿಡು ಬಿಡುತ್ತಲೇ ಅಳತೊಡಗಿದ ಸಾಹಿತ್ಯ...
ಬಾ ಮನೆಗೆ ಹೋಗೋಣ ಅಂತ ಅವನನ್ನು ಕರೆದುಕೊಂಡು ಒಂಥರ ದರ ದರನೇ ಎಳೆದುಕೊಂಡೇ ತೋಟದ ಬಾವಿಯತ್ತ ಸಾಗತೊಡಗಿ ದಳು....
ಅಷ್ಟು ಚಿಕ್ಕ ಹುಡುಗನಿಗೇನು ಗೊತ್ತು
ಅಮ್ಮ ನನ್ನನ್ನು ಸಾಯಲು ಕರೆದುಕೊಂಡು ಹೋಗ್ತಿದ್ದಾಳೆ ಅಂತ...
ಇದು ಅತ್ಯಂತ ಅಸಾಹಯಕ ಕ್ಷಣ...
ಒಬ್ಬ ಮನುಷ್ಯ ತನ್ನ ತಾನು ಕೊಂದು ಕೊಳ್ಳುವುದು ಜಗತ್ತಿನ ಅತ್ಯಂತ ಕ್ರೌರ್ಯ...
ಮನುಷ್ಯ ಈ ಜಗತ್ತಿನಲ್ಲೇ ಅತಿ ಹೆಚ್ಚು ಪ್ರೀತಿ ಸುವುದು ತನ್ನ "ಪ್ರಾಣ" ವನ್ನು..
ಅಂತಹ ಪ್ರಾಣವನ್ನು ತಾನೇ ಕಳೆದು ಕೊಳ್ಳವುದರ ಜೊತೆಗೇ ತನ್ನ ಭವಿಷ್ಯ ತನ್ನ ದೇ ರಕ್ತ ಮಾಂಸ ನೀಡಿ ಬೆಳೆಸಿ ಜೀವ ಕೊಟ್ಟು ಹೆತ್ತ ಮಗನನ್ನು ತಾನೇ ಕೊಲ್ಲಲು ಕರೆದುಕೊಂಡು ಹೋಗುವು ದು ಅತ್ಯಂತ ಯಾತನಾದಾಯಕ...
ಬದುಕು ತುಂಬಾ ಜನರಿಗೆ ದುಬಾರಿ...
"ಅಮ್ಮ ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಮ್ಮ.... ಬೇಡ ಅಮ್ಮ ಮನೆಗೆ ಹೋಗೋಣ ಅಮ್ಮ..." ಅಂತ ಬೊಬ್ಬೆ ಹೊಡೆಯುತ್ತಿದ್ದರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ಬಿರುಸಾಗಿ ಬಾವಿಯತ್ತ ಸಾಗುತ್ತಿರುವಾ ಗ ....
ದುತ್ತೆಂದು ಮನುಷ್ಯ ಆಕೃತಿ ಎದುರಾದಾಗ............. ಸಾಯಲು ಹೊರಟ ಸೌಜನ್ಯ ಳಿಗೂ ಒಮ್ಮೆ ಎದೆ "ಝಲ್ "ಅಂತು...
ಓ ಹೊಸ ಅಮ್ಮ... ಯಾ ಕಡೆ ಹೊರಟ್ರಿ
ಈ ಬೆಳಗಾತ ಈ ಥಂಡಿಲಿ ಈ ಪುಟ್ಟ ಮಾಣಿನ ಕರೆಕೊಂಡು.....!??? ಅಂತು ಆ ಆಕೃತಿ.
ಎಲ್ಲೂ ಇಲ್ಲ.. ಇವನಿಗೆ ಟಾಯ್ಲೆಟ್ ನಲ್ಲಿ ಟಾಯ್ಲೆಟ್ ಬರೋಲ್ಲ ಅಂದ ಅದಕ್ಕೆ ತೋಟಕ್ಕೆ ಕರೆದುಕೊಂಡು ಬಂದೆ.... ಅಂದಳು ಸೌಜನ್ಯ.
ಆ ಹೆಂಗಸು ಆ ಮನೆಯ ಕೆಲಸದವಳು. ಜಲಜಕ್ಕ ಅಂತ.
"ಅಮ್ಮ ಅದಕ್ಕೆ ತ್ವಾಟದಂಗೆ ಇಷ್ಟು ದೂರ ಕರೆಕೊಂಡು ಬಂದ್ರ್ಯ...
ಅಮ್ಮ ನಾ ಈ ಮನೆ ಖಾಯಂ ಕೆಲಸ ದವಳು... ನಾ ಬುದ್ದಿ ಬಂದಾಗಿಂದಲೂ ಇವರ ಮನೆಯಲ್ಲೇ ಕೆಲಸ ಮಾಡಿ ಕೊಂಡು ಬಂದಿದೀನಿ. ಹೆಚ್ಚು ಕಡಿಮೆ ಐವತ್ತೈದು ವರ್ಷ ಆತು.
ಈಗ ಆ ಬಾಮಿ ಹತ್ತಿರ ದ ಮೋಟಾರು ಷೆಡ್ ಗೆ ಮೋಟಾರ್ ಸ್ವಿಚ್ ಹಾಕಲು ಹೋಗಿದ್ದೆ. ಇವತ್ತು ಪಂಕ್ಸನ್ ಕ್ಯಾನ್ಸಲ್ ಆದರೂ ನೆಂಟರು ಇದ್ದರಲ್ಲ ಅವರಿಗೆಲ್ಲ ಸ್ನಾನಕ್ಕೆ ಹಮಾ (ಹೆಚ್ಚು) ನೀರು ಬೇಕಲ್ಲ ಅದಕ್ಕೆ ಮನೆ ಟ್ಯಾಂಕಿಗೆ ಈ ತೋಟದ ಬಾಮಿ ಮೋಟರ್ ನಿಂದ ಬಿಡಲು ಸ್ವಿಚ್ ಹಾಕಿ ಬರಲು ಅಮ್ಮ ಬೇಗ ಬರೋಕೆ
ಹೇಳಿದ್ರು. ಈಗ ಮೋಟರ್ ಸ್ವಿಚ್ ಹಾಕಿ ಮನೆ ಕಡೆ ಹೊಲ್ಟೆ ಅಮ್ಮ
ಬನ್ನಿ ಅಮ್ಮ ಮಾಣಿಗೆ ಮನೆ ಹತ್ತಿರಾನೇ ಕಕ್ಕಸು ಮಾಡಿಸಿ..." ಅಂದಳು ಜಲಜಕ್ಕ.
ಮಾಣಿ ಅಳು ನಿಲ್ಲಿಸಿತ್ತು...
ಇಬ್ಬರೂ ಮನೆಕಡೆ ಮರಳಲೇ ಬೇಕಿ ತ್ತು...
ಸಾವನ್ನು ಭಗವಂತ ಜಲಜಕ್ಕ ನ ರೂಪದಲ್ಲಿ ಬಂದು ತಡೆದಿದ್ದ..!!!!
ಮರಳಿ ಮನೆಗೆ ಹೋಗುವಾಗ ಜಲಜಕ್ಕ ಆ ಮನೆಯ ಮತ್ತೊಂದು ಆಯಾಮ ಬಿಚ್ಚಿಡತೊಡಗಿದಳು...
"ಅಮ್ಮ ನಿಮಗೆ ಈ ಮನೆ ಬಗ್ಗೆ ಯಾರು ಯಾರು ಏನೇನು ಹೇಳಿದ್ದರೋ ನಂಗೊತ್ತಿಲ್ಲೆ... ನೋಡಿ ಹೊಸಮ್ಮ..
ನಾ ವಿನಾಯಕ ಭಟ್ರನ್ನ ಕೂಸಿದ್ದಲ್ಲಿಂದ ಎತ್ತಿ ಆಡಿಸಿದ್ದೀನಿ.ಅವರಿಗೆ ಮಾತು ಕಡಿಮೆ ಅಷ್ಟೇ ಹೊರತು ಬಾಳ ಒಳ್ಳೆಯ ವರು. ಕಾರು ಬಿಡ್ತಾರೆ ಮಂಡಿ ಯವಾರ ಮಾಡ್ತಾರೆ , ಕಾಲೇಜು ಓದಿದಾರೆ . ದಡ್ಡ ಮಂಕ ಅಂತ
ಇಡೀ ನಾಡಿಗೆಲ್ಲ ಪ್ರಚಾರ ಮಾಡಿದ್ದು ಇದೇ ಮನೆಯ ದೊಡ್ಡ ಮಗಳು ಅಳಿಯ...!!!
ಆ ಅಳಿಯ ಬೆಂಗಳೂರಂಗಿದ್ದು ಸಿನಿಮಾ ಟಿವಿ ದ್ವಾರವಾಯಿ ಪಾರವಾಯಿ ಅದು ಇದು ಯಾಪಾರ ಅಂತ ಹೇಳಿ ಎಲ್ಲಾ ಕಡೆ ಸಾಲ ಮಾಡಿ, ಬಾಳ ಜನರ ಹತ್ತಿರ ದುಡ್ಡು ತಗೊಂಡು ಮುಳುಗಡೆ ಮಾಡಿ ಕೊನೆಗೆ ದೊಡ್ಡಯ್ಯ ಇದ್ದಾಗಲೇ ದೊಡ್ಡ ಮಗಳಿಗೆ ಪಾಲು ಅಂತ ಒಂದಷ್ಟು ದುಡ್ಡು ಕೊಟ್ಟು ಇನ್ನು ಈ ಮನೆಯಿಂದ ಗಳೀಕ್ಕೂ ದುಡ್ಡು ಕೇಳಬಾರದು ಅಂತ ಕರಾರು ಪತ್ರ ಮಾಡಿಸಿಕೊಂಡು ಕೈ ತೊಳೆದುಕೊಂಡಿದ್ರು....
ಆದರೂ ಅವರು ಇಲ್ಲಿ ದುಡ್ಡು ಬೇಡದು ಬಿಟ್ಟಿರಲಿಲ್ಲ. ಅದಕ್ಕೆ ಸರಿಯಾಗಿ ಇನಾಯಕ ಭಟ್ರ ಮೊದಲ ಮದುವೆ ಯ್ಯತ್ಯಾಸ ಆಗಿ ಅದೇ ಬೇಜಾರಲ್ಲಿ ದೊಡ್ಡಯ್ಯ ತೀರಿ ಕೊಂಡರು.
ಅಮ್ಮ ನೂ ಮಗಳಿಗೆ ಕಷ್ಟ ಅಂತ ಇಲ್ಲಿಂದ ಹೊರಿಸಿ ಕಳಿಸ್ತಿದ್ದರು.
ಅಮ್ಮ ಇನಾಯಕ ಭಟ್ರಿಗೆ ಹುಡುಗಿ ನೋಡೋಕೆ ಹೋಗೋಷ್ಟೊತ್ತಿಗೆಲ್ಲ ದೊಡ್ಡ ಮಗಳು ಅಳಿಯ ನ್ನ ಸಪೋಲ್ಟಿಗೆ ಕರೆಕೊಂಡು ಹೋಗ್ತಿದ್ದರು.
ಹುಡುಗಿ ನೋಡಿ ಎರಡೂ ಕಡೆ ಒಪ್ಪಿಗೆ ಆಗಿ ಇನ್ನೇನು ಮದುವೆ ದಿನ ಇಡಬೇಕು ಅನ್ನೋಷ್ಟೊತ್ತಿಗೆ ಹುಡುಗಿ ಕಡೆಯವರು ಹುಡುಗ ದಡ್ಡ ಮಂಕ ಚುರುಕಿಲ್ಲ ಬ್ಯಾಡ ಅಂತಿದ್ದರು.
ಯಾಕೆ ಹಿಂಗಾಗ್ತಿದೆ ಅಂತ ಅಮ್ಮ ನಿಗೆ ಮೊದಲಿಗೆ ಗೊತ್ತಾಗ್ತಿರಲಿಲ್ಲ...!
ಕಡಿಕೊಂದು ಸರ್ತಿ ಒಬ್ಬರು ಹೆಣ್ಣು ಗಂಡಿನ ದಲ್ಲಾಳಿ ಹತ್ತಿರ ಅಮ್ಮ ವಿಚಾರಿಸಿದಾಗ ಅವರ ದೊಡ್ಡ ಅಳಿಯ ಮಗಳೇ ಮದುವೆ ತಪ್ಪಿಸುತ್ತಿದ್ದ ವಿಷಯ ಗೊತ್ತಾಯಿತು.
ಅಮ್ಮ ನಿಗೂ ಬಾಳ ಬೇಜಾರಾತು..
ಯಾವ ಹೆಣ್ಣು ಮಗಳೂ ತನ್ನ ತವರಿಗೆ ಕೇಡು ಬಯಸೋಲ್ಲ.. ಆದರೆ ತಮ್ಮ ಹೊಟ್ಟೆಲಿ ಹುಟ್ಟಿದ ಮಗಳು ಹಿಂಗೆ ತನ್ನ ಒಡಹುಟ್ಟಿದ ತಮ್ಮ ನಿಗೇ ಅನ್ಯಾಯ ಮಾಡ್ತಾಳಲ್ಲ ಅಂತ ಬೇಜಾರು ಮಾಡಿ ಕೊಂಡರು.
ಅವರ ದೊಡ್ಡ ಅಳಿಯ ಮಗಳಿಗೆ ಇನಾಯಕ ಭಟ್ರಿಗೆ ಮದುವೆ ಆಗದಂತೆ ತಪ್ಪಿಸಿ ಅಮ್ಮ ಸತ್ತ ಮೇಲೆ ತಾವು ಗಂಡ ಹೆಂಡತಿ ಇಲ್ಲಿಗೇ ಬಂದು ಕೂರಬೇಕು ಅಂತಾಸೆ ಇತ್ತು.
ಅಷ್ಟರಮೇಲೆ ಅಮ್ಮ ದೊಡ್ಡ ಮಗಳು ಅಳಿಯನ್ನ ಹತ್ತಿರಕ್ಕೆ ಸೇರಿಸಲಿಲ್ಲ...
ಅಮ್ಮ ನೂ ಬಾಳ ಒಳ್ಳೆಯವರೇ. ಮಾತು ನೇರ. ಇನಾಯಕ ಭಟ್ರೂ ಒಳ್ಳೆಯವರೇ...
ಅವರು ಖುಷಿ ಪಟ್ಟೇ ನಿಮ್ಮ ಮದುವೆ ಆಗಿದ್ದು ಅಂದಳು.ನೀವೇನೂ ವೇಚನೆ ಮಾಡಬೇಡಿ ಅಂತ ಜಲಜಕ್ಕ ಸೌಜನ್ಯ ಳಿಗೆ ಹೇಳಿದಳು.
ಜಲಜಕ್ಕ ನ ಮಾತಿನಿಂದ ನಾನು ಈ ಮನೆಯಲ್ಲಿ ಬಾಳಬಹುದು ಎನ್ನುವ ದೈರ್ಯ ಬಂತು.
"ಹೆಂಡತಿ"ಯಂತೆ ಬದುಕಲಾಗದಿದ್ದರೂ ಮಗನಿಗಾಗಿ "ಕೆಲಸ"ದವಳಂತಾಗಿಯಾ ದರೂ ಈ ಮನೆಯಲ್ಲಿ ಬಾಳುತ್ತೇನೆ ಎಂದು ನಿರ್ಧಾರ ಮಾಡಿಕೊಂಡ ಳು.
ಅಷ್ಟು ಒಳ್ಳಯ ವಿನಾಯಕ ಭಟ್ರು ನನ್ನ ಮದುವೆ ಮಾಡಿಕೊಂಡು ಬಂದು ಮುಟ್ಟಾಗಿ ಹೊರಗಿ ಕೂತವಳನ್ನು ಒಮ್ಮೆ ಕೂಡ ಮಾತನಾಡಿಸಲು ಬರಲೇ ಇಲ್ವಲ್ಲ...??!!
ಹೆಣ್ಣಿಗೆ ಇಂತಹ ಸೂಕ್ಷ್ಮ ಸಂಧರ್ಭದಲ್ಲಿ ಗಂಡ ಕೊಡುವ ಸಖ್ಯ ಅತ್ಯಂತ ಮುಖ್ಯ.....
ಆದರೂ ಗಂಡ ವಿನಾಯಕ ಭಟ್ರು ಯಾಕೆ ನನ್ನ ನೋಡಲು ಬರಲಿಲ್ಲ ಅಂತ "ಜಲಜಕ್ಕ "ನ ಬಳಿ ಕೇಳಲು ಒಂಥರ ನಾಚಿಕೆ ಬಿಗುಮಾನ ಆಯಿತು.
"ಜಲಜಕ್ಕ... ನಿಮ್ಮಿಂದ ನಂಗೊಂದು ಸಹಾಯ ಮಾಡಲು ಸಾದ್ಯವಾ...?
ಅಯ್ಯೋ ಅಮ್ಮ ಹೇಳಿನೀ ... ನಾವು ಇಡೀ ಕುಟುಂಬ ಈ ಮನೆಯ ಅನ್ನದ ಋಣದಲ್ಲಿದ್ದೇವೆ... ಹೇಳಿ ಅಮ್ಮ...?
ಏನಿಲ್ಲ ಜಲಜಕ್ಕ ನಂಗೆ ಮುಟ್ಟಾದಾಗ ಬಳಸುತ್ತಾರಲ್ಲ ಆ ಪ್ಯಾಡ್ ಬೇಕಿತ್ತು"..
ಅಂದಳು...
ಓ ಅಷ್ಟೆಯಾ..ಅಂತ ಹೇಳಿ ತನ್ನ ಕುಪ್ಪಸದಿಂದ ಮೊಬೈಲ್ ತೆಗೆದು ..
ಅಮ್ಮ ಈ ಮೊಬೈಲಂಗೆ "ಅಮ್ಮಿ"ಅಂತ ಒಂದು ಹೆಸರಿದೆ , ಆ ಹೆಸರಿಗೆ ರಿಂಗ್ ಮಾಡಿಕೊಡಿ...ಅದು ನನ್ನ ಮೊಮ್ಮಗಳು...ಅವಳ ಹತ್ತಿರ ಸ್ಕೂಟಿ ಇದೆ.... ಅರ್ದಗಂಟೇಲಿ ಅವಳು ತೆಮ್ಮೆಮನೆ ಗಣೇಶ ಭಟ್ರ ಅಂಗಡಿ ಯಿಂದ ತಂದುಕೊಡ್ತಲು...
ಸೌಜನ್ಯ ಆ ನಂಬರ್ ಗೆ ಡಯಲ್ ಮಾಡಿ ಪ್ಯಾಡ್ ಬಗ್ಗೆ ಹೇಳಿದಳು...
ನಂತರ ಜಲಜಕ್ಕ ಮೊಮ್ಮಗಳ ಹತ್ತಿರ ಮಾತನಾಡಿ ಫೋನ್ ಇಟ್ಟಳು.
ಮನೆಗೆ ಬಂದು ಸೌಜನ್ಯ ಚಾಪೆ ಮಡಿ ಚಿಟ್ಟಳು.ಅಷ್ಟೊತ್ತಿಗೆ ದೊಡ್ಡ ಲೋಟದಲ್ಲಿ ಕಾಫಿ ಮತ್ತು ಮಗುವಿಗೆ ಹಾಲು ಬಂತು.
ಸಾಹಿತ್ಯ ಏನಾದರೂ ತಿನ್ನಲು ಬೇಕು ಅಂತ ಹಠ ಮಾಡತೊಡಗಿದ.
ಏನೇನೂ ಹೇಳಿ ಸಮಾಧಾನ ಮಾಡಿದಳು. ಅರ್ಧ ಗಂಟೆಯೊಳಗೆ ಜಲಜಕ್ಕ ಒಂದು ದೊಡ್ಡ ಹ್ಯಾಂಡ್ ಕವರ್ ನಲ್ಲಿ ಪ್ಯಾಡ್
ಮತ್ತು ಐದಾರು ಬಗೆಯ ಬಿಸ್ಕೇಟ್ ಪ್ಯಾಕ್ ಕುರುಕುರೇ ಚಾಕೊಲೇಟ್ ತಂದಳು.....
ಆ ಕೊಟ್ಟೆ ನೋಡಿ ಆ ಮನೆಗೆ ಬಂದ ಮೇಲೆ ಮೊಟ್ಟ ಮೊದಲಬಾರಿಗೆ ಸೌಜನ್ಯ ಳ ಮುಖ ಖುಷಿ ಯಿಂದ ಅರಳಿತು.
ಜಲಜಕ್ಕ ನಿಗೆ ತನ್ನ ಮಾಜಿ ಅತ್ತೆ ತನಗೆ ಮುಯ್ಯಿ ಮಾಡಿದ ಇನ್ನೂರು ರೂಪಾಯಿ ಹಣವನ್ನು ಕೊಡಲು ಹೋದಾಗ ಬೇಡವೇ ಬೇಡ ಅಂತ ನಿರಾಕರಿಸಿದಳು.
ಇಲ್ಲಿ ಯಾರು ಮಾತನಾಡಿಸದಿದ್ದರೂ
ಪರವಾಗಿಲ್ಲ.... ಜಲಜಕ್ಕ ಇದ್ದಾಳೆ ಸಾಕು ಅಂತೆನ್ನಿಸಿ ವಿಶ್ವಾಸ ಮೂಡಿತು.
ಎರಡೂ ದಿನವೂ ಗಂಡ ವಿನಾಯಕ ಮಾತನಾಡಿಸಲು ಬರಲೇ ಇಲ್ಲ...
ಯಾರೋ ಅಡಿಗೆ ಯವರು ಜೈಲಿನಲ್ಲಿ ಕೈದಿಗಳಿಗೆ ಹೊತ್ತಿಂದ ಹೊತ್ತಿಗೆ ಊಟ ಕೊಡುವಂತೆ ಕೊಟ್ಟು ಹೋಗ್ತಿದ್ದರು.
ಸೌಜನ್ಯ ಳಿಗೆ ದೊಡ್ಡ ಮನೆಯ ಹಿಂಬಾಗ ಕೊಟ್ಟಿಗೆ ತೋಟವೇ ಆಪ್ಯಾಯಮಾನವಾಯಿತು.
ಮಾರನೇ ದಿನ ಸ್ನಾನ ಮುಗಿಸಿ ಅಳುಕುತ್ತಲೇ ಮನೆಯೊಳಗೆ ಕಾಲಿಟ್ಟ ಳು...
ದೇವರಿಗೆ ನಮಸ್ಕರಿಸಿ ಹಣೆಗೆ ಇಟ್ಟುಕೊಂಡು ಅಡಿಗೆ ಮನೆಗೆ ಹೋಗುವಾಗ ಹೊರಗಡೆ ಅಂಗಳದಲ್ಲಿ ಕಾರು ಬಂದು ನಿಂತ ಶಭ್ದ ವಾಯಿತು.
ಹೊರಗೆ ಹೋಗಿ ನೋಡಿದಾಗ ಅತ್ತೆ ಗಂಡ ವಿನಾಯಕ ನ ಹಿಡಿದುಕೊಂಡು ಬರ್ತಾ ಇದ್ದದ್ದನ್ನು ನೋಡಿ ಸೌಜನ್ಯ
" ಅಮ್ಮಾ ಮಾರಿಕಾಂಬೆ...
ಏನಿದು ಯಾಕೆ ನಂಗೆ ಹೋದಲ್ಲುದ್ದಕ್ಕೂ ಈ ಶಿಕ್ಷೆ... ಏನಾಯಿತು...."
ಅತ್ತೆ ಗಂಡ ವಿನಾಯಕ ಒಳಬಂದರು.
ಅಂದು ಮದುವೆ ಯ ರಾತ್ರಿ ಸೌಜನ್ಯ ಮುಟ್ಟಾಗಿ ಹೊರಗೆ ಕೂತ ಕೆಲ ಹೊತ್ತಿ ನಲ್ಲೇ ವಿನಾಯಕ ನಿಗೆ ಇದ್ದಕ್ಕಿದ್ದಂತೆ ಬಿಪಿ ವ್ಯತ್ಯಾಸ ಆಗಿ ಕೂಡಲೇ ತೀರ್ಥಹಳ್ಳಿಯ ಆಸ್ಪತ್ರೆ ಗೆ ಕರೆದುಕೊಂಡು ಹೋಗಬೇಕಾಯಿತು.
ಮೊದಲು ಮುಂಚೆ ಮನೆಗೆ ಬಂದ ಸೊ ಸೆಗೆ ಗಂಡನಿಗೆ ಹುಷಾರಿಲ್ಲ ಅಂತ ಹೇಳಿ ಗಾಭರಿಗೊಳಿಸುವುದು ಬೇಡ ಅಂತ ತೀರ್ಮಾನಿಸಿ ಸೌಜನ್ಯ ನ ಗಮನಕ್ಕೆ ಈ ವಿಷಯ ತರದೇ ವಿನಾಯಕ ನ ಚಿಕಿತ್ಸೆ ಮಾಡಿಸಿದರು.
ಮದುವೆ ಮನೆ ಗಡಿಬಿಡಿಗೆ ಹಲವಾರು ದಿನದಿಂದ ಒಬ್ಬನೇ ಓಡಾಡಿ ನೆದ್ರೆ ಗೆಟ್ಟು ಬಿಪಿ ವ್ಯತ್ಯಾಸ ಆಗಿತ್ತು...
ಎರಡು ದಿನದ ಚಿಕಿತ್ಸೆ ಯಿಂದ ಸಂಪೂರ್ಣ ಗುಣಮುಖ ನಾಗಿ ಈಗ ತೀರ್ಥಹಳ್ಳಿ ಯಿಂದ ಮನೆಗೆ ಬಂದ ವಿಷಯ ಅತ್ತೆ ಹೇಳಿದಾಗ ಸೌಜನ್ಯ ಳ ಹೃದಯ ಕಡಲು ಶಾಂತವಾಯಿತು.
ಗಂಡ ವಿನಾಯಕ ಬಚ್ಚಲಿಗೆ ಹೋಗಿ ಸ್ನಾನ ಮಾಡಿಬಂದು ಮೂಲೆಯಲ್ಲಿ ಸುಮ್ಮನೆ ಕೂತಿದ್ದ ಮಲ ಮಗ ಸಾಹಿತ್ಯ "ನನ್ನು ಅಂಗಳಕ್ಕೆ ಕರೆದುಕೊಂಡು ಹೋಗಿ ಕಾರಿನೊಳಗಿದ್ದ ಹೊಸ ಸೈಕಲ್ ಹೊರ ತೆಗೆದು ಸಾಹಿತ್ಯ ನನ್ನು ಮೆತ್ತಗೆ ಹೊಸ ಸೈಕಲ್ ಸೀಟ್ ಮೇಲೆ ದೀಪ ಕೂರಿಸಿ ಹಿಡಿದುಕೊಂಡು ಪೆಡಲ್ ಮಾಡಲು ಹೇಳಿದ .... ಆ ಸೈಕಲ್ ಗೆ ಬ್ಯಾಲೆನ್ಸಿಂಗ್ ಚಕ್ರ ಇದ್ದದ್ದರಿಂದ ಆಯ ತಪ್ಪಿ ಬೀಳುವ ಸಾದ್ಯತೆಯಿರಲಿಲ್ಲ.... ಎರಡು ಸುತ್ತು ಅಂಗಳದಲ್ಲಿ ಸಾಹಿತ್ಯ ಸೈಕಲ್ ಪೆಡಲ್ ಮಾಡುತ್ತಿದ್ದಂತೆ ಸಾಹಿತ್ಯ ನಿಗೆ ನಾನೂ ಸೈಕಲ್ ಓಡಿಸ ಬಲ್ಲೆ ಎಂಬ ವಿಶ್ವಾಸ ಮೂಡಿ ಖುಷಿ ಉಕ್ಕತೊಡಗಿತು... ಜಲಜಕ್ಕ ನ ಕರೆದು ಸಾಹಿತ್ಯ ನ ಜೊತೆಗಿರಲು ವಿನಾಯಕ ಹೇಳಿದ. ಈ ಅಚ್ಚರಿಯ ಅನಿರೀಕ್ಷಿತ ದೃಶ್ಯ ವನ್ನು ಸೌಜನ್ಯ ನೋಡಿ ಸಂತಸದ ಕಣ್ಣೀರಾದಳು...
ಒಂದು ಕ್ಷಣದಲ್ಲಿ ಮೊನ್ನೆ ಬಾವಿಯ ದಂಡೆಯ ಮೇಲೆ ಸಾವಿನ ಮುಖ ನೋಡಲು ಪ್ರಯತ್ನ ಮಾಡಿದ್ದ ಘಟನೆ ನೆನಪು ಮಾಡಿಕೊಂಡಳು... "ಅಮ್ಮಾ ಶಿರಸಿ ಮಾರಿಕಾಂಬೆ.. ಕಡೆಗೂ ನೀ ನನ್ನ ಕಡೆ ಗಮನಹರಿಸಿ ದಯೆ ತೋರಿದೆ" ಎಂದುಕೊಂಡು ಮನದಲ್ಲೇ ಅಮ್ಮ ನವರಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದಳು. ನಂತರ ವಿನಾಯಕ ಮೇಲಿನ ಕೋಣೆ ಗೆ ಹೋದ..
ಅತ್ತೆ ಹೊಸ ಸೊಸೆಯನ್ನು "ಸೌಜೂ" ಅಂತ ಶಾರ್ಟಾಗಿ ಸ್ವಲ್ಪ ಜೋನಿ ಬೆಲ್ಲದ ಸ್ವೀಟಾಗಿ ಕರೆದರು. ಈ ಮನೆಗೆ ಬಂದಲ್ಲಿಂದ ನಾವ್ಯಾರೂ ನಿನ್ನ ಮಾತಾಡಿಸಿಲ್ಲ ಅಂತ ಬೇಜಾರು ಮಾಡಿಕೋ ಬೇಡ. ಅವತ್ತು ಆ ಕ್ಷಣದಲ್ಲಿ ನಾಳಿನ ಕಾರ್ಯಕ್ರಮ ಮುಂದೂಡಬೇಕಾಯಿತಲ್ಲ ಎಂದು ಬೇಜಾರಾಗಿದ್ದು ನಿಜ. ಮದುವೆ ಆಗಿ ಹೋಗಿದೆ ಬೀಗರೂಟ ಯಾವತ್ತೂ ಮಾಡಬಹುದು ಅದಕ್ಕೆ ... ಮುಂದೆ ಊರಿಗೆಲ್ಲ ಹೇಳಿ ದೊಡ್ಡ ಊಟದ ಮನೆ ಮಾಡೋಣ. ನಿಮ್ಮ ಗಳ ಆರೋಗ್ಯ ನೆಮ್ಮದಿ ಮುಖ್ಯ. ಆಮೇಲೆ ಆ ದಿನನೇ ನೀನು "ರಜ" ಆದದ್ದು ಬಹಳ ಶುಭ ಸೂಚಕವಂತೆ. ನಮ್ಮ ಪುರೇತ್ ಭಟ್ರು ಕೆದ್ಲುಗುಡ್ಡೆ ಭೂಷಣ್ ಭಟ್ರು ಹೇಳಿದ್ರು. ಒಟ್ಟಿನಲ್ಲಿ ನಮಗೆಲ್ಲ ಆ ಹುರುಳಿ ಚಿಂತಾಮಣಿ ನೃಸಿಂಹ ಸ್ವಾಮಿ ಒಳಿತು ಮಾಡಿದರೆ ಸಾಕು.. ಇಕ ಈ ಕಾಫಿ ಲೋಟ ಉಪ್ಪರಿಗೆಲಿರೋ ನಿನ್ನ ಗಂಡ ನಿಗೆ ಕೊಡು "...ಅಂತ ತಲೆ ನೆವೆರಿಸಿ ಸೊಸೆಯನ್ನ ಮಗನ ಬಳಿಗೆ ಕಳಿಸಿದರು.ಆ ಕ್ಷಣದಲ್ಲಿ ಸೌಜನ್ಯ ಅತ್ತೆ ಶಾರದಮ್ಮ ರ ಮುಖದಲ್ಲಿ ಶಿರಸಿ ಯ ಮಾರಿಕಾಂಬೆಯ ಸೌಮ್ಯ ಕರುಣಾಮಯಿ ಅಮ್ಮ ನವರ ಮುಖ ಕಂಡಳು. ಯಾರೋ ಇಂತಹ ಹೆಣ್ಣು ಮಗಳನ್ನು ರಾಕ್ಷಸಿ ಸ್ವರೂಪದ ಕೆಟ್ಟ ಹೆಣ್ಣು ಮಗಳೆಂದು ನನ್ನ ಮನಸಿಗೆ ಮೂಡಿಸಿದ್ದಿರಲ್ಲ...ಛೇ ನಾನು ಯಾರದೋ ಮಾತನ್ನೇ ಅರಿವಿಲ್ಲದೆ ನಂಬಿ ಅಪಾರ್ಥ ಮಾಡಿಕೊಂಡೆನಲ್ಲ...
ಅಂತ ಯೋಚಿಸುತ್ತಾ ಉಪ್ಪರಿಗೆ ಮೆಟ್ಟಿಲನ್ನು ಗೆಜ್ಜೆ ಕಾಲ್ಗಳ ಸದ್ದು ಮಾಡ್ತಾ ಗಂಡನನ್ನು ಮೊಟ್ಟಮೊದಲ ಬಾರಿಗೆ ಏಕಾಂತ ಬೇಟಿ ಮಾಡಲು ನಾಚಿಕೆಯಿಂದ ಮಂದಗಮನೆಯಾಗಿ ಸಾಗತೊಡಗಿದಳು....
ಸ್ವಲ್ಪ ಹೊತ್ತಿಗೆ ಮಗನ ಮಾತ್ರೆ ಪ್ಯಾಕೆಟ್
ಕೆಳಗೇ ಉಳಿದಿದ್ದು ನೋಡಿ ಮಗನ ರೂಮಿಗೆ ಕೊಟ್ಟು ಬರಲು ಉಪ್ಪರಿಗೆಗೆ ಹೋದಾಗ ಅಲ್ಲಿ ರೂಮಿನ ಬಾಗಿಲು ಅರೆ ತೆರದಿತ್ತು....
ಅಲ್ಲಿನ ದೃಶ್ಯ ನೋಡಿ ಶಾರದಮ್ಮ ಸುಖೈದಚ್ಚರಿಯಿಂದ ಮಾತ್ರೆ ಪ್ಯಾಕೇಟ್ ಅಲ್ಲೇ ಕೈ ಬಿಟ್ಟರು...
ಅಲ್ಲಿ ಕೊರಡು ಕೊನರತೊಡಗಿತ್ತು....
ವೀಣೆಯ ನಯವಾದ ತಂತಿಯನ್ನು ನುರಿತ ವೈಣಿಕ ನ ಕೈಗಳು ಮೀಟಿ ಚಂದದ ಸಂಗೀತ ಸುಧೆ ಹರಿಸಲು ಆರಂಭವಾದಂತನಿಸತೊಡಗಿತ್ತು.....
ಸೌಜನ್ಯ ಳ ತುಟಿಯಲ್ಲಿ ವಿನಾಯಕ ನ ತುಟಿ ಸೇರಿತ್ತು....
ಅತ್ತೆ ಶಾರದಮ್ಮ ಏದುಸಿರು ಬಿಡುತ್ತಾ ಆನಂದ ಭಾಷ್ಪಾ ಸುರಿಸುತ್ತಾ ಖುಷಿ ಯಿಂದ ದೇವರ ಮಂಟಪದ ಬಳಿ ಓಡಿ ಬಂದು ತುಪ್ಪ ದ ದೀಪ ಹಚ್ಚಿ ನಮಸ್ಕಾರ ಮಾಡತೊಡಗಿದರು...
ಅವರ ದಶಕಗಳ ಹರಕೆ ಫಲಿಸ ತೊಡಗಿತ್ತು....
ಹೊರಗೆ ಅಂಗಳದಲ್ಲಿ ಮೊಮ್ಮಗ ಸಾಹಿತ್ಯ ಹೆಗ್ಡೆ ಹೊಸ ಸೈಕಲ್ ನಲ್ಲಿ ಬ್ಯಾಲೆನ್ಸಿಂಗ್ ಚಕ್ರ ದ ಸಹಾಯದಿಂದ ನಿಧಾನವಾಗಿ ಖುಷಿ ಖುಷಿಯಿಂದ ಜಲಜಕ್ಕ ನ ಮಾರ್ಗದರ್ಶನ ದಲ್ಲಿ ಎಚ್ಚರಿಕೆ ಯಲ್ಲಿ ಸೈಕಲ್ ಹೊಡೆಯತೊಡಗಿದ್ದ.....
ಆ ಸಂಭ್ರಮದ ಕೇಕೆಯಲ್ಲಿ ಶಾರದಮ್ಮ ರೂ ಸೇರಿಕೊಂಡರು...
ಸಾಹಿತ್ಯ ಹೆಗ್ಡೆ ನಿಧಾನವಾಗಿ ಸಾಹಿತ್ಯ ಭಟ್ಟನಾಗಿ ಬದಲಾಗತೊಡಗಿದ್ದ...
ಕಲ್ಲಗೊಟರಿನ ಮಾವಿನ ಮರದಲ್ಲಿ ಕೋಗಿಲೆ ಇಂಪಾಗಿ ಕೂಗಿ ಆ ಮನೆಯ ಸಂಭ್ರಮದ ಸಂಗೀತ ಕಛೇರಿ ಯಲ್ಲಿ ತಾನೂ ತನ್ನ ಧ್ವನಿ ಸೇರಿಸಿತು....
ವಂದನೆಗಳು
*#ಪ್ರಬಂದಅಂಬುತೀರ್ಥ.*
Comments
Post a Comment