Blog number 1799. ನಾವು ಮಾಡುವ ಕೆಲಸ ನಾವು ಪ್ರೀತಿಸಿದರೆ ಆಯಾಸ ಆಗುವುದಿಲ್ಲ... ಹುಸಿ ಅಂತಸ್ತು ಜೀವನಕ್ಕೆ ಬೇಕಾ?...
#ನಮ್ಮ_ಕೆಲಸ_ಉದ್ಯೋಗಕ್ಕೆ_ಬೇರೆಯವರ_ಭಯ_ಏಕೆ?
#ಕುಟುಂಬದ_ಉದ್ಯೋಗ_ಮುಂದುವರಿಸಲು_ಅಂಜಿಕೆ_ಏಕೆ?
#ನಾವು_ಮಾಡುವ_ಕೆಲಸ_ನಾವು_ಪ್ರೀತಿಸಿದರೆ_ಆಯಾಸ_ಇರುವುದಿಲ್ಲ.
#ಎಲ್ಲರೂ_ಆಫೀಸರ್_ಆಗಲು_ಸಾಧ್ಯವಿಲ್ಲ
ಈಗಲೂ ಈ ಗಿಲ್ಟ್ ಯುವ ಜನರಲ್ಲಿದೆ, ಕಾರಣ ತಾನು ಮಾಡುವ ಕೆಲಸ ಕನಿಷ್ಟ ಮತ್ತು ಅವಮಾನಕರ ಎಂಬುದು,
ಸ್ವತಃ ತಾನು ಮಾಡುವ ಕೆಲಸ ಪ್ರೀತಿಸದೇ ಇರುವುದು ಮತ್ತು ತಾನು ಮಾಡುವ ಕೆಲಸ ಕನಿಷ್ಟ ಎಂದು ತೀಮಾ೯ನ ಮಾಡುವುದು.
ಆ ಕೆಲಸ ಮಾಡುವಾಗ ಪರಿಚಯಸ್ಥರು, ಗೆಳೆಯರು ನೋಡಬಾರದೆಂಬ ಮನಸ್ಸಿನ ಆತಂಕ,ಇದು ನಮ್ಮ ಮನೆಯಲ್ಲಿ ಬಾಲ್ಯದಲ್ಲಿ ತಂದೆ ತಾಯಿಗಳು ಮಕ್ಕಳಿಗೆ ನಮ್ಮ ಆದಾಯ ಸಾಲಗಳ ಪರಿಚಯ ಮಾಡದೆ ತಮ್ಮ ಕಷ್ಟಗಳನ್ನು ಮಕ್ಕಳಿಂದ ಮರೆ ಮಾಚುವುದು ಮತ್ತು ಯಾವ ಹೊಟ್ಟೆಪಾಡಿನ ಉದ್ಯೋಗ ಮೇಲೂ ಇಲ್ಲ ಕೀಳೂ ಇಲ್ಲ ಎಂಬುದು ಪ್ರಾಥಮಿಕ ಶಿಕ್ಷಣದಲ್ಲಿ ಸರಿಯಾಗಿ ನಮ್ಮ ತಲೆಗೆ ಹೊಕ್ಕುವಂತ ಪಾಠಗಳಲ್ಲಿ ಸೇರದಿರುವುದು.
ಗಾಂದೀಜಿ ಹೇಳಿರುವ "ವಕೀಲನಿಗಿರುವ ವೃತ್ತಿ ಗೌರವ ಮತ್ತು ಕ್ಷೌರಿಕನಿಗಿರುವ ವೃತ್ತಿ ಗೌರವ ಒಂದೇ" ಅನ್ನುವುದು ನಮಗೆ ಅರ್ಥವಾಗುವಾಗ ನಮಗೆ ಅದ೯ ಆಯಸ್ಸು ಆಗಿರುತ್ತದೆ.
ಈಗಿನ ಯುವ ಜನರು ತಮ್ಮ ಕುಟುಂಬದ ಉದ್ಯೋಗ ಮುಂದುವರಿಸಿ ಅದರಲ್ಲಿ ಅವರ ಜ್ಞಾನದಿಂದ ಹೆಚ್ಚು ಆದೂನಿಕರಣಗೊಳಿಸಿ ಹೆಚ್ಚು ಲಾಭ ಮಾಡುವ ಅವಕಾಶ ಇದ್ದರೂ ಅನೇಕ ಕುಟುಂಬಗಳಲ್ಲಿ ಯಾವ ಕಾರಣಕ್ಕೂ ಅಪ್ಪ ಮಾಡುವ ಉದ್ಯೋಗ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ನನ್ನ ತಂದೆ ನನ್ನಲ್ಲಿದ್ದ ಈ ಪಾಲ್ಸ್ ಪ್ರೆಸ್ಟೀಜ್ ಗಮನಿಸಿದ್ದರು, ಅದನ್ನು ತೆಗೆದು ಹಾಕುವ ತೀಮಾ೯ನ ಅವರು ಮಾಡಿದ್ದರು ಆದ್ದರಿಂದ ಪ್ರತಿ ದಿನ ಶಾಲೆಗೆ ಹೋಗುವ ಮೊದಲು ಮತ್ತು ಬಂದ ನಂತರ ಮನೆ ಬೇಲಿ ಹೊರಗಿನ ಕಸ- ಮಣ್ಣು ಸ್ವಚ್ಚ ಮಾಡುವ ಮತ್ತು ಅದನ್ನು ಬುಟ್ಟಿಯಲ್ಲಿ ತುಂಬಿ ಮನೆ ಹಿಂದಿನ ಗುಂಡಿಗೆ ಹೊತ್ತೊಯ್ದು ಹಾಕುವ ಕೆಲಸ ಕೊಟ್ಟಿದ್ದರು.
ನಮ್ಮ ಮನೆ ಊರಿನ ಕೇಂದ್ರ ಸ್ಥಳದಲ್ಲಿ ನಾಲ್ಕು ರಸ್ತೆ ಸೇರುವಲ್ಲಿತ್ತು, ಯಾರಿಗೂ ಕಾಣದಂತೆ ಕೆಲಸ ಮಾಡುವ ಸಾಧ್ಯತೆ ಇರಲೇ ಇಲ್ಲ ಅದರಲ್ಲೂ ಕೀಟಲೆಯ ಗೆಳೆಯರು ಗೇಲಿ ಮಾಡಲು ನನ್ನ ಕೆಲಸ ಬೇರೆಯವರಿಗೆ ಕರೆತಂದು ತೋರಿಸುತ್ತಿದ್ದರು, ಶಾಲಾ ಮಾಸ್ತರೂ ನನ್ನ ಕೆಲಸ ನೋಡಬಾರದೆಂಬ ನನ್ನ ಹರಕೆ ಕೆಲಸ ಮಾಡಲೇ ಇಲ್ಲ,ಅವರಿಗೆಲ್ಲ ನಾನು ಕಾಣಬಾರದೆಂದು ಗೋಣಿ ಚೀಲದ ಕೊಪ್ಪೆ ಒಳಗೆ ಮುಖ ಮುಚ್ಚಿಕೊಂಡೆ ಕೆಲಸ ಮಾಡಿದರೂ ನನ್ನ ದೇಹದ ಬಾಡಿ ಲಾಂಗ್ವೇಜ್ ಮುಚ್ಚಿಡಲು ಸಾಧ್ಯವೇ?.
ನಮ್ಮ ತಂದೆ ಚರಂಡಿ ಮಣ್ಣು ಕಡಿದು ಬುಟ್ಟಿಗೆ ತುಂಬಿ ತಲೆಗೆ ಹೊರಿಸುತ್ತಾ " ನಮ್ಮ ಕೈ ಮಾತ್ರ ನಮ್ಮ ತಲೆ ಮೇಲೆ ' ನೋಡುವ ಕೆಲವರ ದೃಷ್ಟಿ ನಕಾರತ್ಮವಾಗಿರುತ್ತದೆ ಹಾಗಂತ ಪ್ರಪಂಚದಲ್ಲಿ ಎಲ್ಲರೂ ಹಾಗಿರುವುದಿಲ್ಲ, ನಿನ್ನ ಆಸಹಾಯಕತೆ ನೋಡಿ ಗೇಲಿ ಮಾಡುವವರು ಮುಂದೆ ನೀನು ಈ ಹಂತ ದಾಟಿ ಸಾಧನೆ ಮಾಡಿದಾಗ ಅವರು ನಿನ್ನ ಸಾದನೆಗೆ ಹೊಟ್ಟೆ ಕಿಚ್ಚು ಪಟ್ಟು ನಗುತ್ತಾರೆ, ಹರಕು ಅಂಗಿ ತೊಟ್ಟಾಗ ಕನಿಕರ ತೋರುವ ನಮ್ಮವರೇ ಒಳ್ಳೇ ಬಟ್ಟೆ ತೊಟ್ಟಾಗ ಅನುಮಾನ ಪಡುತ್ತಾರೆ, ಕಳ್ಳತನ ಮಾಡೋದಾದರೆ ನೀನು ಈ ರೀತಿ ಜನರಿಗೆ ಹೆದರು ಅದು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ನಾಚಿಕೆ ಏಕೆ?" ಅನ್ನುತ್ತಾ ಅವರ ಜೀವನದ ಕಥೆ ಜೊತೆಗೆ ನಮಗೆ ಪರಿಚಯ ಇರುವ ಸ್ಥಳಿಯ ಸಾದಕರ ಕಥೆ ಹೇಳುತ್ತಿದ್ದರು ಇದನ್ನು ಕೇಳುತ್ತಾ ನಾನು ನನ್ನಲ್ಲಿದ್ದ ಪಾಲ್ಸ್ ಪ್ರಿಸ್ಟೇಜ್ ಮತ್ತು ಗಿಲ್ಟಿ ಕಾನ್ಷಿಯಸ್ ಕಳೆದು ಕೊಂಡೆ.
ಮುಂದೆ ನಾನು ಮಾಡುವ ಉದ್ಯೋಗ ವ್ಯವಹಾರ ನಾನೇ ಹೆಚ್ಚು ಪ್ರೀತಿಸಿದೆ, ನಾನೇ ಆಯ್ಕೆ ಮಾಡಿದ್ದ ಕೆಲಸದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾದ್ದರಿಂದ ನನಗೆ ಜೀವನ ಆಯಾಸ ಆಗಲಿಲ್ಲ.
ನಾನು ನನ್ನ ಅಣ್ಣ ಇಬ್ಬರೂ ಕೃಷಿ -ಅಕ್ಕಿ ಗಿರಣಿಗಳಲ್ಲಿ ನಾವೇ ಮಾಲಿಕರು ನಾವೇ ಕೆಲ ಕೆಲಸಗಾರರಾದೆವು ಇದರಿಂದ ನಮಗೆ ಬ್ಲಾಕ್ ಮೇಲ್ ಮಾಡುವ ಕೆಲಸಗಾರರು ನಮಗೆ ಮಧ್ಯದಲ್ಲಿ ಹೇಳದೇ - ಕೇಳದೇ ಕೆಲಸ ಬಿಟ್ಟು ಹೋಗಿ ನಮ್ಮ ವ್ಯವಹಾರದ ಬಾಗಿಲು ಹಾಕಿಸುವ ಮೊಸ ಮಾಡಲು ಸಾಧ್ಯವೇ ಆಗಲಿಲ್ಲ.
ಈಗಲೂ ನನಗೆ ನಮ್ಮ ಸಂಸ್ಥೆ ವಸ್ತುಗಳು ಎಲ್ಲಿ ಬೇಕಾದರೂ ಹೊತ್ತು ಒಯ್ಯಲು ನನಗೆ ನಾಚಿಕೆ ಇಲ್ಲ, ಲಾರಿ -ಟ್ರಾಕ್ಟರ್ ಗಳ ಹಿಂದೆ ನಿಂತು ಪ್ರಯಾಣ ಕೂಡ ಮಾಡಿದ್ದೇನೆ, ನಮ್ಮದೇ ಸಾಫ್ಟ್ ಡ್ರಿಂಕ್ ಉದ್ಯಮ ಪ್ರಾರಂಬಿಸಿದಾಗ ಸಾಗರದ ಅಂಗಡಿ ಅಂಗಡಿಗೆ ಕ್ರೇಟ್ ಹೊತ್ತು ಮಾರಾಟ ಮಾಡಿದ್ದೆ ನಂತರ ರಾಜಕಾರಣದಲ್ಲಿ 2013ರಲ್ಲಿ ಸಾಗರ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷನಾದಾಗ ಅಡುಗೆ ಅನಿಲ ಬೆಲೆ ವಿರೋದಿಸಿ ಪ್ರತಿಭಟನಾ ಮೆರವಣಿಗೆ ಮಾಡಿದಾಗ ಗ್ಯಾಸ್ ಸಿಲೆಂಡರ್ ಮೆರವಣಿಗೆಯಲ್ಲಿ ತಲೆ ಮೇಲೆ ಹೊರಲು ಯಾರು ಮುಂದೆ ಬರದಿದ್ದಾಗ ನಾನೇ ತಲೆ ಮೇಲೆ ಸಿಲೆಂಡರ್ ಹೊತ್ತು ಸಾಗಿದ್ದೆ ಇಲ್ಲಿ ನಮ್ಮನ್ನು ಯಾರೋ ನೋಡುತ್ತಾರೆ ಅದು ನಮಗೆ ಅವಮಾನ ಎಂಬ ಭಾವನೆ ಅನೇಕರಲ್ಲಿ ಗಟ್ಟಿಯಾಗಿ ತಲೆಯಲ್ಲಿ ಹೆಪ್ಪುಗಟ್ಟಿದೆ ಅದೇ ಹುಸಿ ಅಂತಸ್ತು (Falls prestige).
ಈಗ ನಮ್ಮ ಕುಟುಂಬದ ವ್ಯವಹಾರದಲ್ಲಿ ಮುಂದಿನ ವಾರಸುದಾರರಾದ ನನ್ನ ಮಗ ಮತ್ತು ನನ್ನ ಅಣ್ಣನ ಮಗ ಕೂಡ ಯಾರಿಗೂ ಅಂಜದೆ ನಮ್ಮ ಸಂಸ್ಥೆಯ ಎಂತಹ ಕನಿಷ್ಟವಾದ ಕೆಲಸವೂ ನಿರಾಯಾಸವಾಗಿ ಮಾಡಿ ಮುಗಿಸುತ್ತಾರೆ ಮತ್ತು ನಮ್ಮ ಎಲ್ಲಾ ಉದ್ಯೋಗ ಕೃಷಿಯನ್ನು ಪ್ರೀತಿಸುತ್ತಾರೆ ಜೊತೆಗೆ ನನ್ನ ಕಟ್ಟುಪಾಡುಗಳನ್ನು ತಪ್ಪದೇ ಪಾಲಿಸುವುದರಿಂದ ಲಾಭ ಗಳಿಕೆ ಸಾಧ್ಯವಾಗಿದೆ.
ಮೊನ್ನೆ ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದಲ್ಲಿ ನಿತ್ಯ ನಡೆಯುವ ಅನ್ನದಾನಕ್ಕೆ ನೀಡಲು 25 ಕೆಜಿ ಅಕ್ಕಿ ಒಯ್ದಿದ್ದೆ, ಆಶ್ರಮದ ಆಡಳಿತ ಮಂಡಳಿ ಗೇಟು ಹಾಕಿ ಜನ ಸಾಮಾನ್ಯರ ವಾಹನ ಆಶ್ರಮದ ಕಛೇರಿವರೆಗೆ ಹೋಗಲು ಬಿಡುವುದಿಲ್ಲ, ಮಗ ಮತ್ತು ಡ್ರೈವರ್ ಸೆಕ್ಯುರಿಟಿಯವರಿಗೆ ಹೇಳಿ ಆಫೀಸ್ ತನಕ ಕಾರು ಒಯ್ಯುವ ಮಾತಾಡುತ್ತಿದ್ದರು, ಹಿಂದಿನ ಸೀಟಿನಲ್ಲಿದ್ದ ನಾನು ಮತ್ತು ನನ್ನ ಪತ್ನಿ ಇದನ್ನು ಮೌನವಾಗಿ ಗಮನಿಸುತ್ತಿದ್ದೆವು.
ಸೆಕ್ಯುರಿಟಿಯವರು ಒಪ್ಪಲಿಲ್ಲ, ಡ್ರೈವರ್ ಯಾವ ಕಾರಣಕ್ಕೂ ಅಕ್ಕಿ ಚೀಲ ಹೊತ್ತು ಒಯ್ಯಲು ಸಾಧ್ಯವೆ? ..ತಕ್ಷಣ ಬಂದ ಮಗ ಡಿಕ್ಕಿಯಿಂದ ಅಕ್ಕಿ ಚೀಲ ಹೆಗಲ ಮೇಲೆ ಏರಿಸಿ ವರದಳ್ಳಿಯ ಉಬ್ಬಿನ ರಸ್ತೆ ಕ್ರಮಿಸಿ ಆಶ್ರಮದ ಕಛೇರಿ ಒಳ ಹೋದ, ನಾವಿಬ್ಬರು ಶ್ರೀಧರ ತೀರ್ಥದಲ್ಲಿ ಕೈಕಾಲು ತೊಳೆದು ತೀರ್ಥ ಕುಡಿಯುವಾಗ ಪತ್ನಿ ಹೇಳಿದ್ದು ಮಗ ಅನ್ನದಾನದ ಅಕ್ಕಿ ಹೊತ್ತು ಕೊಂಡು ಹೋಗಿ ನೀಡಿದ್ದರಿಂದ ಅವನಿಗೆ ಗುರು ಕೃಪೆ ದಕ್ಕಿತು ಅಂತ.
ಈಗೆಲ್ಲ ಕಾರಿನ ಬಾಗಿಲು ತೆಗೆಯಲು ಆಳು, ಪಾದರಕ್ಷೆ ಹಾಕಲು ಆಳು ಹೀಗೆ ಮಾಡುವುದರಿಂದ ನಾವು ಮಾಡುವ ಕೆಲಸ ನಮಗೆ ಕನಿಷ್ಟ ಅಂತ ಅವಮಾನ ಅಂತ ಬಾವಿಸುತ್ತಾರೆ ನಾನು ಅದಷ್ಟು ನಮ್ಮ ಪರಿಸರದಲ್ಲಿ ಇಂತಹ ಬಾವನೆ ತೆಗೆಯಲು ಪ್ರಯತ್ನಿಸುತ್ತಿರುತ್ತೇನೆ.
ನಮ್ಮಲ್ಲಿ ಕೆಲಸದವರು ಎಲ್ಲಾ ಕೆಲಸ ನಾಚಿಕೆ ಇಲ್ಲದೆ ಮಾಡಿದವರು ಈಗ ನಮ್ಮ ಸಂಸ್ಥೆಯಲ್ಲಿ ದೊಡ್ಡ ವೇತನದಲ್ಲಿ ಹೆಚ್ಚಿನ ಜವಾಬ್ದಾರಿ ಕೆಲಸದಲ್ಲಿ ಇದ್ದಾರೆ.
#ಕಾನಲೆಯಗುರುಪ್ರಸಾದ್ ಎಂಬ FB ಗೆಳೆಯರ ಪೋಸ್ಟ್ ನೋಡುತ್ತಾ ಇದೆಲ್ಲ ನೆನಪಾಯಿತು ಅವರು ಸ್ವತಃ ಎಲ್ಲಾ ಕೆಲಸಕ್ಕೂ ಸೈ ಎಂದು ಮುಂದಾಗುವ ಅವರ ಪೋಸ್ಟ್ ನನಗೆ ತುಂಬಾ ಇಷ್ಟವಾಯಿತು, ಅವರು ಅವರ ಉದ್ಯೋಗಕ್ಕೆ ನೀಡುವ ಗೌರವ ನೋಡಿ ನನಗೆ ಅವರ ಬಗ್ಗೆ ಗೌರವವೂ ಹೆಚ್ಚಾಯಿತು.
Comments
Post a Comment