Skip to main content

Blog number 1778. ಸಾಗರ ತಾಲೂಕಿನ ಒಂದು ನೇಗಿಲ ಕಥೆ ಇಡೀ ರಾಜ್ಯದ ಕೃಷಿ ಇಲಾಖೆಯ ಭ್ರಷ್ಟಾಚಾರ ತೆರೆದು ತೋರಿಸಿದ ಹೆಬ್ಬಾಗಿಲಾಯಿತು ಸ್ವತಃ ಕೃಷಿ ಮಂತ್ರಿ ಬೈರೇ ಗೌಡರು ಬಂದು 8 ಕೃಷಿ ಅಧಿಕಾರಿಗಳನ್ನು ಆ ಕ್ಷಣದಲ್ಲೇ ಜೈಲಿಗೆ ಕಳಿಸಿ ಮರುದಿನ ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಟಿ ಮಾಡಿ ಕೃಷಿ ಇಲಾಖೆಯ ಭಾಗವಾಗಿದ್ದ ಭೂಸಾರ ಸಂರಕ್ಷಣ ಇಲಾಖೆಯನ್ನೆ ರದ್ದು ಮಾಡಿದ್ದರು

ನಾಗೇಂದ್ರ ಸಾಗರ್ ಕಣ್ಣಾರೆ ನೋಡಿದ್ದ ನಮ್ಮ ರೈತ ಪರ ಹೋರಾಟದ ಲೇಖನ  2018ರಲ್ಲಿ ಬರೆದಿದ್ದು ಇವತ್ತು ಇನ್ನೊಮ್ಮೆ ಪೋಸ್ಟ್ ಮಾಡಿದ್ದಾರೆ.
  ಈಗ ನೇಗಿಲು, ಎತ್ತು -ಗಾಡಿ,ಬತ್ತದ ಗದ್ದೆ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ ಎಲ್ಲವೂ ನೇಪಥ್ಯಕ್ಕೆ ಸರಿದಿದೆ.
 ಈ ಹೋರಾಟದ ಪೂರ್ಣ ಮಾಹಿತಿ ನಾನು ಬರೆದ ಬ್ಲಾಗ್ ಈ ಲಿಂಕ್ ಕ್ಲಿಕ್ ಮಾಡಿ #ಒಂದು_ನೇಗಿಲ_ಕಥೆ ಓದಿ.
https://arunprasadhombuja.blogspot.com/search?q=%E0%B2%92%E0%B2%82%E0%B2%A6%E0%B3%81+%E0%B2%A8%E0%B3%87%E0%B2%97%E0%B2%BF%E0%B2%B2+%E0%B2%95%E0%B2%A5%E0%B3%86

ನಾಗೇಂದ್ರ ಸಾಗರ್ ಬರೆದ ಲೇಖನ....
#ನೇಪಥ್ಯಕ್ಕೆ_ಸೇರಿದ_ನೇಗಿಲು.


ಆವಿನಹಳ್ಳಿಯ ಮಂಜುನಾಥ ಆಚಾರ್ರು ನನಗೆ ಸಮಾನ ಚಿಂತನೆಯ ಜಗಲೀಕಟ್ಟೆಯಲ್ಲಿ ಜತೆಯಾದವರು.. ಇವರ ಕುಲುಮೆಯಲ್ಲಿ ಸಿದ್ಧವಾಗುವ ನೇಗಿಲು ತೀರಾ ಇತ್ತೀಚಿನ ವರ್ಷಗಳವರಗೆ ನಮ್ಮ ಭಾಗದ ಗದ್ದೆಗಳಿಗೆಲ್ಲ ಚಿರಪರಿಚಿತವು. ಇವರ ನೇಗಿಲ್ಲದೆ ಉಳುಮೆಯೇ ಇಲ್ಲ ಎನ್ನುವಷ್ಟು ಖ್ಯಾತಿ ಇದೆ. 

ಆವಿನಹಳ್ಳಿ ಮಾದರಿ ನೇಗಿಲು ಎಂದು ರಾಜ್ಯಾದ್ಯಂತ ಪ್ರಖ್ಯಾತಿಯಿರುವ ಈ ನೇಗಿಲು ಮಂಜುನಾಥ್ ಆಚಾರ್ ಅವರ ವೃತ್ತಿ ಬದ್ದತೆಯ ಮತ್ತು ಕಲಾತ್ಮಕತೆಯ ಫಸಲು ಎನ್ನುವುದರಲ್ಲಿ ಖಂಡಿತಾ ಎರಡು ಮಾತಿಲ್ಲ. 

ಕೆಲವು ದಿನಗಳ ಹಿಂದೆ ಕೆಲಸದ ನಿಮಿತ್ತ ಆವಿನಹಳ್ಳಿಗೆ ಹೋಗಿದ್ದೆ. ಆವಿನಹಳ್ಳಿಗೆ ಹೋದ ಮೇಲೆ ಇವರಲ್ಲಿಗೆ ಹೋಗದಿರುತ್ತೇನೆಯೇ? ವರ್ಕ ಶಾಪಲ್ಲಿ ಇದ್ದರು. ಕೆಳಗೆ ಕುಲುಮೆ. ಮೇಲೆ ವಾಸದ ಮನೆ. ಮನೆಯ ಹೆಸರೂ 'ಕುಲುಮೆ'ಯೇ. 'ಹೆಚ್ಚೂ ಕಡಿಮೆ ನನ್ನ 50 ವರ್ಷಗಳ ಕೆಲಸದಲ್ಲಿ ನಾನು ಗಳಿಸಿದ್ದೆಂದರೆ ಈ ಮನೆ ಮಾತ್ರ.' ನನಗೆ ಆಚಾರರು ಆಗಾಗ ಹೇಳುತ್ತಿರುವ ಮಾತಿದು.. ಅವರ ಮಾತಲ್ಲಿ ಯಾವಾಗಲೂ ಈ ನೋವಿರುತ್ತದೆ. 'ಆದರೆ ನೀವು ಹಣದ ಹೊರತಾದ್ದನ್ನೂ ಗಳಿಸಿದ್ದೀರಿ. ಅದೆಷ್ಟೋ ರೈತಮಂದಿಗೆ ಅನುಕೂಲವಾಗಿದ್ದೀರಿ.. ನೂರಾರು ಸಮಾನಚಿಂತನೆಯ ಮಂದಿಗೆ ಆತ್ಮೀಯರು.. ನೀವು ಮತ್ತು ನೀವು ಮಾಡುವ ಕೆಲಸ ಅಂದರೆ ವಿಶೇಷದ್ದು ಇದಕ್ಕಿಂತ ಗಳಿಕೆ ಬೇಕೇ?' ಅಂತ ನಾನು ಅವರಿಗೆ ಹೇಳುತ್ತಲೇ ಇರುತ್ತೇನೆ... 

ಕಾಲಚಕ್ರದ ಭರಾಟೆಯಲ್ಲಿ ಇಂದು ಎಷ್ಟೋ ಗ್ರಾಮೀಣ ಕಸುಬುಗಳು ಕಾಣೆಯಾಗುತ್ತಿವೆ. ಇಂದು ನಮ್ಮ ಸಾಗರ ತಾಲೂಕಿನಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಕುಲುಮೆಗಳನ್ನು ನೋಡಬಹುದು. ಅವೂ ಕಸಬುದಾರಿಕೆಯ ಕುಲುಮೆಗಳಲ್ಲ. 'ನಾನೂ ಕೇವಲ ಕುಲುಮೆ ಕೆಲಸವನ್ನಷ್ಟೇ ಇಟ್ಟುಕೊಳ್ಳ ಬೇಕಿತ್ತು. ವರ್ಕ ಶಾಪ್ ಬೇಡವಾಗಿತ್ತು. ಇಷ್ಟೆಲ್ಲ ರಿಸ್ಕ ಇರುತ್ತಿರಲಿಲ್ಲ.' ಆಚಾರರು ಹೇಳುವ ರಿಸ್ಕಾದರೂ ಯಾವುದು?  

ಮಂಜುನಾಥ ಆಚಾರ್ ಕಬ್ಬಿಣ ಬಳಸಿ ಮನೆಯ ಮಾಡು ಮಾಡಿಕೊಡುತ್ತಾರೆ. ಪರ್ಫೆಕ್ಟ ಲೆಕ್ಕಾಚಾರ. ತೂಕಕ್ಕಾಗಿ ಕಬ್ಬಿಣ ಹಾಕುವುದಿಲ್ಲ. ಅನಾವಶ್ಯಕ ಕಬ್ಬಿಣ ಬಳಸುವುದಿಲ್ಲ. ಲೋಡ್ ಬೇರಿಂಗ್ ಕೆಪಾಸಿಟಿಯ ಲೆಕ್ಕಾಚಾರ ಹಾಕಿದರೆ ಯಾವ ಇಂಜನಿಯರ್ರೂ ಅಲ್ಲಗೆಳೆಯುವುದಿಲ್ಲ. ಏಕೆ ಹೇಗೆ ಎಂದು ಬಿಡಿಸಿ ಲೆಕ್ಕಾಚಾರ ಹೇಳುತ್ತಾರೆ. ಇವರ ಮಜೂರಿ ಸ್ವಲ್ಪ ಜಾಸ್ತಿ ಅಂತ ಮೂಗು ಮುರಿದು ಬೇರೆಡೆಗೆ ಹೋದವರಿದ್ದಾರೆ. ಮಜೂರಿಯಲ್ಲಿ ಎರಡು ರೂ. ಕಡಿಮೆ ಮಾಡಿ ಕಬ್ಬಿಣ ಒಂದಕ್ಕೆ ಎರಡರಷ್ಟು ಹಾಕುವವರೂ ಇದ್ದಾರೆ. ಮನಕಂಡಲ್ಲಿ ಕೆಲಸ ಮಾಡಿಸಿ ಕಡೆಗೆ ತಾಂತ್ರಿಕವಾಗಿ ಎಡವಿ ಬಿದ್ದು ಮತ್ತೆ ಇವರಲ್ಲಿಗೇ ಬಂದು ಅಲವತ್ತು ಕೊಳ್ಳುವವರೂ ಇದ್ದಾರೆ. 

ಮಲೆನಾಡಿನ ಅಪರೂಪದ ಹೆಂಚು ಮಾಡಿನ ವಿನ್ಯಾಸದಲ್ಲಿ ಅದರಲ್ಲೂ ಭವಂತಿ ಮನೆ ಅಳವಡಿಕೆಯಲ್ಲಿ ಇವರನ್ನು ಬಿಟ್ಟರೆ ಇಲ್ಲ ಅನ್ನುವಷ್ಟು ಫೇಮಸ್ಸು. ನನ್ನ ಮನೆಯ ಮಾಡೂ ಇವರದೇ ವಿನ್ಯಾಸ.

ಬಿಡಿ ಇದು ಮಾಡಿನ ಮಾತಾಯಿತು. ಮರಳಿ ನೇಗಿಲಿನ ವಿಚಾರಕ್ಕೇ ಬರೋಣ. ನನ್ನ ಇವರ ಗೆಳೆತನ ಈ ನೇಗಿಲಿನ ವಿಷಯದಿಂದಲೇ ಸುರುವಿಟ್ಟುಕೊಂಡಿದ್ದು. 

90ರ ದಶಕದ ನಡುವದು. ನಾನು ಬೆಂಗಳೂರು ತೊರೆದು ಕೃಷಿ ಕಾಯಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೆ.. ಸಮಾಜದ ಹಲವು ಸ್ತರದ ಗೆಳೆಯರ ನಂಟಿತ್ತು. ಸಾಮಾಜಿಕ ಮತ್ತು ರಾಜಕೀಯ ಕಾಳಜಿಯ ಚರ್ಚೆಗಳಿಗೆ ನನ್ನ ಅಂಗಡಿ ಅಡ್ಡೆಯಾಗಿತ್ತು. ಆಗ ಸಾಗರ ತಾಲೂಕಿನ ರಾಜಕೀಯದಲ್ಲಿಯೇ ಬಲು ಅಪರೂಪವಾದ ವಿದ್ಯಮಾನವೊಂದು ಸಂಭವಿಸಿತು.. 

ಆವಿನಹಳ್ಳಿಯ ಈ ಆಚಾರ್ ಮಾಡುವ ಕೇವಲ 7.5 ಕೆಜಿ ತೂಕದ ನೇಗಿಲು ಭೃಷ್ಟರ ಬುಡ ನಡುಗಿಸಿ ಅವರನ್ನು ನಡು ಬೀದಿಯಲ್ಲಿ ಬತ್ತಾಲಾಗಿಸಿತ್ತು. ಆವಿನಹಳ್ಳಿಯ ಮಂಜುನಾಥ್ ಆಚಾರರ ನೇಗಿಲನ್ನು ಕೃಷಿ ಇಲಾಖೆಯು ಉದ್ದೇಶ ಪೂರ್ವಕವಾಗಿ ಟೆಂಡರ್ ಪ್ರಕ್ರಿಯೆಯಿಂದ ಹೊರಗೆ ಇಟ್ಟಿತ್ತು. ನೇಗಿಲಿಗೆ ಕೃಷಿ ಇಲಾಖೆ ದರ ನಿಗದಿ ಮಾಡಿ ಅರ್ಧಾಂಶ ಸಬ್ಸಿಡಿ ಕೊಡುತ್ತಿತ್ತು. ಇವರದೇ ನೇಗಿಲು ಬೇಕೆಂದು  ಹೋದರೆ ಕೆಲಸಕ್ಕೆ ಬಾರದ ಬಲರಾಮ ನೇಗಿಲು ಅಂತ ಕೊಡಲಾಗುತ್ತಿತ್ತು. ರೈತರು ಸಿಡಿದೆದ್ದರು. 

ಈ ಬಗ್ಗೆ ಆಗ ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದ ಅರುಣ್ ಪ್ರಸಾದ್, ತಾಲೂಕು ಪಂಚೖಾತ್ ಅಧ್ಯಕ್ಷ ಭೀಮನೇರಿ ಶಿವಪ್ಪ, ಕಲ್ಮನೆ ಪಂಚೖಾತ್ ಉಪಾಧ್ಯಕ್ಷ ಕುಂಟುಗೋಡು ಸೀತಾರಾಂ ರೈತರ ಅಹವಾಲಿಗೆ ಕಿವಿಯಾದರು. ವಿವಿಧ ಬಗೆಯ ಹೋರಾಟಗಳು. ರೂಪುರೇಷೆಗಳು. ಇವೆಲ್ಲವುಗಳಿಗೆ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ. 

ಸಾಗರದಲ್ಲಿ ಜನಪರವಾದ ಅದೆಷ್ಟೋ ಮಾದರಿ ಹೋರಾಟಗಳು ನಡೆದಿವೆ.. ಆದರೆ ಭೃಷ್ಟ ಅಧಿಕಾರಿಗಳ ಭಂಢತನ ನಡುಬೀದಿಯಲ್ಲಿ ಹೀಗೆ ಹರಾಜಾದದ್ದು ಮಾತ್ರ ಅದೇ ಮೊದಲಾಗಿತ್ತು. ಚೋದ್ಯವೆಂದರೆ ಭೃಷ್ಟ ಅಧಿಕಾರಿಗಳನ್ನು ಥರಥರ ನಡುಗಿಸುತ್ತಿದ್ದ ಸಾಗರದ ಆಗಿನ ಶಾಸಕರು ಮಾತ್ರ ಈ ವಿಷಯದಲ್ಲಿ ಜಾಣ ಮೌನಿಯಾಗಿದ್ದರು. ಅಷ್ಟು ಮಾತ್ರವಲ್ಲ ಈ ಹೋರಾಟವನ್ನು ಮಟ್ಟ ಹಾಕಲು ವ್ಯವಸ್ಥಿತವಾದ ವ್ಯೂಹವನ್ನೇ ಮಾಡಿದರು ಎಂಬ ಆಪಾದನೆಯೂ ಇದೆ. ಹೀಗಾಗಿ ಹಿಮ್ಮೇಳದಲ್ಲಿದ್ದ ಕೆಲವು ಗಂಡುಗಲಿ ನಾಯಕರು ಎಲ್ಲಿ ಶಾಸಕರ ಕೆಂಗಣ್ಣಿಗೆ ಬೀಳುತ್ತೇವೋ ಎಂದು ರಾತ್ರೋರಾತ್ರಿ ಹೋರಾಟದ ಅಂಗಣದಿಂದ ನಾಪತ್ತೆಯಾದರು. 

ಆದರೂ ಸಾಗರದ ಈ ಹೋರಾಟ ವಿಧಾನಸೌಧಕ್ಕೂ ಮುಟ್ಟಿ ಸ್ವತಃ ಕೃಷಿ ಸಚಿವ ಭೈರೇಗೌಡರೇ ಯುದ್ಧಭೂಮಿಗೆ ಭೇಟಿಯಿತ್ತರು. ಖುದ್ದು ಪರಿಶೀಲನೆ ಮಾಡಿದರು. ವಿವಿಧ ಯೋಜನೆಗಳಡಿಯಲ್ಲಿ ನಡೆದಿದ್ದ ಬ್ರಹ್ಮಾಂಡ ಭೃಷ್ಟಾಚಾರ ಬಯಲಿಗೆಳೆದರು. ಹೋರಾಟ ತಾರ್ಕಿಕ ಅಂತ್ಯ ಕಂಡಿತು. ತಪ್ಪೆಸಗಿದ ಅಧಿಕಾರಿಗಳಿಗೆ ಶಿಕ್ಷೆಯಾಯಿತು. ರೈತರು ತಾವು ಬಯಸಿದ ಆವಿನಹಳ್ಳಿ ಮಾದರಿ ನೇಗಿಲನ್ನು ಇಲಾಖೆಯಲ್ಲಿ ಪಡೆದರು. 

ಆದರೆ ಮುಂದೊಮ್ಮೆ ಸಾಗರದ ಶಾಸಕರೂ ಆಗಬಹುದಾಗಿದ್ದ ಭೀಮನೇರಿ ಶಿವಪ್ಪ ಯಾಕೋ ತಣ್ಣಗಾದರು.. ಅರುಣ್ ಪ್ರಸಾದ್ ಒಂಟಿ ಸೇನಾನಿಯಾಗಿ ಹೋರಾಡಿ ಕಡೆಗೆ ರಾಜಕೀಯದ ಗೊಡವೆಯನ್ನೇ ಬಿಟ್ಟರು. ಅಂದು ಶಸ್ತ್ರತ್ಯಾಗ ಮಾಡಿದ ಸೇನಾಳುಗಳು ಮಾತ್ರ ಇಂದಿಗೂ ಬಾಡಿಗೆ ಶಸ್ತ್ರಾಸ್ತ್ರಗಳೊಂದಿಗೆ ಬಾಡಿಗೆ ಹೋರಾಟದಲ್ಲೇ ತೃಪ್ತಿ ಕಂಡಿದ್ದಾರೆ. ರಾಜ್ಯ ಮಟ್ಟದ ರಾಜಕೀಯವನ್ನಷ್ಟೇ ಕಂಡಿದ್ದ ನಾನು ಸಾಗರ ಮಟ್ಟದಲ್ಲಿ ನಡೆಯುವ ರಾಜಕೀಯದ ಒಳಸುಳಿಗಳನ್ನು ಕಂಡು ಪ್ರಪಂಚ ಹೀಗೂ ಇರುತ್ತದೆ ಎಂದು ಆಶ್ಚರ್ಯಚಕಿತನಾಗಿದ್ದೆ. 

ಹೋಗಲಿ ಈ ಪರಿಸ್ಥಿತಿಯ ಲಾಭವನ್ನು ಮಂಜುನಾಥ್ ಆಚಾರ್ ಕೂಡ ಪಡೆದು ಕೊಳ್ಳಲಿಲ್ಲ. ವ್ಯವಸ್ಥೆಯೊಂದಿಗೆ ರಾಜಿಯಾಗದ ಸ್ವಭಾವ ಅವರದು. ಇಲ್ಲದೇ ಹೋದರೆ ಮಾದರಿ ನೇಗಿಲನ್ನು ಸಬ್ ಕಾಂಟ್ರಾಕ್ಟ ಕೊಟ್ಟು ಇಂದು ಮಜಬೂತಾದ ಸ್ಥಿತಿಯಲ್ಲಿ ಇರಬಹುದಾಗಿತ್ತು. 

ನಾವು ಗೆಳೆಯರು ಕಟ್ಟಿಕೊಂಡಿದ್ದ ಫಾರ್ಮರ್ಸ ಕ್ಲಬ್ ವತಿಯಿಂದ ಇವರನ್ನು ಗುರುತಿಸಿ ಸನ್ಮಾನ ಮಾಡಿದ್ದು, ಇವರ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸ್ವತಃ ಶ್ರೀ ವೀರೇಂದ್ರ ಹೆಗಡೆಯವರಿಂದ ಇವರಿಗೆ, ಇವರ ನೇಗಿಲಿಗೆ ಸನ್ಮಾನ ಮಾಡಿಸಲು ನೆರವಾದದ್ದು ಈಗೆಲ್ಲ ನೆನಪ ಪುಸ್ತಿಕೆಗೆ ಸೇರಿಹೋಗಿದೆ.

ಈಗ ಯಾರಿಗೆ ಬೇಕಾಗಿದೆ ನೇಗಿಲು? ಯಾರಿಗೂ ಗದ್ದೆ ಬೇಸಾಯವೇ ಬೇಡವಾಗಿದೆ. ಇದ್ದರೂ ಎಲ್ಲವೂ ಯಾಂತ್ರೀಕರಣ. ಸರಕಾರ ಮುಂದಿನ ದಿನಗಳಲ್ಲಿ ಗದ್ದೆ ಬೇಸಾಯ ಮಾಡದೇ ಹೋದರೂ ಪರವಾಗಿಲ್ಲ ಕೃಷಿಕರ ಮನೆ ಬಾಗಿಲಲ್ಲಿ ಟಿಲ್ಲರ್, ಟ್ರಾಕ್ಟರುಗಳನ್ನು ನಿಲ್ಲಿಸಲು ಪಣ ತೊಟ್ಟಿದೆ. ರಾಜಕೀಯ ಪಕ್ಷಗಳ ಹೆಮ್ಮೆಯ ಗುರುತಾದ ನೇಗಿಲು ರೈತನ ಹೆಗಲಿಂದ ಇಳಿದು ನಾಡಗೀತೆಯಲ್ಲಿ ಮಾತ್ರ ಕೇಳಿ ಬರುವ ದಿನಗಳು ತುಂಬಾ ದೂರವಿಲ್ಲ ಅಂತನ್ನಿಸುತ್ತಿದೆ.

✍️ ನಾಗೇಂದ್ರ ಸಾಗರ್...

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...