Skip to main content

Blog number 1796. ಜೈಲು - ಕೈಕೋಳ - ರವಡಿ ಪಟ್ಟಿ - 107 ಕೇಸ್ .... ಹೀಗೆ ಒಮ್ಮೆ ಹಿಂದೆ ತಿರುಗಿ ನೋಡಿದಾಗ.


#ಹಿಂದೆ_ತಿರುಗಿ_ನೋಡಿದಾಗ.....

#ಜೈಲು_ಬೇಡಿ_ರವಡಿ_ಲೀಸ್ಟ್_107_ಕೇಸ್

#ನನ್ನ_ರಾಜಕಾರಣದ_ಶಿಷ್ಯ_ಹಂದಿಗನೂರು_ನಾಗರಾಜ್

#ರಾಜಕೀಯದಲ್ಲಿನ_ಅಧಿಕಾರಸ್ಥರ_ಸುಳ್ಳು_ದೂರಿನಿಂದ_ನಾವಿಬ್ಬರೂ_ಸಾಗರದ_ಜೈಲು_ಪಾಲು

#ನಾವು_ಪಡುವಾರಳ್ಳಿ_ಪಾಂಡವರಾಗಿ_ಗ್ರಾಮ_ಸುದಾರಣೆ_ಮಾಡಲು_ಹೋದವರು

#ರಾಜಕಾರಣಿಗಳ_ಅಧಿಕಾರದಿಂದ_ಪಡುವಾರಳ್ಳಿ_ಕೌರವರಿಂದ_ಸೋತವರು

#ನಮ್ಮದು_ಕಲಿಯುಗದ_ಮಹಾಬಾರತ

#ಸಾಹಸದಿಂದ_ನೆರೆಯಲ್ಲಿ_ಇಬ್ಬರ_ಜೀವ_ಉಳಿಸಿದ_ಇವರಿಗೆ_ಯಾವ_ಪ್ರಶಸ್ತಿ.


       2019 ರ ಅಕ್ಟೋಬರ್ ನಲ್ಲಿ ದಿಡೀರ್ ಬಂದ ಮಾಯದಂತ ಮಳೆಯಿ೦ದ ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಹೊಸೂರು ಕರಿನಳ್ಳದಲ್ಲಿ ನೆರೆ ಬಂದಾಗ,ಅದರಲ್ಲಿ ಸಿಕ್ಕಿಬಿದ್ದ ತಮ್ಮ ಎತ್ತನೊಂದು ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದ ರೈತ ಮಹಿಳೆ ಮತ್ತು ಅವರ ಪುತ್ರ ಬಾರಿ ಮಳೆಯ ಪ್ರವಾಹದಲ್ಲಿ ಸಿಕ್ಕಿ ಬಿದ್ದಿದ್ದರು.
     ಇದನ್ನ ಗಮನಿಸಿದವರು ಇವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹಂದಿಗನೂರು ನಾಗರಾಜ್ ಗೆ ಪೋನ್ ನಲ್ಲಿ ತಿಳಿಸಿದ್ದಾರೆ.
   

ತಕ್ಷಣ ತಮ್ಮ ಮೋಟಾರ್ ಬೈಕ್ ನಲ್ಲಿ ಹಗ್ಗದೊ೦ದಿಗೆ  ಹೊಸೂರಿನಲ್ಲಿ ಕ್ಯಾ೦ಟಿನ್ ನಡೆಸುವ ಅರುಣ್ ಶೆಟ್ಟಿ ಮತ್ತು ಹೊಳೆನ ಕೊಪ್ಪದ ಈಶ್ವರಪ್ಪನ ಕರೆದುಕೊಂಡು ಹೊಳೆಯ ಇನ್ನೊಂದು ಭಾಗ ತಲುಪಿ ಇಬ್ಬರನ್ನ ರಕ್ಷಿಸಿದ್ದಾರೆ.
  ಜನ ಸೇವೆಯಲ್ಲಿ ಯಾವತ್ತೂ ಹಿಂದೆ ಸರಿಯದ ನಾಗರಾಜ್ ಸಾಹಸಿ ಕೂಡ ಮೊನ್ನೆಯ ಇವರ ದೈಯ೯ ಮತ್ತು ಸಾಹಸದಿಂದ ಇಬ್ಬರ ಜೀವ ಉಳಿಯಿತು,ಇವರಿಗೆ ಸಮಾಜ ಯಾವ ಪ್ರಶಸ್ತಿ ನೀಡಬಹುದು? ಎಂಬ ಗೆಳೆಯರ ಈ ಘಟನೆಯ ಚರ್ಚೆಯಲ್ಲಿ ಹಂದಿಗನೂರು ನಾಗರಾಜ ಮತ್ತು ನಾನು ಜೈಲು ಪಾಲಾದ ಘಟನೆ ನೆನಪಾಯಿತು.
    1980 ರಿಂದಲೇ ಜನಪರ ಹೋರಾಟಗಳಿಂದ ಆಕಷಿ೯ತನಾಗಿದ್ದೆ, ನ್ಯಾಯದ ತಕ್ಕಡಿ ಪತ್ರಿಕೆ ತೀ.ನಾ. ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಸಿಗರೇಟು ನಾಗರಾಜರ ಬಳಗದ ಒಡನಾಟ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜ್ ರಾಚಪ್ಪನವರ  ಹೋರಾಟದ ಕ್ಲಾಸ್ ಗಳಿಂದ ತೀವ್ರವಾಗಿ, ಕೋಲಾರದ ಕಮ್ಯುನಿಸ್ಟ್ ನಾರಾಯಣಸ್ವಾಮಿ ಓದಲು ನೀಡುತ್ತಿದ್ದ ಎ.ಕೆ.ಗೋಪಾಲನ್, ತಾಯಿ ಇತ್ಯಾದಿ ಪುಸ್ತಕಗಳಿಂದ ನಿರ್ದಿಷ್ಟ ಗುರಿ ಕಡೆಗೆ ಸಾಗುತ್ತಾ ದಲಿತ ಸಂಘರ್ಷ ಸಮಿತಿ ಸ್ಥಾಪಕ ಕೃಷ್ಣಪ್ಪರ ಸಹಕಾರದಿಂದ ಕಾರ್ಮಿಕ ಚಳವಳಿಗಳ ಪ್ರಾರಂಭಕ್ಕೆ ಕಾರಣವಾಗಿ ನಮ್ಮ ತಂದೆಯ ಕಾರಣದಿಂದ ರೈತ ಸಂಘದ ಪ್ರೋಪೆಸರ್ ನಂಜುಂಡಸ್ವಾಮಿಯವರೆಗೆ ಜನಪರ ಹೋರಾಟಗಳೆ ಜೀವನದ ಸದುದ್ದೇಶ ಎನ್ನಿಸಿತ್ತು.
   1989 ರಲ್ಲಿ ಕಾಗೋಡು ತಿಮ್ಮಪ್ಪರನ್ನು ಸಾಗರಕ್ಕೆ ಕರೆ ತಂದು ಕಾಂಗ್ರೇಸ್ ನಿಂದ ಗೆಲ್ಲಿಸಲೇ ಬೇಕೆಂಬ (1972 ರ ನಂತರ ಮತ್ತು 1980ರಲ್ಲಿ ಕಾಂಗ್ರೇಸ್ ಸೇರಿ ವಿದಾನಪರಿಷತ್ ನಾಮಕರಣವಾಗಿ ಗುಂಡೂರಾವ್ ಸಂಪುಟದಲ್ಲಿ ಮಂತ್ರಿ ಆಗಿದ್ದರು) ಶಪಥ ತೊಟ್ಟಿದ್ದ ಆಹಮದ್ ಅಲೀ ಖಾನ್ ಸಾಹೇಬರು, ಪುತ್ತೂರಾಯರು ಮತ್ತು ಕೆ.ಎಂ.ಲಿಂಗಪ್ಪರೆಂಬ ತ್ರಿವಳಿ ನಾಯಕರ ಸೈನ್ಯದಲ್ಲಿ ನಾನು, ತೀನಾ ಶ್ರೀನಿವಾಸ್ ಮತ್ತು ಬೀಮನೇರಿ ಶಿವಪ್ಪ ಆಗ್ರಸ್ಥಾನದಲ್ಲಿ ಜವಾಬ್ದಾರಿ ವಹಿಸಿದ್ದೆವು.
   ನಂತರ ರಾಜಕಾರಣದಲ್ಲಿ ಗ್ರಾಮ ಪಂಚಾಯತ್ ಸದಸ್ಯನಾಗಿ ಉಪಾದ್ಯಕ್ಷನಾಗಿದ್ದಾಗ  ರಾಜ್ಯದ ಮೊದಲ ಬಗರ್ ಹುಕುಂ ಹಕ್ಕು ಪತ್ರ ವಿತರಣೆ ನಮ್ಮ ಪಂಚಾಯತಿಯಲ್ಲಿ ವಿತರಿಸುವ ದಾಖಲೆ ನನ್ನದಾಗಿತ್ತು.
   ಇದೇ ಅಲೆಯಲ್ಲಿ 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಆಗ ಚುನಾವಣೆಯ ಸಂದರ್ಭದಲ್ಲಿ ಈ ನಾಗರಾಜ್ ಅವರ ಊರಾದ ಹಂದಿಗನೂರಿನ ಸುಮಾರು 40 ಕುಟುಂಬಗಳ ನೀರಿನ ಬವಣೆ ಪ್ರತ್ಯಕ್ಷ ತೋರಿಸಿದ್ದರು.
   ಎತ್ತರದ ಗುಡ್ಡದ ಮೇಲಿನ ಇವರಾರಿಗೂ ಕುಡಿಯುವ ನೀರಿನ ಬಾವಿ ಇರಲಿಲ್ಲ, ಸ್ವತಃ ಬಾವಿ ತೋಡಿದರೂ 35 - 40 ಅಡಿಗೆ ನೀರು ಬರುತ್ತಿರಲಿಲ್ಲ ಮತ್ತು ಆರ್ಥಿಕವಾಗಿ ಸಬಲರಾಗಿರದ ಕುಟುಂಬಗಳಾದ್ದರಿಂದ ( ಇವರೆಲ್ಲ ಶರಾವತಿ ಮುಳುಗಡೆಯಿಂದ ಪರಿಹಾರ ಜಮೀನು ಪಡೆಯಲು ಅರ್ಹತೆ ಇಲ್ಲದ ಆ ಪ್ರದೇಶದ ಭೂಮಾಲಿಕರ ಒಕ್ಕಲಾದ್ದರಿಂದ ) ಬಾವಿ ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲದವರು.
   ಇವರ ನೀರಿನ ಮೂಲ ಬೇಸಿಗೆಯಲ್ಲಿ ಒಂದೆರೆಡು ಕಿಲೋ ಮೀಟರ್ ಕೆಳಗಿನ ಇವರ ಜಮೀನಿನ ಅಂತ್ಯದಲ್ಲಿ ಹರಿಯುವ ಕರಿನಳ್ಳ ಮಾತ್ರ ಆ ಹಳ್ಳದಲ್ಲಿ ಸಣ್ಣ ತಗ್ಗಿನಲ್ಲಿ ಮರಳು ಮಣ್ಣು ತೆಗೆದ ಗುಂಡಿಗಳು.
   ಬೇಸಿಗೆ ಪೂರ್ತಿ ಈ ಎಲ್ಲಾ ಮನೆಗಳ ಸ್ನಾನದ ಮನೆ ಈ ಹೊಳೆ ಸಾಲಿನಲ್ಲೇ ಕಟ್ಟಿಕೊಂಡಿದ್ದ ಬಚ್ಚಲು ಮನೆಗಳನ್ನು ನಾಗರಾಜ್ ತೋರಿಸಿ ಗೆದ್ದ ಮೇಲೆ ಇದಕ್ಕೊಂದು ಪರಿಹಾರ ಮಾಡಬೇಕೆಂದಿದ್ದರು.
   ಗೆದ್ದ ನಂತರ ಹಂದಿಗನೂರು ನಾಗರಾಜರ ನೇತೃತ್ವದಲ್ಲಿ ಅವರ ಹಳ್ಳಿ ಮಾತ್ರ ಅಲ್ಲ ಅಕ್ಕ ಪಕ್ಕದ ಇಂತಹ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು - ದಾರಿ - ವಿದ್ಯುತ್ ಸಂಪರ್ಕ - ಶಾಲೆಗಳು ಸಕಾ೯ರದಿಂದ ತಲುಪಿಸಿದ್ದರಿಂದ ಇವರೆಲ್ಲ ನನ್ನ ಆಪ್ತರೂ ಆಗಿದ್ದರು.
   1999 ರಲ್ಲಿ ಪಕ್ಷೇತರನಾಗಿ ನನ್ನನ್ನು ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪ್ಪ ಮತ್ತು ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ತಾಲ್ಲೂಕಿನಲ್ಲಿ ಗುಂಡಾಗಿರಿ ವಿರೋಧಿಸಿ ಸಾಂಕೇತಿವಾಗಿ ಸ್ಪರ್ಧಿಸುವಂತೆ ಮಾಡಿದಾಗ ಶೇಕಡಾ 10% ಮತಗಳು ನನಗೆ ಬಂದಿದ್ದು ಇವತ್ತಿಗೂ ಸಾಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ದಾಖಲೆ ಉಳಿದಿದೆ.
  ಈ ಸಂದರ್ಭದಲ್ಲಿ ಹಂದಿಗನೂರು ನಾಗರಾಜ್ ಅವರ ಜಾತಿಯ ಕಾಗೋಡರನ್ನು ಬೆಂಬಲಿಸದ ಬಗ್ಗೆ ಸ್ಥಳಿಯ ಮುಖಂಡರು ಬೆಂಕಿ ಉಗಳಲು ಪ್ರಾರಂಬಿಸಿದ್ದರು ಆ ಸಂದರ್ಭದಲ್ಲೇ ಗ್ರಾಮ ಪಂಚಾಯತ್ ಚುನಾವಣೆ ಪ್ರಾರಂಭವಾಗಿ ಕ್ಷೇತ್ರದಾದ್ಯಂತ ನನ್ನ ವಿದಾನಸಭಾ ಚುನಾವಣಾ ಚಿನ್ಹೆ ಬಸ್ಸಿನ ಗುರುತಲ್ಲಿ ಅನೇಕರು ಗೆದ್ದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.
  ಆಗ ಹೊಸೂರು ಗ್ರಾಮ ಪಂಚಾಯತ್ ಗೆ ಬಸ್ಸಿನ ಗುರುತಿನಲ್ಲಿ ಸ್ಪರ್ದಿಸಿದ್ದ ಹಂದಿಗನೂರು ನಾಗರಾಜ್ ಮತ್ತು ಅವರ ಸಂಬಂದಿ ಪತ್ನಿ ಸೋತಿದ್ದರು.
    ನಾಗರಾಜ ಮತ್ತು ಈ ಸಂಬಂದಿ ಯಾವುದೋ ವ್ಯಾಜ್ಯದಿಂದ ಭಿನ್ನಾಭಿಪ್ರಾಯ ಉಂಟಾದಾಗ ನಾಗರಾಜರ ಮೇಲೆ ಮೋಸದಿಂದ ಹಿಂದಿನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದರಿಂದ ನಾಗರಾಜರ ಊರವರು ಅವನ ಮನೆ ಹತ್ತಿರ ವಿಚಾರಿಸಲು ಹೋದಾಗ ಹೆದರಿದ ಆತ ವಿಷದ ಬಾಟಲು ತೋರಿಸಿ ತನ್ನ ಮನೆ ಉಣುಗೋಲು ದಾಟಿದರೆ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದಾಗ ಊರವರು ಸುಳ್ಳು ಬೆದರಿಕೆ ಅಂತ ಬಾವಿಸಿ ಉಣುಗೋಲು ದಾಟಲು ಆತ ಎಲ್ಲರ ಎದುರೇ ವಿಷ ಗಟ ಗಟಾಂತ  ಕುಡಿದೇ ಬಿಟ್ಟ ಇದನ್ನು ನೋಡಿ ಬಂದವರೆಲ್ಲ ವಾಪಾಸ್ ಓಡಿದ್ದಾರೆ.
   ನಂತರ ನಡೆದ ಕಥೆಯೇ ಬೇರೆ ಕ್ಲೈಮಾಕ್ಸ್‌ ... ನಾಗರಾಜನ ವಿರೋದಿಗಳು ನನ್ನ ವಿರೋದಿಗಳೂ ಸೇರಿಕೊಂಡವರು ಈ ಪರಿಸ್ಥಿತಿಯ ಲಾಭ ಪಡೆದು ದ್ವೇಷ ಸಾದಿಸಲು ಯೋಜನೆ ಒಂದನ್ನು ಹಾಕಿಕೊಂಡರು ಅದು ಅಮಾನವೀಯವಾದದ್ದು.
   ವಿಷ ಕುಡಿದವನನ್ನು ಆಸ್ಪತ್ರೆಗೂ ಸೇರಿಸಲಿಲ್ಲ, ಸ್ಥಳಿಯವಾಗಿ ಪ್ರಥಮ ಚಿಕಿತ್ಸೆಯೂ ಕೊಡಿಸದೆ ಆತ ಸಾಯುವವರೆಗೆ ಕಾಲಾಹರಣ ಮಾಡಿ ಸತ್ತ ನಂತರ ದೂರು ನೀಡಿದ್ದಾರೆ ಅದರಲ್ಲಿ ನನ್ನ ಹೆಸರು A - 1 ಮಾಡಿ ನನ್ನ ಶಿಷ್ಯ ಹಂದಿಗನೂರು ನಾಗರಾಜ A - 2 ಮತ್ತು ಇತರರು ಸತ್ತವನನ್ನು ಹಲ್ಲೆ ಮಾಡಿ ವಿಷ ಕುಡಿಸಿ ಸಾಯಿಸಿದ್ದಾರೆ ಎಂದು ಈ ದೂರು ಇಬ್ಬರು ವಕೀಲರು ತಮ್ಮ ಕಾನೂನು ಜ್ಞಾನವನ್ನು ನಿರಪರಾದಿಗೆ ಶಿಕ್ಷಿಸಲು ಬಳಸಿಕೊಂಡರು.
  ಆಗ ಸಾಗರದ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ನಂಜೇಗೌಡರು ಮತ್ತು ASP ರಮೇಶ್ ಸ್ಥಳ ಪರಿಶೀಲನೆಗೆ ಬಂದಾಗ ಸ್ಥಳಿಯ ಮುಖಂಡರೆಲ್ಲ ಸಾಕ್ಷಿ ಹೇಳಿದ್ದಾರೆ, ಅಲ್ಲಿ ಕಿಂಗ್ ಸಿಗರೇಟು ಸೇದಿ ಎಸೆದ ತುದಿಗಳನ್ನು ತೋರಿಸಿ ಇದು ಅರುಣ್ ಪ್ರಸಾದ್ ಇಲ್ಲಿ ನಿಂತು ಮಾಡಿದ ಕೊಲೆಗೆ ಸಾಕ್ಷಿ ಅಂದಿದ್ದಾರೆ.
   ನಂತರ ಎಷ್ಟೋ ವರ್ಷಗಳ ನಂತರ ಗೊತ್ತಾಗಿದ್ದು ಈ ಸಿಗರೇಟು ಸಾಕ್ಷ್ಯವೇ ನನ್ನನ್ನ ಈ ಕೇಸಿಗೆ ಸೇರಿಸದಿರಲು ಕಾರಣ ಆಯಿತಂತೆ, ನನ್ನ ಮೇಲೆ ಸರಣಿ ಸುಳ್ಳಿನ ಪೋಲಿಸ್ ಕೇಸ್ ದಾಖಲಿಸುತ್ತಿದ್ದ ಅಧಿಕಾರದ ರಾಜಕಾರಣಿಗಳ ನಡುವಳಿಕೆಯಿಂದ ರೋಸಿದ್ದ ನಂಜೇಗೌಡರು ಅರುಣ್ ಪ್ರಸಾದ್ ಸಿಗರೇಟು ಸೇದುವುದಿಲ್ಲ ಮತ್ತು ಆತ ಈ ಘಟನಾ ಸಂದಭ೯ದಲ್ಲಿ ಈ ಸ್ಥಳಕ್ಕೆ ಬಂದೇ ಇಲ್ಲ ಎಂದದ್ದು ASP ರಮೇಶ್ ಗೆ ಮನವರಿಕೆ ಆಯಿತಂತೆ ಇದರಿಂದ ನನ್ನ ಹೆಸರು ಕೈ ಬಿಟ್ಟರೂ ಹಂದಿಗನೂರು ನಾಗರಾಜ ಮತ್ತು ಅವರ ಊರಿನ ಎಲ್ಲರನ್ನು (ನಿರಾಪರಾಧಿಗಳು) ಜೈಲಿಗೆ ಕಳಿಸಿದರು.
   ನನ್ನ ಹೆಸರು ಕೈಬಿಟ್ಟಿದ್ದಕ್ಕೆ ಮಂತ್ರಿಗಳ ಸಂಬಂದಿ ASP ಹತ್ತಿರ ವಾದವೇ ಮಾಡಿದರು, ಆ ದಿಟ್ಟ ಅಧಿಕಾರಿ "ನಿಮಗೆ ಆಗದವರನ್ನೆಲ್ಲ ಕೊಲೆ ಕೇಸಿಗೆ ಸೇರಿಸಲು ನಾನು ಪೋಲಿಸ್ ಅಧಿಕಾರಕ್ಕೆ ಬಂದಿಲ್ಲ" ಎಂದದ್ದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಒಂದೆರೆಡು ತಿಂಗಳಲ್ಲೇ ಅವರನ್ನು ವರ್ಗಾಯಿಸಿದರು.
   ನನ್ನ ಜೈಲಿಗೆ ಕಳಿಸುವ ಅವರ ಶಪಥ ಈಡೇರದಿದ್ದರಿಂದ ನಿರಾಸೆ ಅವರಿಗೆ ಆಯಿತಾದರೂ ಆ ಬಗ್ಗೆ ಬೇರೆ ರೀತಿಯ ಪ್ರಯತ್ನದಲ್ಲಿ ಸಪಲರಾದರು. ನಾನೇ ಆಯ್ಕೆ ಮಾಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನ ಅವರ ಜೊತೆ ಸೇರಿಸಿಕೊಂಡು ಅವರಿಂದ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿ ನಾನು ಮತ್ತು ನನ್ನ ಎಂಟತ್ತು ಗೆಳೆಯರನ್ನು ಸಾಗರದ ಜೈಲಿಗೆ ಕಳಿಸಿದರು.
  ಇದು ನನ್ನ ಮೂರನೆ ಜೈಲು ಯಾತ್ರೆ ಆದ್ದರಿಂದ ನನಗೆ ಜೈಲುವಾಸ ಅಂತಹ ಭಯ ಆತಂಕ ಮೂಡಿಸಲಿಲ್ಲ ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಲೇ ಎರೆಡು ಪ್ರತ್ಯೇಕ ಕೇಸಿನಲ್ಲಿ ಜೈಲಿಗೆ ಕಳಿಸಿದ್ದರು ಅದೇನೆಂದರೆ....
   ಕಳಪೆ ಔಷದಿ ಬಡವರಿಗೆ ಖರೀದಿಸಿದ್ದನ್ನು ತನಿಖೆಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಒತ್ತಾಯಿಸಿದ್ದರಿಂದ ಕೊಟ್ಯಾಂತರ ರೂಪಾಯಿ ಔಷದಿಯ ಗೋದಾಮನ್ನೆ ಸುಟ್ಟು ಹಾಕಿದ್ದರು ಇದನ್ನು ಸಭೆಯಲ್ಲಿ ಪ್ರತಿಭಟಿಸಿದ್ದೆ ನನ್ನ ಅಪರಾದ ಅದಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಶಂಕರ್ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ DHO ಶ್ರೀಮತಿ ಜಯಂತಿ ತಮ್ಮ ಮೇಲೆ ಹಲ್ಲೆ ಆಯಿತೆಂದು ದೂರು ನೀಡಿದ್ದರು ನನ್ನನ್ನು ಬಂದಿಸಲು ಶಿವಮೊಗ್ಗದಿಂದ ರಿಸರ್ವ ವ್ಯಾನ್ ಪೋಲಿಸ್ ಜೀಪಿನಲ್ಲಿ ನೂರಾರು ಪೋಲಿಸರನ್ನು ಕಳಿಸಿದ್ದರು.
ನಾನು ಸಿಗಲಿಲ್ಲ ಕಾರಣ ಆಗಿನ ಶಿವಮೊಗ್ಗದ ಜಿಲ್ಲಾ ಪತ್ರಕರ್ತರು ನನಗೆ ಎಚ್ಬರಿಸಿದ್ದರು ಆದರೆ ಆನಂದಪುರ೦ ಠಾಣೆಯ ASI ಜಯರಾಂ ಮಾಹಿತಿ ನೀಡಿದ್ದಾರೆಂಬ ಗುಮಾನಿಯಿಂದ ಅವರನ್ನು ಆ ಕ್ಷಣದಿಂದ ಅಮಾನತ್ತು ಮಾಡಿ ಇಡೀ ಪೋಲಿಸ್ ಪಡೆ ನನ್ನ ಮನೆ ಎದರು ಮುತ್ತಿಗೆ ಹಾಕಿಸಿದ್ದರು.
    ಇದನ್ನು ಪ್ರತಿ ಭಟಿಸಿ ಆಗಿನ ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಇಸ್ಮಾಯಿಲ್ ಖಾನ್, ಮುಖಂಡರಾದ Y. H. ನಾಗರಾಜ್, ರಾಮೇಗೌಡರು, ಯುವ ಮುಖಂಡರಾದ ದಿನೇಶ್, ರವಿಕುಮಾರ್, ರಂಗನಾಥ, ವೆಂಕಟೇಶ್ ಗೌಡ ಮತ್ತು ನೂರಾರು ಜನ ಜಯನಗರ ಠಾಣೆ ಎದರು ರಾತ್ರೋ ರಾತ್ರಿ ಧರಣಿ ನಡೆಸಿದ್ದರಿಂದ ನನ್ನ ಮನೆ ಎದುರು ಹಾಕಿದ್ದ ಫೋಲಿಸ್ ಮುತ್ತಿಗೆ ತೆಗೆದರು ಮತ್ತು ಅಮಾನತ್ತು ಮಾಡಿದ್ದ ASI ಜಯರಾಂ ಆದೇಶ ತೆರವು ಮಾಡಿದ್ದರು ಮರುದಿನ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾದೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ ಮೊದಲ ಜೈಲು ವಾಸ ನೋಡಿದೆ ಅವತ್ತು ನನಗೆ ಕೈಕೊಳ ಕೂಡ ಪೋಲಿಸರು ತೊಡಿಸಿದ್ದರು.
      ಮೂರನೆ ಜೈಲು ವಾಸವಾಗಿ ಸಾಗರದ ಜೈಲಿಗೆ ಕಳಿಸಿದಾಗ ಅಲ್ಲಿ ಗುರು ಶಿಷ್ಯರಾದ ನಾನು ಹಂದಿಗನೂರು ನಾಗರಾಜ ಮತ್ತು ಅವರ ಊರವರು ಕೆಲ ದಿನ ಒಟ್ಟಾಗಿ ಸಾಗರದ ಸಬ್ ಜೈಲಲ್ಲಿ ಇದ್ದೆವು ಮತ್ತು ಇದರಿಂದ ನಮ್ಮನ್ನ ಜೈಲಿಗೆ ಕಳಿಸಿಯೇ ಕಳಿಸುತ್ತೇವೆಂಬ ಅವರ ಶಪಥ ಈಡೇರಿತು.
ಆಗ ಅವರ ಊರಿನ ಹಿರಿಯರು ನೊಂದು ಹೇಳುತ್ತಿದ್ದರು ನಮಗೆ ಕುಡಿಯಲು ನೀರು ಕೊಟ್ಟದ್ದಕ್ಕೆ ಉಪಕಾರ ಸ್ಮರಿಸಿ ನಿಮಗೆ ಎಂಎಲ್ಎ ಚುನಾವಣೆಗೆ ಬೆಂಬಲಿಸಿದ್ದಕ್ಕೆ ನಮಗೂ ಮತ್ತು ನಮ್ಮ ಊರಿಗೆ ಉಪಕಾರ ಮಾಡಿದ್ದಕ್ಕೆ ನಿಮಗೂ ಜೈಲಿಗೆ ಹಾಕಿದ್ದಾರೆ ಅದಕ್ಕೆ ಕಲಿಯುಗ ಅನ್ನೋದು ಅನ್ನುತ್ತಿದ್ದರು.
   ನಂತರ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆ ಆದೆವು, ಕೇಸುಗಳು ಸಾಕ್ಷಿಗಳಿಲ್ಲದೆ ಖುಲಾಸೆ ಆಯಿತು, ಹಂದಿಗನೂರು ನಾಗರಾಜ ಮುಂದೆ ಈ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆದರು.
   ಪಡುವಾರಳ್ಳಿ ಪಾಂಡವರಂತೆ ಊರು ಉದ್ದಾರ ಮಾಡಲು ಹೋದ ನಾವು ಪಡುವಾರಳ್ಳಿ ಕೌರವರ ಹತ್ತಿರ ಸೋತಿದ್ದು ಮಾತ್ರ ಕಲಿಯುಗದ ಮಹಾಭಾರತ ನಮಗೆ ಜೀವನದ ಪಾಠ ಕಲಿಸಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...