Blog number 1786. ಮಲೆನಾಡಿನಲ್ಲಿ ಭೂಮಾಲಿಕರ ಮನೆಯಲ್ಲಿ ಕುದುಕಲಾಂಬ್ರ ಎಂಬ ರೆಸಿಪಿ ಇತ್ತಾ? ತಂಗಳು ಆಹಾರ ಕುದಿಸಿ ಕೊಡುವುದಕ್ಕೆ ಈ ಹೆಸರು ಬಂತಾ ....
#ಸರ್ವಜ್ಞ_ವಾಣಿ_ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ
#ತಿನ್ನುವ_ಅಗಳಿನ_ಮೇಲೆ_ದೇವರು_ಹೆಸರು_ಬರೆದಿರುತ್ತಾನೆ
#ಹೀಗಿದ್ದೂ_ತಿನ್ನುವ_ಅನ್ನವ_ತೆಗುಳುವುದೇಕೆ?
#ಕುದುಕಲಾಂಬ್ರ_ತಂಗಳಾಂಬ್ರ_ಎಂಬ_ಪ್ರತೀತಿ_ಇತ್ತು.
#ಇದರ_ಸತ್ಯಾಸತ್ಯತೆ_ಗೊತ್ತಾ?
#ಇದು_ಅಡುಗೆ ಮಾಡಿ ಬಡಿಸುವವರ ನೋವು.
ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕೆ ಬರುವವರಿಗೆ ಊಟೋಪಚಾರ ನೀಡುವ ಪದ್ಧತಿ ಇದೆ ಕಾರಣ ಹಳ್ಳಿಯಲ್ಲಿ ಹೋಟೆಲ್ ಇತ್ಯಾದಿ ಇರುವುದಿಲ್ಲ ದೂರದಿಂದ ಬಂದವರು ಹಸಿದ ಹೊಟ್ಟೆಯಲ್ಲಿ ಕೆಲಸ ಮಾಡಬಾರದೆಂಬ ಸದುದ್ದೇಶವಾಗಿದೆ.
ಅನ್ನದಾನ ಪುಣ್ಯದ ಕೆಲಸ ಎಂಬ ನಂಬಿಕೆ ಕೂಡ ಇದೆ, ಕೆಲವು ಮನೆಗಳಲ್ಲಿ ಊಟ ಹಾಕಿದರೆ ಕೂಲಿಯಲ್ಲಿ ಹತ್ತಿಪ್ಪತ್ತು ರೂಪಾಯಿ ಕಡಿಮೆ ನೀಡುತ್ತಾರೆ.
ಕೂಲಿಯವರೇ ಊಟ ತಂದು ಕೆಲಸ ಮಾಡಿ ಹೆಚ್ಚು ಕೂಲಿ ಪಡೆಯುವುದಕ್ಕೆ ನಮ್ಮ ಕಡೆ ಒಣ ಸಂಬಳ ಅನ್ನುವ ಪದ ಪ್ರಯೋಗವೂ ಇದೆ.
ನಮ್ಮಲ್ಲಿ ಪ್ರತಿ ನಿತ್ಯ 2೦ ಕ್ಕೂ ಹೆಚ್ಚು ಕಾರ್ಮಿಕರಿಗೆ ಉಚಿತ ಊಟ ಇದೆ, ಕಟ್ಟಡ ನಿರ್ಮಾಣ ಸಮಯದಲ್ಲಿ 60ಕ್ಕೂ ಹೆಚ್ಚು ಜನರಿಗೆ ಊಟೋಪಚಾರ ನಿತ್ಯ ನೀಡುತ್ತಿದ್ದೆವು.
ನಮ್ಮಲ್ಲಿ ಶ್ರಮ ಜೀವಿಗಳಿಗೆ ಉಚಿತ ಊಟ, ಪಿಲ್ಟರ್ ನೀರು, ಶೌಚಾಲಯ ವ್ಯವಸ್ಥೆ, ಅವರ ಬೆಲೆ ಬಾಳುವ ವಸ್ತುಗಳಿಡಲು ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೂ ನಮ್ಮ ಸಿಬ್ಬಂದಿಗಳಲ್ಲಿ ಕೆಲವರು ತಗಾದೆ ತೆಗೆಯುತ್ತಾರೆ ಅನ್ನ ಸರಿ ಇಲ್ಲ, ಸಾರು ಸರಿ ಇಲ್ಲ, ಹೊಟ್ಟೆ ಹಾಳಾಯಿತು ಇತ್ಯಾದಿ ಅವಾಗೆಲ್ಲ ನಾನು ಹೇಳುವುದು ನಾಳೆಯಿಂದ ನಿಮ್ಮ ಮನೆಯಿಂದ ಊಟ ತಂದು ಕೊಳ್ಳಿ ನಾನೇನು ನಿಮಗೆ ಊಟದ ಹಣ ನಿಮ್ಮ ಸಂಬಳದಲ್ಲಿ ಕಳೆಯುವುದಿಲ್ಲ ನಿಮಗೆ ಇಷ್ಟ ಆದರೆ ಮಾತ್ರ ಊಟ ಮಾಡಿ ಅಂತ ಇವರಿಗೆಲ್ಲ ನಮ್ಮ ಮಲ್ಲಿಕಾ ವೆಜ್ ನಲ್ಲಿ ತಯಾರಾದ ಊಟವೇ ಅದು ನಾನು ಸ್ವತಃ ಗುಣಮಟ್ಟ ಪರೀಕ್ಷೆ ಮಾಡಿದ ನಂತರವೇ ನೀಡುವ ಆಹಾರ.
ಒಮ್ಮೆ ಇಂತಹ ಪ್ರಕರಣದಲ್ಲಿ ಜಗಳ ಮಾಡಿಕೊಂಡ ಮಹಿಳಾ ಸಿಬ್ಬಂದಿ ಮರು ದಿನ ಮನೆಯಿಂದ ತಂದ ಊಟ ನೋಡಿ ಉಳಿದ ಕೆಲಸಗಾರರರು ಹೇಳಿದ್ದು "ಇಷ್ಟು ಒಳ್ಳೇ ಊಟ ತೆಗಳಿದ ಅಕ್ಕ ಮನೆಯಿಂದ ತಂದಿದ್ದು ಬಡ್ಡು ಸಾರು ಅನ್ನ" ಅಂತ ....
ಹೀಗ್ಯಾಕೆ ತಿನ್ನುವ ಅನ್ನ ದೂಷಿಸುತ್ತಾರೆ? ಗೊತ್ತಿಲ್ಲ ಆದರೆ ಇಲ್ಲಿ ಈ ರೀತಿ ವರ್ತಿಸುವ ಜನರ ಮನಸ್ಥಿತಿ ವಿಚಿತ್ರ ಇವರು ತಮ್ಮ ಮನೆಯಲ್ಲಿ ಏನು ರಾಜ ಬೋಗ ಉಣ್ಣುವವರಲ್ಲ.
ಇದೇ ರೀತಿ ಮದುವೆ ಇತ್ಯಾದಿ ಸಮಾರಂಭಕ್ಕೆ ಹೋಗಿ ಅಲ್ಲಿ ಊಟ ಮಾಡಿ ಬರುವವರು ಕೂಡ ಊಟದ ಬಗ್ಗೆ ಏನಾದರೂ ಒಂದು ಹೇಳದಿದ್ದರೆ ಅವರಿಗೆ ಜೀರ್ಣವಾಗುವುದಿಲ್ಲ.
ಹಿಂದಿನ ಕಾಲದಲ್ಲಿ ತಾನು ದುಡಿಯುವ ದಣಿಯ ಮನೆಗೆ ನಿಯತ್ತಾಗಿರುವವರನ್ನು ನೋಡಿ ಸಹಿಸದವರು "ಏನೋ ನಮ್ಮ ಮನೆ ಕೆಲಸಕ್ಕೆ ಬರೋದಿಲ್ಲ ಗೌಡನ ಮನೆ ಕುದುಕಲಾಂಭ್ರ ನಿನಗೆ ಬಾಳ ರುಚಿನಾ" ಅನ್ನುತ್ತಿದ್ದರಂತೆ ಮತ್ತು ಕುದುಕಲಾಂಬ್ರ ಅಂದರೆ ಪ್ರತಿ ನಿತ್ಯ ಉಳಿಯುತ್ತಿದ್ದ ಸಾಂಬಾರ್ ಪಲ್ಯ ಒಂದು ಪಾತ್ರೆಗೆ ಹಾಕಿ ಕುದಿಸುತ್ತಾರೆ ಈ ಪಾತ್ರೆ ತೊಳೆಯುವುದು ಇಲ್ಲ ಪ್ರತಿ ನಿತ್ಯದ ಸಾಂಬಾರ್ ಪಲ್ಯಗಳು ಕುದಿದು ಕುದಿದು ಅದರದ್ದೇ ಒಂದು ರುಚಿ ಪಡೆಯುತ್ತದೆ ಎಂಬ ಪ್ರತೀತಿ ಇತ್ತು.
ಇದು ಉದ್ಯೋಗ ಮತ್ತು ಅನ್ನ ನೀಡುವ ದಣಿಯ ಮೇಲೆ ದುರುದ್ದೇಶದ ಒಂದು ಕಟ್ಟುಕತೆ ಅಲ್ಲದೆ ಬೇರೆ ಅಲ್ಲ, ನಾನು ಇಂತಹ ಕುದುಕಲಾಂಬ್ರ ಇತ್ತಾ ಎಂಬ ಬಗ್ಗೆ ಅನೇಕರಲ್ಲಿ ವಿಚಾರಿಸಿದ್ದೆ ಆದರೆ ಇದೊಂದು ಕೂಲಿ ಕಾರ್ಮಿಕರ ವಲಯದಲ್ಲಿ ಬಹಳ ಕಾಲದಿಂದ ಪ್ರಚಲಿತವಾಗಿರುವ ನಂಬಿಕೆ ಮಾತ್ರ.
ರಾತ್ರಿ ಉಳಿದ ತಂಗಳನ್ನದ ಬಳಕೆ ಇತ್ತು ಅಷ್ಟೆ ಇದನ್ನೇ ತಂಗಳಾ೦ಬ್ರ ಅನ್ನುತ್ತಿದ್ದರು ಬಹುಶಃ ಇದನ್ನು ಬೆಳಿಗ್ಗೆ ಬಿಸಿ ಮಾಡಿ ನೀಡುತ್ತಿದ್ದರಿಂದ ಕುದುಕಲಾಂಬ್ರ ಅನ್ನುತ್ತಿದ್ದಿರಬಹುದಾ?.
ಊಟ ತಿಂಡಿ ಉಚಿತ ನೀಡಿದರೂ ಅಂಗೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಊಟ ಸರಿ ಇಲ್ಲ ರುಚಿ ಇಲ್ಲ ಎಂಬ ಆಪಾದನೆ ಬೇಕಾ ಎನ್ನುವ ಪ್ರಶ್ನೆ ಇದೆ.
ಹಳ್ಳಿಯ ಅನ್ನದಾನಿ ಮನೆಗಳ ಮೇಲೆ ಹೊಟ್ಟೆಗೆ ಮದ್ದು ಹಾಕುತ್ತಾರೆ೦ಬ ಆಪ ಪ್ರಚಾರ ಬೇರೆ ಪ್ರಾರಂಬಿಸುತ್ತಾರೆ.
ಅಕ್ಕಿ ಸರಿ ಇಲ್ಲ, ತರಕಾರಿ ಊಟ ಸೇರುವುದಿಲ್ಲ, ನಾನ್ ವೆಜ್ ಊಟ ಕ್ವಾಟರ್ ಎಣ್ಣೆ ಇದ್ದರೆ ಮಾತ್ರ ಬರುತ್ತೀನಿ ಇತ್ಯಾದಿ ಬೇಡಿಕೆಗಳು ಸವ೯ಜ್ಞ ವಚನಗಳಲ್ಲಿ, ಗಾದೆಗಳಲ್ಲಿ ಇದ್ದ ನುಡಿ ಸೂಕ್ತಿ ಹುಸಿ ಮಾಡಿದೆ.
Comments
Post a Comment