#ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದವರು
#ಕೆ_ಎಸ್_ಐ_ಡಿ_ಸಿ_ನಿಗಮದ_ಅಧ್ಯಕ್ಷರಾಗಿದ್ದವರು
#ಮೊನ್ನೆ_ದೆಹಲಿಯಲ್ಲಿ_ಕೇಜ್ರಿವಾಲರ_ಸಮ್ಮುಖ_ಆಮ್_ಆದ್ಮಿ_ಪಾರ್ಟಿ_ಸೇರಿದ್ದಾರೆ.
#ಸಾಗರ_ವಿದಾನಸಭಾ_ಕ್ಷೇತ್ರದಿಂದ_ಸ್ಪರ್ಧಿಸಲು_ತಯಾರಿ_ನಡೆಸಿದ್ದಾರೆ.
https://youtu.be/NNHeMgE1qK0
ಇವತ್ತು ನಮ್ಮ ಲಾಡ್ಜ್ ನ ಲಿಪ್ಟ್ ಮೆಷಿನ್ ರೂಂ ಗೆ 30 ಅಡಿ ಎತ್ತರದ ಕಬ್ಬಿಣದ ಸ್ಟೇರ್ ಕೇಸ್ ಅಳವಡಿಸುವ ಸ್ವಲ್ಪ ಕಷ್ಟದ ಕೆಲಸ, ಮೈ ಮರೆತರೆ ಅಪಾಯದ ಕೆಲಸವೂ ಆದ ಕೆಲಸದಲ್ಲಿ ನಮ್ಮ ಕೆಲಸಗಾರರಿಗೆ ಅವರ ಕೆಲಸದಲ್ಲಿ ರಕ್ಷಣೆಯ ನೆಪದಲ್ಲಿ ಅವರ ಜೊತೆ ಇದ್ದೆ, ನಮ್ಮ ಕೆಲಸಗಾರರು ಕೆಲಸದ ಮಧ್ಯೆ ದೇಶದ ರಾಜಕೀಯನೂ ಮಾತಾಡುತ್ತಾರೆ, ಪ್ರತಿಯೊಬ್ಬರ ಮನೆಯಲ್ಲಿ ಟೀವಿ ಇದೆ, ಅಂಗೈಯಲ್ಲಿ ಮೊಬೈಲ್ ಹಾಗಾಗಿ ಅವರಿಗೆ ಪ್ರಚಲಿತ ವಿಷಯಗಳು ಗೊತ್ತಿರುತ್ತದೆ.
ಲಿಫ್ಟ್ ರೂಂನ 70 ಅಡಿ ಎತ್ತರದಲ್ಲಿ ಸ್ವಲ್ಪ ಕಸ ಇತ್ಯಾದಿ ಬಿದ್ದಿದ್ದು ಅದನ್ನು ತೆಗೆಯಲು ಪೊರಕೆ ಬೇಕು ಅಂದಾಗ ದೆಹಲಿಯ ಕೇಜ್ರಿವಾಲನ (ಸಾಮಾನ್ಯವಾಗಿ ಹಿಂದಿನಿಂದ ಎಲ್ಲರಿಗೂ ಏಕವಚನ ಬಳಸುತ್ತಾರೆ) ಪೊರಕೆನೆ ಈ ಸಾರಿ ಕರ್ನಾಟಕದಲ್ಲಿ ಗ್ಯಾರಂಟಿ ಅಂತ ಅವರವರೆ ಮಾತಾಡುತ್ತಿದ್ದರು.
ಯಾಕ್ರೋ ಬಿಜೆಪಿ-ಕಾಂಗ್ರೇಸ್ -ಜೆಡಿಎಸ್ ಬಿಟ್ರಾ?, ಅಂದೆ ಇನ್ನೇನಣ್ಣಾ ಎಲ್ಲರನ್ನೂ ನೋಡಿ ಆಯಿತು ಯಾರೂ ಉಪಯೋಗ ಇಲ್ಲ, ದೆಲ್ಲಿಲಿ ಶಾಲೆ - ಆಸ್ಪತ್ರೆ ನೋಡಬೇಕಂತೆ ಹಂಗೆ ಮಾಡಿದಾನೆ, ಹಂಗಾಗೆ ಪಂಜಾಬಿನ ಸಿಕ್ಕರು ಈ ಪಾರ್ಟಿನೆ ಗೆಲ್ಲಿಸಿದ್ದಾರೆ.... ಅನ್ನುವಾಗಲೇ ಅಚಾನಕ್ಕಾಗಿ ದಿವಾಕರ್ ವಕೀಲರು ನಾವು ಕೆಲಸ ಮಾಡುತ್ತಿದ್ದ ಜಾಗಕ್ಕೇ ಮೆಟ್ಟಿಲು ಹತ್ತಿ ಬಂದರು.
ಅವರು ಪೋನ್ ಮಾಡಿದ್ದಾರೆ ಆದರೆ ಸೈಲೆಂಟಾಗಿಟ್ಟು ಕೆಲಸದ ಮೇಲೆ ಇದ್ದಿದ್ದರಿಂದ ನಾನು ನೋಡಿರಲಿಲ್ಲ.
ದೀರೆಂದ್ರ ಕೆ. ಝಾ ಬರೆದ ''ಗಾಂದೀಸ್ ಅಸಾಸಿನ್" ಪುಸ್ತಕ ನೀಡಿದರು.
ಈಗಾಗಲೇ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಮುಖ್ಯಮಂತ್ರಿ ಕೇಜ್ರಿವಾಲರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
ಇವರ ತಾಯಿ ಮನೆ ಸಾಗರ ಪೇಟೆಗೆ ಸಮೀಪದ ಸೂರನಗದ್ದೆಯ ಹತ್ತಿರದ ಸಂಗಳ, ಶರಾವತಿ ಮುಳುಗಡೆಯ ಕುಟುಂಬದವರು. ಇವರ ತಂದೆ ಸೊರಬ ತಾಲ್ಲೂಕಿನ ಕಾಥವಳ್ಳಿಯವರು, ಇವರ ಕುಟುಂಬದ ಆಸ್ತಿ ಜಮೀನು - ತೋಟ ಶಿಕಾರಿಪುರದಲ್ಲಿದೆ.
ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪ್ರೌಡ ಶಾಲೆ ಶಿಕ್ಷಣದವರೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲೇ ಓದಿದವರು, ಸಾಗರದ ಗಣಪತಿ ದೇವಸ್ಥಾನದ ಹತ್ತಿರದ ಇವರ ಮಾವನ ಮನೆಯಲ್ಲೇ ಇದ್ದು ವ್ಯಾಸಂಗ ಮಾಡಿದವರು.
ಇವರ ತಂದೆ ಶಿಕಾರಿಪುರ ತಾಲ್ಲೂಕಿನಲ್ಲಿ ಸಮಾಜವಾದಿ ಪಕ್ಷದ ಅನುಯಾಯಿಯಾಗಿದ್ದವರು, ಶಾಂತವೇರಿ ಗೋಪಾಲಗೌಡರ, ಬಸವಣ್ಯಪ್ಪರ ಜೊತೆಗಾರರು ಮತ್ತು ಶಿಕಾರಿಪುರ ರಾಜಕಾರಣದಲ್ಲಿ ಸ್ಥಳಿಯ ಸಂಸ್ಥೆಗೆ ಆಯ್ಕೆ ಆಗಿ ಅಧಿಕಾರವೂ ಚಲಾಯಿಸಿದವರು.
ಯಡ್ಯೂರಪ್ಪ ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದ್ದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾಗಿದ್ದರು, ಕೆ.ಎಸ್.ಐ.ಡಿ.ಸಿ.ನಿಗಮದ ಅದ್ಯಕ್ಷರೂ ಆಗಿದ್ದರು.
ಆರು ವರ್ಷದ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಗ್ರಾಮ ಪಂಚಾಯತ್ ನಲ್ಲಿ ಆಮ್ ಆದ್ಮಿ ಹೆಸರಲ್ಲೇ ಸ್ಪರ್ಧೆ ಮಾಡಿ ಐದು ವರ್ಷ ಗ್ರಾಮ ಪಂಚಾಯತ್ ಅಧಿಕಾರ ನಡೆಸಿದ ಯುವಕರ ತಂಡದ ಬಗ್ಗೆ ದಿವಾಕರ್ ವಕೀಲರಿಗೆ ನೆನಪು ಮಾಡಿದೆ.
ಅಸಮಾನ್ಯ ಚತುರ, ರಾಜಕೀಯ ಚಾಣಕ್ಷತನದ ದಿವಾಕರ್ ವಕೀಲರಿಗೆ ಬೆಂಗಳೂರು ದೆಹಲಿ ಸಂಪರ್ಕ ಹೇಗೆ ಇದೆಯೋ ಹಾಗೆ ಸಾಗರ - ಹೊಸನಗರ- ಸೊರಬ-ಶಿಕಾರಿಪುರ- ತೀರ್ಥಹಳ್ಳಿಯ ಹಳ್ಳಿಗಳಲ್ಲೂ ಸಂಪರ್ಕ ಹೊಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಕಾಂಗ್ರೇಸ್ ನ ಬಣ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರರ ಗುಂಪಿನವರು ಹೆಚ್ಚಿನ ಪ್ರಾತಿನಿಧ್ಯ ಹೊಂದಿದ್ದಾರೆ, ತಮ್ಮ ನಾಯಕರನ್ನು ಕಡೆಗಾಣಿಸಲಾಗಿದೆ, ಅವಮಾನ ಮಾಡಲಾಗಿದೆ ಎಂದು ಕಾಂಗ್ರೇಸ್ ನ ಹಿರಿಯರ ದೊಡ್ಡ ಗುಂಪು ಸಿಡಿದೆದ್ದಿದೆ.
ಆ ಗುಂಪು ಬಿಜೆಪಿಗೆ ಹೋಗುವುದಿಲ್ಲ ಆದರೆ ಅಮ್ ಆದ್ಮಿ ಪಾರ್ಟಿ ಬರದಿದ್ದರೆ ಜೆಡಿಎಸ್ ಅವರ ಆಯ್ಕೆ ಆಗುತ್ತಿತ್ತೇನೋ ಆದರೆ ಈಗ ರಾಜ್ಯದಲ್ಲಿ ಪೊರಕೆ ಗುರುತಿನ ಆಮ್ ಆದ್ಮಿ ಬಂದಿರುವುದು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದಿವಾಕರ್ ವಕೀಲರೂ ಅದರಲ್ಲಿ ಸೇರಿರುವುದರಿಂದ ಮುಂದಿನ ದಿನದಲ್ಲಿ ಆಮ್ ಆದ್ಮಿ ಮ್ಯಾಜಿಕ್ ಮಾಡಿದರೂ ಮಾಡೀತು.
ಜಾರ್ಜ್ ಫರ್ನಾಂಡೀಸ್ ರ ಮನೆ ಮಗನಂತಿದ್ದ ನಮ್ಮ ರಾಜ್ಯದ ಕರಾವಳಿಯ ಅನಿಲ್ ಹೆಗ್ಗಡೆಗೆ ಬಿಹಾರದಿಂದ ನಿತೀಶ್ ಕುಮಾರ್ ರಾಜ್ಯಸಭೆಗೆ ಸ್ಪರ್ದೆಗೆ ಅವಕಾಶ ನೀಡಿದ ಸುದ್ದಿ ನನಗೆ ಮೊದಲಿಗೆ ತಿಳಿಸಿದವರೇ ದಿವಾಕರ್ ವಕೀಲರು.
ಹೀಗೆ ಸ್ವಲ್ಪ ಸಮಯ ಮಾತಾಡಿ ರಿಪ್ಪನ್ ಪೇಟೆಯಲ್ಲಿ ಅವರ ಪಕ್ಷದ ಸಭೆಗೆ ಹೋದರು.
ಅಧಿಕಾರ ಇರುವ ಪಕ್ಷದಲ್ಲಿ ಕ್ಯಾಬಿನೆಟ್ ದರ್ಜೆಯಲ್ಲಿ ಅಧಿಕಾರದಲ್ಲಿದ್ದ ರಾಜ್ಯದ ಪ್ರಖ್ಯಾತ ವಕೀಲರು ಆಮ್ ಆದ್ಮಿ ಪಾರ್ಟಿ ಸೇರಿದ್ದೇಕೆ ಎಂಬುದರ ವಿವರ ಈ ವಿಡಿಯೋದಲ್ಲಿದೆ ಮತ್ತು ಅವರ ಸಂಪರ್ಕ ಸಂಖ್ಯೆ 9448072605.
Comments
Post a Comment