ಆನಂದಪುರಂ ಇತಿಹಾಸ ಭಾಗ-73. ಕೆರೆ ಹಿತ್ತಲು ಗ್ರಾಮದ ದಲಿತ ಶತಾಯುಷಿ ಗುಮ್ಮಿ ನಾಗಣ್ಣ ಊರಿನ ಮಕ್ಕಳ ವಿಧ್ಯಾಬ್ಯಾಸಕ್ಕಾಗಿ ತಮ್ಮ ಒಂದು ಎಕರೆ ಭೂಮಿ (ಕೋಟಿಗೆ ಮೀರಿದ ಬೆಲೆಯ) ಭೂದಾನ ಮಾಡಿ ಆನಂದಪುರಂನ ಇತಿಹಾಸದಲ್ಲಿ ಅವರು ಚಿರಸ್ಥಾಯಿ ಆಗಿದ್ದಾರೆ
#ಶತಾಯುಷಿ_ಕೆರೆಹಿತ್ತಲು_ಗ್ರಾಮದ_ಗುಮ್ಮಿ_ನಾಗಣ್ಣ
#ಊರಿನ_ಮಕ್ಕಳ_ವಿದ್ಯಾಬ್ಯಾಸಕ್ಕಾಗಿ_ಭೂದಾನ_ಮಾಡಿದ_ಪರಿಶಿಷ್ಟ_ಜಾತಿಯ_ದಯಾಳು.
#ಊರ_ಒಳಗಿನ_ಈ_ಜಾಗದ_ಮೌಲ್ಯ_ಕೋಟಿ_ಇದೆ.
1906 ರಲ್ಲಿ ಜನಿಸಿ 2011ರಲ್ಲಿ ಇಹಲೋಕ ತ್ಯಜಿಸಿದ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯತನ ದಲಿತ ಕೃಷಿಕ ಗುಮ್ಮಿ ನಾಗಣ್ಣ ಶತಾಯುಷಿಗಳು, 105 ವರ್ಷ ಬದುಕಿದವರು.
ಶುದ್ಧ ಬಿಳಿ ಜುಬ್ಬಾ, ಬಿಳಿ ಕಚ್ಚೆ ಪಂಜೆ, ಹೆಗಲ ಮೇಲೆ ಶಲ್ಯ, ಕಾಲಿಗೆ ಚರ್ಮದ ಚಡಾವು, ಎರೆಡೂ ಕಿವಿಗೆ ಬಂಗಾರದ ಓಲೆ, ಮುಖದ ಮೇಲಿನ ಪೈಲ್ವಾನ್ ಮೀಸೆಯ ಗುಮ್ಮಿ ನಾಗಣ್ಣ ಎಲ್ಲೇ ಹೋದರೂ ಗೌರವದಿಂದ ಜನ ಕಾಣುತ್ತಿದ್ದ ಗೌರವಾನ್ವಿತರು.
ಗುಮ್ಮಿ ನಾಗಣ್ಣ ಸಹೋದರರು ಇಲ್ಲಿಯ ಮೂಲ ನಿವಾಸಿಗಳಲ್ಲ, ಶಿವಮೊಗ್ಗ - ಆನಂದಪುರಂ - ತಾಳಗುಪ್ಪ ರೈಲು ಮಾರ್ಗ ಆಗುವಾಗ ಈ ಭಾಗದಲ್ಲಿ ಚಾರ್ ಕೋಲ್ ತಯಾರಿಸಲು ಬಂದವರು ನಂತರ ಕೆರೆಹಿತ್ತಲಿನಲ್ಲಿ ನಿಂತರು.
ಇವರ ದೊಡ್ಡ ಮಗಳು ಜಯಮ್ಮ ಅಳಿಯ ಬೆಂಗಳೂರಿನ ಆಡಿಟರ್ ಜನರಲ್ ಆಫೀಸಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ಎರಡನೆ ಮಗಳು ಚಂದ್ರಮ್ಮ ತಮ್ಮ ಕುಟುಂಬದ ಜೊತೆ ಇದೇ ಊರಲ್ಲಿ ನೆಲೆಸಿದ್ದಾರೆ, ಏಕೈಕ ಪುತ್ರ ನಾಗರಾಜ್ ಭೂ ನ್ಯಾಯ ಮಂಡಳಿ ಸದಸ್ಯರಾಗಿದ್ದರು.
ಗುಮ್ಮಿ ನಾಗಣ್ಣ ಈಗಿಲ್ಲ ಆದರೆ ಅವರನ್ನು ಆನಂದಪುರಂ ಜನತೆ ಮರೆಯಲಾರರು ಏಕೆಂದರೆ ಕೆರೆಹಿತ್ತಲು ಗ್ರಾಮದ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಪ್ರಾಥಮಿಕ ಶಾಲಾ ಕಟ್ಟಡ ಕಟ್ಟಲು ಊರ ಮಧ್ಯದ ಇವರ ಆಸ್ತಿಯಲ್ಲಿ ಒಂದು ಎಕರೆ ಜಮೀನು ದಾನ ಮಾಡಿದ್ದಾರೆ ಸುಮಾರು 1988ರಿಂದ ಇಲ್ಲಿನ ಸರ್ಕಾರಿ ಶಾಲೆ ಗುಮ್ಮಿನಾಗಣ್ಣ ದಾನ ನೀಡಿದ ಜಾಗದಲ್ಲಿ ನಡೆಯುತ್ತಿದೆ.
ಶಿಕ್ಷಣ ಇಲಾಖೆಗೆ ಪುನಃ ಪುನಃ ಒತ್ತಾಯಿಸಿ ದಿನಾಂಕ 22- ಸೆಪ್ಟೆಂಬರ್ -1998 ರಲ್ಲಿ ಕೆರೆಹಿತ್ತಲು ಗ್ರಾಮದ ಸ.ನಂ.34 ರಲ್ಲಿ ಒಂದು ಎಕರೆ ಜಾಗ ಶಾಲೆಗೆ ರಿಜಿಸ್ಟ್ರೇಷನ್ ಮಾಡಿಸಿ ಕೊಟ್ಟಿದ್ದಾರೆ ಇವತ್ತಿನ ಈ ಜಾಗದ ಮೌಲ್ಯ ಕೋಟಿಗೂ ಮೀರಿದ್ದು.
ಈ ಊರಿನ ದೊಡ್ಡ ದೊಡ್ಡ ಭೂಮಾಲಿಕರಿದ್ದರೂ ಊರ ಮಕ್ಕಳ ಶಿಕ್ಷಣಕ್ಕಾಗಿ ದಲಿತ ಶ್ರಮಿಕ ಕೃಷಿಕರಾದ ಗುಮ್ಮಿ ನಾಗಣ್ಣ ಭೂದಾನ ಮಾಡಿದ್ದು ದೊಡ್ಡ ವಿಚಾರ.
ಸಂತೃಪ್ತ ಜೀವನ ನಡೆಸಿ 105 ವರ್ಷ ಪೂರೈಸಿದ ಶತಾಯುಷಿ ಗುಮ್ಮಿ ನಾಗಣ್ಣರ ಈ ಸಿಸ್ವಾರ್ಥ ಸೇವೆ ಸದಾ ಸ್ಮರಣೀಯ ಮತ್ತು ಆನಂದಪುರಂ ಇತಿಹಾಸದಲ್ಲಿ ಗುಮ್ಮಿ ನಾಗಣ್ಣರ ಹೆಸರು ಚಿರಸ್ಥಾಯಿಗೊಳಿಸಿದೆ.
Comments
Post a Comment