Blog number 842. ಕೇಂದ್ರಿಕೃತ ಪೇಟೆ ಮಾರ್ಕೆಟ್ ವ್ಯವಸ್ಥೆಯಲ್ಲಿ ಕಳೆದು ಹೋದ ಹಳ್ಳಿಯ ದಂಟು ಹರಿವೆ ತಳಿಯ ಬೀಜಗಳು, ಹುಲ್ಲು ತಿಂದಂತ ಬೇಕಾರ್ ರುಚಿಯ ಕೆಮಿಕಲ್ ತುಂಬಿರುವ ಕೊಳಚೆ ನೀರಲ್ಲಿ ಬೆಳೆಸುವ ಹರಿವೆ ಸೊಪ್ಪು ಲೋಕದ ತುಂಬಾ ವ್ಯಾಪಿಸಿದೆ.
#ನನಗೆ_ಈಗಿನ_ತರಕಾರಿ_ಮಾರುಕಟ್ಟೆ_ಹರಿವೆ_ಕಂಡರಾಗುವುದಿಲ್ಲ.
#ಹೊನ್ನಾವರ_ಅಂಕೋಲ_ಕುಮಟಾದಲ್ಲಿ_ಬೆಳಿಗ್ಗೆ_ಸೂಯೋ೯ದಯಕ್ಕೆ_ಮೊದಲೇ_ಹಾಲಕ್ಕಿಯವರು_ಮಾರಾಟ_ಮಾಡುವ_ದಂಟು_ಹರಿವೆ.
#ನಿತ್ಯ_ಮಲೆನಾಡು_ಗಿಡ್ಡ_ದನದ_ಹಾಲುಕೊಡುವ_ಹುಲಿಮರಡಿ_ಮಂಜುಶೆಟ್ಟರು_ಹರಿವೆ_ಬೆಳೆದು_ಕೊಡುತ್ತಿದ್ದಾರೆ.
ಒಂದು ಕಾಲದಲ್ಲಿ ಅಂದರೆ 1980-90ರ ತನಕ ಈ ದಂಟು ಹರಿವೆ ಹಸಿರು ಕೆಂಪು ಬಣ್ಣದ್ದು ಎಲ್ಲಾ ರೈತರ ಕಬ್ಬಿನ ಗದ್ದೆಯಲ್ಲಿ ಮತ್ತು ಹಳ್ಳಿಯ ಎಲ್ಲರ ಮನೆಯ ಹಿತ್ತಲಲ್ಲಿ ಬೇಸಿಗೆ ತರಕಾರಿ ಆಗಿರುತ್ತಿತ್ತು.
ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರಲಿಲ್ಲ ಮಾಡಿದರೂ ಖರೀದಿಸುವವರಿರಲಿಲ್ಲ ಮತ್ತೆ ಇದರ ರುಚಿ ಎಲ್ಲರಿಗೂ ಗೊತ್ತಿರಲಿಲ್ಲ.
ಒಂದಾಳು ಎತ್ತರ ಬೆಳೆಯುತ್ತಿದ್ದ ರಟ್ಟೆ ಗಾತ್ರದ ಒಂದು ದಂಟು ಹರಿವೆ ಗಿಡದಿಂದ ಎರೆಡು ದಿನ ಸಾಂಬಾರ್ ಮಾಡಬಹುದಿತ್ತು, ಬೆಳೆದರೂ ದಂಟಿನ ಒಳಗೆ ಮೃದುವಾಗಿರುತ್ತಿದ್ದ ದಂಟನ್ನು ಜಗಿದು ಆಸ್ವಾದಿಸುತ್ತಿದ್ದ ಕಾಲ ಈಗ ನೆನಪಾಗಿ ಬಾಯಿಯಲ್ಲಿ ನೀರು ಬರುತ್ತದೆ.
ಬೀಜಕ್ಕಾಗಿ ಕೆಲ ಗಿಡ ಹಾಗೇ ಬಿಡುತ್ತಿದ್ದರು ನಂತರ ಅದರಲ್ಲಿ ಹೂವಾಗಿ ಬೀಜವಾದಾಗ ಒಣಸಿ ತೆಗೆದಿಡುತ್ತಿದ್ದರು.
ದಂಟು ಹರಿವೆ ಮಳೆಗಾಲದಲ್ಲಿ ನೀರು ತುಂಬಿ ಸವಳು ಸವಳು ಆಗುವುದರಿಂದ ಬೇಸಿಗೆಯಲ್ಲಿಯೇ ದಂಟು ಹರಿವೆ ರುಚಿಕರ.
ಈಗೆಲ್ಲ ಕೆಮಿಕಲ್ ಗೊಬ್ಬರದಿಂದ ಕೊಳಚೆ ನೀರಲ್ಲಿ ಬೆಳೆಸುವ ನೋಡಲು ಆಕರ್ಷಕವಾಗಿ ಕಾಣುವ ಹರಿವೆ ಸೊಪ್ಪು ನಿತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತೆ ಆದರೆ ಅದರಲ್ಲಿ ಹರಿವೆ ಸೊಪ್ಪಿನ ಘಮವೂ ಇಲ್ಲ ರುಚಿಯೂ ಇಲ್ಲ ಒಂದು ತರ ಹಸಿ ಹುಲ್ಲು ತಂದು ಬೇಸಿದಂತೆ ಅದರ ಬೇಕಾರ್ ರುಚಿ.
ನಮ್ಮ ತಂದೆ ವಿವಿದ ತರದ ದಂಟು ಹರಿವೆ ಬೀಜದಿಂದ ಅನೇಕರಿಗೆ ದಂಟು ಹರಿವೆ ಬೆಳೆಸಿ ಕೊಡುತ್ತಿದ್ದರು.
ಕಾಲ ಕ್ರಮೇಣ ಹಳ್ಳಿಗಳು ಹಾಲು - ಕೋಳಿ ಮಾಂಸಕ್ಕೆ ಪೇಟೆಯ ಮೇಲೆ ಅವಲಂಬಿಸಿದಂತೆ ತರಕಾರಿಗೂ ಪೇಟೆಗೆ ಅವಲಂಬಿಸಿ ಈ ದಂಟಿನ ಹರಿವೆಯ ತಳಿಯ ಬೀಜವನ್ನೆ ಕಳೆದುಕೊಂಡಿದ್ದು ಸತ್ಯ.
ಆದರೆ ಕರಾವಳಿಯ ಜನರಿಗೆ ಪಶ್ಚಿಮ ಘಟ್ಟದಲ್ಲಿನ ಗುಡ್ಡಗಾಡಿನ ಹಾಲಕ್ಕಿ ಮಹಿಳೆಯರು ಸಂಪ್ರದಾಯಿಕ ನೂರಾರು ಮೂಲ ತಳಿಯ ತರಕಾರಿ ಬೆಳೆದು ಈಗಲೂ ಮಾರಾಟ ಮಾಡುತ್ತಾರೆ.
ನಾನು ಸ್ವತಃ ನೋಡಿದ್ದೇನೆ ಹೊನ್ನಾವರದ ಬಂದರಿನ ಹತ್ತಿರ, ಅಂಕೋಲದ ಚಿತ್ರ ಮಂದಿರದ ಎದರು, ಕುಮಟಾದ ರೈಲು ನಿಲ್ದಾಣದ ತಿರುವಿನಲ್ಲಿ ಬೆಳಿಗ್ಗೆ 5ಕ್ಕೆ ಅವರು ದಂಟು ಹರಿವೆಯ ಹೊರೆ ಹೊತ್ತು ತರುತ್ತಾರೆ ವಿಶೇಷವಾಗಿ ಕರಾವಳಿಯ ಕೊಂಕಣಿ ಗೌಡ ಸಾರಸ್ವತರು ಇದಕ್ಕೆ ಕಾದು ನಿಂತಿರುತ್ತಾರೆ ತಕ್ಷಣದಲ್ಲಿ ದಂಟು ಹರಿವೆ ಖಲಾಸ್.
ಇದೇ ರೀತಿ ಗೋವಾದ ಕುಣುಬಿ ಜನರು ದಂಟು ಹರಿವೆ ತರುತ್ತಾರೆ ಗೋವನ್ನರಿಗೆ ಕೂಡ ಇದು ಬಲು ಪ್ರಿಯ.
ನನಗೆ ನಿತ್ಯ ಮಲೆನಾಡು ಗಿಡ್ಡದ ಹಾಲು ತಂದು ಕೊಡುವ ಶ್ರಮಜೀವಿ ಕೃಷಿಮಿತ್ರ ಹುಲಿಮರಡಿಯ ಮಂಜುನಾಥ ಶೆಟ್ಟರಿಗೆ ಪ್ರೋತ್ಸಾಹಿಸಿ ಈ ವಷ೯ ಹರಿವೆ ಬೆಳೆದು ತಂದು ಕೊಡುವಂತೆ ಮಾಡಿಕೊಂಡಿದ್ದೇನೆ, ದಂಟು ಹರಿವೆ ಬೀಜ ಹಾಕಿದ್ದಾರಂತೆ ಇನ್ನು ದಂಟಾಗಿಲ್ಲ ಅನ್ನುತ್ತಾರೆ.
ಆದರೆ ಯಾವುದೇ ಕೆಮಿಕಲ್ ಗೊಬ್ಬರ-ಔಷದಿ ಬೆಳೆಸದ ಅವರು ತಂದು ಕೊಡುವ ಹರಿವೆ ಸೊಪ್ಪು ನಿಜಕ್ಕೂ ಯಮ್ಮಿ.
ಹರಿವೆ ಸೊಪ್ಪಿನ ಸರಳವಾದ ಸುಲಭವಾದ ಪಲ್ಯ ತಯಾರಿಸಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಡಿ ಮಾವಿನ ಉಪ್ಪಿನಕಾಯಿ ನಂಜಿಕೊಂಡು ಊಟ ಮಾಡುವುದು ನನಗೆ ಬಲು ಇಷ್ಟ.
ಕಡಾಯಿಯಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ - ಉದ್ದಿನ ಬೇಳೆ - ಇಂಗು ಹಾಕಿ ಹುರಿದು 5-6 ಒಣ ಮೆಣಸು ತುಂಡು ಮಾಡಿ ಹಾಕಿ, ಕರಿಬೇವಿನ ಎಲೆ ಸೇರಿಸಿ ಕರಿಯುವುದು ನಂತರ ಬೆಳ್ಳುಳ್ಳಿ ಮತ್ತು ನೀರುಳ್ಳಿ ಸಣ್ಣದಾಗಿ ತುಂಡರಿಸಿ ಹಾಕಿ ಬಾಡಿಸಿ ಅದಕ್ಕೆ ತೊಳೆದು ಕತ್ತರಿಸಿದ ಹರಿವೆ ಸೊಪ್ಪು ಹಾಕಿ ತಿರುಗಿಸುತ್ತಾ ಕೆಲ ನಿಮಿಷದ ನಂತರ ಕಾಯಿ ತುರಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಬೆರೆಸಿ ಬೇಯುವ ತನಕ ಉರಿಯಲ್ಲಿ ಇಟ್ಟು ಇಳಿಸಿದರೆ ಸೊಪ್ಪಿನ ಪಲ್ಯ ರೆಡಿ.
ಗೆಳೆಯ ಮಂಜುನಾಥ ಶೆಟ್ಟರು ದನದ ಸಗಣಿಯ ಗೊಬ್ಬರದಲ್ಲಿ ಬೆಳೆಯುವ ಕೆಂಪು ಮತ್ತು ಹಸಿರು ಹರಿವೆ ಸೊಪ್ಪಿನ ಹೊಳಪು, ಅದರ ಘಮ ಮತ್ತು ರುಚಿ ಪೇಟೆಯ ಹರಿವೆ ಸೊಪ್ಪಿನಲ್ಲಿ ಒಂದಂಶ ಕೂಡ ಇಲ್ಲ.
ಹರಿವೆ ಸೊಪ್ಪಿನ ಕಟ್ಟು ಮಾಡಿ ಅದಕ್ಕೆ ಬಾಳೆ ನಾರಿನಿಂದ ಕಟ್ಟಿದ್ದು ನೋಡಿದರೆ ನಿಮಗೂ ಖುಷಿ ಆದೀತು.
Comments
Post a Comment