ಜಾತಿ ಆಚರಣೆಯ ಸಂಪ್ರದಾಯದ ಯಾರದೇ ಮನೆ, ಮದುವೆ, ದೇವಸ್ಥಾನಗಳ, ಮಠದ ಊಟದ ಪಂಕ್ತಿಗೆ ಶೂದ್ರರು ಯಾರೇ ಒತ್ತಾಯ ಮಾಡಿದರೂ - ತಪ್ಪು ಮಾಹಿತಿಯಿಂದ ಹೋಗಬೇಡಿ ನಂತರ ನಿಮ್ಮನ್ನು ಆ ಪಂಕ್ತಿಯಿಂದ ಎತ್ತಿ ಎಸೆದಾಗ ಆಗುವ ಅವಮಾನ ಸಹಿಸಿಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ, ಇಂತಹ ಪಂಕ್ತಿಗಳಿಗೆ ಯಾವ ಜಾತಿಯವರು ಬರಬಾರದೆಂಬ ಬೋಡು೯ ಹಾಕಬಾರದೇಕೆ ?
#ಜಾತಿ_ಆಚರಣೆಯ_ಪಂಕ್ತಿ_ಊಟಕ್ಕೆ_ಹೋಗಿ_ಕೂರಬೇಡಿ
#ನಿಮ್ಮನ್ನು_ಎತ್ತಿ_ಹೊರ_ಬಿಸಾಕುತಾರೆ.
#ಜಾತಿ_ಹೀನನ_ಮನೆಯ_ಜ್ಯೋತಿ_ತಾ_ಹೀನವೆ?
#ಜ್ಯೋತಿ_ಯಾವ_ಜಾತಿಯಮ್_ಜಗದೀಶ್ವರಿ
#ಗಾಳಿ_ನೀರು_ಬೆಳಕು_ಭೂಮಿ_ಗಗನಕ್ಕೆಲ್ಲಿ_ಜಾತಿ.
#ಉಡುಪಿ_ಪಂಕ್ತಿ_ಬೇದದ_ನನ್ನ_ಅನುಭವ.
ಎರೆಡು ದಿನದ ವೇದಾಂತದ ವಿಮರ್ಷೆಗಳು ಎನ್ನುವ ರಾಜ್ಯ ಮಟ್ಟದ ವಿದ್ವಾಂಸರ ಸಮ್ಮೇಳನ ಮೈಸೂರು ವಿವಿಯ ಪ್ರೋಪೆಸರ್ ಡಾಕ್ಟರ್ ಸಿದ್ದಾಶ್ರಮರವರು ಉಡುಪಿ ಪೇಜಾವರ ಸ್ವಾಮಿಜಿಗಳ ಸಹಯೋಗದಲ್ಲಿ ಉಡುಪಿ ಕೃಷ್ಣ ದೇವಾಲಯದ ಪಕ್ಕದ ಬೃಹತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.
ನನಗೆ ಒಂದು ದಿನವಾದರೂ ಬಂದು ಭಾಗವಹಿಸಲು ಆಮಂತ್ರಣ ನೀಡಿದ್ದರು (ಪ್ರೇಕ್ಷಕನಾಗಿ) ಆದ್ದರಿಂದ ಮತ್ತು ಅಲ್ಲಿ ಎರಡನೆ ದಿನದ ಸಮ್ಮೇಳನದ ಅಧ್ಯಕ್ಷತೆ ಒಪ್ಪಿ ಭಾಗವಹಿಸುತ್ತಿದ್ದ ಶರಣ ಅಂಬಿಗರ ಚೌಡಯ್ಯನವರ ಪೀಠದ ಗುರುಗಳಾದ ಶ್ರೀ ಶಾಂತ ಮುನಿ ಸ್ವಾಮಿಗಳು ( ಈಗ ಲಿಂಗೈಕ್ಯ) ಕೂಡ ಪೋನಿನಲ್ಲಿ ಆಹ್ವಾನಿಸಿದ್ದರು.
ಹಿರಿಯ ಶ್ರೀ ಶಾಂತ ಮುನಿ ಸ್ವಾಮಿಗಳು ಹುಬ್ಬಳ್ಳಿಯ ಸಿದ್ಧರೂಡ ಮಠದ ಹಿನ್ನೆಲೆಯವರು, ಶಿವಮೊಗ್ಗ ಭಾಗದಲ್ಲಿ ಕಾರ್ಯಕ್ರಮಕ್ಕೆ ಬಂದಾಗ ನಮ್ಮ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡುತ್ತಿದ್ದರು ಆಗ ನಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಸಿದ್ಧ ಸಮಾದಿ ಯೋಗದ ತರಗತಿಯಲ್ಲಿ ಪ್ರವಚನ ಮತ್ತು ಯೋಗಾಸನದ ಬಗ್ಗೆ ಮಾಹಿತಿ ನೀಡಿದ್ದು ನೆನಪು.
ನಮ್ಮ ಊರಿ೦ದ 150 ಕಿ.ಮಿ. ಉಡುಪಿಗೆ ಹೋಗಿ ತಲುಪಿದಾಗ ಸುಮಾರು 12 ಗಂಟೆ,ಕೆಲ ಕಾಲ ವೇದಾಂತದ ಬಗ್ಗೆ ವಿದ್ವಾಂಸರ ಪ್ರವಚನಗಳನ್ನು ಕೇಳಿದ ಮೇಲೆ ಲಂಚ್ ಬ್ರೇಕ್ ಈ ಸಂದರ್ಭದಲ್ಲಿ ನಮ್ಮ ಹಾಜರಿ ಆಹ್ವಾನ ನೀಡಿದವರಿಗೆ ನೀಡಿ ಉಡುಪಿಯ ಪ್ರಸಿದ್ಧ ಮೀನು ಊಟದ ಹೋಟೆಲ್ ಗೆ ಊಟಕ್ಕೆ ಹೋಗುವ ಪ್ಲಾನ್ ಜೊತೆಗೆ ಬಂದ ಗೆಳೆಯರಿಂದ ರೆಡಿ ಆಗಿತ್ತು.
ಡಾ ಸಿದ್ದಾಶ್ರಮರಿಗೆ ಮಾತಾಡಿ ನಂತರ ಶ್ರೀ ಶಾಂತ ಮುನಿ ಸ್ವಾಮಿಗಳನ್ನು ಕಂಡಾಗ ಅವರನ್ನು ಮಠದವರು ಬೋಜನಕ್ಕೆ ಕರೆದೊಯ್ಯಲು ಬಂದಿದ್ದರು, ಗುರುಗಳು ನನ್ನನ್ನು ಜೊತೆಗೆ ಬೋಜನಕ್ಕೆ ಆಹ್ವಾನಿಸಿದರು ಆಗ ಅವರಿಗಷ್ಟೆ ಕೇಳುವಂತೆ ಇಲ್ಲಿ ಪಂಕ್ತಿಬೇದ ಇರುತ್ತೆ ನಾನು ಬರುವುದಿಲ್ಲ ಅಂದೆ ಅದಕ್ಕೆ ನನ್ನ ಹೆಗಲ ಮೇಲೆ ಕೈ ಹಾಕಿ ಸ್ವಾಮಿಗಳು ಅದೆಲ್ಲ ಈ ಕಾಲದಲ್ಲಿ ಇಲ್ಲ ಅಂದರು, ಮಠದ ಸಿಬ್ಬಂದಿಗೆ ಇದೆಲ್ಲ ಗೊತ್ತಾಯಿತು.
ಬೋಜನ ಮಂದಿರದಲ್ಲಿ ಸ್ವಾಮೀಜಿಗಳು ಅವರ ಪಕ್ಕದಲ್ಲೇ ನನ್ನನ್ನು ಕುಳ್ಳಿರಿಸಿಕೊಂಡರು ಅಲ್ಲೆಲ್ಲ ವಿದ್ವಾಂಸರುಗಳು ಕುಳಿತರು, ಆಗಲೇ ಬೇರೆ ಸಿಬ್ಬಂದಿಗಳು ಬಂದು ಸ್ವಾಮೀಜಿಗಳಿಗೆ ಒಳಗೆ ಪ್ರತ್ಯೇಕ ಬೋಜನ ಮಂದಿರ ಇದೆ ಅಲ್ಲಿ ಅವರು ಆಹಾರ ಸೇವಿಸಬೇಕೆಂದು ವಿನಂತಿಸಿದರು, ಸ್ವಾಮಿಗಳು ಪರವಾ ಇಲ್ಲ ನಾನಿಲ್ಲೆ ಊಟ ಮಾಡುತ್ತೇನೆ ಅಂದಾಗ ಸಿಬ್ಬಂದಿಗಳು ಹಾಗೆ ಮಾಡುವಂತಿಲ್ಲ ಗುರುಗಳ ಆದೇಶ ಅಂತೆಲ್ಲ ಅಂದರು ಮತ್ತು ಜೊತೆಯಲ್ಲಿ ಬೇರೆಯವರಿಗೆ ಪ್ರವೇಶ ಇಲ್ಲ ಅನ್ನುವುದು ಖಚಿತಪಡಿಸುತ್ತಿದ್ದರು.
ನನಗೆ ಇದೆಲ್ಲದರ ಕಾರಣ ಗೊತ್ತಿತ್ತು, ನಾವು ಕುಳಿತ ಬೋಜನ ಮಂದಿರ ಜನಿವಾರ ಇದ್ದವರಿಗೆ ಮಾತ್ರ ಅಂತ ಆದರೆ ಗುರುಗಳನ್ನು ಗೊಂದಲಕ್ಕೆ ಈಡು ಮಾಡಬಾರದೆಂದು ಗುರುಗಳಿಗೆ ಅವರೊಂದಿಗೆ ಹೋಗಲು ವಿನಂತಿಸಿದೆ.
ಇಲ್ಲೇ ಊಟ ಮಾಡಿ ಬಂದು ತಮ್ಮನ್ನು ಬೇಟಿ ಮಾಡಿ ಹೋಗಿ ಅಂತ ಹೇಳಿದ ಅವರು ಒಳ ಹೋದ ಮೇಲೆ ಪುನಃ ಸಿಬ್ಬಂದಿಗಳು ಬಂದರು ಅಷ್ಟರಲ್ಲಿ ಬಾಳೆ ಎಲೆ ಉಪ್ಪು ಉಪ್ಪಿನಕಾಯಿ ಕೊಸಂಬರಿ ಬಡಿಸಿ ಅನ್ನ ಬಡಿಸುತ್ತಾ ಬರುತ್ತಿದ್ದರು.
ಬಂದ ಸಿಬ್ಬಂದಿಗಳು ನನ್ನ ಮತ್ತು ನನ್ನ ಗೆಳೆಯರು ಮತ್ತು ಬಹುಶಃ ಜನಿವಾರ ಇಲ್ಲದ ವಿದ್ವಾಂಸರು (ಅವರೆಲ್ಲ ಅಂಗಿ ತೆಗೆದಿರಲಿಲ್ಲ) ಗಳಿಗೆ ನಿಮಗೆ ಇಲ್ಲಿ ಅವಕಾಶ ಇಲ್ಲ ಪಕ್ಕದಲ್ಲಿ ಬೇರೆ ಜಾತಿಯವರಿಗೆ ಪ್ರತ್ಯೇಕ ಊಟದ ಮನೆ ಇದೆ ಅಂತ ಕೈ ತೋರಿಸಿದರು.
ನಾನು ನನ್ನ ಗೆಳೆಯ ಇಂತದ್ದೆಲ್ಲ ಗೊತ್ತಿದ್ದರಿಂದ ಇಂತಹ ಪಂಕ್ತಿಬೇದದ ಅನ್ನ ಸಂತರ್ಪಣೆಯಲ್ಲಿ ಯಾವತ್ತೂ ಊಟ ಮಾಡುವುದಿಲ್ಲ ಆದರೆ ಇಲ್ಲಿ ಶ್ರೀ ಶಾಂತ ಮುನಿ ಸ್ವಾಮಿಗಳ ಒತ್ತಾಯಕ್ಕಾಗಿ ಹೋಗಿದ್ದೆವು,ಬಂದವರನ್ನು ಎಡೆ ಹಾಕಿ ಅನ್ನ ಬಳಸಿ ನಂತರ ಎಬ್ಬಿಸಿ ಕಳಿಸಿದ್ದರಿಂದ ತಕ್ಷಣ ಎದ್ದು ಹೊರ ಬಂದೆವು, ಜನಿವಾರ ಇರುವ ವಿದ್ವಾಂಸರು ಜನಿವಾರ ಇಲ್ಲದ ತಮ್ಮ ಸಹ ವಿದ್ವಾಂಸರನ್ನು ಪಂಕ್ತಿಯಿಂದ ಎಬ್ಬಿಸಿ ಕಳಿಸಿದ್ದು ಅವರಿಗೆ ಅವಮಾನ ಎನ್ನಿಸಿರಲಿಕ್ಕಿಲ್ಲ ಯಾಕೆಂದರೆ ಅವರಾರು ಇದೆಲ್ಲ ತಮಗೆ ಸಂಬಂದವಿಲ್ಲದೆಂಬಂತೆ ಅನ್ನ ಸಾರು ಕಲಿಸಿ ತುತ್ತು ನುಂಗುತ್ತಿದ್ದರು.
ದೇವರು ಪ್ರತಿ ಅನ್ನದ ಮೇಲೆ ಊಟ ಮಾಡುವವನ ಹೆಸರು ಬರೆದಿರುತ್ತಾನೆ ಎಂಬ ಗಾದೆ ಸುಳ್ಳಲ್ಲ ಅಂತ ಉಡುಪಿಯ ಮೀನು ಹೋಟೆಲ್ ಟೀಬಲ್ ಮೇಲೆ ನೆನಪಾಯಿತು.
ಇದೆಲ್ಲ ಇವತ್ತು ಮೋಹನ್ ಶೇಟ್ ಕಾರ್ಕಳ ಇವರ ಪೋಸ್ಟ್ ನಲ್ಲಿ ಇಂತ ಪಂಕ್ತಿಬೇದ ಮತ್ತು ಇದಕ್ಕೆ ನ್ಯಾಯಾಲಯದ ತೀರ್ಪಿನ ಬಗ್ಗೆ ಲೇಖನ ನೋಡಿ ನೆನಪಾಯಿತು.
ಮೊನ್ನೆ ತೀರ್ಥಹಳ್ಳಿಯ ವಿವಾಹದ ಊಟದ ಪಂಕ್ತಿಯಲ್ಲಿ ಹಿರಿಯ ನಾಗರೀಕರನ್ನು ಅವಮಾನಕರವಾಗಿ ಎಬ್ಬಿಸಿ ಕಳಿಸಿದ ಘಟನೆಯೂ ನೆನಪಾಯಿತು.
ಇಂತದ್ದೇ ಇನ್ನೊಂದು ನನ್ನ ಅನುಭವ ಸಿರ್ಸಿಯ ಸೊಂದಾದ ಸ್ಟಣ೯ವಲ್ಲಿ ಮಠದಲ್ಲಿ ಆಗಿದ್ದೂ ಕೂಡ ನೆನಪಾಯಿತು ಅಲ್ಲಿಯ ಭಕ್ತರು ಆದರೆ ಹವ್ಯಕರಲ್ಲದ ರಾಮಕ್ಷತ್ರಿಯ ಸಮಾಜದವರು ಮೂಲ ರಾಜೇಶ್ವರಿ ದೇವಾಲಯ ನಿರ್ಮಿಸಿ ಕೊಟ್ಟ ಇತಿಹಾಸ ಇದೆ, ಆ ಸಮಾಜ ಗೋವಾದಿಂದ ಪೋರ್ಚುಗೀಸರ ದೌರ್ಜನ್ಯದಿಂದ ವಲಸೆ ಬಂದಾಗ ಅವರ ಜೊತೆಯೆ ಬಂದ ಗೌಡ ಸಾರಸ್ವತರು ಪ್ರತ್ಯೇಕ ಮಠ ಮತ್ತು ಸ್ವಾಮಿ ನೇಮಕ ಮಾಡಿಕೊಂಡಾಗ ಶೃಂಗೇರಿ ಗುರುಗಳು ಸ್ವರ್ಣವಲ್ಲಿ ಮಠದ ಅನುಯಾಯಿಗಳಾಗುವಂತೆ ಆದೇಶಿಸುತ್ತಾರೆ ಅದು ಈಗಲೂ ನಡೆದಿದೆ.
ಸ್ವರ್ಣವಲ್ಲಿ ಗುರುಗಳು ಯಾವುದೋ ಒಂದು ವಿಚಾರವಾಗಿ ನನ್ನ ಲೇಖನದ(ಭಗವದ್ಗೀತ ಅಭಿಯಾನ) ಬಗ್ಗೆ ನನ್ನನ್ನು ಕರೆತರಲು ಈ ರಾಮಕ್ಷತ್ರಿಯ ವಿಶ್ವ ಸಂಘಟನೆಯ ಉಪಾಧ್ಯಕ್ಷರಿಗೆ ಹೇಳಿದ್ದರಿಂದ ಅವರೊಡನೆ ಹೋಗಿದ್ದೆ, ಪೂಜೆ ನಂತರ ಮಠದ ಶಿಷ್ಯರು ಊಟಕ್ಕೆ ಕರೆದರು ನಾನು ನನ್ನ ಕರೆದೊಯ್ದವರಿಗೆ ನಾನು ಊಟಕ್ಕೆ ಬರುವುದಿಲ್ಲ ಸಿರ್ಸಿಗೆ ಹೋಗೋಣ ಅಂದರೆ ಆ ದೊಡ್ಡ ಮನುಷ್ಯರು ಇದು ದೇವರ ಪ್ರಸಾದ ನಿರಾಕರಿಸಬಾರದೆಂಬ ಸೆಂಟಿಮೆಂಟಲ್ ತಂದರು.
ಊಟದ ಮನೆಯಲ್ಲಿ ಪ್ರತ್ಯೇಕ ಪಂಕ್ತಿಯಲ್ಲಿ ಅಲ್ಲಿನ ಕಟ್ಟಡ ಕಾಮಿ೯ಕರು, ಸ್ವಚ್ಚತಾ ಕಾಮಿ೯ಕರ ಜೊತೆ ಕೂರಿಸಿದಾಗ ನನ್ನ ಕರೆತಂದವರ ಮುಖ ಸಿಟ್ಟಿನಿಂದ ಕೆಂಪಾಯಿತು, ಕೆಸರು ಮೆತ್ತಿದ ಬಾಳೆ ಎಲೆ ಎಸೆಯುತ್ತಾ ಹೋದಾಗ ಅದು ತಡೆಯಲಾರದಂತೆ ಆಯಿತು ರಾಮಕ್ಷತ್ರಿಯರಿಗೆ ಅವರ ಗುರುಗಳ ಮಠದಲ್ಲಿ ಹೀಗಾಯಿತೆಂಬ ಕೋಪ ಅವರಿಗೆ.
ನಂತರ ಗುರುಗಳ ಚಾಲಕ ಮತ್ತು ಪಾರುಪತ್ಯದಾರರ ಹತ್ತಿರ ಈ ಬಗ್ಗೆ ಚರ್ಚಿಸುತ್ತಿದ್ದರು, ಇದು ನನಗೆ ಅಸಹ್ಯ ಅನ್ನಿಸಿತು ನಾನು ಹೇಳಿದ೦ತೆ ಸಿರ್ಸಿಗೆ ಹೋಗಿ ಹೋಟೆಲ್ ನಲ್ಲಿ ಊಟ ಮಾಡಿ ಬಂದಿದ್ದರೆ ಇದೆಲ್ಲ ಇರುತ್ತಿರಲಿಲ್ಲ, ನನಗೆ ವಾಸ್ತವ ಗೊತ್ತಿತ್ತು ಆದರೆ ಆ ಸಮಾಜದ ಮುಖಂಡರಿಗೆ ದೊಡ್ಡ ಅವಮಾನ ಅನ್ನಿಸಿತ್ತು ಈ ಘಟನೆ.
ಗೊತ್ತಿದ್ದೂ ಗೊತ್ತಿದ್ದೂ ಹೀಗೆ ಒತ್ತಾಯದಿಂದ ಹೋಗಬಾರದ ಜಾಗಕ್ಕೆ ಹೋಗಿ ಅವಮಾನಗೊಳ್ಳುವ ಎರೆಡು ಪ್ರಸಂಗಗಳು ನನಗೆ ಆಯಿತು
ಇದಕ್ಕೆ ಪರಿಹಾರ ಏನೆಂದರೆ
#ಶೂದ್ರ_ಜನರು ಕಾನೂನು, ಮನುಷ್ಯತ್ವ ಇದೆಲ್ಲ ಬದಿಗಿಟ್ಟು ಇಂತಹ ಅವಮಾನದಿಂದ ದೂರವಿರಲು ಇಂತಹ ಸ್ಥಳದಲ್ಲಿ ಯಾರು ಎಷ್ಟೇ ಒತ್ತಾಯಿಸಿದರು ಇಂತಹ ಅವರವರ ಪದ್ಧತಿಯ ಆಚರಣೆಯ ಅವರಿಗಾಗಿಯೇ ಮೀಸಲಿರುವ ಊಟದ ಪಂಕ್ತಿಯಲ್ಲಿ ಊಟಕ್ಕೆ ಹೋಗಬಾರದು.
#ಸಂಪ್ರದಾಯದ_ಊಟದ_ಪಂಕ್ತಿ ಆಯೋಜಿಸುವವರಿಗೆ ವಿನಂತಿ ಏನೆಂದರೆ ಈ ಪಂಕ್ತಿಯಲ್ಲಿ ಯಾರು ಊಟ ಮಾಡ ಬಹುದು ಮತ್ತು ಯಾರು ಊಟ ಮಾಡಬಾರದೆಂಬ ಬೋರ್ಡು ತಗಲು ಹಾಕಿದರೆ ಗೊತ್ತಿಲ್ಲದೇ ಬರಬಾರದಾದವರು ಪಂಕ್ತಿಯಲ್ಲಿ ಬಂದು ಕೂರುವುದಿಲ್ಲ ಮತ್ತು ಅಂತವರನ್ನು ಪಂಕ್ತಿಯಿಂದ ಹೊರ ಒಗೆಯುವ ಕಷ್ಟವೂ ಇರುವುದಿಲ್ಲ.
Comments
Post a Comment