ಕೇಶವಪುರದ ದಸ್ತಗೀರ್ ಸಾಬರು, ಹಲ್ಲೇ ಕಟ್ಟೊ ಸಾಬರು ಎಂಬ ಅನ್ವರ್ಥನಾಮದ ನನ್ನ ಅತ್ಯಾಪ್ತ ಗೆಳೆಯರು 2011ರ ನನ್ನ ಎತ್ತಿನಗಾಡಿ ಯಾತ್ರೆ ಯಶಸ್ವಿಗೆ ಕಾರಣಕರ್ತರು.
#ಇವರನ್ನು_ಎತ್ತಿನ_ಹಲ್ಲೇ_ಕಟ್ಟೋ_ಸಾಬರೆಂತಲೆ_ಜನ_ಕರೆಯುವುದು.
#ಈಬಾಗದ_ಜನರ_ವಿಶ್ವಾಸ_ಪ್ರೀತಿಗಳಿಸಿದ_ಸಾಹೇಬರು
#ನನ್ನ_2011ರ_ಎತ್ತಿನಗಾಡಿ_ಯಾತ್ರೆಗೆ_ಇವರ_ಸಹಾಯ_ಮರೆಯಲುಂಟೆ?
2014 ರಿಂದ ಸಾರ್ವಜನಿಕ ಜೀವನದಿಂದ ವಿಮುಕ್ತನಾದ ಮೇಲೆ ಆವರೆಗಿನ ಅನೇಕ ರಾಜಕಾರಣದ ಗೆಳೆಯರ ಸಂಪರ್ಕವೇ ಇಲ್ಲವಾಗಿದೆ.
ಕೇಶವಪುರದ ಮೂಲ ಹೆಸರು ದರೋಡೆಕಾನು ಈ ಹೆಸರು ಬರಲು ಹೊಸನಗರ ಮತ್ತು ಬಟ್ಟೆಮಲ್ಲಪ್ಪದ ರಸ್ತೆ ದಟ್ಟ ಕಾಡಿನ ಮಧ್ಯದಲ್ಲಿ ಶರಾವತಿಗೆ ಸೇರುವ ದೊಡ್ಡ ಹಳ್ಳ ಇಲ್ಲಿದೆ, ಎರೆಡೂ ಭಾಗದಲ್ಲಿ ತುಂಬಾ ಹೆಚ್ಚು ಎನ್ನುವ ಇಳಿಜಾರು ಮತ್ತು Z ಆಕಾರದ ತಿರುವು ಇಲ್ಲಿತ್ತು ಆ ಕಾಲದಲ್ಲಿ ಸರಕು ಸಾಗಾಣಿಕೆಯ ಎತ್ತಿನಗಾಡಿಗಳನ್ನು ಇಲ್ಲಿ ಲೂಟಿ ಮಾಡುವ ಜನ ಈ ಆಯಾ ಕಟ್ಟಿನ ಜಾಗದಲ್ಲಿ ತಮ್ಮ ಕಾಯಾ೯ಚರಣೆ ಮಾಡುತ್ತಿದ್ದರಿಂದ ಈ ಹೆಸರು.
ಈಗಿನ ಯುವಕರು ತಮ್ಮ ಈ ಕಳಂಕದ ಹೆಸರನ್ನು #ಕೇಶವಪುರ ಅಂತ ಬದಲಿಸಿದ್ದಾರೆ, ಬ್ರಿಟಿಷರ ಕಾಲದ ಹಳೇ ಸೇತುವೆ ತೆಗೆದು ದೊಡ್ಡ ಸೇತುವೆ ಆಗುವಾಗ ತಿರುವು ತಿದ್ದಿದ್ದಾರೆ ಇಳಿಜಾರು ಗೊತ್ತಾಗುವುದಿಲ್ಲ, ರಸ್ತೆ ಬದಿಯಲ್ಲಿ ಸಾಲು ಮನೆಗಳು, ಬಸ್ ನಿಲ್ದಾಣ ಸಮೀಪದಲ್ಲಿ ರೈತರ ಕಬ್ಬು ಬೆಲ್ಲ ಮಾಡುವ ಕಾರ್ಖಾನೆ ಹೀಗೆ ಅಲ್ಲಿ #ದರೋಡೆಕಾನ್ ಎಂಬುದು ಇತ್ತು ಎನ್ನುವ ಕುರುಹು ಈಗಿಲ್ಲ ಮತ್ತು ಆ ದಿನದ ನೆನಪು ಈಗ ಇಲ್ಲಿರುವ ಹೊಸಬರಿಗೆ ಗೊತ್ತೂ ಇಲ್ಲ.
ಇಲ್ಲಿಯೇ ರಸ್ತೆ ಬದಿಯಲ್ಲಿ ಮದ್ರಾಸ್ ರಾಜ್ಯದಲ್ಲಿ ಬ್ರಿಟಿಷರ ಭಾರತೀಯ ಸೇನೆಯ ಸೈನಿಕರಾಗಿದ್ದ ಖಾದರ್ ಮೊಯಿದ್ದೀನ್ ಮತ್ತು ಶ್ರೀಮತಿ ಪ್ಯಾರೀಬಿ ದಂಪತಿ ಶಿವಮೊಗ್ಗ ಸಮೀಪದ ಬಿ.ಆರ್.ಪಿ ಡ್ಯಾಂ ಮತ್ತು ಗಾಜನೂರು ಡ್ಯಾಂ ನಿರ್ಮಾಣ ಕಾಮಗಾರಿಗೆ ಬಂದವರು ನಂತರ ಭದ್ರಾವತಿಯ ಪೇಪರ್ ಮಿಲ್ ಗೆ ಬಿದಿರು ಸರಬರಾಜು ಗುತ್ತಿಗೆದಾರರ ಜೊತೆ ಸೇರಿ ಶರಾವತಿ ಡ್ಯಾಂ ಮುಳುಗಡೆ ಪ್ರದೇಶದ ಬಿದಿರು ತೆಗೆಯುವ ಕೆಲಸ ನಂತರ ಈ ಭಾಗದಲ್ಲಿ ಕಾಡು ತೆಗೆಯುವಾಗ ಇದ್ದಿಲು(ಚಾಕೋ೯ಲು) ತಯಾರಿಸಲು ಪ್ರಾರಂಬಿಸುತ್ತಾರೆ ಆಗ ಭದ್ರಾವತಿ ಕಬ್ಬಿಣದ ಕಾಖಾ೯ನೆಯ ಪರ್ನೆಸ್ ಗೆ ಇದ್ದಿಲೇ ಆದಾರ ಆಗಿತ್ತು ಮತ್ತು ಇವರ ಕುಟುಂಬಕ್ಕೆ ಮದ್ರಾಸ್ ರಾಜ್ಯದಲ್ಲಿ ಇದ್ದಿಲು ತಯಾರಿಸುವ ಉದ್ಯೋಗದ ಪರಿಣಿತಿ ಇತ್ತು.
ಇದೆಲ್ಲದರ ನಂತರ ಈ ಭಾಗದ ಗಾಡಿ ಎತ್ತುಗಳಿಗೆ ಹಲ್ಲೇ ಕಟ್ಟುವ ಕೆಲಸ ಪ್ರಾರಂಬಿಸುತ್ತಾರೆ.
ಇವರಿಗೆ ದಸ್ತಗೀರ್, ಮುಸ್ತಾಪಾ, ಸೈಯದ್ ಆಲಿ, ಇಬ್ರಾಹಿಂ ಎಂಬ ನಾಲ್ಕು ಗಂಡು ಮಕ್ಕಳು ಮತ್ತು ಜಾನ್ ಬೀ ಎಂಬ ಏಕೈಕ ಪುತ್ರಿ ಇದ್ದಾರೆ ಇವರೆಲ್ಲರ ಕುಟುಂಬ ಈಗ ಅಲ್ಲೇ ನೆಲೆಸಿದೆ ಇವರಲ್ಲಿ ಮುಸ್ತಾಪಾ ನಮ್ಮ ಊರಲ್ಲಿ ನೆಲೆಸಿದ್ದಾರೆ.
ಇವರ ತಂದೆ ಮಿಲ್ಟ್ರಿ ಖಾದರ್ ಮೊಯಿದೀನ್ ಸಾಹೇಬರನ್ನು ನಾನು ನೋಡಿದ್ದೇನೆ.
2011ರಲ್ಲಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಲ್ಲಿ #ಮಾಹಿತಿಹಕ್ಕು_ಮತ್ತು_ಲೋಕಾಯುಕ್ತ ಜನ ಜಾಗೃತಿ ಮತ್ತು ತರಬೇತಿಯ ಉದ್ದೇಶದ 360 ಕಿ.ಮಿ. ಸಂಚರಿಸುವ ಆರು ದಿನದ ಎತ್ತಿನಗಾಡಿ ಯಾತ್ರೆ ಹಮ್ಮಿಕೊಂಡಿದ್ದೆ ಈ ಬಗ್ಗೆ #ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ ಸಲಹೆ ನೀಡಿದರು ಮತ್ತು ಒಂದು ಕರಾರು ಕೂಡ ಎತ್ತಿನಗಾಡಿಯಲ್ಲಿ ಗಾದಿ ಇತ್ಯಾದಿ ಸುಖಕರ ಅಸನ ವ್ಯವಸ್ಥೆ ಮಾಡುವಂತಿಲ್ಲ ಕಂಬಳಿ ಹಾಸಿ ಕುಳಿತುಕೊಳ್ಳಬಹುದು ಇದರಿಂದ ಕೆಲ ನಾಯಕರು ಹಾಗೆ ಎತ್ತಿನಗಾಡಿಯಲ್ಲಿ ಕುಳಿತುಕೊಳ್ಳಲಾಗದೇ ಯಾತ್ರೆ ಸಮಾರೋಪದಲ್ಲಿ ಭಾಗಿ ಆಗಿ ನನ್ನನ್ನು ಹ್ಯಾಗೆ ಕುಳಿತುಕೊಂಡು ಯಾತ್ರೆ ಮುಗಿಸಿದಿರಿ ಅಂತ ಆಶ್ಚಯ೯ದಿಂದ ಕೇಳುತ್ತಿದ್ದರು.
ಅವರ ಎಲ್ಲಾ ಸಲಹೆಯಲ್ಲಿ ಯಾತ್ರೆಯ ಜೊತೆಗೆ ಒಬ್ಬ ಹಲ್ಲೇ ಕಟ್ಟುವ ಒಬ್ಬರು ಇರಲೇಬೇಕು ಅಂತ ಯಾಕೆಂದರೆ ಎತ್ತಿನಗಾಡಿ ಡಾಂಬರ್ ರಸ್ತೆ ಪ್ರಯಾಣದಲ್ಲಿ ಎತ್ತಿನ ಕಾಲಿನ ಹಲ್ಲೇ ಕಳಚಿ ಹೋಗುವ ಸಂಭವ ಜಾಸ್ತಿ ಇದರಿಂದ ಎತ್ತಿಗೆ ನಡೆಯಲು ಕಷ್ಟ ಅಂತ.
ಹಾಗಾಗಿ ನಮ್ಮ ಈ ಎತ್ತಿನಗಾಡಿ ಯಾತ್ರೆ ಜೊತೆ ಹಲ್ಲೇ ಕಟ್ಟುವವರ ತಲಾಷ್ ಮಾಡಿ ಕೊಡಲು ಗೆಳೆಯ #ಮಾಪೀರ್ #ಶೇಖ್_ಆಹಮದ್_ಸಾಹೇಬರು ಮತ್ತು #ಹೆಬ್ಬೋಡಿ_ರಾಮಸ್ವಾಮಿಗೆ ವಿನಂತಿಸಿದ್ದೆ.
ಅವರೆಲ್ಲರ ಒತ್ತಾಯದಿಂದ ಕೇಶವಪುರ ದಸ್ತಗೀರ್ ಸಾಹೇಬರ ಸಂಚಾರಿ ಹಲ್ಲೆಕಟ್ಟುವ (ಅವರದ್ದೇ ಮಾರುತಿ ವ್ಯಾನ್) ನಮ್ಮ ಯಾತ್ರೆಗೆ ಸೇರಿತು ಆಗೆಲ್ಲ ನಮ್ಮ ಎತ್ತಿನಗಾಡಿ ಯಾತ್ರೆ ವಿಫಲಗೊಳಿಸಲು ಅನೇಕ ಗುತ್ತಿಗೆದಾರರು, ಅಧಿಕಾರಿಗಳು ರಾಜಕೀಯ ಪಕ್ಷಗಳ ನೇತಾರರ ಜೊತೆ ಸೇರಿಕೊಂಡಿದ್ದರು ಅವರ ಭಯ ಮಾಹಿತಿ ಹಕ್ಕಿನಲ್ಲಿ ಸರ್ಕಾರದ ಕಾಮಗಾರಿ ಪ್ಲಾನ್ ಎಸ್ಟಿಮೇಟ್ ಸ್ಥಳಿಯರಿಗೆ ಸಿಕ್ಕರೆ ತಮ್ಮ ಕಳಪೆ ಕಾಮಗಾರಿ ಬಯಲಾಗುತ್ತೆ ಮತ್ತು ಆಗಿನ ಲೋಕಾಯುಕ್ತಕ್ಕೆ ದೂರು ನೀಡಿದರೆ ಶಿಕ್ಷೆ ಗ್ಯಾರಂಟಿ (ಆಗಿನ ಲೋಕಾಯುಕ್ತರಾಗಿದ್ದವರು ಸಂತೋಷ್ ಹೆಗ್ಗಡೆಯವರು) ಎಂಬ ಭಯ ಹಾಗಾಗಿ ನಮ್ಮ ಯಾತ್ರೆಯಲ್ಲಿ ದೈಯ೯ ಇಲ್ಲದವರು ಭಾಗವಹಿಸುವುದು ಕಷ್ಟ ಇದೆಲ್ಲ ಗೊತ್ತಿದ್ದು ಭಾಗವಹಿಸಿದ ಕೇಶವಪುರದ ದಸ್ತಗೀರ್ ಸಾಹೇಬರಿಗೆ ನಾನು ಯಾವತ್ತೂ ಆಭಾರಿ.
ಅವರಿಲ್ಲದಿದ್ದರೆ ಯಾತ್ರೆ ಸರಾಗವಾಗಿ ಆಗುತ್ತಿರಲಿಲ್ಲ, ಪ್ರತಿ ದಿನ ಬೆಳಿಗ್ಗೆ ಯಾತ್ರೆ ಪ್ರಾರಂಭದಲ್ಲಿ, ಮಧ್ಯಾಹ್ನದ ಊಟದ ಬಿಡುವಿನಲ್ಲಿ ಮತ್ತು ರಾತ್ರಿ ಯಾತ್ರೆ ತಂಗುವ ಸ್ಥಳದಲ್ಲಿ ಎಲ್ಲಾ ಎತ್ತುಗಳ ಕಾಲು ದಸ್ತಗೀರ್ ಸಾಹೇಬರ ಪರೀಕ್ಷೆಗೆ ಒಳಪಡುತ್ತಿತ್ತು, ಉದುರಿ ಹೋದ ಮಳೆ, ಹಲ್ಲೆ ಚಕ್ರ, ಕಲ್ಲಿಗೆ ಸಿಕ್ಕಿ ವಕ್ರವಾಗಿ ಎತ್ತಿನ ಕಾಲು ನೋವು ಮಾಡುವ ಹಲ್ಲೆಗಳೆಲ್ಲ ದುರಸ್ತಿ ಅಥವ ಹೊಸ ಹಲ್ಲೆ ಮೂಲಕ ಪರಿಹಾರ ಮಾಡುತ್ತಿದ್ದರು.
ಹೊಳೆಬಾಗಿಲ ಲಾಂಚ್ ಸಿಬ್ಬಂದಿ ಎತ್ತಿನಗಾಡಿ ಹಾಕಲು ನಿರಾಕರಿಸಿದ್ದು, ಪೋಲಿಸ್ ಅಧಿಕಾರಿಗಳು ಪೆರಿ ಅಧಿಕಾರಿಗಳಿಗೆ ಹೇಳಿ ಅನುಮತಿ ನೀಡಿಸಿದ್ದು, ಸಾಗರ ಪಟ್ಟಣದಲ್ಲಿ ಎತ್ತಿನಗಾಡಿ ಯಾತ್ರೆಯಿಂದ ರೋಡ್ ಬ್ಲಾಕ್ ಆಗಿದ್ದು, ತುಮರಿ -ಬ್ಯಾಕೋಡು - ನಿಟ್ಟೂರು ಭಾಗದಲ್ಲಿ ಎತ್ತಿನಗಾಡಿಯನ್ನೇ ನೋಡದ ಈಗಿನ ಶಾಲಾ ಮಕ್ಕಳು, ನಾವು ತಂಗುತ್ತಿದ್ದ ಮಠ ದೇವಸ್ಥಾನಗಳ ಸಿಬ್ಬಂದಿಗಳು ಎತ್ತಿನ ಸಗಣಿ - ಉಚ್ಚೆ - ಮತ್ತು ಅದರ ಆಹಾರದ ಹುಲ್ಲುಗಳು ಕಂಡು ಮೂಗು ಮುರಿಯುವುದು, ತಿರಸ್ಕಾರ ಮಾಡುವುದು, ನಮ್ಮ ಮಾರ್ಗ ಮಧ್ಯದ ಸಭೆಗೆ ಆಸಕ್ತಿಯಿಂದ ಭಾಗವಹಿಸುವ ಯುವ ಸಮುದಾಯ, ಅಪಹಾಸ್ಯ ಮಾಡುತ್ತಿದ್ದ ಕಳಪೆ ಗುತ್ತಿಗೆದಾರರು ಮತ್ತು ಪಸೆ೯೦ಟೇಜ್ ಜನಪ್ರತಿನಿಧಿಗಳು, ಯಾತ್ರೆಯ ಎತ್ತಿಗೆ ಹುಲ್ಲು ತಂದು ಕೊಡುತ್ತಿದ್ದ ಗೋಪ್ರೇಮಿಗಳು, ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದಲ್ಲಿ ಆಗಿನ ಸಮಿತಿ ಅಧ್ಯಕ್ಷರಾಗಿದ್ದ #ಎಂ_ಜಿ_ಕೃಷ್ಣಮೂರ್ತಿ ಮತ್ತು ಅವರ ಜೊತೆಗಾರರು ನನ್ನ ಯಾತ್ರೆಯ ಸರ್ವ ಧರ್ಮಿಗಳು ಮತ್ತು ದಲಿತರ ಜೊತೆ ಸಹಪಂಕ್ತಿ ಬೋಜನ ಮಾಡಿದ್ದು ಹೀಗೆ ನೂರೆಂಟು ನೆನಪುಗಳು ಮೊನ್ನೆ ಹಲ್ಲೆ ಕಟ್ಟುವ ಕೇಶವಪುರದ ದಸ್ತಗೀರ್ ಸಾಹೇಬರ ನೋಡಿದಾಗ ನೆನಪಾಯಿತು ಅವರ ಊರಿನ ಆಲೇಮನೆಯಿಂದ ಬೆಲ್ಲ ಖರೀದಿಸಿ ಅವರ ವ್ಯಾನಿನಲ್ಲಿ ತಂದಿದ್ದರು ನನಗಾಗಿ.
ಅಂತಿಮ ದಿನ ರಿಪ್ಪನ್ ಪೇಟೆಯ ಹೋರಟಗಾರ #ಟಿ_ಆರ್_ಕೃಷ್ಣಪ್ಪ ಹೊಸನಗರದ ಸಭೆಯಲ್ಲಿ ಭಾಗವಹಿಸಿ ಬೆಂಬಲಿಸಿ ನಡೆದುಕೊಂಡೇ ರಿಪ್ಪನ್ ಪೇಟೆಯ ಸಮಾರೋಪ ಸಮಾರಂಭದ ಸ್ಥಳಕ್ಕೆ ಬಂದಿದ್ದು ವಿಶೇಷ.
ಸಾಹೇಬರು ಈಗ ಹಲ್ಲೇ ಕಟ್ಟುವ ಉದ್ಯೋಗ ಬಿಟ್ಟಿದ್ದಾರೆ, ಕೃಷಿಕರು ಎತ್ತು ತೊರೆದು ಯಂತ್ರಗಳನ್ನು ಅವಲಂಬಿಸಿದ್ದಾರೆ ಆದ್ದರಿಂದ ಅವರ ಕಾಯಕ ನಡೆಯುತ್ತಿಲ್ಲ, ಮನೆ ಹತ್ತಿರ ಅಡಿಕೆ ತೋಟ ಮಾಡಿಕೊಂಡಿದ್ದಾರೆ ಮಾರುತಿ ವ್ಯಾನ್ ಒಂದನ್ನು ಸ್ಥಳಿಯರ ಬೇಡಿಕೆ ಮೇಲೆ ಟ್ಯಾಕ್ಸಿ ಆಗಿ ನಡೆಸುತ್ತಿದ್ದಾರೆ.
ಅವರ ಊರಿನವರೂ ಹೇಳುವುದು ಇವರ ಹತ್ತಿರ ಎಷ್ಟು ಲಕ್ಷ ರೂಪಾಯಿ ಕೊಟ್ಟರು ಲೋಪವಿಲ್ಲದೆ ಮುಟ್ಟಿಸುತ್ತಾರೆ, ದೂರದಿಂದ ಏನೇ ಖರೀದಿ ಮಾಡಿ ತರಲು ಹೇಳಿದರೂ ಒಂದು ಪೈಸೆ ಜಾಸ್ತಿ ಪಡೆಯುವುದಿಲ್ಲ, ಆಸ್ಪತ್ರೆ ಇತ್ಯಾದಿ ಅನಿವಾಯ೯ ಸಂದರ್ಭದಲ್ಲಿ ತಕ್ಷಣ ಬರುತ್ತಾರೆ ಕೆಲದಿನದ ನಂತರ ನಾವೇ ಹುಡುಕಿಕೊಂಡು ಹೋಗಿ ಬಾಡಿಗೆ ನೀಡಬೇಕು, ಎಲ್ಲಾ ವಯಸ್ಸಿನವರಲ್ಲೂ ಸದಾ ನಗುತ್ತಾ ಹಾಸ್ಯ ಮಾಡುತ್ತಾ ಬೆರೆಯುವ ಕೇಶವಪುರದ ದಸ್ತಗೀರ್ ಸಾಹೇಬರು ನನ್ನ ಅತ್ಯಾಪ್ತ ಸ್ನೇಹಿತರು ಎನ್ನಲು ಹೆಮ್ಮೆ ನನಗೆ.
Comments
Post a Comment