ಕಟ್ಟರ್ ಜಾತಿ ಸಂಪ್ರದಾಯದ ಸಮಾಜದಲ್ಲಿ ಜಾತ್ಯಾತೀತವಾದ ಅನಾಥ ಮಗುವಿನ ಜಾತಿ ಯಾವುದು? ಅನಾಥ ಮಗು ನನ್ನ ತಂದೆಯನ್ನು ಸಂರಕ್ಷಿಸಿದ್ದು ಕ್ಷೌರಿಕ ಜಾತಿಯ ನಲ್ಲಪ್ಪನವರು ಸಾಕಿದ್ದು ಮೀನುಗಾರ ಜಾತಿಯ ಅಬ್ಬಕ್ಕ ಮತ್ತು ವಿಶ್ವಕರ್ಮ ಜಾತಿಯ ಸುಬ್ಬಣ್ಣಾಚಾರ್ ದಂಪತಿಗಳು, ಇದು ನನ್ನ ಹುಟ್ಟಿನ ಇತಿಹಾಸ.
(ನನ್ನ ಅಜ್ಜಿ ಅಬ್ಬಕ್ಕ, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)
ಅವತ್ತು ಜನಿಸಿದ ಅನಾಥ ಮಗು ಬಿದಿರು ಮಟ್ಟಿಯ ನೆರಳಲ್ಲಿ ಹಸಿವಿನಿಂದಲೋ ಅಥವ ಜನಿಸಿ ತಾಯಿಯ ಬೆಚ್ಚನೆಯ ಅಪ್ಪುಗೆ ಇಲ್ಲದೆಯೋ ಅಳುತ್ತಿತ್ತು ಅಕಸ್ಮಾತ್ ಆ ಮಣ್ಣು ದಾರಿಯಲ್ಲಿ ನಡೆದು ಬಂದ ಕ್ಷೌರಿಕ ವೃತ್ತಿಯ ಆನಂದಪುರಂನ ಆ ಕಾಲದ ಡೇರ್ ಡೆವಿಲ್ ನಲ್ಲಪ್ಪನವರನ್ನು ದೇವರೇ ಕಳಿಸಿರಬೇಕು.
ಯಾರೋ ಅಕ್ರಮ ಸಂಬಂದದ ಕೂಸನ್ನು ಲೋಕ ನಿಂದನೆ ನಿವಾರಿಸಿಕೊಳ್ಳಲು ಅನಾಥವಾಗಿಸಿ ಹೋದ ಗಂಡು ಮಗುವನ್ನು ನಲ್ಲಪ್ಪ ಎತ್ತಿ ಮುದ್ದಿಸಿ ಈ ಮಗುವಿಗೆ ಪುನರ್ಜೀವನ ಸೃಷ್ಟಿಸುವ ಸಂಕಲ್ಪಕ್ಕೆ ನೆನಪಾಗಿದ್ದೆ ಕರಾವಳಿಯಿಂದ ಹೊಟ್ಟೆಪಾಡಿಗಾಗಿ ಘಟ್ಟಕ್ಕೆ ಬಂದು ನಂತರ ಇಲ್ಲಿನ ಖಾಯಂ ನಿವಾಸಿ ಆಗಿ ಸ್ಥಳಿಯರ ಭತ್ತ ಒನಕೆಯಿಂದ ಒರಳಲಿ ಕುಟ್ಟಿಸಿ ಅಕ್ಕಿ ಮಾಡಿ, ಹೊಟ್ಟು ಕೇರಿಸಿ, ಮರದಲ್ಲಿ ನೆಲ್ಲು ಬೇರ್ಪಡಿಸಿ, ಸಾಣಿಗೆಯಲ್ಲಿ ಸಾಣಿಸಿ ನುಚ್ಚು ಬೇರೆ ಮಾಡಿಸಿ ಕೊಡುತ್ತಿದ್ದ ದೇಶಿ ಅಕ್ಕಿ ಗಿರಣಿಯಂತೆ ಕಾರ್ಯ ನಿರ್ವಹಿಸಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಬ್ಬಕ್ಕ. (1929 ರಲ್ಲಿ ಮೈಸೂರು ಸರ್ಕಾರದ ತೂಕ ಮತ್ತು ಅಳತೆ ಇಲಾಖೆ ಮೊಹರಾಗಿರುವು ಒಂದು ಸೇರು ನಮ್ಮಜ್ಜಿಯ ಅಕ್ಕಿ ವ್ಯಾಪಾರದಲ್ಲಿ ಬಳಕೆಯಲ್ಲಿತ್ತು)
ಸಾರ್ವಜನಿಕರಲ್ಲಿ ಕಟುಕನಂತೆ, ನ್ಯಾಯಕ್ಕಾಗಿ ಎಂತವರನ್ನು ಎದುರು ಹಾಕಿಕೊಳ್ಳುತ್ತಿದ್ದ ನಲ್ಲಪ್ಪನವರಿಗೆ ಈ ಮಗು ಅಲ್ಲೇ ಇದ್ದರೆ ಇರುವೆ, ನಾಯಿ ನರಿ ಪಾಲಾಗುತ್ತದೆ ಅಥವ ಹಾಲಿಲ್ಲದೆ ಹಸಿವಿನಿಂದ ಸಾಯುತ್ತೆ ಎಂಬ ಸತ್ಯದ ಅರಿವಿತ್ತು, ನಲ್ಲಪ್ಪನವರಲ್ಲಿ ಅಗೋಚರವಾಗಿದ್ದ ಮಾನವೀಯತೆಯ ಹೃದಯ ಜನರು ನೋಡಿರಲಿಲ್ಲ.
(ಡೇರ್ ಡೆವಿಲ್ ನಲ್ಲಪ್ಪ )
ದ.ಕ.ಜಿಲ್ಲೆಯ ಮೊಗೇರ ಜಾತಿಯ ಅಬ್ಬಕ್ಕ ಇಲ್ಲಿನ ಅನುಕೂಲಸ್ಥರಾಗಿದ್ದ ಅವಿವಿಹಾಹಿತ ದ.ಕ. ಮೂಲದ ವಿಶ್ವಕಮ೯ ಜಾತಿಯ ಸುಬ್ಬಣ್ಣ ಆಚಾರ್ ಕೂಡಿಕೆಯ (ಈ ಕಾಲದ ಲೀವ್ ಇನ್ ರಿಲೇಷನ್) ಜೀವನ ಮಾಡಿಕೊಂಡಿದ್ದರು ಇವರಿಗೆ ಅನಂತ ಎಂಬ ಮಗನೂ ಇದ್ದ, ಅನಂತ ತಂದೆ ಸುಬ್ಬಣಾಚಾರ್ ಜೊತೆಗೆ ಕುಲುಮೆಯೂ ನಡೆಸುತ್ತಿದ್ದ.
ಈ ಸಂದಭ೯ದಲ್ಲಿ ನಲ್ಲಪ್ಪ ತನ್ನ ಬಾರ್ ಮೀಸೆಯ ಕಠೋರ ಮುಖದಲ್ಲಿ, ಯಾವಾಗಲೂ ಕೆಂಪಗಿರುವ ಅವನ ಕಣ್ಣು ಇವತ್ತು ಆಯಾಸ ಮತ್ತು ಅನುಕಂಪದ ಕಣ್ಣಾಗಿ ಬದಲಾಗಿ ತನ್ನ ಯಾವತ್ತೂ ಹೆಗಲ ಮೇಲಿರುತ್ತಿದ್ದ ರುಮಾಲು ವಸ್ತ್ರದಲ್ಲಿ ಸುತ್ತಿದ ಆ ಅನಾಥ ಮಗುವನ್ನು ಅಬ್ಬಕ್ಕನ ಮಡಿಲಿಗೆ ಹಾಕಿ ಅಲ್ಲೇ ಇದ್ದ ಅಬ್ಬಕ್ಕನ ಪತಿ ಸುಬ್ಬಣ್ಣಾಚಾರ್ ಮತ್ತು ಪುತ್ರ ಅನ೦ತನಿಗೆ ಈ ಮಗು ಅನಾಥ ಇವತ್ತಿನಿಂದ ನಿಮ್ಮದೇ ನೀವೇ ಸಾಕಿ ಅಂದಾಗ ಬಿದಿರ ಮಟ್ಟಿಯ ಅಡಿ ಅನಾಥವಾಗಿ ಯಾರೋ ಬಿಟ್ಟು ಹೋಗಿದ್ದ ಮಗು ತನ್ನ ಹೊಸ ಆಶ್ರಯ ಪಡೆಯಿತು.
ಆ ಸಣ್ಣ ಊರಲ್ಲಿ ಈ ಮಗು ಹಡೆದವರಾರು ಎನ್ನುವುದು ಎಷ್ಟೇ ರಹಸ್ಯವಾಗಿಟ್ಟರು ಬಯಲಾಗಿತ್ತು, ಅಕ್ಕಸಾಲಿಗ ದೈವಜ್ಞ ಹೆಣ್ಣು ಮಗಳು ಅಪ್ರಾಪ್ತ ವಯಸ್ಸಲ್ಲಿ ಪತಿ ಕಳೆದುಕೊಂಡಿದ್ದಳು, ಸುಂದರಿ ಮತ್ತು ಪ್ರಾಯಸ್ತಳಾದ ಆಕೆಯನ್ನು ಒಲಿಸಿಕೊಂಡವರ ಸಂಯೋಗದಿಂದ ಈ ಪುತ್ರ ಪ್ರಾಪ್ತಿ ಆದಾಗ ಲೋಕ ನಿಂದನೆಗೆ ಹೆದರಿ ಆ ಅಮಾಯಕ ತಾಯಿ ಮನಸ್ಸಿಲ್ಲದ ಮನಸ್ಸಿನಿಂದ,ದು:ಖ ತನ್ನ ಕರುಳ ಕುಡಿ ಬಿದಿರು ಮಟ್ಟಿಯ ಕೆಳಗೆ ಬಿಟ್ಟು ಬಂದಳು.
ಹಾಗಾದರೆ ಈ ಮಗುವಿನ ತಂದೆ ಯಾರು? ದೊಡ್ಡ ಬ್ರಾಹ್ಮಣ ಜಮೀನ್ದಾರರ ಮಗ ಅಂತಲೂ, ಲಿಂಗಾಯಿತ ಜಮೀನುದಾರ ಅಂತಲೂ ಗುಸು ಗುಸು ಆಯಿತು.
ಬಿಳಿ ಕೆಂಪು ಬಣ್ಣದ ನೀಳ ಮೂಗಿನ ಈ ಮಗುವಿಗೆ ಅಬ್ಬಕ್ಕ ತನ್ನ ಹುಟ್ಟೂರು ಕಾಪು ಮತ್ತು ಬೆಳೆದ ಮೂಲ ಮನೆ ಬೆಣ್ಣೆ ಕುದುರುವಿಗೆ ಸಮೀಪದ ಉಡುಪಿಯ ಶ್ರೀಕೃಷ್ಣನ ಭಕ್ತಿಯಿಂದ ನೆನಸಿ ಕೃಷ್ಣಾ ಎಂದೇ ನಾಮಕರಣ ಮಾಡಿದಳು.
ಚುರುಕು, ಬುದ್ದಿವಂತ ಕೃಷ್ಣನನ್ನ ಸುಬ್ಬಣ್ಣಾಚಾರ್ ಶಾಲೆಗೆ ಸೇರಿಸಿ ಪೋಷಕರ ಕಾಲಂ ನಲ್ಲಿ ತಂದೆ ಹೆಸರು ಸುಬ್ಬಣ್ಣಾಚಾರ್ ಎಂದೇ ನಮೂದಿಸುತ್ತಾರೆ.
ಸುಬ್ಬಣ್ಣಾಚಾರ್ ವಿಶ್ವಕರ್ಮ ಜಾತಿ, ಮೀನುಗಾರ ಅಬ್ಬಕ್ಕನನ್ನು ಯಾವ ಕಾರಣಕ್ಕೂ ವಿಶ್ವಕಮಿ೯ಯರು ಒಪ್ಪಲು ಸಾಧ್ಯವಿಲ್ಲದ ಆ ಜಾತಿ ಕಾಲ ಅದು.
ಸುಬ್ಬಣ್ಣಾಚಾರ್ ವಿದಿವಶರಾದರು ಇದಾಗಿ ಒಂದೆರೆಡು ವರ್ಷದಲ್ಲಿ ಅನಾರೋಗ್ಯದಿಂದ ಮಗ ಅನಂತನೂ ಅಬ್ಬಕ್ಕನಿಗೆ ತೊರೆದಾಗ ಸಾಕು ಮಗ ಕೃಷ್ಣ ಅಬ್ಬಕ್ಕನ ಅಂತ್ಯದವರೆಗೆ ಸಾಕಿ ಪೊರೆಯುತ್ತಾನೆ.
ಅಬ್ಬಕ್ಕ ತನ್ನ ಜಾತಿಯ ಅನಾಥೆ ಸರಸಳನ್ನು ಮಗನಿಗೆ ಮದುವೆ ಮಾಡುತ್ತಾಳೆ, ಸರಸಳ ಜೀವನವೂ ಇನ್ನೊಂದು ದುಃಖದ ಕಥೆ, ಬಸ್ರೂರು ಸಮೀಪದ ಹೆರಿಕೆರೆಯ ನಚ್ಚೂರು ಮನೆತನದಲ್ಲಿ ಒಬ್ಬ ಅಣ್ಣ ಮೂವರು ತಂಗಿಯರು ಕುಟುಂಬ.
ಕಿರಿಯ ಸರಸ ಹುಟ್ಟುವ ಮೊದಲೇ ತಂದೆ ಕಳೆದುಕೊಂಡು, ಹುಟ್ಟಿದ ನಂತರ ತಾಯಿ ಕಳೆದುಕೊಂಡವರು, ಯಾರೂ ಇಲ್ಲದ ಈ ಅನಾಥರನ್ನು ಸಾಕಿದ್ದು ಬಸರೂರಿನ ಜಮೀನ್ದಾರರಾದ ಶೆಟ್ಟರು (ಸಂಸದರಾಗಿದ್ದ ಜಯರಾಂ ಶೆಟ್ಟರ ಅಜ್ಜ) ನಂತರ ಅವರೇ ಬಿದನೂರು ನಗರದ ಗಣಪ ನಾಯ್ಕರಿಗೆ ಮದುವೆ ಮಾಡಿಕೊಟ್ಟಾಗ 5 ವರ್ಷದ ಮಗು ಸರಸ ಅಕ್ಕನ ಕೈ ಗಟ್ಟಿಯಾಗಿ ಹಿಡಿದು ಅಳುವಾಗ ವಿವಾಹವಾದ ಅಕ್ಕ ಅನಾಥಳಾದ ತಂಗಿಯನ್ನು ಕರೆದುಕೊಂಡು ಹೋಗುವುದು ಎಂತು?.
ಕರುಣಾಮಯಿ ಯುವಕ ಗಣಪ ನಾಯ್ಕ ಈ ಮಗು ಬರಲಿ ಕರೆದುಕೊಳ್ಳಿ ಅಂದಾಗ ಅದು ಸುಖಾಂತ್ಯ ಆಯಿತು. ಮದುವೆ ದಿಬ್ಬಣದ ಎತ್ತಿನಗಾಡಿಯಲ್ಲಿ 5 ವಷ೯ದ ಮಗು ಬಸ್ರೂರು ಸಮೀಪದ ಹಿರೆಕೆರೆಯಿಂದ ಬಿದನೂರು ನಗರದ ದೇವಗಂಗೆ ತಲುಪಿತು.
ಮುಂದೆ ಅಕ್ಕ ಬಾವನೆ ಅಪ್ಪ ಅಮ್ಮಂದಿರಾದರು.
ಇದೆಲ್ಲ ನಮ್ಮ ತಂದೆ ಬರೆದಿಟ್ಟ ಸಂಕ್ಷಿಪ್ತ ಅವರ ಜೀವನದ ಮೂಲ ವಿವರಿಸುವ ಅವರ ಕೈ ಬರಹ, ನಾನು ಸ್ವಲ್ಪ ವಿಸ್ತರಿಸಿ ಬರೆದಿದ್ದೇನೆ ಇಲ್ಲಿ.
ನಿಜ ತಾಯಿ ಯಾರು ಅಂತ ಗೊತ್ತಾದರೂ ತನಗೆ ಅವರ ಮೇಲೆ ಪ್ರೀತಿ ಉಂಟಾಗಲಿಲ್ಲ ದ್ವೇಷ ಉಂಟಾಯಿತು ಅಂತ ಬರೆದಿದ್ದಾರೆ.
ಸುಬ್ಬಣ್ಣಾಚಾರ್ ಕಡೆಯವರು ಕೃಷ್ಣ ನಮ್ಮವನು ವಿಶ್ವಕಮ೯ದವನು ಎಂಬ ಪ್ರೀತಿ ತೋರಿದರು, ಕೃಷ್ಣನ ನಿಜ ತಾಯಿಯ ಕಡೆಯವರು ಕೃಷ್ಣ ನಮ್ಮವನು ದೈವಜ್ಞ ಎಂಬ ಪ್ರೀತಿ ಸಂಬಂದ ಹೇಳಿಕೊಂಡರು, ಅಬ್ಬಕ್ಕನ ಕುಟುಂಬದವರು ಕರಾವಳಿಯ ಮೀನುಗಾರ ನಮ್ಮ ಕೃಷ್ಣ ಅಂದರು, ಕೃಷ್ಣನ ಹುಟ್ಟಿಗೆ ಕಾರಣ ಪುರುಷ ಬ್ರಾಹ್ಮಣ ಅಂತಲೂ, ಲಿಂಗಾಯಿತ ಅಂತನೂ ಎಲ್ಲರಿಗೂ ಆಪ್ತನಾದ ಕೃಷ್ಣ ವಯಸ್ಕನಾಗಿ ಕೃಷ್ಣಪ್ಪನಾಗಿ ಸರಸಳ ವಿವಾಹದಿಂದ ನಾನು ಕೊನೆಯ ಪುತ್ರನಾದೆ ಪುನಃ ವರ್ಣ ಸಂಕರಕ್ಕೆ ಕಾರಣ ಆಯಿತು ನನ್ನ ಪ್ರೇಮ ವಿವಾಹ ಹವ್ಯಕ ಬ್ರಾಹ್ಮಣರವಳ ಜೊತೆ.
ನಮ್ಮ ತಂದೆ ತಾಯಿ ಇಬ್ಬರೂ ಈಗ ಇಲ್ಲ, ನಮ್ಮ ಊರಲ್ಲಿ ಅವರ ಸ್ಮರಣಾಥ೯ ಶ್ರೀ ಕೃಷ್ಣ - ಸರಸ ಕನ್ವೆನ್ಷನ್ ಹಾಲ್ ಎಂಬ ಕಲ್ಯಾಣ ಮಂಟಪ ನಿರ್ಮಿಸಿದ್ದೇನೆ ಈ ಕಲ್ಯಾಣ ಮಂಟಪದ ಊಟದ ಮನೆಯ ಉದ್ಘಾಟನೆ ಉಡುಪಿ ಸಂಸದರಾಗಿದ್ದ ಐ.ಎಂ.ಜಯರಾಂ ಶೆಟ್ಟರಿಂದ ಮಾಡಿಸಿದೆ ಕಾರಣ ನನ್ನ ತಾಯಿ ಅನಾಥರಾದಾಗ ಅನ್ನ ನೀಡಿದ ಜಯರಾಂ ಶೆಟ್ಟರ ಅಜ್ಜನವರ ಋಣದ ನೆನಪು.
ಕಲ್ಯಾಣ ಮಂಟಪ ಜಂಟಿಯಾಗಿ ಉದ್ಘಾಟನೆ ಮಾಡಿದವರು ವಿಖ್ಯಾತ ಜೋತಿಷಿಗಳು ನನ್ನ ಮಾರ್ಗದರ್ಶಕರಾದ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು ಮತ್ತು ನನ್ನ ಪ್ರೌಡ ಶಾಲೆಯ ಗುರುಗಳಾದ ನಂತರ ಜಿಲ್ಲಾ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಆದ ಕೆ.ಆರ್. ಧರ್ಮಪ್ಪನವರು (ಕಾಳೇಶ್ವರ)
2019 ರಲ್ಲಿ ನನ್ನ ಮಗಳ ಮದುವೆ ಇಲ್ಲೇ ಮಾಡಿದೆ ಅವಳು ವರಿಸಿದ್ದೂ ಬ್ರಾಹ್ಮಣ ವರನನ್ನು.
ಈಗ ನನ್ನಲ್ಲೇ ಅನೇಕ ಪ್ರಶ್ನೆ ನಾನು ಯಾವ ಜಾತಿಗೆ ಸೇರುತ್ತೇನೆ?
ರಾಜಕೀಯದ್ವೇಷದಿಂದ ನನ್ನ ಅಜ್ಜಿ ಅಬ್ಬಕ್ಕನ ವಂಶವೃಕ್ಷ ಆದಾರಿತ ನನ್ನ ಜಾತಿ ದೃಡೀಕರಣ ಕೂಡ ವಜಾ ಮಾಡಿಸಿದ್ದಾರೆ.
ನನಗೆ ಜಾತಿ ನಂಬುಗೆಯೇ ಇಲ್ಲದ ವಾತಾವರಣದಲ್ಲಿ ಬೆಳೆದಿದ್ದರಿಂದ ಜಾತಿ ವ್ಯಾಮೋಹ ಇಲ್ಲವೇ ಇಲ್ಲ ಆದರೂ ನನ್ನ ಪ್ರಶ್ನೆಗೆ ಅನೇಕರು ಅನೇಕ ರೀತಿ ವ್ಯಾಖ್ಯಾನ ಮಾಡುತ್ತಾರೆ,ಅನೇಕ ತರ್ಕಗಳನ್ನು ನೀಡುತ್ತಾರೆ.
ನಮ್ಮ ತಂದೆ ತಮ್ಮ ಬಯಾಲಾಜಿಕಲ್ ಸಂಬಂದಗಳಿಂದ ದೂರವಿದ್ದು ತಮ್ಮನ್ನು ಸಾಕಿದ ಸಾಕು ತಾಯಿ ಅಬ್ಬಕ್ಕನನ್ನೇ ಸ್ವಂತ ತಾಯಿ ಎಂದೇ ಬಾವಿಸಿದರು, ಗೌರವಿಸಿದರು ಹಾಗಾಗಿ ನಮಗೂ ನಮ್ಮ ಅಜ್ಜಿ ಅಬ್ಬಕ್ಕನ ಮೇಲೆ ಮಮಕಾರ ಉಳಿಯಿತು.
ನಮ್ಮ ತಂದೆ ಹುಟ್ಟಿಗೆ ಕಾರಣರಾದವರ ಮೇಲಾಗಲಿ, ಅವರನ್ನು ಹಡೆದ ನಿಜ ತಾಯಿಯ ಮೇಲಾಗಲಿ ನನಗೆ ದ್ವೇಷಿಸಬೇಕು ಅನ್ನಿಸಿಲ್ಲ ಅದು ಆ ಕಾಲದ ಸಾಮಾಜಿಕ ಪದ್ದತಿಯನ್ನ ಅವಲಂಂಬಿಸಿದ ಭಯಗಳು.
ಅನಾಥ ಮಗು (ನಮ್ಮ ತಂದೆ) ರಕ್ಷಿಸಿದ ಕ್ಷೌರಿಕ ನಲ್ಲಪ್ಪ, ಸಾಕಿದ ತಾಯಿ ಮೀನುಗಾರರ ಅಬ್ಬಕ್ಕ, ತಂದೆ ಸ್ಥಾನ ತುಂಬಿದ ವಿಶ್ವಕಮ೯ದ ಸುಬ್ಬಣ್ಣಾಚಾರ್, ಸ್ವಂತ ಸಹೋದರನಂತೆ ಸಲುಹಿದ ಅನಂತ ಇವರೆಲ್ಲರ ಆತ್ಮಗಳಿಗೆ ಸದ್ಗತಿ ಮತ್ತು ಸ್ವರ್ಗ ಪ್ರಾಪ್ತಿಗೆ ಸದಾ ಪ್ರಾರ್ಥಿಸುತ್ತೇನೆ.
ಜೊತೆಯಲಿ ನನ್ನ ತಂದೆಯನ್ನು ಶಿಶುವಸ್ಥೆಯಲ್ಲೇ ಅನಿವಾರ್ಯವಾಗಿ ತೊರೆದ ಬಯಾಲಾಜಿಕಲ್ ತಾಯಿ, ಹುಟ್ಟಿಗೆ ಕಾರಣರಾದ ತಂದೆಗೂ ಕೂಡ ಪ್ರಾರ್ಥಿಸುತ್ತೇನೆ ಯಾಕೆಂದರೆ ಇವರೆಲ್ಲ ಇಲ್ಲದಿದ್ದರೆ ಇದನ್ನು ಬರೆಯಲು ನಾನೂ ಇರತ್ತಿರಲಿಲ್ಲ.
ಏನೇ ಆದರೂ ನಮ್ಮ ತಂದೆ ಅನಾಥ ಮಗುವಾಗಿದ್ದಾಗ ಎತ್ತಿ ಒಯ್ದು ನಮ್ಮ ಅಜ್ಜಿಗೆ ಸಾಕಲು ಕೊಟ್ಟ ಕ್ಷೌರಿಕ ನಲ್ಲಪ್ಪನವರೂ ನನ್ನ ಅಜ್ಜನಂತೆ ಹಾಗಾಗಿ ಕ್ಷೌರಿಕರಿಗೂ ನನ್ನ ಸಂಬಂದ ಉಂಟಲ್ಲವೇ? ನನ್ನ ತಂದೆಯ ಹುಟ್ಟು - ಜೀವನ ಅನೇಕ ಜಾತಿ ಸಂಬಂದಗಳ ಆ ಕಾಲದ ಕಷ್ಟದ ಕಥೆ.
ಹುಟ್ಟು ಅಕಸ್ಮಿಕ - ಸಾವು ನಿಶ್ಚಿತ ಎಂಬ ಗಾದೆ ಮಾತ್ರ ಸರ್ವಕಾಲಿಕ ಸತ್ಯ.
ಮೈಸೂರು ಸರ್ಕಾರದ ಅಕ್ಕಿ ಅಳತೆಯ ಸೇರು ಈಗಲೂ ನಾನು ಕಾಪಿಟ್ಟುಕೊಂಡಿದ್ದೇನೆ, ನಮ್ಮ ತಂದೆ ಹುಟ್ಟುವ ಎರೆಡು ವರ್ಷದ ಮೊದಲಿನದ್ದು.
Comments
Post a Comment