ಎತ್ತಿನಗಾಡಿ ಯಾತ್ರೆ ಮೂಲಕ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಮಾಹಿತಿ ಹಕ್ಕು ಮುಖಾಂತರ ದಾಖಲೆ ಪಡೆಯುವ ಮತ್ತು ಭ್ರಷ್ಟಾಚಾರಗಳನ್ನು ಲೋಕಾಯುಕ್ತಕ್ಕೆ ದೂರು ನೀಡುವ ತರಬೇತಿಯ ಜನಜಾಗೃತಿ ಯಾತ್ರೆ
#ಎತ್ತಿನ_ಗಾಡಿ_ಯಾತ್ರೆ.
ಸಾಗರ ತಾಲ್ಲೂಕಿನಾದ್ಯಂತ 13 ದಿನಗಳ ಪಾದಯಾತ್ರೆ (ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ತುಮುರಿ ಸೇತುವೆ, ಜೋಗ್ ಜಲಪಾತ ಅಭಿವೃದ್ದಿ ಮತ್ತು ಶಿವಮೊಗ್ಗದಿಂದ ತಾಳಗುಪ್ಪ ವರೆಗೆ ಬ್ರಾಡ್ ಗೇಜ್ ರೈಲಿಗಾಗಿ) ನಡೆಸಿ ಹತ್ತು ವರ್ಷ ಆಗುವಾಗ ಇನ್ನೊಮ್ಮೆ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ನಡೆಸಿದ್ದು ಒಂದು ಅದ್ಬುತ ಅನುಭವ ನನ್ನದು.
ಕಾಗೋಡು ಹೋರಾಟದ ನೇತಾರರಾದ ಹೆಚ್.ಗಣಪತಿಯಪ್ಪರ ಆದೇಶದಂತೆ ಈ ಎತ್ತಿನಗಾಡಿ ಯಾತ್ರೆ ಆದರೂ ಅವರಿಗೆ ವಯೋ ಸಹಜ ಅನಾರೋಗ್ಯದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.
ಆದರೆ ಅವರ ಒಂದು ಕಂಡೀಷನ್ ಪಾಲಿಸಲೇ ಬೇಕಾಗಿತ್ತು ಅದೇನೆಂದರೆ ನಮ್ಮ ಗಾಡಿ ಯಾತ್ರೆಯಲ್ಲಿ ಯಾರೂ ಗಾದಿ ಇತ್ಯಾದಿ ಸುಖಾಸಿನ ಹಾಕುವಂತಿಲ್ಲ ಕೇವಲ ಚಾಪೆ ಅಥವ ಕಂಬಳಿ ಹಾಸಿ ಕುಳಿತುಕೊಳ್ಳಲು ಮಾತ್ರ ಅನುಮತಿ.
ಅದರಂತೆ ನಮ್ಮ ಎತ್ತಿನ ಗಾಡಿ ಯಾತ್ರೆ ಆರು ದಿನಗಳಲ್ಲಿ ಸುಮಾರು 320 ಕಿ.ಮಿ. ಸಾಗರ ತಾಲ್ಲೂಕಿನ ಆಚಾಪುರ ಗ್ರಾ.ಪಂ.ನ ಮುರುಘಾ ಮಠದಿಂದ ಪ್ರಾರಂಭ ಆಗಿ ಯಡೇಹಳ್ಳಿ, ಆನಂದಪುರ೦, ಗೌತಮಪುರ, ತ್ಯಾಗತಿ೯ ಮತ್ತು ಹಿರೇಬಿಲಗುಂಜಿ ಗ್ರಾಮ ಪಂಚಾಯತ್ ಹಾದು ವೀರಾಪುರ ಮಠದಲ್ಲಿ ತಂಗುವುದು.
ಎರಡನೇ ದಿನ ಅಡ್ಡೇರಿ ಮಾರ್ಗವಾಗಿ ಕಾಸ್ಪಾಡಿ, ಉಳ್ಳೂರು, ಸಾಗರ, ಯಡಜಿಗಳೆ ಮನೆ ಮೂಲಕ ವರದಳ್ಳಿ ಶ್ರೀಧರಾಶ್ರಮದಲ್ಲಿ ತಂಗುವುದು.
ಮೂರನೇ ದಿನ ಆವಿನಳ್ಳಿ ಮಾಗ೯ವಾಗಿ ಸಿಗಂದೂರು ದೇವಾಲಯದಲ್ಲಿ ತಂಗುವುದು.
ನಾಲ್ಕನೇ ದಿನ ತುಮರಿ, ಬ್ಯಾಕೋಡು ಮಾರ್ಗವಾಗಿ ನಿಟ್ಟೂರು ಮೂಲಕ ವಳಗೆರೆ ರಾಮಕೃಷ್ಣಾಶ್ರಮದ ಶಾಲೆಯಲ್ಲಿ ತಂಗುವುದಾಗಿತ್ತು ಆದರೆ ನಿಟ್ಟೂರಿನಿಂದ ವಳಗೆರೆ ರಸ್ತೆ ಎತ್ತಿನ ಗಾಡಿ ಯಾತ್ರೆಯಲ್ಲಿ ಸಾಗಲು ತುಂಬಾ ಕಷ್ಟಸಾಧ್ಯವಾದ್ದರಿಂದ ನಿಟ್ಟೂರು ಸಕಾ೯ರಿ ಶಾಲಾ ಅವರಣದಲ್ಲಿ ತಂಗಿದ್ದೆವು.
ಐದನೇ ದಿನ ಬಿದನೂರು ನಗರ, ಕಾರಣಗಿರಿ ಮಾರ್ಗವಾಗಿ ರಾಮಚಂದ್ರಪುರ ಮಠದಲ್ಲಿ ವಾಸ್ತವ್ಯ.
ಆರನೇ ದಿನ ಹೊಸನಗರ, ಕೊಡೂರು ಮಾರ್ಗವಾಗಿ ರಿಪ್ಪನ್ ಪೇಟೆ ವೃತ್ತದಲ್ಲಿ ಸಮಾರೋಪ ಸಮಾರಂಭದೊಂದಿಗೆ ಈ ಯಾತ್ರೆ ಮುಕ್ತಾಯಗೊಳಿಸಲಾಯಿತು.
ಈ ಎತ್ತಿನಗಾಡಿ ಯಾತ್ರೆಯಲ್ಲಿ ಭಾಗವಹಿಸಿದ ಗೆಳೆಯರು, ಸಹಕಾರ ನೀಡಿ ಸಹಕರಿಸಿದ ಸಮಾನ ಮನಸ್ಕರು, ಪ್ರತಿ ತಂಗುವ ಪ್ರದೇಶದಲ್ಲಿ ನಮಗೆಲ್ಲ ನೀರು, ನೆಲ, ಊಟ ಮತ್ತು ಎತ್ತುಗಳಿಗೆ ಹುಲ್ಲು ಇತ್ಯಾದಿ ವ್ಯವಸ್ಥೆಗೊಳಿಸಿದವರು, ಸಭೆ ನಡೆಸಲು ಸಹಾಯ ಮಾಡಿದವರು ಹೀಗೇ ನೂರಾರು ಜನರ ಶ್ರಮ ಈ ಯಾತ್ರೆಗೆ ದೊರೆತಿದ್ದರಿಂದ ಈ ವಿಶಿಷ್ಟ ಎತ್ತಿನ ಗಾಡಿ ಯಾತ್ರೆ ಯಶಸ್ವಿ ಆಯಿತು.
ಎತ್ತುಗಳಿಗೆ ಮಾಗ೯ ಮದ್ಯದಲ್ಲಿ ಕಾಲಿನ ಹಲ್ಲೆ ಸರಿಪಡಿಸಲು ಕೇಶವಪುರದ ಹಲ್ಲೆ ಕಟ್ಟುವ ಸಾಹೇಬರ ತಂಡ, ಎತ್ತುಗಳಿಗೆ ಹಿಂಡಿ ಹುಲ್ಲು ಸರಬರಾಜು ಮಾಡುವ , ಯಾತ್ರೆಯ ನಮಗೆಲ್ಲ ಊಟ ಉಪಚಾರ ವ್ಯವಸ್ಥೆ ಮಾಡುವ ಮತ್ತು ಸಭೆ ಸಮಾರಂಭ ವ್ಯವಸ್ಥೆ ಮಾಡುವ ಪ್ರತ್ಯೇಕ ಗೆಳೆಯರ ತಂಡಗಳು ವ್ಯವಸ್ಥಿತವಾಗಿ ಕಾಯ೯ನಿವ೯ಹಿಸಿದ್ದು ಕೂಡ ಸ್ಮರಿಸಲೇ ಬೇಕು.
ಎತ್ತಿನ ಗಾಡಿಯನ್ನೇ ನೋಡದ (ಈಗ ಎತ್ತಿನಗಾಡಿ ಮಲೆನಾಡಿನಿಂದ ಕಣ್ಮರೆ ಆಗಿದೆ.) ಹೊಸ ಜನಾಂಗದ ಮಕ್ಕಳು, ಬಹಳ ವರ್ಷದ ಹಿಂದೆ ಎತ್ತಿನಗಾಡಿ ನೋಡಿದ ವಯಸ್ಕರೆಲ್ಲ ರಸ್ತೆ ಮಾರ್ಗದಲ್ಲಿ ಸಾಗುವ ನಮ್ಮ ಎತ್ತಿನಗಾಡಿ ಯಾತ್ರೆ ನೋಡಲು ಗುಂಪಾಗಿ ಸೇರುತ್ತಿದ್ದರು.
ನಿಮ್ಮ ಗ್ರಾಮ ಅಭಿವೃದ್ದಿಗಾಗಿ ಮಾಹಿತಿ ಹಕ್ಕು ಯೋಜನೆ ಬಳಸಿಕೊಳ್ಳುವ ಬಗ್ಗೆ, ಅವ್ಯವಹಾರಗಳನ್ನು ಲೋಕಾಯುಕ್ತ ಮೂಲಕ ತನಿಖೆಗೊಳಪಡಿಸುವ ಮಾಹಿತಿಯನ್ನ ಜನರಿಗೆ ಕರಪತ್ರ ಮತ್ತು ಸಭೆಗಳ ಮೂಲಕ ಜನ ಜಾಗೃತಿ ಮಾಡುವ ಈ ಕಾಯ೯ಕ್ರಮಕ್ಕೆ ಪಕ್ಷಾತೀತವಾಗಿ ಮುಖಂಡರು ಬೆಂಬಲ ನೀಡಿದ್ದರು.
ಆರು ದಿನ ಸತತವಾಗಿ ಎತ್ತಿನಗಾಡಿಯಲ್ಲಿ ಕಂಬಳಿ ಮೇಲೆ ಕುಳಿತು ಎರೆಡು ತಾಲ್ಲೂಕ್ ಯಾತ್ರೆ ಮೂಲಕ ಜನ ಜಾಗೃತಿ ಕಾಯ೯ಕ್ರಮ ಮಾಡಿದ ನೆನಪು ಈ ವರೆಗೆ ಬರೆಯಲು ಮರೆತು ಬಿಟ್ಟಿದ್ದೆ.
ಈ ಯಾತ್ರೆಯ ಪೋಟೋಗಳು ಹುಡುಕಬೇಕು ಇನ್ನೂ ಸಿಕ್ಕಿಲ್ಲ.
ಈ ಯಾತ್ರೆಯ ನಂತರ ಗ್ರಾಮಗಳಲ್ಲಿ ಮಾಹಿತಿ ಹಕ್ಕು ಮೂಲಕ ದಾಖಲೆ ಪಡೆಯುವ, ಅವ್ಯವಹಾರಗಳ ದೂರು ಲೋಕಾಯುಕ್ತಕ್ಕೆ ಸಲ್ಲಿಸುವ ಪ್ರಕ್ರಿಯೆ ಹೆಚ್ಚು ಆಯಿತು ಮತ್ತು ಇದನ್ನು ತಡೆಯಲು ಸ್ಥಳಿಯ ಗುತ್ತಿಗೆದಾರರು, ಜನಪ್ರತಿನಿದಿಗಳು ದೂರು ನೀಡಿದವರ ಮೇಲೆ ಹಲ್ಲೆ ಮಾಡುವುದು ಹೆಚ್ಚಾದ್ದರಿಂದ ನನಗೂ ಭ್ರಮನಿರಸನ ಪ್ರಾರಂಭ ಆಯಿತು ಅದು ಜನಪರ ಹೋರಾಟ, ಸಭೆ ಸಮಾರಂಭಗಳಿಂದ ದೂರವಾಗಿ ರಾಜಕೀಯವಾಗಿ ನಿವೃತ್ತನಾಗಲು ಕಾರಣವೂ ಆಯಿತು.
Comments
Post a Comment