#ಮಸಾಲ_ಚಾಯ್_ವ್ಲೋಗ್_ಕಳಸದ_ಕುಲುಮೆ
#ನಮ್ಮ_ನೆರೆಮನೆಯ_ರಾಮಾಚಾರರ_ಕುಲುಮೆ.
ಹಳ್ಳಿಯ ಕುಲುಮೆ ಅಂದರೆ ಆ ಕಾಲದ ಹಳ್ಳಿಯ ಕಾರ್ಖಾನೆ ಈಗ ನೆನಪು ಮಾತ್ರ.
ನಮ್ಮ ಮನೆ ಪಕ್ಕದಲ್ಲೇ ರಾಮಾಚಾರರ ಕುಲುಮೆ ಅವರಿಗೆ ನಮ್ಮ ಊರಿನ ಶ್ರೀಮ೦ತ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರ್ (ಮ೦ತ್ರಿ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ತ೦ದೆ ) ಅವರ 5-6 ಸಾವಿರ ಕೃಷಿ ಭೂಮಿಗೆ ಇಂತಹ ಒ0ದೆರೆಡು ಕುಲುಮೆ ಇರಲೇ ಬೇಕಾಗಿತ್ತು, ಆದ್ದರಿಂದ ನಮ್ಮೂರ ಕುಲುಮೆಗೆ ಒಂದು ರೀತಿ ರಾಜಾಶ್ರಯ ಇತ್ತು.
ನಮ್ಮಲ್ಲಿ ಬೆರಣಿ ಬಳಕೆ ಇರಲಿಲ್ಲ, ವಿಶೇಷ ಹದ ನೀಡಲು ಪ್ರತಿ ದಿನ ಹುತ್ತದ ಮಣ್ಣು ತರುತ್ತಿದ್ದರು ಜೊತೆಗೆ ಕತ್ರಿ ಹಿಡಿಗೆ ಹಾಕುವ ಮರ, ಬೆಳಿಗ್ಗೆ ಕುಲುಮೆ ಸ್ಟಚ್ಚಾ ಮಾಡುವುದು ಬೂದಿ ತೆಗೆಯುವುದು ಕಿಟ್ಟ ತೆಗೆಯುವುದು ನಂತರ ಪೂಜೆ ಆಮೇಲೆ ಇದ್ದಿಲು ಹಾಕಿ ಮನೆಯಿ೦ದ ಒಲೆಯ ನಿಗಿ ನಿಗಿ ಕೆಂಡ ತಂದು ಅಗ್ನಿ ಯಜ್ಞ ಪ್ರಾರಂಭ ಆದರೆ ಸೂಯ೯ ಮುಳುಗುವ ತನಕ ನಿರಂತರ ತಿದಿ ಒತ್ತುತ್ತಾ ಇರುತ್ತಿದ್ದರು.
ಶಾಲೆಯಿ೦ದ ಬಂದ ನಂತರ ನಾವೆಲ್ಲ ತಿದಿ ಎಳೆಯಲು ಅವರ ಮಕ್ಕಳ ಜೊತೆ ಪೈಪೋಟಿ, ಆಗೆಲ್ಲ ಕುಲುಮೆ ಎಂದರೆ ಹಳ್ಳಿಯ ಏಕೈಕ ಕಾಖಾ೯ನೆ.
ಆಗೆಲ್ಲ ಕೃಷಿಕರ ಏಕೈಕ ಸಾಗಾಣಿಕೆ ವಾಹನ ಎತ್ತಿನಗಾಡಿ ಅದನ್ನು ಸುಗ್ಗಿ ಆಗುತ್ತಲೇ ದುರಸ್ತಿ ಆಗಲೇ ಬೇಕು ಏಕೆಂದರೆ ಬಿಸಿಗೆಯಲ್ಲೇ, ಉರವಲು ಕಟ್ಟಿಗೆ, ಬೇಲಿಗೂಟ, ಬೇಲಿಗೆ ಮುಳ್ಳು, ಗದ್ದೆಗೆ ಸಗಣಿ ಗೊಬ್ಬರ ಮತ್ತು ಕಾಡು ಮಣ್ಣು ಹೊಡೆಯಲು ಸಜ್ಜು ಮಾಡಬೇಕು ಹಾಗಾಗಿ ಕುಲುಮೆಯಲ್ಲಿ ನೂರಾರು ಗಾಡಿ ದುರಸ್ತಿಗೆ ಬರುತ್ತಿತ್ತು ಆ ಕಾಲದಲ್ಲಿ ಅವರ ಮನೆ ಹಿಂಬಾಗದ ಕೆರೆ ಹತ್ತಿರ ಗಾಡಿ ಚಕ್ರದ ಕುಂಬ ಮುಳುಗಿಸಿಡುವಂತ ಅನೇಕ ಗುಂಡಿಗಳು ಮಾಡುತ್ತಿದ್ದರು ಅಲ್ಲೇ ಸಮೀಪದಲ್ಲಿ ಬೆಳಿಗ್ಗೆ ಸಂಜೆ ಗಾಡಿ ಚಕ್ರದ ಹಳಿಗಳನ್ನು ಸುತ್ತಲು ಇದ್ದಿಲು ಬತ್ತದ ಹೊಟ್ಟು ಹುಲ್ಲು ಮತ್ತು ಸ್ವಲ್ಪ ಬಿದಿರು ಚಕ್ಕೆ ಇತ್ಯಾದಿಯಿಂದ ಕೆಂಪಾಗಿಸಿ ಅದನ್ನು ನಾಲ್ಕು ಜನ ಇಕ್ಕಳದಲ್ಲಿ ಒಯ್ದು ಮರದ ಚಕ್ರಕ್ಕೆ ಅಳವಡಿಸಿ ಅದಕ್ಕೆ ನೀರು ಹಾಕಿ ತಣ್ಣಗೆ ಮಾಡುತ್ತಿದ್ದನ್ನು ನಾವೆಲ್ಲ ನೋಡುತ್ತಾ ಕುಳಿತಿರುವುದೆಲ್ಲ ಈಗ ನೆನಪು.
#ರಹಮತ್_ತರೀಕೆರೆ_ಲೇಖನ
ನೆನಹು: ಕುಲುಮೆಯೆಂಬ ಕಮ್ಮಟ
ನಮ್ಮ ಕುಟುಂಬದ ಪಾಲಿಗೆ ಕುಲುಮೆಯೂ ಬೇಸಾಯವೂ ಜೋಡೆತ್ತುಗಳಂತೆ. ಹಳ್ಳಿಯಲ್ಲಿದ್ದ ಜಮೀನಿನ ಹುಟ್ಟುವಳಿ ಸಾಲದೇ ಹೋದಾಗ ಪಟ್ಟಣದಲ್ಲಿದ್ದ ಕುಲುಮೆ ಕೈಹಿಡಿಯುತ್ತಿತ್ತು. ಕುಲುಮೆ ಕೈಕೊಟ್ಟ ದಿನಗಳಲ್ಲಿ ಹೊಲದ ಕಾಳುಕಡಿ ಪೊರೆಯುತ್ತಿದ್ದವು. ಸಾಮಾನ್ಯವಾಗಿ ಬೇಸಗೆಯಲ್ಲಿ ಧಗಧಗಿಸುತ್ತಿದ್ದ ಕುಲುಮೆ, ಜಿರ‍್ರೋ ಮಳೆಹಿಡಿದ ಕಾಲದಲ್ಲಿ ನೆಂದಬಟ್ಟೆಯಂತೆ ಅಳುಮುಂಜಿಯಾಗಿ ಬಿದ್ದಿರುತ್ತಿತ್ತು. ಆಷಾಢ ಮಾಸದಲ್ಲಿ ಕುಟುಂಬ ತಂತಿ ಮೇಲಿನ ನಡಿಗೆ ಮಾಡುತ್ತಿತ್ತು. ಕುಲುಮೆಯ ತೆಂಗಿನಗರಿ ಮಾಡಿನೊಳಗಿಂದ ಹೊಗೆ ಹೊಮ್ಮಿದರೆ, ಮನೆಯೊಳಗಿನ ಒಲೆ ಉರಿಯುತ್ತಿತ್ತು. ಧೂಮಾಗ್ನಿ ನ್ಯಾಯ.
ಅಪ್ಪ ತರೀಕೆರೆ ಸೀಮೆಯ ಹಳ್ಳಿಗಳಲ್ಲಿ ಕುಲುಮೆ ದಸ್ತಣ್ಣನೆಂದು ಹೆಸರಾಗಿದ್ದನು. ಕುಟುಂಬದ ಸದಸ್ಯರೆಲ್ಲ ಕುಲುಮೆಯ ಸ್ವರವ್ಯಂಜನಗಳಾದ ಬೂಸಾ-ಇದ್ದಿಲು- ಬೆರಣಿಗಳನ್ನು ಅಡಕುವ ಕೆಲಸ ಹಂಚಿಕೊಂಡು ಮಾಡುತ್ತಿದ್ದೆವು. ಸಂಗೀತಗಾರರಿಗೆ ಪೇಟಿ ತಬಲ ತಂಬೂರಿ ತಾಳಗಳಂತೆ ನಮಗೆ ಚಿಮಟ ಸುತ್ತಿಗೆ ಚಮ್ಮಟಿಗೆ ಅಡಿಗಲ್ಲು ತಿದಿ ಚಾಣ ರಾವುಗೋಲು. ಬಡಕಲಾಗಿದ್ದ ನನ್ನನ್ನು ಸಾಮಾನ್ಯವಾಗಿ ತಿದಿಯೆಳೆತಕ್ಕೆ ನೇಮಕ ಮಾಡಲಾಗುತ್ತಿತ್ತು. ತಿದಿಯೊಂದು ವಿಚಿತ್ರ ಪ್ರಾಣಿ. ಅದರ ಹಿಂಭಾಗ ಮುದುಕರ ಬೊಚ್ಚುಬಾಯಂತಿದ್ದು ಮೂತಿ ಕಿರಿದಾಗುತ್ತ ಬಂದು, ದಡದ ಮೇಲೆ ನೆಗೆಯಲು ಸಿದ್ಧವಾದ ಕಪ್ಪೆಯಂತೆ ತೋರುತಿತ್ತು. ಎಮ್ಮೆ ತೊಗಲಿನಿಂದ ತಯಾರು ಮಾಡಲಾಗುತ್ತಿದ್ದ ಅದರ ಮೈಕೈಗೆ ಕಾಲಕಾಲಕ್ಕೆ ಹರಳೆಣ್ಣೆಯ ಮಸಾಜು ಸಲ್ಲಿಕೆಯಾಗುತ್ತಿತ್ತು. ಅದರ ಹಿಂಭಾಗದ ಕೊಂಡಿಗೆ ಲಗತ್ತಾಗುವಂತೆ ಕಟ್ಟಿದ ಗಳುವನ್ನು ಅದರ ಇನ್ನೊಂದು ಭಾಗಕ್ಕೆ ಕಟ್ಟಿದ ಹಗ್ಗದಿಂದ ಜಗ್ಗಿದಾಗ ಮೂತಿಯಿಂದ ಭರ‍್ರನೆ ಗಾಳಿ ಹೊಮ್ಮುತ್ತಿತ್ತು. ಜಗ್ಗಿದ ಹಗ್ಗ ಬಿಟ್ಟರೆ ಸ್‌ಸ್‌ಸ್ ಎಂದು ಉಸಿರನ್ನು ಒಳಗೆಳೆದುಕೊಳ್ಳುತ್ತಿತ್ತು- ಲಯಬದ್ಧವಾಗಿ ಕುಂಭಕ ರೇಚಕ ಮಾಡುವ ಯೋಗಿಯಂತೆ. ತಿದಿ ಎಳೆವವರ ಗಮನವೆಲ್ಲ ಒಲೆಯತ್ತಲೇ ಇರಬೇಕು. ನಿಧಾನ ಜಗ್ಗಿದರೆ ಕಬ್ಬಿಣ ಕಾಯುತ್ತಿರಲಿಲ್ಲ. ಜೋರಾಗಿ ಜಗ್ಗಿದರೆ ಅತಿಶಾಖದಿಂದ ಲೋಹ ಕರಗಿಹೋಗುತ್ತಿತ್ತು. ತಿದಿಯೆಳೆತದ ಲಯವನ್ನು ತಪ್ಪಿಸಿದರೆ ಅಡಿಗಲ್ಲ ಎದುರು ಕೂತ ಅಪ್ಪ ಕಣ್ಣುಕೆಕ್ಕರಿಸಿ `ಏಯ್! ಎತ್ತಲಾಗೈತಿ ಗ್ಯಾನ’ ಎನ್ನುತ್ತಿದ್ದನು. ಅಡಿಗಲ್ಲ ಮುಂದೆ ಕೂತ ಕೆಲಸಗಾರ ಸೇನಾ ದಂಡನಾಯಕನಂತೆ. ಎಲ್ಲವೂ ಆತನ ಹುಕುಮಿನನುಸಾರ. ಆತನಿಗೆ ಇತರೆ ಕೆಲಸಗಾರರಿಗಿಂತ ಮರ್ಯಾದೆಯೂ ವೇತನವೂ ಹೆಚ್ಚು.
ಕೊಳೆಯಾದ ಅಂಗಿ ಸಿಕ್ಕಿಸಿಕೊಂಡು ಕೈಲಿ ಹತ್ಯಾರ ಹಿಡಿದ, ಮೆಕ್ಯಾನಿಕ್ ಬಡಗಿ ಕ್ಷೌರಿಕ ಚಮ್ಮಾರ ಟೈಲರ್ ಕಮ್ಮಾರ ಚಿನಿವಾರ ಮೊದಲುಗೊಂಡು ಕಸುಬುದಾರರಿಗೆ ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನವೇನಿಲ್ಲ. ಆದರೆ ತಮ್ಮ ಕೈವಶವಾಗಿರುವ ವಿದ್ಯೆಯಿಂದ ಕೆಲಸದ ಹೊತ್ತಲ್ಲಿ ಇನ್ನಿಲ್ಲದ ಮರ್ಯಾದೆ ಪಡೆಯಬಲ್ಲರು. ನಮ್ಮ ಕುಲುಮೆಗೆ ಬರುತ್ತಿದ್ದ ಪಟೇಲರೂ ಜಮೀನ್ದಾರರೂ ನಮ್ರವಾಗಿ ಕೂತು ಕಾದು ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಅಧಿಕಪ್ರಸಂಗ ಮಾಡಿದರೆ, ಅಪ್ಪ ರಸಗಾವಿಗೆ ಬಂದ ಕಬ್ಬಿಣವನ್ನು ಚಕ್ಕನೆ ಅಡಿಗಲ್ಲ ಮೇಲಿಟ್ಟು ಮುನ್ಸೂಚನೆ ಕೊಡದೆ ಸುತ್ತಿಗೆಯಿಂದ ಪಟಪಟ ಚಚ್ಚುತ್ತಿದ್ದನು. ಕಿಡಿಗಳು ಸಿಡಿದು ಶುಭ್ರವಾದ ಅಂಗಿಪಂಚೆಯ ಮೇಲೆ ಬೀಳಲು, ಗಿರಾಕಿಗಳು ತಡಬಡಾಯಿಸಿ ಹೊಹೊ ಎಂದು ಅರಚುತ್ತ ಹೊರಗೋಡುತ್ತಿದ್ದರು. ಅಪ್ಪ ಚೇಷ್ಟೆನಗುವನ್ನು ತುಟಿಯಲ್ಲೇ ಬೀರುತ್ತಿದ್ದನು.
ಕುಲುಮೆಗೆ ತನ್ನದೇ ಆದ ವಿಶಿಷ್ಟ ಭಾಷೆಯಿತ್ತು. ಅಡಿಗಲ್ಲ ಮೇಲೆ ಸುತ್ತಿಗೆಯಿಂದ ಎರಡು ಸಲ ಬಡಿದರೆ ಮೂತ್ರಕ್ಕೂ ಟೀಗೊ ಹೋಗಿರುವ ಚಮ್ಮಟಿಗೆ ಬಡಿಯುವವರು `ಕಾವು ಬಂದಿದೆ ಕೂಡಲೇ ಬರತಕ್ಕದ್ದು’ ಎಂದು ತಿಳಿಯಬೇಕು. ಲಾಂಗ್ ಬೆಲ್ಲಾದರೆ ಚಹ ಅಥವಾ ಊಟ ತರಬೇಕೆಂದು ಮನೆಗೆ ಸಂದೇಶ. ಎರಡು ಸಲ ಲಾಂಗ್‌ಬೆಲ್ ಕೇಳಿದರೆ, ಜಟಿಲವಾದ ಸಮಸ್ಯೆ ಸೃಷ್ಟಿಯಾಗಿದೆ ಎಂದರ್ಥ. ಮಧ್ಯಾಹ್ನದ ಊಟ ಮುಗಿಸಿ ಸಣ್ಣದೊಂದು ನಿದ್ದೆ ತೆಗೆಯುತ್ತಿದ್ದ ಅಪ್ಪ, ಡಬಲ್ ಲಾಂಗ್‌ಬೆಲ್ ಆದಾಗ `ಕ್ಯಾಕಿ ಎಡವಟ್ ಹುವಾ ರೇ’ ಎಂದು ಎದ್ದು ಓಡುತ್ತಿದ್ದನು.
ಮುಂಗಾರು ಬಿದ್ದ ಮೊದಲ ದಿನಗಳಲ್ಲಿ ಕುಡ ಕುಳಗಳನ್ನು ಹಣಿಸಲು ರೈತರು ಮುಗಿ ಬೀಳುತ್ತಿದ್ದರು. ಮಳೆಗಾಲದಲ್ಲಿ ಶೀತಕ್ಕೆ ಕುಗ್ಗಿ ಚಕ್ರಕ್ಕೆ ಬಿಗಿಯಾಗಿ ಕೂರುತ್ತಿದ್ದ ಹಳಿ, ಬೇಸಗೆಯಲ್ಲಿ ಹಿಗ್ಗಿ ಅಳ್ಳಕವಾಗುತ್ತಿತ್ತು. ಅದನ್ನು ಚಕ್ರದಿಂದ ಕಳಚಿ ತುಸು ಚಿಕ್ಕಮಾಡಿ ಮತ್ತೆ ಚಕ್ರಕ್ಕೆ ಜೋಡಿಸಬೇಕು. ಇದುವೇ ಹಳಿಕಟ್ಟುವ ಕೆಲಸ. ಕುಡುಗೋಲು ಮಚ್ಚು ಕೊಡಲಿಗಳನ್ನು ಅಪ್ಪನೊಬ್ಬನೇ ಸುತ್ತಿಗೆಯಿಂದ ಹಣಿಯುತ್ತಿದ್ದನು. ಆದರೆ ಹಳಿಕಟ್ಟಲು ಅಥವಾ ಗಾಡಿ ಅಚ್ಚನ್ನು ಮಾಡಲು ತಂಡ ಬೇಕಿತ್ತು. ಹಳಿಕಟ್ಟೋಣವು ಒಂದು ಕೋಲಾಹಲದ ಕಾರ್ಯಕ್ರಮ. ಹಳಿಗಳನ್ನು ನೆಲದ ಮೇಲೆ ಮಲಗಿಸಿ ಅವುಗಳ ಮೇಲೆ ಚಿತೆಯ ಮೇಲಿನ ಶವದ ಮೇಲೆ ಕಟ್ಟಿಗೆ ಜೋಡಿಸುವಂತೆ ಬೆರಣಿಯನ್ನು ಒಟ್ಟಿ ಕಾಸಲಾಗುತ್ತಿತ್ತು. ಅವು ಕೆಂಪಗೆ ಕಾದು ಹಿಗ್ಗಿದಾಗ ಮರದ ಚಕ್ರಕ್ಕೆ ತೊಡಿಸಿ ನೀರುಹೊಯ್ದು ಕುಗ್ಗಿಸಬೇಕು. ಅಪ್ಪ ಹಳಿಕಟ್ಟುವಾಗ ಬೇಟೆಯಾಡಿದ ಪ್ರಾಣಿಯನ್ನು ತಿನ್ನುವ ಹೊತ್ತಿನ ಹುಲಿಯಂತೆ ವ್ಯಗ್ರವಾಗಿರುತ್ತಿದ್ದನು. ಹೊಸಹಳಿಯನ್ನು ಬಳೆಯಾಕಾರಕ್ಕೆ ಬಗ್ಗಿಸುವಾಗ ಅಖಾಡದಲ್ಲಿ ತೊಡೆ ತಟ್ಟುವ ಕುಸ್ತಿಪಟುವಿನಂತೆ ಮೆರೆಯುತ್ತಿದ್ದನು. ರಸ್ತೆಯಲ್ಲಿ ಒಡಾಡುವ ಜನ ಸರ್ಕಸ್ಸು ನೋಡುವಂತೆ ನಿಂತು ನೋಡುತ್ತಿದ್ದರು.
ಬಾಗಿರುವುದನ್ನು ನೇರಗೊಳಿಸುವ, ನೆಟ್ಟಗಿರುವುದನ್ನು ಬಳೆಯಾಗಿಸುವ, ಮೊಂಡನ್ನು ಹರಿತಗೊಳಿಸುವ, ಬೇಡವಾದ್ದನ್ನು ಕತ್ತರಿಸಿ ತೆಗೆವ, ಶಿಥಿಲವನ್ನು ಬಿಗಿಗೊಳಿಸುವ, ತುಂಡಾದ್ದನ್ನು ಜೋಡಿಸುವ ಕುಲುಮೆ ಕೆಲಸಗಳು, ಸೃಷ್ಟಿಕರ್ತನ ಕಮ್ಮಟದ ಕ್ರಿಯೆಗಳೇ. ಅದರಲ್ಲೂ ಕೊಡಲಿ ಮಚ್ಚುಗಳ ಬಾಯನ್ನು ತೆಳ್ಳಗೆ ಹಣಿದು, ಅರದಲ್ಲಿ ಉಜ್ಜಿ ನೀರುಕುಡಿಸಿ ಹದಹಿಡಿಯುವುದು ಎಂದರೆ ಮಾಸ್ಟರ್ ಪದವಿಯಂತೆ. ರಸಗಾವು ತೆಗೆಯುವುದು ಪಿಎಚ್.ಡಿ., ಮಾಡಿದಂತೆ. ಕಬ್ಬಿಣವನ್ನು ಚಿನ್ನವಾಗಿಸುವ ಕುಶಲತೆಗೆ ರಸವಿದ್ಯೆ ಎನ್ನುವರು. ಅಪ್ಪ ರಸಗಾವು ತೆಗೆವಾಗ ರಸಸಿದ್ಧನಂತೆ ತೋರುತ್ತಿದ್ದನು. ರಸಗಾವೆಂದರೆ, ಎರಡು ಕಬ್ಬಿಣದ ತುಂಡುಗಳನ್ನು ಜೋಡಿಸಿ, ಅವುಗಳ ಮೇಲೆ ಬಳಗಾರ ಮತ್ತು ತಾಮ್ರದ ತುಂಡನ್ನಿಟ್ಟು, ಕಡಿಮೆ ಇದ್ದಿಲುಹಾಕಿ, ಒದ್ದೆಯಾದ ಭತ್ತದಹೊಟ್ಟನ್ನು ಹೆಪ್ಪಿನಂತೆ ಮುಚ್ಚಿ ಶಾಖವು ಒಳಗೇ ಸುಳಿಯಾಡುವಂತೆ ಮಾಡುವುದು. ಲೋಹಗಳು ದ್ರವಿಸಿ ರಸಗಾವು ಬಂದಾಗ ಒಲೆಯೊಳಗಿಂದ ಮತಾಪಿನಂತೆ ನಕ್ಷತ್ರದ ಕಿಡಿಗಳನ್ನು ಹಾರಿಸುತ್ತವೆ. ಆಗ ಎರಡೂ ತುಂಡುಗಳನ್ನು ಇಕ್ಕಳದಲ್ಲಿ ಹುಶಾರಾಗಿ ಹಿಡಿದೆತ್ತಿ ಅಡಿಗಲ್ಲ ಮೇಲಿಟ್ಟು ಪೆಟ್ಟುಹಾಕಿದರೆ, ದ್ವೈತ ಅದ್ವೈತವಾಗುತ್ತಿತ್ತು.
ದನಗಳು ಹಾಕಿದ ಸಗಣಿಯಿಂದಾದ ಬೆರಣಿ, ತನ್ನೊಳಗಿನ ಇಂಧನವನ್ನು ಉರಿಸಿ ಕಟ್ಟಿಗೆಯುಳಿಸಿದ ಇದ್ದಿಲು, ಒಳಗಿನ ಅಕ್ಕಿ ತೆಗೆದುಕೊಂಡು ಬಿಸಾಡಿದ ಹೊಟ್ಟು- ಎಲ್ಲವೂ ಒಂದು ಬಗೆಯಲ್ಲಿ ಉಚ್ಛಿಷ್ಟಗಳು. ಆದರೆ ಇವು ತಿದಿಯ ಗಾಳಿ ಮತ್ತು ಬೆಂಕಿಯ ನೆರವಿನಿಂದ ಉಕ್ಕು ಕಬ್ಬಿಣಗಳ ರಸಸಂಗಕ್ಕೆ ಕಾರಣವಾಗುತ್ತಿದ್ದವು. ಚಾಣದ ಕಡಿತ, ಇಕ್ಕುಳದ ಹಿಡಿತ, ರಾವುಗೋಲಿನ ತಿವಿತ ಹಾಗೂ ಸುತ್ತಿಗೆಯ ಪೆಟ್ಟುಗಳ ಮೂಲಕ, ಕುಡುಗೋಲು-ಕೊಡಲಿ ಕುಡ-ಕುಳಗಳನ್ನು ಸೃಷ್ಟಿಸುತ್ತಿದ್ದವು. ನೆಲವನ್ನುತ್ತಿ ಬಿತ್ತಲು, ಬೆಳೆದ ಹಣ್ಣು ಸೊಪ್ಪು ಧಾನ್ಯ ತರಕಾರಿ ಕೊಯ್ಯಲು ಬೇಕಾದ ಹತ್ಯಾರಗಳಾಗಿ ಬಂದು ಒದಗುತ್ತಿದ್ದವು. ಈ ಫಲವು ಒಲೆಯ ಮೇಲೆ ಬೆಂದು ಅಡುಗೆಯಾಗಿ ಹೊಟ್ಟೆಯನ್ನು ತುಂಬುತ್ತಿತ್ತು. ಹೊಟ್ಟೆಯೊಳಗಿನ ಜೀರ್ಣಾಗ್ನಿಯಲ್ಲಿ ಕರಗಿ ಶಕ್ತಿಯಾಗಿ ರಟ್ಟೆಗೆ ಕಸುವಾಗಿ ಮರಳುತ್ತಿತ್ತು. ಬೆಂಕಿ ಗಾಳಿ ನೀರು ಮಣ್ಣು ಲೋಹ ದೇಹಗಳ ವರ್ತುಲದ ಕೇಂದ್ರದಲ್ಲಿ ಮಾನುಷ ಬದುಕು ಹೊಯ್ದಾಡುತ್ತಿತ್ತು.
ಆದರೆ ಕುಲುಮೆಲೋಕದ ಇದ್ದಿಲು ಬೂಸಾ ಇಕ್ಕುಳ ತಿದಿಗಳನ್ನು ಲೋಕವು ನೇತ್ಯಾತ್ಮಕ ಕುರುಹುಗಳಾಗಿ ಬಳಸುವುದೊಂದು ಸೋಜಿಗ. ಸಾಧಕರು ತಮ್ಮೊಳಗಿನ ಚೈತನ್ಯವನ್ನು ಸಾಧನೆಯ ಮೂಲಕ ಕಂಡುಕೊಳ್ಳದೆ ಯಾಂತ್ರಿಕವಾಗಿ ಶ್ವಾಸೋಚ್ಛ್ವಾಸ ಮಾಡುವುದನ್ನು ಶರಣರು ಯಾಂತ್ರಿಕವಾಗಿ ಉಸಿರಾಡುವ ತಿದಿಗೆ ಹೋಲಿಸುವರು; ಭಕ್ತಿಯಿಲ್ಲದೆ ಕೈಮುಗಿವುದನ್ನು ಇಕ್ಕುಳಕ್ಕೆ ಸಮೀಕರಿಸುವರು; `ಬೂಸಾಸಾಹಿತ್ಯ’ದ ಚರ್ಚೆಯಲ್ಲಿ ಹೊಟ್ಟು ನಿಷ್ಪçಯೋಜಕತೆಯ ಆತ್ಯಂತಿಕ ಪ್ರತೀಕ. ಅಕ್ಕಮಹಾದೇವಿ ಶಾಸ್ತ್ರ ಪುರಾಣಗಳನ್ನು ತೌಡುಕುಟ್ಟುವುದಕ್ಕೆ ಹೋಲಿಸುವಳು. ಲಂಕೇಶರ `ಬಿರುಕು’ ಕಾದಂಬರಿಯ ನಾಯಕನು, ತಾನು ಇಷ್ಟಪಡದ ಹೆಣ್ಣೊಬ್ಬಳಿಗೆ ಇದ್ದಿಲು ಎಂದೇ ಕರೆವನು. ಲೋಕ ನಿಕೃಷ್ಟೀಕರಿಸುವ ಈ ಪರಿಕರಗಳು ಕುಲುಮೆ ಜಗತ್ತಿನಲ್ಲಿ ಅಮೂಲ್ಯ. ಆಕಾರರಹಿತ ಲೋಹವು ಕಾದು ಕರಗಿ, ಕಡಿಸಿ ಬಡಿಸಿಕೊಂಡು ರೂಪಾಂತರಗೊಳ್ಳುವುದು, ಅನುಭವ ಕಲ್ಪನೆ ಚಿಂತನೆಗಳು ಸಂಗಮಿಸಿ ಕಲೆ ಸೃಷ್ಟಿಯಾಗುವುದನ್ನು ಕಾಣಿಸುವ ಮೀಮಾಂಸೆಯಂತಿದೆ. ಸಾಮಾನ್ಯವಾಗಿ ಸಿನಿಮಾ ನೋಡದ ಅಪ್ಪ ರಾಜಕುಮಾರ್ ಅಭಿಮಾನಿಯಾಗಿದ್ದ. ಅವರು ಕಮ್ಮಾರನಾಗಿ ನಟಿಸಿರುವ `ದೂರದಬೆಟ್ಟ’ವನ್ನು ನೋಡಲು ನನ್ನನ್ನು ಕರೆದುಕೊಂಡು ಹೋಗಿದ್ದ. ಅವನ ಪ್ರಕಾರ ಭಾರತಿ ತಿದಿ ಎಳೆಯುವುದು ಸರಿಯಾಗಿತ್ತು. ಆದರೆ `ಪಾಪ, ಇಕ್ಕಳ ಸರಿಯಾಗಿ ಹಿಡ್ಕಳಕ್ಕೆ ಆಗಿಲ್ಲ’ ಎಂದು ರಾಜಕುಮಾರ್ ಪಾತ್ರವನ್ನು ನಪಾಸು ಮಾಡಿದ್ದ. ವಾಸ್ತವ ಮತ್ತು ಕಲೆಗಳ ಬಗ್ಗೆ ಅವನದ್ದೇ ಒಂದು ತತ್ವವಿದ್ದಿರಬೇಕು.
ಸಭಾ ಕಾರ್ಯಕ್ರಮಗಳಲ್ಲಿ ನನ್ನನ್ನು ಪರಿಚಯಿಸುವವರು ಅಥವಾ ಪತ್ರಿಕೆಗಳಲ್ಲಿ ವ್ಯಕ್ತಿಚಿತ್ರ ಬರೆಯುವವರು `ಬೆಂಕಿಬೂದಿಯಲ್ಲಿ ಅರಳಿದ ಹೂವು’ ಎಂದೆಲ್ಲ ಚಿತ್ರಿಸುತ್ತಿದ್ದರು. ಮೊದಮೊದಲು ಕಿರಿಕಿರಿ ಆಗುತ್ತಿತ್ತು. ಈಗಲ್ಲ. ಕುಲುಮೆ ನನ್ನನ್ನು ಎದೆಗಿಟ್ಟು ಹಾಲೂಡಿದ ತಾಯಿ. ಮೈಸೂರಿನ ಹಾಸ್ಟೆಲ್ ವಿಳಾಸಕ್ಕೆ ಅಪ್ಪ ಮಾಡುತ್ತಿದ್ದ ಮನಿಆರ್ಡರ್, ಇದೇ ಬೆಂಕಿ-ಹೊಗೆ-ಬೂದಿಗಳ `ಮಲಿನ’ ಲೋಕದಿಂದ ಬರುತ್ತಿತ್ತು. ಅದಕ್ಕಾಗಿ ಕಾದು, ಬಿಡಿಸಿಕೊಳ್ಳಲು ರುಜು ಹಾಕುವಾಗ ಸಂಭ್ರಮದಿಂದಲೊ ಅಪ್ಪನ ನೆನಪಿನಿಂದಲೊ ಕೈ ಬೆವೆತು ಸಣ್ಣಗೆ ಕಂಪಿಸುತ್ತಿತ್ತು.
(ಆಂದೋಲನ) .
#ಮಸಾಲ_ಚಾಯ್ ಕನ್ನಡದ ಪ್ರಖ್ಯಾತ ವ್ಲಾಗ್ ನೋಡಿ.
https://youtu.be/NKD-U-PdX-U
Comments
Post a Comment