#ಬಿದನೂರು_ನಗರದ_ಸುದೀಂದ್ರ_ಭಂಡಾರಕರ್_ಬರೆದ_ಕಾದಂಬರಿ
#ಸಶೇಷ
#ಕೆಳದಿ_ಇತಿಹಾಸದ_ಆಸಕ್ತರು_ಒದಲೇ_ಬೇಕು
#ಇದರಲ್ಲಿನ_ದಳವಾಯಿ_ಅಕ್ಕಮ್ಮ_ಮಾಸ್ತಿಯಾದ_ಕಥೆ
#ಆಗಿನ_ಕಟ್ಟೆ_ಪಂಚಾಯ್ತಿಯ_ಅಮಾನುಷ_ತೀರ್ಪು
#ಲಿಂಗಾಯಿತ_ಅಕ್ಕಮ್ಮ_ದೀವರ_ಮಂಡಾನಿ_ಯುವಕನ_ವಿವಾಹ_ಮಾಡಿಸುತ್ತಾರೆ
#ಮರುಕ್ಷಣದ_ತೀರ್ಪು_ದೀವರ_ಮಂಡಾನಿ_ಯುವಕನಿಗೆ_ನೇಣು
#ಮರಣದಂಡನೆ_ಜಾರಿ_ಮರುಕ್ಷಣದ_ತೀರ್ಪು_ಅಕ್ಕಮ್ಮನ_ಸಹಗಮನ.
ಸಶೇಷ ಕಾದಂಬರಿಯ ಈ ಪುಟಗಳು ಒಮ್ಮೆ ಓದಿ....
ಶೇಷ...ಹಲವೊಮ್ಮೆ ಇತಿಹಾಸದ ಸಂಗತಿಗಳು , ಧಾರ್ಮಿಕ ನಡಾವಳಿಗೆ , ಇಂದಿನ ಆರೂಢಪ್ರಶ್ನೆ ಮುಂತಾದಕ್ಕೆ ಒಳಗಾಗಿ ಬದಲಾಗಿ ಹೋಗಿದೆ .ಪ್ರಶ್ನೆಗಳ ಉತ್ತರ ಸರಿಯಾಗಿ ಬಂದರೂ ಅದನ್ನು ಅರ್ಥೈಸುವ ಶಕ್ತಿ ಸೋತಿದೆ .
ಇದು ನೋಡು ಅಕ್ಕಮ್ಮನಗುಡಿ .ಪಕ್ಕದಲ್ಲೇ ಅಂದಿನ ಸಾಕ್ಷಿ ಮರಗಳು .ಕೂಗಳತೆಯ ದೂರದ ಶಿವಲಿಂಗನ ಗುಡಿ .ಅಕ್ಕಮ್ಮನ ಗುಡಿಯ ಗಡಿಯಲ್ಲಿ ಮಾಸ್ತಿಕಲ್ಲು .
ಅಕ್ಕಮ್ಮ .... ಹಿಂದೆ ಅಳಿದುಹೋದ ದಳವಾಯಿ ಲಿಂಗಪ್ಪನ ವಂಶದವಳು .
ಇದೇ ಕರಿಂಗೋಳಿ ಹೊಸವೆ ಮಾರ್ಗದ ದೇವರಸಲ್ಲಿಕೆಗುಡ್ಡ , ಸಿಡಿಕುಣಿಭೂತದಗುಡಿ , ಕುಂಟಿಗೆ ...ವಾರಂಬಳ್ಳಿ ಹೋಗುವ ಮಾರ್ಗದ ವರಕೋಡು - ಕೋಟೆಕಾನು ಇದೆ .ಆಚೆ ಕೋಟೆಕಾನು ಹಳ್ಳ .
ಅದಾಗ ಟಿಪ್ಪುವಿನ ಅಂತ್ಯವಾಗಿದೆ .ಮೈಸೂರಿನವರ ಆಡಳಿತ ಇದೆ . ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಠರೋ ಆ ಜಮೀನ್ದಾರನದೇ ಸುಬೇದಾರಿಕೆ . ಆ ಗ್ರಾಮ ಹೇಳಿಕೇಳಿ ಬಲಿಷ್ಠ ದೀವರು - ಶೈವ ದಳವಾಯಿಗಳ ಪ್ರದೇಶ . ಅದುವರೆಗೂ ಅನ್ಯೋನ್ಯವಾಗಿದ್ದರು .
ಇಲ್ಲಿದ್ದರು ದಳವಾಯಿ ವಂಶದ ಸೋದರರು.... ಅಣ್ಣ ಶಿವಪ್ಪ ಗೌಡ ..ತಮ್ಮ ವೀರಭದ್ರಪ್ಪ ಗೌಡ .
ಶಿವಪ್ಪ ಸಾಧು , ಸಾತ್ವಿಕ . ಪತ್ನಿ , ಒಂದು ಗಂಡು , ಒಂದು ಹೆಣ್ಣು ಮಗುವಿನ ಸಂಸಾರ .
ಅದೇ ವೀರಭದ್ರಪ್ಪ ಇದಕ್ಕೆ ತದ್ವಿರುದ್ಧ .ದರ್ಪ , ದೌರ್ಜನ್ಯದ ಅಹಂಕಾರಿ .ಕ್ರೂರಿ , ದುಷ್ಟ .ಇಂತಹ ಕಾಲದಲ್ಲಿ ಶಿವಪ್ಪ ತೀರಿಕೊಳ್ಳುತ್ತಾನೆ .ಆತನ ಸಂಸಾರ ಈ ದುಷ್ಟನ ಅಡಿಯಲ್ಲಿ ಬಾಳಬೇಕಾಗುತ್ತದೆ .ಈತನ ದೌರ್ಜನ್ಯ ಅತ್ತಿಗೆಯ ಸಂಸಾರದ ಮೇಲೆ ಪ್ರಾರಂಭ ಆಗುತ್ತದೆ .ಸಣ್ಣ ಬಾಲಕನಾದ , ಅಣ್ಣನ ಮಗನನ್ನು ಕೋಣ ಮೇಯಿಸಲು ಹಾಕುತ್ತಾನೆ .
ಇದೇ ಆಷಾಡದ ಮಳೆ . ಅಗೆಗದ್ದೆ ಅಂಚಿನಲ್ಲಿ ಬಾಲಕ ಕೋಣ ಮೇಯಿಸುತ್ತಿದ್ದ .ಆಟ ಆಡುವ ವಯಸ್ಸು .ಪಾಪ....ಅದು ಯಾವ ಗಳಿಗೆಯಲ್ಲಿ ಕೋಣಗಳು ಗದ್ದೆ ತಿಂದವೋ !? ಅವನ ಗ್ರಹಚಾರಕ್ಕೆ ವೀರಭದ್ರಪ್ಪನ ಕಣ್ಣಿಗೆ ಬಿತ್ತೋ ?
ಮೊದಲೇ ಕ್ರೂರಿ....ದುಷ್ಟ .ಬಂದವನೇ ಹುಡುಗನ ಕಪಾಳಕ್ಕೆ ಹೊಡೆದೇ ಬಿಟ್ಟ . ಸದ್ದೇ ಮಾಡದೆ ಹುಡುಗ ಕೆಸರಿನ ಗದ್ದೆಗೆ ಉರುಳಿದ .
ಶೇಷ....ಹುಡುಗನ ಉಸಿರೇ ನಿಂತು ಹೋಯಿತು .ಕೆಸರ ಕಂಪದಲ್ಲಿ ಹುಡುಗನ ದೇಹ .ಅತ್ತಿತ್ತ ನೋಡಿದ ಗೌಡ....ಕಾಲೆತ್ತಿ ಅಲ್ಲಿಂದಲ್ಲಿಗೆ ಉಸಿರು ನಿಂತ ಸತ್ತ ಬಾಲಕನ ದೇಹವನ್ನು ಎಡಗಾಲಿನಿಂದ ಮೆಟ್ಟಿ ,ಮೆಟ್ಟಿ ,ಹಾಗೇ ಕೆಸರಿನ ಆಳದಲ್ಲಿ ಅಲ್ಲೆಂದರೆ ಅಲ್ಲೇ , ಬರಿಗಾಲಲ್ಲೇ ಆಳಕ್ಕೆ ಕಳಿಸಿಯೇ ಬಿಟ್ಟ . ಮತ್ತೆ ಅತ್ತಿತ್ತ ನೋಡಿದಾಗ ಹಸಲರ ಒಬ್ಬ ಆಳು ಬಿಟ್ಟ ಕಣ್ಣಿಂದ ಇದನ್ನು ನೋಡಿ ಬಿಟ್ಟಿದ್ದಾನೆ .ಹೆಗಲ ಮೇಲಿನ ಮೀನಿನ ಗಾಣ ಮರೆತೇ ಹೋಗಿದೆ .ಗೌಡ ಅವನನ್ನು ಬೆದರಿಸಿ ,ದಿನವಹಿ ಹೆಂಡದ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಾನೆ .
ದಳವಾಯಿ ಲಿಂಗಪ್ಪನ ಮರಿಮರಿಮಗ ಕೆಸರಿನಲ್ಲೇ ಅಂತ್ಯಕಂಡರೆ ....ಅಕ್ಕಮ್ಮನ ಕಥೆ , ದುರ್ದೇಶೆ ಇಲ್ಲೇ ಪ್ರಾರಂಭವಾಗುತ್ತದೆ ....
ಅಕ್ಕಮ್ಮ ...ಮಾಸ್ತಿಯಾದ ಕತೆ , ಬಿಚ್ಚಿಕೊಳ್ಳುತ್ತದೆ.
ಶೇಷ.....ಸಂಜೆಗೆ ಕೋಣಗಳು ಕೊಟ್ಟಿಗೆಯಲ್ಲಿವೆ , ಆದರೆ ಹುಡುಗನಿಲ್ಲ .ತಾಯಿ ಕೇಳಿದರೆ ಗೌಡ ಏನೂ ಅರಿಯದಂತೆ ಅಜ್ಜಿಮನೆಗೆ ಹೋಗಿರಬೇಕು ಎಂದ !
ಬೆಳಗಾಯಿತು...ಅಜ್ಜಿ ಮನೆಯಲ್ಲೂ ಇಲ್ಲ . ಊರೆಲ್ಲಾ ಹುಡುಕುವ ನಾಟಕ ನಡೆಯಿತು . ಹೆದರಿ ಅಡಗಿದನೇ ಎಂದಾಯಿತು .ಹಸಲರವ ಬಾಯಿ ಮುಚ್ಚಿಕೊಂಡಿದ್ದ .ಸಂಜೆಗೆ ಅವನಿಗೆ ಶೇಂದಿ ಖಾಯಂ ಆಯಿತು .
ಗೌಡ ಹೊಸ ಸುದ್ದಿ ಕಟ್ಟುತ್ತಾನೆ .ಹುಡುಗನನ್ನು ಕಾಡುಕುರಕ ಹೊತ್ತು ಒಯ್ಯಿತು ಎಂದು .ಅದರೂ ಅಕ್ಕಮ್ಮನೆಂಬ ಹನ್ನೊಂದರ ಹುಡುಗಿಯ ಕಟ್ಟಿಕೊಂಡು ತಾಯಿ ಊರೆಲ್ಲಾ ಹುಡುಕುತ್ತಾ ಆ ಹಸಲರ ಮನೆಯ ಹಿಂದೆ ಬರುತ್ತಿರುವಾಗ , ಕುಡಿದ ಮತ್ತಿನ ಆತ ತನ್ನ ಮಗನಿಗೆ ಬೈಯುತ್ತಾ ಇದ್ದಾನೆ !
" ಗೌಡರು , ಹುಡುಗನ್ನ ಕೊಂದ ಹಾಗೆ ನಿನ್ನ ಕೊಲ್ತೀನಿ , ಕಾಣು " !!!
ಅಕ್ಕಮ್ಮನ ತಾಯಿ ದಂಗಾಗುತ್ತಾಳೆ .ಮನೆಗೆ ಬಂದು ಗೌಡರ ಕೇಳಿದರೆ ಆತನದು ಅದೇ ನಾಟಕ .ಹಸಲರವ ಬಾಯಿ ಬಿಡಲ್ಲ . ಜಾತಿಯವರು ನಿಷ್ಠುರವಾಗಲ್ಲ .ಊರೆಲ್ಲ ಕೇಳಿಕೊಂಡರೂ ಒಬ್ಬರೂ ಮುಂದೆ ಬರಲ್ಲ!ಈಗ ಬೇಸಾಯದ ಸಮಯ .ಮುಂದೆ ಈ ವಿಚಾರ ನೋಡೋಣ ಎನ್ನುವ ಉತ್ತರ .
ಈಕೆ ನೇರ ತಲುಪಿದ್ದೇ ಮಂಡಾನಿಯ ದೀವರ ದೊಡ್ಡಮನೆಗೆ . ಯಜಮಾನರು ಇವಳ ಅಹವಾಲು ಕೇಳಿಕೊಂಡು ವಿಚಾರ ಪಡೆದು ಕೆಲಸ ನಿಮಿತ್ತ ಒಳ ಹೋದರೆ , ಅವರ ಮಗ ...ಚಿಗುರುಮೀಸೆಯ ಮಗ...ಕೋವಿ ಸ್ವಚ್ಛ ಮಾಡುತ್ತಾ , ನೇರಾನೇರ ಕೇಳುತ್ತಾನೆ .
" ಆ ಗೌಡನ ಕೊಂದರೆ ಏನು ಕೊಡ್ತೀ ? "
" ನಾನೇನು ಕೊಡಲಿ .ನನ್ನ ಆಸ್ತಿಯೆಂದರೆ ಈ ಒಬ್ಬ ಮಗಳೇ .ಮತ್ತೇನಿದೆ... ಭೂಮಿ, ಆಸ್ತಿ ಎಲ್ಲಾ ಗೌಡರ ಪಾಲಾಗಿದೆ ...ಈ ನನ್ನ ಮಗಳನ್ನೇ ನಿನಗೆ ಧರ್ಮಧಾರೆ ಎರೆಯುವೆ "
" ಸರೀ...ಇದೇ ರಣವೀಳ್ಯ "
ಏನೂ ಅರಿಯದ ಅಕ್ಕಮ್ಮನ ಹೆಸರಲ್ಲಿ ರಣವೀಳ್ಯ ಪಡೆದ ಮಂಡಾಣಿಯ ಯುವಕ ಮುಂದೇನಾಗ ಬಹುದೆಂಬ ಯೋಚನೆ ಮಾಡಲಿಲ್ಲ .
ಅಕ್ಕಮ್ಮನ ತಾಯಿ ಕೂಡ !
ಮರುದಿನ ಗೌಡರ ಐವತ್ತು ಆಳಿನ ನೆಟ್ಟಿ . ಹಾಳಿಯ ಮೇಲೆ ಗೌಡರು ...ಇತ್ತ ಕೋವಿ ಹಿಡಿದ ಮಂಡಾಣಿಕುಡಿ.
" ಗೌಡರೇ...ಇದೆಂತಾ ಕಂಪದಗದ್ದೆ ! ಇಡೀ ಹೆಣಹುಗಿದರೂ ಗೊತ್ತಾಗಲ್ಲ "
ಗೌಡರು ಸಾವರಿಸಿಕೊಂಡು ಕೇಳುತ್ತಾರೆ " ತಮ್ಮ, ಎತ್ತ ಹೊಂಟಿಯೋ ? "
" ಅದೇ...ಇಲ್ಲೆಲ್ಲೋ ಕಾಡುಕುರಕ ಇದೆಯಂತೆ .ನೀವೇ ಹೇಳಿದರಂತೆ ! ಅದ ಶಿಕಾರಿ ಮಾಡಲು ಹೊಂಟೆ " ಎಂದು ಮೀಸೆಯಲ್ಲೇ ನಕ್ಕ .
ಗೌಡರ ಮುಖ ಕಪ್ಪಿಟ್ಟಿತು .ಮಾತು ಮುಂದುವರಿಸಲಿಲ್ಲ .ತಗ್ಗಿಸಿದ ತಲೆ ಮೇಲೆತ್ತುವಷ್ಟರಲ್ಲಿ ಮಂಡಾಣಿಕುಡಿ , ಗೌಡರೆದೆಗೆ ಕೋವಿ ಈಡು ಢಂ ಎನಿಸಿ ಆಗಿತ್ತು .
ಕಂಪದಗದ್ದೆಯ ಕೆಸರು ...ಕೆಂಪಾಯಿತು .ರಣವೀಳ್ಯ ....ಪೂರೈಸಿತು .
ದೀವರ ಹುಡುಗ , ಲಿಂಗಾಯತ ಗೌಡರ ಕೊಲೆ ಮಾಡಿದಯೆಂಬ ವಿಚಾರದಲ್ಲಿ ದೊಡ್ಡ ಗಲಾಟೆ ಆಯಿತು .ಆದರೇನು...ಬೇಸಾಯದ ಸಮಯ . ಕೊಲೆ ಮಾಡಿದ್ದು ಮಂಡಾಣಿ ಹುಡುಗ . ಕಾರ್ತಿಕಮಾಸದಲ್ಲಿ ಈ ಬಗ್ಗೆ ಪಂಚಾಯತಿ ಮಾಡೋಣ ಎಂಬ ತೀರ್ಮಾನ ಆಯಿತು .
ಶೇಷ... ಇಲ್ಲಿ ಗೌಡರ ಸಾವಿಗಿಂತ ಜಾತಿಯ ವಿಷಬೀಜ ಚಿಗುರುತ್ತದೆ .ಇಡೀ ಮೂರು ತಿಂಗಳು ಎರಡೂ ಜಾತಿಗಳ ನಡುವೆ ಚರ್ಚೆ ನಡೆಯುತ್ತದೆ .
ಕಾರ್ತಿಕ ಬಂತು . ದಶಮಿಯ ದಿನ .ಊರಿನ ಶಿವನ ಸನ್ನಿಧಿಯಲ್ಲಿ ಪಂಚಾಯತಿಗೆ ಊರೆಲ್ಲಾ ನೆರೆದಿದೆ .
ಅಕ್ಕಮ್ಮನನ್ನು ಕಂಕುಳಲ್ಲಿ ಹಿಡಿದ ತಾಯಿ , ತಾನು ರಣವೀಳ್ಯ ಕೊಟ್ಟ ವಿಚಾರ , ಗೌಡನು ತನ್ನ ಮಗನಕೊಂದ ವಿಚಾರ ಕಟ್ಟೆಗೆ ತಿಳಿಸಿದಳು .
ಮಂಡಾಣಿಕುಡಿಯೂ ಒಪ್ಪುತ್ತಾನೆ .ಬೇರೆ ದುರುದ್ದೇಶ ಇಲ್ಲದೆ ಹುಡುಗ ಗೌಡರ ಜೀವ ತೆಗೆದ , ಎಂದಿತು ಕಟ್ಟೆ !
ಹುಡುಗಿಯ ಆಮೀಷ ತೋರಿದ್ದರಿಂದ ನಮ್ಮ ಹುಡುಗ ಕೊಲೆ ಮಾಡಿದ ಎಂದಿತು , ದೀವರ ಗುಂಪು
ಸರಿ , ಮಾತಿನಂತೆ ಅಕ್ಕಮ್ಮನ ಜೊತೆ ಹುಡುಗನ ಮದುವೆಯಾಗಲಿ ಎಂದಿತು , ಪಂಚಾಯತಿ !
ಹಾರ , ಅರಶಿನಕೊಂಬು ತಂದು ಕಟ್ಟಿಸಿಯೇ ಬಿಡುತ್ತಾರೆ .ಕಕ್ಕಾಬಿಕ್ಕಿಯಾಗುತ್ತಾಳೆ , ಅಕ್ಕಮ್ಮ!
ಏನೆಂದು ತಿಳಿಯದ ಆಕೆ ಕಣ್ಣೀರಾಗುತ್ತಾಳೆ .ಹನ್ನೊಂದರ ಹುಡುಗಿ ತಾಯಿ ಮಾಡಿದ ವಾಗ್ದಾನಕ್ಕೆ ತುತ್ತಾಗುತ್ತಾಳೆ .
ಶಿವಲಿಂಗದ ಮುಂದಿನ ಬಸವ ತಣ್ಣಗೆ ಕುಳಿತಿದ್ದಾನೆ .ಮುಂದಾಗುವುದೇ ಘೋರ .
ಪಂಚಾಯತಿ ಮತ್ತೊಂದು ತೀರ್ಪು ನೀಡುತ್ತದೆ .
" ಕೊಲೆಗಾರ ಮಂಡಾಣಿಯ ಹುಡುಗನನ್ನು ನೇಣಿಗೆ ಹಾಕುವುದು "
ಸರ್ವರೂ ನೋಡು ನೋಡುತ್ತಲೇ , ಅತ್ತಲಿನ ಮಾವಿನಮರಕ್ಕೆ ಒಯ್ದು ಹುಡುಗನಿಗೆ ನೇಣು ಹಾಕಿಯೇ ಬಿಟ್ಟರು !
ಕುಡಿಮೀಸೆಯ ಯುವಕ , ಹೆಣವಾದ !
ಅಮಾಯಕ ಅಕ್ಕಮ್ಮ , ವಿಧವೆ !
ಸಮೂಹ ಸನ್ನಿ ಇಲ್ಲಿಗೇ ಮುಗಿಯಲಿಲ್ಲ , ಶೇಷ ...ಅಂದು ಹದಿನೇಳರ ಚೆನ್ನಮ್ಮನು ಯಾವುದನ್ನು ವಿರೋಧಿಸಿ , ಸಾವನ್ನು , ಜನರ ಮನವನ್ನೂ ಗೆದ್ದಿದ್ದಳೋ ...ಆ ಸಹಗಮನಕ್ಕೆ ಇಲ್ಲಿ ನಡೆಯಿತು . ತಮ್ಮ ಹುಡುಗ ನೇಣಾದ ಬಗ್ಗೆ ಕನಲಿದ ದೀವರು , ನಿಮ್ಮ ವಿಧವೆ ಹುಡುಗಿ ಸಹಗಮನ ಮಾಡಲಿ ಎಂದು ಲಿಂಗಾಯತರಿಗೆ ಒತ್ತಾಯಿಸಿತು.
ಪತಿ ಮಂಡಾಣಿಯ ದೀವರ ಹುಡುಗನ ಜೊತೆ , ಅಕ್ಕಮ್ಮನೂ ಸಹಗಮನ ಮಾಡಲಿ ಎಂದಿತು , ಶಿವನದೇವಾಲಯದ ಮುಂದಿನ ಪಂಚಾಯತಿ ಯ ದೀವರು ..
ಆಗ ಅಕ್ಕಮ್ಮನಲ್ಲಿ ಕೊನೆಯ ಕೊಸರಾಟ ಜಾಗೃತವಾಗುತ್ತದೆ .ವಿರೋಧಿಸುತ್ತಾಳೆ .ಪ್ರತಿಭಟಿಸುತ್ತಾಳೆ .ಶಾಪ ಹಾಕುತ್ತಾಳೆ ," ಯಾರನ್ನೂ ಕಾಯದ ಈ ದೇವರು , ಮಠ ಸರ್ವನಾಶವಾಗಲಿ "
ಏನೂ ಅರಿಯದ ಮುಗ್ಧ ಜೀವವೊಂದು ...ಕ್ಷಣದ ಹಿಂದೆ ತಾಳಿ ಕಟ್ಟಿದ ಪತಿಯೆಂಬಾತನೊಡನೆ ಜೀವಂತವಾಗಿ ಮರಕ್ಕೆ ಕಟ್ಟಲ್ಪಟ್ಟು ದೀವರ ಪದ್ದತಿಯಂತೆ ಸುಡಲ್ಪಡುತ್ತಾಳೆ.. ....ಶೇಷ .
ಆಕೆಯ ಶಾಪ ಮುಂದೆ ಕ್ಯಾಪ್ಟನ್ ಸ್ಮೋಕ್ಸ ರೂಪ ತಾಳುತ್ತೋ ಏನೋ...ಶೇಷ.
ಮಂಡಾಣಿಯ ಸುತ್ತಮುತ್ತಲಿನ ದೀವರು ಮುಂದೆ ಅಕ್ಕಮ್ಮನಿಗೆ ಜಕಣಿ ಕೂರಿಸುವ ಕಾರ್ಯ ಮಾಡಿ ಸ್ಥಾನ ಕೊಡುತ್ತಾರೆ .ಅಕ್ಕಮ್ಮ ಮಾಸ್ತಿಯಾಗುತ್ತಾಳೆ ....ಹುಡುಗನಿಗೆ ಒಂದು ಕಲ್ಲು ಹುಗಿದು ಸ್ಥಾನ ಕೊಡುತ್ತಾರೆ .
Comments
Post a Comment