#ನನ್ನ_ಇವತ್ತಿನ_ಬೆಳಿಗ್ಗೆಯ_ಉಂಡೆಕಡಬು_ಪೋಸ್ಟ್
#ಅದಕ್ಕೆ_ಬಂದ_ಪ್ರತಿಕ್ರಿಯೆ
#ಕಡುಬು_ಏನು_ಕಡಿಮೆ.
#ಎಲ್_ಸಿ_ಸುಮಿತ್ರಾ_ಅವರು_ಬರೆದ
#ನನ್ನ_ಅಂಗೈ_ಆಗಲದ_ಆಕಾಶ
#ಪುಸ್ತಕದಲ್ಲಿ_ಪ್ರಕಟವಾದ_ಪ್ರಬಂದ.
ನಾವು "ಕಡುಬು "ಅಂತ ಹೇಳುತ್ತೇವೆ. ಇದು ಎರಡು ಸಲ ಬೇಯುವುದರಿಂದ ,ಎಣ್ಣೆ ಇತ್ಯಾದಿ ಇಲ್ಲದಿರುವುದರಿಂದ ಮಕ್ಕಳು ಮುದುಕರಿಗೂ ಒಳ್ಳೆಯದು. ಆಕಾರ ಸ್ವಲ್ಪ ಬೇರೆ. ಹೀಗೆ ಉಂಡೆ ಅಲ್ಲ. ನಾನು ಕಡುಬು ಕುರಿತು ಬರೆದ ಪ್ರಬಂಧ #ನನ್ನ_ಅಂಗೈ_ಅಗಲದ_ಆಕಾಶ ಪುಸ್ತಕ ದಲ್ಲಿದೆ. ಹತ್ತು ವರ್ಷಗಳ ಹಿಂದೆ fb ನಲ್ಲಿ ಹಾಕಿದ್ದೆ. ಇಲ್ಲಿ ಲಿಂಕ್ ಹಾಕುವೆ.
ನಿವೃತ್ತ ಪ್ರಾಂಶುಪಾಲರು ಸಾಹಿತಿಗಳಾದ ಶ್ರೀಮತಿ ಎಲ್ ಸಿ ಸುಮಿತ್ರರಿಗೆ ಧನ್ಯವಾದ ತಿಳಿಸುತ್ತಾ ಅವರು ಕಳಿಸಿದ ಲೇಖನ ಇಲ್ಲಿ ಓದಿ.
#ಕಡಬು_ಏನು_ಕಡಿಮೆ ...ಬೆಳಿಗ್ಗೆ ಏನು ತಿಂಡಿ ಮಾಡುವುದು ಅಂತ ಯೋಚಿಸಿದಾಗ ಆಗಲೆ ಸಾಯಂಕಾಲ. ದೋಸೆ ಅಥವಾ ಇಡ್ಲಿಗೆ ನೆನೆ ಹಾಕಲು ಸಮಯ ಮೀರಿತ್ತು. ಬೆಳಿಗ್ಗೆ ಕಡುಬು ಮಾಡಿದರೆ ಸರಿ ಅಂದುಕೊಂಡೆ. ಇದು ಕರಿಗಡುಬು ಅಲ್ಲ.ಹೂರಣದ ಕಡುಬೂ ಅಲ್ಲ,ಮಲೆನಾಡಿನಲ್ಲಿ ನಾವು ಬೆಳಗಿನ ತಿಂಡಿಗೆ ಮಾಡುವ ಅಕ್ಕಿ ತರಿಯ ಸರಳವಾದ ತಿಂಡಿ. .ಆದರೆ ಮೈಸೂರಿನಲ್ಲಿ ಬಾಲ್ಯ ಕಳೆದ ನನ್ನ ಗಂಡನಿಗೆ ಕಡುಬು ಇಷ್ಟವಿಲ್ಲ. ನಾನು ಪ್ರೈಮರಿ ಶಾಲೆಗೆ ಹೋಗುವ ಕಾಲದಲ್ಲಿ ನಮ್ಮ ಪರಿಸರದಲ್ಲಿ ರೈತರ ಮನೆಗಳಲ್ಲಿ ಕಡುಬು ವಾರದ ಐದು ದಿನ ಮಾಮೂಲಿ. ಶನಿವಾರ ಮಾತ್ರ ದೋಸೆ. ಭಾನುವಾರ ರೊಟ್ಟಿ.
ಈಗ ಪಂಚತಾರ ಹೋಟೆಲ್ ಗಳಲ್ಲೂ ಸಿಗುವ ಕಡುಬು ಒಂದು ಕಾಲದಲ್ಲಿ ಅಸಡ್ಡೆಗೆ ಗುರಿಯಾಗಿತ್ತು. ನಮಗೆ ಮಿಡ್ಲ್ ಸ್ಕೂಲ್ ನಲ್ಲಿ ಹೆಡ್ ಮಾಸ್ಟೆರ್ ಆಗಿದ್ದ ಮಂಜಯ್ಯ ಅದೆಂತಾ ನಿಮ್ ಕಡುಬು ಗೋಡೆಗೆ ಹೊಡೆದರೆ ಪುಟ ನೆಗೆಯುತ್ತೆ ಅಂತ ವ್ಯಂಗ್ಯ ಮಾಡುತ್ತಿದ್ದರು. ನಾವು ಟಿಫಿನ್ ಬಾಕ್ಸ್ ಗೆ ಯಾವ ಕಾರಣಕ್ಕೂ ಕಡುಬು ಹಾಕಲು ಬಿಡುತ್ತಿರಲಿಲ್ಲ. ಮಳೆಗಾಲದಲ್ಲಿ ತಣ್ಣನೆ ಮೊಸರನ್ನ ತಿನ್ನುವ ಶಿಕ್ಷೆ. ತಿಂಡಿ ಡಬ್ಬ ಶಾಲೆಗೆ ತರುವಂತಿಲ್ಲ. ಕ್ಲಾಸ್ ರೂಮ್ ನಲ್ಲಿ ತಿನ್ನಬಾರದು ಎಂಬ ಮಡಿ ಯಿಂದಾಗಿ ಪರಿಚಿತರ ಮನೆಯ ಮೂಲೆಯಲ್ಲಿ ಊಟದ ಬಾಕ್ಸ್ ಇಟ್ಟು , ಮಧ್ಯಾಹ್ನ ಬಿಡುವಿನಲ್ಲಿ ಅಲ್ಲಿ ಹೋಗಿ ತಿಂದು ಬರಬೇಕಿತ್ತು. ನನಗೆ ಈಗ ಅನಿಸುತ್ತಿದೆ ಆ ಮೇಷ್ಟ್ರು ಎಷ್ಟು ಕ್ರೂರಿ ಅಂತಾ.
ಕಡುಬಿನ ಕುರಿತು ಅಸಡ್ಡೆ ಏಕೆ. ಅದು ಮಕ್ಕಳಿಂದ ಮುದುಕರ ವರೆಗೆ ಒಳ್ಳೆ ಆಹಾರ. ಜ್ವರ ಬಂದವರೂ ತಿನ್ನಬಹುದಾದ್ ತಿಂಡಿ. ಮೊದಲು ಕುದಿಯುವ ನೀರಿನಲ್ಲಿ ಅಕ್ಕಿ ತರಿ ಹಿಟ್ಟು ಬೇಯಿಸಿ, [ಮೆಂತೆ ಹಿಟ್ಟು, ಒಂದೆರಡು ಚಮಚೆ ಗೋದಿ ಹಿಟ್ಟು ಸೇರಿಸಬೇಕು] ಆಮೇಲೆ ಉಂಡೆ ಕಟ್ಟಿ ಹಭೆಯಲ್ಲಿ ಬೇಯಿಸಿ ಎರಡು ಸಲ ಬೆಂದು ಮೃದುವಾಗಿರುತ್ತದೆ. ಬುತ್ತಿ ಕಟ್ಟಲೂ ಒಳ್ಳೆಯದು. ನಾಲ್ಕು ಕಡುಬಿನ ಮೆಲೆ ಎರಡು ಚಮಚ ಸಕ್ಕರೆ ಹಾಕಿ ಮೇಲೆ ಮೊಸರು ಹಾಕಿದರೆ ಮದ್ಯಾಹ್ನ ಬಾಕ್ಸ್ ತೆಗೆದಾಗ ಮೊಸರನ್ನು ಹೀರಿ ಮೆತ್ತಗಿರುವ ಕಡುಬು ಮಕ್ಕಳಿಗೆ ಇಷ್ಟವಾಗುತ್ತದೆ. ತಣ್ಣಗಿದ್ದರೂ ರುಚಿ. ಸಂಜೆ ಮನೆಗೆ ಬಂದಾಗ ಕೆಂಡದ ಮೇಲಿಟ್ಟು ಬಿಸಿ ಮಾಡಿದ ಕಡುಬು ಮತ್ತು ಬೆಣ್ಣೆ, ಕಾಫಿ. ಅದಂತೂ ನಮಗೆ ಅದ್ಭುತ ರುಚಿ ಅನ್ನಿಸುತ್ತಿತ್ತು. ಆದರೆ ಕಡುಬು ದ್ವೇಶಿ ಮೇಷ್ಟ್ರ ಕಾಲ ಮುಗಿದು ನಾನು ಮೇಷ್ಟ್ರಾದ ಮೇಲೂ ಹುಡುಗಿಯರು ಟಿಫಿನ್ ಬಾಕ್ಸ್ ತರುತ್ತಿರಲಿಲ್ಲ, ಯಾಕೆ ಅಂದರೆ ಅಡಿಗೆ ಆಗಿರಲ್ಲ ಮೇಡಮ್ ಬಸ್ ಎಂಟು ಗಂಟೆಗೆ ಬರುತ್ತೆ ಅನ್ನುವ ಉತ್ತರ. ಬೆಳಗಿನ ತಿಂಡಿಯನ್ನೇ ತರಬಹುದಲ್ಲ ಅಂದರೆ ಕಡುಬು ಮಾಡ್ತಾರೆ ಅದನ್ನು ಹೇಗೆ ತರುವುದು ಅನ್ನುವ ಪ್ರಷ್ನೆ. ನಾನು ಈ ಮೇಲಿನಂತೆ ಮೊಸರು ಹಾಕಿಕೊಂಡು ತನ್ನಿ ಅನ್ನುತ್ತಿದ್ದೆ. ಅದಕ್ಕೆ ಉಳಿದವರೆಲ್ಲ ನಗುತ್ತಾರೆ ಅನ್ನುವ ಸಿದ್ಧ ಉತ್ತರ. ಊಟ ತಿಂಡಿಯಲ್ಲೂ ಮೇಲು ಕೀಳು ಯಾರು ಮಾಡಿದರು?. ಮಲೆನಾಡು ,ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕಡುಬು ಬೆಳಗಿನ ತಿಂಡಿಯಾಗಿ ಬಳಕೆಯಲ್ಲಿದೆ. ಕೊಡವರು ಕಡುಂಬಿಟ್ಟು ಅಂದರೆ ,ಕರಾವಳಿಯವರು ಪುಂಡಿ ಎಂಬ ಹೆಸರಿನಿಂದ ಕರೆಯುತ್ತಾರೆ. ದಕ್ಷಿಣ ಕನ್ನಡ ದಲ್ಲಿ ಕುಚ್ಚಲು ಅಕ್ಕಿ ರವೆಯಿಂದ ಕಡಬು ಮಾಡುತ್ತಾರೆ.
ಅಮ್ಮನಿಗೆ ಮೂರು ದಿನ ರಜೆ ಆಗಿ ಅಡುಗೆ ಮನೆ ಜವಾಬ್ದಾರಿ ನನಗೆ ಬಂದಾಗ ಹೈಸ್ಕೂಲ್ ನಲ್ಲಿದ್ದ ನನಗೆ ಕಡುಬಿನ ಹಿಟ್ಟು ಉಕ್ಕರಿಸಲು ಕಷ್ಟ ಅಂತ ಅಪ್ಪಯ್ಯ ಸಹಾಯ ಮಾಡುತ್ತಿದ್ದರು. ದೊಡ್ಡ ಬಾಣಲೆಯಲ್ಲಿ ಅರ್ಧದಶ್ಟು ನೀರು ಕುದಿಯಲು ಇಟ್ಟು ಅದಕ್ಕೆ ಉಪ್ಪು ಹಾಕಿ ,ನೀರು ಕುದಿ ಬಂದಾಗ ಅಕ್ಕಿ ಹಿಟ್ಟು ಹಾಕಿ ಉಕ್ಕರಿಸಿ ಬೆಂದ ಮೇಲೆ ಅದನ್ನು ಮರದ ಮರಿಗಗೆ ಹಾಕಿ ಸ್ವಲ್ಪ ತಣ್ಣಗಾದ ಮೇಲೆ ನುರಿದು ನಾದಿ ಒಂದೇ ಗಾತ್ರದ ಕಡುಬುಗಳನ್ನು ಮಾಡಬೇಕು. ನಾನು ಕಷ್ಟಪಟ್ಟು ಐವತ್ತರವತ್ತು ಕಡುಬು ಮಾಡುತ್ತಿದ್ದೆ. ಆಮೇಲೆ ಚಟ್ನಿ ಮಾಡಬೇಕು. ಅಥವಾ ಬೆಣ್ಣೆ ಬೆಲ್ಲ. ಹುರಳಿಸಾರೂ ಕಡುಬಿನ ಜತೆ ಒಳ್ಳೆಯ ರುಚಿ. ಉಪ್ಪಿನ ಕಾಯಿ ರಸ, ಜೇನುತುಪ್ಪ ಯಾವುದೂ ಆಗುತ್ತಿತ್ತು. ಸರಗೋಲು ನೀರು ಕುದಿಯುತ್ತಿತ್ತು ನಾನು ಕಡುಬು ಮಾಡಿ ಮುಗಿಸುವಸ್ಟರಲ್ಲಿ. ಮೇಲೆ ಒಂದು ಬಾಳೆಲೆ ಹಾಸಿ ಕಡುಬು ಜೋಡಿಸಿ ಮುಚ್ಚಳ ಹಾಕಿದರೆ ಗೆದ್ದಂತೆ. ಏಳೂವರೆಗೆ ತಿಂಡಿ ಆಗಬೇಕು. ಕಡುಬು ಬೇಯುತ್ತಿರುವಾಗ ನಾನು ದೊಡ್ಡ ಗಾತ್ರದ ಮೊಸರು ಕಡೆಯುವ ಪಾತ್ರೆಗೆ ಮೊಸರು ಹಾಕಿ ಕಡೆಗೋಲು ಬಿಸಿನೀರಲ್ಲಿ ತೊಳೆದು ಮೊಸರು ಕಡೆಯಲು ಕುಳಿತುಕೊಳ್ಳುತ್ತಿದ್ದೆ , ಬೆಣ್ಣೆ ಬರುವ ಹೊತ್ತಿಗೆ ಒಲೆಯ ಮೇಲೆ ಕಡುಬು ಬೆಂದಿರುತ್ತಿತ್ತು. ಹಳೆ ಭತ್ತದಿಂದ ಮಾಡಿದ ಅಕ್ಕಿಯ ರವೆಯಲ್ಲಿ ಮೃದುವಾದ ಕಡುಬು ಆಗುತ್ತಿತ್ತು. ಕುದಿಯುವ ನೀರಿನಲ್ಲಿ ಉಕ್ಕರಿಸಿ ಮತ್ತೆ ಹಬೆಯಲ್ಲಿ ಬೇಯಿಸುವುದರಿಂದ ಕಡುಬು ಮಕ್ಕಳಿಂದ ಮುದುಕರವರೆಗೂ ಸುಲಭವಾಗಿ ಜೀರ್ಣವಾಗುವ ಆಹಾರ. ಆದರೆ ಆ ಮಾಂಜಯ್ಯ ಮೇಷ್ಟ್ರು ಕ್ಲಾಸ್ ನಲ್ಲಿ ಕಡುಬನ್ನು ಟೀಕಿಸುತ್ತಿದ್ದುದು ಯಾಕೆ ಅಂತ ನನಗೆ ಇವತ್ತಿಗೂ ಅರ್ಥವಾಗಿಲ್ಲ. ನಮ್ಮ ಸಹೋದ್ಯೋಗಿ ಯೊಬ್ಬರು ಕಡುಬನ್ನು ನೋಡಿದರೆ ಪಿಂಡದ ನೆನಪಾಗುತ್ತೆ ಅಂದರು. ಇದು ಖಂಡಿತಾ ಹೊಟ್ಟೆಕಿಚ್ಚಿನ ಮಾತು. ಅಂತ ನನಗೆ ಪಿಂಡದ ಆಕಾರ ನೋಡಿದ ಮೇಲೆ ತಿಳಿಯಿತು. ಕಡುಬು ಗಾತ್ರದಲ್ಲಿ ಚಿಕ್ಕದಾಗಿ, ಸ್ವಲ್ಪ ಚಪ್ಪಟೆಯಾಗಿ ಇರುತ್ತದೆ. ಬೆಂದ ಹಿಟ್ಟನ್ನು ಮರದ ಮರಿಗೆಯಲ್ಲಿ ಚೆನ್ನಾಗಿ ನಾದಿ ನುರಿದು ಒಂದೇ ಗಾತ್ರದ ಕಡುಬುಗಳನ್ನು ಮಾಡುವುದೂ ಒಂದು ಕಲೆ. ಚಿಕ್ಕ ಮಕ್ಕಳೂ ಆರು ಎಂಟು ಕಡುಬು ತಿನ್ನುವುದು ಮಾಮೂಲಾಗಿತ್ತು. ಬೆಳಿಗ್ಗೆ ತಿಂದ ಮೇಲೆ ಹತ್ತು ಗಂಟೆ ತಿಂಡಿ ಅಂತ ರಜೆಯಲ್ಲಿ ಮತ್ತೆ ಕಡುಬು ತಿನ್ನುವ ಪದ್ದತಿಯಿತ್ತು. ಮಧ್ಯಾಹ್ನ ಊಟ ,ಸಂಜೆ ನಾಲ್ಕೂವರೆಗೆ ಮತ್ತೆ ಕಡುಬು. ಈಗ ಯೋಚಿಸಿದರೆ ಚೆನ್ನಾಗಿ ಓಡು ಕುಣಿ ತಿನ್ನು ಬಿಟ್ಟರೆ ಬೇರೇನೂ ನಮಗೆ ಗೊತ್ತಿರಲಿಲ್ಲ. ನೆಂಟರ ಮನೆಗೆ ಹೋದಾಗ ಸಂಕೋಚದಿಂದ ಸಾಕು ಅಂದರೆ ನಾಲ್ಕನೇ ಕ್ಲಾಸ್ ನವರು ನಾಕು ಕಡುಬು ತಿನ್ನಬೇಕು ಎಂದು ಒತ್ತಾಯಿಸುತ್ತಿದ್ದರು. ಬೇಸಿಗೆ ರಜೆಯಲ್ಲಾದರೆ ಒಹೋ ಐದನೇ ಕ್ಲಾಸು ಇನ್ನು ಐದು ಕಡುಬು ಅನ್ನುತ್ತಿದ್ದರು. ಒಮ್ಮೆ ಶ್ರಿಂಗೇರಿ ಕಡೆಯ ಸ್ನೇಹಿತರೊಬ್ಬರ ಮನೆಯಲ್ಲಿ ಚಿಕ್ಕ ಗಾತ್ರದ ಗೌರಿ ಕಡುಬು ಅಂತ ಮಾಡಿದ್ದರು. ಅವು ಗೋಲಿ ಗಾತ್ರದಲ್ಲಿ ಸುಂದರವಾಗಿದ್ದವು. ದಿನನಿತ್ಯ ಕಡುಬು ಮಾಡುವಾಗ ಕೊನೆಗೆ ಒಂದು ಉದ್ದ ಆಕಾರದ ಕಡುಬು ಮಾಡುತ್ತಿದ್ದರು. ತಿಥಿ ದಿನ ಮಾತ್ರ ಬರೀ ಗುಂಡು ಕಡುಬು ಮಾಡುತ್ತಿದ್ದರು. ವೈದಿಕ ಆಚರಣೆಗಳ ಪ್ರಭಾವ ಮಲೆನಾಡಿನ ಒಕ್ಕಲಿಗರ ಮೇಲೆ ಹಿಂದಿನಿಂದಲೂ ಇತ್ತು. ತಾವು ಇಷ್ಟ ಪಟ್ಟು ತಿನ್ನುವ ಮೀನು ,ಕೋಳಿಗಳನ್ನು ಹೊಲಸು ಎಂದು ಕರೆದು ಇದನ್ನು ತಯಾರಿಸಲು ಬೇರೆ ಜಾಗ , ಬೇರೆ ಒಲೆ, ಬೇರೆ ಪಾತ್ರೆಗಳನ್ನು ಇಟ್ಟಿರುತ್ತಿದ್ದರು. ಇಷ್ಟೆಲ್ಲ ಮಾಡಿಯೂ ಶ್ರಾವಣ ಮಾಸದಲ್ಲಿ ತುಂಬಾ ಮಡಿಯೆಂದು ಉಪ್ಪರಿಗೆಯ ಮೇಲೆ ಒಲೆ ಹೂಡಿ ಅಡಿಗೆ ಮಾಡುತ್ತಿದ್ದರು. ಅಕ್ಕಿ ಮಾಡಿಸಲು ಮಿಲ್ ಗೆ ಭತ್ತ ತೆಗೆದುಕೊಂಡು ಹೋಗುವಾಗಲೆ ಅಕ್ಕಿ ಹಿಟ್ಟು ,ಮತ್ತು ಕಡುಬಿನ ರವೆ ದೊಡ್ಡ ಪ್ರಮಾಣದಲ್ಲಿ ಮಾಡಿಸಿ ತರುತ್ತಿದ್ದರು.ಇನ್ನೊಮ್ಮೆ ಅಕ್ಕಿ ಮಾಡಿಸಲು ಭತ್ತ ತೆಗೆದುಕೊಂಡು ಹೋಗುವ ಮೊದಲೇ, ಮಧ್ಯದಲ್ಲಿ ಕಡುಬಿನ ಹಿಟ್ಟು ಖರ್ಚಾದರೆ ಮನೆಯಲ್ಲಿದ್ದ ಬೀಸುವ ಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡಲು ಯಾರಾದರೂ ಕೆಲಸದವರು ಸಹಾಯ ಮಾಡುತ್ತಿದ್ದರು . ನಾವು ಪ್ರಯತ್ನಪಟ್ಟು ಆ ದೊಡ್ಡ ಬೀಸುವ ಕಲ್ಲನ್ನು ತಿರುಗಿಸಲು ಪ್ರಯತ್ನ ಪಟ್ಟರೂ ಆಗುತ್ತಿರಲಿಲ್ಲ. ನಾವು ಚಿಕ್ಕ ವರಾಗಿದ್ದಾಗ ಬಸವಾನಿಯ ರೈಸ್ ಮಿಲ್ ಗೆ ಎತ್ತಿನ ಗಾಡಿಯಲ್ಲಿ ಭತ್ತದ ಮೂಟೆ ಗಳನ್ನು ಇಟ್ಟುಕೊಂಡು ಹೋಗಿ ಅಕ್ಕಿ ಮಾಡಿಕೊಂಡು, ಜತೆಗೆ ಕಡುಬಿನ ರವೆ ಮತ್ತು ರೊಟ್ಟಿ ಹಿಟ್ಟು ಮಾಡಸಿಕೊಂಡು ಬರುತ್ತಿದ್ದರು. ಕೆಲವೊಮ್ಮೆ ಮರಳಿ ಬರುವಾಗ ಕತ್ತಲಾಗುತ್ತಿತ್ತು.ಆಗ ಮಿಣಿ ಮಿಣಿ ಲಾಟೀನು ದೀಪ ವೇ ದಾರಿ ತೋರಿಸಬೇಕಿತ್ತು. ಆಮೇಲೆ ಪವರ್ ಟಿಲ್ಲರ್ ಬಂದು ಅದರ ಟ್ರೇಲರ್ ನಲ್ಲಿ ಭತ್ತ ಸಾಗಿಸಲು ಅನುಕೂಲವಾಯಿತು. ಆದರೆ ಈಗ ರೈತ ರು ಹೆಚ್ಚಿನ ವರು ಭತ್ತ ಬೆಳೆಯುವುದು ನಿಲ್ಲಿಸಿದ್ದಾರೆ..ಅಡಕೆ ಮಾರಿ ,ಅಕ್ಕಿ ಕೊಳ್ಳುತ್ತಾರೆ.
ಮಳೆಗಾಲದಲ್ಲಿ ಸಂಜೆ ಸ್ಕೂಲಿಂದ ಬಂದ ಮೇಲೆ ಬೆಳಗ್ಗೆ ಮಾಡಿದ ಕಡುಬನ್ನೇ ಕೆಂಡದ ಮೇಲೆ ಸುಟ್ಟು ಬೆಣ್ಣೆ ಹಾಕಿ ಕೊಡುತ್ತಿದ್ದರು. ಜೊತೆಗೆ ಬೆಲ್ಲದ ಕಾಫಿ. ಅದೇ ನಮಗೆ ರುಚಿ ಅನಿಸುತ್ತಿತ್ತು, ಹುರಿಗಡಲೆ, ಮಂಡಕ್ಕಿ ಇತ್ಯಾದಿಗಳೆ ನಮಗೆ ತಿನಿಸುಗಳು ಮಳೆಗಾಲದಲ್ಲಿ. ಈ ಕೊರೋನ ಕಾಲದಲ್ಲಿ ಮುಂದೆ ನೂ ಕಾಣುತ್ತಿಲ್ಲ ಅದಕ್ಕೆ ಹಿಂದುರುಗಿ ನೋಡಿ ದ್ದೇನೆ.
#ಎಲ್_ಸಿ_ಸುಮಿತ್ರಾ_ತೀರ್ಥಹಳ್ಳಿ.
Comments
Post a Comment