*ಶ್ರದ್ದಾಂಜಲಿಗಳು*ಸಾಗರ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಮುಖ್ಯ ಸ್ಥಂಭ, ಕೊಡುಗೈ ದಾನಿ ಪುತ್ತೂರಾಯರೆಂದೇ ಪ್ರಸಿದ್ಧರಾಗಿದ್ದ ಮಾಜಿ ಪುರಸಭಾ ಅಧ್ಯಕ್ಷ ನಾಗಪ್ಪ ಗೋವಿಂದಪ್ಪ ಪೈ (N.G.PAI)
#ಸಾಗರದ_ಪುತ್ತೂರಾಯರಿಗೆ_ಶ್ರದ್ದಾಂಜಲಿಗಳು
#ಪ್ರಖ್ಯಾತ_ಮಲ್ಕೋಡು_ಕುಟುಂಬದವರು
#ಜನತಾ_ಹೈಸ್ಕೂಲ್_ಎಲ್_ಬಿ_ಕಾಲೇಜ್_ವಿದ್ಯಾರ್ಥಿ_ನಿಲಯ_ನಿರ್ಮಿಸಿದವರು.
#ಕಟ್ಟಾ_ಕಾಂಗ್ರೇಸ್_ಕಾಗೋಡು_ತಿಮ್ಮಪ್ಪರ_ಬಲಗೈ
#ಇವರ_ತಂದೆ_ಮಲ್ಕೋಡು_ಗೋವಿಂದಪ್ಪನವರು.
ಈಗಷ್ಟೆ ಗೊತ್ತಾಯಿತು ಸಾಗರದ ಪುತ್ತೂರಾಯರು ಇನ್ನಿಲ್ಲ ಅಂತ ಅವರ ಆತ್ಮಕ್ಕೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಇವರ ಹೆಸರು N.G.PAI, ನಾಗಪ್ಪ ಗೋವಿಂದಪ್ಪ ಪೈ. ಇವರ ತಂದೆ ಸಾಗರದ ಶ್ರೀಮಂತ ಉದ್ದಿಮೆದಾರರಾದ ಮಲ್ಕೋಡು ಗೋವಿಂದ ಪೈ ಆ ಕಾಲದಲ್ಲಿ ಶಿವಮೊಗ್ಗ ಉತ್ತರ ಕನ್ನಡ ಜಿಲ್ಲೆ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳ ಅಧಿಕೃತ ಅರಣ್ಯ ಉತ್ಪನ್ನಗಳ ಸಂಗ್ರಹಿಸಿ ಮಾರುವ ಲೈಸೆನ್ಸ್ ಹೊಂದಿದವರು, ವಿಶೇಷವಾಗಿ ಹಾಲು ಮಡ್ಡಿ ಅರಣ್ಯದಿಂದ ಸಂಗ್ರಹಿಸಿ ತಂದವರು ಇವರಿಗೆ ಮಾರುತ್ತಿದ್ದರು ನಂತರ ಇವರಿಂದ ಹೊರ ದೇಶಕ್ಕೆ ರಪ್ತು ಮಾಡುವವರು ಖರೀದಿಸುತ್ತಿದ್ದರು ಈಗ ಹಾಲು ಮಡ್ಡಿ ಅರಣ್ಯದಿಂದ ತೆಗೆಯುವ ಹಾಗಿಲ್ಲ.
ಅವರು ಮಗನಿಗೆ ತಮ್ಮ ಮಾತೃ ಭಾಷೆ ಕೊಂಕಣಿಯಲ್ಲಿ ಪುತ್ತೂ ಅಂತ ( ಮಗು ಅಂತ ) ಕರೆಯುತ್ತಿದ್ದದ್ದೇ ಇವರಿಗೆ ಪುತ್ತೂರಾಯರೆಂದೇ ಜನಪ್ರಿಯರಾಗಲು ಕಾರಣ ಆಯಿತು.
ತಂದೆ ಮಲ್ಕೋಡು ಗೋವಿಂದಪ್ಪನವರು ಸಾಗರ ಪುರಸಭಾ ಅಧ್ಯಕ್ಷರಾಗಿದ್ದರು ಮಗ ಪುತ್ತೂರಾಯರೂ ಪುರಸಭಾ ಅಧ್ಯಕ್ಷರಾಗಿದ್ದರು.
ಕಾಗೋಡು ತಿಮ್ಮಪ್ಪರ ಮತ್ತು ಸಾಗರ ಕಾಂಗ್ರೇಸ್ ಪಕ್ಷದ ಎಲ್ಲಾ ಖರ್ಚು ವೆಚ್ಚ ಈ ಕುಟುಂಬ ಭರಿಸುತ್ತಿತ್ತು ಅಂತ ಬೇರೆಯವರು ಹೇಳುತ್ತಿದ್ದರು ಆದರೆ ಪುತ್ತೂರಾಯರು ಈ ಕೈಯಲ್ಲಿ ಕೊಟ್ಟಿದ್ದು ಆ ಕೈಗೆ ಗೊತ್ತಾಗದಂತ ಗುಟ್ಟು ಕಾಪಾಡುವ ಕೊಡುಗೈ ದಾನಿ.
ಯಾರಿಗೂ ನೋವಾಗದಂತೆ, ಸಣ್ಣವರಾಗಲಿ ದೊಡ್ಡವರಾಗಲಿ, ಬಡವ ಶ್ರೀಮಂತನಾಗಲಿ ಬಹುವಚನದಿಂದಲೇ ಮಾತಾನಾಡುತ್ತಿದ್ದ ಸಜ್ಜನರು ಪುತ್ತೂರಾಯರು.
ಹೋರಾಟಗಾರ ತೀ.ನಾ.ಶ್ರೀನಿವಾಸರನ್ನು ಕಾಂಗ್ರೇಸ್ ಗೆ ಸೇರಿಸಿದವರು, ಒಂದು ಚುನಾವಣೆಯಲ್ಲಿ ನಾನು ಜಯಂತ್ ಸೇರಿ ಜನತಾ ರಂಗ ಮಾಡಿಕೊಂಡು ಇವರ ವಿರುದ್ದ ಅಬಕಾರಿ ಗುತ್ತಿಗೆದಾರರಾದ ನಾರಾಯಣ ರಾವ್ ರನ್ನು ಅಭ್ಯಥಿ೯ ಮಾಡಿ ಚುನಾವಣೆ ಮಾಡಿದ್ದು ನೆನಪು ಆದರೆ ಇವರ ಜನಪ್ರಿಯತೆ ಇವರನ್ನು ಸೋಲಿಸಲಾಗಿರಲಿಲ್ಲ.
ಸಾಗರದಲ್ಲಿ ಖಾನ್ ಸಾಹೇಬರು, ಕುರುಬರ ಲಿಂಗಪ್ಪನವರು ಮತ್ತು ಪುತ್ತೂರಾಯರು ಕಾಂಗ್ರೇಸ್ ಪಕ್ಷದ ತ್ರಿಮೂರ್ತಿಗಳೆಂದೇ ಪ್ರಖ್ಯಾತರು.
ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಎಸ್.ಬಂಗಾರಪ್ಪನವರು ಶಿವಮೊಗ್ಗ ಲೋಕಸಭೆಗೆ ಕಾಂಗ್ರೇಸ್ ವಿರುದ್ದವಾಗಿ ಸ್ಪರ್ದಿಸಿದಾಗ ನಾನು ಕಾಂಗ್ರೇಸ್ ಜಿಲ್ಲಾ ಪಂಚಾಯತ ಸದಸ್ಯನಾದರೂ ಬಂಗಾರಪ್ಪರ ಜೊತೆ ಸೇರಿದ್ದೆ ಆಗ ಅವರು ಚುನಾವಣಾ ಪೂವ೯ ಮಾತುಕತೆ ಮಾಡುವಾಗ ಯಾರನ್ನಾದರೂ ಕಾಂಗ್ರೇಸ್ ನಿಂದ ತರಬಹುದು ಆದರೆ ನಿಮ್ಮ ಸಾಗರದ ಖಾನ್ - ಪೈ ಮಾತ್ರ ಸಾಧ್ಯವಿಲ್ಲ ಅಂತಿದ್ದರು ಅಷ್ಟು ಇವರು ಕಾಂಗ್ರೇಸ್ ನಿಷ್ಟರು.
ಹೊಸನಗರ ತಾಲ್ಲೂಕಿನಲ್ಲಿ ಹಾಲು ಮಡ್ಡಿ ತೋಟ ಮಾಡಿದ್ದಾರೆ ಅಲ್ಲಿನ ಹಾಲು ಮಡ್ಡಿ ಉಪಯೋಗಿಸಿ ಇವರ ಸೊಸೆ (ನಾಗೇಂದ್ರರ ಪತ್ನಿ) ತಯಾರಿಸುವ ಅಗರಬತ್ತಿ ಈಗ ದೇಶ ವಿದೇಶಗಳಲ್ಲಿ ಪ್ರಖ್ಯಾತಿಗಳಿಸಿದೆ.
ಸಾಗರದ ಇಕ್ಕೇರಿ ರಸ್ತೆಯ ಮನೆ ಪಕ್ಕದ ಹಳೇ ರೈಸ್ ಮಿಲ್ ನೆನಪಿಗಾಗಿ ಹಾಗೇ ಇದೆ, ಬಳಸುವುದಿಲ್ಲ ಅದರೆ ಅದರ ಕಛೇರಿಯೇ ಇವರ ಎಲ್ಲಾ ವ್ಯವಹಾರದ ಕೇಂದ್ರ.
ಬಂಗಾರಪ್ಪ ಮುಖ್ಯಮಂತ್ರಿ ಆದಾಗ ಕೊಡಚಾದ್ರಿ ತುದಿಯಲ್ಲಿ ನೂತನ ಪ್ರವಾಸಿ ಮಂದಿರ ಕಟ್ಟಿಸಿ ಉದ್ಘಾಟನೆಗೆ ಹಿಂದಿನ ದಿನ ಬಂದಾಗ ತಡವಾದ್ದರಿಂದ ಹೆಲಿಕಾಪ್ಟರ್ ಸಾಗರದಲ್ಲಿ ಲ್ಯಾಂಡ್ ಆಗಿತ್ತು ಸಾಗರದಿಂದ ಕೊಡಚಾದ್ರಿಯ ಬುಡಕ್ಕೆ ಪುತ್ತೂರಾಯರ ಹೊಸ ಪಿಯೆಟ್ ಕಾರ್ ಸ್ವತಃ ಬಂಗಾರಪ್ಪನವರೇ ಡ್ರೈವಿಂಗ್ ಮಾಡಿಕೊಂಡು ಹೋಗಿದ್ದು ನೆನಪು.
ಪುತ್ತೂರಾಯರು ದೈವ ಭಕ್ತರು ಇವರು ಮತ್ತು ಹಾಲಿ ಬೈಂದೂರು ಶಾಸಕರಾಗಿರುವ ಸುಕುಮಾರ ಶೆಟ್ಟರು ಸೇರಿ ದೇಶದಾದ್ಯಂತ ಹೆಚ್ಚು ಕಡಿಮೆ ಎಲ್ಲಾ ದೇವಾಲಯಗಳನ್ನು ಸಂದರ್ಶಿಸಿದ್ದಾರೆ, ಕೆಲ ಕಾಲ ಇವರು ಸುಕುಮಾರ ಶೆಟ್ಟರು ಕೆಲ ವ್ಯವಹಾರದಲ್ಲಿ ಪಾಲುದಾರರು.
ನಮ್ಮ ಊರಿನ, ನನ್ನ ಹಿರಿಯ ಮಿತ್ರ ಗನ್ನಿಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸುವ ನನ್ನ ಉದ್ದೇಶ ಈಡೇರಿ ಅವರಿಗೆ ಮೆಕ್ಕಾ ಕಳಿಸುವ ಮುನ್ನ ನಮ್ಮ ಊರ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಬಿಳ್ಕೊಡುಗೆ ಸಮಾರಂಭದಲ್ಲಿ ಪುತ್ತೂರಾಯರು, ನಾರಾಯಣ ರಾವ್, ತೀನಾ. ಶ್ರೀನಿವಾಸ್, ಕೋಯಾ ಸಾಹೇಬರು ಮತ್ತು ಅಮೃತ್ ರಾಸ್ ನನ್ನ ಆಹ್ವಾನದ ಮೇಲೆ ಬಂದಿದ್ದು ನೆನಪು.
ಜಾತ್ಯಾತೀತ ಮನೋಭಾವದ, ಯಾರಿಗೂ ತೊಂದರೆ ಕೊಡದ, ತಮ್ಮ ಕೈಯಲ್ಲಾದ ಸಹಾಯ ಸಹಕಾರ ಮಾಡುತ್ತಿದ್ದ ಪುತ್ತೂರಾಯರು ಇಡೀ ಸಾಗರಕ್ಕೆ ಮಾಣಿಕ್ಯದಂತೆ ಇದ್ದವರು, ಕೆಲ ವರ್ಷದ ಹಿಂದೆ ಪತ್ನಿಯ ಅಕಾಲಿಕ ವಿಧಾಯ ಇವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಇದರಿಂದಲೇ ಸಾರ್ವಜನಿಕ ಜೀವನದಿಂದ ದೂರವಾಗುತ್ತಾ ಬಂದರು.
Comments
Post a Comment