ಭಾಗ - 22, ವಿದ್ಯಾ ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯ೦ಗಾರರು ಶಿಕ್ಷಣ ಪಡೆದ ಆನಂದಪುರಂನ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ(125 ವರ್ಷದ ಹಿಂದೆ ನಿರ್ಮಾಣ ಆಗಿದ್ದ ಪ್ರಾಥಮಿಕ ಶಾಲೆ) ಶಿವಭಕ್ತ ಟೀಕಪ್ಪ ಮಾಸ್ತರ್ ಮತ್ತು ಈ ಶಾಲೆಗೆ ಸ್ಥಳ ದಾನ ನೀಡಿದ ಸ್ಕೂಲ್ ರಾಮಣ್ಣ ಕುಟುಂಬದ ನೆನಪು
#ಭಾಗ_22.
#ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಆನಂದಪುರಂ_ಪ್ರಾಥಮಿಕ_ಶಾಲೆ.
#ಇಲ್ಲಿ_ವ್ಯಾಸಂಗ_ಮಾಡಿದ_ಮಹನೀಯರಂತೆ_ಶಿಕ್ಷಕರೂ_ವಿಶೇಷ_ಉನ್ನತಿ_ಪಡೆದವರು.
#ಸಾತ್ವಿಕರೂ_ದೈವಭಕ್ತರು_ಆಗಿದ್ದ_ಟೀಕಪ್ಪ_ಮಾಸ್ತರು.
ಟೀಕಪ್ಪ ಮಾಸ್ತರ್ ಅಂದರೆ ಆ ಕಾಲದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಆರಾಧ್ಯ ಗುರುಗಳಾಗಿದ್ದರು, ಯಾರಿಗೂ ಬಿರು ನುಡಿಯದ, ಹೊಡೆಯದ,ಬೇರಾವ ಶಿಕ್ಷೆ ನೀಡದೆ ತಮ್ಮ ಶಿಷ್ಯರನ್ನು ಪಳಗಿಸಿ ವಿದ್ಯೆ ಕಲಿಸುವ ಅಪರೂಪದ ಕಲೆ ಮತ್ತು ತಾಳ್ಮೆ ಇದ್ದಿದ್ದರಿಂದ ಇವರಿಂದ ಶಿಕ್ಷಣ ಕಲಿತವರಿಗೆಲ್ಲ ಇವರ ಮೇಲೆ ವಿಶೇಷ ಪ್ರೀತಿ ಮತ್ತು ಗೌರವ.
ಹೊಸನಗರ ತಾಲ್ಲೂಕಿನ ಬರುವೆ ಮೂಲದ ಇವರು ಶಿಕ್ಷಕರಾಗಿ ಹೊರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿ ನಂತರ ಆನಂದಪುರಂ ನಲ್ಲಿನ ವಿದ್ಯಾಮಂತ್ರಿಗಳು ಓದಿದ ಈ ಪ್ರಾಥಮಿಕ ಶಾಲೆ ಮತ್ತು ದಾಸಕೊಪ್ಪದ ಪ್ರಾಥಮಿಕ ಶಾಲೆಯಲ್ಲೂ ಕಾರ್ಯನಿರ್ವಹಿಸಿದ್ದರು.
ಇವರ ವೇಷ ಭೂಷಣ ಕೂಡ ವಿಶೇಷವೇ ಶ್ವೇತಾ ಕಚ್ಚೆ ಪಂಜೆ ಮತ್ತು ಜುಬ್ಬಾ ಶಲ್ಯ ಮತ್ತು ಹಣೆಯ ಮೇಲೆ ವಿಭೂತಿ ಪಟ್ಟೆ, ಕುಂಕುಮ ಧರಿಸಿ ಶಿವಪೂಜೆ ನಂತರವೆ ಶಾಲೆ ಕಡೆಗೆ ಹೊರಡುತ್ತಿದ್ದರು.
ಬೆಸ್ತರ ಕುಟುಂಬದಲ್ಲಿ ಜನಿಸಿ, ನಂತರ ಶಿವದೀಕ್ಷೆ ಪಡೆದ ಇವರು ಶುದ್ಧ ಸಸ್ಯಹಾರಿಗಳು, ದೈವಭಕ್ತರು ಆಗಿದ್ದರು. ಇವರ ಜೀವನದಲ್ಲಿ ನಡೆದು ಒಂದು ಘಟನೆ ಇಲ್ಲಿ ನೆನಪಿಸಲೇ ಬೇಕು ಅದೊಂದು ಪವಾಡವೇ ಸರಿ.
ಅದೇನೆಂದರೆ ಇವರಿಗೆ ಅನಾರೋಗ್ಯವಾಗಿ ಸಾಗರದಲ್ಲಿನ ಯಳಮಳಲಿ ನರ್ಸಿಂಗ್ ಹೊಂಗೆ ಸೇರಿಸುತ್ತಾರೆ ಕೆಲ ದಿನಗಳ ಚಿಕಿತ್ಸೆ ಪಲಿಸದೆ 1988 ರ ಮೇ ತಿಂಗಳಲ್ಲಿ ಮೃತರಾಗುತ್ತಾರೆ, ಅಂದು ಬಂದುಗಳು ಕಾಶಿ ತೀಥ೯ವೂ ಬಿಡುತ್ತಾರೆ.
ನಂತರ ಮೃತ ಟೀಕಪ್ಪ ಮಾಸ್ತರ ಶವ ಆನಂದಪುರಂನ ಅವರ ಮನೆಗೆ ರಾತ್ರಿ ತಂದು ಮರುದಿನ ಅಂತ್ಯಸಂಸ್ಕಾರಕ್ಕೆ ತಯಾರು ಮಾಡುತ್ತಾರೆ, ಊರವರು ನೆಂಟರಿಷ್ಟರೆಲ್ಲ ಅಂತಿಮ ದರ್ಶನ ಮಾಡುತ್ತಾರೆ, ಅವರು ಶಿಕ್ಷಕರಾಗಿದ್ದ ಶಾಲೆಯಲ್ಲಿ ರಜಾ ಘೋಷಣೆ ಮಾಡಲು ತೀಮಾ೯ನಿಸಿರುತ್ತಾರೆ ಆದರೆ ಅವತ್ತು ಮಧ್ಯರಾತ್ರಿ ಪವಾಡದಂತೆ ಅಕ್ಕಿ ಕಾಯಿ ದೀಪದ ಮಧ್ಯದಲ್ಲಿ ಶವವಾಗಿ ಮಲಗಿದ್ದ ಟೀಕಪ್ಪ ಮಾಸ್ತರ್ ನಿದ್ದೆಯಿಂದ ಎದ್ದ೦ತೆ ಎದ್ದು ಮೂತ್ರ ವಿಸರ್ಜನೆಗೆ ನಡೆದು ಹೋಗುತ್ತಾರೆ ಇದು ವಿಚಿತ್ರ ಸನ್ನಿವೇಶ ಆದರೂ ಸತ್ಯ, ನಂತರ ಸುಮಾರು 22 ವರ್ಷ ಬದುಕುತ್ತಾರೆ ದಿನಾಂಕ 4- ಫೆಬ್ರುವರಿ-2010 ರಲ್ಲಿ ಅಂತಿಮ ಯಾತ್ರೆ ಮುಗಿಸುತ್ತಾರೆ.
ಟೀಕಪ್ಪ ಮಾಸ್ತರ್ ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ ಗಂಡು ಮಕ್ಕಳು ಮೂವರು ಮೊದಲನೆಯ ಗಂಗಾದರ್ ಮೆಸ್ಕಾಂನಿಂದ ನಿವೃತ್ತರಾಗಿ ಆನಂದಪುರಂನಲ್ಲಿ ನೆಲೆಸಿದ್ದಾರೆ, ಬಿ.ಡಿ. ರವಿಕುಮಾರ್ ಪತ್ರಕರ್ತರಾಗಿದ್ದಾರೆ, ಕೆನರಾ ಬ್ಯಾಂಕ್ ನಲ್ಲಿ ಅರೆಕಾಲಿಕ ವೃತ್ತಿ ಜೊತೆಗೆ ಆನಂದಪುರಂನ ಎಲ್ಲಾ ಸಾರ್ವಜನಿಕ ಪ್ರಗತಿಪರ ಕಾಯ೯ಕ್ರಮದಲ್ಲಿ ಮುಂಚೂಣಿಯಲ್ಲಿದ್ದಾರೆ, ಕಿರಿಯ ಪುತ್ರ ಬಿ.ಡಿ.ಶ್ರೀನಿವಾಸ್ ಸಾಗರದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಮೀಟರ್ ರೀಡರ್ ಆಗಿದ್ದಾರೆ. ಏಕೈಕ ಪುತ್ರಿ ಜಯಶೀಲ ಅಕಾಲಿಕವಾಗಿ ನಿದನರಾಗಿದ್ದಾರೆ.
ಟೀಕಪ್ಪ ಮಾಸ್ತರ್ ಪತ್ನಿ ಲಕ್ಷ್ಮಮ್ಮರಅಜ್ಜ ಸ್ಕೂಲ್ ರಾಮಣ್ಣ ಆನಂದಪುರಂನ ಪ್ರಥಮ ಪ್ರಾಥಮಿಕ ಶಾಲೆ ಕಟ್ಟಲು ಅಂದಾಜು 1890 ರಲ್ಲಿ (125 ವರ್ಷದ ಹಿಂದೆ) ಈ ಜಾಗ ದಾನ ನೀಡುತ್ತಾರೆ, ಈ ಶಾಲೆಯಿಂದ ಮಾರಿಗುಡಿ ತವರು ಮನೆತನಕದ ಈ ಜಾಗದಲ್ಲಿ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಪ್ರತ್ಯೇಕ ಪ್ರಾಥಮಿಕ ಶಾಲೆ ನಿರ್ಮಿಸಿ ಉಳಿದ ಜಾಗದಲ್ಲಿ ಆರಕ್ಷರ ವಸತಿ ಗೃಹ ನಿಮಿ೯ಸಲಾಗಿದೆ.
ಶಾಲೆಗೆ ಜಾಗ ದಾನ ಮಾಡಿದ ಕುಟುಂಬಕ್ಕೆ ಉದ್ಯೋಗ ನೀಡಲು ಅವಕಾಶ ಬಂದರೂ ಈ ಕುಟುಂಬದವರ್ಯಾರು ಉದ್ಯೋಗ ಸ್ವೀಕರಿಸಲಿಲ್ಲ.
ಸ್ಕೂಲ್ ಗೆ ಜಾಗ ದಾನ ಮಾಡಿದ್ದರಿಂದ ರಾಮಣ್ಣ ಸ್ಕೂಲ್ ರಾಮಣ್ಣ ಎಂದೇ ಪ್ರಸಿದ್ಧರಾದರು, ಇವರ ಮಗ ಸ್ಕೂಲ್ ಪುಟ್ಟಪ್ಪ ಮತ್ತು ನೀಲಜ್ಜಿ ದಂಪತಿಗಳಿಗೆ ಲಕ್ಷ್ಮಮ್ಮ, ರಾಮಣ್ಣ, ಜಗನಾಥ, ಗಿರಿಜಮ್ಮ, ಲೋಹಿತ್, ಪುಷ್ಪಾವತಿ ಮತ್ತು ಗಣೇಶ ಎಂಬ ಮಕ್ಕಳು ಇದ್ದಾರೆ, ಹಬ್ಬದಲ್ಲಿ ಹುಲಿ ವೇಷ ಹಾಕಿ ರಂಜಿಸುತ್ತಿದ್ದ ಇವರ ಪುತ್ರ ಜಗನಾಥ ಹುಲಿ ಜಗನಾಥರೆಂದೆ ಹೆಸರುವಾಸಿ ಆಗಿದ್ದರು.
ಆನಂದಪುರಂನ ಜನತೆಗೆ ವಿದ್ಯೆಗಾಗಿ ನಿಮಿ೯ಸಿದ ಪ್ರಥಮ ಪ್ರಾಥಮಿಕ ಶಾಲೆಗೆ ಸ್ಥಳ ದಾನ ಮಾಡಿದ ಈ ಕುಟುಂಬದ ಕೆಲಸ ಶಾಶ್ವತವಾಗಿ ಉಳಿಯುವಂತೆ ಇಲ್ಲಿ ವಿದ್ಯಾಬ್ಯಾಸ ಮಾಡಿದ ಬದರಿನಾರಾಯಣ ಅಯ್ಯಂಗಾರರು ವಿದ್ಯಾ ಮಂತ್ರಿಗಳಾದರು, ಕೆ.ರಾಮಪ್ಪನವರು (ತಾಳಗುಪ್ಪ) ಇಬ್ಬರು ಮುಖ್ಯಮಂತ್ರಿಗಳಿಗೆ (ಗುಂಡೂರಾವ್ ಮತ್ತು ರಾಮಕೃಷ್ಣ ಹೆಗ್ಗಡೆಯವರಿಗೆ ) ಆಪ್ತ ಮತ್ತು ವಿಶೇಷ ಕರ್ತವ್ಯಾಧಿಕಾರಿಗಳಾಗಿದ್ದು ವಿಶೇಷವೇ.
ಆಗ ಊರಲ್ಲಿ ಹೆರಿಗೆ ಮಾಡಿಸುತ್ತಿದ್ದ ಟೀಕಪ್ಪ ಮಾಸ್ತರ ಅತ್ತೆ ಅಂದರೆ ಪತ್ನಿ ಲಕ್ಷ್ಮಮ್ಮರ ತಾಯಿ ನೀಲಜ್ಜಿ ಸ್ಥಳಿಯರ ಜನಾನುರಾಗಿ ಸೂಲಗಿತ್ತಿ ಆಗಿದ್ದರಲ್ಲದೆ ಸ್ಥಳಿಯರಿಗೆ ವಿವಿದ ಕಾಯಿಲೆ ಕಸಾಲೆಗೆ ಮದ್ದು ನೀಡುತ್ತಿದ್ದರು ಈಗ ಇವರ ಪುತ್ರಿ ಟೇಕಪ್ಪ ಮಾಸ್ತರ ಪತ್ನಿ ಲಕ್ಷ್ಮಮ್ಮ ಇದನ್ನು ಮುಂದುವರಿಸಿದ್ದಾರೆ.
ಟೀಕಪ್ಪ ಮಾಸ್ತರ ಪತ್ನಿ ಅಜ್ಜ ದಾನ ನೀಡಿದ ಜಾಗದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಮಾಡುವ ಅವಕಾಶ ಅಕಸ್ಮಿಕವಾಗಿ ದೊರೆಯಿತು, ಶಿವದೀಕ್ಷೆ ಪಡೆದು ಶಿವಭಕ್ತರಾಗಿ, ಒಮ್ಮೆ ಮೃತರಾಗಿ ಪುನಃ ಜೀವದಾನ ಪಡೆದು, ಸಾತ್ವಿಕ ಜೀವನ ಕ್ರಮದಲ್ಲಿ ಆನಂದಪುರದಲ್ಲಿ ಜನಪ್ರಿಯರಾಗಿದ್ದ ಟೇಕಪ್ಪ ಮಾಸ್ತರು, ವಿದ್ಯಾಮಂತ್ರಿಗಳನ್ನು ನೀಡಿದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಶಾಲೆಗೆ ಘನತೆ ತಂದಿದ್ದು ಈಗ ನೆನಪು.
ನಾಳೆ ಭಾಗ- 23
Comments
Post a Comment