ಭಾಗ - 19, ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಎಂಬ ಆದರ್ಶ ಶಿಕ್ಷಕ ದಂಪತಿಗಳು ಆನಂದಪುರ೦ ನಲ್ಲಿ ವಿದ್ಯಾಮಂತ್ರಿ ಬದರಿನಾರಾಯಣ ಆಯ್ಯಂಗಾರರು ಓದಿದ ಶಾಲೆಯಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದವರು
#ವಿದ್ಯಾಮಂತ್ರಿ_ಬದರಿನಾರಾಯಣ್_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಪ್ರಾಥಮಿಕ_ಶಾಲೆ
#ಈ_ಶಾಲೆಗೆ_ಭೂದಾನ_ಮಾಡಿದ_ಸ್ಕೂಲ್_ರಾಮಣ್ಣ
#ದೀರ್ಘಕಾಲ_ಶಿಕ್ಷಕ_ವೃತ್ತಿಮಾಡಿದ್ದ_ಲೋಬೋ_ಮಾಸ್ಟರ್_ಮತ್ತು_ಅವರ_ಪತ್ನಿ_ಲಿಲ್ಲಿಬಾಯಿ_ಟೀಚರ್
#ಇವರ_ಶಿಸ್ತಿನ_ಜೀವನ_ಆನಂದಪುರಂಗೆ_ಮಾದರಿ.
#ಆನಂದಪುರಂ_ಸ್ಟೇಟ್_ಬ್ಯಾಂಕ್_ಮೈಸೂರಿನ_ಉದ್ಘಾಟನೆಗೆ_ಮುಖ್ಯಮಂತ್ರಿ_ನಿಜಲಿಂಗಪ್ಪರಿಂದ .
#ಅವತ್ತೇ_ಹೊಸಗುಂದದಲ್ಲಿ_ಹೆಡತ್ರಿ_ನಾಗರಾಜಗೌಡರ_ತಂದೆ
#ಊರಿಗೆ_ನಿರ್ಮಿಸಿಕೊಟ್ಟಿದ್ದ_ಶಾಲೆ_ತೆರೆದಬಾವಿ_ಉದ್ಘಾಟಿಸಿದರು.
ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ , ಈ ಶಾಲೆಗೆ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ.ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ ಬಿ.ಡಿ. ರವಿಯ ತಾಯಿಯಾದ ಲಕ್ಷ್ಮಮ್ಮನವರ ಅಜ್ಜ ರಾಮಣ್ಣನವರೆ ಈ ಶಾಲೆಗೆ ಭೂದಾನ ನೀಡಿದವರು.
ಅವರು ನೀಡಿದ ದಾನದ ಜಾಗದಲ್ಲಿ ಬ್ರಿಟಿಶ್ ಸರ್ಕಾರ ಶಾಲೆ ನಿಮಿ೯ಸಿತು,ಅಲ್ಲಿ ಅನೇಕ ಜಗದ್ಪ್ರಸಿದ್ಧರು ಓದಿದರು. ಅದರಲ್ಲಿ ಇಲ್ಲಿ ಅಕ್ಷರ ಕಲಿತ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರ ಎರಡನೆ ಪುತ್ರ ಬದರಿನಾರಾಯಣ ಅಯ್ಯಂಗಾರ್ ರು ಮುಂದೆ ದೇವರಾಜ್ ಅರಸರ ಸಂಪುಟದಲ್ಲಿ ವಿದ್ಯಾ ಮಂತ್ರಿ ಆಗಿದ್ದು ಇತಿಹಾಸ, ಶಾಲೆಗೆ ಜಾಗ ನೀಡಿದ ರಾಮಣ್ಣ ಈಗಿಲ್ಲ ಆದರೆ ಆ ಕುಟುಂಬದವರಿಗೆ ಇದು ಒಂದು ಹೆಮ್ಮೆಯ ಸಾರ್ಥಕತೆ ನೀಡಿದ ವಿಚಾರ.
ಇಲ್ಲಿ ದೀರ್ಘ ಕಾಲ ಶಿಕ್ಷಕ ವೃತ್ತಿ ಮಾಡಿದ ನಾಲ್ಕು ಜನರು ಆನಂದಪುರಂನ ಜನ ಮಾನಸದಲ್ಲಿ ಇನ್ನೂ ಉಳಿದಿದ್ದಾರೆ, ಇದರಲ್ಲಿ ಬೆಂಗಳೂರಿನ ಮೂಲದ ಲೋಬೋ ಮಾಸ್ಟರ್ ದಂಪತಿಗಳು ಕೂಡ ಒಬ್ಬರು.
ತುಂಬಾ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ಲೋಬೋ ಮಾಸ್ಟರ್ ಸೇವಾದಳದಲ್ಲಿದ್ದವರು, ನಿತ್ಯ ಶೇವ್ ಮಾಡಿಯೇ ಶಾಲೆಗೆ ಬರುತ್ತಿದ್ದರು,ಅವರ ನಿತ್ಯ ಉಡುಪು ಕೂಡ ಬಿಳಿ ಶರ್ಟ್ ಇನ್ ಮಾಡಿದ ಕಪ್ಪು ಪ್ಯಾಂಟ್, ಲೆದರ್ ಬೆಲ್ಟ್ ಮತ್ತು ಶೂ ದರಿಸುತ್ತಿದ್ದರು.
ಇವರ ಪತ್ನಿ ಲಿಲ್ಲಿ ಬಾಯಿ ಟೀಚರ್ ಕೂಡ ಅಷ್ಟೇ ಶಿಸ್ತಿನ ಶಿಕ್ಷಕಿ ಇವರಿಬ್ಬರು ಕನ್ನಡ ಅ ಆ ಇ ಈ ಅಕ್ಷರದಿಂದ ಪ್ರಾರಂಬಿಸಿ ಒತ್ತಕ್ಷರ, ಕಾಗುಣಿತ, ಅಕ್ಷರ ದುಂಡಾಗಲು ಕಾಫಿ ಪುಸ್ತಕ, ಪದ್ಯಗಳು ಹೀಗೆ ನಾಲ್ಕನೇ ತರಗತಿ ಮುಗಿಸುವಾಗಲೇ ಒಬ್ಬ ಆದರ್ಶ ವಿದ್ಯಾರ್ಥಿಯನ್ನಾಗಿ ತಯಾರಿಸಿ ಬಿಡುತ್ತಿದ್ದ ಆದರ್ಶ ಶಿಕ್ಷಕ ದಂಪತಿಗಳು ಇವರು.
ಲೋಬೋ ಮಾಸ್ಟರ್ ಆರ್.ಎಂ.ಪಿ. ಡಾಕ್ಟರ್ ಕೂಡ ಶಾಲೆ ಅವದಿ ನಂತರ ಮನೆಗೆ ಬಂದವರಿಗೆ ಚಿಕಿತ್ಸೆಯೂ ನೀಡುತ್ತಿದ್ದರು.
ಆಗ ಅವರ ಮನೆ ಸಾಗರ ರಸ್ತೆಯ ಮಸೀದಿ ಎಡಬಾಗದಲ್ಲಿನ ಕೆರೆಹಿತ್ತಲಿನ ಕೆಂಜಿಗಪ್ಪ ಗೌಡರ ಜೋಡಿ ಮನೆ, ಈಗ ಇದು ಇವರ ಮಗ ಜ್ಯೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರ ಪಾಲಿಗೆ ಬಂದಿದೆ.
ಲೋಬೋ ಮಾಸ್ಟರ್ ಮತ್ತು ಆನಂದಪುರಂನ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಜನಪ್ರಿಯ ಎಸ್.ಆರ್.ಕೃಷ್ಣಪ್ಪ ಇಬ್ಬರೂ ಸೇರಿ ಇಡೀ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬದಲ್ಲಿ ನಡೆಸುತ್ತಿದ್ದ ಪ್ರಬಾತ್ ಪೇರಿಗಳ ಅಚ್ಚುಕಟ್ಟುತನ ಈವರೆಗೂ ಸಾಧ್ಯವಾಗಲಿಲ್ಲ ಎಂದೇ ಆನಂದಪುರಂ ನಿವಾಸಿಗಳು ನೆನಪು ಮಾಡುತ್ತಾರೆ.
ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದ್ದ, ಇಡೀ ಆನಂದಪುರಂಗೆ ಮೊದಲ RCC ಕಟ್ಟಡದಲ್ಲಿ ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ ಶಾಸಕರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕರೆ ತರುತ್ತಾರೆ, ಅವರಿಗೆ ಸೇವಾದಳವತಿಯಿಂದ ಆನಂದಪುರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನೀಡಿದ ಸ್ವಾಗತ ಅವತ್ತು ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪರಿಗೆ ಸಂತೋಷ ಉಂಟು ಮಾಡಿತ್ತಂತೆ.
ಅವತ್ತೇ ನಿಜಲಿಂಗಪ್ಪನವರು ಹೊಸಗುಂದಕ್ಕೆ ಹೋಗಿ ಅಲ್ಲಿ ಹೆಡತ್ರಿ ನಾಗರಾಜಗೌಡರ ತಂದೆ ಮಲ್ಲಪ್ಪ ಗೌಡರು ಊರಿಗೆ ನಿರ್ಮಿಸಿ ಕೊಟ್ಟ ಪ್ರಾಥಮಿಕ ಶಾಲೆ, ಪರಿಶಿಷ್ಟ ಜಾತಿ ಕಾಲೋನಿಗೆ ನಿರ್ಮಿಸಿದ ತೆರೆದ ಬಾವಿ ಉದ್ಘಾಟಿಸಿ ಜೋಗದಲ್ಲಿ ತಂಗುತ್ತಾರೆ.
ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರು, ದೊಡ್ಡ ಮಗ ಪ್ಯಾಟ್ರಿಕ್ ಸಿಂಡಿಕೇಟ್ ಬ್ಯಾಂಕ್ ಉದ್ಯೋಗ ತೊರೆದು ಕೆಲ ವರ್ಷ ಮಸ್ಕತ್ ನಲ್ಲಿ ಉದ್ಯೋಗ ಮಾಡಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ಪುತ್ರಿಯರಾದ ಜಾನ್ಸಿ ಮತ್ತು ಸಲೀನ ಕೂಡ ಶಿಕ್ಷಕ ವೃತ್ತಿಯ ಜೊತೆ ಬೆ೦ಗಳೂರಲ್ಲಿ ತಮ್ಮ ಸಂಸಾರದ ಜೊತೆ ಇದ್ದಾರೆ.
ಇನ್ನಿಬ್ಬರು ಗಂಡು ಮಕ್ಕಳು ಜಾನ್ ಮತ್ತು ಸ್ಟಾನಿ ಕೂಡ ಬೆಂಗಳೂರಲ್ಲಿ ನೆಲೆಸಿದ್ದಾರೆ.
ನನಗೆ ಇವರಿಬ್ಬರೂ ಅಚ್ಚುಮೆಚ್ಚಿನ ಶಿಕ್ಷಕರೂ ಕೂಡ, ನಾನು ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ನೆಚ್ಚಿನ ವಿದ್ಯಾರ್ಥಿಯೂ ಆಗಿದ್ದೆ.ಅವರು ಕಲಿಸಿದ ಕನ್ನಡ ಭಾಷೆಯ ಶಿಕ್ಷಣ ನನಗೆ ಇಂತಹ ಲೇಖನ ಬರೆಯಲು ಸ್ಪೂರ್ತಿ ಆಯಿತು, ಇವರಿಬ್ಬರೂ ಇಹ ಲೋಕ ತ್ಯಜಿಸಿದ್ದಾರೆ ಆದರೆ ಆನಂದಪುರ೦ನಲ್ಲಿ ಇವರಿಂದ ವಿದ್ಯೆ ಕಲಿತ ಎಲ್ಲರ ಹೃದಯದಲ್ಲೂ ಇವರ ವ್ಯಕ್ತಿತ್ವ ಅಚ್ಚೊತ್ತಿದೆ.
ಆನಂದಪುರಂ ವಾಸಿಗಳಿಗೆ ಮತ್ತು ಇವರ ವಿದ್ಯಾಥಿ೯ಗಳಾಗಿದ್ದವರಿಗೆ ಮರತೇ ಹೋಗಿದ್ದ ಈ ಅತ್ಯುತ್ತಮ ಶಿಕ್ಷಕ ದಂಪತಿಗಳಾದ ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ಪೋಸ್ಟ್ ಮಾಡಿದ ಈ ಫೋಟೋಗಳು ಎಲ್ಲರನ್ನೂ ಪುನಃ ಹಳೆಯ ಕಾಲಕ್ಕೆ ಖಂಡಿತಾ ಕರೆದೊಯ್ಯುತ್ತದೆ.
Comments
Post a Comment